samachara
www.samachara.com
ಕುಟುಂಬ ರಾಜಕಾರಣ:  ಮಕ್ಕಳ ವಿಚಾರ ಬಂದಾಗ ಬಹುತೇಕರು ‘ಮಾರಿಕೊಂಡವರೇ...’!
COVER STORY

ಕುಟುಂಬ ರಾಜಕಾರಣ: ಮಕ್ಕಳ ವಿಚಾರ ಬಂದಾಗ ಬಹುತೇಕರು ‘ಮಾರಿಕೊಂಡವರೇ...’!

ವಂಶಾವಾಹಿ ಅಧಿಕಾರ ವ್ಯವಸ್ಥೆಗೆ ಪರ್ಯಾಯವಾಗಿ ಹುಟ್ಟಿದ್ದೆ ಪ್ರಜಾಪ್ರಭುತ್ವ. ಆದರೆ ದೀಪದ ಬುಡ ಕತ್ತಲೆ ಎಂಬ ಗಾಧೆಯಂತೆ ಭಾರತ ಸ್ವಾತಂತ್ರ್ಯಗೊಂಡು ಗಣರಾಜ್ಯ ದೇಶವಾದ ನಂತರವೂ ಈ ವಂಶವಾಹಿ ಅಥವಾ ಕುಟುಂಬ ರಾಜಕಾರಣ ಬಿಟ್ಟು ಬಿಡದೆ ಕಾಡುತ್ತಿದೆ.

ಕುಟುಂಬ ರಾಜಕಾರಣ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಲೆ ಬಂದ ರಾಜಕೀಯ ವಿಚಾರಗಳಲ್ಲಿ ಪ್ರಾದೇಶಿಕ ಪಕ್ಷವನ್ನು ಪೇಚಿಗೆ ಸಿಲುಕಿಸಿದ ವಿಚಾರ ಇದು.

ನಟ ಅಂಬರೀಷ್ ಪತ್ನಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಸ್ಫರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದರಾದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಜೆಡಿಎಸ್‌ ರಾಷ್ಟ್ರಾದ್ಯಕ್ಷರ ಕುಟುಂಬದ ಕುಡಿಯನ್ನೇ ಸಂಸತ್‌ಗೆ ಕಳುಹಿಸಲು ನಿರ್ಧರಿಸಿತು. ಇದೀಗ ಪಕ್ಷದ ನಾಯಕತ್ವ ಹಾಗೂ ರಾಜಕಾರಣದಲ್ಲಿ ಕುಟುಂಬ ಸದಸ್ಯರ ಪಾಲ್ಗೊಳ್ಳುವಿಕೆ ಸುತ್ತ ಸಾಮಾನ್ಯ ಜನರನ್ನು ಕೆರಳಿಸಿದೆ.

ನಟ ನಿಖಿಲ್ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷದ ಘೋಷಣೆಯ ಗಾಳಿ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ದೇವೇಗೌಡ ಕುಟುಂಬವನ್ನು ನೆಟ್ಟಿಗರು ಇನ್ನಿಲ್ಲದಂತೆ ಕಾಲೆಳೆಯುತ್ತಿರುವುದು ಇದಕ್ಕೆ ಸಾಕ್ಷಿ.

ಹಾಗೆ ನೋಡಿದರೆ ಭಾರತದಲ್ಲಿ ಕುಟುಂಬ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ್ದು ಗಾಂಧಿ-ನೆಹರು ಕುಟುಂಬ. ಅದನ್ನು ವಿರೋಧಿಸಿದವರೇ ಇವತ್ತು ಅದೇ ಕೂಪದಲ್ಲಿ ಮಿಂದೇಳುತ್ತಿದ್ದಾರೆ. ಕುಟುಂಬ ರಾಜಕಾರಣ ವಿಪರೀತ ಎನ್ನುವ ಮಟ್ಟಿಗೆ ಬೆಳೆದದ್ದು 80ರ ದಶಕದ ನಂತರ. ಹೀಗೆ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕೀಯದ ನೆಲೆ ಹುಟ್ಟಿದ ರೀತಿಯ ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಹತ್ತಾರು ಕುತೂಹಲಕಾರಿ ವಿಚಾರಗಳು ಹಾಗೂ ಒಂದಷ್ಟು ರೋಚಕ ಇತಿಹಾಸಗಳು ನೆನಪಾಗುತ್ತವೆ.

ಗಾಂಧಿ ಕುಟುಂಬದ ವಿರುದ್ಧ ಬಂಡೆದ್ದ ಜನತಾಪಕ್ಷ

ವಂಶಾವಾಹಿ ಅಧಿಕಾರ ವ್ಯವಸ್ಥೆಗೆ ಪರ್ಯಾಯವಾಗಿ ಹುಟ್ಟಿದ್ದೆ ಪ್ರಜಾಪ್ರಭುತ್ವ. ಜನರೇ ತಮ್ಮ ಪ್ರಭುತ್ವವನ್ನು ಆಯ್ಕೆ ಮಾಡುವ ವಿಶ್ವದ ಅತ್ಯುನ್ನತ ರಾಜಕೀಯ ಪರಿಕಲ್ಪನೆ ಅದು. ಹೇಳಿ ಕೇಳಿ ಭಾರತ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ದೀಪದ ಬುಡ ಕತ್ತಲೆ ಎಂಬ ಗಾಧೆಯಂತೆ ಭಾರತ ಸ್ವಾತಂತ್ರ್ಯಗೊಂಡು ಗಣರಾಜ್ಯ ದೇಶವಾದ ನಂತರವೂ ಈ ವಂಶವಾಹಿ ಅಥವಾ ಕುಟುಂಬ ರಾಜಕಾರಣ ಬಿಟ್ಟು ಬಿಡದೆ ಕಾಡುತ್ತಿದೆ.

ಈ ದೇಶದಲ್ಲಿ ರಾಷ್ಟ್ರೀಯ ರಾಜಕಾರಣದಿಂದ ರಾಜ್ಯದವರೆಗೆ ಕುಟುಂಬ ರಾಜಕಾರಣವನ್ನು ಒಂದು ಸಂಪ್ರದಾಯ ಎಂಬಂತೆ ಪಾಲಿಸಿಕೊಂಡು ಬರಲಾಗುತ್ತಿದೆ. ಹಾಗೆ ನೋಡಿದರೆ ದೇಶದಲ್ಲಿ ಕುಟುಂಬ ರಾಜಕಾರಣಕ್ಕೆ ಅಂಕಿತ ಹಾಕಿದ್ದೆ ಗಾಂಧಿ-ನೆಹರು ಕುಟುಂಬ. ಈ ಕುಟುಂಬದ ಮೂವರು ದೇಶದ ಉನ್ನತ ಪ್ರಧಾನಿ ಹುದ್ದೆಗೆ ಏರಿದ್ದಾರೆ. ಇದೇ ಕುಟುಂಬದ ಮತ್ತೊಂದು ಕುಡಿ ರಾಹುಲ್ ಗಾಂಧಿ ಇಂದು ಪ್ರಧಾನಿ ಹುದ್ದೆಯ ಪ್ರಮುಖ ಆಕಾಂಕ್ಷಿ.

80ರ ದಶಕದಲ್ಲಿ ಆರಂಭದಲ್ಲಿ ಕಾಂಗ್ರೆಸ್‌ನಲ್ಲಿ ಬೀಡು ಬಿಟ್ಟಿದ್ದ ಇದೇ ವಂಶವಾಹಿ ರಾಜಕಾರಣದ ವಿರುದ್ಧ ಇಡೀ ದೇಶದ ಪ್ರಮುಖ ರಾಜಕಾರಣಿಗಳು ಧ್ವನಿ ಎತ್ತಿದ್ದರು. ಆ ಕಾಲದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ಕಟು ಟೀಕೆ ಮಾಡುತ್ತಿದ್ದವರ ಪೈಕಿ ಜಯಪ್ರಕಾಶ್ ನಾರಾಯಣ್, ವಾಜಪೇಯಿ ಹಾಗೂ ಅಡ್ವಾಣಿ ಮೊದಲಿಗರಾಗಿದ್ದರು.

ಲೋಹಿಯಾ ಮತ್ತು ಜೆಪಿ ವಿಚಾರಧಾರೆಯಿಂದ ಪ್ರಭಾವಿತರಾದ ಮುಲಾಯಂ, ಲಾಲೂ, ದೇವಿಲಾಲ್, ಜಾರ್ಜ್ ಫರ್ನಾಂಡೀಸ್, ಬಿಜು ಪಟ್ನಾಯಕ್, ಕರ್ನಾಟಕದ ರಾಮಕೃಷ್ಣ ಹೆಗಡೆ, ದೇವೇಗೌಡ ಆದಿಯಾಗಿ ಎಲ್ಲಾ ನಾಯಕರು ಕಾಂಗ್ರೆಸ್ ನ ಈ ಸಂಪ್ರದಾಯವನ್ನು ಟೀಕಿಸಿದವರೇ.

ನಂತರ ವಿರೋಧ ಪಕ್ಷಗಳನ್ನೆಲ್ಲ ಒಂದು ಮಾಡಿದ ಜಯಪ್ರಕಾಶ್ ನಾರಾಯಣ್ ‘ಜನತಾಪಕ್ಷ’ ಸ್ಥಾಪಿಸಿದರು. ಪರಿಣಾಮ 1977ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಾಂಗ್ರೇಸೇತರ ಪಕ್ಷ ಸರಕಾರ ರಚಿಸಿದ್ದು, ಕಾಂಗ್ರೇಸೇತರ ವ್ಯಕ್ತಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದು ಇಂದು ಇತಿಹಾಸ.

ಈ ಇತಿಹಾಸವನ್ನು ಸಾಧ್ಯವಾಗಿಸಿದ್ದು, ಜಯಪ್ರಕಾಶ ನಾರಾಯಣ್ ಎಂಬ ಚಳವಳಿಗಾರನ ನಿಸ್ವಾರ್ಥ ಹೋರಾಟ. ಈ ಘಟನೆಯೊಂದಿಗೆ ಕೊನೆಗೂ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮತ್ತೆ ಸ್ಥಾಪಿಸಿದ ನೆಮ್ಮದಿ ಅವರಲ್ಲಿ ಮೂಡಿತ್ತು. ಆದರೆ ಈ ಖುಷಿ ತುಂಬಾ ದಿನ ಉಳಿಯಲಿಲ್ಲ. 1979 ರಲ್ಲಿ ಜೆಪಿ ಅವರ ಮರಣದ ನಂತರ ಜನತಾಪಾರ್ಟಿ ಮತ್ತೆ ಒಡೆದು ಹೋಯಿತು.

ಪರಿಣಾಮ ಅಂದು ಯಾರೆಲ್ಲಾ ಕಾಂಗ್ರೆಸ್ ವಂಶವಾಹಿ ಆಡಳಿತವನ್ನು ವಿರೋಧಿಸಿದರೋ ಇಂದು ಅವರೇ ಜನತಾಪಕ್ಷದಿಂದ ಹೊರಬಂದು ತಮ್ಮದೇ ಕುಟುಂಬ ರಾಜಕಾರಣ ಮಾಡುತ್ತಾ ತಮ್ಮದೇ ತತ್ವಕ್ಕೆ ಬೆನ್ನು ತೋರಿಸಿ ನಿಂತಿರುವುದು ವಿಪರ್ಯಾಸ. ಒಂದರ್ಥದಲ್ಲಿ ಕುಟುಂಬ ರಾಜಕಾರಣ ಎಂಬ ಪದವೇ ಇಂದು ಈ ದೇಶದಲ್ಲಿ ಸವಕಲು ನಾಣ್ಯ ಎಂಬಂತಾಗಲು ಇವರ ಕೊಡುಗೆ ಅಪಾರ.

ಕುಟುಂಬ ರಾಜಕಾರಣಕ್ಕೆ ಪ್ರದೇಶಿಕ ಪಕ್ಷಗಳೆ ನೆಲೆ

ಆರ್‌ಜೆಡಿ ಪಕ್ಷದ ಸ್ಥಾಪಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅಂಡ್ ಫ್ಯಾಮಿಲಿ.
ಆರ್‌ಜೆಡಿ ಪಕ್ಷದ ಸ್ಥಾಪಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅಂಡ್ ಫ್ಯಾಮಿಲಿ.
/ದಿ ವೀಕ್.

ಭಾರತದ ಮಟ್ಟಿಗೆ ಕುಟುಂಬ ರಾಜಕಾರಣಕ್ಕೆ ಪ್ರಮುಖ ನೆಲೆ ಕಲ್ಪಿಸಿದ್ದೇ ಪ್ರಾದೇಶಿಕ ಪಕ್ಷಗಳು ಎನ್ನಬಹುದು. ಈ ಇತಿಹಾಸವನ್ನು ಕೆದಕುತ್ತಾ ಹೋದರೆ ಬಿಹಾರದ ಆರ್‌ಜೆಡಿ ಪಕ್ಷದ ಸ್ಥಾಪಕ ಲಾಲೂ ಪ್ರಸಾದ್ ಯಾದವ್ ರಿಂದ ತಮಿಳುನಾಡಿನ ಕರುಣಾನಿಧಿವರೆಗೆ ದೊಡ್ಡ ಪಟ್ಟಿಯೇ ಇದೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಆಂಧ್ರದಲ್ಲಿ ಕೆಸಿಆರ್, ತೆಲಂಗಾಣದಲ್ಲಿ ವೈಎಸ್‍ಆರ್ ಕಾಂಗ್ರೆಸ್, ಟಿಡಿಪಿ, ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್, ಒಡಿಸ್ಸಾದ ಬಿಜು ಜನತಾದಳ, ಮಹರಾಷ್ಟ್ರದ ಶಿವಸೇನೆ ಕರ್ನಾಟಕದ ಜೆಡಿಎಸ್ ಹೀಗೆ ಪಟ್ಟಿ ಮುಂದುವರಿಯುತ್ತದೆ.

ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಹೋರಾಟದಿಂದ ಪ್ರೇರಿತರಾಗಿ ಚಳುವಳಿಗೆ ಧುಮುಕಿದವರು ಲಾಲೂ ಪ್ರಸಾದ್ ಯಾದವ್. ಚಳುವಳಿಯಿಂದ ರಾಜಕಾರಣಕ್ಕೆ ಬರಲು ಅವರಿಗೆ ತುಂಬಾ ವರ್ಷಗಳು ಬೇಕಿರಲಿಲ್ಲ. ತುರ್ತು ಪರಿಸ್ಥಿತಿಯ ನಂತರ ನಡೆದ ಮೊದಲ ಚುನಾವಣೆಯಲ್ಲಿ 1977ರಲ್ಲಿ ಕಾಂಗ್ರೆಸ್ ವಿರುದ್ಧ ಜನತಾಪಾರ್ಟಿಯಿಂದ ಸ್ಫರ್ಧಿಸಿದ ಲಾಲೂ ಪ್ರಸಾದ್ ಯಾದವ್ ಅಭುತಪೂರ್ವ ಗೆಲುವು ಸಾಧಿಸಿದ್ದರು. ಕೇವಲ 29 ವರ್ಷಕ್ಕೆ ಸಂಸತ್ ಪ್ರವೇಶಿಸಿದ್ದರು.

ಹೀಗೆ ಕಾಂಗ್ರೆಸ್ ವಿರುದ್ಧವಾಗಿ ಮಾತನಾಡುತ್ತಲೇ ರಾಜಕೀಯವಾಗಿ ಬೆಳೆದು ನಂತರ ಜನತಾ ಪಕ್ಷದಿಂದ ಹೊರಬಂದು 1997ರಲ್ಲಿ ಆರ್‌ಜೆಡಿ ಪಕ್ಷ ಕಟ್ಟಿದ ಲಾಲೂ ಅದೇ ಕಾಂಗ್ರೆಸ್ನ ಯುಪಿಎ ಮಂತ್ರಿಮಂಡಲದಲ್ಲಿ ರೈಲ್ವೆ ಸಚಿವರಾದದ್ದು ಒಂದು ದುರಂತವಾದರೆ, 80ರ ದಶಕದಲ್ಲಿ ಯಾವ ಕುಟುಂಬ ರಾಜಕಾರಣದ ವಿರುದ್ಧ ಇವರು ಧ್ವನಿ ಎತ್ತಿದ್ದರೋ ಇಂದು ತಾವು ಅದನ್ನೇ ಪಾಲಿಸುತ್ತಿರುವುದು ಮತ್ತೊಂದು ದುರಂತ.

ಲಾಲೂ ಹೆಂಡತಿ ರಾಬ್ಡಿ ದೇವಿ ಮಾಜಿ ಮುಖ್ಯಮಂತ್ರಿಯಾದರೆ, ಅವರ ಇಬ್ಬರು ಮಕ್ಕಳು ಹಾಗೂ ಓರ್ವ ಮಗಳು ಸಹ ಸಕ್ರೀಯ ರಾಜಕಾರಣದಲ್ಲಿ ತೊಡಗಿದ್ದಾರೆ. ಅವರ ಎರಡನೇ ಮಗ ತೇಜಸ್ವಿಯಾದವ್ ಮಾಜಿ ಉಪಮುಖ್ಯಮಂತ್ರಿ ಎಂಬುದು ಉಲ್ಲೇಖಾರ್ಹ.

ಕಾಂಗ್ರೆಸ್ ವಿರೋಧಿ ರಾಜಕೀಯ ಮಾಡುತ್ತಲೇ ಬಂದಂತಹ ದೇಶದ ಬಹುತೇಕ ಪಕ್ಷಗಳ ಕತೆಯೂ ಇದೇ ಆಗಿದೆ. ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶೇಕ್ ಅಬ್ದುಲ್ಲಾ ನಂತರ ಅವರ ಪುತ್ರ ಫಾರೂಕ್ ಅಬ್ದುಲ್ಲಾ ಈಗ ಅವರ ಮೊಮ್ಮಗ ಓಮರ್ ಅಬ್ದುಲ್ಲಾ ಆ ಸ್ಥಾನಕ್ಕೆ ಪ್ರಮೋಟ್ ಆಗಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಕರುಣಾ ನಿದಿಯವರ ಜಾಗಕ್ಕೀಗ ಅವರ ಪುತ್ರ ಸ್ಟಾಲಿನ್ ಬಂದು ಕೂತಿದ್ದಾರೆ.

ಒಡಿಸ್ಸಾದ ಬಿಜು ಜನತಾದಳದ ಬಿಜು ಪಟ್ನಾಯಕ್ ನಿಧನಾನಂತರ ಅವರ ಪುತ್ರ ನವೀನ್ ಪಟ್ನಾಯಕ್, ಮಹಾರಾಷ್ಟ್ರದ ಶಿವಸೇನೆಯ ಬಾಳಠಾಕ್ರೆಯ ನಂತರ ಅವರ ಪುತ್ರ ರಾಜ್ ಠಾಕ್ರೆ, ಕಾಶ್ಮೀರದಲ್ಲಿ ಮುಫ್ತಿ ಮಹಮದ್ ಸಯೀದ್ ನಂತರ ಅವರ ಪುತ್ರಿ ಸಯೀದಾ ಮುಫ್ತಿ, ಆಂದ್ರಪ್ರದೇಶದಲ್ಲಿ ತೆಲುಗುದೇಶಂನ ಎನ್.ಟಿ.ರಾಮರಾವ್‍ ನಂತರ ಅವರ ಅಳಿಯ ಚಂದ್ರಬಾಬು ನಾಯ್ಡು, ಸಕ್ರಿಯ ರಾಜಕಾರಣದಲ್ಲಿ ತಮ್ಮತಮ್ಮ ಕುಟುಂಬಗಳನ್ನು ಪ್ರತಿನಿಧಿಸುತ್ತ ಬರುತ್ತಿದ್ದಾರೆ.

ಬಿಜೆಪಿಯಲ್ಲಿ ವಾಜಪೇಯಿ, ಅಡ್ವಾಣಿ ಯುಗಾಂತ್ಯವಾಗಿದೆ. ಅಂದಿನ ಮುಂಚೂಣಿ ನಾಯಕರಾಗಿದ್ದ ಕಲ್ಯಾಣ್ ಸಿಂಗ್, ರಾಜನಾಥ್ ಸಿಂಗ್, ಯಶವಂತ್ ಸಿನ್ಹಾ, ವಸುಂಧರರಾಜೆ ಮೊದಲಾದ ನಾಯಕರ ಮಕ್ಕಳನ್ನು ಸಹ ಇದೀಗ ಪ್ರಭಾವಿ ನಾಯಕರನ್ನಾಗಿ ರೂಪಿಸಲಾಗಿದೆ.

ದೇಶದ ವಿವಿಧ ಪಕ್ಷಗಳ ಕುಟುಂಬ ರಾಜಕಾರಣ ಕಥೆ ಒಂದು ಬಗೆಯದ್ದಾದರೇ ಕರ್ನಾಟಕದ ಜೆಡಿಎಸ್ ಪಕ್ಷದ ಕಥೆಯೇ ಒಂದು ಬಗೆ. ಕಾರಣ ಮೇಲೆ ಉಲ್ಲೇಖಿಸಿರುವ ಎಲ್ಲಾ ಪಕ್ಷಗಳನ್ನೂ ಸಾಮಾನ್ಯವಾಗಿ ಆಯಾ ರಾಜ್ಯದಲ್ಲಿ ಅಪ್ಪ-ಮಕ್ಕಳ ಪಕ್ಷ ಎಂದೇ ಲೇವಡಿಗೆ ಒಳಗಾಗುತ್ತದೆ. ಆದರೆ ಇಡೀ ದೇಶದಲ್ಲೇ ತಾತ-ಮೊಮ್ಮಕ್ಕಳ ಪಕ್ಷ ಎಂದು ಕರೆಸಿಕೊಳ್ಳುವ ಏಕೈಕ ಪಕ್ಷ ಎಂದರೆ ಅದು ಜೆಡಿಎಸ್ ಮಾತ್ರ. ಅದಕ್ಕೆ ಕಾರಣಗಳೂ ಇಲ್ಲದೇ ಏನಿಲ್ಲ.

ರಾಜ್ಯದಲ್ಲಿ ಕುಟುಂಬ ರಾಜಕಾರಣ

ರಾಜ್ಯದಲ್ಲೂ ಯಾವುದೇ ಪಕ್ಷ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ತಮ್ಮ ಜೊತೆಗೆ ತಮ್ಮ ಮಕ್ಕಳನ್ನೂ ರಾಜಕೀಯಕ್ಕೆ ಕೈಹಿಡಿದು ಕರೆತಂದಿದ್ದಾರೆ. ಆದರೆ, ಈ ಸಂಪ್ರದಾಯನ್ನು ವ್ಯಾಪಕವಾಗಿ ಚಾಲ್ತಿಗೆ ತಂದವರು ಹಾಗೂ ಅದರ ಫಲ ಉಂಡವರು ಮಾತ್ರ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ.

ರಾಜ್ಯದ ನಾಲ್ಕನೇ ಮುಖ್ಯಮಂತ್ರಿ ನಿಜಲಿಂಗಪ್ಪನವರಿಂದ ಬಿಜೆಪಿಯ ಯಡಿಯೂರಪ್ಪನವರೆಗೆ ಬಹುತೇಕ ನಾಯಕರ ಮಕ್ಕಳು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದಿವಂಗತ ನಿಜಲಿಂಗಪ್ಪ ಅವರ ಅಳಿಯ ರಾಜಶೇಖರನ್ ಕಾಂಗ್ರೆಸ್‌ನ ಹಿರಿಯ ನಾಯಕರಾದರು ಹೆಚ್ಚಾಗಿ ಗುರುತಿಸಿಕೊಂಡವರಲ್ಲ. ವೀರೇಂದ್ರ ಪಾಟೀಲ್ ಅವರ ಪುತ್ರ ಕೈಲಾಸನಾಥ ಪಾಟೀಲ್ ಕಲಬುರಗಿಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರೂ ಇಂದು ಕ್ಷೇತ್ರ ಪುನರ್ ವಿಂಗಡನೆ ನಂತರ ಮಾಜಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಮಾಜಿ ಸಿಎಂ ಗುಂಡೂರಾವ್ ಅವರ ಪುತ್ರ ದಿನೇಶ್‍ಗುಂಡೂರಾವ್ ರಾಜ್ಯ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷರಾಗಿದ್ದಾರೆ. ಇನ್ನು ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಪುತ್ರಿ ಮಮತಾ ನಿಚ್ಚಾನಿ ಒಮ್ಮೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರೂ ನಂತರದಲ್ಲಿ ಅವರು ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಇವರ ಕುಟುಂಬದವರಾರು ರಾಜಕಾರಣದಲ್ಲಿ ಸದ್ಯ ಸಕ್ರಿಯವಾಗಿಲ್ಲ.

ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಪುತ್ರಿ ಮಹಿಮಾ ಪಟೇಲ್ ಒಮ್ಮೆ ಶಾಸಕರಾಗಿ ಆಯ್ಕೆಯಾದರೂ, ಮರು ಆಯ್ಕೆಗೆ ನಡೆಸಿದ ಪ್ರಯತ್ನ ಈಡೇರಲಿಲ್ಲ. ಜೆಡಿಎಸ್, ಕಾಂಗ್ರೆಸ್‍ನಲ್ಲಿ ರಾಜಕಾರಣ ಮಾಡಿ ಹೊಸ ಪಕ್ಷ ಕಟ್ಟಿ ವಿಫಲರಾದ ಅವರು ಇದೀಗ ಸಂಯುಕ್ತ ಜನತಾದಳದಲ್ಲಿ ಗುರುತಿಸಿಕೊಂಡಿದ್ದಾರೆ.

ಜೆ.ಎಚ್.ಪಟೇಲ್ ರಾಜ್ಯದ ಸಿಎಂ ಆಗಿದ್ದ ವೇಳೆಯೇ ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಪರ್ಧಿಸಲು ಯತ್ನಿಸಿ ತಮ್ಮ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದ ತ್ರಿಶೂಲ್ ಪಾಣಿ ಪಟೇಲ್ ನಂತರದಲ್ಲಿ ಲೋಕಶಕ್ತಿ ಸಂಯುಕ್ತ ಜನತಾದಳ ಸೇರಿ ಹಲವು ಪಕ್ಷಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.

ರಾಜಕಾರಣದಲ್ಲಿ ಯಶಸ್ಸು ಕಂಡ ಮತ್ತೊಂದು ಕುಟುಂಬ ಬಂಗಾರಪ್ಪ ಅವರ ಕುಟುಂಬ. ಇವರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಎರಡು ಬಾರಿ ಶಾಸಕರಾಗಿ ಮಂತ್ರಿಯೂ ಆಗಿದ್ದರು. ತಮ್ಮ ತಂದೆ ನಡೆಸಿದ ಎಲ್ಲಾ ರಾಜಕೀಯ ಪ್ರಯೋಗಗಳಲ್ಲಿ ಪಾಲುದಾರರಾಗಿದ್ದರು. ಆದರೆ ಕೌಟುಂಬಿಕ ಕಲಹದ ಪರಿಣಾಮವಾಗಿ ಕೊನೆಯ ಹಂತದಲ್ಲಿ ಅವರು ನಡೆಸಿದ ಪ್ರಯೋಗವಾದ ಸಮಾಜವಾದಿ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಸೇರ್ಪಡೆಯಿಂದ ಕುಮಾರಬಂಗಾರಪ್ಪ ದೂರವೇ ಉಳಿದರು. ಅಷ್ಟೇ ಅಲ್ಲ ತಮ್ಮ ತಂದೆಯವರ ಕರ್ಮಭೂಮಿ ಸೊರಬದಿಂದ ವಿಧಾನಸಭೆಗೆ ಆಯ್ಕೆಯಾಗುವ ಪ್ರಯತ್ನ ನಡೆಸಿ ವಿಫಲರಾದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಕ್ಕಳು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಕ್ಕಳು.
/ರೆಡಿಫ್.ಕಾಮ್

ಹಿರಿಯ ಪುತ್ರನಿಂದ ತೆರವಾದ ಈ ಸ್ಥಾನವನ್ನು ಬಂಗಾರಪ್ಪ ಅವರ ಕಿರಿಯಪುತ್ರ ಮಧು ಬಂಗಾರಪ್ಪ ತುಂಬಿದರು. ಸೊರಬದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದ ಮಧು ಬಂಗಾರಪ್ಪ ಕಳೆದ ಚುನಾವಣೆಯಲ್ಲಿ ಸೋಲುಂಡು ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಫರ್ಧಿಸುವ ತಯಾರಿ ನಡೆಸುತ್ತಿದ್ದಾರೆ. ಇನ್ನು ಬಂಗಾರಪ್ಪ ಅವರ ಪುತ್ರಿ ನಟ ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಕೂಡ ಆಗಾಗ್ಗೆ ಚುನಾವಣಾ ಕಣಕ್ಕೆ ಬಂದು ಹೋಗುತ್ತಿರುತ್ತಾರೆ.

ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜು ಬೊಮ್ಮಾಯಿ ಸಂಯುಕ್ತ ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿ ವಿಧಾನ ಪರಿಷತ್‍ ಗೆ ಆಯ್ಕೆಯಾದರು. ಅಖಿಲ ಭಾರತ ಪ್ರಗತಿಪರ ಜನತಾದಳದೊಂದಿಗೆ ಗುರುತಿಸಿಕೊಂಡ ಅವರು ನಂತರದಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿ ಮಂತ್ರಿಯೂ ಆದರು. ಎಸ್.ಆರ್. ಬೊಮ್ಮಾಯಿ ಅವರ ಮತ್ತೊಬ್ಬ ಪುತ್ರ ಕೂಡಾ ರಾಜಕೀಯ ಪ್ರವೇಶಿಸಲು ಬಯಸಿದರೂ ನಂತರ ತಮ್ಮ ನಿಲುವು ಬದಲಿಸಿ ಉದ್ಯಮಿಯಾಗಿದ್ದಾರೆ. ಈಗ ಈ ಕುಟುಂಬದಿಂದ ಬಸವರಾಜ ಬೊಮ್ಮಾಯಿ ಮಾತ್ರ ಸಕ್ರಿಯ ರಾಜಕಾರಣಿ.

ಮಾಜಿ ಸಿಎಂ ಧರ್ಮಸಿಂಗ್ ಅವರ ಇಬ್ಬರ ಪುತ್ರರ ಪೈಕಿ ಅಜಯ್‍ಸಿಂಗ್ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕಲಬುರಗಿಯ ಜೇವರ್ಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ಪುತ್ರ ವಿಜಯ್‍ ಸಿಂಗ್ ಬೀದರ್ ನಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಇಬ್ಬರೂ ಪುತ್ರರೂ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.

ಮಾಜಿ ಸಿಎಂ ವೀರಪ್ಪ ಮೋಯ್ಲಿ ಅವರ ಪುತ್ರ ಹರ್ಷ ಮೋಯ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಕಣಕ್ಕಿಳಿಯಲು ಪ್ರಯತ್ನಿಸಿದರೂ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ಸಾಧ್ಯವಾಗದೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಅಂದಿನಿಂದಲೂ ಸಕ್ರಿಯರಾಗಿರುವ ಇವರು ಉದ್ಯಮದ ಜೊತೆಗೆ ರಾಜಕಾರಣವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಜಿಲ್ಲಾ ಪಂಚಾಯ್ತಿ ಮೂಲಕ ರಾಜಕಾರಣ ಆರಂಭಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ವಿಧಾನಸಭಾ ಸದಸ್ಯರಾಗಿಯೂ ಆಯ್ಕೆಯಾಗಿರುವ ಇವರು ತಮ್ಮ ತಂದೆಯ ನೆರಳಿನಲ್ಲೇ ಸಾಗಿದ್ದಾರೆ.

ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ಸಂಸದ ಬಿ.ವೈ. ರಾಘವೇಂದ್ರ.
ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ಸಂಸದ ಬಿ.ವೈ. ರಾಘವೇಂದ್ರ.
/ಒನ್ ಇಂಡಿಯಾ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸೋದರ ಪ್ರದೀಪ್ ಶೆಟ್ಟರ್ ಒಮ್ಮೆ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಸೋಲು ಕಂಡು ಇದೀಗ ಮತ್ತೆ ಆಯ್ಕೆಯಾಗುವ ಮೂಲಕ ಸಕ್ರಿಯರಾಗಿರುವುದು ಬಿಟ್ಟರೆ ಬೇರೆ ಯಾರೂ ಸಕ್ರಿಯರಾಗಿಲ್ಲ. ಮಾಜಿ ಸಿಎಂ ಸದಾನಂದಗೌಡ ಅವರ ಕುಟುಂಬದಲ್ಲೂ ಕೂಡಾ ಅವರನ್ನು ಬಿಟ್ಟರೆ ಬೇರೆಯಾರೂ ಸಕ್ರಿಯ ರಾಜಕಾರಣದಲ್ಲಿಲ್ಲ.

ಹೀಗೆ ರಾಜ್ಯದ ಎಲ್ಲಾ ಪ್ರಮುಖ ನಾಯಕರ ಮಕ್ಕಳು ಹಾಗೂ ಸಂಬಂಧಿಗಳು ಇಂದು ರಾಜಕೀಯವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆದರೆ ಇವರ ಕಥೆ ಒಂದು ಬಗೆಯಾದರೆ ಜೆಡಿಎಸ್ ಕಥೆಯೇ ಬೇರೆ.

ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಟೇಲ್ ಹೊರತು ಮೇಲೆ ಉಲ್ಲೇಖಿಸಿರುವ ಎಲ್ಲಾ ನಾಯಕರು ರಾಷ್ಟ್ರೀಯ ಪಕ್ಷದಲ್ಲಿ ಗುರುತಿಸಿಕೊಂಡವರು. ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುವಂತೆ ಇವರ ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ. ಈ ಪೈಕಿ ಕೆಲವರು ಮಾತ್ರ ಸಫಲರಾಗಿದ್ದಾರೆ. ಆದರೆ, ಜೆಡಿಎಸ್ ವಿಚಾರದಲ್ಲಿ ಹಾಗಲ್ಲ.

ರಾಜ್ಯದ ಇತಿಹಾಸದಲ್ಲೇ ಮಾಜಿ ಸಿಎಂ ಹಾಗೂ ಮಾಜಿ ಪ್ರಧಾನಿ ಒಬ್ಬರ ಪುತ್ರ ಶಾಸಕನಾದ ಮೊದಲ ಅವಧಿಯಲ್ಲೇ ಮುಖ್ಯ ಮಂತ್ರಿಯಾಗುವ ಮೂಲಕ ರಾಜ್ಯದ ರಾಜಕೀಯ ಚರಿತ್ರೆಯ ಪುಟಗಳಲ್ಲಿ ಕುಮಾರಸ್ವಾಮಿ ಹೊಸ ದಾಖಲೆಯನ್ನೇ ಸೃಷ್ಠಿಸಿದ್ದಾರೆ. ಇವರ ಪತ್ನಿ ಅನಿತಾ ಕುಮಾರಸ್ವಾಮಿ ಒಂದು ಅವಧಿಗೆ ಶಾಸಕರಾಗಿದ್ದರು. ಇದೀಗ ಈ ದಂಪತಿಯ ಪುತ್ರ ನಟ ನಿಖಿಲ್ ಮಂಡ್ಯದಿಂದ ಲೋಕಸಭೆಗೆ ಸ್ಫರ್ಧಿಸುವ ಉಮೇದಿನಲ್ಲಿದ್ದಾರೆ.

ಭಾರತದ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಹಾಗೂ ರಾಜ್ಯ ರಾಜಕಾರಣದಲ್ಲಿ ಸಕ್ರೀಯರಾಗಿರುವ ಅವರ ಸಮಸ್ತ ಕುಟುಂಬ.
ಭಾರತದ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಹಾಗೂ ರಾಜ್ಯ ರಾಜಕಾರಣದಲ್ಲಿ ಸಕ್ರೀಯರಾಗಿರುವ ಅವರ ಸಮಸ್ತ ಕುಟುಂಬ.
/ಕನ್ನಡ ಪ್ರಭ

ಹಿರಿಯ ಮಗ ಹೆಚ್.ಡಿ. ರೇವಣ್ಣ ಸಮ್ಮಿಶ್ರ ಸರಕಾರದಲ್ಲಿ ಪ್ರಮುಖ ಖಾತೆಯಲ್ಲಿದ್ದರೆ, ಅವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಇವರ ಪುತ್ರ ಪ್ರಜ್ವಲ್ ರೇವಣ್ಣ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.

ಅಲ್ಲಿಗೆ ದೊಡ್ಡಗೌಡರ ಮೂರು ತಲೆ ಮಾರುಗಳು ರಾಜಕಾರಣದಲ್ಲಿ ತೊಡಗಿಕೊಂಡಿಂತಾಗಿದೆ. ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷ ಎಂಬ ಸೀಮೆಯನ್ನು ದಾಟಿ ಅಪ್ಪ ಮೊಮ್ಮಕ್ಕಳ ಪಕ್ಷ ಎಂಬ ಹೊಸ ಆರೋಪಕ್ಕೆ ಗುರಿಯಾಗಿದೆ. ಒಂದು ಸವಕಲು ನಾಣ್ಯವನ್ನು ಉಜ್ಜಿದರೆ ಇನ್ನೇನು ಹೊಸತು ಕಾಣಲು ಸಾಧ್ಯ?