samachara
www.samachara.com
ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗಲೆಲ್ಲ ಕೈ ಹಿಡಿದ ಕರ್ನಾಟಕ: ರಾಜ್ಯದಲ್ಲಿಯೂ ರಾಹುಲ್ ಕಣಕ್ಕೆ?
COVER STORY

ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗಲೆಲ್ಲ ಕೈ ಹಿಡಿದ ಕರ್ನಾಟಕ: ರಾಜ್ಯದಲ್ಲಿಯೂ ರಾಹುಲ್ ಕಣಕ್ಕೆ?

ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದ್ದಾಗಲೆಲ್ಲ ಗಾಂಧಿ ಕುಟುಂಬ ಕರ್ನಾಟಕಕ್ಕೆ ಬಂದು ಸ್ಫರ್ಧಿಸಿ, ಗೆದ್ದಿದೆ. ಇಂದಿರಾ ಗಾಂಧಿಯಿಂದ, ಸೋನಿಯಾ ಗಾಂಧಿವರೆಗೆ ಇಂತಹ ರಾಜಕೀಯ ಬೆಳವಣಿಗೆ ದಾಖಲಾಗಿದೆ. 

Team Samachara

ರಾಜ್ಯದಲ್ಲಿ ಮೈತ್ರಿ ಪಕ್ಷಗಳ ನಡುವಿನ ಸ್ಥಾನ ಹಂಚಿಕೆ ಒಂದು ದೃಷ್ಟಿಕೋನದಲ್ಲಿ ಮುಕ್ತಾಯವಾದ ಬೆನ್ನಿಗೆ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟದಿಂದ ಸ್ಫರ್ಧಿಸಬೇಕು ಎಂಬ ಕೂಗು ಬಲವಾಗುತ್ತಿದೆ.

ಸಿದ್ದರಾಮಯ್ಯ ಸೇರಿದಂತೆ ಕರ್ನಾಟಕದ ಎಲ್ಲಾ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಕರ್ನಾಟಕದಿಂದಲೂ ಸ್ಪರ್ಧಿಸಬೇಕು ಎಂಬ ಒತ್ತಾಯವನ್ನು ಮುಂದಿಡುತ್ತಿದ್ದಾರೆ.

ಹಾಗೆ ನೋಡಿದರೆ, ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದ್ದಾಗಲೆಲ್ಲ ಗಾಂಧಿ ಕುಟುಂಬದವರು ಕರ್ನಾಟಕಕ್ಕೆ ಬಂದು ಸ್ಪರ್ಧಿಸಿದ್ದಾರೆ, ಗೆದ್ದಿದ್ದಾರೆ. ಇದಕ್ಕೆ ಇಂದಿರಾ ಗಾಂಧಿಯಿಂದ ಸೋನಿಯಾ ಗಾಂಧಿವರೆಗೆ -ಚಿಕ್ಕಮಗಳೂರು ಹಾಗೂ ಬಳ್ಳಾರಿಯಲ್ಲಿ- ರೋಚಕ ಹಣಾಹಣಿಗಳನ್ನು ಇತಿಹಾಸ ದಾಖಲಿಸಿಕೊಂಡಿದೆ.

ಇಂದಿರಾಗೆ ರಾಜಕೀಯ ಮರುಹುಟ್ಟು

1978ರಲ್ಲಿ ಚಿಕ್ಕಮಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ.
1978ರಲ್ಲಿ ಚಿಕ್ಕಮಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ.
/ಲೈವ್ ಮಿಂಟ್.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಗೆ ರಾಜಕೀಯವಾಗಿ ಮರುಹುಟ್ಟು ನೀಡಿದ್ದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ. 1975ರಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ಅವರ ವಿರುದ್ಧ ದೇಶದಾದ್ಯಂತ ದೊಡ್ಡ ಮಟ್ಟದ ಜನಾಕ್ರೋಶವನ್ನು ಸಂಪಾದಿಸಿ ಕೊಟ್ಟಿತ್ತು. ಪರಿಣಾಮ 1977ರ ಲೋಕಸಭಾ ಚುನಾವಣೆಯಲ್ಲಿ ಜಯಪ್ರಕಾಶ ನಾರಾಯಣ್ ಅವರ ಜನತಾ ಪಕ್ಷದ ವಿರುದ್ಧ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿತ್ತು.

ಕಾಂಗ್ರೆಸ್‌ನ ಅಧಿನಾಯಕಿ ಸ್ವತಃ ಇಂದಿರಾ ಗಾಂಧಿ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಜನತಾ ಪಕ್ಷದ ರಾಜ್ ನಾರಾಯಣ್ ವಿರುದ್ಧ ಭಾರಿ ಅಂತದಲ್ಲಿ ಸೋತು ಮುಖಭಂಗ ಅನುಭವಿಸಿದ್ದರು. ನಂತರ ದೇಶದಾದ್ಯಂತ 298 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜನತಾ ಪಕ್ಷ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದದ್ದು, ಮೊರಾರ್ಜಿ ದೇಸಾಯಿ ಪ್ರಧಾನಿಯಾಗುವ ಮೂಲಕ ಮೊದಲ ಕಾಂಗ್ರೆಸೇತರ ಪ್ರಧಾನಿ ಎಂದು ದಾಖಲೆ ನಿರ್ಮಿಸಿದ್ದು ಇಂದು ಇತಿಹಾಸ.

ಆದರೆ, ಜನತಾ ಪಕ್ಷದ ಎದುರು ಹೀಗೆ ಹೀನಾಯವಾಗಿ ಸೋತಿದ್ದ ಇಂದಿರಾ ಗಾಂಧಿ ಸುಮ್ಮನೆ ಕೂರಲಿಲ್ಲ. ಬದಲಿಗೆ ಮತ್ತೆ ಸಂಸತ್ ಪ್ರವೇಶಿಸಲು ತಮ್ಮ ಗೆಲುವಿಗೆ ಸುರಕ್ಷಿತ ಕ್ಷೇತ್ರವನ್ನು ಹುಡುಕಾಡುತ್ತಿದ್ದರು. ಆಗ ಅವರಿಗೆ ಸುರಕ್ಷಿತ ಕ್ಷೇತ್ರ ಎನಿಸಿದ್ದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ.

ಆ ಕಾಲದಲ್ಲಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ಗೆ ಗಟ್ಟಿ ನೆಲೆ ಇತ್ತು. 1971 ಹಾಗೂ 1977ರ ಎರಡು ಅವಧಿಗೆ ಇಲ್ಲಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ನ ಡಿ. ಬಿ. ಚಂದ್ರೇಗೌಡ ಇಂದಿರಾ ಗಾಂಧಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಪರಿಣಾಮ 1978ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಇಂದಿರಾ ಅಭುತಪೂರ್ವ ಗೆಲುವು ಸಾಧಿಸುವ ಮೂಲಕ ಮತ್ತೆ ಸಂಸತ್ ಪ್ರವೇಶಿಸಿದ್ದರು.

“80ರ ದಶಕದಲ್ಲಿ ಜನತಾ ಪಕ್ಷಕ್ಕೆ ಉತ್ತರ ಭಾರತದಲ್ಲಿ ಗಟ್ಟಿ ನೆಲೆ ಇದ್ದರೂ ದಕ್ಷಿಣದಲ್ಲಿ ಹೇಳಿಕೊಳ್ಳುವಂತ ನಾಯಕರಾಗಲಿ ನೆಲೆಯಾಗಲಿ ಇರಲಿಲ್ಲ. ಆದರೆ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಗಟ್ಟಿಯಾಗಿತ್ತು. ಅಲ್ಲದೆ ಆಗ ರಾಜ್ಯದಲ್ಲಿ ದೇವರಾಜ ಅರಸು ಸರಕಾರ ಒಳ್ಳೆಯ ಹೆಸರು ಮಾಡಿತ್ತು. ಇದೇ ಕಾರಣಕ್ಕೆ ಇಂದಿರಾ ಕರ್ನಾಟವನ್ನು ಆಯ್ಕೆ ಮಾಡಿದ್ದರು.”

“ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಹೊರತು ಬೇರೆ ಯಾವುದೇ ಪಕ್ಷಗಳಿಗೆ ನೆಲೆ ಇರಲಿಲ್ಲ. ಆಗಿನ್ನು ಜನಸಂಘ ಅಥವಾ ಬಿಜೆಪಿ ಹುಟ್ಟಿರಲಿಲ್ಲ. ದತ್ತಪೀಠ ಸಮಸ್ಯೆ ಉದ್ಭವಿಸಿರಲಿಲ್ಲ. 1967ರಲ್ಲಿ ಪ್ರಜಾ ಶೋಷಿಯಲ್ ಪಕ್ಷದ’ ಎಂ.ಹುಚ್ಚೇಗೌಡ ಒಮ್ಮೆ ಗೆದ್ದದ್ದು ಬಿಟ್ಟರೆ ಬೇರೆ ಯಾರೂ ಸಹ ಚಿಕ್ಕಮಗಳೂರಿನಿಂದ ಸ್ಫರ್ಧಿಸಿ ಗೆದ್ದ ಇತಿಹಾಸವೇ ಇರಲಿಲ್ಲ.”

“ಹೀಗಾಗಿ 1978ರಲ್ಲಿ ಕೊಪ್ಪದಲ್ಲಿ ನಡೆದ ಯೂತ್ ಕಾಂಗ್ರೆಸ್ ಸಭೆಯಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು. ಆಗಿನ್ನೂ ಯುವಕರಾಗಿದ್ದ ಡಿ. ಬಿ. ಚಂದ್ರೇಗೌಡ ಇಂದಿರಾ ಗಾಂಧಿ ಅವರ ಪಾಳಯದಲ್ಲಿ ಗುರುತಿಸಿಕೊಳ್ಳುವ ಉಮೇದಿನಲ್ಲಿ ಅತ್ಯಂತ ಪ್ರೀತಿ ಪೂರ್ವಕವಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಉಪ ಚುನಾವಣೆಯಲ್ಲಿ ಇಂದಿರಾ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದರು. ಆದರೆ ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಎಂದು 80 ಚುನಾವಣಾ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತಾರೆ,” ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ಪತ್ರಕರ್ತ ಗಿರಿಜಾ ಶಂಕರ್.

ಆದರೆ, ಕರ್ನಾಟಕಕ್ಕೆ ಕಾಂಗ್ರೆಸ್‌ನ ವಲಸೆ ಇಲ್ಲಿಗೆ ನಿಲ್ಲಲಿಲ್ಲ. ಅದನ್ನು 1999ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅತ್ತೆ ತುಳಿದಿದ್ದ ಹಾದಿಯನ್ನೇ ತುಳಿದರು. ಅವರು ಬಳ್ಳಾರಿ ಕ್ಷೇತ್ರವನ್ನು ಆರಿಸಿಕೊಂಡರು.

ಬಳ್ಳಾರಿಗೆ ಬಂದ ಸೋನಿಯಾ

1999ರಲ್ಲಿ ಬಳ್ಳಾರಿ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ.
1999ರಲ್ಲಿ ಬಳ್ಳಾರಿ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ.
/ರಾಯ್ಟರ್ಸ್.

1991ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯನ್ನು ತಮಿಳುನಾಡಿನಲ್ಲಿ ಎಲ್‌ಟಿಟಿ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಹತ್ಯೆ ಮಾಡಿದ ನಂತರ ಗಾಂಧಿ ಕುಟುಂಬ ರಾಜಕೀಯದಿಂದ ದೂರವೇ ಉಳಿದಿತ್ತು. ಆದರೆ 1996ರ ಲೋಕಸಭಾ ಚುನಾವಣೆಯನ್ನು ಅಂದಿನ ಪ್ರಧಾನಿ ಪಿ. ವಿ. ನರಸಿಂಹರಾವ್ ಮುಖಂಡತ್ವದಲ್ಲಿ ಎದುರಿಸಿದ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ 545 ಸ್ಥಾನಗಳ ಪೈಕಿ ಕೇವಲ 141 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

ಈ ಸೋಲಿನ ನಂತರ ಪಕ್ಷದಲ್ಲಿ ಮುಖಂಡತ್ವದ ಬಗ್ಗೆ ಪ್ರಶ್ನೆ ಎದ್ದಿತ್ತು. ಈ ಸಂದರ್ಭದಲ್ಲಿ ಹಿರಿಯ ಮುಖಂಡರು ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಮೇಲೆ ಒತ್ತಡ ಹೇರಿ ಕೊನೆಗೂ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ 1998ರಲ್ಲಿ ಸೋನಿಯಾ ಗಾಂಧಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರ ಹುದ್ದೆಗೆ ಏರಿದರು.

ಸೋನಿಯಾ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಹುದ್ದೆಗೆ ಏರಿದಾಗ 1999ರ ಲೋಕಸಭಾ ಚುನಾವಣೆಯಲ್ಲಿ ಅವರು ಯಾವ ಕ್ಷೇತ್ರದಿಂದ ಸ್ಫರ್ಥಿಸಬೇಕು ಎಂಬ ಪ್ರಶ್ನೆ ಎದುರಾಗಿತ್ತು. ರಾಜೀವ್ ಗಾಂಧಿ ಅವರ ಅಮೇಠಿ ಕ್ಷೇತ್ರದಿಂದಲೇ ಸ್ಫರ್ಧಿಸಬೇಕು ಎಂಬ ಕೂಗು ಆಗ ಜೋರಾಗಿದ್ದರು, ಅಮೇಠಿ ಅದಾಗಲೆ ಬಿಜೆಪಿಯ ಪಾಲಾಗಿತ್ತು. ಹೀಗಾಗಿ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದ ಸೋನಿಯಾ ಗಾಂಧಿ ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕದ ಬಳ್ಳಾರಿಯನ್ನು.

1999ರ ಚುನಾವಣೆಯಲ್ಲಿ ಸೋನಿಯಾ ಅಮೇಠಿ ಹಾಗೂ ಬಳ್ಳಾರಿ ಎರಡೂ ಜಿಲ್ಲೆಗಳಲ್ಲಿ ಸ್ಫರ್ಧಿಸಿದ್ದರು. ಅಂದಿನ ದಿನಗಳಲ್ಲಿ ಇಟಲಿ ಮೂಲದ ಸೋನಿಯಾ ಗಾಂಧಿ ಅವರ ರಾಜಕೀಯ ಪ್ರವೇಶವನ್ನು ಪ್ರಬಲವಾಗಿ ವಿರೋಧಿಸಿದ್ದ ಬಿಜೆಪಿ ಬಳ್ಳಾರಿಯಿಂದ ಸೋನಿಯಾ ವಿರುದ್ಧ ಇಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕಣಕ್ಕೆ ಇಳಿಸಿತ್ತು.

ಆದರೆ, 1951 ರಿಂದ 1998ರ ವರೆಗೆ ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಕೈ ಬಿಡದ ಬಳ್ಳಾರಿ ಮತದಾರ 1999 ರಲ್ಲೂ ಕೈ ಹಿಡಿದಿದ್ದ. ಪರಿಣಾಮ ಬಿಜೆಪಿಯ ಸುಷ್ಮ ಸ್ವರಾಜ್ ವಿರುದ್ಧ ಸೋನಿಯಾ ಗಾಂಧಿ 59,000 ಮತಗಳ ಅಂತರದಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು.

ಇದೇ ಸಂದರ್ಭದಲ್ಲಿ ಅಮೇಠಿಯಲ್ಲೂ ಗೆಲುವು ಸಾಧಿಸಿದ್ದ ಸೋನಿಯಾ ಬಳ್ಳಾರಿಯನ್ನು ಬಿಟ್ಟುಕೊಟ್ಟು ಅಮೇಠಿಯನ್ನು ಉಳಿಸಿಕೊಂಡಿದ್ದರು. ಪರಿಣಾಮ 2000 ದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೋಲೂರು ಬಸವನ ಗೌಡ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದರು.

ಅತ್ತೆ ಸೊಸೆ ಹಾಗೂ ಕಾಂಗ್ರೆಸ್‌, ಎಲ್ಲರ ರಾಜಕೀಯ ಏಳಿಗೆಗೂ ಕಾರಣವಾಗಿದ್ದ ಅದೇ ಕರ್ನಾಟಕ ಇಂದು ಗಾಂಧಿ ಕುಡಿಯ ನಾಲ್ಕನೇ ತಲೆಮಾರು ರಾಹುಲ್ ಗಾಂಧಿಗೂ ರಾಜಕೀಯ ಮರು-ಹುಟ್ಟು ನೀಡಲು ಮುಂದಾದಂತೆ ಕಾಣಿಸುತ್ತಿದೆ.

ಅಮೇಠಿಯಲ್ಲಿ ರಾಹುಲ್‌ಗೆ ಸೋಲಿನ ಬೀತಿಯೇ?

ಉತ್ತರಪ್ರದೇಶದ ಜಿದ್ದಾಜಿದ್ದಿ ಕಣವಾಗಿರುವ ಅಮೇಠಿ ಕ್ಷೇತ್ರದ ಸ್ಫರ್ಧಿಗಳಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ.
ಉತ್ತರಪ್ರದೇಶದ ಜಿದ್ದಾಜಿದ್ದಿ ಕಣವಾಗಿರುವ ಅಮೇಠಿ ಕ್ಷೇತ್ರದ ಸ್ಫರ್ಧಿಗಳಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ.
/ದಿ ಇಂಡಿಯನ್ ಎಕ್ಸ್‌ಪ್ರೆಸ್.

2004ರಲ್ಲಿ ರಾಹುಲ್ ಗಾಂಧಿ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಅಧಿಕೃತವಾಗಿ ಸಾರಿತ್ತು. 1999ರಲ್ಲಿ ಅಮೇಠಿಯಿಂದ ಸ್ಫರ್ಧಿಸಿ ಗೆದ್ದಿದ್ದ ಸೋನಿಯಾ ಗಾಂಧಿ ಆ ಕ್ಷೇತ್ರವನ್ನು ಮಗ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಅಮೇಠಿಯಿಂದ ಸ್ಫರ್ಧಿಸಿದ್ದ ರಾಹುಲ್ ಗಾಂಧಿ ತಮ್ಮ ಎದುರಾಳಿ ಬಿಎಸ್‌ಪಿ ಪಕ್ಷದ ಚಂದ್ರ ಪ್ರಕಾಶ್ ಮಿಶ್ರಾ ಎದುರು ಸುಮಾರು 3 ಲಕ್ಷ ಮತಗಳ ಅಂತರದ ಭಾರಿ ಗೆಲುವು ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಿದ್ದರು,

2009ರಲ್ಲೂ ಇದೇ ಕ್ಷೇತ್ರದಿಂದ ಸ್ಫರ್ಧಿಸಿದ್ದ ರಾಹುಲ್ ಗಾಂಧಿ ಗೆಲುವಿನ ಅಂತರವನ್ನು 4 ಲಕ್ಷಕ್ಕೆ ಏರಿಸಿಕೊಂಡಿದ್ದರು. ಆ ಮೂಲಕ ದಾಖಲೆ ಮತಗಳ ಅಂತರದ ಗೆಲುವಿನೊಂದಿಗೆ ಎರಡನೇ ಬಾರಿ ಸಂಸತ್ ಪ್ರವೇಶಿಸಿದ್ದರು. ಆದರೆ, 2014ರ ಚುನಾವಣೆಯಲ್ಲಿ ಪರಿಸ್ಥಿತಿ ಕೊಂಚ ಭಿನ್ನವಾಗಿತ್ತು.

ಒಂದೆಡೆ 2013-14ರ ಸಮಯದಲ್ಲಿ 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣ ಸೇರಿದಂತೆ ನಾನಾ ಹಗರಣಗಳಲ್ಲಿ ಸಿಲುಕಿದ್ದ ಕಾಂಗ್ರೆಸ್‌ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದರೆ, ಅದೇ ಸಂದರ್ಭದಲ್ಲಿ ದೇಶದಾದ್ಯಂತ ಅಂದಿನ ಗುಜರಾತ್ ಮುಖಮಂತ್ರಿ ನರೇಂದ್ರ ಮೋದಿ ಅಲೆ ವ್ಯಾಪಕವಾಗಿತ್ತು. ಕಾಂಗ್ರೆಸ್ ಮುಕ್ತ ಭಾರತ ಎಂಬ ಬಿಜೆಪಿ ಘೋಷಣೆ ಜನಪ್ರಿಯತೆ ಗಳಿಸಿತ್ತು.

ಅಮೇಠಿ ಕ್ಷೇತ್ರದಿಂದ ಶತಾಯಗತಾಯ ರಾಹುಲ್ ಗಾಂಧಿಯನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದ ಬಿಜೆಪಿ ಅವರ ವಿರುದ್ಧ ಮಾಜಿ ನಟಿ ಸ್ಮೃತಿ ಇರಾನಿಯವರನ್ನು ಕಣಕ್ಕಿಳಿಸಿತ್ತು. ಕ್ಷೇತ್ರದಾದ್ಯಂತ ರಾಹುಲ್ ಗಾಂಧಿ ವಿರುದ್ಧ ವ್ಯಾಪಕ ಪ್ರಚಾರವನ್ನು ಮಾಡಲಾಗಿತ್ತು. ಪರಿಣಾಮ ಈ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದರಾದರೂ, ಗೆಲುವಿನ ಅಂತರ 4 ಲಕ್ಷದಿಂದ ಕೇವಲ 92 ಸಾವಿರಕ್ಕೆ ಇಳಿದಿತ್ತು. ಕಡಿಮೆ ಅಂತರದ ಮತಗಳಲ್ಲಿ ಸೋಲನುಭವಿಸಿದ್ದ ಸ್ಮೃತಿ ಇರಾನಿಗೆ ಬಿಜೆಪಿ ಕೇಂದ್ರ ಸಚಿವೆ ಸ್ಥಾನಮಾನ ನೀಡಿತ್ತು.

ಪ್ರಸ್ತುತ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಅಮೇಠಿ ಕ್ಷೇತ್ರದಲ್ಲಿ ಮತ್ತಷ್ಟು ಬಿಗಡಾಯಿಸಿದೆ. ಈ ಬಾರಿಯು ರಾಹುಲ್ ಗಾಂಧಿಯನ್ನು ಸೋಲಿಸಲು ಮುಂದಾಗಿರುವ ಬಿಜೆಪಿ ಅಮೇಠಿಯಿಂದ ಮತ್ತೆ ಸ್ಮೃತಿ ಇರಾನಿಗೆ ಟಿಕೆಟ್ ಘೋಷಿಸಿದೆ.

ಕಳೆದ ಒಂದು ವರ್ಷದಿಂದ ತಿಂಗಳಿಗೆ ಮೂರು ಬಾರಿ ತಪ್ಪದೆ ಕ್ಷೇತ್ರ ಪ್ರವಾಸ ಮಾಡುತ್ತಿರುವ ಸ್ಮೃತಿ ಇರಾನಿ ಮತದಾರರ ಜೊತೆಗೆ ಉತ್ತಮ ಒಡನಾಟವನ್ನು ಬೆಳೆಸಿಕೊಂಡಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಆಗಮಿಸುವುದೆ ಅತ್ಯಂತ ವಿರಳವಾಗಿದೆ. ಸಹಜವಾಗಿಯೇ ಅಮೇಠಿ ಅಂದುಕೊಂಡಷ್ಟು ಸುಲಭ ಅಲ್ಲ, ಕೊಂಚ ಯಾಮಾರಿದರೂ ನಗೆಪಾಟಲು ಎಂಬ ಪರಿಸ್ಥಿತಿ ಕಾಂಗ್ರೆಸ್‌ಗೆ ಇದೆ ಎನ್ನುತ್ತವೆ ವರದಿಗಳು.

ಕಳೆದ ವಾರ ಅಮೇಠಿಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಮೇಠಿಯಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ಕಾರ್ಖಾನೆ ನಿರ್ಮಿಸುವ ಆಶ್ವಾಸನೆ ನೀಡಿದ್ದಾರೆ. ಈ ಬೆಳವಣಿಗೆಯ ನಂತರ ಅಮೇಠಿಯಲ್ಲಿ ಬಿಜೆಪಿ ಪರ ಅಲೆ ಮತ್ತಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ.

ಇದಲ್ಲದೆ ಉತ್ತರಪ್ರದೇಶದಲ್ಲಿ ಬಿಜೆಪಿ ಬಹುಮತದ ಸರಕಾರ ಆಡಳಿತದಲ್ಲಿದೆ. ರಾಹುಲ್ ಗಾಂಧಿಯನ್ನು ಸೋಲಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಮೇಠಿ ಜಿಲ್ಲೆಯ ಎಲ್ಲಾ 6 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೆ ಇರುವುದು ಬಿಜೆಪಿ ಪಾಲಿಗೆ ವರದಾನವಾಗಿದೆ. ಇದಲ್ಲದೆ ಕಳೆದ 6 ತಿಂಗಳಿಂದ ಆರ್‌ಎಸ್‌ಎಸ್‌ ನ ಸುಮಾರು 5 ಸಾವಿರ ಕಾರ್ಯಕರ್ತರು ಈಗಾಗಲೇ ಕ್ಷೇತ್ರಕ್ಕೆ ಆಗಮಿಸಿದ್ದು ಸ್ಮೃತಿ ಇರಾನಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ಅಮೇಠಿಯಲ್ಲಿ ಈಗಾಗಲೇ ಸೋಲಿನ ಭೀತಿ ಎದುರಿಸುತ್ತಿರುವ ರಾಹುಲ್ ಗಾಂಧಿ ಬೇರೊಂದು ಸುರಕ್ಷಿತ ಕ್ಷೇತ್ರದ ನಿರೀಕ್ಷೆಯಲ್ಲಿದ್ದಾರೆ. ಇದೆ ಕಾರಣಕ್ಕೆ ರಾಜ್ಯದ ನಾಯಕರು ಅವರನ್ನು ಕರ್ನಾಟಕದಿಂದ ಸ್ಪರ್ಧಿಸುವ ವಿಚಾರವನ್ನು ತೇಲಿ ಬಿಟ್ಟಿರಬಹುದು.

ಮಾರ್ಚ್ 21 ಅಥವಾ 22ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಅಂದೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.

ಒಂದು ವೇಳೆ ಕರ್ನಾಟಕದ ಕಾಂಗ್ರೆಸ್ ನಾಯಕರ ಹಾರೈಕೆ ಅಥವಾ ಮುನ್ಸೂಚನೆಯಂತೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಕಣಕ್ಕಿಳಿದರೆ ಕರ್ನಾಟಕ ಅಂದುಕೊಂಡಿದ್ದಕ್ಕಿಂತ ಕೊಂಚ ಜಾಸ್ತಿಯೇ ಪ್ರಾಶಸ್ತ್ರ್ಯವನ್ನು ರಾಷ್ಟ್ರ ಮಟ್ಟದಲ್ಲಿ ಪಡೆದುಕೊಳ್ಳಲಿದೆ.