samachara
www.samachara.com
‘ಪೊಲಿಟಿಕಲ್ ಜೋಕರ್’ ವಿಜಯಕಾಂತ್ ಜತೆ  ಮೈತ್ರಿ: ಬಿಜೆಪಿ ಲೆಕ್ಕಾಚಾರ ತಪ್ಪುವುದು ಎಲ್ಲಿ? 
COVER STORY

‘ಪೊಲಿಟಿಕಲ್ ಜೋಕರ್’ ವಿಜಯಕಾಂತ್ ಜತೆ ಮೈತ್ರಿ: ಬಿಜೆಪಿ ಲೆಕ್ಕಾಚಾರ ತಪ್ಪುವುದು ಎಲ್ಲಿ? 

ವಿಜಯಕಾಂತ್ ಜೊತೆಗಿನ ಮೈತ್ರಿ ಮಧುರೈ ಭಾಗದ ಕ್ಷೇತ್ರಗಳಲ್ಲಿ ಗೆಲುವು ತಂದುಕೊಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಆದರೆ ಸ್ವತಃ ವಿಜಯಕಾಂತ್‌ ಪಕ್ಷಕ್ಕೆ ಮತಹಾಕದ ಜನ ಎನ್‌ಡಿಎಗೆ ಮತ ಚಲಾಯಿಸುತ್ತಾರೆಯೇ? ಎಂಬುದು ಪ್ರಶ್ನೆ.

ಭಾರತದ ರಾಜಕಾರಣ ಒಂದು ತೂಕವಾದರೆ, ತಮಿಳುನಾಡಿನ ರಾಜಕಾರಣವೇ ಮತ್ತೊಂದು ತೂಕ. ಸಿನಿಮಾ ಆಗಲಿ ಅಥವಾ ರಾಜಕೀಯವೇ ಆಗಲಿ ಇಲ್ಲಿ ಎಲ್ಲವೂ ವರ್ಣ ರಂಚಿತವೇ. ಸಿನಿಮಾ ಮಂದಿ ರಾಜಕೀಯಕ್ಕೆ ಎಂಟ್ರಿ ಪಡೆಯುವುದು ತಮಿಳುನಾಡಿನಲ್ಲಿ ತೀರಾ ಸಾಧರಣ ವಿಚಾರ. ಹೀಗೆ ಸಿನಿಮಾದಿಂದ ರಾಜಕೀಯಕ್ಕೆ ಎಂಟ್ರಿ ಪಡೆದ ಮತ್ತೊಬ್ಬ ತಮಿಳು ನಟನೆ ಕ್ಯಾಪ್ಟನ್ ವಿಜಯಕಾಂತ್.

2012ರಲ್ಲಿ ತಮಿಳುನಾಡಿನ ವಿಧಾನಸಭೆ ಕಲಾಪದಲ್ಲಿ ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತ ವಿರುದ್ಧ ವಿರೋಧ ಪಕ್ಷದ ನಾಯಕರಾಗಿದ್ದ ವಿಜಯಕಾಂತ್ ಅಸಹ್ಯಕರವಾಗಿ ವರ್ತಿಸಿ ಅಮ್ಮನ ಕೆಂಗಣ್ಣಿಗೆ ಗುರಿಯಾಗಿದ್ದರು. ಅದೇ ಸಭೆಯಲ್ಲಿ ಶಪಥ ಮಾಡಿದ್ದ ಜಯಲಲಿತ ಇಂತಹ ಅನಾಗರೀಕರ ಜೊತೆಗೆ ಮತ್ತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಚೀಮಾರಿ ಹಾಕಿ, ಡಿಎಂಡಿಕೆ ಪಕ್ಷದ ಎಲ್ಲಾ ಸದಸ್ಯರನ್ನು ಸಭೆಯಿಂದಲೇ ಹೊರಹಾಕಿಸಿದ್ದರು. ಆ ದಿನಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಘಟನೆ ಅದು.

ಆದರೆ, ಇಂದು ಅದೇ ಪಕ್ಷದ ಜೊತೆಗೆ ಅಮ್ಮನ ಹಿಂಬಾಲಕರು ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೈತ್ರಿ ಹಿಂದೆ ಬಿಜೆಪಿ ಪ್ರಮುಖ ಪಾತ್ರವಹಿಸಿದೆ ಎಂಬುದು ಇಂದು ಗುಟ್ಟಾಗೇನು ಉಳಿದಿಲ್ಲ. ಆದರೆ ಇಂದಿನ ತಮಿಳುನಾಡಿನ ರಾಜಕೀಯದಲ್ಲಿ 'ಪೊಲಿಟಲ್ ಜೋಕರ್' ಎಂದೇ ಕರೆಯಲಾಗುವ ವಿಜಯಕಾಂತ್ ಸೇರ್ಪಡೆಯಿಂದ ಎನ್‌ಡಿಎ ಮೈತ್ರಿ ಕೂಟಕ್ಕೆ ನಿಜಕ್ಕೂ ಲಾಭವಾಗುತ್ತಾ? ಸಿನಿಮಾದಿಂದ ಆರಂಭವಾದ ವಿಜಯಕಾಂತ್ ರಾಜಕೀಯ ಜೀವನದ ಕುರಿತ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಕ್ಯಾಪ್ಟನ್ ಎಂಬ ಪೊಲಿಟಿಕಲ್ ಜೋಕರ್

ತಮಿಳುನಾಡಿನಲ್ಲಿ ರಜನಿಕಾಂತ್ ಹಾಗೂ ಕಮಲಹಾಸನ್‌ರಂತಹ ದೊಡ್ಡ ನಟರ ಸಮಕಾಲೀನ ನಟ ವಿಜಯಕಾಂತ್. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಹಿಟ್ ಚಿತ್ರಗಳನ್ನು ನೀಡಿರುವ ಇವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿ ಬಳಗವೂ ಇದೆ. ಬಹುತೇಕ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಧಾರಿ ವೇ‍ಷದಲ್ಲಿ ನಟಿಸಿದ ಕಾರಣಕ್ಕಾಗಿಯೇ ಇವರ ಹೆಸರಿನ ಜೊತೆಗೆ ಕ್ಯಾಪ್ಟನ್ ಎಂಬ ಅನ್ವರ್ಥನಾಮವೂ ಸೇರಿಕೊಂಡಿದೆ.

ಸಿನಿಮಾರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ವಿಜಯಕಾಂತ್ 2005 ರಲ್ಲಿ ದೇಸಿಯ ಮುರ್ಪೋಕು ದ್ರಾವಿಡ ಕಳಗಂ (ಡಿಎಂಡಿಕೆ) ಎಂಬ ಪಕ್ಷವನ್ನು ಸಂಘಟಿಸಿದ್ದರು. ಆದರೆ, ತಮಿಳುನಾಡಿನಲ್ಲಿ ಕರುಣಾನಿಧಿಯ ಡಿಎಂಕೆ ಹಾಗೂ ಜಯಲಲಿತ ಅವರ ಎಐಎಡಿಎಂಕೆ ಪಕ್ಷವನ್ನು ಮೀರಿ ನಿರೀಕ್ಷಿತ ಗೆಲುವು ದಾಖಲಿಸುವುದು ಅಷ್ಟು ಸುಲಭವಲ್ಲ.

ಪರಿಣಾಮ 2006ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 234 ಕ್ಷೇತ್ರದಲ್ಲೂ ಸ್ವತಂತ್ರ್ಯವಾಗಿ ಸ್ಫರ್ಧಿಸಿದ್ದ ಪಕ್ಷ ಹೀನಾಯ ಸೋತಿತ್ತು. ವಿರುದಾಚಲಂ ಕ್ಷೇತ್ರದಿಂದ ಸ್ಫರ್ಧಿಸಿದ್ದ ಪಕ್ಷದ ಅಧ್ಯಕ್ಷ ವಿಜಯಕಾಂತ್ ಹೊರತಾಗಿ ಮತ್ತೆಲ್ಲರೂ ಸೋಲನುಭವಿಸಿದ್ದರು.

2009ರ ಲೋಕಸಭಾ ಚುನಾವಣೆಯಲ್ಲೂ 39 ಕ್ಷೇತ್ರದಲ್ಲಿ ಸ್ವತಂತ್ರ್ಯವಾಗಿ ಸ್ಫರ್ಧಿಸಿದ ಪಕ್ಷ ಅಷ್ಟೂ ಕ್ಷೇತ್ರದಲ್ಲಿ ಸೋಲನುಭವಿಸಿತ್ತು. ಪಕ್ಷದ ಒಟ್ಟಾರೆ ಮತಗಳಿಕೆ ಕೇವಲ ಶೇ.10.3. ಆದರೆ 2011 ರಲ್ಲಿ ಅಮ್ಮ ಜಯಲಲಿತ ಅವರ ಕೃಪಕಟಾಕ್ಷದಿಂದ ಡಿಎಂಡಿಕೆ ಪಕ್ಷಕ್ಕೆ ಅಕ್ಷರಶಃ ಜಾಕ್ ಪಾಟ್ ಹೊಡೆದಿತ್ತು.

ಜಯಲಲಿತ 2011ರಲ್ಲಿ ಕರುಣಾನಿಧಿ ಸರಕಾರವನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿದ್ದರು. ಇದೇ ಸಂದರ್ಭದಲ್ಲಿ ಹೋದಲ್ಲಿ ಬಂದಲ್ಲೆಲ್ಲಾ ಕರುಣಾನಿಧಿಯನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ನಟ ವಿಜಯಕಾಂತ್, ಅಮ್ಮ ಜಯಲಲಿತ ಅವರ ಕುರಿತು ಹೊಗಳುವುದೇ ತಮ್ಮ 24*7 ಕಾಯಕ ಎಂಬಂತೆ ಬಿಂಬಿಸಿಕೊಂಡಿದ್ದರು. ಪರಿಣಾಮ ಈ ಚುನಾವಣೆಯಲ್ಲಿ ಎಐಎಡಿಎಂಕೆ ವಿಜಯಕಾಂತ್ ಅವರ ಡಿಎಂಡಿಎಕೆ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿತ್ತು.

ತಮಿಳುನಾಡಿನ 234 ಕ್ಷೇತ್ರಗಳ ಪೈಕಿ ಜಯಲಲಿತ ಡಿಎಂಡಿಕೆ ಪಕ್ಷಕ್ಕೆ 41 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದರು.

ಪ್ರಬಲ ಡಿಎಂಕೆ ಪಕ್ಷಕ್ಕೆ ಈ ಚುನಾವಣಾ ಸಮಯದಲ್ಲಿ 2ಜಿ ಹಗರಣ ಇನ್ನಿಲ್ಲದಂತೆ ಕಾಡಿತ್ತು. ಹೀಗಾಗಿ ಮೈತ್ರಿ ಇಲ್ಲದೆ ಚುನಾವಣೆ ಎದುರಿಸಿದರೂ ಜಯಲಲಿತ ಅವರಿಗೆ ಬಹುಮತ ಖಚಿತ ಎಂದೇ ರಾಜಕೀಯ ತಜ್ಞರು ವಿಶ್ಲೇಷಿಸಿದರು. ಆದರೂ ಜಯಲಲಿತ ಡಿಎಂಡಿಕೆ ಜೊತೆಗೆ ಮೈತ್ರಿ ಮಾಡಿಕೊಂಡು 41 ಕ್ಷೇತ್ರಗಳನ್ನು ಬಿಟ್ಟುಕೊಟ್ಟದ್ದು ಜಯಲಲಿತ ಅವರ ರಾಜಕೀಯ ಜೀವನದಲ್ಲೇ ಅತ್ಯಂತ ಉದಾರಿ ಮೈತ್ರಿ ಸೂತ್ರ ಎಂದೇ ಬಣ್ಣಿಸಲಾಗಿತ್ತು.

ಕಾರಣ ಸೀಟು ಹಂಚಿಕೆ ವಿಚಾರದಲ್ಲಿ ಕಟ್ಟುನಿಟ್ಟಿನ ಜಯಲಲಿತ ಈ ಹಿಂದಿನ ಯಾವ ಚುನಾವಣೆಯಲ್ಲೂ ಮೈತ್ರಿ ಪಕ್ಷಗಳಿಗೆ ಇಷ್ಟು ಉದಾರತನದಿಂದ ಸೀಟು ಹಂಚಿಕೆ ಮಾಡಿದ ಉದಹರಣೆಗಳಿಲ್ಲ.

ಈ ಚುನಾವಣೆ ಜಯಲಲಿತ ಹಾಗೂ ಮೈತ್ರಿ ಪಕ್ಷಗಳು 234 ಕ್ಷೇತ್ರಗಳ ಪೈಕಿ 203 ರಲ್ಲಿ ಗೆಲುವು ಸಾಧಿಸಿದ್ದವು. ಎಐಎಡಿಎಂಕೆ ಪಕ್ಷಕ್ಕೆ ಸರಳ ಬಹುಮತ ಲಭಿಸಿತ್ತು. 41 ಕ್ಷೇತ್ರಗಳ ಪೈಕಿ 29 ರಲ್ಲಿ ಗೆಲುವು ಸಾಧಿಸಿದ್ದ ವಿಜಯಕಾಂತ್ ಪಕ್ಷ ಕರುಣಾನಿಧಿಯವರ ಡಿಎಂಕೆ ಪಕ್ಷವನ್ನು ಹಿಂದಿಕ್ಕಿ ಅಧಿಕೃತ ವಿರೋಧ ಪಕ್ಷವಾಯಿತು. ಅಮ್ಮ ಕೃಪಕಟಾಕ್ಷ ಇದ್ದ ಕಾರಣಕ್ಕೆ ಡಿಎಂಡಿಕೆ ಈ ಚುನಾವಣೆಯಲ್ಲಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು.

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ 1972ರ ನಂತರ ಮೊದಲ ಬಾರಿಗೆ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷದ ಹೊರತಾದ ಓರ್ವ ವಿರೋಧ ಪಕ್ಷದ ನಾಯಕನಂತಹ ಉನ್ನತ ಸ್ಥಾನಕ್ಕೆ ಏರಿದ ಮೊದಲ ವ್ಯಕ್ತಿ ಎಂದು ವಿಜಯಕಾಂತ್ ದಾಖಲೆ ಬರೆದರು. ಆದರೆ, ಈ ಖುಷಿ ತುಂಬಾ ದಿನ ಉಳಿಯಲಿಲ್ಲ.

ಅಮ್ಮ ಜೊತೆಗೆ ಹಳಸಿದ ಸಂಬಂಧ

2011ರ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ್ದ ಅಮ್ಮ ಜಯಲಲಿತ ಮಖ್ಯಮಂತ್ರಿಯಾದರೆ ಅವರ ಪಟ್ಟಾ ಶಿಷ್ಯ ವಿಜಯಕಾಂತ್ ವಿರೋಧ ಪಕ್ಷ ನಾಯಕ ಎಂದೇ ಎಲ್ಲರು ಮಾತಾಡಿಕೊಳ್ಳುತ್ತಿದ್ದರು. ಎಲ್ಲವೂ ಸರಿಯಾಗಿಯೇ ಇದೆ ಎನ್ನುವಷ್ಟರಲ್ಲಿ ವಿಜಯಕಾಂತ್ ವಿಧಾನಸಭಾ ಕಲಾಪಗಳಲ್ಲಿ ತುಸು ಹೆಚ್ಚೆ ಎಂಬಂತೆ ಜಯಲಲಿತ ಅವರ ಆಡಳಿತವನ್ನು ಟೀಕಿಸಲು ಆರಂಭಿಸಿದ್ದರು.

ವಿರೋಧ ಪಕ್ಷದ ನಾಯಕನಾಗಿ ಸಂಪ್ರದಾಯವೆಂಬತೆ ಮೊದಮೊದಲು ಜಯಲಲಿತ ಅವರ ಆಡಳಿತವನ್ನು ಟೀಕಿಸುತ್ತಿದ್ದ ವಿಜಯಕಾಂತ್ ಅವರ ವರ್ತನೆ ದಿನಕಳೆದಂತೆ ಬದಲಾಗಿತ್ತು. ಪರಿಣಾಮ 2012 ಫೆಬ್ರವರಿ 1 ರ ವಿಧಾನಸಭೆ ಕಲಾಪದ ಚರ್ಚೆ ವೇಳೆ ವಾಗ್ವಾದ ತಾರಕಕ್ಕೇರಿ ಕೊನೆಗೆ ಎಐಎಡಿಎಂಕೆ ಹಾಗೂ ಡಿಎಂಡಿಕೆ ಪಕ್ಷದ ಸದಸ್ಯರು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಚರ್ಚೆ ಕಾವು ಪಡೆಯಿತು.

ವಿಜಯಕಾಂತ್ ತಮಿಳುನಾಡಿನ ಪುರಚ್ಚಿ ತಲೈವಿ ಜಯಲಲಿತ ವಿರುದ್ಧ ಇನ್ನಿಲ್ಲದ ಕಟು ಶಬ್ಧಗಳನ್ನು ಪ್ರಯೋಗಿಸಿದ್ದರು. ಕೊನೆಗೆ ವಿರೋಧ ಪಕ್ಷದ ಎಲ್ಲಾ ನಾಯಕರನ್ನು ಬಲಪ್ರಯೋಗದ ಮೂಲಕ ಕಲಾಪದಿಂದ ಹೊರಗೆಸೆದ ಅಮ್ಮ, ‘ಯೋಗ್ಯತೆ ಇಲ್ಲದವರಿಗೆ ಉನ್ನತ ಸ್ಥಾನಮಾನ ದೊರೆತರೆ ಅವರ ವರ್ತನೆ ಹೇಗಿರುತ್ತದೆ ಎಂಬುದಕ್ಕೆ ವಿರೋಧ ಪಕ್ಷದ ನಾಯಕ ಉತ್ತಮ ಉದಾಹರಣೆ’ ಎಂದು ಲೇವಡಿ ಮಾಡಿದ್ದರು. ಅಲ್ಲದೆ ಇಂತಹ ಪಕ್ಷಗಳ ಜೊತೆಗೆ ಇನ್ನು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅದೇ ಸಭೆಯಲ್ಲಿ ಶಪಥ ಮಾಡಿದ್ದರು.

ಬೆಂಬಿಡದ ಸೋಲು ಮತ್ತು ಕೊನೆಯ ಆಟ

2012ರ ಈ ಕಹಿ ಘಟನೆಯ ನಂತರ ವಿಜಯಕಾಂತ್ ಮುಟ್ಟಿದ್ದೆಲ್ಲ ಸೋಲು ಎಂಬಂತಾಗಿದೆ. ಜಯಲಲಿತ ಜೊತೆಗಿನ ವೈಮನಸ್ಯದ ನಂತರ ನಡೆದ ಎಲ್ಲಾ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷ ಸಾಲು ಸಾಲು ಸೋಲುಗಳನ್ನು ಅನುಭವಿಸುವಂತಾಗಿತ್ತು.

ಇನ್ನು 2014 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಜೊತೆಗೆ ಮೈತ್ರಿ ಮಾಡಿಕೊಂಡ ಡಿಎಂಡಿಕೆ 14 ಕ್ಷೇತ್ರಗಳಲ್ಲಿ ಸ್ಫರ್ಧಿಸಿತ್ತು. ಆದರೆ, ಮೋದಿಯ ಅಲೆಯ ನಡುವೆಯೂ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

2016ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಹೊರತಾದ ಮೈತ್ರಿ ಸೂತ್ರ ಹೆಣೆದಿದ್ದ ವಿಜಯಕಾಂತ್ ವೈಕೋ ನೇತೃತ್ವದ ಮರುಮಲರ್ಚಿ ದ್ರಾವಿಡ ಮುನ್ನೇಟ್ರ ಕಳಗಂ (ಎಂಡಿಎಂಕೆ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಮಾರ್ಕ್ಸಿಸ್ಟ್ ಕಮ್ಯುನಿಸ್ಟ್‌, ತಮಿಳ್ ಮಾನಿಲ ಕಾಂಗ್ರೆಸ್ ಹಾಗೂ ವಿಡುದಲೈ ಚಿರುತೈಗಳ್ ಪಕ್ಷಗಳ ಜೊತೆಗೆ ಒಂದಾಗಿ 'ಪೀಪಲ್ ವೆಲ್‌ಫೇರ್ ಫ್ರೆಂಟ್' ಎಂಬ ಮೈತ್ರಿಯನ್ನು ರಚಿಸಿದ್ದರು.

ತಮಿಳುನಾಡು ಟ್ರೋಲಿಗರ ನೆಚ್ಚಿನ ರಾಜಕಾರಣಿ ವಿಜಯಕಾಂತ್. 
ತಮಿಳುನಾಡು ಟ್ರೋಲಿಗರ ನೆಚ್ಚಿನ ರಾಜಕಾರಣಿ ವಿಜಯಕಾಂತ್. 

ಆದರೆ, ಈ ಮೈತ್ರಿಯಲ್ಲಿ ತಾನು ಸ್ಫರ್ಧಿಸಿದ 104 ಕ್ಷೇತ್ರಗಳ ಪೈಕಿ ಅಷ್ಟರಲ್ಲೂ ವಿಜಯಕಾಂತ್ ಅವರ ಪಕ್ಷ ಸೋತು ಸುಣ್ಣವಾಗಿತ್ತು.

ಸ್ವತಃ ಪಕ್ಷದ ಅಧ್ಯಕ್ಷ ವಿಜಯಕಾಂತ್ ಅವರನ್ನು ಅವರದೇ ಕ್ಷೇತ್ರವಾದ ಉಳುಂದೂರ್‌ ಪೇಟೈ ಕ್ಷೇತ್ರದಲ್ಲಿ ಜಯಲಲಿತ ಸೋಲಿಸಿದ್ದರು. ಈ ಚುನಾವಣೆಯಲ್ಲಿ ವಿಜಯಕಾಂತ್ ಗಳಿಸಿದ ಮತ ಶೇ.15.14.

ಹೀಗೆ ಡಿಎಂಕೆ, ಎಐಎಡಿಎಂಕೆ ವಿರುದ್ಧವೇ ಹೊಸ ಮೈತ್ರಿ ರಚಿಸಿ ಸೋಲುವ ಮೂಲಕ ತಮಿಳುನಾಡು ರಾಜಕೀಯದ ಎರಡನೇ ಜೋಕರ್ ಎಂಬ ಕುಖ್ಯಾತಿಯನ್ನೂ ರಾಜಕೀಯ ವಲಯದಲ್ಲಿ ಅವರು ಗಳಿಸಿದ್ದಾರೆ. 2016ರಲ್ಲಿ ಇವರದೇ ಮೈತ್ರಿಯಲ್ಲಿದ್ದ ಮರುಮಲರ್ಚಿ ದ್ರಾವಿಡ ಮುನ್ನೇಟ್ರ ಕಳಗಂ (ಎಂಡಿಎಂಕೆ) ಪಕ್ಷದ ಸ್ಥಾಪಕ ವೈಕೋ ಅವರನ್ನು ಈವರೆಗೆ ‘ತಮಿಳುನಾಡಿನ ಪೊಲಿಟಿಕಲ್ ಜೋಕರ್’ ಎಂದು ಕರೆಯಲಾಗುತ್ತಿತ್ತು. ಈಗ ಡಿಎಂಕೆ ಪಾಲಾಗಿರುವ ಅವರು ಲೋಕಸಭೆ ಚುನಾವಣೆಗೆ 1 ಕ್ಷೇತ್ರವನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.

ಈ ನಡುವೆ ವಿಜಯಕಾಂತ್ ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕ ಸಭೆಗಳಿಗೂ ಕುಡಿದೇ ಬರುವ ಇವರು ಕಳೆದ ಚುನಾವಣೆ ಪ್ರಚಾರದ ವೇಳೆ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಸಾರ್ವಜನಿಕವಾಗಿ ಥಳಿಸಿ ಸುದ್ದಿಯಾಗಿದ್ದರು. ಇನ್ನು ಹಲವಾರು ಸಭೆಗಳಲ್ಲಿ ಕುಡಿದುಬಂದು ತಮ್ಮ ವಿಚಿತ್ರ ಮ್ಯಾನರಿಸಂ ಮೂಲಕ ಪೇಚಿಗೆ ಸಿಲುಕಿದ್ದು, ನೆಟ್ಟಿಗರಿಗೆ, ಟ್ರೋಲಿಗರಿಗೆ ಆಹಾರವಾಗಿದ್ದು ಇದೆ.

ಹೆಚ್ಚಾದ ಕುಡಿತದಿಂದಾಗಿ ಥೈರಾಯ್ಡ್ ನಂತಹ ಅನೇಕ ಖಾಯಿಲೆಗೆ ತುತ್ತಾಗಿರುವ ವಿಜಯಕಾಂತ್ ಇತ್ತೀಚೆಗೆ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದರು. ಚಿಕಿತ್ಸೆ ಮುಗಿಸಿ ಮರಳಿದ ತಕ್ಷಣ ಅವರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸೆಳೆದುಕೊಳ್ಳುವಲ್ಲಿ ಆಡಳಿತರೂಢ ಎಐಎಡಿಎಂಕೆ ಹಾಗೂ ಬಿಜೆಪಿ ಸಫಲವಾಗಿದೆ.

ತಮಿಳುನಾಡಿನ ಪ್ರಬಲ ರಾಜಕೀಯ ಕಣ ಎಂದೇ ಬಿಂಬಿಸಲಾಗುವ ಮಧುರೈ ಹಾಗೂ ಆ ಸುತ್ತಲಿನ ಸುಮಾರು 8 ಕ್ಷೇತ್ರಗಳಲ್ಲಿ ಜಯಲಲಿತ ಸಾವಿನ ನಂತರ ಎಐಎಡಿಎಂಕೆ ಪಕ್ಷದ ವರ್ಚಸ್ಸು ಕುಗ್ಗಿದೆ ಎಂದು ಮಾಧ್ಯಮ ಸಮೀಕ್ಷೆಗಳು ಈಗಾಗಲೇ ಹೇಳಿವೆ. ಈ ನಡುವೆ ಈ ಎಲ್ಲಾ ಕ್ಷೇತ್ರದಲ್ಲೂ ಬೂತ್ ಮಟ್ಟದಲ್ಲಿ ಸಭೆ ನಡೆಸುತ್ತಾ ದಿನೇ ದಿನೇ ಡಿಎಂಕೆ ಪ್ರಬಲವಾಗುತ್ತಿದೆ.

ಮೂಲತಃ ಮಧುರೈ ಕ್ಷೇತ್ರದವರೇ ಆದ ವಿಜಯಕಾಂತ್ ಜೊತೆಗೆ ಮೈತ್ರಿ ಮಾಡಿಕೊಂಡರೆ ಮಧುರೈ ಭಾಗದ ಕ್ಷೇತ್ರಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಆ ಮೂಲಕ ಡಿಎಂಕೆ ಗೆ ಟಾಂಗ್ ನೀಡಬಹುದು ಎಂಬುದು ಆಡಳಿತರೂಢ ಪಕ್ಷದ ಚುನಾವಣಾ ತಂತ್ರ. ಆದರೆ ಸ್ವತಃ ವಿಜಯಕಾಂತ್‌ ಪಕ್ಷಕ್ಕೆ ಶೇ. 8 ಕ್ಕಿಂತ ಹೆಚ್ಚು ಮತಹಾಕದ ಜನ ಎನ್‌ಡಿಎ ಕೂಟಕ್ಕೆ ಮತ ಚಲಾಯಿಸುತ್ತಾರೆಯೇ? ಎಂಬುದು ಪ್ರಶ್ನೆ.

ಒಟ್ಟಾರೆ ಕಳೆದ ಎರಡು ಚುನಾವಣೆ ಫಲಿತಾಂಶಗಳಿಂದ ತಮಿಳುನಾಡಿನ ‘ಪೊಲಿಟಿಕಲ್ ಜೋಕರ್’ ಎಂದೇ ಹೆಸರಾಗಿರುವ ವಿಜಯಕಾಂತ್‌ರನ್ನು ಬಳಸಿಕೊಂಡು ಎನ್‌ಡಿಎ ಮೈತ್ರಿ ಕೂಟ ಮತ್ತೊಂದು ಸುತ್ತಿನ ಅದೃಷ್ಟದಾಟಕ್ಕೆ ಮುಂದಾಗಿದೆ. ಈ ಚುನಾವಣೆಯನ್ನು ವಿಜಯಕಾಂತ್ ಅವರ ಕೊನೆಯ ಆಟ ಎಂದೂ ಬಣ್ಣಿಸಲಾಗುತ್ತಿದೆ. ಅದು ಬಿಜೆಪಿಗೆ ಭವಿಷ್ಯದಲ್ಲಿ ದುಬಾರಿಯಾಗುವ ಸಾಧ್ಯತೆಗಳಿವೆ.