samachara
www.samachara.com
ನ್ಯೂಜಿಲ್ಯಾಂಡ್‌ ಮಸೀದಿ ಮೇಲಿನ ಭಯೋತ್ಪಾದಕ ದಾಳಿಗೆ 49 ಬಲಿ; ಕೂದಲೆಳೆಯಲ್ಲಿ ಪಾರಾದ ಬಾಂಗ್ಲಾ ಕ್ರಿಕೆಟಿಗರು
COVER STORY

ನ್ಯೂಜಿಲ್ಯಾಂಡ್‌ ಮಸೀದಿ ಮೇಲಿನ ಭಯೋತ್ಪಾದಕ ದಾಳಿಗೆ 49 ಬಲಿ; ಕೂದಲೆಳೆಯಲ್ಲಿ ಪಾರಾದ ಬಾಂಗ್ಲಾ ಕ್ರಿಕೆಟಿಗರು

ಓರ್ವ ಬಂದೂಕುಧಾರಿ ಗುಂಡಿನ ದಾಳಿಯನ್ನು ನೇರ ಪ್ರಸಾರ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಹಂಚಿಕೊಳ್ಳದಂತೆ ಪೊಲೀಸರು ಸೂಚಿಸಿದ್ದಾರೆ.

ಕ್ರಿಕೆಟ್‌ ಪ್ರೇಮಿಗಳು ಕೇಳಿರಬಹುದಾದ ನ್ಯೂಜಿಲ್ಯಾಂಡ್‌ನ ನಗರ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳ ಮೇಲೆ ಶುಕ್ರವಾರ ಗುಂಡಿನ ದಾಳಿ ನಡೆದಿದೆ.

ಭಯೋತ್ಪಾದಕರ ಈ ದಾಳಿಯಲ್ಲಿ ಕನಿಷ್ಠ 49 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ದಾಳಿಗೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ನಗರದ ಪೊಲೀಸ್‌ ಆಯುಕ್ತ ಮೈಕ್‌ ಬುಷ್‌ ತಿಳಿಸಿದ್ದಾರೆ. ಹಾಗಂತ ಆತಂಕ ಇನ್ನೂ ದೂರವಾಗಿಲ್ಲ ಎಂದು ಅವರು ಹೇಳಿದ್ದಾರೆ.

“ಕಪ್ಪು ಬಟ್ಟೆ ತೊಟ್ಟು ಹೆಲ್ಮೆಟ್‌ ಧರಿಸಿದ್ದ ವ್ಯಕ್ತಿ ಕೈಯಲ್ಲಿ ಮೆಷೀನ್‌ ಗನ್‌ ಹಿಡಿದು ಮಸ್ಜಿದ್‌ ಅಲ್‌ ನೂರ್‌ಗೆ ನುಗ್ಗಿ ಪ್ರಾರ್ಥನೆಯಲ್ಲಿ ನಿರತರಾಗಿದ್ದವರ ಮೇಲೆ ಗುಂಡಿನ ಮಳೆಗರೆದ,” ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕ್ರೈಸ್ಟ್‌ಚರ್ಚ್‌ನ ಲಿನ್‌ವುಡ್‌ನಲ್ಲಿರುವ ಮಸೀದಿ ಮೇಲೆಯೂ ಶುಕ್ರವಾರದ ಪ್ರಾರ್ಥನೆ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಗುಂಡಿನ ದಾಳಿ ನಡೆದ ಎರಡು ಮಸೀದಿಗಳ ನಡುವಿನ ಅಂತರ.
ಗುಂಡಿನ ದಾಳಿ ನಡೆದ ಎರಡು ಮಸೀದಿಗಳ ನಡುವಿನ ಅಂತರ.
/ಬಿಬಿಸಿ

“ಮಸೀದಿಗಳ ಮೇಲಿನ ದಾಳಿ ಅತ್ಯಂತ ಯೋಜಿತ ಭಯೋತ್ಪಾದನಾ ಕೃತ್ಯ” ಎಂಬುದಾಗಿ ಅಲ್ಲಿನ ಪ್ರಧಾನಿ ಜೇಸಿಂದಾ ಆರ್ಡೆರ್ನ್‌ ತಿಳಿಸಿದ್ದಾರೆ. ಜತೆಗೆ “ಇದು ನ್ಯೂಜಿಲ್ಯಾಂಡ್‌ ಪಾಲಿನ ಕರಾಳ ದಿನ’ ಎಂದು ಕರೆದಿದ್ದಾರೆ. ದಾಳಿ ಬೆನ್ನಿಗೆ ನ್ಯೂಜಿಲ್ಯಾಂಡ್‌ನಲ್ಲಿರುವ ಎಲ್ಲಾ ಮಸೀದಿಗಳನ್ನು ಮುಚ್ಚಲು ಆದೇಶ ನೀಡಲಾಗಿದ್ದು, ಪ್ರಾರ್ಥನೆಗೆ ತೆರಳದಂತೆ ಸರಕಾರ ಮುಸ್ಲಿಂ ಸಮುದಾಯದವರಿಗೆ ತಿಳಿಸಿದೆ.

ಬಲಪಂಥೀಯ ದಾಳಿ

ಪ್ರತ್ಯಕ್ಷದರ್ಶಿ ಲೆನ್‌ ಲೆನ್ನಾ ಪ್ರಕಾರ, “ಶುಕ್ರವಾರ ಮುಂಜಾನೆ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿ ಮಸ್ಜಿದ್‌ ಅಲ್‌ ನೂರ್‌ ಒಳಗಡೆ ತೆರಳಿದ. ಆತ ಒಳಹೋದ ಬೆನ್ನಿಗೆ ಗುಂಡಿನ ಮೊರೆತ ಕೇಳಿಸಿತು. ಈ ಸಂದರ್ಭದಲ್ಲಿ ಜನರು ಮಸೀದಿಯಿಂದ ಹೊರಗೆ ಓಡಿ ಬಂದಿದ್ದಾರೆ.” ಅಲ್ಲಿಗೆ ಭದ್ರತಾ ಪಡೆಗಳು ತೆರಳುವಷ್ಟರಲ್ಲಿ ಉಗ್ರರು ಪರಾರಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ್ಕೆ ನಾನು ಮಸೀದಿ ಒಳಗೆ ಒಡಿದೆ. ನೆಲದ ಮೇಲೆಲ್ಲಾ ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂಬುದಾಗಿ ಪೆನ್ನಾ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಎದ್ದು ಬಂದ. ಆತನ ಬಟ್ಟೆ ಪೂರ್ತಿ ರಕ್ತದಿಂದ ತುಂಬಿಕೊಂಡಿತ್ತು. ಆತ ಶೂಟಿಂಗ್‌ ನಡೆಯುವಾಗ ಬೆಂಚಿನ ಕೆಳಗಿ ಅಡಗಿ ಕುಳಿತಿದ್ದ. ಶೂಟಿಂಗ್‌ ನಡೆಯುವಾಗ ಒಳಗೆ 50 ಜನರಿದ್ದರು ಎಂದು ಆತ ಹೇಳಿದ ಎಂಬ ವಿವರಗಳನ್ನು ಅವರು ಮಾಧ್ಯಮಗಳಿಗೆ ನೀಡಿದ್ದಾರೆ.

ದಾಳಿ ವೇಳೆ ಕೆಲವರು ಕಿಟಕಿ, ಬಾಗಿಲುಗಳ ಮೂಲಕ ಪರಾರಿಯಾಗಿದ್ದಾರೆ. ಆದರೆ ಇನ್ನುಳಿದವರಿಗೆ ಗುಂಡೇಟು ಬಿದ್ದಿದೆ. ಸಾವಿಗೀಡಾದವರು ಮತ್ತು ಗುಂಡೇಟು ತಿಂದು ಮೇಲೆ ಏಳಲು ಸಾಧ್ಯವಾಗದ ಸುಮಾರು 20 ಜನರು ಅಲ್ಲಿದ್ದರು ಎಂಬುದಾಗಿ ಅಂದಾಜು ಲೆಕ್ಕವನ್ನು ಅವರು ಮುಂದಿಟ್ಟಿದ್ದಾರೆ.

ಗುಂಡಿನ ದಾಳಿಯ ನೇರ ಪ್ರಸಾರದ ಸ್ಕ್ರೀನ್‌ಗ್ರಾಬ್‌.
ಗುಂಡಿನ ದಾಳಿಯ ನೇರ ಪ್ರಸಾರದ ಸ್ಕ್ರೀನ್‌ಗ್ರಾಬ್‌.

ಸಾಮಾಜಿಕ ಜಾಲತಾಣದಲ್ಲಿ ಲೈವ್‌:

ಓರ್ವ ಬಂದೂಕುಧಾರಿ ಗುಂಡಿನ ದಾಳಿಯನ್ನು ನೇರ ಪ್ರಸಾರ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಹಂಚಿಕೊಳ್ಳದಂತೆ ಪೊಲೀಸರು ಸೂಚಿಸಿದ್ದಾರೆ. ಜತೆಗೆ ಇದನ್ನು ಜಾಲತಾಣಗಳಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಈತ ದಾಳಿ ನಂತರ ಯಾಕೆ ದಾಳಿ ಮಾಡಿದೆ ಎಂಬ ವಿವರಗಳನ್ನು ಬಿಟ್ಟು ಹೋಗಿದ್ದಾನೆ. ಸುಮಾರು 37 ಪುಟಗಳ ಪ್ರಣಾಳಿಕೆಯಲ್ಲಿ ದಾಳಿಯ ಉದ್ದೇಶವನ್ನು ವಿವರಿಸಲಾಗಿದೆ. ವಿವರಗಳು ಇನ್ನೂ ಲಭ್ಯವಾಗಬೇಕಿದೆ.

ಬಾಂಗ್ಲಾದೇಶ ಕ್ರಿಕೆಟಿಗರು ಪಾರು:

ದಾಳಿ ನಡೆಯುವ ಸಂದರ್ಭದಲ್ಲಿ ಮಸೀದಿಯ ಪಕ್ಕದಲ್ಲೇ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸದಸ್ಯರೂ ಇದ್ದರು ಎಂದು ತಿಳಿದು ಬಂದಿದೆ. ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್‌ ನಡುವೆ ಶನಿವಾರ ಟೆಸ್ಟ್‌ ಪಂದ್ಯ ಆರಂಭವಾಗಲಿದ್ದು ಅದಕ್ಕೂ ಮೊದಲು ಇವರೆಲ್ಲರೂ ನಗರಕ್ಕೆ ಬಂದಿದ್ದರು. ದಾಳಿ ವೇಳೆ ಮಸೀದಿಗೆ ತೀರಾ ಸಮೀಪದಲ್ಲಿ ಇದ್ದರು ಎಂಬುದಾಗಿ ಇಎಸ್‌ಪಿಎನ್‌ ವರದಿಗಾರ ಮೊಹಮ್ಮದ್‌ ಇಸಾಂ ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್‌ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇಕಡಾ 1 ರಷ್ಟಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ನ್ಯೂಜಿಲ್ಯಾಂಡ್‌ಗೆ ವಲಸೆ ಬಂದವರಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇದೇ ವಲಸೆ ಬಂದ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಜಿಲ್ಯಾಂಡ್‌ ಪಾಲಿಗೆ ಹಿಂಸಾತ್ಮಕ ದಾಳಿ ಎಂಬುದು ಅಪರೂಪದಲ್ಲಿ ಅಪರೂಪದ ಘಟನೆ. ಈ ಹಿಂದೆ ಇಲ್ಲಿನ ಅರಮಾನಾದಲ್ಲಿ ಡೇವಡ್‌ ಗ್ರೇ ಎಂಬಾತ ಅಕ್ಕಪಕ್ಕದ ಮನೆಯವರ ಮೇಲೆ ಸಿಟ್ಟಾಗಿ 13 ಜನರು ಗುಂಡಿಟ್ಟು ಕೊಂದು ಹಾಕಿದ್ದ. ಈ ಘಟನೆ 1990ರಲ್ಲಿ ನಡೆದಿತ್ತು. ಅದೇ ಕೊನೆ. ಅಲ್ಲಿಂದ ನಂತರ ಯಾವುದೇ ಪ್ರಮುಖ ಭಯೋತ್ಪಾದನಾ ಕೃತ್ಯಗಳು ನ್ಯೂಜಿಲ್ಯಾಂಡ್‌ನಲ್ಲಿ ನಡೆದಿಲ್ಲ.

ಚಿತ್ರ ಕೃಪೆ: ದಿ ಸ್ಟ್ರೈಟ್ಸ್‌ ಟೈಮ್ಸ್‌