samachara
www.samachara.com
ಪೊಲ್ಲಾಚಿ ಕಾಮುಕರ ಪ್ರಕರಣ: ಫೇಸ್‌ಬುಕ್‌, ಸೆಕ್ಸ್‌, ಬ್ಲಾಕ್‌ಮೇಲ್ ಮತ್ತು ‘ಪೋಲಿ’ಸರು... 
COVER STORY

ಪೊಲ್ಲಾಚಿ ಕಾಮುಕರ ಪ್ರಕರಣ: ಫೇಸ್‌ಬುಕ್‌, ಸೆಕ್ಸ್‌, ಬ್ಲಾಕ್‌ಮೇಲ್ ಮತ್ತು ‘ಪೋಲಿ’ಸರು... 

ಕಳೆದ 7 ವರ್ಷದಿಂದ ಈ ತಂಡ ಇಂತಹ ಹೇಯ ದಂಧೆಯಲ್ಲಿ ತೊಡಗಿದ್ದರೂ ಎಲ್ಲೂ ಸಿಕ್ಕಿಬಿದ್ದಿರಲಿಲ್ಲ. ಆದರೆ, ಈ ಕಾಮುಕರು ಸಿಕ್ಕಿಬೀಳಲು ಕಾರಣವಾಗಿದ್ದು ಒಂದು ಹುಡುಗಿ. ಆನಂತರವೇ ಈ ಪ್ರಕರಣ ಬೆಳಕಿಗೆ ಬಂದದ್ದು ಇಡೀ ತಮಿಳುನಾಡು ಬೆಚ್ಚಿ ಬಿದ್ದಿದೆ.

ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೇಯ ಕೃತ್ಯಕ್ಕೆ ತಮಿಳುನಾಡಿನ ಪೊಲ್ಲಾಚಿ ಜಿಲ್ಲೆ ಸಾಕ್ಷಿಯಾಗಿದೆ. ಫೇಸ್‌ಬುಕ್‌ನಲ್ಲಿ ಹುಡುಗಿಯರನ್ನು ಪರಿಚಯಿಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿ ವಿಡಿಯೋ ಮಾಡಿ ಆ ಮೂಲಕ ಹಣ ಪೀಕುವ ತಂಡದ ಹೀನ ಕೃತ್ಯಗಳು ಒಂದೊಂದೆ ಹೊರಬೀಳುತ್ತಿದ್ದು, ತಮಿಳುನಾಡು ಬೆಚ್ಚಿ ಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್ ಮೂಲಕವೂ ಪ್ರೀತಿ ಬೆಳೆಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧಗಳನ್ನು ಬೆಳೆಸುವುದು ಸಾಮಾನ್ಯ ಸಂಗತಿ ಕೂಡ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಗುಂಪೊಂದು ಪ್ರೀತಿಸುವ ನಾಟಕವಾಡಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ. ಅಲ್ಲದೆ ತಾವೆಸಗಿದ ಕೃತ್ಯಗಳನ್ನು ಸಂತ್ರಸ್ಥೆಯರಿಗೆ ತಿಳಿಯದೆ ವಿಡಿಯೋ ಮಾಡಿ, ಹಣಕ್ಕೂ ಬೇಡಿಕೆ ಇಡುವ ಮೂಲಕ ಅವರ ಬದುಕನ್ನು ಇನ್ನಷ್ಟು ನರಕವಾಗಿಸಿತ್ತು.

ಆಶ್ಚರ್ಯ ಎನ್ನುವಂತೆ, ಇವರಿಂದ ಮೋಸಕ್ಕೊಳಗಾದ ಯುವತಿಯರ ಸಂಖ್ಯೆ 250ನ್ನೂ ಮೀರುತ್ತಿದೆ ಎನ್ನುತ್ತವೆ ಪೊಲೀಸ್ ಮೂಲಗಳು.

ಏನಿದು ಪೊಲ್ಲಾಚಿ ಪ್ರಕರಣ?

ಆತನ ಹೆಸರು ತಿರುನಾವುಕ್ಕರಸು, ಎಂಬಿಎ ಪದವೀಧರ. ಈತನ ಅಪ್ಪ ಕನಕರಾಜ್ ಫೈನಾನ್ಸ್ ಕಂಪನಿ ಮಾಲೀಕ.

ಅಪ್ಪ ಮಗ ಇಬ್ಬರೂ ಪಕ್ಕಾ ಶೋಕಿಲಾಲ ಎಂಬುದು ಇವರ ಮನೆಯ ಅಕ್ಕಪಕ್ಕದವರ ಮಾತು. ಅಪ್ಪ ನಡೆಸುತ್ತಿದ್ದ ಫೈನಾನ್ಸ್ ಕಂಪೆನಿ ಹಾಗೂ ಮೀಟರ್ ಬಡ್ಡಿ ಇವರ ಎಲ್ಲಾ ಶೋಕಿಗಳಿಗೂ ಸಾಕಷ್ಟು ಹಣವನ್ನು ಪೂರೈಸಿದೆ. ಕಾಲೇಜಿಗೆ ಕಾರಿನಲ್ಲೇ ಹೋಗುವ ಹುಡುಗ ನೋಡಲೂ ಸ್ಫುರದ್ರೂಪಿ. ಹೀಗಾಗಿ ಕಾಲೇಜಿನಲ್ಲಿ ಈತನಿಗೆ ಸಾಕಷ್ಟು ಗೆಳತಿಯರ ಸಂಗವೂ ಬೆಳೆದಿದೆ. ಅಷ್ಟೊತ್ತಿಗಾಗಲೆ ಕೆಲ ಮದುವೆಯಾದ ಹೆಣ್ಣು ಮಕ್ಕಳ ಸಹವಾಸವನ್ನೂ ಈತ ಗಳಿಸಿದ್ದ.

ಓದುವ ಕಾಲದಲ್ಲೇ ಕೆಲವು ಶ್ರೀಮಂತ ಹೆಣ್ಣು ಮಕ್ಕಳು ಇವನ ಖರ್ಚಿಗೆ ಸಾಕಷ್ಟು ಹಣ ಕೊಡುತ್ತಿದ್ದರಂತೆ. ಹೀಗೆ ಹೆಣ್ಣುಮಕ್ಕಳ ಸಹವಾಸ ಹಣದ ಮೂಲವಾಗಿ ಬದಲಾಗುತ್ತಿದ್ದಂತೆ ಈತನ ವರೆಸೆಯೂ ಸಂಪೂರ್ಣ ಬದಲಾಗಿದೆ. ತನ್ನ ಸುತ್ತ ಸೆಂಥಿಲ್, ಬಾಬು, ವಸಂತಕುಮಾರ್, ಮಣಿ, ಸಬರಿರಾಜನ್, ನಾಗರಾಜ್ ಸೇರಿದಂತೆ ದೊಡ್ಡ ತಂಡವನ್ನೇ ಕಟ್ಟಿಕೊಂಡಿದ್ದಾನೆ.

ಈ ತಂಡದಲ್ಲಿ ತಮಿಳುನಾಡಿನ ವಿಧಾನಸಭೆ ಉಪ ಸಭಾಪತಿ ವಿ ಜಯರಾಮ್ ಅವರ ಮಕ್ಕಳಾದ 20 ವರ್ಷದ ಪ್ರವೀಣ್ ಹಾಗೂ ಮುಕುಂದನ್‌ ಸಹ ಇದ್ದಾರೆ ಎಂಬುದು ಉಲ್ಲೇಖಾರ್ಹ.

ತಿರುನಾವುಕ್ಕರಸು ಹುಡುಗಿಗೆ ಲೈಂಗಿಕ ಕಿರುಕುಳ ನೀಡುವಾಗ ತೆಗೆದ ಚಿತ್ರ.
ತಿರುನಾವುಕ್ಕರಸು ಹುಡುಗಿಗೆ ಲೈಂಗಿಕ ಕಿರುಕುಳ ನೀಡುವಾಗ ತೆಗೆದ ಚಿತ್ರ.
/ದಿ ನ್ಯೂಸ್ ಮಿನಿಟ್.

ಕಾಲೇಜಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ ಪರಿಚಯವಾಗುವ ಹೆಣ್ಣು ಮಕ್ಕಳ ಬಳಿ ಸಲುಗೆಯಿಂದ ಮಾತನಾಡುತ್ತಿದ್ದ ತಿರುನಾವುಕ್ಕರಸು, ಅವರನ್ನು ಪುಸಲಾಯಿಸಿ ತನ್ನ ಕಾರಿನಲ್ಲೇ ಪೊಲ್ಲಾಚಿ ಜಿಲ್ಲೆಯ ಕೂಗಳತೆ ದೂರದ ಗ್ರಾಮದಲ್ಲಿರುವ ಚಿನ್ನಪಾಳಯಂ ತನ್ನ ತೋಟದ ಮನೆಗೆ ಕರೆ ತರುತ್ತಿದ್ದ. ನಿರ್ಜನ ಪ್ರದೇಶ ಅದು.

ಮನೆಯಲ್ಲಿರುವ ಎರಡು ಬೆಡ್ ರೂಮ್‌ಗಳ ಹಾಸಿಗೆಯ ಎಡಕ್ಕೆ ಎರಡು ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿದೆ. ಒಳಗಿನಿಂದ ನೋಡಿದರೆ ಹೊರಗಿನ ಯಾವ ದೃಶ್ಯವೂ ಕಾಣಿಸದು. ಆದರೆ, ಹೊರಗಿನಿಂದ ಯಾರೇ ನೋಡಿದರೂ ಒಳಗೆ ನಡೆಯುವ ಎಲ್ಲವನ್ನೂ ಮುಕ್ತವಾಗಿ ನೋಡಬಹುದಾದಂತಹ ವಿನ್ಯಾಸದ ಕಿಟಕಿ ಅದು.

ಹೀಗೆ ತನ್ನ ಮನೆಗೆ ಕಾಲೇಜು ವಿದ್ಯಾರ್ಥಿನಿಯರನ್ನು ಕೆಲ ಮದುವೆಯಾದ ಗೃಹಿಣಿಯರನ್ನು ಕರೆಸಿಕೊಳ್ಳುತ್ತಿದ್ದ ತಿರುನಾವುಕ್ಕರಸು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಆದರೆ, ಕಿಟಕಿಯ ಆಚೆಗೆ ಅದನ್ನು ಇನ್ನೊಂದಷ್ಟು ಜನ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಪಾಪ ಆ ಹೆಣ್ಣುಮಗಳಿಗೆ ತಿಳಿದಿರುತ್ತಿರಲಿಲ್ಲ.

ಪ್ರಮುಖ ಆರೋಪಿ ತಿರುನಾವುಕ್ಕರಸು ತನ್ನ ಕೃತ್ಯಕ್ಕೆ ಬಳಸುತ್ತಿದ್ದ ನಿರ್ಜನ ತೋಟದ ಮನೆ.
ಪ್ರಮುಖ ಆರೋಪಿ ತಿರುನಾವುಕ್ಕರಸು ತನ್ನ ಕೃತ್ಯಕ್ಕೆ ಬಳಸುತ್ತಿದ್ದ ನಿರ್ಜನ ತೋಟದ ಮನೆ.

ನಂತರ ಇದೇ ವಿಡಿಯೋ ಮುಂದಿಟ್ಟು ತನ್ನ ಗೆಳೆಯರ ಮೂಲಕ ಸಂತ್ರಸ್ಥೆಯರಿಗೆ ಹಣದ ಬೇಡಿಕೆ ಇಡುತ್ತಿದ್ದ. ಹಣ ಕೊಡದಿದ್ದರೆ ವಿಡಿಯೋವನ್ನು ಯೂಟ್ಯೂಬ್‌ಗೆ ಹಾಕುವುದಾಗಿ ಬೆದರಿಸುತ್ತಿದ್ದ. ಶ್ರೀಮಂತ ಹೆಣ್ಣು ಮಕ್ಕಳು ಈತನ ಬೆದರಿಕೆಗೆ ಹೆದರಿ ಸಾಕಷ್ಟು ಹಣ ನೀಡಿ ಕೈತೊಳೆದುಕೊಂಡಿದ್ದಾರೆ.

ಹಣ ನೀಡಲಾಗದ ಬಡ ಹೆಣ್ಣು ಮಕ್ಕಳನ್ನು ಮತ್ತೆ ಮತ್ತೆ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ ಕಾಮುಕ ತಿರುನಾವುಕ್ಕರಸು ತನ್ನ ಗೆಳೆಯರ ಜೊತೆಗೂ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯಿಸಿ ಆ ಮೂಲಕ ಹಣ ಮಾಡಿಕೊಳ್ಳುತ್ತಿದ್ದ. ಆತನ ಮಾತಿಗೆ ಒಪ್ಪದಿದ್ದರೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದ. ಅಲ್ಲದೆ ಅದನ್ನೂ ಸಹ ವಿಡಿಯೋ ಮಾಡಿಕೊಳ್ಳುತ್ತಿದ್ದ ಮಾನಸಿಕ ರೋಗಿ ಆತ. (ಇದೀಗ ಸಮಾಜಿಕ ಜಾಲತಾಣಗಳಲ್ಲಿ ಬಯಲಾಗಿರುವುದು ಅಂತಹದ್ದೇ ಒಂದು ವಿಡಿಯೋ)

ಹೆಣ್ಣು ಮಕ್ಕಳನ್ನು ಹೆದರಿಸಿ ಬೆದರಿಸಿ ಹಣ ಪೀಕುತ್ತಿದ್ದ ತಿರುನಾವುಕ್ಕರಸು ಕಳೆದ ವರ್ಷ ಅದೇ ಹಣದಲ್ಲಿ ತನ್ನದೇ ಸ್ವಂತ ಫೈನಾನ್ಸ್ ಕಂಪನಿ ಆರಂಭಿಸಿದ್ದ. ಅದಕ್ಕೆ ಶ್ರೀ ವೆಂಕಟ ಬಾಲಾಜಿ ಫೈನಾನ್ಸ್ ಎಂದು ಹೆಸರಿಟ್ಟುಕೊಂಡಿದ್ದ. ಅಷ್ಟರಲ್ಲಾಗಲೆ ತಮಿಳುನಾಡಿನ ಉಪ ಸಭಾಪತಿ ವಿ. ಜಯರಾಮ್ ಅವರ ಮಕ್ಕಳಾದ 20 ವರ್ಷದ ಪ್ರವೀಣ್ ಹಾಗೂ ಮುಕುಂದನ್‌ ಸ್ನೇಹ ಗಳಿಸಿದ್ದ ಈತ ಆಡಳಿತರೂಢ ಎಐಎಡಿಎಂಕೆ ಪಕ್ಷದ ಜೊತೆಗೂ ಗುರುತಿಸಿಕೊಂಡಿದ್ದ.

ಈ ಗುಂಪು ಪೊಲ್ಲಾಚಿ ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ಇಂತಹ ಅನೇಕ ಹೇಯ ಕೃತ್ಯವನ್ನು ಎಸಗಿದೆ. ಮರ್ಯಾದೆಗೆ ಹೆದರಿ ಈವರೆಗೆ ಯಾವ ಹೆಣ್ಣು ಮಕ್ಕಳು ಸಹ ಈತನ ವಿರುದ್ಧ ಪ್ರಕರಣ ದಾಖಲಿಸಿರಲಿಲ್ಲ. ಆದರೆ, ಕಾಮುಕರು ಈಗ ಸಿಕ್ಕಿಬಿದ್ದಿದ್ದಾರೆ. ಸುಮಾರು 200 ರಿಂದ 250 ಹೆಣ್ಣು ಮಕ್ಕಳು ಈ ಗುಂಪಿನಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಪೊಲ್ಲಾಚಿಗಿಂತ ಇವರ ಹೇಯ ಕಸುಬಿಗೆ ಆಹಾರವಾದವರ ಪೈಕಿ ತಿರುಪುರ್, ಕೋಯಮತ್ತೂರ್, ತಿರುಚ್ಚಿ, ಕರೂರ್, ಈರೋಡ್ ಹಾಗೂ ಕೇರಳದ ಹೆಣ್ಣು ಮಕ್ಕಳೇ ಅಧಿಕ ಎನ್ನಲಾಗುತ್ತಿದೆ.

ಕಳೆದ 7 ವರ್ಷದಿಂದ 250ಕ್ಕೂ ಹೆಚ್ಚು ಹೆಣ್ಣುಮಕ್ಕಳ ಬದುಕಲ್ಲಿ ಆಟವಾಡಿದರೂ ಸಿಕ್ಕಿಹಾಕಿಕೊಳ್ಳದ ಈ ದುರುಳ ಗುಂಪು ಇದೀಗ ಸಿಕ್ಕಿಬಿದ್ದಿದೆ. ಆದರೆ ಇವರು ಸಿಕ್ಕಿಬಿದ್ದ ಕಥೆ ಮಾತ್ರ ಯಾವ ಸಿನಿಮಾ ಕಥೆಗೂ ಕಡಿಮೆ ಏನಲ್ಲ.

ಪ್ರಕರಣ ಬಯಲಾದಾಗ ಬೆಚ್ಚಿಬಿದ್ದಿತ್ತು ತಮಿಳುನಾಡು

ಕಳೆದ 7 ವರ್ಷದಿಂದ ಈ ತಂಡ ಇಂತಹ ಹೇಯ ದಂಧೆಯಲ್ಲಿ ತೊಡಗಿದ್ದರೂ ಎಲ್ಲೂ ಸಿಕ್ಕಿಬಿದ್ದಿರಲಿಲ್ಲ. ಆದರೆ, ಈ ಕಾಮುಕರು ಸಿಕ್ಕಿಬೀಳಲು ಒಂದು ಹುಡುಗಿ ಕಾರಣವಾಗಿದ್ದಳು. ಆನಂತರವೇ ಈ ಪ್ರಕರಣ ಬೆಳಕಿಗೆ ಬಂದದ್ದು ಹಾಗೂ ಇಡೀ ತಮಿಳುನಾಡು ಬೆಚ್ಚಿ ಬಿದ್ದಿತ್ತು.

ತಿರುನಾವುಕ್ಕರಸು ಗೆಳೆಯ ಶಬರಿ ರಾಜನ್ ಫೇಸ್‌ಬುಕ್‌ನಲ್ಲಿ ಒಂದು ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ ಆಕೆಯನ್ನು ನೋಡಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸಿದ್ದಾನೆ. ಆತನ ಇಚ್ಚೆಗೆ ಒಪ್ಪಿದ ಯುವತಿ ಪೊಲ್ಲಾಚಿ ಬಸ್ ನಿಲ್ದಾಣದ ಬಳಿ ಬರುವುದಾಗಿ ಹೇಳಿದ್ದಾಳೆ.

ಬಸ್ ನಿಲ್ದಾಣಕ್ಕೆ ಒಬ್ಬನೆ ಹೋಗಿ ಯುವತಿಯನ್ನು ಕಾರ್‌ ಗೆ ಹತ್ತಿಸಿಕೊಂಡ ಶಬರಿ ರಾಜನ್ ಮಾರ್ಗ ಮಧ್ಯೆಯೇ ತನ್ನ ಗೆಳೆಯರಾದ ತಿರುನಾವುಕ್ಕರಸು, ಸತೀಶ್ ಹಾಗೂ ವಸಂತಕುಮಾರ್‌ರನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಇದರಿಂದ ಸಂಶಯಕ್ಕೊಳಗಾದ ಯುವತಿ ಗಾಡಿ ನಿಲ್ಲಿಸುವಂತೆ ಕೂಗಾಡಿದ್ದಾಳೆ. ಚಲಿಸುತ್ತಿದ್ದ ಕಾರಿನಲ್ಲಿಯೇ ಯುವತಿಯ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಹುಡುಗಿ ಚೀರಾಟ ಜೋರಾಗುತ್ತಿದ್ದಂತೆ ಕಾರನ್ನು ನಿಲ್ಲಿಸಿ ಆಕೆಯ ಕತ್ತಿನಲ್ಲಿರುವ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಕಳುಹಿಸಿಕೊಟ್ಟಿದ್ದಾರೆ. ಮನೆಗೆ ಬಂದ ಹುಡುಗಿ ಯಾರಿಗೂ ಏನನ್ನು ಹೇಳದೆ ಸುಮ್ಮನಾಗಿದ್ದಾಳೆ.

ದಿನಕಳೆದಂತೆ ತಿರುನಾವುಕ್ಕರಸು ಅಂಡ್ ಟೀಮ್ ಆಕೆಗೆ ಕರೆ ಮಾಡಿ ಪ್ರತಿದಿನ ಹಣ ಕೇಳಿ ಪೀಡಿಸಿದ್ದಾರೆ. ಕೊನೆಗೆ ಫೆಬ್ರವರಿ.24ರಂದು ಆಕೆ ನಡೆದ ಎಲ್ಲಾ ಘಟನೆಯನ್ನೂ ತನ್ನ ಅಣ್ಣ ಮಣಿಗಂಡನ್ ಬಳಿ ಹೇಳಿಕೊಂಡಿದ್ದಾಳೆ. ವಿಷಯ ಕೇಳಿ ಬಿಚ್ಚಿಬಿದ್ದ ಮಣಿಗಂಡನ್‌ ತನ್ನ ಗೆಳೆಯರ ಜೊತೆಗೆ ಒಟ್ಟಾಗಿ ತಿರುನಾವುಕ್ಕರಸು ಹಾಗೂ ಆತನ ಗೆಳೆಯ ಸಬರಿ ರಾಜನ್ ನನ್ನು ಹುಡುಕಿ ಹಿಡಿದಿದ್ದಾರೆ. ಕಾಮುಕರನ್ನು ಮನಸ್ಸೋ ಇಚ್ಚೆ ಥಳಿಸಿದ ಮಣಿಗಂಡನ್ ಹಾಗೂ ಗೆಳೆಯರು ತನ್ನ ತಂಗಿಯ ವಿಡಿಯೋವನ್ನು ಡಿಲೀಟ್ ಮಾಡುವ ಸಲುವಾಗಿ ಎಲ್ಲರ ಮೊಬೈಲ್‌ ಕಸಿದುಕೊಂಡಿದ್ದಾರೆ.

ಅವರ ಮೊಬೈಲ್ ಗ್ಯಾಲರಿಯನ್ನು ಚೆಕ್ ಮಾಡುತ್ತಿದ್ದಂತೆ ಅಲ್ಲಿದ್ದವರೆಲ್ಲ ಒಂದು ಕ್ಷಣ ಅವಕ್ಕಾಗಿದ್ದರು. ಅದರಲ್ಲಿ ತಿರುನಾವುಕ್ಕರಸು ಅಂಡ್ ಟೀಮ್ ಸುಮಾರು 250ಕ್ಕೂ ಹೆಚ್ಚು ಹೆಣ್ಣುಮಕ್ಕಳ ಜೊತೆಗೆ ನಡೆಸಿದ್ದ ಕಾಮಕೇಳಿ ವಿಡಿಯೋ ದೃಶ್ಯಗಳು ಅದರಲ್ಲಿದ್ದವು. ಕೊನೆಗೆ ಆ ಯುವಕರ ತಂಡ ಮೊಬೈಲ್ ಸಾಕ್ಷಿ ಸಮೇತ ಎಲ್ಲಾ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ದಿನ ಈ ನಾಲ್ವರ ಮೇಲೆ ಕಲಂ. 354A (ಲೈಂಗಿಕ ಕಿರುಕುಳ), 354B (ಮಹಿಳೆಯರ ವಿರುದ್ಧ ಅಪರಾಧಕ್ಕೆ ಅಂತರ್ಜಾಲದ ದುರ್ಬಳಕೆ), 394 (ದರೋಡೆ), 66E (ಗೌಪ್ಯತೆ ಉಲ್ಲಂಘನೆ) ಸೇರಿದಂತೆ ವಿವಿಧ ಕಲಂ ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಪ್ರಕರಣ ದಾಖಲಾದ ಮಾರನೇಯ ದಿನ ಉಳಿದ ಆರೋಪಿಗಳಾದ ಜಯಕುಮಾರ್, ಬಾರ್ ನಾಗರಾಜ್ ಹಾಗೂ ಬೈಕ್ ಡೀಲ್ ಬಾಬು ಅವರನ್ನು ಬಂಧಿಸಲಾಗಿದೆ,

ಕಾಮುಕರ ಮೇಲೇನೋ ಪ್ರಕರಣ ದಾಖಲಾಗಿದೆ. ಆದರೆ, ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ನಡೆಸುತ್ತಿರುವ ವಿಚಾರಣೆಯ ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಎಂಥವರಿಗೂ ಅಸಹ್ಯ ಮೂಡುವಂತಿದೆ.

ಪೊಲೀಸರ ನೌಟಂಕಿ ನಾಟಕ

ಫೆ.24ರ ರಾತ್ರಿ ಕಾಮುಕರನ್ನು ಹಿಗ್ಗಾಮುಗ್ಗಾ ಥಳಿಸಿದ ಯುವತಿಯ ಅಣ್ಣ ಮಣಿಗಂಡನ್ ಹಾಗೂ ಗೆಳೆಯರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ದಿನ ರಾತ್ರಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಾ ವಿಡಿಯೋಗಳು ಇರುವ ಅವರ ಮೊಬೈಗಳನ್ನು ವಶಕ್ಕೆ ಪಡೆದಿದ್ದಾರೆ.

ಆದರೆ, ಪ್ರಕರಣ ದಾಖಲಾದ ಮಾರನೇಯ ದಿನವೆ ಪೊಲೀಸ್ ಕಸ್ಟಡಿಯಲ್ಲಿ ಆಸ್ಪತ್ರೆಯಲ್ಲಿದ್ದ ಆರೋಪಿ ತಿರುನಾವುಕ್ಕರಸು ತಪ್ಪಿಸಿಕೊಂಡಿದ್ದಾನೆ. ಅದೇ ದಿನ ಒಂದು ಹುಡುಗಿಯ ಮೇಲೆ ತಿರುನಾವುಕ್ಕರಸು ಹಾಗೂ 6 ಜನ ಗೆಳೆಯರು ಒತ್ತಾಯಪೂರ್ವಕವಾಗಿ ಹಲ್ಲೆ ನಡೆಸಿ ಅತ್ಯಾಚಾರ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ದೊಡ್ಡ ಸುದ್ದಿಯಾಯಿತು.

ಇಂತಹ ಪ್ರರಕರಣದಲ್ಲಿ ಮಹಿಳೆಯರ ಹೆಸರು ಹಾಗೂ ಗುರುತಿನ ಗೌಪ್ಯತೆಯನ್ನು ಕಾಪಾಡಬೇಕಿರುವುದು ಪೊಲೀಸರ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಮೊಬೈಲ್‌ಗಳು ಪೊಲೀಸರ ವಶದಲ್ಲೇ ಇದ್ದರು, ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಪ್ರಕರಣವನ್ನು ಸಂಭಾಳಿಸುವಲ್ಲಿ ಪೊಲೀಸರು ಮರೆತ ಸೂಕ್ಷ್ಮತೆಯನ್ನು ಬಿಚ್ಚಿಡುತ್ತದೆ. ತಮಿಳುನಾಡು ಪೊಲೀಸ್ ಇಲಾಖೆ ಈ ಕುರಿತ ಸ್ಪಷ್ಟಣೆಯನ್ನು ನೀಡಿಲ್ಲ.

ಅಲ್ಲದೆ ಪ್ರಕರಣ ದಾಖಲಿಸಿದ ಮಣಿಗಂಡನ್‌ ಮೇಲೆ ಹಲ್ಲೆಯಾಯಿತು. ಈಗ ಆತ ನಾಪತ್ತೆಯಾಗಿದ್ದು ಈವರೆಗೆ ಎಲ್ಲಿದ್ದಾನೆ ಎಂಬ ವಿವರ ಸ್ವತಃ ಅವರ ತಂದೆತಾಯಿಗೂ ಗೊತ್ತಿಲ್ಲ.

ಪೊಲೀಸರ ವಶದಿಂದ ತಪ್ಪಿಸಿಕೊಂಡ ಆರೋಪಿ ತಿರುನಾವುಕ್ಕರಸು “ತನ್ನದೇನು ತಪ್ಪಿಲ್ಲ. ಈ ಪ್ರಕರಣದ ಹಿಂದೆ ಪ್ರಮುಖ ಪಕ್ಷಗಳ ನಾಯಕರಿದ್ದಾರೆ. ಅವರ ಹೆಸರು ಹೇಳಿದರೆ ಪೊಲೀಸರು ನನ್ನನ್ನು ಎನ್‌ಕೌಂಟರ್ ಮಾಡುತ್ತಾರೆ. ಆದರೂ, ನಾನು ಶೀಘ್ರದಲ್ಲಿ ಅವರ ಹೆಸರನ್ನು ಬಹಿರಂಗಪಡಿಸಲಿದ್ದೇನೆ,” ಎಂದು ಆತ ಮಾತನಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ತಿರುನಾವುಕ್ಕರಸುನನ್ನು ಹಿಡಿಯಲು ಪೊಲೀಸರು ವಿಶೇಷ ತಂಡವನ್ನೇ ರಚಿಸಿದ್ದರು. ಆದರೆ, ಆತನ್ನು ಹಿಡಿಯುವುದಿರಲಿ, ಕನಿಷ್ಟ ಆತ ಎಲ್ಲಿದ್ದಾನೆ ಎಂಬ ಸುಳಿವು ಸಹ ಪೊಲೀಸರಿಗೆ ಸಿಕ್ಕಿರಲಿಲ್ಲ. ಆದರೆ, ಯೂಟ್ಯೂಬ್‌ ನಲ್ಲಿ ಆತ ಮಾತನಾಡಿದ ವಿಡಿಯೋ ಪ್ರಸಾರವಾಗಿ ಎಸ್‌ಪಿ. ಪಾಂಡಿಯರಾಜನ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ಮಾರನೇಯ ದಿನ ಬೆಳಗ್ಗೆ ಆತ ಅರೆಸ್ಟ್ ಆಗಿದ್ದಾನೆ.

ಈಗ ಆರೋಪಿ ತಿರುನಾವುಕ್ಕರಸು ಪೊಲೀಸ್ ಕಸ್ಟಡಿಯಿಂದ ಹೇಗೆ ತಪ್ಪಿಸಿಕೊಂಡ ಹಾಗೂ ಆತನನ್ನು ಎಲ್ಲಿಂದ ಬಂಧಿಸಲಾಯಿತು ಎಂಬ ವಿಚಾರ ಈಗ ತಮಿಳುನಾಡಿನಲ್ಲಿ ಬಹು ಚರ್ಚಿತ.

ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಎಸ್‌ಪಿ ಪಾಂಡಿಯರಾಜನ್ ಹಾಗೂ ಡಿವೈಎಸ್‌ಪಿ ಜಯರಾಮ್ ಬಗೆಗೆ ಒಳ್ಳೆಯ ಅಭಿಪ್ರಾಯವಿಲ್ಲ. ಪಾಂಡಿಯರಾನ್ ಕಳೆದ ವರ್ಷ ತಿರುಪ್ಪೂರ್‌ ಜಿಲ್ಲೆಯಲ್ಲಿ ಎಸ್‌ಪಿ ಆಗಿದ್ದಾಗ ಪ್ರತಿಭಟನಾ ನಿರತ ಮಹಿಳೆಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದರು. ಅವರು ಮಹಿಳೆಗೆ ಕಪಾಳ ಮೋಕ್ಷ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನು ಡಿವೈಎಸ್‌ಪಿ ಪಾಂಡಿಯರಾಜನ್ ಕಥೆ ಇದಕ್ಕಿಂತ ಭಿನ್ನ. ಕಳೆದ ವರ್ಷ ಕೇಂದ್ರ ಸರಕಾರದ ನೀಟ್ (ಎನ್‌.ಇ.ಇ.ಟಿ) ಪರೀಕ್ಷೆಯನ್ನು ವಿರೋಧಿಸಿ ಕೋಯಮತ್ತೂರಿನಲ್ಲಿ ವಿದ್ಯಾರ್ಥಿನಿಯರು ಪ್ರತಿಭಟಿಸುತ್ತಿದ್ದಾಗ ಪೊಲೀಸರು ಹಾಗೂ ವಿದ್ಯಾರ್ಥಿನಿಯರ ನಡುವೆ ತಳ್ಳಾಟ ಶುರುವಾಗಿತ್ತು. ಈ ಸಂದರ್ಭದಲ್ಲಿ ಗಲಭೆಯ ಸನ್ನಿವೇಶವನ್ನು ಬಳಸಿಕೊಂಡಿದ್ದ ಡಿವೈಎಸ್‌ಪಿ ಜಯರಾಮ್ ಮಹಿಳಾ ಎಸ್‌ಐ ಮೈಮೇಲೆ ಬಿದ್ದು ಅನುಚಿತವಾಗಿ ವರ್ತಿಸಿದ್ದರು.

ಈ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿತ್ತು. ಪರಿಣಾಮ ಇವರನ್ನು ಪೊಲ್ಲಾಚಿಗೆ ಎತ್ತಂಗಡಿ ಮಾಡಲಾಗಿತ್ತು.

ಇಂತಹ ಹಿನ್ನೆಲೆ ಇರುವ ಇಬ್ಬರು ಪೊಲೀಸ್ ಅಧಿಕಾರಿಗಳು ಇದೀಗ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಪ್ರಕರಣದ ಆರೋಪಿಗಳೆಲ್ಲರೂ ತಮಿಳುನಾಡಿನ ಹಾಲಿ ಉಪ ಸಭಾಪತಿ ವಿ.ಜಯರಾಂ ಅವರ ಮಕ್ಕಳಾದ ಪ್ರವೀಣ್ ಹಾಗೂ ಮುಕುಂದನ್ ಆಪ್ತ ಗೆಳೆಯರು. ಆರೋಪಿಗಳು ಬಂಧನವಾದ ದಿನದಿಂದ ಇಬ್ಬರೂ ಫೇಸ್‌ಬುಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಆರೋಪಿಗಳ ಎಲ್ಲಾ ಕಾರ್ಯದಲ್ಲೂ ಉಪ ಸಭಾಪತಿ ಅವರ ಮಕ್ಕಳ ಕೈವಾಡವೂ ಇರುವ ಭಾರೀ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಪೊಲೀಸರು ಈ ಕುರಿತು ವಿಚಾರಣೆ ನಡೆಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಜೋರಾಗುತ್ತಿದ್ದಂತೆ ಎಸ್‌ಪಿ ಪಾಂಡಿಯರಾಜನ್ ನೀಡಿರುವ ಆ ಒಂದು ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಯಾವುದೇ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು 100 ದಿನಗಳ ಒಳಗಾಗಿ ಮುಗಿಸಿ ನಂತರ ಕೋರ್ಟ್‌ಗೆ ಚಾರ್ಚ್ ಶೀಟ್ (ಪ್ರಕರಣದ ವರದಿ) ಸಲ್ಲಿಸುವುದು ವಾಡಿಕೆ. ಆದರೆ ಈ ಪ್ರಕಣದದಲ್ಲಿ ಹಾಗಾಗಲಿಲ್ಲ. ಪ್ರಮುಖ ಆರೋಪಿ ಅರೆಸ್ಟ್ ಆಗುತ್ತಿದ್ದಂತೆ ಪ್ರೆಸ್‌ಮೀಟ್ ಮಾಡಿದ ಎಸ್‌ಪಿ ಪಾಂಡಿಯರಾಜನ್ ತರಾತುರಿಯಲ್ಲಿ ವಿಚಾರಣೆಗೂ ಮುನ್ನವೇ ಈ ಪ್ರಕರಣಕ್ಕೂ ಯಾವುದೇ ರಾಜಕೀಯ ಮುಖಂಡರಿಗೂ ಸಂಬಂಧವಿಲ್ಲ ಎಂದು ತೀರ್ಪು ನೀಡಿಬಿಟ್ಟರು.

ಇವರ ಇಂತಹ ಹೇಳಿಕೆಯ ಹಿಂದೆ ತಮಿಳುನಾಡು ವಿಧಾನಸಭೆ ಉಪ ಸಭಾಪತಿ ಕೈವಾಡವಿದೆ ಎಂಬುದು ಇಂದು ಗುಟ್ಟಾಗೇನು ಉಳಿದಿಲ್ಲ. ಇದಲ್ಲದೆ ಉಪಸಭಾ ಪತಿಯ ಮಕ್ಕಳನ್ನು ಈ ಪ್ರಕರಣದಿಂದ ಕಾಪಾಡಲು ಸ್ವತಃ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವೂ ತಮಿಳುನಾಡಿನಲ್ಲಿ ಜೋರಾಗಿ ಕೇಳಿಬರುತ್ತಿದೆ.

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಬಾರ್ ನಾಗರಾಜು ವೃತ್ತಿಯಲ್ಲಿ ವಕೀಲನಾಗಿದ್ದು ಈ ಪ್ರಕರಣದಲ್ಲಿ ತಮಿಳುನಾಡಿನ ಯಾವ ವಕೀಲರೂ ಹಾಜರಾಗಬಾರದು ಎಂದು ತಮಿಳುನಾಡು ಬಾರ್ ಕೌನ್ಸಿಲ್ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ.

ಆದರೆ, ಇದೇ ನಾಗರಾಜುವಿಗೆ ಹೇಗಾದರು ಜಾಮೀನು ಪಡೆಯಲೇಬೇಕು ಎಂದು ಸ್ವತಃ ಉಪ ಸಭಾಪತಿ ಜಯರಾಮ್ ನಿಶ್ಚಯಿಸಿದ್ದು, 50 ಲಕ್ಷ ಹಣ ಕೊಟ್ಟು ದೆಹಲಿಯಿಂದ ವಕೀಲರನ್ನು ಕರೆಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.

ಕಳೆದ ಮೂರು ವಾರಗಳಿಂದ ಮಹಿಳೆಯರ ಮೇಲಿನ ಲೌಂಗಿಕ ದೌರ್ಜನ್ಯ ಹಾಗೂ ದರೋಡೆ ಪ್ರಕರಣ ಎಂದು ಬಿಂಬಿಸಲಾಗಿದ್ದ ಈ ಪ್ರಕರಣ ಇದೀಗ ರಾಜಕೀಯ ಬಣ್ಣವನ್ನೂ ಪಡೆದಿದೆ. ಪ್ರಕರಣದ ಪ್ರಮುಖ ಆರೋಪಿ ತಿರುನಾವುಕ್ಕರಸು ಆಡಳಿತ ಪಕ್ಷ ಎಐಎಡಿಎಂಕೆ ಪಕ್ಷದ ಸದಸ್ಯ ಹಾಗೂ ಉಪ ಸಭಾಪತಿ ವಿ. ಜಯರಾಮ್ ಮಕ್ಕಳ ಖಾಸ ಗೆಳೆಯ. ಇನ್ನೂ ಮತ್ತೊಬ್ಬ ಪ್ರಮುಖ ಆರೋಪಿ ಬಾರ್ ನಾಗರಾಜ್ ಜಾಮೀನಿಗೆ ಸ್ವತಃ ಉಪ ಸಭಾಪತಿಯೇ ಇಷ್ಟೊಂದು ತಲೆ ಕೆಡಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಎಲ್ಲೇ ಹೋದರು ಮಾಧ್ಯಮದವರು ಅವರಿಗೆ ಈ ಕುರಿತ ಪ್ರಶ್ನೆಗಳನ್ನೇ ಮುಂದಿಡುತ್ತಿದ್ದಾರೆ.

ಈ ನಡುವೆ ಪ್ರಕರಣದ ವಿರುದ್ಧ ತಮಿಳುನಾಡಿನಲ್ಲಿ ದೊಡ್ಡ ಜನಾಕ್ರೋಶವೇ ಭುಗಿಲೆದ್ದಿದೆ. ನಟ ರಾಜಕಾರಣಿ ಕಮಲಹಾಸನ್ ಸೇರಿದಂತೆ ಎಲ್ಲಾ ಸಿನಿಮಾ ನಟರು ಈ ಪ್ರಕರಣವನ್ನು ಖಂಡಿಸಿದ್ದಾರೆ. ತಪ್ಪಿತಸ್ಥರಿಗೆ ಶೀಘ್ರದಲ್ಲಿ ಉಗ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಆದರೆ, ರಾಜಕೀಯ ಒತ್ತಡಕ್ಕೆ ಮಣಿದಿರುವ ತಮಿಳುನಾಡು ಪೊಲೀಸರು ಕರ್ತವ್ಯ ಮರೆತಂತೆ ಆಡುತ್ತಿದ್ದಾರೆ.