samachara
www.samachara.com
‘ಕ್ಯಾಪಿಟಲಿಸಂ ವಿರುದ್ಧ ಬಂಡಾಯ’: ಬ್ಯಾಂಕ್ ಆಫ್‌ ಇಂಗ್ಲೆಂಡ್ ಹಾದಿಯಲ್ಲಿ ರಘುರಾಮ್ ರಾಜನ್
COVER STORY

‘ಕ್ಯಾಪಿಟಲಿಸಂ ವಿರುದ್ಧ ಬಂಡಾಯ’: ಬ್ಯಾಂಕ್ ಆಫ್‌ ಇಂಗ್ಲೆಂಡ್ ಹಾದಿಯಲ್ಲಿ ರಘುರಾಮ್ ರಾಜನ್

ಸಾಧಾರಣ ಶಿಕ್ಷಣ ಪಡೆದವರು ಮಧ್ಯಮ ದರ್ಜೆಯ ಉದ್ಯೋಗ ಪಡೆಯುವ ಸಾಧ್ಯತೆಗಳಿತ್ತು. ಆದರೆ 2008ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ ಇದೆಲ್ಲಾ ಬದಲಾಯಿತು. ಸರಕಾರಗಳ ಕಲ್ಯಾಣ ಕಾರ್ಯಕ್ರಮಗಳಿಗೂ ಹೊಡೆತ ಬಿತ್ತು ಎಂದು ಅವರು ವಿಮರ್ಶಿಸಿದ್ದಾರೆ.

"ಬಂಡವಾಳಶಾಹಿ (ಕ್ಯಾಪಿಟಲಿಸಂ) ವ್ಯವಸ್ಥೆ ಅತ್ಯಂತ ಅಪಾಯದಲ್ಲಿದೆ. ಕಾರಣ ಇದು ಅನೇಕರ ಪಾಲಿಗೆ ಲಾಭದಾಯಕವಾಗಿಲ್ಲ. ಇದೇ ಮುಂದುವರಿದರೆ ಬಂಡವಾಳಶಾಹಿಯ ವಿರುದ್ಧ ಜನರು ಬಂಡಾಯವೇಳಲಿದ್ದಾರೆ."

ಹೀಗಂತ ಜಗತ್ತಿನ ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್‌ ರಾಜನ್‌ ಮಂಗಳವಾರ ಹೇಳಿರುವುದು ಬಂಡವಾಳಶಾಹಿಯನ್ನು ಪ್ರತಿನಿಧಿಸುತ್ತಿರುವ ಮಾರುಕಟ್ಟೆಗಳಲ್ಲಿ ಬಿರುಗಾಳಿ ಎಬ್ಬಿಸಿದೆ.

ರಘುರಾಮ್‌ ರಾಜನ್‌ ಜಗತ್ತು 2008ರಲ್ಲಿ ಎದುರಿಸಿದ ಆರ್ಥಿಕ ಹಿಂಜರಿತದ ಮುನ್ಸೂಚನೆ ನೀಡಿದ್ದವರು. ವಿಶ್ವ ಸಂಸ್ಥೆಯ ಆರ್ಥಿಕ ವಿಭಾಗ ಐಎಂಎಫ್‌ನ ಮುಖ್ಯ ಹಣಕಾಸು ತಜ್ಞ, ಭಾರತದ ಆರ್‌ಬಿಐನ ಗವರ್ನರ್‌ ಆಗಿದ್ದವರು. ಹೀಗೆ ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿದವರು. ಇಂಥಹದ್ದೊಂದು ಹಿನ್ನೆಲೆಯ ವ್ಯಕ್ತಿ ಸದ್ಯದ ಆರ್ಥಿಕ ವ್ಯವಸ್ಥೆಯ ಬಗ್ಗೆ ಮಾತುಗಳು ಸಹಜವಾಗಿಯೇ ಆತಂಕವನ್ನು ಹುಟ್ಟುಹಾಕುತ್ತಿವೆ.

'ಬಿಬಿಸಿ ರೇಡಿಯೋ 4'ನ ಟುಡೇಸ್‌ ಪ್ರೋಗ್ರಾಂಗೆ ಸಂದರ್ಶನ ನೀಡಿರುವ ರಾಜನ್, "ಸರಕಾರಗಳು ಆರ್ಥಿಕತೆ ಕಾರಣಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಅಸಮಾನತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ," ಎಂದಿದ್ದಾರೆ.

ಈ ಹಿಂದೆ ಸಾಧಾರಣ ಶಿಕ್ಷಣ ಪಡೆದವರು ಮಧ್ಯಮ ದರ್ಜೆಯ ಉದ್ಯೋಗ ಪಡೆಯುವ ಸಾಧ್ಯತೆಗಳಿತ್ತು. ಆದರೆ 2008ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ ಇದೆಲ್ಲಾ ಬದಲಾಯಿತು. ಸರಕಾರಗಳ ಕಲ್ಯಾಣ ಕಾರ್ಯಕ್ರಮಗಳಿಗೂ ಹೊಡೆತ ಬಿತ್ತು ಎಂದು ಅವರು ವಿಮರ್ಶಿಸಿದ್ದಾರೆ.

ಇವತ್ತಿನ ಕಾಲದಲ್ಲಿ ನೀವು ಯಶಸ್ವಿಯಾಗಲೇ ಬೇಕೆಂದಿದ್ದರೆ, ನೀವು ಉತ್ತಮ ಶಿಕ್ಷಣ ಪಡೆಯಲೇಬೇಕು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಆದರೆ “ದುರದೃಷ್ಟವಶಾತ್, ಜಾಗತಿಕ ವ್ಯಾಪಾರ ಮತ್ತು ಜಾಗತಿಕ ಮಾಹಿತಿಯ ಶಕ್ತಿಗಳು ಸಮುದಾಯಗಳಿಗೆ ಹೊಡೆತ ನೀಡುತ್ತಿವೆ. ಹೀಗಾಗಿ ಈ ಸಮುದಾಯಗಳು ಹದಗೆಡುತ್ತಿರುವ ಶಾಲೆಗಳು, ಹೆಚ್ಚುತ್ತಿರುವ ಅಪರಾಧಗಳು, ಏರುತ್ತಿರುವ ಸಾಮಾಜಿಕ ಅಸ್ವಸ್ಥತೆಗಳನ್ನು ಅವಲಂಬಿಸಿದ್ದು ಜಾಗತಿಕ ಆರ್ಥಿಕತೆಗೆ ಬೇಕಾದ ಸದಸ್ಯರನ್ನು ತಯಾರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ." ಎಂದವರು ಸಾಮಾಜಿಕ ಬಿಕ್ಕಟ್ಟಿನ ಒಳನೋಟಗಳನ್ನು ಸಂದರ್ಶನದಲ್ಲಿ ಕಟ್ಟಿಕೊಟ್ಟಿದ್ದಾರೆ.

ಸಮಾನತೆಯ ಮರು ಸ್ಥಾಪನೆ:

ಬಂಡವಾಳಶಾಹಿ ವ್ಯವಸ್ಥೆ ಮುರಿದು ಬೀಳುತ್ತಿದೆ. ಕಾರಣ ಇದು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುತ್ತಿಲ್ಲ ಎಂದು ರಘುರಾಮ್‌ ರಾಜನ್‌ ಸದ್ಯ ದೇಶ ಅನುಸರಿಸುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ವಿಮರ್ಶಿಸಿದ್ದಾರೆ. ಇದರಿಂದಾಗಿ ಜನರು ಕೆಟ್ಟ ಪರಿಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡುವ ಆಲೋಚನೆಯನ್ನೂ ಅವರು ಮುಂದಿಟ್ಟಿದ್ದಾರೆ.

“ಹಾಗಂತ ನೀವು ಎಲ್ಲಾ ವಸ್ತುಗಳನ್ನು ಸಮಾನವಾಗಿ ಹಂಚಬೇಕು ಎಂಬ ನಿರ್ಧಾರಕ್ಕೆ ಬಂದರೆ ಆಗ ಸರ್ವಾಧಿಕಾರತ್ವ ಹುಟ್ಟಿಕೊಳ್ಳುತ್ತದೆ,” ಎಂಬುದಾಗಿಯೂ ಅವರು ಎಚ್ಚರಿಸಿದ್ದಾರೆ. ಆದರೆ, “ಸಮತೋಲನದ ಅಗತ್ಯವಿದೆ. ನಿಮಗೆ ಬೇಕಾಗಿದ್ದನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಇರುವ ಅವಕಾಶವನ್ನು ಮತ್ತಷ್ಟು ಸುಧಾರಿಸಬೇಕು,” ಎಂದವರು ಅಭಿಪ್ರಾಯಪಟ್ಟಿದ್ದಾರೆ.

"ಒಂದೊಮ್ಮೆ ನೀವು ಅಡಚಣೆಗಳನ್ನು ಸೃಷ್ಟಿಸಿದಲ್ಲಿ, ಅವರು ನಿಮ್ಮ ಉತ್ಪನ್ನಗಳಿಗೂ ಅದೇ ರೀತಿ ಅಡಚಣೆ ಸೃಷ್ಟಿಸುತ್ತಾರೆ. ಒಂದೊಮ್ಮೆ ಉತ್ಪನ್ನಗಳು ಗಡಿಗಳಾಚೆಗೆ ಕಳುಹಿಸುವ ಅನಿವಾರ್ಯತೆ ಇದ್ದಾಗ ನೀವು ಅವುಗಳನ್ನು ಹೇಗೆ ತಲುಪಿಸುತ್ತೀರಿ?,” ಎಂದವರು ಪ್ರಶ್ನಿಸಿದ್ದಾರೆ.

ಉನ್ನತ ಹುದ್ದೆಯ ನಿರೀಕ್ಷೆಯಲ್ಲಿ:

ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಹುದ್ದೆಗೆ ಕೇಳಿ ಬರುತ್ತಿರುವ ಹೆಸರು, ರಘುರಾಮ್‌ ರಾಜನ್.
ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಹುದ್ದೆಗೆ ಕೇಳಿ ಬರುತ್ತಿರುವ ಹೆಸರು, ರಘುರಾಮ್‌ ರಾಜನ್.
/ಸ್ವರಾಜ್ಯ

ಸದ್ಯ ರಘುರಾಮ್‌ ರಾಜನ್‌ ಕೆನಡಾ ಮೂಲದ ಮಾರ್ಕ್‌ ಕಾರ್ನಿ ಇಂಗ್ಲೆಂಡ್‌ನ ಕೇಂದ್ರ ಬ್ಯಾಂಕ್‌ನ ಗವರ್ನರ್‌ ಆಗಿದ್ದಾರೆ. ‘ಬ್ಯಾಂಕ್‌ ಆಂಫ್‌ ಇಂಗ್ಲೆಂಡ್‌’ನ ಮುಂದಿನ ಗವರ್ನರ್‌ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಒಂದೊಮ್ಮೆ ಬಿಓಇಗೆ ರಾಜನ್ ಕಾಲಿಟ್ಟರೆ, 325 ವರ್ಷಗಳ ಬ್ಯಾಂಕ್‌ನ ಇತಿಹಾಸದಲ್ಲಿ ವಿದೇಶಿಗರೊಬ್ಬರು ಈ ಹುದ್ದೆ ವಹಿಸಿಕೊಂಡ ಮೊದಲಿಗರಾಗಿದ್ದಾರೆ.

ಈ ಹಿಂದೆ 2018ರ ಏಪ್ರಿಲ್‌ನಲ್ಲಿ ‘ಫೈನಾನ್ಶಿಯಲ್‌ ಟೈಮ್ಸ್‌’ಗೆ ಪ್ರತಿಕ್ರಿಯೆ ನೀಡಿದ್ದ ರಾಜನ್, 'ನಾನು ಗವರ್ನರ್‌ ಹುದ್ದೆಗೆ ಅರ್ಜಿ ಹಾಕುತ್ತಿಲ್ಲ’ ಎಂದಿದ್ದರು. ಆದರೆ ಅವಕಾಶ ಹುಡುಕಿಕೊಂಡು ಬಂದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

1694ರಲ್ಲಿ ಸ್ಥಾಪನೆಯಾದ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಜಗತ್ತಿನ ಅತ್ಯಂತ ಹಳೆಯ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ಆ ನಂತರ ಸ್ಥಾಪನೆಯಾದ ಹೆಚ್ಚಿನ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳಿಗೆ ಇದು ಮಾದರಿಯಾಗಿದೆ. ಹೀಗಾಗಿ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನ ಗವರ್ನರ್‌ ಹುದ್ದೆಗೆ ಹಣಕಾಸು ವಲಯದಲ್ಲಿ ವಿಶೇಷ ಮನ್ನಣೆ ಇದೆ.

ಭಾರತಕ್ಕೆ ಪುನರಾಗಮನ?

ಇದರ ನಡುವೆ 2019ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಘುರಾಮ್‌ ರಾಜನ್‌ರತ್ತ ಭಾರತವೂ ನಿರೀಕ್ಷೆಯ ನೋಟ ಬೀರುತ್ತಿದೆ. ಆರ್ಥಿಕ ಹೊಡೆತಗಳಿಂದ ತತ್ತರಿಸಿರುವ ದೇಶದಲ್ಲಿ ರಘುರಾಮ್‌ ರಾಜನ್‌ ಮನಮೋಹನ್‌ ಸಿಂಗ್‌ ರೀತಿಯ ಮೋಡಿ ಮಾಡಬಹುದು ಎಂಬ ಆಶಾ ಭಾವನೆಗಳು ಒಂದು ವಲಯದಲ್ಲಿದೆ.

ಇದೇ ಹಿನ್ನೆಲೆಯಲ್ಲಿ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆಯ ವೇಳೆ ‘ಇಟಿನೌ’ ಜತೆ ಮಾತನಾಡಿದ್ದ ಅವರು, “ಭಾರತಕ್ಕೆ ಎರಡನೇ ತಲೆಮಾರಿನ ಸುಧಾರಣೆಗಳು ಬೇಕಾಗಿವೆ,” ಎಂದಿದ್ದರು. “ಇದಕ್ಕೆ ಕೇಂದ್ರಮಟ್ಟದಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ಅದನ್ನು ಜಾರಿಗೊಳಿಸುವ ಬದ್ಧತೆ ಬೇಕು,” ಎಂದು ಪ್ರತಿಪಾದಿಸಿದ್ದರು.

ಇನ್ನು ಭಾರತಕ್ಕೆ ಮರಳುವ ಸಂಬಂಧ ಇತ್ತೀಚಿಗಿನ ಎನ್‌ಡಿಟಿವಿ ಸಂದರ್ಶನದಲ್ಲಿ, “ನಾನು ಭಾರತವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು. ನಾನು ಇಲ್ಲಿ ಕಳೆದ ಸಮಯವನ್ನು ತುಂಬಾ ಆನಂದಿಸಿದೆ,” ಎಂಬುದಾಗಿಯೂ ಹೇಳಿದ್ದರು.

ಕಾರ್ಯಕ್ರಮವೊಂದರಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಜತೆ ರಘುರಾಮ್‌ ರಾಜನ್‌.
ಕಾರ್ಯಕ್ರಮವೊಂದರಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಜತೆ ರಘುರಾಮ್‌ ರಾಜನ್‌.
/ದಿ ಬ್ಯಾಲೆನ್ಸ್‌

ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತದ ರಾಜಕೀಯ ವಲಯದಲ್ಲಿ ರಘುರಾಮ್‌ ರಾಜನ್‌ ಹೆಸರು ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಇದೆ. ವಾರಗಳ ಹಿಂದೆ ನಡೆದಿದ್ದ ಇಂಡಿಯಾ ಟುಡೇ ಕಾನ್ಕ್ಲೇವ್‌ನಲ್ಲಿಯೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ರಘುರಾಮ್‌ ರಾಜನ್‌ ಕುರಿತ ಪ್ರಶ್ನೆಯೇ ಎದುರಾಗಿತ್ತು. “ಒಂದೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಘುರಾಮ್‌ ರಾಜನ್‌ಗೆ ಯಾವುದೋ ಹುದ್ದೆಯ ಪ್ರಸ್ತಾವನೆ ಇಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದು ಸತ್ಯವಾ ಸುಳ್ಳಾ?” ಎಂದು ರಾಜ್‌ದೀಪ್‌ ಸರ್ದೇಸಾಯಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಚಿದಂಬರಂ, “ನಂಗೆ ಗೊತ್ತಿರುವ ಪ್ರಕಾರ ಇಲ್ಲ. ಆದರೆ ರಘುರಾಮ್‌ ರಾಜನ್‌ ಸಾರ್ವಜನಿಕ ಸೇವೆಗೆ ಅತ್ಯಂತ ಸೂಕ್ತವಾದವರು,” ಎಂದಿದ್ದರು.

ಈ ಮೂಲಕ ಅವರು ಭಾರತಕ್ಕೆ ಬರಬೇಕು ಮತ್ತು ಅವರನ್ನು ಕರೆತರುತ್ತೇವೆ ಎನ್ನುವ ಪರೋಕ್ಷ ಸಂದೇಶವನ್ನು ಕಾಂಗ್ರೆಸ್‌ ಹಿರಿಯ ನಾಯಕರು ನೀಡಿದ್ದರು. ಆದರೆ ಅವರ ಆಗಮನ ಮತ್ತು ದೇಶದ ಭವಿಷ್ಯವನ್ನು ಮುಂಬರಲಿರುವ ಲೋಕಸಭೆ ಚುನಾವಣೆ ನಿರ್ಧರಿಸಲಿದೆ. ಅಲ್ಲಿಯವರೆಗೆ ಕಾಯಲೇಬೇಕು.