samachara
www.samachara.com
ಮನೋಹರ್‌ ಪರಿಕ್ಕರ್: ಗೋವಾದಿಂದ ರಕ್ಷಣಾ ಖಾತೆವರೆಗೆ ಬಂದಿದ್ದ ‘ಸರಳ ಜೀವಿ’!
COVER STORY

ಮನೋಹರ್‌ ಪರಿಕ್ಕರ್: ಗೋವಾದಿಂದ ರಕ್ಷಣಾ ಖಾತೆವರೆಗೆ ಬಂದಿದ್ದ ‘ಸರಳ ಜೀವಿ’!

ಕಳೆದ ಸುಮಾರು ಒಂದು ವರ್ಷದಿಂದ ಅವರು ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನ್ಯೂಯಾರ್ಕ್‌, ದೆಹಲಿ, ಮುಂಬೈ ಮತ್ತು ಗೋವಾದ ಆಸ್ಪತ್ರೆಗಳ ಮಧ್ಯೆ ಓಡಾಡುತ್ತಲೇ ಅವರು ಗೋವಾ ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿದ್ದರು

ಮೂಗಿನಲ್ಲಿ ಪೈಪ್‌ ಇಟ್ಟುಕೊಂಡು ರಾಜ್ಯವೊಂದರ ಬಜೆಟ್‌ ಭಾಷಣ ಓದಿದ್ದ ಮನೋಹರ್‌ ಪರಿಕ್ಕರ್ ಎಂಬ ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ. ಗೋವಾ ಮುಖ್ಯಮಂತ್ರಿಯಾಗಿದ್ದ ಅವರು ರಾಜಧಾನಿ ಪಣಜಿಯಲ್ಲಿರುವ ಮಗನ ಮನೆಯಲ್ಲಿ ಭಾನುವಾರ ಸಂಜೆ ಸಾವನ್ನಪ್ಪಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಕಳೆದ ಸುಮಾರು ಒಂದು ವರ್ಷದಿಂದ ಅವರು ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನ್ಯೂಯಾರ್ಕ್‌, ದೆಹಲಿ, ಮುಂಬೈ ಮತ್ತು ಗೋವಾದ ಆಸ್ಪತ್ರೆಗಳ ಮಧ್ಯೆ ಓಡಾಡುತ್ತಲೇ ಅವರು ಗೋವಾ ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿದ್ದರು. ಆದರೆ ಇಂದು ರಾಜ್ಯದ ಅಸ್ಥಿರ ಸರಕಾರದ ಜತೆಗೆ ತಮ್ಮ ದೇಹದ ಮೇಲಿನ ಹೋರಾಟವನ್ನೂ ಕೈ ಬಿಟ್ಟು ಅವರು ನಿರ್ಗಮಿಸಿದ್ದಾರೆ.

ಮೂಗಿಗೆ ಪೈಪ್‌ ಇಟ್ಟುಕೊಂಡೇ ಕಚೇರಿಗೆ ಹಾಜರಾಗುತ್ತಿದ್ದ ಮನೋಹರ್‌ ಪರಿಕ್ಕರ್‌.
ಮೂಗಿಗೆ ಪೈಪ್‌ ಇಟ್ಟುಕೊಂಡೇ ಕಚೇರಿಗೆ ಹಾಜರಾಗುತ್ತಿದ್ದ ಮನೋಹರ್‌ ಪರಿಕ್ಕರ್‌.
/ದಿ ಪ್ರಿಂಟ್

ಅಂದ ಹಾಗೆ ಪರಿಕ್ಕರ್‌ ಎಂಬ ವ್ಯಕ್ತಿ ಹೇಗಿದ್ದರು?

ಪರಿಕ್ಕರ್ ಆರ್‌ಎಸ್‌ಎಸ್‌ ಜತೆಗೆ ಹತ್ತಿರದ ನಂಟನ್ನು ಹೊಂದಿದ್ದ ರಾಜಕಾರಣಿ. ಕೊಂಕಣಿ ಸಮುದಾಯದವರೇ ತುಂಬಿಕೊಂಡಿರುವ, ಬಿಜೆಪಿಯ 'ಫಂಡ್ ಬ್ಯಾಂಕ್' ಗೋವಾ ಮೂಲದವರು. ಸಂಘಕ್ಕೆ ಬೇಕಾದ ಸರಳ ಜೀವನ, ಶಿಸ್ತು, ಹಗಲಿರುಳು ದುಡಿಮೆ, ಬುದ್ಧಿವಂತಿಕೆ ಎಲ್ಲಾ ಇದ್ದ ಏಕೈಕ ವ್ಯಕ್ತಿ ಬಹುಶಃ ಪರಿಕ್ಕರ್.

ಗೋವಾ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕೇಂದ್ರ ರಕ್ಷಣಾ ಸಚಿವರಾಗಿದ್ದರು. ನಂತರ ಗೋವಾ ಚುನಾವಣೆ ಬಳಿಕ ಒದಗಿ ಬಂದ ಸನ್ನಿವೇಶದಲ್ಲಿ ಮತ್ತೊಮ್ಮೆ ಗೋವಾದ ಸಿಎಂ ಹುದ್ದೆಗೇರಿದ್ದರು. ಅವರು ಮುಖ್ಯಮಂತ್ರಿಯಾಗಿ, ಸಚಿವರಾಗಿ ಪಾಲಿಸಿಕೊಂಡು ಬಂದಿರುವ ಜೀವನ ಶೈಲಿಯೇ ಇವತ್ತಿನ ರಾಜಕಾರಣದ ಮಟ್ಟಿಗೆ ಕುತೂಹಲಕಾರಿಯಾದುದು.

ಆಗಿನ್ನೂ 2012...

ಮನೋಹರ್ ಪರಿಕ್ಕರ್ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಹಲವು ವರ್ಷಗಳೇ ಕಳೆದಿತ್ತು. ಅವತ್ತೊಂದು ದಿನ ರಾಜಧಾನಿ ಪಣಜಿಯ ಫೈವ್ ಸ್ಟಾರ್ ಹೊಟೇಲಿಗೆಂದು ಹೋದವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಅಷ್ಟಕ್ಕೆಲ್ಲಾ ಕಾರಣವಾಗಿದ್ದು ಪರಿಕ್ಕರ್ ಸರಳ ಜೀವನ ಶೈಲಿ. ಮಾಸಲು ಬಟ್ಟೆ, ಅರ್ಧ ತೋಳಿನ ಅಂಗಿ, ಸಾದಾ ಚಪ್ಪಲಿ ತೊಟ್ಟಿದ್ದ ಅವರನ್ನು ಗುರುತಿಸುವಲ್ಲಿ ಭದ್ರತಾ ಸಿಬ್ಬಂದಿಯೂ ಸೋತಿದ್ದ.

ಪರಿಕ್ಕರ್ ಹೊರಗೆ ಹೊರಡುತ್ತಿದ್ದುದೇ ಹಾಗೆ. ಓರ್ವ ಪೊಲೀಸ್ ಅಧಿಕಾರಿ ಬಿಟ್ಟರೆ ಅವರೆಂದಿಗೂ ಪೊಲೀಸ್ ಬೆಂಗಾವಲಿನಲ್ಲಿ ತೆರಳುತ್ತಿರಲಿಲ್ಲ. ಅವತ್ತು ಹೊಟೇಲ್ ಮುಂಭಾಗ ಮಾಧ್ಯಮಗಳನ್ನುದ್ದೇಶಿ ಮಾತನಾಡಿದ ಪರಿಕ್ಕರ್, “ನನ್ನನ್ನು ಹೀಗೆ ಸೆಕ್ಯೂರಿಟಿ ಬಾಗಿಲಿನಲ್ಲಿ ತಡೆಯುತ್ತಿರುವುದು ಇದು ಐದನೇ ಬಾರಿ. ನಂತರ ನಾನು ಹಿಂದಕ್ಕೆ ನಡೆದು ಬಂದು ನನ್ನ ಸೆಕ್ರೆಟರಿಗೆ ಕರೆ ಮಾಡಿ ಸೆಕ್ಯೂರಿಟಿಗೆ ನಾನು ಮುಖ್ಯಮಂತ್ರಿ ಎಂಬುದನ್ನು ತಿಳಿಸು ಎಂದೆ,” ಎಂದು ಹೇಳಿಕೆ ನೀಡಿದ್ದರು. ಅದಕ್ಕೂ ಮೊದಲೇ ಐದು ವರ್ಷಗಳ ಪೂರ್ಣ ಆಡಳಿತ ನಡೆಸಿದ್ದ, ಎರಡನೇ ಬಾರಿಗೂ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ಅವರನ್ನು ಸೆಕ್ರೆಟರಿಯೇ ಬಂದು ಮುಖ್ಯಮಂತ್ರಿ ಎಂದು ಪರಿಚಯಿಸುವ ಪರಿಸ್ಥಿತಿ ಅಲ್ಲಿತ್ತು.

ಹಾಗಂತ ಘಟನೆ ನಂತರ ಪರಿಕ್ಕರ್ ಹೊಟೇಲಿನ ಆಡಳಿತ ಮಂಡಳಿ ಮೇಲೆ ಸಿಟ್ಟಾಗಲೂ ಇಲ್ಲ; ಕಿಡಿಕಾರಲೂ ಇಲ್ಲ. ಬದಲಿಗೆ ಪ್ರವಾಸೋದ್ಯಮವನ್ನೇ ನಂಬಿ ಬದುಕುವ ಗೋವಾದ ಹೊಟೇಲಿನ ಸುರಕ್ಷತೆ ನೋಡಿ ಹೊಟೇಲಿನ ಮ್ಯಾನೇಜರನ್ನು ಹೊಗಳಿ ಹೊರ ಬಂದಿದ್ದರು.

ಸರಳ ಜೀವಿ ಮನೋಹರ್‌ ಪರಿಕ್ಕರ್‌ ಹೀಗಿದ್ದರು.
ಸರಳ ಜೀವಿ ಮನೋಹರ್‌ ಪರಿಕ್ಕರ್‌ ಹೀಗಿದ್ದರು.

ಮನೋಹರ್ ಪರಿಕ್ಕರ್ ಇರುತ್ತಿದ್ದುದೇ ಹಾಗೆ. ಅವರಿರುವ ಮನೆ ಸಾಮಾನ್ಯ ಡಬಲ್ ಬೆಡ್ ರೂಂ ಅಪಾರ್ಟ್ಮೆಂಟ್; ಅದಕ್ಕೂ ಕಂತಿನಲ್ಲಿ ಹಣ ಕಟ್ಟುತ್ತಿದ್ದರು. ಇಂತಹ 'ಸರಳ ಜೀವನ'ದ ಹಲವು ಕತೆಗಳು ಮನೋಹರ್ ಪರಿಕ್ಕರ್ ಸುತ್ತ ಕೇಳಿ ಬರುತ್ತವೆ. ಸಾಮಾನ್ಯ ಹೋಟೆಲಿಗೆ ಹೋಗಿ ಊಟ ಮಾಡುವುದನ್ನು, ಆಟೋ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮುಖ್ಯಮಂತ್ರಿಯನ್ನು ಕಣ್ಣಾರೆ ಕಂಡವರಿದ್ದಾರೆ. ಮಂತ್ರಿಗಳ ಸ್ವಾಗತಕ್ಕೆಂದು ಕಾಯುತ್ತಾ ನಿಂತಿದ್ದವರ ಮುಂದೆಯೇ ರಕ್ಷಣಾ ಸಚಿವರು ಹಾದು ಹೋದಾಗಲೂ ಗುರುತಿಸದೆ ಹೋದ ಉದಾಹರಣೆಗಳಿವೆ. ರಕ್ಷಣಾ ಸಚಿವರಾದಾಗಲೂ ಮದುವೆ ಮನೆಯಲ್ಲಿ ಶುಭ ಕೋರಲು ಸಾಮಾನ್ಯರಂತೆ ಸಾಲಿನಲ್ಲಿ ನಿಂತವರಿವರು.

ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಕೂಟರ್ ಹತ್ತಿ ಗೋವಾದ ಬೀದಿಗಳಲ್ಲಿ ಸುತ್ತಾಡುತ್ತಿದ್ದರು. ಮನೆಯಿಂದ ವಿಧಾನಸಭೆಗೆ ಸೈಕಲ್ ಹತ್ತಿ ಬರುತ್ತಿದ್ದರು. ಮುಖ್ಯಮಂತ್ರಿಯಾದಾಗಲೂ ಅವರ ಹಳೆಯ ಇನ್ನೋವಾ ಕಾರನ್ನೇ ಬಳಸುವಂತೆ ಸೂಚನೆ ನೀಡಿದ್ದರು.

ಮಪುಸಾದಿಂದ ರಕ್ಷಣಾ ಇಲಾಖೆವರೆಗೆ:

ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಹುಟ್ಟೂರು ಗೋವಾದ ಮಪುಸಾ. 1955ರ ಡಿಸೆಂಬರ್ 13ರಂದು ಹುಟ್ಟಿದ ಅವರು ಐಐಟಿ ಬಾಂಬೆಯಿಂದ 1978ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡರು. ಹಾಗೆ ಐಐಟಿ ಪದವೀಧರರಾಗಿ ಮುಂದೊಂದು ದಿನ ಮುಖ್ಯಮಂತ್ರಿಯಾದ ಮೊದಲಿಗರೂ ಈ ಪರಿಕ್ಕರ್.

ಶಾಲಾ ದಿನಗಳಲ್ಲೇ ಪರಿಕ್ಕರ್‌ಗೆ ಆರ್‌ಎಸ್‌ಎಸ್‌ ಜತೆ ಸಂಪರ್ಕ ಬೆಳೆಯಿತು. ಆರ್‌ಎಸ್‌ಎಸ್‌ ಪೂರ್ಣಕಾಲಿಕ ಕಾರ್ಯಕರ್ತರಾದರು. ಅಷ್ಟೊತ್ತಿಗಾಗಲೇ ಜೀವನೋಪಾಯಕ್ಕೆ ಸಣ್ಣ ಉದ್ಯಮವನ್ನೂ ಅವರು ನಡೆಸುತ್ತಿದ್ದರು. 90ರ ದಶಕದಲ್ಲಿ ರಾಮ ಜನ್ಮಭೂಮಿ ಹೋರಾಟ ಆರಂಭವಾದಾಗ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಅದೇ ಹಿನ್ನೆಲೆಯಲ್ಲಿ 1994ರಲ್ಲಿ ಮೊದಲ ಬಾರಿಗೆ ಗೋವಾ ವಿಧಾನಸಭೆಗೆ ಆಯ್ಕೆಯಾದರು. ಅವತ್ತಿಗೆ ಇಡೀ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲವಿದ್ದಿದ್ದು ಕೇವಲ ನಾಲ್ಕು.

1999ರಲ್ಲಿ ವಿರೋಧ ಪಕ್ಷದ ನಾಯಕರಾದ ಪರಿಕ್ಕರ್, 2000ನೇ ಇಸವಿ ಅಕ್ಟೋಬರ್‌ 24ರಂದು ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದರು. ಅಧಿಕಾರಕ್ಕೆ ಏರಿದ್ದು ಮಾತ್ರವಲ್ಲ ಗೋವಾ ರಾಜ್ಯವನ್ನು ಬಿಜೆಪಿಯ ಭದ್ರ ಕೋಟೆಯಾಗಿ ಕಟ್ಟಿ ಬೆಳೆಸಿದರು ಮನೋಹರ್ ಪರಿಕ್ಕರ್.

ಗೋವಾ ಪ್ರವಾಸೋದ್ಯಮದ ಹಬ್ ಆಗಿ ಮೂಡಿ ಬರುವಲ್ಲಿ ಪರಿಕ್ಕರ್ ಪಾತ್ರವಿತ್ತು. ಪೆಟ್ರೋಲಿನ ಎಲ್ಲಾ ತೆರಿಗೆಗಳನ್ನು ಕಳೆದು ದೇಶದಲ್ಲೇ ಅತ್ಯಂತ ಕಡಿಮೆ ದರಕ್ಕೆ ಗೋವಾದಲ್ಲಿ ಪೆಟ್ರೋಲ್ ದೊರೆಯುವಂತೆ ಮಾಡಿದರು. ವಿಮಾನ ಇಂಧನದ ತೆರಿಗೆಯನ್ನೂ ಅರ್ಧಕರ್ಧ ಕಡಿತಗೊಳಿಸಿ, ಹೆಚ್ಚಿನ ವಿಮಾನಗಳು ಗೋವಾದಲ್ಲಿ ಇಂಧನ ತುಂಬಿಸಲಿಕ್ಕಾದರೂ ಇಳಿಯುವಂತೆ ನೋಡಿಕೊಂಡರು. ಇದರಿಂದ ಗೋವಾಗೆ ಬರುವ ಪ್ರಯಾಣ ದರಗಳು ಕುಸಿದು ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಇದರ ಹಿಂದೆ ಪರಿಕ್ಕರ್ ಚಾಣಾಕ್ಷ ತಲೆ ಕೆಲಸ ಮಾಡಿತ್ತು.

ರಕ್ಷಣಾ ಖಾತೆ ಸಚಿವ ಮನೋಹರ್‌ ಪರಿಕ್ಕರ್.
ರಕ್ಷಣಾ ಖಾತೆ ಸಚಿವ ಮನೋಹರ್‌ ಪರಿಕ್ಕರ್.
/ಎಸ್‌ಎಸ್‌ಬಿ ಕ್ರಾಕ್

ಮುಂದೆ ಸೋಲು ಗೆಲುವು ನಡೆದು ಮತ್ತೆ 2012ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದರು. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚಾಣಾಕ್ಷ, ಶಿಸ್ತಿನ ಸಿಪಾಯಿ, ಸರಳ ಸಜ್ಜನ ಮನುಷ್ಯ ಎಂದು ಕರೆಸಿಕೊಂಡಿದ್ದ ಮನೋಹರ್ ಪರಿಕರ್‌ರನ್ನು ಕೇಂದ್ರಕ್ಕೆ ಕರೆಸಿಕೊಂಡು ರಕ್ಷಣಾ ಇಲಾಖೆಯ ಹೊಣೆ ನೀಡಲಾಯಿತು. ಗೋವಾದಿಂದ ಕ್ಯಾಬಿನೆಟ್ ಮಂತ್ರಿಯಾದ ಮೊದಲಿಗರು ಎಂಬ ಹೆಚ್ಚುಗಾರಿಕೆಗೆ ಪರಿಕ್ಕರ್ ಪಾತ್ರರಾದರು.

ಪರಿಕ್ಕರ್ ರಕ್ಷಣಾ ಸಚಿವರಾಗುತ್ತಿದ್ದಂತೆ ಧೂಳು ಹಿಡಿಯುತ್ತಿದ್ದ ಕಡತಗಳಿಗೆ ಮರು ಜೀವ ನೀಡಿದರು. ಹಲವು ಡೀಲ್‌ಗಳು ಕಾರ್ಯರೂಪಕ್ಕೆ ಬಂದವು. ರಕ್ಷಣಾ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗಳಾದವು. ಆದರೆ ಅವರು ಇದೇ ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ನಡೆದ ರಫೇಲ್‌ ಡೀಲ್‌ ಅವರನ್ನು ಕೊನೆಯವರೆಗೂ ಇನ್ನಿಲ್ಲದಂತೆ ಕಾಡಿತು.

ಇದರ ನಡುವೆಯೂ ಅವರು ನುಡಿದಂತೆ ನಡೆದುಕೊಂಡರು. ಜನವರಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದ ಪರಿಕ್ಕರ್‌ ‘ನನ್ನ ಕೊನೆಯ ಉಸಿರು ಇರುವವರೆಗೆ ಗೋವಾದ ಸೇವೆ ಮಾಡುತ್ತೇನೆ’ ಎಂದಿದ್ದರು. ತಮ್ಮ ಮಾತಿನಂತೆ ಅನಾರೋಗ್ಯದ ನಡುವೆಯೂ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡೇ ಅವರು ಗೋವಾದ ಜನರನ್ನು ಬಿಟ್ಟು ದೂರ ತೆರಳಿದ್ದಾರೆ.

ಚಿತ್ರ ಕೃಪೆ: ಮ್ಯಾಂಗೋ ನ್ಯೂಸ್‌