samachara
www.samachara.com
ಲಿಂಗಾಯತ ಧರ್ಮದ ಅಮೂಲ್ಯ ‘ರತ್ನ’; ಮಾತೆ ಮಹದೇವಿ ಇನ್ನಿಲ್ಲ...
COVER STORY

ಲಿಂಗಾಯತ ಧರ್ಮದ ಅಮೂಲ್ಯ ‘ರತ್ನ’; ಮಾತೆ ಮಹದೇವಿ ಇನ್ನಿಲ್ಲ...

ಧಾರ್ಮಿಕ, ಸಾಹಿತ್ಯದ ಕೆಲಸಗಳಾಚೆ ಸಾಮಾಜಿಕ ಸೇವೆಗೂ ಅವರು ಧುಮುಕಿದ್ದರು. ನೂರಾರು ಜನ ಅನಾಥ ಮಕ್ಕಳನ್ನು ಸಾಕಿ, ಸಲಹಿ, ಶಿಕ್ಷಣ ನೀಡಿ, ಅವರಲ್ಲಿ ವಿವೇಕವನ್ನು ತುಂಬಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದರು.

ಬಸವಧರ್ಮ ಪೀಠದ ಅಧ್ಯಕ್ಷೆ, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟದ ಮುಂಚೂಣಿ ನಾಯಕಿ, ಬರಹಗಾರ್ತಿ, ಧರ್ಮ ಪ್ರಚಾರಕಿ ಮಾತೆ ಮಹಾದೇವಿ ಗುರುವಾರ ಸಂಜೆ 4.15ರ ಸುಮಾರಿಗೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಲ್ಲಿನ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

"ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಜತೆಗೆ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿತ್ತು. ಹೀಗಾಗಿ ಕಳೆದ 8 ದಿನಗಳಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಲಿಂಗೈಕ್ಯರಾಗಿದ್ದಾರೆ," ಎಂದು ಆಸ್ಪತ್ರೆಯಲ್ಲಿದ್ದ ನಿಜಗುಣಾನಂದ ಸ್ವಾಮೀಜಿ ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

ಯಾರು ಮಾತೆ ಮಹಾದೇವಿ?

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲ ಸಂಗಮದಲ್ಲಿರುವ ಬಸವಧರ್ಮ ಪೀಠದ ಅಧ್ಯಕ್ಷೆಯಾಗಿದ್ದವರು ಮಾತೆ ಮಹಾದೇವಿ. ತಮ್ಮ ಗುರುಗಳಾದ ಪೂಜ್ಯ ಲಿಂಗಾನಂದ ಸ್ವಾಮಿಗಳ ವಚನ ಸಾಹಿತ್ಯಕ್ಕೆ ಬೆರಗಾಗಿ ಅವರಿಂದ ಲಿಂಗ ದೀಕ್ಷೆ ಪಡೆದ ಮಹಾದೇವಿಯವರು ದಂತಕತೆಗಳ ಮೂಲಕವೂ ತಮ್ಮ ವ್ಯಕ್ತಿತ್ವವನ್ನು ನಾಡಿನ ಉದ್ದಗಲಕ್ಕೂ ವಿಸ್ತರಿಸಿಕೊಂಡವರು.

ಮಾರ್ಚ್‌13, 1946ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿದ ಮಾತೆ ಮಹದೇವಿ ಅವರ ಪೂರ್ವಾಶ್ರಮದ ಹೆಸರು ರತ್ನಾ. 1966ರಲ್ಲಿ ಚಿಕ್ಕ ವಯಸ್ಸಿಗೆ ಬಸವ ಧರ್ಮದ ದೀಕ್ಷೆ ಪಡೆದುಕೊಂಡವರು ವಿದೇಶಗಳಲ್ಲೂ ಧರ್ಮ ಪ್ರಚಾರ ನಡೆಸಿದ್ದರು.

ಅವರ ಆರಂಭದ ದಿನಗಳು ಸುಲಭದ್ದಾಗಿರಲಿಲ್ಲ. ಆದರೆ ಛಲ ಬಿಡದೆ ತಾವು ನಂಬಿದ ಸಿದ್ಧಾಂತ ಮತ್ತು ತತ್ವಗಳ ಸಾರವನ್ನು ಜನ ಸಾಮಾನ್ಯರಿಗೆ ತಲುಪಿಸಲು ಆರಂಭಿಸಿದರು. ಜನ ಸಾಮಾನ್ಯನಿಗೆ ಅರ್ಥವಾಗುವಂತೆ ವಚನಗಳನ್ನು ಅರುಹಿದರು. ಲಿಂಗಾಯತ ಪ್ರಜ್ಞೆ ಮೂಡಿಸಲು ಅಹರ್ನಿಶಿ ಶ್ರಮಿಸಿದರು. ಕೂಡಲಸಂಗಮ , ಉಳವಿ, ಬಸವಕಲ್ಯಾಣದಲ್ಲಿ ಯಾರೂ ಮರೆಯದ ಸ್ಮಾರಕಗಳನ್ನು ನಿರ್ಮಿಸಿದರು.

ಸತತವಾಗಿ ಶರಣ ಮೇಳಗಳನ್ನು ಸಂಘಟಿಸಿ, ಕಲ್ಯಾಣ ಪರ್ವಗಳನ್ನು ನಡೆಸಿ ಹಲವಾರು ಅಡೆ ತಡೆಗಳನ್ನು ಗೆದ್ದು ಬಂದರು. ಆನೆ ನಡೆದುದೆ ದಾರಿ ಆಯಿತು ಎನ್ನುವಂತೆ ಮುಂದೆ ಮಾತೆ ಮಹಾದೇವಿಯವರು ನಡೆದದ್ದೇ ದಾರಿಯಾಯಿತು.

ಮಾತೆ ಮಹಾದೇವಿಯವರು ಅತ್ಯುತ್ತಮ ಬರಹಗಾರರೂ ಆಗಿದ್ದರು. ಅವರು ಬರೆದ 'ಹೆಪ್ಪಿಟ್ಟ ಹಾಲು' ಎಂಬ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ತರಂಗಿಣಿ ಎಂಬ ತಮ್ಮ ಕೃತಿಯ ಮೂಲಕ ಅಕ್ಕಮಹಾದೇವಿ ತಾಯಿಯ ಜೀವನ ವೃತ್ತಾಂತವನ್ನು ಓದುಗರ ಕಣ್ಣ ಮುಂದೆ ಕಟೆದು ನಿಲ್ಲಿಸಿದ್ದರು. ‘ಕಲ್ಯಾಣ ಕಿರಣ’ ಎಂಬುದು ಅವರು ವಚನ ಸಾಹಿತ್ಯಕ್ಕೆ ಅವರು ನೀಡಿದ ಅಪೂರ್ವ ಕೊಡುಗೆಯಾಗಿದೆ.

ರಾಷ್ಟ್ರಕವಿ ಕುವೆಂಪು ಅವರ ಜತೆ ಮಾತೆ ಮಹಾದೇವಿ.
ರಾಷ್ಟ್ರಕವಿ ಕುವೆಂಪು ಅವರ ಜತೆ ಮಾತೆ ಮಹಾದೇವಿ.
/ಲಿಂಗಾಯತ ರಿಲಿಜನ್

ಆದರೆ ಅವರ ಕೆಲವು ಕೃತಿಗಳು ವಿವಾದಕ್ಕೂ ಗುರಿಯಾದವು. 'ಲಿಂಗದೇವ ಲೀಲಾ ವಿಲಾಸ' ಎಂಬ ಕೃತಿ ಟೀಕೆ ಟಿಪ್ಪಣಿಗಳಿಗೆ ಗುರಿಯಾದರೆ, ‘ಬಸವ ವಚನ ದೀಪ್ತಿ’ಯನ್ನು ಕರ್ನಾಟಕ ಸರಕಾರ 1998ರಲ್ಲಿ ನಿಷೇಧಿಸಿತ್ತು. ಇದರ ವಿರುದ್ಧ ಅವರು ನ್ಯಾಯಾಲಯಕ್ಕೆ ಮೊರೆ ಹೋದರಾದರೂ ಕರ್ನಾಟಕ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಎರಡೂ ಸರಕಾರದ ಆದೇಶವನ್ನು ಎತ್ತಿ ಹಿಡಿದಿದ್ದರಿಂದ ಈ ಕೃತಿ ಹೊರಬರಲೇ ಇಲ್ಲ.

ಧಾರ್ಮಿಕ, ಸಾಹಿತ್ಯದ ಕೆಲಸಗಳಾಚೆ ಸಾಮಾಜಿಕ ಸೇವೆಗೂ ಅವರು ಧುಮುಕಿದ್ದರು. ನೂರಾರು ಜನ ಅನಾಥ ಮಕ್ಕಳನ್ನು ಸಾಕಿ, ಸಲಹಿ, ಶಿಕ್ಷಣ ನೀಡಿ, ಅವರಲ್ಲಿ ವಿವೇಕವನ್ನು ತುಂಬಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದರು. ಜಗನ್ಮಾತ ಅಕ್ಕಮಹಾದೇವಿ ಹೆಸರಿನಲ್ಲಿ ಅವರು ತೆರಿದಿರುವ ಆಶ್ರಮ ನೂರಾರು ಜನರಿಗೆ ಸೂರು, ಬದುಕು ಕಲ್ಪಿಸಿದೆ.

ಇತ್ತೀಚೆಗೆ ಪ್ರಖರವಾಗಿ ಮೂಡಿ ಬಂದಿದ್ದ ಪ್ರತ್ಯೇಕ ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿಯೂ ಅವರು ಕಾಣಿಸಿಕೊಂಡಿದ್ದರು.

ಇಂತಿದ್ದ ಮಾತೆ ಮಹಾದೇವಿಯವರ ಆರೋಗ್ಯ ಇತ್ತೀಚೆಗೆ ಕುಸಿಯಲು ಆರಂಭವಾಗಿತ್ತು. ಆದರೆ ಅವರ ಉತ್ಸಾಹ ಮಾತ್ರ ಬತ್ತಿರಲಿಲ್ಲ. ಇದೇ ವರ್ಷದ ಜನವರಿ ತಿಂಗಳ ‘ಶರಣ ಮೇಳ’ದಲ್ಲಿ ಮಾತೆ ಮಹಾದೇವಿ ಭಾಗವಹಿಸುವುದು ಸಾಧ್ಯವಾಗಲಿಕ್ಕಿಲ್ಲ ಎನ್ನುವ ಹೊತ್ತಿಗೆ ಅವರು ಮೇಳದಲ್ಲಿ ಕಾಣಿಸಿಕೊಂಡು ಎಲ್ಲರಲ್ಲಿ ಅಚ್ಚರಿ ಮತ್ತು ಆಶಾವಾದವನ್ನು ಹುಟ್ಟು ಹಾಕಿದ್ದರು.

ಆದರೆ ಇದು ಹೆಚ್ಚು ದಿನ ಬಾಳಲಿಲ್ಲ. ಇದಾಗಿ ಎರಡೇ ತಿಂಗಳಿಗೆ ಅವರು ತಮ್ಮ ಅಸಂಖ್ಯಾತ ಅನುಯಾಯಿಗಳು, ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಚಿತ್ರ ಕೃಪೆ: ಲೈವ್‌ ಲಾ