samachara
www.samachara.com
‘ಹವಾ ಬದ್ಲೇಗಿ’: ಕಣಿವೆ ರಾಜ್ಯದಲ್ಲಿ ಹೊಸ ಪಕ್ಷ, ಶಾ ಫೈಸಲ್‌ ಆಗ್ತಾರಾ ಕಾಶ್ಮೀರದ ಕೇಜ್ರಿವಾಲ್?
COVER STORY

‘ಹವಾ ಬದ್ಲೇಗಿ’: ಕಣಿವೆ ರಾಜ್ಯದಲ್ಲಿ ಹೊಸ ಪಕ್ಷ, ಶಾ ಫೈಸಲ್‌ ಆಗ್ತಾರಾ ಕಾಶ್ಮೀರದ ಕೇಜ್ರಿವಾಲ್?

ಯುವಜನರು ದೊಡ್ಡ ಮಟ್ಟದಲ್ಲಿ ಜಮಾವಣೆಗೊಂಡು ಹೊಸ ಪಕ್ಷಕ್ಕೆ ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ಬೆನ್ನಿಗೆ ಇದು ಕಣಿವೆ ರಾಜ್ಯದ ‘ಆಮ್‌ ಆದ್ಮಿ ಪಕ್ಷ’ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ.

Team Samachara

ಹೊಸ ರಾಜಕೀಯ ಅಲೆಯೊಂದಕ್ಕೆ ಸಂಘರ್ಷ ಪೀಡಿತ ಜಮ್ಮು ಮತ್ತು ಕಾಶ್ಮೀರ ಸಾಕ್ಷಿಯಾಗಿದೆ. ಮಾಜಿ ಐಎಎಸ್‌ ಟಾಪರ್‌ ಶಾ ಫೈಸಲ್‌ ಮತ್ತು ಜೆಎನ್‌ಯು ಹೋರಾಟದ ಹಿನ್ನೆಲೆಯ ಶೆಹ್ಲಾ ರಶೀದ್‌ ಸೇರಿಕೊಂಡು ಶ್ರೀನಗರದಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದ್ದಾರೆ.

ಭಾನುವಾರ ರಾಜ್‌ಭಾಗ್‌ನ ಗಿಂಡುನ್‌ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಸಮಾವೇಶದಲ್ಲಿ ‘ಜಮ್ಮು ಆಂಡ್‌ ಕಾಶ್ಮೀರ್‌ ಪೀಪಲ್ಸ್‌ ಮೂವ್‌ಮೆಂಟ್‌’ ಪಕ್ಷಕ್ಕೆ ಚಾಲನೆ ನೀಡಲಾಗಿದೆ. ಸಮಾವೇಶಕ್ಕೆ ಶ್ರೀನಗರದ ಮೂಲೆ ಮೂಲೆಯಿಂದ ಜನರು ಹರಿದು ಬಂದಿದ್ದರು. ಅದರಲ್ಲೂ ಮುಖ್ಯವಾಗಿ ಯುವಜನರು ದೊಡ್ಡ ಮಟ್ಟದಲ್ಲಿ ಜಮಾವಣೆಗೊಂಡು ಹೊಸ ಪಕ್ಷಕ್ಕೆ ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ಬೆನ್ನಿಗೆ ಇದು ಕಣಿವೆ ರಾಜ್ಯದ 'ಆಮ್‌ ಆದ್ಮಿ ಪಕ್ಷ’ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ.

ಕೆಲವು ತಿಂಗಳ ಹಿಂದೆ 2010ರ ಟಾಪರ್‌ ಶಾ ಫೈಸಲ್‌ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಾಶ್ಮೀರದ ನಾಗರೀಕರ ನಿರಂತರ ಕೊಲೆಗಳು ಮತ್ತು ಇದನ್ನು ಪರಿಹರಿಸಲು ಯಾವುದೇ ಕ್ರಮ ತೆಗೆದುಕೊಳ್ಳದ ನವದೆಹಲಿಯ ನಡೆಗಳನ್ನು ವಿರೋಧಿಸಿ ಅವರು ರಾಜೀನಾಮೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವ ಘೋಷಣೆ ಮಾಡಿದ್ದರು. ಆರಂಭದಲ್ಲಿ ಸ್ಥಾಪಿತ ಪಕ್ಷಗಳನ್ನು ಸೇರುವ ಸೂಚನೆ ನೀಡಿದ್ದ ಅವರು ಇದೀಗ ಸ್ವಂತ ಪಕ್ಷಕ್ಕೆ ಅಡಿಗಲ್ಲು ಹಾಕಿದ್ದಾರೆ.

‘ಜಮ್ಮು ಆಂಡ್‌ ಕಾಶ್ಮೀರ್‌ ಪೀಪಲ್ಸ್‌ ಮೂವ್‌ಮೆಂಟ್‌’ ಪಕ್ಷದ ಚಾಲನೆ ಕಾರ್ಯಕ್ರಮದಲ್ಲಿ ಶಾ ಫೈಸಲ್‌ ಮತ್ತು ಶೆಹ್ಲಾ ರಶೀದ್‌.
‘ಜಮ್ಮು ಆಂಡ್‌ ಕಾಶ್ಮೀರ್‌ ಪೀಪಲ್ಸ್‌ ಮೂವ್‌ಮೆಂಟ್‌’ ಪಕ್ಷದ ಚಾಲನೆ ಕಾರ್ಯಕ್ರಮದಲ್ಲಿ ಶಾ ಫೈಸಲ್‌ ಮತ್ತು ಶೆಹ್ಲಾ ರಶೀದ್‌.
/ಟ್ಟಿಟ್ಟರ್‌, ಶೆಹ್ಲಾ ರಶೀದ್‌

ತಮ್ಮನ್ನು ತಾವು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಜತೆ ಹೋಲಿಕೆ ಮಾಡಿಕೊಳ್ಳಲು ಇಚ್ಛಿಸಿರುವ ಅವರು, ಶ್ರೀನಗರದ ರ್ಯಾಲಿಯಲ್ಲಿ 'ಹವಾ ಬದ್ಲೇಗಿ' ಎಂಬ ಘೋಷಣೆ ಮೊಳಗಿಸಿದ್ದಾರೆ. ತಮ್ಮ ಪಕ್ಷದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

"ನಾನು ಯಾವತ್ತೂ ಕೇಜ್ರಿವಾಲ್‌ ಮತ್ತು ಇಮ್ರಾನ್‌ ಖಾನ್‌ರ ಉದಾಹರಣೆಗಳನ್ನು ನೀಡುತ್ತಿರುತ್ತೇನೆ. ಕಾರಣ ಅವರು ಹಲವು ವರ್ಷಗಳ ಕಾಲ ಸಂಕಷ್ಟ ಅನುಭವಿಸಬೇಕಾಯಿತು. ಆದರೆ ಅವರ ಮೇಲಿದ್ದ ನಂಬಿಕೆ ಯಾವತ್ತೂ ಕುಸಿಯಲಿಲ್ಲ," ಎಂದು ನೆರೆದಿದ್ದ ಜನರನ್ನು ಉದ್ದೇಶಿಸಿ ಹೇಳಿದ್ದಾರೆ.

ಆರಂಭದಲ್ಲಿ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳನ್ನು ಸೇರಲು ಇಚ್ಛಿಸಿದ್ದೆ. ಆದರೆ ಇದಕ್ಕೆ ಜನರು ತೀವ್ರ ವಿರೋಧ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ನಿಂದಿಸಲು ಆರಂಭಿಸಿದರು. ರಕ್ತದಲ್ಲಿ ಕೈ ಅದ್ದಿದವರ ಜತೆ ಸೇರಬೇಡಿ ಎಂಬ ಕಿವಿ ಮಾತು ಹೇಳಿದರು. “ಜನರು ಅದರಲ್ಲೂ ಮುಖ್ಯವಾಗಿ ಯುವಜನರು ತೋರಿಸಿದ ಆ ಸಿಟ್ಟು ಮತ್ತು ಆಕ್ರೋಶ ನನ್ನ ಕಣ್ಣನ್ನು ತೆರೆಸಿತು. ನನ್ನನ್ನು ನಿಂದಿಸಿದವರಿಗೆ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ. ಕಾರಣ ಅವರು ನನ್ನಿಂದ ಹೊಸ ಪಕ್ಷಕ್ಕೆ ಚಾಲನೆ ಸಿಗುವಂತೆ ಮಾಡಿದ್ದಾರೆ,” ಎಂದು ವಿವರಿಸಿದ್ದಾರೆ.

ಸದ್ಯ ನನ್ನ ವಿರೋಧಿಗಳು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜತೆ ಸಂಪರ್ಕದಲ್ಲಿದ್ದೇನೆ ಎಂಬ ಗಾಳಿ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ ಎಂದಿರುವ ಅವರು, ಒಂದು ಕಾಲದಲ್ಲಿ ನನ್ನನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದವರೇ ಇಂದು ನನ್ನತ್ತ ಬೆರಳೆತ್ತುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

"ಇತಿಹಾಸದಲ್ಲಿ ಯಾವಾಗೆಲ್ಲ ಹೊಸ ಆಲೋಚನೆಗಳು ಹುಟ್ಟಿಕೊಳ್ಳುತ್ತವೆಯೋ, ಮೊದಲಿಗೆ ಅದನ್ನು ನಿರಾಕರಿಸಲಾಗುತ್ತದೆ. ನಂತರ ಅವುಗಳ ವಿರುದ್ಧ ಪಿತೂರಿಯ ಅರೋಪಗಳು ತೇಲಿ ಬರುತ್ತವೆ. ಆದರೆ ನಾನು ವಿರೋಧ ಮತ್ತು ನಿಂದನೆಯನ್ನು ಎದುರಿಸಲು ಸಜ್ಜಾಗಿದ್ದೇನೆ," ಎಂದು ಹೇಳಿರುವ ಫೈಸಲ್‌ ನಮ್ಮ ಪಕ್ಷ ಯಾವ ಜಾತಿಗೂ, ಭಾಗಕ್ಕೂ ಸೇರಿದ್ದಲ್ಲ ಎಂದಿದ್ದಾರೆ. ಜಮ್ಮುವಿನ ಡೋಗ್ರಾ (ಹಿಂದೂ) ಗಳು, ಲಡಾಕ್‌ನ ಬೌದ್ಧರು, ರಜೌರಿ ಮತ್ತು ಪೂಂಛ್‌ನ ಮುಸ್ಲಿಮರು, ಎಲ್ಲರೂ ನಮಗೆ ಒಂದೇ ಎಂದಿದ್ದಾರೆ.

ನ್ಯಾಯ, ಘನತೆ ಮತ್ತು ಅಭಿವೃದ್ಧಿಯೇ ಧ್ಯೇಯ:

10 ವರ್ಷಗಳ ಹಿಂದೆ ಐಎಎಸ್‌ ಸೇರಿದಾಗ ಉತ್ತಮ ರಸ್ತೆಗಳು, ವಿದ್ಯುತ್‌ ಮತ್ತು ಕುಡಿಯುವ ನೀರು ಬದಲಾವಣೆ ತರುತ್ತದೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಜನರ ಜೀವ ಮತ್ತು ಮಹಿಳೆಯ ಗೌರವ ಭದ್ರವಾಗದೇ ಯಾವುದೂ ಬದಲಾಗುವುದಿಲ್ಲ ಎಂಬುದು ಈತ ಅರ್ಥವಾಗಿದೆ ಎಂದಿದ್ದಾರೆ.

ರಾಜ್ಯದ ಜನರ ಆಶಯಕ್ಕೆ ಅನುಗುಣವಾಗಿ ಕಾಶ್ಮೀರ ವಿವಾದದ ಶಾಂತಿಯುತ ಬಗೆಹರಿಸುವುದರ ಬಗ್ಗೆ ಒಲವಿದೆ ಎಂದಿರುವ ಅವರು, ಇದಕ್ಕೆ ಸಹಕಾರ ನೀಡುವಂತೆ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳನ್ನು ಅವರು ಕೇಳಿಕೊಂಡಿದ್ದಾರೆ.

ಕಾಶ್ಮೀರದ ಸಮಸ್ಯೆಗೆ ಪಾಕಿಸ್ತಾನ ಮತ್ತು ಭಾರತದಿಂದ ಪರಿಹಾರ ಸಿಗಲಿದೆ. ಎರಡೂ ದೇಶಗಳ ನಡುವಿನ ಸೇತುವೆಯಾಗಿ ನಾವು ಕೆಲಸ ಮಾಡಲಿದ್ದೇವೆ. ಜತೆಗೆ ದೆಹಲಿ ಮತ್ತು ಶ್ರೀನಗರದ ನಡುವಿನ ಕೊಂಡಿಯಾಗಲಿದ್ದೇವೆ ಎಂದವರು ತಮ್ಮ ಪಕ್ಷದ ಕಾರ್ಯಚಟುವಟಿಕೆಗಳನ್ನು ತೆರೆದಿಟ್ಟಿದ್ದಾರೆ.

‘ನ್ಯಾಯ, ಘನತೆ ಮತ್ತು ಅಭಿವೃದ್ಧಿ’ಯನ್ನು ಪಕ್ಷದ ಧ್ಯೇಯವಾಕ್ಯವಾಗಿ ಘೋಷಿಸಲಾಗಿದ್ದು, “ರಾತ್ರಿ ಬೆಳಗಾಗುವುದರೊಳಗೆ ನಮ್ಮಿಂದ ಬದಲಾವಣೆ ಬಯಸಬೇಡಿ,” ಎಂದು ಅವರು ಜನರಿಗೆ ಕಿವಿ ಮಾತು ಹೇಳಿದ್ದಾರೆ.

ಪಕ್ಷವಲ್ಲ, ಚಳವಳಿ:

ಇನ್ನು ವೇದಿಕೆಯಿಂದ ಮಾತನಾಡಿದ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌, ರಾಜ್ಯದ ಜನರಿಗೆ ರಸ್ತೆಗಳು, ವಿದ್ಯುತ್‌, ನೀರು ಬೇಕಾಗಿದೆ. ಆದರೆ, "ಇದನ್ನು ತಲೆ ಎತ್ತಿಯೇ ನಾವು ಪಡೆದುಕೊಳ್ಳಬೇಕಾಗಿದೆ, ತಲೆ ಬಗ್ಗಿಸಿ ಅಲ್ಲ," ಎಂದಿದ್ದಾರೆ. ಕಾಶ್ಮೀರ ಜನರ ಮನೆ ಹೊರಗಿನ ಭದ್ರತೆಗಾಗಿ ಹೊಸ ಪಕ್ಷ ಕೆಲಸ ಮಾಡಲಿದೆ ಎಂದು ಅವರು ವಿವರಿಸಿದ್ದಾರೆ.

ಜತೆಗೆ ಇದೊಂದು ಪಕ್ಷವಲ್ಲ, ಶಾಂತಿ ಮತ್ತು ಅಭಿವೃದ್ಧಿಯೆಡೆಗಿನ ಆಂದೋಲನ ಹಾಗೂ ಏಕತೆ ಮತ್ತು ಗೌರವದೆಡೆಗಿನ ಚಳವಳಿ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಇದೇ ರ್ಯಾಲಿಯಲ್ಲಿ ತಮ್ಮ ತಂಡವನ್ನು ಫೈಸಲ್‌ ಪರಿಚಯಿಸಿದ್ದು, ಶೆಹ್ಲಾ ರಶೀದ್ ಮಾತ್ರವಲ್ಲದೆ ಮುಂಬೈ ಮೂಲದ ಕಾಶ್ಮೀರಿ ಉದ್ಯಮಿ ಫೆರೋಝ್‌ ಪಿರ್ಝಾದ, ಖ್ಯಾತ ಕಾರ್‌ ವ್ಯಾಪಾರಿ ಬಲ್ದೇವ್‌ ಸಿಂಗ್‌, ಸಹಾಯಕ ಪ್ರಾಧ್ಯಾಪಕ ಡಾ. ಮುಸ್ತಾಫಾ ಹಫೀಸ್‌ ಮತ್ತು ವಕೀಲರಾದ ಉಝೈರ್‌ ರೌಂಗ ಮತ್ತು ಇಕ್ಬಾಲ್‌ ತಾಹೀರಾ ಪಕ್ಷದಲ್ಲಿದ್ದಾರೆ.

ಸದ್ಯಕ್ಕೆ ಪಕ್ಷಕ್ಕೆ ಚಾಲನೆ ನೀಡಲಾಗಿದ್ದು, ಚುನಾವಣಾ ಸ್ಪರ್ಧೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಇದೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದೆಯೇ ಎಂಬುದೂ ಗೊತ್ತಾಗಿಲ್ಲ.

ಸದ್ಯಕ್ಕೆ ವ್ಯಕ್ತವಾಗುತ್ತಿರುವ ಸ್ಪಂದನೆಯನ್ನು ಫೈಸಲ್‌ ಮತಗಳಾಗಿ ಪರಿವರ್ತಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಅದಕ್ಕಿಂತ ಹೆಚ್ಚಾಗಿ ಚಳವಳಿಯ ಮೂಸೆಯಿಂದ ಹೊರ ಬಂದು ದೆಹಲಿಯ ಗದ್ದುಗೆ ಏರಿದ ಅರವಿಂದ ಕೇಜ್ರಿವಾಲ್‌ ಕಾಶ್ಮೀರದಲ್ಲಿ ಹುಟ್ಟಿಕೊಳ್ಳಲಿದ್ದಾರಾ ಎಂಬುದನ್ನು ಗಮನಿಸಬೇಕಿದೆ. ಸದ್ಯಕ್ಕಂತೂ ಕಣಿವೆಯ ಹವೆ ಬದಲಾಗಿದೆ.

ಚಿತ್ರ ಕೃಪೆ: ದಿ ಟೆಲಿಗ್ರಾಫ್