samachara
www.samachara.com
ಮೈತ್ರಿ ಎಂದರೆ ಸಾಕು, ಕಾಂಗ್ರೆಸ್‌ನಿಂದ ಪ್ರಾದೇಶಿಕ ಪಕ್ಷಗಳೇಕೆ ಮಾರು ದೂರ ಓಡುತ್ತಿವೆ?
COVER STORY

ಮೈತ್ರಿ ಎಂದರೆ ಸಾಕು, ಕಾಂಗ್ರೆಸ್‌ನಿಂದ ಪ್ರಾದೇಶಿಕ ಪಕ್ಷಗಳೇಕೆ ಮಾರು ದೂರ ಓಡುತ್ತಿವೆ?

ಮಹಾಘಟಬಂಧನ್ ಮೂಲಕ ಬಿಜೆಪಿಗೆ ಆಘಾತ ನೀಡಬೇಕೆಂಬುದು ಕಾಂಗ್ರೆಸ್ ಉದ್ದೇಶವಾಗಿತ್ತು. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕಡೆಗೆ ಕಣ್ಣಾಯಿಸಿದರೆ ಸ್ಥಳೀಯ ಪಕ್ಷಗಳೆ ಒಟ್ಟಾಗಿ ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿರುವುದು ಗೋಚರಿಸುತ್ತದೆ.

ಬಿಜೆಪಿಯೇತರ ಎಲ್ಲಾ ಪಕ್ಷಗಳೂ ಒಗ್ಗಟ್ಟಾಗಬೇಕು ಆ ಮೂಲಕ ಬಲಪಂಥೀಯರನ್ನು ಅಧಿಕಾರದಿಂದ ದೂರವಿಡಬೇಕು ಎಂದು ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಹೇಳುತ್ತಲೇ ಬಂದಿತ್ತು. ಆದರೆ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿರುವ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿಸುವ ಬರದಲ್ಲಿ ಕಾಂಗ್ರೆಸ್ ಪಕ್ಷವೇ ಏಕಾಂಗಿಯಾಗಿದೆ.

ಮಹಾಘಟಬಂಧನ್ ಮೂಲಕ ಬಿಜೆಪಿಗೆ ಮರ್ಮಾಘಾತ ನೀಡಬೇಕು ಎಂಬುದು ಕಾಂಗ್ರೆಸ್ ಉದ್ದೇಶವಾಗಿತ್ತು. ಆದರೆ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಎಲ್ಲಾ ಸ್ಥಳೀಯ ಪಕ್ಷಗಳು ಒಟ್ಟಾಗಿ ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿರುವುದು ಗೋಚರಿಸುತ್ತಿದೆ.

ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಜೊತೆಗಿನ ಮೈತ್ರಿಗೆ ಬೆನ್ನುತೋರಿಸಲು ಕಾರಣವೇನು? ಅದೀಗ ಹುಟ್ಟಿಕೊಂಡಿರುವ ಪ್ರಶ್ನೆ.

ಕೈಕೊಟ್ಟ ಎಸ್‌ಪಿ-ಬಿಎಸ್‌ಪಿ:

ಬಿಎಸ್‌ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಎಸ್‌ಪಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ.
ಬಿಎಸ್‌ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಎಸ್‌ಪಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ.

ದೇಶದಲ್ಲೇ ಅತಿಹೆಚ್ಚು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ರಾಜ್ಯ ಉತ್ತರಪ್ರದೇಶ. ಉತ್ತರ ಪ್ರದೇಶವನ್ನು ಗೆದ್ದವರು ದೇಶವನ್ನೇ ಗೆದ್ದಂತೆ ಎಂಬ ಮಾತು 70ರ ದಶಕದಿಂದ ಚಾಲ್ತಿಯಲ್ಲಿರುವ ಪ್ರಖ್ಯಾತ ರಾಜಕೀಯ ನಾಡ್ನುಡಿ. 80ರ ದಶಕದವರೆಗೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಮೇಲುಗೈ ಸಾಧಿಸಿತ್ತು. ಆದರೆ ತದನಂತರದ ಕಾಲದಲ್ಲಿ ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜವಾದಿ ಪಾರ್ಟಿ ತಮ್ಮ ಪಾರುಪತ್ಯವನ್ನು ಆರಂಭಿಸಿದ್ದವು.

ಆದರೆ ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳು ಉತ್ತರಪ್ರದೇಶದ ರಾಜಕೀಯ ದಿಕ್ಕನ್ನೇ ಬದಲಿಸಿವೆ. ಈ ರಾಜ್ಯದಲ್ಲಿ ಬಿಜೆಪಿ ಇದೀಗ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಕಳೆದ ಎರಡೂ ಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಇಲ್ಲಿ ಎದುರಾಳಿಗಳಿಗೆ ತೋರಿಸಿದೆ.

ಉತ್ತರಪ್ರದೇಶದಲ್ಲಿ ಏಕಾಂಗಿಯಾಗಿ ಯಾರೂ ಬಿಜೆಪಿ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಈ ಹಿಂದಿನ ಎಲ್ಲಾ ಕಹಿ ಘಟನೆ ಹಾಗೂ ವಿರೋಧಗಳನ್ನು ಮರೆತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಒಂದಾಗಿವೆ.

ಪರಿಣಾಮ ಕಳೆದ ವರ್ಷ ಬಿಜೆಪಿ ಪ್ರಾಬಲ್ಯವಿದ್ದ ಗೋರಕ್‌ ಪುರ್ ಹಾಗೂ ಫುಲ್ ಪುರ್‌ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷ ಜಯಭೇರಿ ಬಾರಿಸಿತ್ತು. 2019 ರ ಲೋಕಸಭಾ ಚುನಾವಣೆಯಲ್ಲೂ ಇಂತಹದ್ದೇ ಫಲಿತಾಂಶದ ನಿರೀಕ್ಷೆಯಲ್ಲಿದೆ ಅಖಿಲೇಶ್ ಮಾಯಾವತಿ ಮೈತ್ರಿ.

ಪ್ರಸ್ತುತ ಉತ್ತರಪ್ರದೇಶದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಜಾತ್ಯಾತೀತ ನಿಲುವನ್ನು ಹೊಂದಿರುವ ಎಸ್‌ಪಿ-ಬಿಎಸ್‌ಬಿ ಮೈತ್ರಿಯಲ್ಲಿ ತನಗೂ ಒಂದಷ್ಟು ಪಾಲು ಸಿಗಬಹುದು ಎಂದು ಊಹಿಸಿತ್ತು. ಈ ರಾಜ್ಯದಲ್ಲಿ ಮೈತ್ರಿ ಸಾಧಿಸಲು ಸಾಕಷ್ಟು ಕಸರತ್ತು ನಡೆಸಿತ್ತು.

ಆದರೆ, ಸ್ವತಃ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿರುವ ಮಾಯಾವತಿ ಮಹಾಘಟಬಂಧನ್‌ ಸಮಾವೇಶದಲ್ಲಿ ಪಾಲ್ಗೊಂಡು ಎಲ್ಲಾ ನಾಯಕರ ಜೊತೆಗೂಡಿ ಕೈ ಎತ್ತಿ ಸಂಭ್ರಮಿಸಿದರು. ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಸುತಾರಂ ಒಪ್ಪಲು ಸಿದ್ದವಾಗಿರಲಿಲ್ಲ. ಅಲ್ಲದೆ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

ಕರ್ನಾಟಕ ಮೈತ್ರಿ ಸರಕಾರದಲ್ಲಿ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವರಾಗಿದ್ದ ಏಕೈಕ ಬಿಎಸ್‌ಪಿ ಶಾಸಕ ಎನ್‌. ಮಹೇಶ್ ರಾಜೀನಾಮೆ ಕೊಡಿಸಿದರು. ಅಲ್ಲಿಗೆ ಎಸ್‌ಪಿ-ಬಿಎಸ್‌ಪಿ ಕಾಂಗ್ರೆಸ್ ಮೈತ್ರಿ ಸಾಧ್ಯಾಸಾಧ್ಯತೆಗೆ ಹಲವಾರು ತಿಂಗಳ ಹಿಂದೆಯೇ ಎಳ್ಳು ನೀರು ಬಿಟ್ಟಂತಾಗಿದೆ.

ಪರಿಣಾಮ ಉತ್ತರಪ್ರದೇಶದಲ್ಲಿ ಏಕಾಂಗಿ ಹೋರಾಟಕ್ಕೆ ಇಳಿದಿರುವ ಕಾಂಗ್ರೆಸ್ ಕೆಲವು ಸ್ಥಾನಗಳನ್ನಾದರೂ ಗೆಲ್ಲುವ ಸಲುವಾಗಿ ಕೊನೆಯ ಅಸ್ತ್ರ ಎಂಬಂತೆ ಪ್ರಿಯಾಂಕ ವಾದ್ರಾ ಅರನ್ನು ಕಣಕ್ಕಿಳಿಸಿ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.

ಭರವಸೆಯಾಗದ ಬ್ಯಾನರ್ಜಿ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
/ದಿ ಏಷಿಯನ್ ಏಜ್

ಮಹಾಘಟಬಂಧನ್‌ನಲ್ಲಿ ಮತ್ತೊಂದು ಪ್ರಬಲ ಪ್ರಾದೇಶಿಕ ಪಕ್ಷ ಎಂದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್. 2011 ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಹುಮತದೊಂದಿಗೆ ಆಯ್ಕೆಯಾದ ತೃಣಮೂಲ ಕಾಂಗ್ರೆಸ್ ಸರಕಾರ ರಚನೆ ಮಾಡಿತ್ತು. ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. 2016 ರಲ್ಲೂ ಬಂಗಾಳದ ಜನರ ಆಶೀರ್ವಾದ ಪಡೆಯುವಲ್ಲಿ ದೀದಿ ಸಫಲರಾಗಿದ್ದರು.

ಈ ಚುನಾವಣೆಯಲ್ಲಿ 295 ವಿಧಾನಸಭಾ ಕ್ಷೇತ್ರಗಳ ಪೈಕಿ 44 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿದ್ದ ಕಾಂಗ್ರೆಸ್ ಪಶ್ಚಿಮ ಬಂಗಾಳದ ವಿರೋಧ ಪಕ್ಷ ಸ್ಥಾನದಲ್ಲಿದೆ.

ಬಂಗಾಳದಲ್ಲಿ ಮುಖ್ಯಮಂತ್ರಿ ಗಾದಿಗೆ ಏರುವ ಮುನ್ನ ಮಮತಾ ಬ್ಯಾನರ್ಜಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ರೈಲ್ವೆ ಮಂತ್ರಿಯೂ ಆಗಿದ್ದರು. ಇದೇ ಕಾರಣಕ್ಕೆ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಒಂದಷ್ಟು ಸ್ಥಾನವನ್ನು ಗಳಿಸುವ ಗುರಿಯನ್ನು ಹೊಂದಿತ್ತು ಕಾಂಗ್ರೆಸ್.

ಆದರೆ, ಮಮತಾ ಬ್ಯಾನರ್ಜಿ ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಕೊನೆವರೆಗೂ ಹಸಿರು ನಿಶಾನೆ ತೋರಲೇ ಇಲ್ಲ. ಅಲ್ಲದೆ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸೂಚನೆಯನ್ನು ಈಗಾಗಲೇ ದೀದಿ ನೀಡಿದ್ದಾರೆ. ಬಂಗಾಳದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಹೀಗಾಗಿ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 35 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿವೆ.

ಇದೇ ಕಾರಣಕ್ಕೆ ಜನವರಿ 19 ರಂದು ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಪ್ರತಿಪಕ್ಷಗಳ ಮೆಗಾ ರ್ಯಾಲಿಗೆ ರಾಹುಲ್ ಗಾಂಧಿ ಆಗಮಿದೆ ನೆಪ ಮಾತ್ರಕ್ಕೆ ಎಂಬಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜಿನ ಖರ್ಗೆಯನ್ನು ಕಳುಹಿಸಿದ್ದರು. ಅಲ್ಲಿಗೆ ಕಾಂಗ್ರೆಸ್‌ ಪಾಲಿಗೆ ಪಶ್ಚಿಮ ಬಂಗಾಳದ ಮೈತ್ರಿ ಸಾಧ್ಯತೆಯೂ ಕೈತಪ್ಪಿದಂತಾಗಿದೆ.

ಸ್ಥಳೀಯ ಪಕ್ಷಗಳ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಮೈತ್ರಿ ಸೂತ್ರಕ್ಕೆ ಕಾಂಗ್ರೆಸ್ ಸಿದ್ಧವಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ನಾಯಕರಲ್ಲಿ ಒಮ್ಮತ ಮೂಡದ ಕಾರಣ ಮೈತ್ರಿ ಸಾಧ್ಯವಾಗಿಲ್ಲ ಅಷ್ಟೇ. ಮೈತ್ರಿ ಇಲ್ಲದೆಯೂ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸುವ ವಿಶ್ವಾಸವಿದೆ. 
ದಿನೇಶ್ ಗುಂಡೂರಾವ್, ರಾಜ್ಯಾಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್

ಮೈತ್ರಿಗೆ ಸಿದ್ದವಿಲ್ಲದ ಟಿಡಿಪಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆಗೆ ರಾಹುಲ್ ಗಾಂಧಿ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆಗೆ ರಾಹುಲ್ ಗಾಂಧಿ.
/ ನ್ಯೂಸ್ 18

ದಕ್ಷಿಣ ಭಾರತದ ಪ್ರಬಲ ಪ್ರಾದೇಶಿಕ ಪಕ್ಷಗಳ ಪೈಕಿ ಅಂಧ್ರಪ್ರದೇಶದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸಹ ಒಂದು. ಚಂದ್ರಬಾಬು ನೇತೃತ್ವದ ತೆಲುಗು ದೇಶಂ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಆಂಧ್ರದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ.

2018 ರಲ್ಲಿ ಅಂತ್ಯದಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ಟಿಡಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಎದುರಿಸಿದ್ದವು. ಆದರೆ, ಫಲಿತಾಂಶ ಮಾತ್ರ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಪರವಾಗಿತ್ತು. ಕೆ. ಚಂದ್ರಶೇಖರ್ ರಾವ್ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಈ ಚುನಾವಣೆಯ ಸೋಲಿನ ನಂತರವೂ ಟಿಡಿಪಿ ಜೊತೆಗೆ ಮೈತ್ರಿ ಮುಂದುವರೆಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆದರೆ ಟಿಡಿಪಿ ಇದಕ್ಕೆ ಸಿದ್ಧವಿದ್ದಂತೆ ಕಂಡುಬರುತ್ತಿಲ್ಲ.

25 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಆಂಧ್ರಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಯಶಸ್ವಿಯಾಗಿತ್ತು. ಈ ಬಾರಿ ಮೈತ್ರಿ ಮೂಲಕ ಒಂದಷ್ಟು ಸ್ಥಾನಗಳನ್ನು ಹೆಚ್ಚಾಗಿ ಗಳಿಸುವ ತವಕದಲ್ಲಿದೆ. ಆದರೆ, ಈಗಾಗಲೇ ಮಮತ ಬ್ಯಾನರ್ಜಿ ಜೊತೆಗೆ ಕೈಜೋಡಿಸಿರುವ ಚಂದ್ರಬಾಬು ನಾಯ್ಡು ಮಾನಸಿಕವಾಗಿ ಕಾಂಗ್ರೆಸ್‌ನಿಂದ ಬಹುದೂರ ಕ್ರಮಿಸಿದ್ದಾರೆ ಎಂದೇ ಹೇಳುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಇದೇ ಕಾರಣಕ್ಕೆ ಈವರೆಗೆ ಆಂಧ್ರದಲ್ಲಿ ಟಿಡಿಪಿ-ಕಾಂಗ್ರೆಸ್ ಮೈತ್ರಿ ದಿನೇ ದಿನೇ ಕಗ್ಗಂಟಾಗಿ ಪರಿಣಮಿಸಿದ್ದು, ಆಂಧ್ರವೂ ಕಾಂಗ್ರೆಸ್ ಕೈ ತಪ್ಪುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವುದು ಕಾಂಗ್ರೆಸ್ ಪಕ್ಷದ ಪ್ರಮುಖ ಅಜೆಂಡ. ಜಾತ್ಯಾತೀತ ಪಕ್ಷಗಳ ಕಾಮನ್ ಮತದಾರರನ್ನು ಕಾಂಗ್ರೆಸ್ ಸೆಳೆದರೆ ತಮ್ಮ ಪಕ್ಷಕ್ಕೆ ಕಂಟಕ ಎಂಬ ಕಾರಣದಿಂದಾಗಿ ಪ್ರಾದೇಶಿಕ ಪಕ್ಷಗಳು ನಮ್ಮ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಲಿಲ್ಲ.  ಮೈತ್ರಿ ಇಲ್ಲದಿದ್ದರೂ ಎಲ್ಲಾ ಜಾತ್ಯಾತೀತ ಪಕ್ಷಗಳು ಈ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬುದೇ ಕಾಂಗ್ರೆಸ್ ಪಕ್ಷದ ಇಚ್ಚೆಯಾಗಿದೆ.
ಈಶ್ವರ ಖಂಡ್ರೆ - ಕಾರ್ಯನಿರತ ಅಧ್ಯಕ್ಷ, ಕರ್ನಾಟಕ ಪ್ರದೇಶ ಕಾಂಗ್ರೆಸ್

ಕಾಂಗ್ರೆಸ್‌ ವಿರುದ್ಧ ಗರಂ ಆಗಿರುವ ಡಿಎಂಕೆ

ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಜೊತೆಗೆ ರಾಹುಲ್ ಗಾಂಧಿ.
ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಜೊತೆಗೆ ರಾಹುಲ್ ಗಾಂಧಿ.
/ನ್ಯೂಸ್ 18

ದಕ್ಷಿಣ ಭಾರತದ ಮತ್ತೊಂದು ಪ್ರಬಲ ಪ್ರಾದೇಶಿಕ ಪಕ್ಷ ಎಂದರೆ ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ). ಹೊಸ ನಾಯಕ ಎಂ.ಕೆ, ಸ್ಟಾಲಿನ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಪಕ್ಷ ಸಕಲ ಸಿದ್ಧತೆಯನ್ನೂ ನಡೆಸುತ್ತಿದೆ.

ಕಳೆದ ಎರಡು ದಶಕಗಳಿಂದ ಡಿಎಂಕೆ ಹಾಗೂ ಕಾಂಗ್ರೆಸ್‌ ಎಲ್ಲಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡೆ ಸವಾಲನ್ನು ಎದುರಿಸುತ್ತಿರುವುದು ವಿಶೇಷ. ಎರಡು ಪಕ್ಷಗಳು ಈ ಬಾರಿಯ ಚುನಾವಣೆಯನ್ನೂ ಮೈತ್ರಿಯೊಂದಿಗೆ ಎದುರಿಸಲು ನಿಶ್ಚಯಿಸಿದ್ದರೂ, ಈ ಎರಡೂ ಪಕ್ಷಗಳ ಮೈತ್ರಿ ನಡುವೆ ಬಿರುಕು ಬಿಟ್ಟಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಡಿಎಂಕೆ ನಾಯಕ ಸ್ಟಾಲಿನ್ ಮೈತ್ರಿ ಪಕ್ಷಗಳಿಗೆ ಈಗಾಗಲೇ ಇಂತಿಷ್ಟು ಕ್ಷೇತ್ರಗಳನ್ನು ನೀಡಲಾಗುವುದು ಎಂಬ ಅಂಕಿಸಂಖ್ಯೆಗಳನ್ನು ಪ್ರಕಟಿಸಿದ್ದಾರೆ. ಪಾಂಡಿಚೇರಿ ಸೇರಿದಂತೆ ತಮಿಳುನಾಡಿನ 40 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 10 ಕ್ಷೇತ್ರಗಳನ್ನು ನೀಡಿದ್ದಾರೆ. ಆದರೆ, ಯಾವ ಕ್ಷೇತ್ರ ಯಾರಿಗೆ ಎಂಬ ವಿವರ ಇನ್ನೂ ಹೊರ ಬಿದ್ದಿಲ್ಲ.

ಈ ನಡುವೆ ಕಾಂಗ್ರೆಸ್ ಡಿಎಂಕೆ ಎದುರು ಸುರಕ್ಷಿತ ಕ್ಷೇತ್ರಗಳ ಬೇಡಿಕೆ ಇಟ್ಟಿದೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಡಿಎಂಕೆ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳಿವೆ. ಕಾಂಗ್ರೆಸ್‌ನ ಈ ನಡವಳಿಕೆ ಸಾಮಾನ್ಯವಾಗಿ ಡಿಎಂಕೆ ಕೆಂಗಣ್ಣಿಗೆ ಗುರಿಯಾಗಿದೆ.

ಪರಿಣಾಮ ಮೊನ್ನೆ ಮೊನ್ನೆ ವರೆಗೂ ರಾಹುಲ್ ಗಾಂಧಿಯೇ ನಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಗಂಟಾಘೋಷವಾಗಿ ಹೇಳಿದ್ದ ಸ್ಟಾಲಿನ್ ಇಂದು ಬದಲಾಗಿದ್ದಾರೆ. ಬುಧವಾರ ರಾಹುಲ್ ಗಾಂಧಿಯೇ ಸ್ವತಃ ತಮಿಳುನಾಡಿಗೆ ಭೇಟಿ ನೀಡಿದ್ದರೂ ಅವರನ್ನು ಭೇಟಿಯಾಗದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕಗ್ಗಂಟಾದ ಕರ್ನಾಟಕ

ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್‌.ಡಿ. ದೇವೇಗೌಡ.
ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್‌.ಡಿ. ದೇವೇಗೌಡ.
/ಡೈಜಿವರ್ಲ್ಡ್.ಕಾಮ್

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಜೊತೆ ಸೇರಿ ಮೈತ್ರಿ ಸರಕಾರ ನಡೆಸುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಬೇಕು ಎಂಬ ಒಂದೇ ಉದ್ದೇಶದಿಂದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 37 ಸ್ಥಾನಗಳನ್ನು ಗಳಿಸಿದ್ದರೂ ಜೆಡಿಎಸ್‌ ಪಕ್ಷಕ್ಕೆ ಕಾಂಗ್ರೆಸ್ ಮುಖ್ಯಮಂತ್ರಿ ಗಾಧಿಯನ್ನು ಬಿಟ್ಟುಕೊಟ್ಟಿತ್ತು. ಅಲ್ಲದೆ ಲೋಕಸಭಾ ಚುನಾವಣೆಯನ್ನು ಜತೆಯಲ್ಲಿ ಎದುರಿಸುವ ಉಮೇದಿನಲ್ಲಿದೆ.

ಆದರೆ, ಎರಡೂ ಪಕ್ಷಗಳ ನಡುವಿನ ಸ್ಥಾನ ಹಂಚಿಕೆ ವಿವಾದ ಮಾತ್ರ ಕಳೆದ ಎರಡು ತಿಂಗಳಿನಿಂದ ಮುಗಿಯದ ಕಗ್ಗಂಟಾಗೆ ಉಳಿದಿತ್ತು. ಕೊನೆಗೂ ಬುಧವಾರ ರಾಹುಲ್ ಗಾಂಧಿ ಸಮ್ಮುಖದಲ್ಲಿ ಸ್ಥಾನ ಹಂಚಿಕೆ ವ್ಯಾಜ್ಯ ಇತ್ಯರ್ಥವಾಗಿದೆ. ಕಾಂಗ್ರೆಸ್‌ಗೆ 20 ಹಾಗೂ ಜೆಡಿಎಸ್ ಪಕ್ಷಕ್ಕೆ 8 ಸ್ಥಾನಗಳನ್ನು ನೀಡುವ ಮೂಲಕ ಮೈತ್ರಿ ಸೂತ್ರ ಕೊನೆಗೂ ಒಂದು ಹಂತಕ್ಕೆ ಬಂದು ನಿಂತಿದೆ.

ಒಂದು ಹಂತದ ಸ್ಥಾನ ಹಂಚಿಕೆ ವ್ಯಾಜ್ಯ ಮುಗಿದಿದ್ದರೂ ಮೈತ್ರಿ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗ ಸತ್ಯ. ಅಲ್ಲದೆ ತೃತೀಯ ರಂಗದ ಕಡೆಗೆ ಒಲವು ಹೊಂದಿರುವ ಹೆ.ಡಿ. ದೇವೇಗೌಡರು ಲೋಕಸಭಾ ಚುನಾವಣೆಯ ನಂತರವೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ.

ಕೇಜ್ರಿಗೂ ಬೇಡವಾದ ಕಾಂಗ್ರೆಸ್

ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.
ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.
/ಡಬ್ಲ್ಯುಐಓ ನ್ಯೂಸ್

ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಪ್ರಬಲ ಎದುರಾಳಿ ಎಂದೇ ಗುರುತಿಸಿಕೊಂಡವರು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಯಾವ ವೇದಿಕೆಯಾದರೂ ಕೇಂದ್ರ ಸರಕಾರ ಹಾಗೂ ಮೋದಿ ವಿರುದ್ಧ ಪ್ರಕರ ವಾಗ್ದಾಳಿ ನಡೆಸುವ ಕೇಜ್ರಿವಾಲ್, ಇಡೀ ರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮೋದಿ ಅಲೆ ಇದ್ದಾಗಲೂ ಭಾರತದ ಹೃದಯ ಭಾಗ ದೆಹಲಿಯಲ್ಲಿ ಗೆದ್ದು ಸ್ವತಂತ್ರ್ಯ ಸರಕಾರ ರಚಿಸಿ ಅಚ್ಚರಿ ಮೂಡಿಸಿದವರು.

2014 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲಾ 7 ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಸ್ಫರ್ಧಿಸಲಿದೆ ಎಂದೇ ರಾಜಕೀಯ ತಜ್ಞರು ಲೆಕ್ಕಾಚಾರ ಹಾಕಿದ್ದರು.

ಆದರೆ, ಕಾಂಗ್ರೆಸ್ ಮೈತ್ರಿಗೆ ಸುತಾರಾಂ ಒಪ್ಪದ ಕೇಜ್ರಿವಾಲ್ ಎಲ್ಲಾ ಕ್ಷೇತ್ರದಲ್ಲೂ ಎಎಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅಲ್ಲಿಗೆ ಎಎಪಿ ಯಂತಹ ಸಣ್ಣ ಪಕ್ಷವೂ ಸಹ ಕಾಂಗ್ರೆಸ್ ಜೊತೆಗೆ ಸಮಾನ ಅಂತರ ಕಾಯ್ದುಕೊಳ್ಳಲು ಮುಂದಾಗಿರುವುದು ಸ್ಪಷ್ಟವಾಗಿದೆ.

ಸ್ಥಳೀಯ ಪಕ್ಷಗಳ ಜೊತೆಗೆ ಮೈತ್ರಿ ಸಾಧಿಸಲು ತಾನು ಯಾವುದೇ ಷರತ್ತಿಗೂ ಬದ್ಧ ಎಂದು ಕಳೆದ ಹಲವು ತಿಂಗಳ ಹಿಂದೆಯೇ ಕಾಂಗ್ರೆಸ್ ಹೇಳಿತ್ತು. ಆದರೂ, ಈವರೆಗೆ ಯಾವುದೇ ಪ್ರಬಲ ಸ್ಥಳೀಯ ಪಕ್ಷಗಳು ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಮುಂದಾಗಿಲ್ಲ.

ಕಾಂಗ್ರೆಸ್ ನಲ್ಲಿ ಈಗಾಗಲೇ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿಸಲಾಗಿದೆ. ಹೀಗಾಗಿ ಪ್ರಧಾನಿ ರೇಸ್‌ನಲ್ಲಿರುವ ಮಮತಾ ಬ್ಯಾನರ್ಜಿ ಹಾಗೂ ಮಾಯಾವತಿ ಸ್ವಾಭಾವಿಕವಾಗಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಾರೆ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಒಂದಾಗಿರುವ ಎಲ್ಲಾ ಸ್ಥಳೀಯ ಪಕ್ಷಗಳು ಕಾಂಗ್ರೆಸ್ ನಿಂದಲೂ ಸಮಾನ ಅಂತರ ಕಾಯ್ದುಕೊಳ್ಳಲು ಮುಂದಾಗಿರುವುದು ಕಾಂಗ್ರೆಸ್ ಪಾಲಿಗಂತು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಜೆಪಿಯನ್ನು ಏಕಾಂಗಿ ಮಾಡುವ ನಿಟ್ಟಿನಲ್ಲಿ ತಾನೇ ಏಕಾಂಗಿಯಾಗಿದೆ.

ಒಂದು ಕಾಲದಲ್ಲಿ ವಿರೋಧ ಪಕ್ಷಗಳೇ ಇಲ್ಲದೆ ದಶಕಗಳ ಕಾಲ ದೇಶ ಆಳಿದ ಹಿರಿಯ ಪಕ್ಷವೊಂದರ ಜೊತೆ ಮೈತ್ರಿ ಮಾಡಿಕೊಳ್ಳಲು ನಿನ್ನೆ ಮೊನ್ನೆ ಹುಟ್ಟಿದ ಅಮ್ ಆದ್ಮಿ ಯಂತಹ ಸಣ್ಣ ಪಕ್ಷಗಳು ಸಹ ಹಿಂದೇಟು ಹಾಕುತ್ತಿವೆ ಎಂದರೆ ಆ ರಾಷ್ಟ್ರೀಯ ಪಕ್ಷದ ಇಂದಿನ ಸ್ಥಿತಿಯನ್ನು ಊಹಿಸಬಹುದು. ಅದೇ ವೇಳೆ ಮುಂದಿನ ದಿನಗಳಲ್ಲಿ ನಾನಾ ನಾಯಕರು ಅಧಿಕಾರಕ್ಕಾಗಿ ನಡೆಸುವ ಕಿತ್ತಾಟದ ಸೂಚನೆಯೂ ಇಲ್ಲಿ ಸಿಗುತ್ತಿದೆ.