samachara
www.samachara.com
#GoBack: ಡಿಜಿಟಲ್ ಪ್ರತಿರೋಧಕ್ಕೆ ಮಣೆ ಹಾಕದವರು & ಕನ್ನಡಿಗರ ಕೆಂಗಣ್ಣಿಗೆ ಗುರಿಯಾದವರು
COVER STORY

#GoBack: ಡಿಜಿಟಲ್ ಪ್ರತಿರೋಧಕ್ಕೆ ಮಣೆ ಹಾಕದವರು & ಕನ್ನಡಿಗರ ಕೆಂಗಣ್ಣಿಗೆ ಗುರಿಯಾದವರು

ಇದು ಚುನಾವಣೆ ಸಮಯ. ನೀತಿ ಸಂಹಿತೆ ಜಾರಿಯಾಗಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಅದೇ ರೀತಿ ಆನ್‌ಲೈನ್ ಮೀಡಿಯಾದಲ್ಲಿಯೂ ರಾಜಕೀಯದ ಬಗೆಗೆ ಜನರ ಪ್ರತಿಕ್ರಿಯೆಗಳು ಗರಿಗೆದರಿವೆ. ಅದರ ಒಂದು ಸ್ಯಾಂಪಲ್ ಇದು. 

ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಹಾಲಿ ಸಂಸದರು ಹಾಗೂ ಪ್ರಮುಖ ಟಿಕೆಟ್ ಆಕಾಂಕ್ಷಿಗಳು, ಅಭ್ಯರ್ಥಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ‘ಗೋ ಬ್ಯಾಕ್’ ಅಭಿಯಾನ ಮುನ್ನಲೆಗೆ ಬಂದಿದೆ.

‘ಇಂತವರು ನಮ್ಮನ್ನು ಪ್ರತಿನಿಧಿಸುವುದು ಬೇಡ’ ಎಂಬುದು ಈ ಡಿಜಿಟಲ್ ಪ್ರತಿಕ್ರಿಯೆಯ ಒಟ್ಟಾರೆ ಸಾರಾಂಶ. ಕಳೆದ ಎರಡು ವರ್ಷಗಳ ಹಿಂದೆ ನಿಧಾನವಾಗಿ ಆರಂಭವಾದ ಅಭ್ಯರ್ಥಿಗಳ ಕುರಿತು ಸ್ಪರ್ಧೆಗೆ ಮುನ್ನವೇ ಅಸಮಾಧಾನ ಹೊರಹಾಕುವ ಪ್ರಕ್ರಿಯೆ ಇವತ್ತು ಭಿನ್ನ ನೆಲೆಯಲ್ಲಿ ಚುನಾವಣಾ ವ್ಯವಸ್ಥೆಯನ್ನು ಎದುರುಗೊಂಡಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ಮಾತ್ರ ಶೋಚನೀಯ ರೀತಿಯಲ್ಲಿದೆ. ಇಷ್ಟಕ್ಕೂ ಅಖಾಡಕ್ಕೆ ಇಳಿಯುವ ಮುನ್ನವೇ ಜನರ ಕೆಂಗಣ್ಣಿಗೆ ಗುರಿಯಾದವರು ಯಾರು? ಯಾಕೇ ಇಂತಹದೊಂದು ಸನ್ನಿವೇಶ ಸೃಷ್ಟಿಸಿಕೊಂಡರು? ವಿವರ ಇಲ್ಲಿದೆ.

ಟ್ರೆಂಡಿಂಗ್‌ ಟಾಪ್‌ನಲ್ಲಿ ನಿಖಿಲ್:

ಕನ್ನಡ ಟ್ರೋಲಿಗರ ಕ್ರಿಯಾಶೀಲತೆ.
ಕನ್ನಡ ಟ್ರೋಲಿಗರ ಕ್ರಿಯಾಶೀಲತೆ.

ಕರ್ನಾಟಕದಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿ ಇರುವವರು ರಾಜ್ಯದ ಮುಖ್ಯಮಂತ್ರಿ ಪುತ್ರ, ನಟ, 29 ವರ್ಷದ ನಿಖಿಲ್ ಕುಮಾರಸ್ವಾಮಿ.

ನಿಖಿಲ್ ಅವರನ್ನು ಮಂಡ್ಯದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲು ವೇದಿಕೆ ಸಿದ್ಧವಾಗುತ್ತಿದ್ದಂತೆ ಸ್ವತಃ ಮಂಡ್ಯದ ಜನರೆ ಇವರ ವಿರುದ್ಧ ‘ಗೋ-ಬ್ಯಾಕ್’ ಚಳುವಳಿ ಆರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ‘ಜಾಗ್ವಾರ್’ ಸಿನೆಮಾ ಆಡಿಯೋ ಲಾಂಚ್‌ ಸಮಯದ ‘ಎಲ್ಲಿದ್ದೀಯೋ ಮಗನೇನೇ..’ ವಿಡಿಯೋ ಕ್ಲಿಪ್‌ನ ನಾನಾ ರೂಪಗಳು ಹರಿದಾಡುತ್ತಿವೆ.

ಖ್ಯಾತ ನಟ ಮಾಜಿ ಸಚಿವ ಅಂಬರೀಷ್ ಗೆ ಮಂಡ್ಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಮಂಡ್ಯದಲ್ಲಿ ಅವರ ಸ್ಥಾನವನ್ನು ತುಂಬುವ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಸುಮಲತಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಫರ್ಧಿಸಬೇಕು ಎಂಬ ಕೂಗು ಜಿಲ್ಲೆಯಲ್ಲಿ ಜೋರಾಗಿಯೇ ಕೇಳಿ ಬಂದಿತ್ತು. ಆದರೆ, ಜನರ ವಿರೋಧದ ನಡುವೆಯೂ ಮೈತ್ರಿಗೆ ಕಟ್ಟು ಬಿದ್ದ ಕಾಂಗ್ರೆಸ್ ಮಂಡ್ಯದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್‌ಗೆ ಆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ.

ಅಂಬರೀಷ್ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು ಜೆಡಿಎಸ್‌ನಿಂದಲೇ. ಹೀಗಾಗಿ ಸುಮಲತಾ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ಸ್ಥಾನ ನೀಡಬೇಕು ಎಂಬ ಕೂಗನ್ನು ಸಹ ತೇಲಿ ಬಿಡಲಾಗಿತ್ತು. ಆದರೆ, ಮಂಡ್ಯ ಜನರ ಈ ಭಾವನೆಗಳಿಗೆ ಹೆಚ್ಚಿನ ಮನ್ನಣೆ ನೀಡದ ಜೆಡಿಎಸ್‌ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್‌ರನ್ನು ಮಂಡ್ಯದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದೆ.

ಅಲ್ಲದೆ ಸುಮಲತಾ ಕುರಿತು ಸಚಿವ ರೇವಣ್ಣ ಅಸಭ್ಯವಾದ ಆಡಿದ ಆ ಒಂದು ಮಾತು ಇಡೀ ಜಿಲ್ಲೆಯಾದ್ಯಂತ ನಟಿ ಸುಮಲತಾ ಪರ ಅಲೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾಗಿರುವ ಇದೇ ಮಂಡ್ಯದ ಜನ ಇಂದು ನಿಖಿಲ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಅಭಿಯಾನ ಆರಂಭಿಸಿದ್ದಾರೆ. ಟ್ರೋಲಿಗರಂತು ಇನ್ನಿಲ್ಲದ ಅಪಹಾಸ್ಯಕ್ಕೆ ಗುರಿ ಮಾಡುತ್ತಿದ್ದಾರೆ. ಇದಕ್ಕೆ ಸುಮಲತಾ ಹೊರತಾಗಿಯೂ ಮತ್ತಷ್ಟು ಕಾರಣಗಳಿವೆ.

ಮಂಡ್ಯದ ಭೂಮಿ ಹೇಳಿ ಕೇಳಿ ರಾಜ್ಯದಲ್ಲೇ ಪ್ರತಿಷ್ಠಿತ ರಾಜಕೀಯ ಕಣ. ಇಡೀ ರಾಜ್ಯದಲ್ಲಿ ಅತ್ಯಂತ ಹೆಚ್ಚು ರಾಜಕೀಯ ಕುತೂಹಲಿಗಳನ್ನು, ಮತದಾರರನ್ನು ಹೊಂದಿರುವ ಕ್ಷೇತ್ರ. ರಾಜ್ಯದಲ್ಲೇ ಅತ್ಯಂತ ಹೆಚ್ಚು ಮತದಾನ ನಡೆಯುವ ಜಿಲ್ಲೆಗಳ ಪೈಕಿ ಮಂಡ್ಯ ಮೊದಲ ಸ್ಥಾನದಲ್ಲಿದೆ. (ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಶೇ.78 ರಷ್ಟು ಮತದಾನವಾಗಿತ್ತು)

ಈ ಕ್ಷೇತ್ರದಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ. ಆದರೆ, ಪಕ್ಷದಲ್ಲೇ ಸಾಕಷ್ಟು ಹಿರಿಯ ಅನುಭವಿ ನಾಯಕರಿರುವಾಗ ನಿಖಿಲ್ ಏಕೆ ಟಿಕೆಟ್? ಎಂಬುದು ಮೊದಲ ಪ್ರಶ್ನೆ. ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಮೂಲತಃ ಹಾಸನದವರು ಎಂಬ ಮತ್ತೊಂದು ಆಕ್ಷೇಪವೂ ಇತ್ತೀಚಿಗೆ ಚಾಲ್ತಿಗೆ ಬಂದಿದೆ.

ಇದರ ಹೊರತಾಗಿಯೂ ಮಂಡ್ಯದ ಹಾಲಿ ಸಂಸದ ಎಲ್‌. ಆರ್‌. ಶಿವರಾಮೇಗೌಡ ಜೆಡಿಎಸ್ ಪಕ್ಷದವರೇ ಅಗಿದ್ದಾರೆ. 2018 ರಲ್ಲಿ ಜೆಡಿಎಸ್‌ನ ಸಿ. ಎಸ್. ಪುಟ್ಟರಾಜು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಭಾರೀ ಅಂತರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

ಹಾಲಿ ಸಂಸದ ಎಲ್‌.ಆರ್‌. ಶಿವರಾಮೆಗೌಡ ಇರುವಾಗ ರಾಜಕೀಯ ಅನನುಭವಿ ನಿಖಿಲ್‌ಗೆ ಏಕೆ ಟಿಕೆಟ್ ಎಂಬುದು ಎರಡನೇ ಪ್ರಶ್ನೆ.

ಇದಲ್ಲದೆ ಇತ್ತೀಚೆಗೆ ಜೆಡಿಎಸ್‌ ಪಕ್ಷದಿಂದ ಮಂಡ್ಯದ ಜನರ ಸೇವೆ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಮಂಡ್ಯದವರೇ ಆದ ಐಆರ್‌ಎಸ್ ಅಧಿಕಾರಿ ಡಾ. ಲಕ್ಷ್ಮೀ ಅಶ್ವಿನ್ ಗೌಡ 2018 ರ ಫೆಬ್ರವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮಂಡ್ಯಕ್ಕೆ ಬಂದು ರಾಜಕೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೆಡಿಎಸ್ ಪರ ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜನರ ಒಲವು ಇವರ ಪರವಿದೆ.

ಇವರಿಗೆ ಚುನಾವಣಾ ಟಿಕೆಟ್ ನೀಡುವ ಭರವಸೆ ನೀಡಿಯೇ ಜೆಡಿಎಸ್ ಇವರನ್ನು ಮಂಡ್ಯಕ್ಕೆ ಕರೆಸಿಕೊಂಡಿತ್ತು. ಇದೇ ಕಾರಣಕ್ಕೆ 2013 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತ ಸರಕಾರದ ರೈಲ್ವೆ ಇಲಾಖೆಯಲ್ಲಿ ಸೇವೆಯಲ್ಲಿದ್ದ ಡಾ. ಲಕ್ಷ್ಮೀ ಅಶ್ವಿನ್ ಗೌಡ ತಮ್ಮ ಕೆಲಸಕ್ಕೆ ರಾಜೀನಾಮೆ ಮಂಡ್ಯಕ್ಕೆ ಬಂದಿದ್ದರು. ಆದರೆ, ಇಂತವರಿಗೆ ಟಿಕೆಟ್ ನೀಡದೆ ಮೋಸ ಮಾಡಿದ ಕುಮಾರಸ್ವಾಮಿ ತಮ್ಮ ಕುಟುಂಬದವರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂಬುದು ಮಂಡ್ಯದ ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಇದಕ್ಕೆ ಕುಮಾರಸ್ವಾಮಿ ಉತ್ತರ ನೀಡಿದರಾದರೂ ಅಷ್ಟೊತ್ತಿಗಾಗಲೇ ಮಹಿಳೆಗೆ ಗೌಡರ ಕುಟುಂಬ ವಂಚಿಸಿದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನರಿಗೆ ತಲುಪಿಯಾಗಿತ್ತು.

“ಮಂಡ್ಯದಲ್ಲಿ ಜೆಡಿಎಸ್ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದು, ಸುಮಲತಾ ಪರ ಒಲವು ಅಧಿಕವಾಗುತ್ತಿದೆ. ಕೆಲವು ಜೆಡಿಎಸ್ ಕಾರ್ಯಕರ್ತರೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಸುಮಲತಾ ಅವರ ಪರ ಕೆಲಸ ಮಾಡುವ ಇಚ್ಚೆ ವ್ಯಕ್ತಪಡಿಸುತ್ತಿದ್ದಾರೆ. ಸುಮಲತಾ ಮಂಡ್ಯದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಫರ್ಧಿಸಿದರೆ ನಿಖಿಲ್‌ಗೆ ಸಂಕಷ್ಟ ಎದುರಾಗುವುದು ಖಚಿತ,” ಎಂದು ಸ್ಥಳೀಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.

ಗೋ ಬ್ಯಾಕ್ ಅಭಿಯಾನಕ್ಕೆ ಕಿವಿಗೊಟ್ಟಿದ್ದರೆ ಜೆಡಿಎಸ್‌ ಇದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇರುತ್ತಿತ್ತು. ಅಂದಹಾಗೆ, ನಿಖಿಲ್ ಕುಮಾರಸ್ವಾಮಿ ಗೋ ಬ್ಯಾಕ್ ಅಭಿಯಾನಕ್ಕೆ ನೀಡಿರುವ ಪ್ರತಿಕ್ರಿಯೆ ಇದು.

"ಈ ಗೋ ಬ್ಯಾಕ್ ಅನ್ನೋ ಸುದ್ದಿ ಬಗ್ಗೆ. ಗೋ ಬ್ಯಾಕ್ ಅಂದ್ರೆ ಹಿಂದೆ ಹೋಗು ನಿಖಿಲ್ ಅಣ್ಣ ಅಂತ. ನಾನು ಹಿಂದೆ ಹೋಗಬೇಕಾ, ನಿಮ್ಮಗಳ ಜತೆ ಇರಬೇಕಾ ಎಂಬುದನ್ನು ನಿಮ್ಮಂತ ತಂದೆ ತಾಯಿಗಳು ನಿರ್ಧಾರ ಮಾಡಬೇಕು ಎಂದು ಇಷ್ಟಪಡ್ತೀನಿ.’’

ಟ್ರೆಂಡ್‌ಗೆ ನಾಂದಿ ಹಾಡಿದ ಹೆಗಡೆ:

ಹೆಗಡೆ ವಿರುದ್ಧ ಆಕ್ರೋಶ. 
ಹೆಗಡೆ ವಿರುದ್ಧ ಆಕ್ರೋಶ. 

ತಮ್ಮ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗೋ-ಬ್ಯಾಕ್ ಟ್ರೆಂಡ್‌ಗೆ ನಾಂದಿ ಹಾಡಿದ್ದೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ.

ಉತ್ತರ ಕನ್ನಡ ಜಿಲ್ಲೆಯ ಸಂಸದರಾಗಿರುವ ಇವರು ಸಂಸತ್‌ನಲ್ಲಿ ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದು ಇದು ಐದನೇ ಬಾರಿ. ಆದರೆ, ಕಳೆದ ನಾಲ್ಕು ಅವಧಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಅಷ್ಟಾಗಿ ಗುರುತಿಸಿಕೊಳ್ಳದ ಅನಂತ್ ಕುಮಾರ್ ಹೆಗಡೆ 2014 ರ ಈಚೆಗೆ ರಾಜ್ಯದಲ್ಲಿ ಚಾಲ್ತಿಗೆ ಬಂದು ಚರ್ಚೆಗೆ ಗ್ರಾಸವಾದ ಸಂಸದರ ಪೈಕಿ ಪ್ರಮುಖರು.

2016ರ ಫೆಬ್ರವರಿಯಲ್ಲಿ ಶಿರಸಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಎದುರು ಮಾತನಾಡಿದ್ದ ಹೆಗಡೆ, “ಭಟ್ಕಳ ಮತ್ತು ಅಜಂಗಢ ಇಡೀ ದೇಶಕ್ಕೆ ಭಯೋತ್ಪಾದನಾ ಕೇಂದ್ರ,” ಎಂದು ಅನ್ಯಧರ್ಮೀಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಪರಿಣಾಮ ಭಟ್ಕಳ ಮತ್ತು ಅಜಂಗಢದ ಜನ ಕೇಂದ್ರ ಸಚಿವರ ಹೇಳಿಕೆ ವಿರೋಧಿಸಿ ಬೀದಿಗಿಳಿದು ಹೋರಾಟ ನಡೆಸಿದ್ದರು.

ಈ ಕುರಿತು ಅನಂತಕುಮಾರ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿತ್ತು. (ಈ ಹೇಳಿಕೆ ಕುರಿತ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿದೆ.)

ಈ ಪ್ರಕರಣದ ನಂತರವಾದರೂ ಅನಂತಕುಮಾರ್ ತಮ್ಮ ನಾಲಿಗೆಯನ್ನು ಹಿಡಿತದಲ್ಲಿಡಬೇಕಿತ್ತು. ಆದರೆ, ಅದು ಹಾಗಾಗಲಿಲ್ಲ. 2017ರ ಡಿಸೆಂಬರ್ ತಿಂಗಳಲ್ಲಿ ಒಂದು ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಕೇಂದ್ರ ಸಚಿವರು, “ನಾವು ಬಂಧಿರುವುದೇ ಸಂವಿಧಾನ ಬಲಿಸೋದಕ್ಕೆ” ಎಂದು ಹೇಳಿಕೆ ನೀಡಿಬಿಟ್ಟರು.

ಅಲ್ಲದೆ ಅದೇ ವೇದಿಕೆಯಲ್ಲಿ ಜಾತ್ಯಾತೀತರ ರಕ್ತದ ಪರೀಕ್ಷೆಗೂ ಮುಂದಾಗಿದ್ದರು. ಅವರ ಈ ಹೇಳಿಕೆ ಸ್ವಾಭಾವಿಕವಾಗಿ ದಲಿತರ, ಹಿಂದುಳಿದವರ ಹಾಗೂ ಜಾತ್ಯಾತೀತ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣ ಜನಸಮೂಹ ಅವರ ಹೇಳಿಕೆ ವಿರುದ್ಧ ತಿರುಗಿ ಬಿದ್ದಿತ್ತು.

ಅದೇ ತಿಂಗಳು ನಡೆದ ಲೋಕಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ತೀವ್ರ ತರಾಟೆಗೆ ಗುರಿಯಾದ ಅನಂತಕುಮಾರ್ ತಮ್ಮ ಹೇಳಿಕೆ ಕುರಿತು ಸಂಸತ್‌ನ ಉಭಯ ಸದನಗಳಲ್ಲೂ ಕ್ಷಮೆ ಕೋರಿದ್ದರು.

ಜನವರಿ 17, 2018ರಂದು ಕಾರ್ಯಕ್ರಮದ ನಿಮಿತ್ತ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕಲಬುರಗಿಗೆ ತೆರಳಿದ್ದರು. ಆದರೆ, ಈ ಕಾರ್ಯಕ್ರಮವನ್ನು ವಿರೋಧಿಸಿ ಹತ್ತಾರು ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದರು. “ಸಂವಿಧಾನ ಬದಲಿಸುವ ಸಚಿವರು ನಮ್ಮೂರಿಗೆ ಬರುವುದು ಬೇಡ ಗೋ-ಬ್ಯಾಕ್ ಹೆಗಡೆ” ಎಂದು ಘೋಷಣೆ ಕೂಗಿ ಜನ ಪ್ರತಿಭಟಿಸಿದ್ದರು.

ಅದೇ ವರ್ಷ ಮಾರ್ಚ್ 25ರಂದು ಯಾದಗಿರಿಯಲ್ಲಿ ನಡೆಯಲಿದ್ದ ಹಿಂದೂ ಸಮಾವೇಶದಲ್ಲಿ ಅನಂತಕುಮಾರ್ ಹೆಗಡೆ ಭಾಗವಹಿಸಬಾರದು ಎಂದು ಒತ್ತಾಯಿಸಿ ದಲಿತ ಸಂಘಟನೆಯ ಕಾರ್ಯಕರ್ತರು ಬೀದಿಗಿಳಿದು ಅವರ ಪ್ರತಿಕೃತಿ ದಹಿಸಿ ಹೋರಾಟ ನಡೆಸಿದ್ದರು. “ಅನಂತಕುಮಾರ ಹೆಗಡೆ ಗೋ ಬ್ಯಾಕ್” ಎಂಬ ಫಲಕಗಳು ರಸ್ತೆ ಎಲ್ಲೆಡೆ ರಾರಾಜಿಸಿದ್ದವು.

ಇನ್ನೂ ಬೆಂಗಳೂರಿನ ಟೌನ್ ಎದುರು ಪ್ರಗತಿಪರರಂತು ಆಗಿಂದಾಗ್ಗೆ ಸಚಿವ ಅನಂತಕುಮಾರ್ ಅವರ ಸಡಿಲ ನಾಲಗೆಯ ವಿರುದ್ಧ ಹೋರಾಟವನ್ನು ಸಂಘಟಿಸುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ಜನಸಾಮಾನ್ಯರು ಕೋಮುವಾದಿ ಅನಂತಕುಮಾರ್ ಹೆಗಡೆ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬಾರದು ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

ಅಲ್ಲದೆ ಕೇಂದ್ರ ಸಚಿವರ ಇಂತಹ ಬೇಜವಾಬ್ದಾರಿ ಹೇಳಿಕೆಯಿಂದಾಗಿ ಪಕ್ಷದ ವರ್ಚಸ್ಸಿಗೆ ಕುಂದುಂಟಾಗುತ್ತಿದೆ. ಹೀಗಾಗಿ ಅನಂತಕುಮಾರ್ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂಬ ಕೂಗು ಇತ್ತೀಚೆಗೆ ಪಕ್ಷದ ಒಳಗೂ ದೊಡ್ಡ ಮಟ್ಟದಲ್ಲೇ ಕೇಳಿಬರುತ್ತಿರುವುದು ಜನರ ದನಿಗೆ ಬಲಬಂದಂತಾಗಿದೆ.

ಆದರೆ ಅನಂತ ಕುಮಾರ್ ಹೆಗಡೆ ವಿರುದ್ಧ ಕ್ಷೇತ್ರದ ಒಳಗೆ ಅಸಮಾಧಾನಗಳು ಇದ್ದಂತೆ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಹೊರಗಿನವರು, ಬಿಜೆಪಿಯನ್ನು ಸೈದ್ಧಾಂತಿವಾಗಿ ವಿರೋಧಿಸುವವರ ಗೋ ಬ್ಯಾಕ್‌ ಕೂಗಿಗೆ ಬಿಜೆಪಿ ಬೆಲೆ ನೀಡಬಹುದು ಎಂದು ನಿರೀಕ್ಷಿಸುವುದು ಕಷ್ಟ.

ಶೋಭಕ್ಕ ನೀನ್ ಬೇಡಕ್ಕ:

ಶೋಭ ವಿರುದ್ಧ ಅಭಿಯಾನ. 
ಶೋಭ ವಿರುದ್ಧ ಅಭಿಯಾನ. 

2012ರ ವಿಧಾನ ಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ಪಕ್ಷದಿಂದ ಸ್ಫರ್ಧಿಸಿ ಸೋತಿದ್ದ ಮಾಜಿ ಸಚಿವೆ ಶೋಭ ಕರಂದ್ಲಾಜೆ ಅವರಿಗೆ ಮತ್ತೊಮ್ಮೆ ರಾಜಕೀಯ ಮರುಹುಟ್ಟು ನೀಡಿದ್ದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

2014ರ ಲೋಕಸಭಾ ಚುನಾವಣೆ ಟಿಕೆಟ್ ಘೋಷಣೆ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟನ್ನು ಶೋಭ ಅವರಿಗೆ ನೀಡುವ ವಿಚಾರದ ಕುರಿತಾಗಿ ಸ್ವಪಕ್ಷೀಯರಿಂದಲೇ ಸಾಕಷ್ಟು ಟೀಕೆಗಳು ಎದುರಾಗಿತ್ತು. ಕೊನೆಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೃಪಕಟಾಕ್ಷದಿಂದಲೇ ಶೋಭಕ್ಕನಿಗೆ ಈ ಕ್ಷೇತ್ರದ ಟಿಕೆಟ್ ಪ್ರಾಪ್ತಿಯಾಗಿತ್ತು ಎಂದು ವರದಿಗಳು ಹೇಳಿದ್ದವು.

ಆದರೆ, “ಚುನಾವಣೆಯಲ್ಲಿ ಗೆದ್ದ ದಿನದಿಂದ ಈವರೆಗೆ ಶೋಭಕ್ಕ ಕ್ಷೇತ್ರಕ್ಕೆ ಆಗಮಿಸಲೇ ಇಲ್ಲ. ಕಾರ್ಯಕರ್ತರ ಜೊತೆಗೂ ಉತ್ತಮ ಬಾಂದವ್ಯ ಇಲ್ಲ. ಈಗ ಚುನಾವಣೆ ಹತ್ತಿರಾಗುತ್ತಿದ್ದಂತೆ ಕ್ಷೇತ್ರಕ್ಕೆ ಆಗಮಿಸಿರುವ ಸಂಸದೆ ತರಾತುರಿಯಿಂದ ಕೆಲಸ ಮಾಡುತ್ತಿದ್ದಾರೆ” ಎಂಬುದು ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಆರೋಪ.

ಒಂದು ನಕಲಿ ಅಂಕಪಟ್ಟಿಯ ಮೂಲಕ ಹೊರಬಿದ್ದ ಅಸಲಿ ಅಳಲು. 
ಒಂದು ನಕಲಿ ಅಂಕಪಟ್ಟಿಯ ಮೂಲಕ ಹೊರಬಿದ್ದ ಅಸಲಿ ಅಳಲು. 

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಅಂಕಪಟ್ಟಿಯನ್ನು ಬಿಡುಗಡೆ ಮಾಡಿರುವ ಉಡುಪಿ-ಚಿಕ್ಕಮಗಳೂರು ಜನ ‘ಮೋದಿ ಯೂನಿವರ್ಸಿಟಿಯಲ್ಲಿ ಸಂಸದೆ ಶೋಭ ಕರಂದ್ಲಾಜೆ ಫೇಲ್. ಪರೀಕ್ಷೆಯಲ್ಲಿ ಶೇ.28.43 ಅಂಕ ಪಡೆದು ಸಂಸದೆ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇವರಿಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಪ್ರವೇಶ ನಿರಾಕರಿಸಲಾಗಿದೆ’ ಎಂಬ ಟ್ಯಾಗ್‌ಲೈನ್‌ ಜೊತೆ ಹರಿಬಿಟ್ಟುರು.

ಫೇಸ್‌ಬುಕ್‌ನಲ್ಲಿ ‘ಶೋಭಕ್ಕ ಹಠಾವೋ’ ಎಂಬ ಪೇಜ್ ಕ್ರಿಯೇಟ್ ಮಾಡಿರುವ ಕೆಲವು ನೆಟ್ಟಿಗರು ‘ಐದು ವರ್ಷ ಕ್ಷೇತ್ರಕ್ಕೆ ಬರದೆ ಚುನಾವಣೆ ಹೊಸ್ತಿಲಲ್ಲಿ ಉಡುಪಿ ಚಿಕ್ಕಮಗಳೂರಿಗೆ ಫ್ಲೈಯಿಂಗ್ ವಿಸಿಟ್ ಕೊಡುವ ಸಂಸದೆ ನಮಗೆ ಬೇಡ’ ಎಂದು ಗೇಲಿ ಮಾಡಿದ್ದಾರೆ. ಇದನ್ನು ಸಾವಿರಾರು ಜನ ಫೇಸ್ ಬುಕ್ ಹಾಗೂ ಟ್ವೀಟರ್‌ನಲ್ಲಿ ಶೇರ್ ಮಾಡುವ ಮೂಲಕ ಸಂಸದೆಯ ವಿರುದ್ಧದ ಅಭಿಯಾನಕ್ಕೆ ಬಲ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭ ಕರಂದ್ಲಾಜೆ, “ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಿದೆ. ಈ ಕಾರಣಕ್ಕಾಗಿ ಕುತಂತ್ರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕೆಲಸ ಮಾಡುತ್ತಿದ್ದಾರೆ. ಗೋ ಬ್ಯಾಕ್ ಶೋಭಾ ಅಭಿಯಾನದ ಹಿಂದೆ ಇಂತಹ ಕೆಲ ಕುತಂತ್ರಿಗಳ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರಾದರೂ, ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂಬ ಕೂಗು ಪಕ್ಷದೊಳಗೆ ದೊಡ್ಡ ಮಟ್ಟದಲ್ಲೇ ಕೇಳಿಬರುತ್ತಿದೆ.

ಕಾರ್ಯಕರ್ತರಿಗೆ ಬೇಡವಾದ ಪ್ರತಾಪ್

ಯುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು. 
ಯುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು. 

ರಾಜಕೀಯವಾಗಿ ಯಾವುದೇ ಅನುಭವ ಇಲ್ಲದಿದ್ದರೂ, ಪತ್ರಕರ್ತರಾಗಿದ್ದುಕೊಂಡು, ಅವತ್ತಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕುರಿತು ಪುಸ್ತಕವೊಂದನ್ನು ಬರೆದು, ನಂತರ ಬಿಜೆಪಿಯಿಂದ ಮೈಸೂರು ಕ್ಷೇತ್ರದ ಸಂಸದರಾದವರು ಪ್ರತಾಪ್ ಸಿಂಹ. ಆದರೆ, ಇದೇ ಪ್ರತಾಪ ಸಿಂಹ ಇಂದು ಕ್ಷೇತ್ರದ ಕಾರ್ಯಕರ್ತರಿಗೆ ಬೇಡವಾಗಿದ್ದಾರೆ.

ಸಂಸದರಾದ ಆರಂಭದ ದಿನಗಳಲ್ಲೆ ಒಂದಲ್ಲಾ ಒಂದು ವಿವಾದಿತ ಹೇಳಿಕೆ ನೀಡುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ನೆಹರೂ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿರುಲು ಪ್ರಯತ್ನಿಸಿದರು. ಇವರ ಈ ನಡವಳಿಕೆ ಕೊನೆಗೆ ಜನ ಬೀದಿಗಿಳಿದು ಹೋರಾಟ ನಡೆಸಲೂ ಕಾರಣವಾಯಿತು.

ಪ್ರತಾಪ ಸಿಂಹ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಮೈಸೂರು ಭಾಗದಲ್ಲಿ ಪಕ್ಷ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ ಎಂದು ಆರಂಭದ ದಿನಗಳಿಂದಲೂ ಬಿಜೆಪಿ ಕಾರ್ಯಕರ್ತರು ಆರೋಪ ಮಾಡುತ್ತಲೇ ಬಂದಿದ್ದರು. ಆದರೂ, ಸಂಸದರ ವಿರುದ್ಧ ಕ್ಷೇತ್ರದ ಜನ ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದದ್ದು ಕೊಡಗಿನಲ್ಲಿ ಉಂಟಾದ ಮಳೆ ದುರಂತದ ಬಳಿಕವೆ.

ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡುಗು ಜಿಲ್ಲೆಯ ಸ್ಥಿತಿಗತಿಯ ಅಧ್ಯಯನ ನಡೆಸುತ್ತಿದ್ದ ಕೇಂದ್ರ ತಂಡದ ಎದುರೇ ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡ ಎಂ.ಬಿ. ದೇವಯ್ಯ “ಕೇಂದ್ರದ ತಂಡಕ್ಕೆ ತಪ್ಪು ಮಾಹಿತಿ ನೀಡಿ ಜಿಲ್ಲೆಯ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ. ನಿಮ್ಮಂತವರನ್ನು ಗೆಲ್ಲಿಸಿದ್ದೆ ಕೊಡಗಿನ ದೊಡ್ಡ ದುರಂತ” ಎಂದು ಆಕ್ರೋಶ ವ್ಯಕ್ತಪಡಿಸುವ ಮೂಲಕ ಸಂಸದರಿಗೆ ಸಾರ್ವಜನಿಕವಾಗಿ ಬಿಸಿ ಮುಟ್ಟಿಸಿದ್ದರು.

ಈ ಪ್ರಕರಣದಿಂದಾಗಿ ಸಾರ್ವಜನಿಕವಾಗಿ ಮುಜುಗರಕ್ಕೀಡಾಗಿದ್ದ ಸಂಸದ ಪ್ರತಾಪ ಸಿಂಹ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಂಸದರನ್ನು ಬದಲಿಸಿ ಎಂಬು ಕೂಗು ದೊಡ್ಡ ಮಟ್ಟದಲ್ಲೇ ಕೇಳಿಬಂದಿತ್ತು. ಅಲ್ಲದೆ ಪ್ರಸ್ತುತ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಜನ ಕಳೆದ 5 ವರ್ಷದ ಅಭಿವೃದ್ಧಿಯ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಪ್ರತಾಪ ಸಿಂಹ ಅವರಿಗೆ ಟಿಕೆಟ್ ನೀಡಬಾರದು ಎಂಬ ಕೂಗು ಸ್ವಪಕ್ಷೀಯರಿಂದಲೇ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.

ಕಟೀಲ್‌ರಿಗೆ ಎದುರಾದ ಅಭಿವೃದ್ಧಿ ಪ್ರಶ್ನೆ?

ನಳೀನ್ ಕುಮಾರ್ ಕಟೀಲ್ ವಿರುದ್ಧ ಎದ್ದಿರುವ ಜನಾಕ್ರೋಶ. 
ನಳೀನ್ ಕುಮಾರ್ ಕಟೀಲ್ ವಿರುದ್ಧ ಎದ್ದಿರುವ ಜನಾಕ್ರೋಶ. 

ತಮ್ಮ ಸ್ವಕ್ಷೇತ್ರದಲ್ಲೇ ಭಾರೀ ಜನಾಕ್ರೋಶ ಎದುರಿಸುತ್ತಿರುವ ಮತ್ತೊಬ್ಬ ಬಿಜೆಪಿ ನಾಯಕ ಎಂದರೆ ನಳಿನ್ ಕುಮಾರ್ ಕಟೀಲ್.

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಅವರನ್ನು ಬದಲಿಸುವಂತೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕೂಗು ಕೇಳಿ ಬರುತ್ತಿದೆ. ಅಲ್ಲದೆ ಕೆಲವು ಪಕ್ಷದ ಕಾರ್ಯಕರ್ತರೆ ಒಟ್ಟಾಗಿ ‘2019-ದಕ್ಷಿಣಕನ್ನಡ ಅಭ್ಯರ್ಥಿ ಬದಲಿಸಿ ಬಿಜೆಪಿ ಗೆಲ್ಲಿಸಿ’ ಎಂಬ ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿದ್ದು, ಈ ಪೇಜ್‌ಗೆ ಬಾರಿ ಮಟ್ಟದ ಜನಬೆಂಬಲ ವ್ಯಕ್ತವಾಗಿದೆ.

“ಕಳೆದ 5 ವರ್ಷದಲ್ಲಿ ಸಂಸದರು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮಾಡಿರುವುದಾದರೂ ಏನು?” ಎಂದು ಕಾರ್ಯಕರ್ತರು ಸಾರ್ವಜನಿಕರು ಬಹಿರಂಗವಾಗಿ ಪ್ರಶ್ನಿಸುತ್ತಿದ್ದಾರೆ. “ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನೇ ತುಳಿದು ಸರ್ವಾಧಿಕಾರ ಮೆರೆವ ಅಸಮರ್ಥ ನಾಯಕನ ಮರು ಆಯ್ಕೆಗೆ ಜಿಲ್ಲೆಯ ಸಾವಿರಾರು ಕಾರ್ಯಕರ್ತರ ವಿರೋಧವಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ನಾಯಕನ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಕ್ಷೇತ್ರದಲ್ಲಿ ಅವರಿಗೆ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸಬೇಕು ಎಂಬ ಆಕಾಂಕ್ಷೆ ಇದೆ. ಆದರೆ, ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಆಯ್ಕೆಯಾಗುವುದು ಅವರಿಗೆ ಇಷ್ಟವಿದ್ದಂತೆ ಕಾಣುತ್ತಿಲ್ಲ. ಅದಕ್ಕೆ ಮಂಗಳೂರಿನಲ್ಲಿ ಇನ್ನೂ ಪೂರ್ಣಗೊಳ್ಳದ ಪ್ಲೈ ಓವರ್‌ಗಳು ಮೂಕ ಸಾಕ್ಷಿಗಳಾಗಿ ನಿಂತಿವೆ.

ನೀರು ಬರದಿದ್ದರೆ ನೀವೂ ಬರಬೇಡಿ ಮೊಯ್ಲಿ:

ವೀರಪ್ಪ ಮೊಯ್ಲಿ ಬಗ್ಗೆಯೂ ತೃಪ್ತಿ ಇಲ್ಲದ ಮತದಾರರ ಪ್ರತಿಕ್ರಿಯೆ. 
ವೀರಪ್ಪ ಮೊಯ್ಲಿ ಬಗ್ಗೆಯೂ ತೃಪ್ತಿ ಇಲ್ಲದ ಮತದಾರರ ಪ್ರತಿಕ್ರಿಯೆ. 

ರಾಜ್ಯದಲ್ಲಿ ಗೋ-ಬ್ಯಾಕ್ ಅಭಿಯಾನಕ್ಕೆ ತುತ್ತಾಗಿರುವ ಏಕೈಕ ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡ ಮೂಲದ ವೀರಪ್ಪ ಮೊಯ್ಲಿ.

ಚಿಕ್ಕಬಳ್ಳಾಪುರ ರಾಜ್ಯದ ಶಾಶ್ವತ ಬರಪೀಡಿತ ಜಿಲ್ಲೆ. ಹೀಗಾಗಿ ಕಳೆದ ಚುನಾವಣೆಯಲ್ಲಿ ಎರಡು ವರ್ಷದಲ್ಲಿ ಜಿಲ್ಲೆಗೆ ಎತ್ತಿನ ಹೊಳೆ ನೀರನ್ನು ತರುವುದಾಗಿ ವೀರಪ್ಪ ಮೊಯ್ಲಿ ಜನರಿಗೆ ಆಶ್ವಾಸನೆ ನೀಡಿದ್ದರು. ಆದರೆ, ಈವರೆಗೆ ಜಿಲ್ಲೆಗೆ ನೀರು ತರುವಲ್ಲಿ ಸಫಲರಾಗಿಲ್ಲ. ಈ ನಡುವೆ ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆಯೂ ಕುಂಟುತ್ತಾ ಸಾಗುತ್ತಿದ್ದು, ಜನ ಕುಡಿಯಲೂ ಸಹ ನೀರಿಲ್ಲದ ಪರದಾಡುವ ಸ್ಥಿತಿ ಎದುರಾಗಿದೆ.

ಹೀಗಾಗಿ ಕಳೆದ ಚುನಾವಣೆಯಲ್ಲಿ ಸಂಸದ ವೀರಪ್ಪ ಮೋಯ್ಲಿ ತಾನು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ‘ಮಾತು ತಪ್ಪಿದ ಸಂಸದ ಗೋ ಬ್ಯಾಕ್’ ಎಂಬ ಹ್ಯಾಷ್‌ ಟ್ಯಾಗ್ ಮೂಲಕ ಕ್ಷೇತ್ರದ ಜನ ಮೊಯ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯುದ್ಧವನ್ನೇ ಹೂಡಿದ್ದಾರೆ. ಈ ಬಾರಿ ಬಿಜೆಪಿಯ ಬಚ್ಚೇಗೌಡ ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿಗೆ ಪ್ರಬಲ ಪೈಪೋಟಿ ನೀಡಲು ಸಿದ್ಧರಾಗಿದ್ದಾರೆ.

ಶಾಸಕರನ್ನು ಸಂಸದರನ್ನು ಜನ ಆಯ್ಕೆ ಮಾಡಿ ಅಧಿಕಾರದಲ್ಲಿ ಕೂರಿಸುವುದು ಅಭಿವೃದ್ಧಿಗಾಗಿ. ಆದರೆ, ಅವರು ಅಭಿವೃದ್ಧಿ ಕೆಲಸದಲ್ಲಿ ಸೋತರೆ ಅವರನ್ನು ಪ್ರಶ್ನಿಸುವ ಎಲ್ಲಾ ಅಧಿಕಾರವೂ ಸಾಮಾನ್ಯ ಜನರಿಗಿರುತ್ತದೆ ಎಂಬುದು ಪ್ರಜಾಪ್ರಭುತ್ವದ ಮೊದಲ ಪಾಠ. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹೀಗೆ ಅಭಿವೃದ್ಧಿ ಕೆಲಸದಲ್ಲಿ ವಿಫಲಗೊಂಡ ರಾಜಕಾರಣಿಗಳನ್ನು ಜನಸಾಮಾನ್ಯರು ನೇರಾ ನೇರಾ ಪ್ರಶ್ನೆ ಮಾಡುವ ಕಣವಾಗಿ ಬದಲಾಗಿದೆ. ಅದೂ ಚುನಾವಣೆಗೆ ನಿಲ್ಲುವ ಮುಂಚೆಯೇ...

ಆದರೆ ಇಂತಹ ಪ್ರತಿರೋಧಗಳನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತವಾ? ಎಂಬುದು ಪ್ರಶ್ನೆ.

“ನಮ್ಮಲ್ಲಿ ಇಂತಹ ವಿಚಾರಗಳು ಬಂದಾಗ ಒಂದೇ ಒಂದು ಪಕ್ಷ ಪ್ರಬುದ್ಧವಾಗಿ ರಾಜಕೀಯ ಉತ್ತರ ನೀಡಿದ ಉದಾಹರಣೆಗಳು ಇಲ್ಲ. ಜನರ ದನಿಗಳನ್ನು ಗುರುತಿಸಲು ಆನ್‌ಲೈನ್ ಮೀಡಿಯಾ ಇವತ್ತು ಬಳಕೆಯಾಗುತ್ತದೆ. ಇದೇ ರಾಜಕೀಯ ಪಕ್ಷಗಳು, ನಾಯಕರು ತಮ್ಮ ಬ್ರಾಂಡ್ ಪ್ರಚಾರಕ್ಕೆ ಅನ್‌ಲೈನ್ ಮೀಡಿಯಾಗಳ ಮೊರೆ ಹೋಗುತ್ತಾರೆ. ಆದರೆ ಅಲ್ಲಿ ತಮ್ಮ ಬಗೆಗೆ ಅಪಸ್ವರ ಕೇಳಿ ಬಂದಾಗ ಅದನ್ನು ಎದುರುಗೊಳ್ಳದೆ ಹೋಗುವುದು ವಿಚಿತ್ರ ನಡವಳಿಕೆ,’’ ಎನ್ನುತ್ತಾರೆ ಮನೋ ವಿಜ್ಞಾನಿ ಡಾ. ಎ. ಶ್ರೀಧರ್.