samachara
www.samachara.com
ಹೆಚ್ಚಾದ ಮಹಿಳಾ ಮತದಾರರು; ನಾರಿ ಮನಗೆಲ್ಲಲು ಮುಂದಾದ ರಾಜಕೀಯ ಪಕ್ಷಗಳು
COVER STORY

ಹೆಚ್ಚಾದ ಮಹಿಳಾ ಮತದಾರರು; ನಾರಿ ಮನಗೆಲ್ಲಲು ಮುಂದಾದ ರಾಜಕೀಯ ಪಕ್ಷಗಳು

ಮಹಿಳೆಯರಿಗೆ ಜನಪ್ರತಿನಿಧಿ ಹುದ್ದೆಗಳಲ್ಲಿ ಶೇ. 33ರಷ್ಟು ಮೀಸಲಾತಿ ನೀಡುವ ವಿಧೇಯಕವನ್ನು ಯುಪಿಎ 2008ರಲ್ಲಿ ಮಂಡಿಸಿತ್ತು. ರಾಜ್ಯಸಭೆಯಲ್ಲಿ ಇದು ಅಂಗೀಕಾರವಾದರೂ ಲೋಕಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ.

ದೇಶ 17ನೇ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಮಹಿಳಾ ಮತದಾರರ ಮನಗೆಲ್ಲಲು ರಾಜಕೀಯ ನೇತಾರರು ಮುಂದಾಗಿದ್ದಾರೆ. ಒಡಿಶಾದಲ್ಲಿ ಬಿಜೆಡಿ ಮುಖ್ಯಸ್ಥ ನವೀನ್ ಪಾಟ್ನಾಯಕ್ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂಡಿಟ್ಟಿರುವ ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಹಿಳೆಯರಿಗೆ ಶೇ. 41 ಮೀಸಲಾತಿ ನೀಡಿದ್ದಾರೆ.

ಈ ನಡುವೆ ತಮಿಳುನಾಡಿನ ಸಂವಾದವೊಂದರಲ್ಲಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸುವುದಾಗಿಯೂ, ಜತೆಯಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಶೇ. 33 ಮೀಸಲಾತಿ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಚುನಾವಣೆಯಲ್ಲಿ ಸೀಟು ಹಂಚಿಕೆಯ ಸಮಯದಲ್ಲಿ ಮೀಸಲಾತಿ ನೀಡುವ ಬಗ್ಗೆ ಯಾವುದೇ ಪ್ರಸ್ತಾಪವನ್ನು ಅವರು ಮಾಡಿಲ್ಲ.

ಯಾಕೀ ದಿಢೀರ್ ಪ್ರೇಮ?

ಮೇಲ್ನೋಟಕ್ಕೆ ಇದು ಈ ನಾಯಕರ ಮಹಿಳಾ ಸಬಲೀಕರಣಕ್ಕೆ ಪೂರಕವಾದ ನಡೆ ಅಂತ ಅನ್ನಿಸಿದರೂ, ಆಳದಲ್ಲಿರುವುದು ಅನಿವಾರ್ಯ ಚುನಾವಣಾ ಲೆಕ್ಕಾಚಾರ ಮಾತ್ರ.

ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಚುನಾವಣಾ ಆಯೋಗದ ಬಳಿ ಲಭ್ಯವಿರುವ ಮಾಹಿತಿ ಅನುಸಾರ 1962ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾನದ ಪ್ರಮಾಣ 46.7 %. ಈ ಪ್ರಮಾಣ 2014ರ ಲೋಕಸಭೆ ಚುನಾವಣೆ ವೇಳೆಗೆ ಶೇ 65.5ಕ್ಕೆ ಏರಿಕೆಯಾಗಿತ್ತು.

ಅಂದರೆ ಮಹಿಳೆಯ ಮತದಾನದ ಪ್ರಮಾಣ ಶೇ. 18.5ರಷ್ಟು ಹೆಚ್ಚಾಗಿದೆ. ಇನ್ನು 1962ರಲ್ಲಿ ಇದ್ದ ಪುರುಷ ಮತದಾರರ ಪ್ರಮಾಣ ಶೇ 62.1 ರಿಂದ 2014ರ ಹೊತ್ತಿಗೆ ಶೇ. 67 ಕ್ಕೆ ಏರಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ಏರಿಕೆಯಾದ ಒಟ್ಟು ಪುರುಷರ ಮತದಾನದ ಪ್ರಮಾಣ ಶೇ. 4.9 ಮಾತ್ರ.

ಒಟ್ಟಾರೆ 2014ರ ಚುನಾವಣೆಯಲ್ಲಿ ಮಹಿಳೆಯರು ಪುರುಷರಿಗಿಂತ ಶೇಕಡಾ ಶೇ. 1.5 ರಷ್ಟು ಕಡಿಮೆ ಮತದಾನ ಮಾಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಈ ಅಂತರ ದಾಟಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಮತದಾನ ಮಾಡುವ ನಿರೀಕ್ಷೆ ಇದೆ.

ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳಾ ಮತದಾರರು ಪುರುಷರನ್ನು ಹಿಂದಿಕ್ಕಿದ್ದಾರೆ. 2017-18ರಲ್ಲಿ ನಡೆದ ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಶೇಕಡಾ 69ರಷ್ಟು ಪುರುಷರು ಮತ ಚಲಾಯಿಸಿದ್ದರೆ, ಮತದಾನ ಮಾಡಿದ ಮಹಿಳೆಯರ ಪ್ರಮಾಣ ಶೇ. 70!

ಮಹಿಳಾ ಮತದಾರರ ಪ್ರಮಾಣ ಹೆಚ್ಚಾದ ತಕ್ಷಣ ಮಹಿಳಾ ಪ್ರಾತಿನಿಧ್ಯ ಬರುವುದಿಲ್ಲ. ಇವತ್ತಿಗೂ ಶೇ. 80 ರಷ್ಟು ಮಹಿಳೆಯರು ತಮ್ಮ ಪತಿ, ಸೋದರ, ತಂದೆಯ ಮಾತಿನಂತೆಯೇ ನಡೆಯುತ್ತಾರೆ. ಪುರುಷರ ಮನಸ್ಸಿನಿಂದ ಪ್ರಭಾವಿತರಾಗಿಯೇ ಮತ ಚಲಾಯಿಸುತ್ತಾರೆ. ನಿಜವಾದ ಕಾಳಜಿ ಇದ್ದಿದ್ದರೆ ಇಷ್ಟು ಹೊತ್ತಿಗೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಬೇಕಿತ್ತು. 
ಬಿಟಿ ಲಲಿತಾ ನಾಯಕ್, ಮಾಜಿ ಸಚಿವೆ

ಮತದಾನದಿಂದ ವಂಚಿತರು:

ಇವೆಲ್ಲದರ ಆಚೆಗೆ ದೇಶದಾದ್ಯಂತ ಸುಮಾರು 2.1 ಕೋಟಿ ಮಹಿಳಾ ಮತದಾರರು ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗಿದ್ದಾರೆ. 18 ವರ್ಷ ಮೇಲ್ಪಟ್ಟು ಮತದಾನಕ್ಕೆ ಅರ್ಹವಿದ್ದರೂ ಇವರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ. ಚುನಾವಣಾ ಆಯೋಗ ಈ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ ಎಂಬ ಟೀಕೆಗಳೂ ಇವೆ.

ಒಂದು ಅಂದಾಜಿನ ಪ್ರಕಾರ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ 38,000 ಮಹಿಳಾ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ಹೀಗೆ ಮತದಾನಕ್ಕೆ ಅವಕಾಶವಿದ್ದು ದೂರ ಉಳಿದಿರುವ ಮಹಿಳಾ ಮತದಾರರ ಸಂಖ್ಯೆಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜ್ಯ ಉತ್ತರ ಪ್ರದೇಶ. ಇಲ್ಲಿ ಪ್ರತಿ ಲೋಕಸಭಾ ಕ್ಷೇತ್ರವೊಂದರಲ್ಲಿ ಸರಿ ಸುಮಾರು 85 ಸಾವಿರ ಮಹಿಳಾ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ.

ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳಿವೆ. ಚುನಾವಣಾ ಪ್ರಕ್ರಿಯೆಯಿಂದ ಹೊರಗಿರುವ ಒಟ್ಟು 2.1 ಕೋಟಿ ಮಹಿಳಾ ಮತದಾರರಲ್ಲಿ 1 ಕೋಟಿ ಮಹಿಳಾ ಮತದಾರರು ಈ ಮೂರು ರಾಜ್ಯಗಳಲ್ಲಿದ್ದರೆ ಇನ್ನುಳಿದ 1.1 ಕೋಟಿ ಮಹಿಳಾ ಮತದಾರರು ದೇಶದ ಬೇರೆ ರಾಜ್ಯಗಳಲ್ಲಿದ್ದಾರೆ.

ಏರಿಕೆಯಾಗದ ಜನಪ್ರತಿನಿಧಿಗಳ ಸಂಖ್ಯೆ:

ಒಂದು ಕಡೆ ಮಹಿಳಾ ಮತದಾನ ಪ್ರಮಾಣ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ಮಾತ್ರ ಯಾವುದೇ ಹೆಚ್ಚಳವಾಗುತ್ತಿಲ್ಲ.

1952ರ ಚುನಾವಣೆಯಲ್ಲಿ ಶೇ. 4.7ರಷ್ಟದ್ದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಸದ್ಯ ಶೇ. 11.4ಕ್ಕೆ ಏರಿಕೆಯಾಗಿರುವುದೇ ಮಹತ್ಸಾಧನೆ ಎಂಬಂತಾಗಿದೆ.

2010ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದ ನಂತರ ಪಕ್ಷಭೇದ ಮರೆತು ಸಂಸತ್ ಭವನದ ಮುಂದೆ ಒಂದಾದ ಮಹಿಳಾ ನಾಯಕಿಯರು ವಿಜಯದ ಚಿನ್ಹೆಯನ್ನು ತೋರಿಸಿದರು. ಇದಾಗಿ 9 ವರ್ಷ ಕಳೆದರೂ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿಲ್ಲ.
2010ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದ ನಂತರ ಪಕ್ಷಭೇದ ಮರೆತು ಸಂಸತ್ ಭವನದ ಮುಂದೆ ಒಂದಾದ ಮಹಿಳಾ ನಾಯಕಿಯರು ವಿಜಯದ ಚಿನ್ಹೆಯನ್ನು ತೋರಿಸಿದರು. ಇದಾಗಿ 9 ವರ್ಷ ಕಳೆದರೂ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿಲ್ಲ.

ಇಂತಹ ಹೊತ್ತಲ್ಲಿ ರಾಜಕೀಯ ಪಕ್ಷಗಳಿಗೆ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಒದಗಿಸಿ ಕೊಡಲು ಮೀಸಲಾತಿಯ ನೆನಪಾಗಿದೆ. ಮಹಿಳೆಯರಿಗೆ ಉನ್ನತ ಜನಪ್ರತಿನಿಧಿ ಹುದ್ದೆಗಳಲ್ಲಿ ಶೇ. 33ರಷ್ಟು ಮೀಸಲಾತಿ ನೀಡುವ ವಿಧೇಯಕವನ್ನು ಯುಪಿಎ 2008ರಲ್ಲಿ ಮಂಡಿಸಿತ್ತು.

ರಾಜ್ಯಸಭೆಯಲ್ಲಿ ಇದು ಅಂಗೀಕಾರವಾದರೂ ಲೋಕಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ನಂತರದ ಅವಧಿಯಲ್ಲಿ ಯುಪಿಎ ಮೈತ್ರಿಕೂಟವೇ ಅಧಿಕಾರದಲ್ಲಿ ಇತ್ತಾದರೂ ಮಸೂದೆ ಅಂಗೀಕರಿಸಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಈ ನಡುವೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಕೂಡ ಮಸೂದೆಯತ್ತ ಗಮನ ಹರಿಸಲಿಲ್ಲ.

‘ಭೇಟಿ ಬಚಾವೋ ಭೇಟಿ ಪಡಾವೋ’, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಘೋಷಣೆಗಳು ಕೇವಲ ಕ್ಲೀಷೆಯಾಗಿ ಉಳಿದುಬಿಟ್ಟವು. ಮಹಿಳಾ ಸಬಲೀಕರಣದ ಮಾತನಾಡುವವರು ಆಕೆಯ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದ್ದು ಕಡಿಮೆ. ಆದರೆ ಈ ಬಾರಿ ಆಕೆಯ ಮತದಾನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯನ್ನು ಅಂಕಿ ಅಂಶಗಳು ಮುಂದಿಟ್ಟಿರುವುದರಿಂದ ಪ್ರಮುಖ ರಾಜಕೀಯ ನಾಯಕರಿಗೆ ಮಹಿಳಾ ಮೀಸಲಾತಿಯ ನೆನಪಾಗಿದೆ.

ಮಹಿಳೆಯರ ವಿಚಾರವನ್ನುಪಕ್ಷಾತೀತವಾಗಿ ನೋಡಬೇಕು. ನವೀನ್ ಪಾಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ನಿಲುವು ಪ್ರಶಂಸನೀಯ. ಮಹಿಳಾ ಮೀಸಲಾತಿ ಮಸೂದೆಗೆ ಕಾಯದೇ ಸ್ವಯಂಪ್ರೇರಿತವಾಗಿ ಈ ತೀರ್ಮಾನ ತೆಗೆದುಕೊಂಡಿರುವುದು ಅಭಿನಾಂದನಾರ್ಹ. ಇದನ್ನು ಚುನಾವಣೆ ಗಿಮಿಕ್ ಅಂತ ನೋಡದೇ ಮಹಿಳಾಪರವಾದ ನಿಲುವು ಎಂದು ನೋಡಬೇಕಿದೆ. ನಮ್ಮ ಪಕ್ಷದಿಂದ ಇಂತಹ ತೀರ್ಮಾನವಾಗಬೇಕಿದೆ.
ಕವಿತಾ ರೆಡ್ಡಿ, ಕಾಂಗ್ರೆಸ್ ವಕ್ತಾರರು.
ಸಂಘಟನಾತ್ಮಕವಾಗಿ ಮಹಿಳೆಯರಿಗೆ ಮೀಸಲಾತಿಯನ್ನು ಬಿಜೆಪಿ ನೀಡಿದೆ. ಯುದ್ದಕ್ಕೆ ನಿಲ್ಲುವುದಕ್ಕಿಂತಮುಂಚೆ ತಯಾರಿ ನಡೆಸಬೇಕು. ಅದನ್ನು ಬಿಜೆಪಿ ಮಾಡುತ್ತಿದೆ. ರಾಜಕೀಯವಾಗಿ ಮಹಿಳೆಯನ್ನುಸಿದ್ದಪಡಿಸುವ ಕೆಲಸ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಮಹಿಳೆ, ಪುರುಷ ಎನ್ನುವುದಕ್ಕಿಂತ ಭಾರತ ಮಾತೆಯನ್ನು ಉಳಿಸಬೇಕಿದೆ. ಹಾಗಾಗಿ ಚುನಾವಣೆ ಗೆಲ್ಲಲು ಪುರುಷ ಅತವಾ ಮಹಿಳೆ ಯಾರಿಗಾದರೂ ಟಿಕೆಟ್ ನೀಡಲಿ, ಭಾರತ ಮಾತೆ ಗೆಲ್ಲಲಿ. ಮುಂದಿನ ದಿನಗಳಲ್ಲಿ ಮಹಿಳಾಮೀಸಲಾತಿ ತರಲು ನರೇಂದ್ರ ಮೋದಿ ಮುಂದಾಗಲಿದ್ದಾರೆ.
ಭಾರತಿ ಶೆಟ್ಟಿ, ಬಿಜೆಪಿ ನಾಯಕಿ

ಇನ್ನೊಂದು ವರ್ಷ ಕಳೆದರೆ ಲೋಕಸಭೆ ಮಸೂದೆ ಅಂಗೀಕಾರಕ್ಕೆ ಕಾಯಲು ಆರಂಭಿಸಿ 10 ವರ್ಷ ಕಳೆಯುತ್ತದೆ. ಈ ಬಾರಿ ದೇಶದಲ್ಲಿ ನಡೆಯುವ ಶಾಂತಿಯುತ ಅಧಿಕಾರ ಹಸ್ತಾಂತರ ಅಥವಾ ಮುಂದುವರಿಕೆ ಈ ಮಸೂದೆಗೆ ಬೆಳಕು ಕಾಣಿಸಬೇಕಿದೆ. ಈ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಚುನಾವಣಾ ಪ್ರಚಾರದ ನಂತರವೂ ಜೀವಂತವಾಗಿರುವಂತೆ ನೋಡಿಕೊಳ್ಳಬೇಕಿದೆ.