samachara
www.samachara.com
‘ಪುಲ್ವಾಮಾ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ; ಉದ್ಯೋಗವೇ ಆದ್ಯತೆ’: ಪಿ. ಚಿದಂಬರಂ
COVER STORY

‘ಪುಲ್ವಾಮಾ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ; ಉದ್ಯೋಗವೇ ಆದ್ಯತೆ’: ಪಿ. ಚಿದಂಬರಂ

ಇದು ಲೋಕಸಭೆ ಚುನಾವಣೆ-2019ರ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಪ್ರಕಟಿಸಿದ ಸಂದರ್ಶನ. ಪುಲ್ವಾಮಾ ದಾಳಿ, ಅರ್ಥ ವ್ಯವಸ್ಥೆ, ಸುಧಾರಣೆ ಸಾಧ್ಯತೆಗಳ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮಾತುಗಳು ಚರ್ಚೆಯ ಗಂಭೀರತೆಯನ್ನು ಹೆಚ್ಚಿಸುವಂತಿವೆ.

 • ಅನ್ನಪೂರ್ಣ ಸಿಂಗ್
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರು. ರಕ್ಷಣೆ, ಹಣಕಾಸು ಮುಂತಾದ ಮಹತ್ವದ ಖಾತೆಗಳನ್ನು ನಿರ್ವಹಿಸಿದ ಅನುಭವಿ. ಭಾರತದ ಅರ್ಥ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದ ಹೆಗ್ಗಳಿಕೆಯೂ ಅವರಿಗೆ ಇದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರ ಸಂದರ್ಶನ ಇಲ್ಲಿದೆ.
 • ಮತದಾನ ಆರಂಭಕ್ಕೆ ತಿಂಗಳಷ್ಟೇ ಇದೆ. ಕಾಂಗ್ರೆಸ್‌ಗೆ ಪುಲ್ವಾಮಾ ತಡೆ ಒಡ್ಡಿದೆಯೇ...

ಪುಲ್ವಾಮಾ ದಾಳಿಯನ್ನು ನಾವು ಖಂಡಿಸಿದ್ದೇವೆ. ಭಾರತದ ವಾಯುಪಡೆಯು ಬಾಲಾಕೋಟ್‌ ಮೇಲೆ ದಾಳಿ ನಡೆಸಿದಾಗ ವಾಯುಪಡೆಯನ್ನು ಅಭಿನಂದಿಸಿದವರಲ್ಲಿ ನಾವೇ ಮೊದಲಿಗರು. ಅದು ಅಲ್ಲಿಗೇ ನಿಲ್ಲಬೇಕಿತ್ತು. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಕೀಯ ಪಕ್ಷಗಳ ಸಹಮತ ಹಾಗೆಯೇ ಉಳಿಯಬೇಕಿತ್ತು. ಆದರೆ, ಬಿಜೆಪಿ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳತೊಡಗಿತು. ಸಹಜವಾಗಿಯೇ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ನೆನಪು ಮಾಡಿಕೊಳ್ಳಿ, ನಾವು ಮೊದಲಿಗೆ ಈ ವಿಚಾರದಲ್ಲಿ ಪ್ರಶ್ನೆಯನ್ನು ಎತ್ತಲಿಲ್ಲ. ಮೊದಲಿಗೆ ಪ್ರಶ್ನೆ ಕೇಳಿದ್ದು ಅಂತರರಾಷ್ಟ್ರೀಯ ಮಾಧ್ಯಮ. ಇಬ್ಬರು ಹುತಾತ್ಮ ಯೋಧರ ವಿಧವೆಯರು ಪ್ರಶ್ನೆಗಳನ್ನು ಕೇಳಿದರು. ಸ್ಥಳೀಯರು ಪ್ರಶ್ನೆ ಕೇಳಿದರು. ಪಕ್ಷಪಾತಿ ರಾಜಕೀಯ ಉದ್ದೇಶಕ್ಕಾಗಿ ಪ್ರಧಾನಿಯವರು ಪುಲ್ವಾಮಾ ಹೆಸರು ಹೇಳದ ಒಂದು ದಿನವಾದರೂ ಇದೆಯೇ?

 • ಅಧಿಕಾರಕ್ಕೆ ಬಂದರೆ ಇದನ್ನು ನೀವು ಹೇಗೆ ಎದುರಿಸುವಿರಿ?

ನೋಡಿ, ಪುಲ್ವಾಮಾ ನಮ್ಮ ದೇಶದ ಯುವಜನರಿಗೆ ಉದ್ಯೋಗದ ಭರವಸೆ ಕೊಡುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯನ್ನು ಇದು ಪುನಶ್ಚೇತನಗೊಳಿಸುವುದಿಲ್ಲ. ತೀವ್ರವಾಗಿರುವ ಕೃಷಿ ಸಂಕಷ್ಟವನ್ನು ಇದು ಪರಿಹರಿಸುವುದಿಲ್ಲ. ಏರಿಕೆಯಾಗಿರುವ ಬೆಲೆಗಳನ್ನು ಇದು ಕೆಳಕ್ಕೆ ಇಳಿಸುವುದಿಲ್ಲ. ಒಂದು ವಿಚಾರ ಗಮನಿಸಿ, ಆಹಾರೇತರ ಹಣದುಬ್ಬರ ಈಗ ಶೇ 5.6ರಷ್ಟಿದೆ. ಹಾಗಾಗಿ, ಜನರ ಬಳಿಗೆ ನಾವು ಹೋದಾಗ ಅವರ ನಿಜವಾದ ಸಮಸ್ಯೆಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಸಾಲ, ವ್ಯಾಪಾರ ಕ್ಷೇತ್ರಗಳಲ್ಲಿ ನಿಜವಾದ ಸಮಸ್ಯೆಗಳಿವೆ. ಜನರು ನಮ್ಮನ್ನು ನೋಡಿ, ‘ಹೌದಪ್ಪಾ ಐದು ವರ್ಷ ನೀವು (ಆಡಳಿತ ಪಕ್ಷ) ಇದ್ದಿರಿ’ ಎಂದು ಹೇಳಬೇಕು. ನೀವು ಏನು ಮಾಡಿದ್ದೀರಿ? ಈಗ, ಪುಲ್ವಾಮಾ ಈ ಎಲ್ಲವನ್ನೂ ಕೊಡಲು ಸಾಧ್ಯವೇ? ಭಾರತೀಯ ವಾಯುಪಡೆ ಬಾಲಾಕೋಟ್‌ ಮೇಲೆ ದಾಳಿ ನಡೆಸಿದೆ. ಭಾರತೀಯ ವಾಯುಪಡೆ ಬಿಜೆಪಿಗೆ ಸೇರಿದ್ದಲ್ಲ. ಚುನಾವಣೆಯಲ್ಲಿ ಬಹಳ ಮುಖ್ಯವಾದ ಮೂರು ವಿಚಾರಗಳೆಂದರೆ ಉದ್ಯೋಗ, ಉದ್ಯೋಗ ಮತ್ತು ಉದ್ಯೋಗ ಅಷ್ಟೇ.

ಪುಲ್ವಾಮಾ ನಮ್ಮ ದೇಶದ ಯುವಜನರಿಗೆ ಉದ್ಯೋಗದ ಭರವಸೆ ಕೊಡುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯನ್ನು ಇದು ಪುನಶ್ಚೇತನಗೊಳಿಸುವುದಿಲ್ಲ. ತೀವ್ರವಾಗಿರುವ ಕೃಷಿ ಸಂಕಷ್ಟವನ್ನು ಇದು ಪರಿಹರಿಸುವುದಿಲ್ಲ. ಏರಿಕೆಯಾಗಿರುವ ಬೆಲೆಗಳನ್ನು ಇದು ಕೆಳಕ್ಕೆ ಇಳಿಸುವುದಿಲ್ಲ.
 • ಮೋದಿ ಅವರ ಐದು ವರ್ಷಗಳ ಆಳ್ವಿಕೆ ಬಗ್ಗೆ ನಿಮ್ಮ ಮೌಲ್ಯಮಾಪನವೇನು?

ಅದ್ಭುತ ಅವಕಾಶವೊಂದನ್ನು ಅವರು ಕೈಚೆಲ್ಲಿದರು. ಕಳೆದ 30 ವರ್ಷಗಳಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಬಿಜೆಪಿಯ 282 ಸದಸ್ಯರಿದ್ದರು. ಅರ್ಥ ವ್ಯವಸ್ಥೆಯಲ್ಲಿ ಅತ್ಯದ್ಭುತವಾದ ಬದಲಾವಣೆಗಳನ್ನು ತರಬಹುದಿತ್ತು. 1991ರಲ್ಲಿ ನರಸಿಂಹ ರಾವ್‌, 1996ರಲ್ಲಿ ಡಾ. ಮನಮೋಹನ್‌ ಸಿಂಗ್‌ ಅವರು ಮಾಡಿದ್ದನ್ನು ಈ ಸರ್ಕಾರದೊಂದಿಗೆ ಹೋಲಿಸಿ. ಅರ್ಥ ವ್ಯವಸ್ಥೆಯ ಆಗಿನ ಸೂಚಕಗಳನ್ನು ನೋಡಿ. ಬಿಡುಬೀಸು ಹೇಳಿಕೆಗಳನ್ನು ನೀಡಲು ನಾನು ಬಯಸುವುದಿಲ್ಲ. ಅರ್ಥ ವ್ಯವಸ್ಥೆಯ ವಿಶ್ಲೇಷಣೆಗೆ ಆರ್ಥಿಕ ಸೂಚಕಗಳನ್ನು ನೋಡುವುದೇ ಅತ್ಯುತ್ತಮ ವಿಧಾನ. ಹೂಡಿಕೆ, ಆರ್ಥಿಕ ಕೊರತೆ, ರಫ್ತು, ಉದ್ಯೋಗಗಳು, ಚಾಲ್ತಿ ಖಾತೆ ಕೊರತೆ ಇತ್ಯಾದಿಗಳನ್ನು ಗಮನಿಸುವುದೇ ಉತ್ತಮ. ಈ ಐದು ವರ್ಷಗಳ ಕೊನೆಯಲ್ಲಿ ನೋಡುವಾಗ ಈ ಒಂದೊಂದರಲ್ಲೂ ನಿರೀಕ್ಷಿತವಾದುದು ಏನೂ ಆಗಿಲ್ಲ ಅನಿಸುತ್ತದೆ. ಅತ್ಯಂತ ದೊಡ್ಡ ವೈಫಲ್ಯ ಉದ್ಯೋಗ ಕ್ಷೇತ್ರದಲ್ಲಾಗಿದೆ. ಕೆಲಸಗಳು ಎಲ್ಲಿವೆ? ಎಲ್ಲಿಗಾದರೂ ಹೋಗಿ, ಯಾವುದೇ ಸಮೀಕ್ಷೆ ನಡೆಸಿ, ಮೊದಲನೇ ಸಮಸ್ಯೆಯೇ ನಿರುದ್ಯೋಗ. ಹಾಗಾಗಿ, ನನ್ನ ಪ್ರಕಾರ, ಐದು ವರ್ಷಗಳು ವ್ಯರ್ಥವಾಗಿ ಹೋಗಿವೆ. ಕೈಯಲ್ಲಿದ್ದ ಅವಕಾಶವನ್ನು ಕೈಬಿಟ್ಟರು ಎನ್ನುವುದರ ಜತೆಗೆ ನೋಟು ರದ್ದತಿ ಮತ್ತು ಲೋಪದಿಂದ ಕೂಡಿದ ಜಿಎಸ್‌ಟಿ ಜಾರಿಯ ಮೂಲಕ ಅರ್ಥ ವ್ಯವಸ್ಥೆಯನ್ನು ಹಳ್ಳ ಹಿಡಿಸಿದರು. ರಾಷ್ಟ್ರೀಯ ಅರ್ಥ ವ್ಯವಸ್ಥೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಎಳ್ಳಷ್ಟು ಅರಿವೂ ಇಲ್ಲ ಎಂಬುದಕ್ಕೆ ನೋಟು ರದ್ದತಿಯೊಂದೇ ಸಾಕು.

 • ಈ ಎಲ್ಲ ಸೂಚಕಗಳು ದುರ್ಬಲವಾಗಿವೆ ಎಂದಾದರೆ ನಾವು ಸುದೀರ್ಘವಾದ ಆರ್ಥಿಕ ಹಿಂಜರಿತದಲ್ಲಿ ಇದ್ದೇವೆಯೇ? ಮುಂದಿನ 2–3 ವರ್ಷಗಳಲ್ಲಿ ನಾವು ಎತ್ತ ಸಾಗಬಹುದು?

ಜಗತ್ತು ರಕ್ಷಣಾತ್ಮಕವಾಗುತ್ತಾ ಸಾಗುತ್ತಿದೆ. 2019–20ರಲ್ಲಿ ಜಾಗತಿಕ ಆರ್ಥಿಕ ಪ್ರಗತಿ ಕುಸಿಯುವ ಅಪಾಯ ಇದೆ. ಜಾಗತಿಕ ಮಟ್ಟದ ರಕ್ಷಣಾತ್ಮಕತೆ ಮತ್ತು ಸಾಮಾನ್ಯ ಆದ್ಯತೆ ವ್ಯವಸ್ಥೆಯಿಂದಾಗಿ (ಜಿಎಸ್‌ಪಿ) ಭಾರತದ ರಫ್ತು ಕುಸಿದಿದೆ. ರಫ್ತು ಹೆಚ್ಚಳವಾಗುವ ಸಾಧ್ಯತೆಯೂ ಕಾಣಿಸುತ್ತಿಲ್ಲ. ಭಾರತದ ಪ್ರಗತಿಯ ಪ್ರೇರಕಗಳು ಎಲ್ಲಿವೆ? ಸರ್ಕಾರದ ವೆಚ್ಚವೇ ಏಕೈಕ ಪ್ರೇರಕವಾಗಿ ಕಾಣಿಸುತ್ತಿದೆ. ಆದರೆ, ಅಲ್ಲಿಯೂ ಆರ್ಥಿಕ ಕೊರತೆ ಮತ್ತು ವರಮಾನ ಕೊರತೆಯ ತೊಡಕುಗಳು ಕಾಣಿಸುತ್ತಿವೆ. 2018–19ರ ಆರ್ಥಿಕ ವರ್ಷದ ಮೂರು ತ್ರೈಮಾಸಿಕಗಳಲ್ಲಿ ಪ್ರಗತಿ ಶೇ. 8, ಶೇ. 7 ಮತ್ತು ಶೇ. 6.6ರಷ್ಟಾಗಿರುವುದನ್ನು ನಾವು ಕಂಡಿದ್ದೇವೆ. ಮುಂದಿನ ಸರ್ಕಾರವು ಪರಿಣಾಮಕಾರಿಯಾಗಿ ಏನಾದರೂ ಮಾಡದಿದ್ದರೆ ಈ ಕುಸಿತ ಇನ್ನಷ್ಟು ತೀವ್ರವಾಗಲಿದೆ.

 • ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇದನ್ನು ತಡೆಗಟ್ಟಲು ಏನು ಮಾಡಲಿದೆ?

ಯಾವ ಸ್ವರೂಪದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದರ ಮೇಲೆ ಇದು ಅವಲಂಬಿತ. ಸರ್ಕಾರದಲ್ಲಿ ಯಾರು ಯಾರು ಇರುತ್ತಾರೆ ಎಂಬುದು ಮುಖ್ಯ. ಒಂದೇ ಪಕ್ಷದ ಸರ್ಕಾರವಾದರೆ... ಕಾಂಗ್ರೆಸ್‌ ಆದರೆ, ನಾವು ಸಾಕಷ್ಟು ಕೆಲಸ ಮಾಡಬಹುದು. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಧಿಕಾರ ಹಂಚಿಕೆಯಾಗುತ್ತದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಸರ್ಕಾರ ಕೆಲಸ ಮಾಡಬೇಕಾಗುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯು ಸಾಕಷ್ಟು ದಿಟ್ಟ, ಕ್ರಾಂತಿಕಾರಕ ಮತ್ತು ಪರಿವರ್ತನಕಾರಿಯಾಗಿ ಇರಲಿದೆ. ಒಂದು ವೇಳೆ, ಪಕ್ಷದ ಪ್ರಣಾಳಿಕೆ ಜಾರಿಗೊಳಿಸಲು ಅವಕಾಶ ಸಿಕ್ಕರೆ ಅರ್ಥ ವ್ಯವಸ್ಥೆಯನ್ನು ಮರಳಿ ಹಳಿಗೆ ತರುತ್ತೇವೆ.

 • ರಫೇಲ್‌ ವಿಚಾರ ಚುನಾವಣೆಯ ಕೇಂದ್ರಬಿಂದುವಾಗಿ ಇರುವಂತೆ ಹೇಗೆ ನೋಡಿಕೊಳ್ಳುವಿರಿ? ಇದು ನಿಜಕ್ಕೂ ಜನರ ಗಮನ ಸೆಳೆಯಲಿದೆಯೇ?

ರಫೇಲ್‌ ಅನ್ನು ಮರೆತುಬಿಡುವುದು ಹೇಗೆ? ಎಲ್ಲ ಒಪ್ಪಂದಗಳನ್ನು ರದ್ದು ಮಾಡಿದ ಕಾರಣಕ್ಕಾಗಿಯೇ ರಫೇಲ್‌ ಪೂರೈಕೆ ವಿಳಂಬವಾಯಿತು. ಸೆಪ್ಟೆಂಬರ್‌ಗೆ ಮುಂಚೆ ಮೊದಲ ಯುದ್ಧವಿಮಾನ ಬರುವುದು ಸಾಧ್ಯವಿಲ್ಲ. ಈ ಒಪ್ಪಂದದ ವಿಚಾರದಲ್ಲಿನ ಗಂಭೀರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಭ್ರಷ್ಟಾಚಾರ ತಡೆಯ ಮೂರು ನಿಯಮಗಳನ್ನು ಕೈಬಿಟ್ಟದ್ದು ಯಾಕೆ? ಬ್ಯಾಂಕ್‌ ಖಾತರಿ ಇಲ್ಲ, ದೇಶೀ ಪಾಲುದಾರ ಸಂಸ್ಥೆಯ ಆಯ್ಕೆ ಬಗ್ಗೆ ಪ್ರಶ್ನೆಗಳಿವೆ. ಇವೆಲ್ಲವೂ ಹಾಗೆಯೇ ಉಳಿಯಲಿವೆ. ಭಾರತದ ಜನರಿಂದ ಮಾಹಿತಿ ಮುಚ್ಚಿಡಲಾಗಿದೆ. ಆದರೆ, ಹಲವು ರಾಜ್ಯಗಳಲ್ಲಿ ಸಾಕ್ಷರತೆ ಪ್ರಮಾಣ ಶೇ. 100ರಷ್ಟಿದೆ. ಜನರು ಪತ್ರಿಕೆ ಓದುತ್ತಾರೆ, ಟಿ.ವಿ. ನೋಡುತ್ತಾರೆ, ಚರ್ಚೆ ಮಾಡುತ್ತಾರೆ.

 • ಜಿಎಸ್‌ಟಿಯನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿಸಲು ನೀವು ಮಾಡಲು ಬಯಸುವ ಬದಲಾವಣೆಗಳು ಏನು?

ಜಿಎಸ್‌ಟಿಯನ್ನು ನಾವು ‘ಜಿಎಸ್‌ಟಿ–2’ ಎಂದು ಕರೆಯಲಿದ್ದೇವೆ. ಅದರ ಅರ್ಥ ಏನು ಎಂದರೆ, ಈಗಿನ ಜಿಎಸ್‌ಟಿ ಲೋಪಗಳಿಂದಲೇ ಕೂಡಿದ್ದು ಎಂದು. ಅವರು (ಈಗಿನ ಸರ್ಕಾರ) ಅದನ್ನು ಸರಿಪಡಿಸಲು ಯತ್ನಿಸುತ್ತಿದ್ದಾರೆ. ಕಳೆದ ಆರೇಳು ತಿಂಗಳಲ್ಲಿ ನೀವು ಇದನ್ನು ಗಮನಿಸಿರುತ್ತೀರಿ. ಅವರು ಹತಾಶರಾಗಿದ್ದಾರೆ... ದರ ಕಡಿತ ಮಾಡುತ್ತಿದ್ದಾರೆ... ಮೇಲಿಂದ ಮೇಲೆ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದಾರೆ... ಹೊಸ ಹೊಸ ನಿಯಮಗಳನ್ನು ತರುತ್ತಿದ್ದಾರೆ. ಇದು ಸಂಪೂರ್ಣ ಗೊಂದಲಮಯವಾಗಿದೆ. ಕೇಂದ್ರೀಯ ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಮಂಡಳಿಯ ಮಾಜಿ ಅಧ್ಯಕ್ಷರ ಜತೆಗೆ ನಾನು ಜಿಎಸ್‌ಟಿ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ನಾನು ಇಂತಹ ಪ್ರಶ್ನೆಗಳನ್ನು ಕೇಳಿದಾಗ ಅವರು ನಿರುತ್ತರರಾದರು. ಈಗ ಮಾಡುತ್ತಿರುವುದಕ್ಕೆ ಅರ್ಥವೇ ಇಲ್ಲ ಎಂದು ಅವರು ಹೇಳಿದರು.

ನಾನೊಬ್ಬ ವಕೀಲ, ನೀವು ಜಿಎಸ್‌ಟಿ ಕಾಯ್ದೆಯನ್ನು ಓದಿದ್ದೀರಾ ಎಂಬುದು ನನಗೆ ಗೊತ್ತಿಲ್ಲ. ಜಿಎಸ್‌ಟಿ ಕಾಯ್ದೆಯ ಯಾವುದಾದರೂ ಸೆಕ್ಷನ್‌ಗಳನ್ನು ಯಾರಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆಯೇ? ಅಥವಾ ಅಲ್ಲಿ ಬಳಸಲಾದ ಇಂಗ್ಲಿಷ್‌ ಭಾಷೆಯನ್ನು ಅರ್ಥ ಮಾಡಿಕೊಂಡರೂ ಸಾಕು. ಅದು ಸಾಧ್ಯವಾದರೆ, ನೀವು ಕಾನೂನು ಪರೀಕ್ಷೆ ಪಾಸ್‌ ಆಗುವುದೇ ಬೇಕಿಲ್ಲ. ನಿಮ್ಮನ್ನು ನಾನು ವಕೀಲರಾಗಿ ಸೇರಿಸಿಕೊಳ್ಳಲು ಶಿಫಾರಸು ಮಾಡುತ್ತೇನೆ.

2017ರ ಜುಲೈ 1ರ ಮಧ್ಯರಾತ್ರಿ ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ವಿದ್ಯುದ್ಧೀಪಗಳಿಂದ ಅಲಂಕೃತಗೊಂಡಿರುವ ಸಂಸತ್‌ ಭವನ.
2017ರ ಜುಲೈ 1ರ ಮಧ್ಯರಾತ್ರಿ ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ವಿದ್ಯುದ್ಧೀಪಗಳಿಂದ ಅಲಂಕೃತಗೊಂಡಿರುವ ಸಂಸತ್‌ ಭವನ.
/ಬಿಸಿನೆಸ್‌ ಸ್ಟ್ಯಾಂಡರ್ಡ್‌
 • ಇದು ಬಹಳ ಸಂಕೀರ್ಣ ಮತ್ತು ಗಾಢ...

ನನಗೆ ತಿಳಿದಿರುವಂತೆ ಜಿಎಸ್‌ಟಿ ಕಾಯ್ದೆಯನ್ನು ಭಾರತದ ವಿವಿಧ ಭಾಷೆಗಳಿಗೆ ಅನುವಾದ ಮಾಡಬೇಕಿತ್ತು. ಕಾಯ್ದೆಯಲ್ಲಿ ಏನಿದೆ ಎಂಬುದನ್ನು ಕಾರೈಕುಡಿಯಲ್ಲಿ ಇರುವ ವ್ಯಕ್ತಿ ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಕಾಯ್ದೆಯು ಒಡಿಯಾ, ಬಂಗಾಳಿ, ಅಸ್ಸಾಮಿ ಹೀಗೆ ಎಲ್ಲ ಭಾಷೆಗಳಲ್ಲಿಯೂ ಲಭ್ಯ ಇರಬೇಕು. ನನಗೆ ತಿಳಿದಿರುವಂತೆ ಇಂತಹ ಅನುವಾದಗಳು ಇಲ್ಲ. ಇಂಗ್ಲಿಷ್‌ ಭಾಷೆಯಲ್ಲಿರುವ ಕಾಯ್ದೆ ಕೂಡ ಯಾರೂ ಓದುವಂತೆ ಇಲ್ಲ.

 • ಬಹಳ ಕಾಲದಿಂದ ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ತಪ್ಪಾಗಿದೆ ಎಂದು ನಿಮ್ಮ ಭಾವನೆ?

ಅವರ ಸಾಮರ್ಥ್ಯದ ಕೊರತೆ ಮತ್ತು ಇತರರ ಜತೆ ಸಮಾಲೋಚನೆ ಮಾಡಲು ಮನಸಿಲ್ಲದಿರುವುದೇ ದೊಡ್ಡ ಸಮಸ್ಯೆ. ನೆರವು ನೀಡುವುದಾಗಿ ಸಂಸತ್ತಿನಲ್ಲಿಯೇ ನಾವು ಹೇಳಿದ್ದೆವು. ಜಿಎಸ್‌ಟಿ ಕಾನೂನಿನ ಸಂವಿಧಾನ ತಿದ್ದುಪಡಿಯನ್ನು ಸಿದ್ಧಪಡಿಸಲು ನೆರವಾಗುತ್ತೇವೆ ಎಂದಿದ್ದೆವು. ಅವರು ಸ್ಪಷ್ಟವಾಗಿ ನಿರಾಕರಿಸಿದರು. ನನ್ನ ಅಭಿಪ‍್ರಾಯಗಳು ಏನು ಮತ್ತು ಜಿಎಸ್‌ಟಿಯನ್ನು ಹೇಗೆ ಅನುಷ್ಠಾನ ಮಾಡಬಹುದು ಎಂದು ಕೂಡ ಈವರೆಗೆ ಅವರು ಕೇಳಿಲ್ಲ.

 • ನಿಮ್ಮ ತವರು ರಾಜ್ಯ ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣ ಕ್ಷಿಪ್ರಗತಿಯಲ್ಲಿ ಬದಲಾಗಿದೆ. ಕರುಣಾನಿಧಿ, ಜಯಲಲಿತಾ ಅವರು ಈಗ ಇಲ್ಲ. ಇದು ಯಾವ ಪರಿಣಾಮ ಉಂಟು ಮಾಡಬಹುದು ಮತ್ತು ನೀವು ಯಾವ ರೀತಿಯ ಮೈತ್ರಿ ಎದುರು ನೋಡುತ್ತಿದ್ದೀರಿ?

ಮೈತ್ರಿ ಈಗಾಗಲೇ ನಿಚ್ಚಳವಾಗಿದೆ. ಇಲ್ಲಿ ಗಮನಿಸಬೇಕಾಗಿರುವುದು ದಿನಕರನ್‌ ಅವರನ್ನು. ಅವರು ಎಐಎಡಿಎಂಕೆಯನ್ನು ವಿಭಜಿಸಿದ್ದಾರೆ. ಯಾವುದೇ ಕ್ಷೇತ್ರ ತೆಗೆದುಕೊಳ್ಳಿ, ಎಐಎಡಿಎಂಕೆಯ ಗಣನೀಯ ಸಂಖ್ಯೆಯ ಕಾರ್ಯಕರ್ತರು ದಿನಕರನ್‌ ಜತೆಗಿದ್ದಾರೆ. ಆರ್‌.ಕೆ. ನಗರ ಉಪಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ. ಈಗ ಅವರು 21 ಕ್ಷೇತ್ರಗಳ ಉಪಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಎಐಎಡಿಂಕೆಯ ಮತಗಳನ್ನು ಅವರು ಒಡೆಯುವುದು ಖಚಿತ. ಅದಲ್ಲದೆ, ಎಐಎಡಿಎಂಕೆಯ ಮುಂಚೂಣಿಯಲ್ಲಿ ಇವತ್ತು ಜಯಲಲಿತಾ ಇಲ್ಲ. ಅದು ಬಹಳ ದೊಡ್ಡ ವ್ಯತ್ಯಾಸ ಉಂಟು ಮಾಡಲಿದೆ. ಬಿಜೆಪಿ ಜತೆಗಿನ ಮೈತ್ರಿಯಿಂದ ಎಐಎಡಿಎಂಕೆಗೆ ಲಾಭ ಆಗದು. ಯಾವುದೇ ಪಕ್ಷ ಸ್ವಲ್ಪ ಮಟ್ಟಿಗಾದರೂ ತಮಿಳುನಾಡಿನವರಿಗೆ ಸ್ವೀಕಾರಾರ್ಹವಾಗಿರುತ್ತದೆ. ಆದರೆ, ಬಿಜೆಪಿಯನ್ನು ಅಲ್ಲಿನ ಜನ ಒಪ್ಪುವುದೇ ಇಲ್ಲ.

ಚಿತ್ರ, ಬರಹ: ಪ್ರಜಾವಾಣಿ