samachara
www.samachara.com
ಶಾಂತಿ ಪ್ರಿಯರ ದೇಶದಲ್ಲಿ ದ್ವೇಷದ  ಗಾಳಿ; 49 ಜನರನ್ನು ಕೊಂದವನು ಟ್ರಂಪ್‌ ಅಭಿಮಾನಿ!
COVER STORY

ಶಾಂತಿ ಪ್ರಿಯರ ದೇಶದಲ್ಲಿ ದ್ವೇಷದ ಗಾಳಿ; 49 ಜನರನ್ನು ಕೊಂದವನು ಟ್ರಂಪ್‌ ಅಭಿಮಾನಿ!

“ಈ ದಾಳಿಗೆ ನೀವು ನಮ್ಮನ್ನು ಆಯ್ಕೆ ಮಾಡಿಕೊಂಡಿರಬಹುದು. ಆದರೆ ನಾವು ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದೇವೆ ಮತ್ತು ಖಂಡಿಸುತ್ತಿದ್ದೇವೆ,” - ಜೆಸಿಂದಾ ಆರ್ಡರ್ನ್‌.

ಪೆಸಿಫಿಕ್‌ ಮಹಾಸಾಗರದ ನೈರುತ್ಯದಲ್ಲಿರುವ ದೇಶವೇ ನ್ಯೂಜಿಲ್ಯಾಂಡ್‌. ಪ್ರಶಾಂತ ಸಾಗರದ ನಡುವೆ ಇರುವುದಕ್ಕೋ ಏನೋ ಹಸಿರನ್ನೇ ಹಾಸು ಹೊದ್ದು ಮಲಗಿರುವ ಈ ದೇಶದ ಜನರೂ ಶಾಂತಿ ಪ್ರಿಯರು.

2017ರ ಅಂದಾಜಿನ ಪ್ರಕಾರ ಈ ದೇಶದ ಒಟ್ಟು ಜನಸಂಖ್ಯೆ ಸುಮಾರು 48 ಲಕ್ಷ. ಶುಕ್ರವಾರದ ದಾಳಿಗೆ ಗುರಿಯಾದ ಮುಸ್ಲಿಂ ಸಮುದಾಯದ ಸಂಖ್ಯೆ 50 ಸಾವಿರ. ಇವರಲ್ಲಿ ಹೆಚ್ಚಿನವರು ಹೊರ ದೇಶಗಳಿಂದ ನ್ಯೂಜಿಲ್ಯಾಂಡ್‌ಗೆ ವಲಸೆ ಬಂದವರು. ಎಲ್ಲಾ ಒಟ್ಟು ಗೂಡಿಸಿದರೂ ಅತೀ ಕಡಿಮೆ ಜನ ಸಾಂದ್ರತೆ ಇರುವ ದೇಶವಿದು. ಇಲ್ಲಿ ಒಂದು ಚದರ ಕಿಲೋಮೀಟರ್‌ನಲ್ಲಿ ಸಿಗುವುದು ಕೇವಲ 18 ಜನ ಮಾತ್ರ.

ಇಲ್ಲಿ ಮೂವರಲ್ಲಿ ಒಬ್ಬರ ಬಳಿಯಲ್ಲಿ ಬಂದೂಕು ಪರವಾನಗಿ ಇದೆ. ಸರಳವಾಗಿ ಹೇಳಬೇಕೆಂದರೆ ಮನೆಗೊಂದರಂತೆ ಶಸ್ತ್ರಾಸ್ತ್ರಗಳಿವೆ. ಇಲ್ಲಿನ ಸರಕಾರ ಸೆಮಿ ಅಟೋಮ್ಯಾಟಿಕ್‌ ಗನ್‌ಗಳಿಗೂ ಲೈಸನ್ಸ್‌ ನೀಡುತ್ತದೆ. ಆದರೆ ಅದನ್ನು ರಕ್ಷಣೆಗಾಗಿ ಇಟ್ಟುಕೊಂಡಿದ್ದಾರೆಯೇ ವಿನಃ ಇಲ್ಲಿನ ಜನ ಬಳಸಿದ್ದು ತೀರಾ ತೀರಾ ಅಪರೂಪ.

ಇಷ್ಟು ದೊಡ್ಡ ಮಟ್ಟಕ್ಕೆ ಶಸ್ತ್ರಾಸ್ತ್ರಗಳಿದ್ದೂ ಜಗತ್ತಿನಲ್ಲೇ ಅತ್ಯಂತ ಕಡಿಮೆ ಶೂಟೌಟ್‌ಗಳು ನಡೆಯುವ ದೇಶವಿದು.

1990ರಲ್ಲಿ ಇಲ್ಲಿ ಅಕ್ಕಪಕ್ಕದ ಮನೆಯವರ ಜತೆ ಜಗಳ ಕಾದು ವ್ಯಕ್ತಿಯೊಬ್ಬ 13 ಜನರನ್ನು ಕೊಂದು ಹಾಕಿದ್ದ. ಅದೇ ಕೊನೆ ಅಲ್ಲಿಂದ ನಂತರ ನ್ಯೂಜಿಲ್ಯಾಂಡ್‌ನಲ್ಲಿ ಇಂತಹ ಘಟನೆಗಳು ನಡೆದೇ ಇರಲಿಲ್ಲ. ಎಷ್ಟರ ಮಟ್ಟಿಗೆ ಇಲ್ಲಿನ ಜನರು ಅಪರಾಧಗಳಿಂದ ದೂರ ಉಳಿದಿದ್ದಾರೆ ಎಂದರೆ ಪೊಲೀಸರಿಗೂ ತಮ್ಮ ಜತೆಗೆ ಬಂದೂಕನ್ನು ಒಯ್ಯುವ ಪರಿಪಾಠಗಳಿಲ್ಲ.

ಇಂತಹ ದೇಶದಲ್ಲಿ ಶುಕ್ರವಾರ ನಡೆದ ಬಲಪಂಥೀಯ ಮನಸ್ಥಿತಿಯ ಭೀಕರ ಭಯೋತ್ಪಾದಕ ಕೃತ್ಯ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ನ್ಯೂಜಿಲ್ಯಾಂಡ್‌ ಇತಿಹಾಸದಲ್ಲಿ ನಡೆದ ಹಿಂಸಾತ್ಮಕ ದಾಳಿ ಇದಾಗಿದ್ದು, ಸುರಕ್ಷತೆಗೆ ಹೆಸರಾದ ದೇಶದಲ್ಲಿ ಮೊದಲ ಬಾರಿಗೆ ಆತಂಕ ಹುಟ್ಟುಹಾಕಿದೆ.

ದಾಳಿ ಬಿಟ್ಟು ಹೋದ ಕುರುಹು: 
ದಾಳಿ ಬಿಟ್ಟು ಹೋದ ಕುರುಹು: 
/ಸಿಎನ್‌ಎನ್‌

ಇದೂ ಭಯೋತ್ಪಾದನಾ ದಾಳಿ:

ಶುಕ್ರವಾರ ಸಂಜೆಯಾಗುತ್ತಿದ್ದಂತೆ ನ್ಯೂಜಿಲ್ಯಾಂಡ್‌ನ ಕಡಲತಡಿಯ ನಗರ ಕ್ರೈಸ್ಟ್‌ಚರ್ಚ್‌ನ ಮಸೀದಿಗಳಲ್ಲಿ ವಾರದ ಪ್ರಾರ್ಥನೆಗೆಂದು ಮುಸ್ಲಿಂ ಸಮುದಾಯದವರು ನೆರೆದಿದ್ದರು. ಅದರಲ್ಲಿ ಒಂದು ದಾಳಿ ನಡೆದ ಡೀನ್ಸ್‌ ಅವೆನ್ಯೂನಲ್ಲಿರುವ ಅಲ್‌ ನೂರ್‌ ಮಸೀದಿ. ಇನಾಲ್ಕು ಬಂದೂಕುಗಳ ಸಮೇತ ಮಸೀದಿ ಒಳಹೊಕ್ಕ ಉಗ್ರ ಬ್ರೆಂಟನ್‌ ಟರ್ರಂಟ್‌ 41 ಜನರನ್ನು ಬಲಿ ಪಡೆದಿದ್ದಾನೆ.

ಇದಾಗಿ ಸ್ವಲ್ಪ ಹೊತ್ತಿನಲ್ಲಿ 4 ಲಕ್ಷ ಚಿಲ್ಲರೆ ಜನಸಂಖ್ಯೆ ಹೊಂದಿರುವ ಕ್ರೈಸ್ಟ್‌ಚರ್ಚ್‌ನ ಲಿನ್‌ವುಡ್‌ ಅವೆನ್ಯೂನಲ್ಲಿರುವ ಇನ್ನೊಂದು ಮಸೀದಿಯಲ್ಲಿಯೂ ದಾಳಿ ನಡೆದಿದೆ. ಆದರೆ ಅಲ್ಲಿ ದಾಳಿ ನಡೆಸಿದ್ದು ಯಾರು ಎಂಬುದು ತಿಳಿದು ಬಂದಿಲ್ಲ.

ಈ ಮಸೀದಿಯಲ್ಲೂ 8 ಜನರು ಸಾವನ್ನಪ್ಪುವುದರೊಂದಿಗೆ ಶುಕ್ರವಾರದ ಭಯೋತ್ಪಾದಕ ಕೃತ್ಯದಲ್ಲಿ ಒಟ್ಟು 49 ಜನರು ಅಸುನೀಗಿದ್ದಾರೆ. ಇನ್ನು ಆಸ್ಪತ್ರೆಗಳಲ್ಲಿ 39 ಜನರು ಚಿಕಿತ್ಸೆ ಪಡೆಯುತ್ತಿದ್ದು 11 ಜನರ ಪರಿಸ್ಥಿತಿ ಗಂಭೀರವಾಗಿದೆ.

ಹೆಚ್ಚಿನ ಸಂತ್ರಸ್ತರು ಸೌದಿ ಅರೇಬಿಯಾ, ಟರ್ಕಿ, ಜೋರ್ಡನ್‌, ಬಾಂಗ್ಲಾದೇಶ, ಇಂಡೋನೇಷ್ಯಾ ಮತ್ತು ಮಲೇಷ್ಯಾದಂತ ಮುಸ್ಲಿಂ ಬಾಹುಳ್ಯದ ದೇಶಗಳಿಗೆ ಸೇರಿದವರಾಗಿದ್ದಾರೆ. ದಾಳಿ ಬೆನ್ನಿಗೆ ಭಾರತದ 6 ಜನರು ನಾಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಜನಾಂಗಿಯ ದ್ವೇಷ:

ದಾಳಿಯ ಬೆನ್ನಿಗೆ ಇದರ ಸೂತ್ರದಾರ 28 ವರ್ಷದ ಆಸ್ಟ್ರೇಲಿಯಾದ ಪ್ರಜೆ ಬ್ರೆಂಟನ್‌ ಟರ್ರಂಟ್‌ ಎಂಬಾತನನ್ನು ಬಂಧಿಸಲಾಗಿದೆ.ಶನಿವಾರ ಆರೋಪಿಯನ್ನು ಕ್ರೈಸ್ಟ್‌ಚರ್ಚ್‌ನ ಹೈಕೋರ್ಟ್‌ಗೆ ಹಾಜರು ಪಡಿಸಲಾಗಿದ್ದು, ಏಪ್ರಿಲ್‌ 5ರವರೆಗೆ ಪೊಲೀಸರ ವಶಕ್ಕೆ ನೀಡಿ ಕೋರ್ಟ್‌ ಆದೇಶ ನೀಡಿದೆ.

ಚಪ್ಪಲಿ ಇಲ್ಲದೆ, ಬಿಳಿಯ ಜೈಲು ಸಮವಸ್ತ್ರದಲ್ಲಿ ಕೈಗೆ ಕೋಳ ಹಾಕಿಕೊಂಡು ಕೋರ್ಟ್‌ ಹಾಲ್‌ನಲ್ಲಿದ್ದ ಟರ್ರಂಟ್‌ ಮಾಧ್ಯಮದತ್ತ ತಿರಸ್ಕಾರದ ನಗು ಬೀರಿದ್ದು ವರದಿಯಾಗಿದೆ.

ಈ ಸಂದರ್ಭದಲ್ಲಿ ಆತ 'ಒಕೆ (ಸೂಪರ್‌)‘ ಸಂಜ್ಞೆಯನ್ನು ನೀಡಿದ್ದಾನೆ. ಜಗತ್ತಿನಾದ್ಯಂತ ಬಿಳಿ ಬಣ್ಣದ ಚರ್ಮ ಹೊಂದಿರುವ ಮನುಷ್ಯರು ಮಾತ್ರ ಶ್ರೇಷ್ಠ ಎಂದು ಪ್ರತಿಪಾದಿಸುವ ಗುಂಪುಗಳು ಇದೇ ಚಿನ್ಹೆಯನ್ನು ಬಳಸುತ್ತವೆ.

 ‘ಒಕೆ (ಸೂಪರ್‌)‘ ಸಂಜ್ಞೆಯನ್ನು ತೋರಿಸುತ್ತಿರುವ ಮಸೀದಿ ದಾಳಿಕೋರ ಬ್ರೆಂಟನ್‌ ಟರ್ರಂಟ್‌.
‘ಒಕೆ (ಸೂಪರ್‌)‘ ಸಂಜ್ಞೆಯನ್ನು ತೋರಿಸುತ್ತಿರುವ ಮಸೀದಿ ದಾಳಿಕೋರ ಬ್ರೆಂಟನ್‌ ಟರ್ರಂಟ್‌.
/ದಿ ಡೈಲಿ ಬೀಸ್ಟ್

ಸದ್ಯಕ್ಕೆ ಇದೊಂದು ಬಿಳಿಯರ ಜನಾಂಗೀಯ ದ್ವೇಷದ ದಾಳಿ ಎಂಬುದಾಗಿ ಗೊತ್ತಾಗಿದೆ. ಯುರೋಪ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈತನ ಜತೆಗೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಈ ರಕ್ತಪಾತದಲ್ಲಿ ಇವರ ಪಾತ್ರ ಏನು ಎಂಬುದರ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಬಂಧಿತರು ಯಾರಿಗೂ ಅಪರಾಧದ ಹಿನ್ನೆಲೆಯಿಲ್ಲ ಎಂಬುದು ತಿಳಿದು ಬಂದಿದೆ.

ಆತ ನಮ್ಮವನಲ್ಲ:

ದಾಳಿ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಆರ್ಡರ್ನ್, “ತೀವ್ರಗಾಮಿ ಆಲೋಚನೆಗಳಿಗೆ ನ್ಯೂಜಿಲ್ಯಾಂಡ್‌ನ ನೆಲದಲ್ಲಿ ಜಾಗವಿಲ್ಲ,” ಎಂದು ಗುಡುಗಿದ್ದಾರೆ.

ಸುದ್ದಿ ಬೆನ್ನಿಗೇ ಜನರಲ್ಲಿ ವಿಶ್ವಾಸ ತುಂಬಲು ಮುಂದೆ ಬಂದ ಅವರು, "ದೇಶದ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ,” ಎಂದರು. ಮಾತ್ರವಲ್ಲ ನಗರದಾದ್ಯಂತ ಜನರ ಓಡಾಟಕ್ಕೆ ಅನುಕೂಲ ಮಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

“ನಮ್ಮ ಮನಸ್ಸು, ಪ್ರಾರ್ಥನೆ ಇವತ್ತಿನ ಘಟನೆಯಲ್ಲಿ ಸಂತ್ರಸ್ತರಾದವರ ಜತೆಗಿದೆ. ಕ್ರೈಸ್ಟ್‌ಚರ್ಚ್‌ ಈ ಸಂತ್ರಸ್ತರ ತವರು. ಹೆಚ್ಚಿನವರಿಗೆ ಇದು ಅವರು ಹುಟ್ಟಿದ ಸ್ಥಳ ಆಗದೇ ಇರಬಹುದು. ಆದರೆ ನ್ಯೂಜಿಲ್ಯಾಂಡ್‌ ಅವರ ಆಯ್ಕೆಯಾಗಿತ್ತು. ತಮ್ಮ ಸಂಸ್ಕೃತಿ, ತಮ್ಮ ಧರ್ಮವನ್ನು ಮುಕ್ತವಾಗಿ ಪಾಲನೆ ಮಾಡಲು ಸುರಕ್ಷಿತ ಜಾಗ ಎಂಬುದಕ್ಕೆ ಅವರಿಲ್ಲಿ ಬಂದಿದ್ದರು. ಬಂದು ತಮ್ಮ ಕುಟುಂಬವನ್ನು ಬೆಳೆಸಿದ್ದರು. ತಮ್ಮನ್ನು ಪ್ರೀತಿಸುವ ಮತ್ತು ತಾವು ಪ್ರೀತಿಸುವ ಸಮುದಾಯದ ಭಾಗವಾಗಿದ್ದರು.”

“ನಾವು ಜನಾಂಗೀಯ ದ್ವೇಷವನ್ನು ಬಿತ್ತುವವರಲ್ಲ, ತೀವ್ರಗಾಮಿ ಆಲೋಚನೆಗಳನ್ನು ನಾವು ಪ್ರೋತ್ಸಾಹಿಸುವವರಲ್ಲ, ಹೀಗಿರುವಾಗ ನಮ್ಮ ಮೇಲೆ ಈ ದಾಳಿ ನಡೆದಿದ್ದು ಸರಿಯಲ್ಲ. ನಾವು ವೈವಿಧ್ಯತೆ, ದಯೆ, ಸಹಾನುಭೂತಿ, ನಮ್ಮ ಮೌಲ್ಯಗಳನ್ನು ಹಂಚಿಕೊಳ್ಳುವವರಿಗೆ ನೆಲೆ, ಅಗತ್ಯವಿರುವವರಿಗೆ ಆಶ್ರಯ ನೀಡುವವರು ನಾವು. ಈ ಮೌಲ್ಯಗಳನ್ನು ಗೌರವಿಸುವವರಿಗೆ ನಾನು ಭರವಸೆ ನೀಡುತ್ತಿದ್ದೇನೆ ನಾವು ಈ ದಾಳಿಯಿಂದ ವಿಚರಿತರಾಗಿಲ್ಲ,” ಎಂದು ಉಗ್ರವಾದಿಗಳಿಗೆ ಸ್ಪಷ್ಟ ಸಂದೇಶ ನೀಡಿದರು.

“200ಕ್ಕೂ ಹೆಚ್ಚು ಜನಾಂಗಗಳು, 160ಕ್ಕೂ ಹೆಚ್ಚು ಭಾಷೆಗಳನ್ನು ಹೊಂದಿರುವ ಹೆಮ್ಮೆಯ ದೇಶ ನಮ್ಮದು. ಈ ಕೃತ್ಯ ನಡೆಸಿದ ಸಿದ್ಧಾಂತವವನ್ನು ಪ್ರಬಲವಾಗಿ ಖಂಡಿಸುತ್ತಿದ್ದೇನೆ. ನೀವು ಈ ದಾಳಿಗೆ ನಮ್ಮನ್ನು ಆಯ್ಕೆ ಮಾಡಿಕೊಂಡಿರಬಹುದು. ಆದರೆ ನಾವು ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದೇವೆ ಮತ್ತು ಖಂಡಿಸುತ್ತಿದ್ದೇವೆ,” ಎಂದರು.

ನ್ಯೂಜಿಲ್ಯಾಂಡ್‌ ಪ್ರಧಾನಿ ಜೆಸಿಂದಾ ಆರ್ಡರ್ನ್‌ .
ನ್ಯೂಜಿಲ್ಯಾಂಡ್‌ ಪ್ರಧಾನಿ ಜೆಸಿಂದಾ ಆರ್ಡರ್ನ್‌ .
/ಇಂಡಿಪೆಂಡೆಂಟ್‌

ನಿರಾಶ್ರಿತರಿಗೆ ಮತ್ತು ವಲಸಿಗರಿಗೆ ಆಶ್ರಯ ನೀಡುವ ದೇಶಗಳಲ್ಲಿ ನ್ಯೂಜಿಲ್ಯಾಂಡ್‌ ಮೊದಲಿಗನಾಗಿ ಕಾಣಿಸಿಕೊಳ್ಳುತ್ತದೆ. ಹೀಗೊಂದು ದೇಶದ ಪ್ರಧಾನಿ ನೀಡಿದ ಜಾಗತಿಕ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ಪ್ರಧಾನಿ ಮಾತಿಗೆ ಪೂರಕವಾಗಿ ನಡೆದುಕೊಂಡ ಜನರು ತಮ್ಮ ನಡುವೆ ಇದ್ದ ಮುಸ್ಲಿಂ ಸಮುದಾಯದವರಿಗೆ ಧೈರ್ಯ ತುಂಬಿದ್ದಾರೆ. ಹಲವರು ಅಸುರಕ್ಷಿತ ಭಾವನೆಯಲ್ಲಿದ್ದ ಮುಸ್ಲಿಂ ಸಮುದಾಯದವರೊಂದಿಗೆ ಪ್ರಯಾಣಿಸಿ ಧೈರ್ಯ ತುಂಬಿದರೆ, ಇನ್ನು ಕೆಲವರು ಖರೀದಿ ಮೊದಲಾದ ಕೆಲಸಗಳಿಗೆ ಜತೆಯಾಗಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ನೀಡಲೆಂದು ವೆಬ್‌ಸೈಟ್‌ ಆರಂಭಿಸಲಾಗಿದ್ದು ಒಂದೇ ದಿನದಲ್ಲಿ 6,84,000 ಡಾಲರ್‌ ನೆರವು ಹರಿದು ಬಂದಿದೆ.

ಬಂದೂಕು ಕಾನೂನಿನ ಚರ್ಚೆ:

ಈ ಕೃತ್ಯದ ದಾಳಿಕೋರ ಆಸ್ಟ್ರೇಲಿಯಾ ಪ್ರಜೆಯಾಗಿದ್ದರೂ ಬಂದೂಕು ಪರವಾನಗಿಗಳನ್ನು ಹೊಂದಿದ್ದ ಎಂಬುದು ಗೊತ್ತಾಗಿದೆ. ದಾಳಿ ವೇಳೆ ಆತ ಐದು ಬಂದೂಕುಗಳನ್ನು ಹೊಂದಿದ್ದ. ಒಂದು ಸೆಮಿ ಅಟೋಮ್ಯಾಟಿಕ್‌ ಮತ್ತು ಎರಡು ಶಾಟ್‌ಗನ್‌ಗಳು ಆತನ ಬಳಿಯಲ್ಲಿದ್ದವು.

ಹೀಗಾಗಿ ಇಲ್ಲಿನ ಬಂದೂಕು ಪರವಾನಿಗೆ ಬಗ್ಗೆ ಪ್ರಶ್ನೆಗಳು ಎದ್ದಿವೆ. “ನಾನೀಗ ನಿಮಗೆ ಒಂದು ವಿಷಯ ಹೇಳಲು ಇಚ್ಚಿಸುತ್ತೇನೆ, ಅದೇನೆಂದರೆ ನಮ್ಮ ಬಂದೂಕು ಪರವಾನಿಗೆ ಕಾನೂನುಗಳು ಬದಲಾಗಲಿವೆ,” ಎಂದು ಆರ್ಡೆನ್‌ ವರದಿಗಾರರಿಗೆ ತಿಳಿಸಿದ್ದಾರೆ. ಸೆಮಿ ಅಟೋಮ್ಯಾಟಿಕ್‌ ಬಂದೂಕುಗಳ ಮೇಲೆ ನಿಷೇಧ ಹೇರುವ ಬಗ್ಗೆಯೂ ಚಿಂತನೆ ನಡೆಸುವುದಾಗಿ ಅವರು ಹೇಳಿದ್ದಾರೆ.

ದಾಳಿಕೋರ ಟ್ರಂಪ್‌ ಅಭಿಮಾನಿ:

ಬ್ರೆಂಟನ್‌ ಟರ್ರಂಟ್‌ ತನ್ನ ದಾಳಿಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಸ್ಟ್ರೀಮ್‌ ಮಾಡಿದ್ದಲ್ಲದೆ, ತನ್ನ ಪ್ರಣಾಳಿಕೆಯನ್ನೂ ಸ್ಥಳದಲ್ಲಿ ಬಿಟ್ಟಿದ್ದಾನೆ. 74 ಪುಟಗಳ ಈ ಪ್ರಣಾಳಿಕೆಯಲ್ಲಿ ಆತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನು ‘ಬಿಳಿಯರ ಅಸ್ಮಿತೆಯ ಹೆಗ್ಗುರುತು’ ಎಂದು ಕರೆದಿದ್ದರೆ, ನಾರ್ವೆಯಲ್ಲಿ 2011ರಲ್ಲಿ 77 ಜನರನ್ನು ಕೊಂದಿದ್ದ ಆಂಡರ್ಸ್‌ ಬ್ರೆವಿಕ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾನೆ.

ತಾನು ಬ್ರೆವಿಕ್‌ ಜತೆ ಸಂಪರ್ಕ ಸಾಧಿಸಿದ್ದೆ ಎಂದು ಹೇಳಿರುವ ಆತ ಈ ದಾಳಿಗೆ ಆತನ ಆಶೀರ್ವಾದ ಪಡೆದಿದ್ದೆ ಎಂದಿದ್ದಾನೆ. ತನ್ನ ಕರಪತ್ರದ ತುಂಬಾ ಆತ ವಲಸಿಗರು, ಜನಾಂಗಿಯ ವೈವಿಧ್ಯತೆ ಬಗ್ಗೆ ಕಿಡಕಾರಿದ್ದಾನೆ. ಜತೆಗೆ ಇವರಿಂದಾಗಿ ಬಿಳಿಯರು, ಯುರೋಪಿಯನ್ನು ಮತ್ತು ಪಾಶ್ಚಿಮಾತ್ಯ ಜಗತ್ತಿನ ಸಂಸ್ಕೃತಿ ನಶಿಸುತ್ತಿದೆ ಎಂದಿದ್ದಾನೆ.

ಈ ದಾಳಿಯೊಂದಿಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಜನಾಂಗೀಯ ದ್ವೇಷದ ಭೀತಿ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ಹಿಂದೆಂದೂ ಇಲ್ಲದಷ್ಟು ದ್ವೇಷ ಕಾರುವ ಜನಾಂಗೀಯ ಅಲೋಚನೆಗಳು ಅಧಿಕಾರ ಹಿಡಿಯುತ್ತವೆ ಎನ್ನುತ್ತಿರುವ ಅಧ್ಯಯನಗಳ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದುಕೊಂಡಿದೆ.