samachara
www.samachara.com
ಒಂದು ಶೋಷಣೆಯ ಕತೆ: ಈ ‘ಟೋಕೈ ರಿಕಾ’ ಕಾರ್ಪೊರೇಟ್ ಪ್ರಪಂಚದಲ್ಲಿ ಮಹಿಳೆಯರು ಮುಟ್ಟಾಗಬಾರದಂತೆ...
COVER STORY

ಒಂದು ಶೋಷಣೆಯ ಕತೆ: ಈ ‘ಟೋಕೈ ರಿಕಾ’ ಕಾರ್ಪೊರೇಟ್ ಪ್ರಪಂಚದಲ್ಲಿ ಮಹಿಳೆಯರು ಮುಟ್ಟಾಗಬಾರದಂತೆ...

ಅಂದಹಾಗೆ ಇವತ್ತು ವಿಶ್ವ ಮಹಿಳಾ ದಿನಾಚರಣೆ. ಊರಿಗಿಂತ ಮುಂಚೆ ಕಾರ್ಪೊರೇಟ್ ಪ್ರಪಂಚ ಮಹಿಳೆಯರನ್ನು ಕೊಂಡಾಡಲು ಮುಂದಾಗಿದೆ. ಅದೇ ವೇಳೆಯಲ್ಲಿ ಅದೇ ಕಾರ್ಪೊರೇಟ್ ಪ್ರಪಂಚದ ಕಂಪೆನಿಯೊಂದು ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ.

ಧೂಳು ತುಂಬಿದ ಗಣಿ ಪ್ರದೇಶ. ದೊಡ್ಡ ಕಲ್ಲಿನ ಬಾಗಿಲು. ಒಮ್ಮೆ ಒಳಗೆ ಹೋದರೆ ಮುಗಿಯಿತು ಮತ್ತೆ ಹಿಂದಿರುಗುವ ಮಾತೆ ಇಲ್ಲ. ಸಾವಿನ ಭಯದ ಕಣ್ಣುಗಳೊಂದಿಗೆ ದಿನದ 12 ಗಂಟೆ ಇಲ್ಲಿ ಜೀತವೇ ಬದುಕು. ಜೋಪಡಿ, ಹರಿದ ಬಟ್ಟೆ ಎರಡೊತ್ತಿನ ಕೂಳು ಇದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿಲ್ಲ. ಇಲ್ಲಿ ಹೆಣ್ಣು ಹೆತ್ತರೆ ಸಾವೆ ಗತಿ. ಇಂತಹಾ ಜಾಗಕ್ಕೆ ಹಿರೋ ಎಂಟ್ರಿಯಾಗುತ್ತೆ. ಕೊನೆಗೂ ಜನರಿಗೆ ವಿಮೋಚನೆ ಸಿಗುತ್ತೆ.

ಈಗಾಗಲೇ ನಿಮ್ಮ ಸ್ಮೃತಿಪಟಲದಲ್ಲಿ "ಕೆಜಿಎಫ್' ಚಿತ್ರ ದೃಶ್ಯಗಳ ಮೂಡಿದ್ರೆ ನಿಮ್ಮ ಊಹೆ ಸರಿಯಾಗಿಯೇ ಇದೆ. ಈ ಚಿತ್ರ ವೀಕ್ಷಿಸಿದ ಬಹುಪಾಲು ಜನ "ಅಬ್ಬಬ್ಬಾ ಕಾರ್ಮಿಕರನ್ನು ಹೀಗೂ ನಡೆಸಿಕೊಳ್ತಾರ?. ಹೀಗೂ ಇರೋಕೆ ಸಾಧ್ಯಾನ?" ಎಂದು ಏದುಸಿರು ಬಿಟ್ಟದ್ದು ನಿಜ.

ಒಮ್ಮೆ ದಾಬಸ್‌ಪೇಟೆ ಕೈಗಾರಿಕಾ ವಲಯದಲ್ಲಿರುವ 'ಟೋಕೈ ರಿಕಾ ಮಿಂಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌' (TOKAI RIKA MINDA INDIA PVT.LTD) ಕಂಪೆನಿಗೆ ಭೇಟಿ ನೀಡಿದ್ರೆ, ಕೆಜಿಎಫ್ ಚಿತ್ರಕ್ಕಿಂತ ಭಯಾನಕ ದೃಶ್ಯಗಳು ನಿಮ್ಮ ಕಣ್ಣೆಗೆ ಬೀಳುತ್ತವೆ. ಈ ಕಾಲದಲ್ಲೂ ಕಾರ್ಮಿಕರನ್ನು ಹೀಗೆ ನಡೆಸಿಕೊಳ್ತಾರ? ಎಂದು ನೀವೆ ಹುಬ್ಬೇರಿಸುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಸುಮಾರು 1,000 ಕ್ಕೂ ಹೆಚ್ಚು ಕಾರ್ಮಿಕರು; ಅವರಲ್ಲಿ ಬಹುಪಾಲು ಮಹಿಳೆಯರು.

ಇವರ ಪೈಕಿ ಸುಮಾರು 160 ಜನರನ್ನು ಈ ಕಾರ್ಖಾನೆ ಏಕಾಏಕಿ ಕೆಲಸದಿಂದ ವಜಾ ಮಾಡಿದೆ. ಕಂಪೆನಿಯ ಇಂತಹ ಧೋರಣೆಗಳ ವಿರುದ್ಧ ಕಳೆದ ಒಂದು ವರ್ಷದಿಂದ ಕಂಪೆನಿಯ ಎದುರೇ ಉದ್ಯೋಗಿಗಳು ಪ್ರತಿಭಟಿಸುತ್ತಿದ್ದಾರೆ. ನ್ಯಾಯ ಮಾತ್ರ ಮರೀಚಿಕೆಯಾಗಿದೆ.

ರಾಜ್ಯ ಕಾರ್ಮಿಕ ಭವನದ ಮುಂದೆ ಟೋಕೈ ರಿಕಾ ಕಂಪನಿಯ ಕಾರ್ಮಿಕರು ಆಹೋರಾತ್ರಿ ನಡೆಸಿದ ಧರಣಿಯ ಒಂದು ಚಿತ್ರ. 
ರಾಜ್ಯ ಕಾರ್ಮಿಕ ಭವನದ ಮುಂದೆ ಟೋಕೈ ರಿಕಾ ಕಂಪನಿಯ ಕಾರ್ಮಿಕರು ಆಹೋರಾತ್ರಿ ನಡೆಸಿದ ಧರಣಿಯ ಒಂದು ಚಿತ್ರ. 

ಮಹಿಳಾ ಕಾರ್ಮಿಕರ ಕರುಣಾಜನಕ ಕತೆ

ಆಕೆಯ ಹೆಸರು ವೀಣಾ ಹಾಸನ ಜಿಲ್ಲೆಯವರು. ಮನೆಗೆ ಆಧಾರವಾಗಿದ್ದ ತಂದೆ ತೀರಿಕೊಂಡು 18 ವರ್ಷವಾಗಿದೆ. ಯಾವುದೇ ಆಸ್ತಿಯಿಲ್ಲದ ಅಷ್ಟೇನು ಸ್ಥಿತಿವಂತರಲ್ಲದ ಈ ಬಡ ಕುಟುಂಬದಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು. ತಾಯಿ ಕಷ್ಟಪಟ್ಟು ಮನೆ ಕೆಲಸ ಮಾಡಿ ಮಕ್ಕಳನ್ನು ಓದಿಸಿದ್ದಾರೆ. ದೊಡ್ಡಾಕೆಗೆ ಮದುವೆ ಮಾಡಿಸಿದ್ದಾರೆ. ತಾಯಿಯ ಕಷ್ಟ ನೋಡಲಾಗದ ವೀಣಾ 10ನೇ ತರಗತಿಯ ನಂತರ ಐಟಿಐ ಮಾಡಿ 18ನೇ ವಯಸ್ಸಿಗೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದಾಳೆ. ಹಲವು ಕಂಪೆನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದ ವೀಣಾ 5 ವರ್ಷದ ಹಿಂದೆ ಟೋಕೈ ರಿಂಕಾ ಮಿಂಡಾ ಕಂಪೆನಿಯ ಕೆಲಸಕ್ಕೆ ಸೇರಿದ್ದಾರೆ.

"ಆರಂಭದಲ್ಲಿ 6000 ಸಾವಿರ ಸಂಬಳ ನೀಡುತ್ತಿದ್ದರು. ಐದು ವರ್ಷ ದುಡಿದು ಇಂದು ನನ್ನ ಸಂಬಳ 11,500 ದಾಟಿದೆ. ಇದರಲ್ಲಿ 8,000 ಮನೆಗೆ ಕಳುಹಿಸಿ ಉಳಿದ ಹಣದಲ್ಲಿ ನಾನು ನನ್ನ ಎಲ್ಲಾ ಖರ್ಚುಗಳನ್ನು ನಿಭಾಯಿಸಬೇಕು. ನಾನು ಕಳುಹಿಸುವ ಹಣದಲ್ಲೇ ಊರಿನಲ್ಲಿರುವ ನನ್ನ ಇಬ್ಬರು ತಂಗಿಯರ ಓದು ಊಟ ಅಕ್ಕನ ಮದುವೆ ಸಾಲ ಎಲ್ಲ ನಡೆಯಬೇಕು. ಇಲ್ಲಿಂದ ಹೊರಗಡೆ ನಡೆದರೆ ಬೇರೆಲ್ಲೂ ಕೆಲಸ ಸಿಕ್ಕುವ ಖಚಿತತೆ ಇಲ್ಲ. ಇದೊಂದೆ ಕಾರಣಕ್ಕೆ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಇಲ್ಲಿ ಕೆಲಸ ಎಂಬುದು ನರಕಕ್ಕಿಂತ ಹೆಚ್ಚು ಭಿನ್ನವಾಗೇನು ಇಲ್ಲ,” ಎಂದವರು ಯಾತನೆಯನ್ನು ಬಿಚ್ಚಿಡುತ್ತಾರೆ.

ದಿನದಲ್ಲಿ 8 ಗಂಟೆ ಕೆಲಸ. ಕಾರಿನ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಯಾದ್ದರಿಂದ ಗಂಟೆಗೆ ಇಷ್ಟು ಪಾರ್ಟ್ಸ್‌ಗಳನ್ನು ತಯಾರಿಸಲೇಬೇಕು ಎಂಬ ನಿಯಮವಿದೆ. ಹೀಗಾಗಿ 8 ಗಂಟೆಗಳ ಕಾಲ ನಿಂತೇ ಕೆಲಸ ಮಾಡಬೇಕು. ಮಧ್ಯದಲ್ಲಿ ಸುಧಾರಿಸಿಕೊಳ್ಳಲು 1 ನಿಮಿಷ ಸಮಯ ಕೊಡುವುದಿಲ್ಲ. ಗಂಟೆಗೆ ಒಂದು ಪಾರ್ಟ್ಸ್ ಕಡಿಮೆಯಾದರೂ ಟೀಮ್ ಲೀಡರ್‌ಗಳು ಹೀನಾಮಾನ ಬೈಯುತ್ತಾರೆ. ಶೌಚಾಲಯಕ್ಕೆ ಹೋಗಬೇಕು, ನೀರು ಕುಡಿಯಬೇಕು ಎಂದರು ಇವರನ್ನು ಕೇಳಿಕೊಂಡೆ ಹೋಗಬೇಕು. ಇನ್ನೂ ಹೆಣ್ಣು ಮಕ್ಕಳಿಗೆ ಋತುಚಕ್ರ ಆರಂಭವಾದರಂತೂ ದೇವರಿಗೆ ಪ್ರೀತಿ.

“ಋತುಚಕ್ರ ಸಾಮಾನ್ಯ 3 ರಿಂದ 5 ದಿನ ಇರುತ್ತದೆ. ಕೆಲವರಿಗೆ ಹೊಟ್ಟೆ ತುಂಬಾ ನೋವಾಗುತ್ತದೆ. ಆ ಸಮಯದಲ್ಲೂ ಸಹ ಹೆಣ್ಣುಮಕ್ಕಳನ್ನು ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳಲು ಬಿಡುವುದಿಲ್ಲ. ಬದಲಾಗಿ ಇವತ್ತೆ ನಿಮಗೆ ಯಾಕಾಯಿತು ಎಂದು ಪುರುಷ ಟೀಮ್ ಲೀಡರ್‌ಗಳು ಅಸಭ್ಯವಾಗಿ ಪ್ರಶ್ನೆ ಮಾಡುತ್ತಾರೆ. ನಮ್ಮನ್ನೂ ನೋಡಿ ಬೇಕು ಬೇಕೆಂದೆ ನಗುತ್ತಾರೆ. ಇಂತವರ ನಡುವೆ ಹೇಗೋ ಹಲ್ಲು ಕಚ್ಚಿಕೊಂಡು ಕೆಲಸ ಮಾಡುತ್ತಿದ್ದೆವು. ಆದರೆ ಕಂಪೆನಿ ದಿಢೀರೆಂದು ನಮ್ಮನ್ನು ಕೆಲಸದಿಂದ ವಜಾಮಾಡಿದೆ. ಕೆಲಸವಿಲ್ಲದೆ ಕಳೆದ ಒಂದು ವರ್ಷದಿಂದ ಮನೆಯ ಪರಿಸ್ಥಿತಿ ಬಹಳ ಕೆಟ್ಟಿದೆ. ಊಟಕ್ಕೂ ಇಲ್ಲದ ಸ್ಥಿತಿ ಎದುರಾಗಿದೆ" ಎಂದು ತಮ್ಮ ದುಗುಡವನ್ನು ತೆರೆದಿಡುತ್ತಾರೆ ವೀಣಾ.

ಮತ್ತೊಬ್ಬರ ಹೆಸರು ನಂದಿನಿ, ಚಾಮರಾಜನಗರದ ಕೊಳ್ಳೆಗಾಲದವರು. ಮನೆಯಲ್ಲಿ ವಯೋವೃದ್ಧ ತಂದೆ ತಾಯಿ ಮದುವೆ ವಯಸ್ಸಿನ ಅಕ್ಕ. ಓದುತ್ತಿರುವ ತಂಗಿ ಮತ್ತೊಬ್ಬ ತಮ್ಮ ಇಲ್ಲೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಂಗಳೂರಲ್ಲಿ ಇವರಿಬ್ಬರ ದುಡಿಮೆಯಲ್ಲೇ ಊರಿನಲ್ಲಿ ನಾಲ್ಕು ಜನರ ಊಟ, ತಂಗಿಯ ಶಿಕ್ಷಣ, ಅಕ್ಕನ ಮದುವೆ ಎಲ್ಲ ನಡೆಯಬೇಕು. ಇರಲೊಂದು ಸೂರು ಇಲ್ಲದ ಈ ಕುಟುಂಬ ಇತ್ತೀಚೆಗೆ ಮನೆ ಕಟ್ಟುವ ಕೆಲಸಕ್ಕೂ ಕೈ ಹಾಕಿತ್ತು. ಆದರೆ ಇದೀಗ ಟೋಕೈ ರಿಂಕಾ ಮಿಂಡಾ ಕಂಪೆನಿ ಇದ್ದಕ್ಕಿದ್ದಂತೆ ಇವರನ್ನೂ ಕೆಲಸದಿಂದ ವಜಾಮಾಡಿದೆ. ಕಳೆದ ಒಂದು ವರ್ಷದಿಂದ ಸಂಬಳವಿಲ್ಲದೆ ಊರಿನ ಮನೆ ಕಟ್ಟುವ ಕೆಲಸ, ಅಕ್ಕನ ಮದುವೆ ಎಲ್ಲವೂ ಮುರಿದು ಬಿದ್ದಿದೆ. ಮನೆ ಎಂಬುದು ಅಕ್ಷರಶಃ ಮೂರಾಬಟ್ಟೆಯಾಗಿದೆ.

"ಕಂಪೆನಿಯ ಒಳಗೆ ಕೆಲಸ ಮಾಡುವಾಗಲು ನಾವು ಖುಷಿಯಿಂದ ಕೆಲಸ ಮಾಡುತ್ತಿರಲಿಲ್ಲ. ತಿಂಗಳ ಮುಟ್ಟಿನ ಸಮಸ್ಯೆ ಎದುರಾದಾಗಲಂತೂ ಹಲ್ಲು ಕಚ್ಚಿಕೊಂಡು ಕೆಲಸ ಮಾಡುತ್ತಿದ್ದೆವು. ಅಂತಹ ಸಂದರ್ಭಗಳಲ್ಲಂತೂ ಈ ಸಮಸ್ಯೆ ಯಾಕಾದರೂ ಬರುತ್ತೋ ಎನಿಸಿಬಿಡುತ್ತಿತ್ತು. ಕೆಲವು ಪುರುಷ ಟೀಮ್ ಲೀಡರ್‌ಗಳು ಬೇಕೆಂದೆ ಅಪಹಾಸ್ಯ ಮಾಡಿ ನಗುವಾಗ ಹೆಣ್ಣು ಜನ್ಮವೇ ಸಾಕೆನಿಸಿಬಿಡುತ್ತೆ. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ ಬೇಕು ಬೇಕೆಂದೆ ಪುರುಷರ ಲೈನ್‌ನಲ್ಲಿ ಕಷ್ಟದ ಕೆಲಸಕ್ಕೆ ನಿಯೋಜಿಸುತ್ತಿದ್ದರು,’’ ಎನ್ನುತ್ತಾರೆ ನಂದಿನಿ.

ಒಮ್ಮೆಯಂತೂ ಸುಸ್ತಾಗಿ ಒಂದು ಹುಡುಗಿ ಕೆಳಗೆ ಬಿದ್ದು ಪ್ರಜ್ಞೆಯನ್ನೇ ಕಳೆದುಕೊಂಡಿದ್ದಳು. ಆದರೆ ಇಲ್ಲಿನ ನಿಯಮದಂತೆ ಯಾರೂ ಯಾರಿಗೂ ಸಹಾಯ ಮಾಡುವಂತಿಲ್ಲ. ಕೊನೆಗೆ ಆ ಹುಡುಗಿ ಸುಮಾರು 2 ಗಂಟೆಗಳ ಕಾಲ ಪ್ರಜ್ಞೆ ಇಲ್ಲದೆ ಅಲ್ಲೇ ಬಿದ್ದದ್ದಳು. “ಮಹಿಳೆಯರ ಮುಟ್ಟಿನ ಸಮಸ್ಯೆಯ ಕುರಿತು ಅರಿವಿರುವ ಕೆಲವು ಮಹಿಳಾ ಟೀಮ್ ಲೀಡರ್‌ಗಳೂ ಹೀಗೆ ಅಮಾನವೀಯವಾಗಿ ವರ್ತಿಸುತ್ತಾರೆ. ಈ ಕುರಿತು ಮಹಿಳಾ ಆಯೋಗ, ಮಾನವ ಹಕ್ಕು ಆಯೋಗಕ್ಕೂ ನಾವು ದೂರು ನೀಡಿದ್ದೆವು ಆದರೆ ಯಾವುದೇ ಉಪಯೋಗವಾಗಿಲ್ಲ" ಎನ್ನುತ್ತಾರೆ ನಂದಿನಿ.

ಈ ಕಂಪೆನಿಯಲ್ಲಿ ಕೆಲಸ ಮಾಡುವ ಒಬ್ಬೊಬ್ಬರ ಹಿಂದೆಯೂ ಇಂತಹದ್ದೇ ಕತೆಗಳಿವೆ. ಮಹಿಳೆಯರಿಗೆ ಇಂತಹ ಸಮಸ್ಯೆಯಾದರೆ, ಪುರುಷರ ಕಷ್ಟವೂ ಕಡಿಮೆ ಏನಲ್ಲ. ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೆ ಸಂಬಳವಿಲ್ಲದೆ ಹಲವರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಊರಿನಲ್ಲಿ ಇವರ ಸಂಬಳವನ್ನೇ ಎದುರು ನೋಡುತ್ತಿರುವ ಮನೆಯವರೂ ಸಹ ಉಪವಾಸ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ವರ್ಷದಿಂದ ಬೆಳಗ್ಗೆ ಕಂಪೆನಿಯ ಹೊರಗೆ ಹೋರಾಟ ನಡೆಸುತ್ತಿರುವ ಪುರುಷ ಕಾರ್ಮಿಕರು ರಾತ್ರಿಯ ಪಾಳಿಯಲ್ಲಿ ವಾಚ್‌ಮನ್, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿ ಹೇಗೋ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ.

ಕಂಪೆನಿಯ ಹಿನ್ನೆಲೆ

TOKAI RIKA ಜಪಾನ್ ಮೂಲದ ಕಂಪೆನಿ. ಟೊಯೋಟಾ ಹಾಗೂ ಮಾರುತಿ ಸುಜುಕಿ ಕಾರುಗಳಿಗೆ ಸಂಬಂಧಿಸಿದ ಬಿಡಿ ಭಾಗಗಳನ್ನು ತಯಾರಿಸುವ ಆಟೋಮೊಬೈಲ್ಸ್ ಕಂಪೆನಿ ಇದು. ಭಾರತದ UNO MINDA ಎಂಬ ಕಂಪೆನಿಯ ಜಂಟಿ ಸಹಭಾಗಿತ್ವದೊಂದಿಗೆ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ತನ್ನ ಘಟಕವನ್ನು 10 ವರ್ಷಗಳ ಹಿಂದೆ ಸ್ಥಾಪಿಸಿತ್ತು. ವಾರ್ಷಿಕ 1300 ಕೋಟಿ ನಿವ್ವಳ ಲಾಭಂಶವನ್ನು ಹೊಂದಿರುವ ಈ ಸಂಸ್ಥೆ ತಮ್ಮ ಕಂಪೆನಿ ಉದ್ಯೋಗಿಗಳ ಸಂಬಳಕ್ಕಾಗಿ ವ್ಯಯಿಸುವುದು ಕೇವಲ ಶೇ.0.2 ರಷ್ಟು ಹಣ ಮಾತ್ರ.

ಟೋಕೈ ರಿಕಾ ಕಂಪೆನಿಯ ಒಂದು ನೋಟ.
ಟೋಕೈ ರಿಕಾ ಕಂಪೆನಿಯ ಒಂದು ನೋಟ.
/ಸಮಾಚಾರ

ಈ ಕಂಪೆನಿಯಲ್ಲಿ 1,000 ಕ್ಕೂ ಅಧಿಕ ಕಾರ್ಮಿಕರು ವಿವಿಧ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕಂಪೆನಿಯ ಖಾಯಂ ನೌಕರರ ಸಂಖ್ಯೆ ಕೇವಲ ಶೇ.20 ರಷ್ಟು ಮಾತ್ರ. ಉಳಿದವರೆಲ್ಲಾ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ 7 ರಿಂದ 10 ಸಾವಿರದ ವರೆಗೆ ಸಂಬಳ ನೀಡಿದರೆ ಖಾಯಂ ಉದ್ಯೋಗಿಗಳ ಸಂಬಳ ಹೇಗೆ ನೋಡಿದರೂ 12 ಸಾವಿರ ದಾಟುವುದಿಲ್ಲ. ಗುತ್ತಿಗೆ ನೌಕರರಿಗಂತು ಪಿಎಫ್, ಇಎಸ್‌ಐ ಸೇರಿದಂತೆ ಯಾವೊಂದು ಕನಿಷ್ಟ ಸೌಲಭ್ಯವೂ ಇಲ್ಲ.

ಇನ್ನೂ 2008 ರಲ್ಲಿ ಆರಂಭವಾದ ಈ ಕಂಪೆನಿ ನಡೆಸಿರುವ ಕಾರ್ಮಿಕರ ನೇಮಕಾತಿ ಪದ್ದತಿಯ ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಈ ಜಪಾನ್ ಮೂಲದ ಟೋಕೈ ರಿಕಾ ಕಂಪೆನಿಯ ಭಾರತೀಯ ಪಾಲುದಾರರಾದ ಮಿಂಡಾ ಇಂಡಿಯಾ ಕಂಪೆನಿ ಅದೆಷ್ಟು ಖತರ್ನಾಕ್ ಎಂಬುದು ತಿಳಿಯುತ್ತದೆ.

ದಿಕ್ಕಿಲ್ಲದ, ದ್ವನಿಯಿಲ್ಲದವರಿಗಷ್ಟೇ ಕೆಲಸ

ಎಲ್ಲಾ ಹಂತದಲ್ಲೂ ಹಣ ಉಳಿಸುವುದೇ ತಮ್ಮ ಮೂಲ ಉದ್ದೇಶ ಎಂದು ನಂಬಿರುವ ಈ ಕಂಪೆನಿ ಸ್ಥಳೀಯರ್ಯಾರನ್ನೂ ಕೆಲಸಕ್ಕೆ ನೇಮಕಾತಿ ಮಾಡಿಕೊಂಡಿಲ್ಲ. ಸ್ಥಳೀಯರನ್ನು ನೇಮಕಾತಿ ಮಾಡಿಕೊಂಡರೆ ಫಜೀತಿ ತಪ್ಪಿದ್ದಲ್ಲ ಎಂದು ಮೊದಲೇ ಊಹಿಸಿದ್ದ ಕಂಪೆನಿ ಉತ್ತರ ಕರ್ನಾಟಕ ಸೇರಿದಂತೆ ಇತರೆ ಜಿಲ್ಲೆಯವರಿಗೆ ಮಾತ್ರ ಕೆಲಸ ನೀಡಿದೆ.

ಅದರಲ್ಲೂ ತಂದೆ ತಾಯಿ ಇಲ್ಲದ ತಳ ಸಮುದಾಯ ತೀರಾ ಹಿಂದುಳಿದ ಬಡ ಕುಟುಂಬದಿಂದ ಬಂದ ಯುವಕ ಯುವತಿಯರನ್ನಷ್ಟೇ ಆರಿಸಿ ಆರಿಸಿ ಕೆಲಸ ಕೊಟ್ಟಿದ್ದಾರೆ. ಇವರೆಷ್ಟು ಖತರ್ನಾಕ್‌ಗಳು ಎಂದರೆ ಕಾರ್ಮಿಕರಿಗೆ ಎಷ್ಟೇ ಶೋಷಣೆ ಮಾಡಿದರೂ ಅವರು ಕೆಲಸ ಬಿಟ್ಟು ಹೋಗಬಾರದು, ತಮ್ಮ ವಿರುದ್ಧ ಪ್ರತಿಭಟಿಸಬಾರದು ಎಂದೇ ಅಂತವರನ್ನು ಹುಡುಕಿ ಕೆಲಸ ಕೊಟ್ಟಿದ್ದಾರೆ. ಇಲ್ಲಿ ಕೆಲಸ ಮಾಡುವ ಬಹುತೇಕರಿಗೆ ತಂದೆ ಅಥವಾ ತಾಯಿ ಇಲ್ಲ. ತಂದೆ-ತಾಯಿ ಇಬ್ಬರೂ ಇಲ್ಲದೇ ಆಶ್ರಮಗಳಲ್ಲಿ ಓದಿ ಕೆಲಸ ಪಡೆದವರ ಸಂಖ್ಯೆಯೂ ಇಲ್ಲಿ ಹೆಚ್ಚಿದೆ.

ತಮ್ಮ ಕಂಪೆನಿಯಲ್ಲಿ ಕೆಸಲ ಮಾಡುವ ಎಲ್ಲಾ ಕಾರ್ಮಿಕರು ತುಮಕೂರಿನಲ್ಲೇ ಮನೆ ಮಾಡಿ ಉಳಿಯಬೇಕು ಎಂಬುದು ಈ ಸಂಸ್ಥೆಯ ಮೊದಲ ನಿಯಮ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ದಾಬಸ್‌ಪೇಟೆಯಲ್ಲೇ ಮನೆ ಮಾಡಿದರೆ ಎಲ್ಲಿ ಸ್ಥಳೀಯರ ಜೊತೆ ಸೇರಿ ಸಂಘಟಿತರಾಗುತ್ತಾರೋ ಎಂಬ ಭಯದಲ್ಲಿ ಕಂಪೆನಿಯ ಆಡಳಿತ ಮಂಡಳಿ ಇಂತಹ ನಿಯಮಗಳನ್ನು ರೂಪಿಸಿದೆ.

ಕಾರ್ಖಾನೆಯ ಒಳಗೆ ಅಲ್ಲಲ್ಲಿ “no talk no look don’t help” ಎಂಬ ಬರಹಗಳನ್ನು ಅಂಟಿಸಲಾಗಿದೆ. ಅಲ್ಲದೆ ಕಾರ್ಮಿಕರು ಕೆಲಸ ಮಾಡುವಾಗ ಟೀಮ್ ಲೀಡರ್‌ಗಳು ಅದನ್ನು ವಿಡಿಯೋ ಶೂಟ್ ಮಾಡುತ್ತಾರೆ. ಯಾರಾದರೂ ಸ್ವಲ್ಪ ನಿಧಾನ ಕೆಲಸ ಮಾಡಿದರೆ ಅಂತವರನ್ನು ಎಲ್ಲರ ಎದುರು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗುತ್ತದೆ. ಇನ್ನೂ ಕೆಲಸಕ್ಕೆ ಒಂದು ನಿಮಿಷ ತಡವಾಗಿ ಬಂದರು ಅಂತವರು ಸಂಬಳ ಕಡಿತಮಾಡುವುದು ಸೇರಿದಂತೆ ಅನೇಕ ಶಿಕ್ಷೆಗಳನ್ನು ನೀಡಲಾಗುತ್ತದೆ.

8 ಗಂಟೆಗಳ ಕಾಲ ನಿಂತೇ ಕೆಲಸ ಮಾಡಬೇಕು. ಅಕಸ್ಮಾತ್ ಸುಸ್ತಾಗಿ ಕುಳಿತುಕೊಳ್ಳುವಂತಿಲ್ಲ ಹೆಣ್ಣು ಮಕ್ಕಳಿಗಂತೂ ಮದುವೆಯಾದರೆ ಕೆಲಸಕ್ಕೆ ಬರಲೇಬೇಡಿ ಎಂದು ನೇರವಾಗಿ ಹೇಳಿಬಿಡುತ್ತಾರೆ. 18 ವರ್ಷದಿಂದ 25 ವರ್ಷದ ಯುವಕರಿಗಷ್ಟೇ ಇಲ್ಲಿ ಕೆಲಸ. ಸ್ವಲ್ಪ ವಯಸ್ಸಾಗಿದೆ ಎಂದರೂ ಅಂತವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ.

ಒಂದರ್ಥದಲ್ಲಿ ಖ್ಯಾತ ನಟ ಚಾರ್ಲಿ ಚಾಪ್ಲಿನ್ ಅವರ ಮಾಡರ್ನ್ ಟೈಮ್ಸ್‌ ಚಿತ್ರದಲ್ಲಿ ತೆರೆದಿಟ್ಟಿರುವ ಕಾರ್ಮಿಕರ ಪರಿಸ್ಥಿತಿಗೂ ಇಲ್ಲಿನ ಕಾರ್ಮಿಕರ ಪರಿಸ್ಥಿತಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ.

ಇಂತಹ ಕಂಪೆನಿಗಳಿಗೆ ವರವಾದ NEEM ಯೋಜನೆ

NEEM (national employability enhancement scheme) ‘ರಾಷ್ಟ್ರೀಯ ಉದ್ಯೋಗ ವರ್ಧನಾ ಯೋಜನೆ’ ಯಾರಿಗೆ ವರವಾಗಿದೆಯೋ ಏನೋ ಗೊತ್ತಿಲ್ಲ. ಆದರೆ ಇಂತಹ ಹಣಬಾಕ ಕಂಪೆನಿಗಳ ಪಾಲಿಗಂತು ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ.

ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆಯೇ NEEM. ಈ ಯೋಜನೆಯ ಅಡಿಯಲ್ಲಿ ಐಟಿಐ, ಡಿಪ್ಲೊಮಾ ಸೇರಿದಂತೆ ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಇಂತಹ ಕಂಪೆನಿಗಳು ಎರಡು ವರ್ಷ ಕನಿಷ್ಟ ವೇತನದ ಜೊತೆಗೆ ಕೌಶಲ್ಯವನ್ನು ಕಲಿಸಬೇಕು ಎಂಬುದು ಕೇಂದ್ರದ ನಿಯಮ.

ಅಪರೆಂಟೀಸ್‌ಗಳಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರವೇ 6000 ವೇತನ ನಿಗಧಿ ಮಾಡಿದ್ದು ಆ ಪೈಕಿ ಶೇ.30 ರಷ್ಟು ಹಣವನ್ನು ಸರಕಾರವೇ ಪಾವತಿಸುತ್ತದೆ.

ಕೇಂದ್ರ ಸರಕಾರದ NEEM ಯೋಜನೆಯ ಅಡಿಯಲ್ಲಿ ಟೋಕೈ ರಿಕಾ ಕಂಪೆನಿಗೆ ಕೆಲಸಕ್ಕೆ ಆಗಮಿಸುತ್ತಿರುವ ಅಪರೆಂಟೀಸ್‌ಗಳು.
ಕೇಂದ್ರ ಸರಕಾರದ NEEM ಯೋಜನೆಯ ಅಡಿಯಲ್ಲಿ ಟೋಕೈ ರಿಕಾ ಕಂಪೆನಿಗೆ ಕೆಲಸಕ್ಕೆ ಆಗಮಿಸುತ್ತಿರುವ ಅಪರೆಂಟೀಸ್‌ಗಳು.
/ಸಮಾಚಾರ

ಹೀಗೆ ಅಪರೆಂಟೀಸ್‌ಗಳಾಗಿ ಕೌಶಲ್ಯ ಕಲಿಯಲು ಕೆಲಸಕ್ಕೆ ಆಗಮಿಸುವ ವಿದ್ಯಾರ್ಥಿಗಳನ್ನು ಉತ್ಪಾದನೆ (production) ಸೇರಿದಂತೆ ಯಾವುದೇ ಕಠಿಣ ಕೆಲಸಗಳಿಗೆ ತೊಡಗಿಸಬಾರದು. ಆದರೆ ಟೋಕೈ ರಿಕಾ ಮಿಂಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಕಂಪೆನಿ ಕಾರ್ಮಿಕ ಸಂಘಟನೆ ಕಟ್ಟಿದ ನೆಪಕ್ಕೆ ಎಲ್ಲಾ ನೌಕರರನ್ನು ಕೆಲಸದಿಂದ ವಜಾ ಮಾಡಿ ಅಪರೆಂಟೀಸ್ ವಿದ್ಯಾರ್ಥಿಗಳಿಂದ ಆ ಕೆಲಸವನ್ನು ಮಾಡಿಸಿಕೊಳ್ಳುತ್ತಿದೆ. ಕಡಿಮೆ ವೇತನ ನೀಡಿ ವಿದ್ಯಾರ್ಥಿಗಳಿಂದ ಕಠಿಣ ಕೆಲಸ ಮಾಡಿಸಿಕೊಳ್ಳುವ ಇಂತಹ ಕಂಪೆನಿಗಳ ಆಟ ತಿಳಿದಿದ್ದೂ ಸಹ ಕಾರ್ಮಿಕ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂಬುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ.

ಕಾರ್ಮಿಕ ಸಂಘ ಕಟ್ಟುವುದೇ ತಪ್ಪೇ?

ಟೋಕೈ ರಿಕಾ ಮಿಂಡಾ ಕಂಪೆನಿಯಲ್ಲಿ ಕಳೆದ 10 ವರ್ಷಗಳಿಂದ ಇಂತಹ ಅಮಾನವೀಯ ಹಿಂಸೆಗಳನ್ನು ಅನುಭವಿಸಿಕೊಂಡು ಬಂದ ಕಾರ್ಮಿಕರು ಕೊನೆಗೂ ಕಳೆದ ವರ್ಷ ಜನವರಿ 6ರಂದು ತಮ್ಮ ಯೋಗಕ್ಷೇಮಕ್ಕಾಗಿ ಸಿಐಟಿಯು ಅಧೀನದಲ್ಲಿ ಸಂವಿಧಾನಬದ್ಧ ಕಾರ್ಮಿಕ ಸಂಘವನ್ನು ಕಟ್ಟಿ ಕೊಂಡಿದ್ದರು. ಅಲ್ಲದೆ ತಮ್ಮ ಸಂಘಟನೆ ಮೂಲಕ ಕಾರ್ಮಿಕರಿಗೆ ಕನಿಷ್ಟ ಸವಲತ್ತು ಮಾಡಿಕೊಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಯ ಮುಂದೆ ಕೆಲವು ಬೇಡಿಕೆಗಳನ್ನು ಮುಂದಿಟ್ಟರು.

ಆದರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಇದು ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ಸಂಘಟನೆಯನ್ನು ವಿಸರ್ಜಿಸುವಂತೆ ಒತ್ತಡ ಹೇರಿದರು. ಅಲ್ಲದೆ ಸಂಘಟನೆಯಲ್ಲಿ ಗುರುತಿಸಿಕೊಂಡ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂಬ ಬೆದರಿಕೆಯನ್ನು ಒಡ್ಡಿದ್ದರು. ಆದರೆ ಇದ್ಯಾವುದಕ್ಕೂ ಮಣಿಯದ ಕಾರ್ಮಿಕರು ಕಪ್ಪುಪಟ್ಟಿ ಕಟ್ಟಿಕೊಂಡು ಕೆಲಸ ಮಾಡುವ ಮೂಲಕ ಕಂಪೆನಿಯ ನಿಯಮಗಳ ವಿರುದ್ಧ ಪ್ರತಿಭಟಿಸಿದ್ದಾರೆ. ಇದರಿಂದ ಕೆಂಡಾಮಂಡಲವಾದ ಆಡಳಿತ ಮಂಡಳಿ ಒಂದು ನೋಟೀಸ್ ಕೂಡ ನೀಡದೆ ಹಂತಹಂತವಾಗಿ ಸುಮಾರು 160 ಜನ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದೆ. ಇದರಲ್ಲಿ 27 ಜನ ಮಹಿಳೆಯರು.

ಕೆಲಸ ಕಳೆದುಕೊಂಡವರು ತಮಗೆ ನ್ಯಾಯ ಸಿಗಬೇಕು ಎಂದು ಕಳೆದ ಫೆಬ್ರವರಿಯಿಂದ ಕಂಪೆನಿಯ ಎದುರು ಧರಣಿ ಕುಳಿತಿದ್ದಾರೆ. ಸತತ ಒಂದು ವರ್ಷದಿಂದ ಹೋರಾಟ ಮುಂದುವರೆದಿದೆ. ಆದರೆ ಈವರೆಗೆ ಯಾವುದೇ ಉಪಯೋಗವಿಲ್ಲ. ಈ ನಡುವೆ ಹೋರಾಟದಲ್ಲಿ ತೊಡಗಿದ್ದ ಕಾರ್ಮಿಕರ ಮನೋಸ್ಥೈರ್ಯವನ್ನು ಕುಗ್ಗಿಸುವ ಸಲುವಾಗಿ ರೌಡಿಗಳನ್ನು ಬಿಟ್ಟು ಕೆಲವರನ್ನು ಅಪಹರಿಸುವ ಕೆಲಸಕ್ಕೂ ಕಂಪೆನಿ ಮುಂದಾಗಿದೆ. ಒಬ್ಬ ಕಾರ್ಮಿಕನನ್ನು ಅಪಹರಿಸುವಾಗ ಅಪಹರಣಾಕಾರರು ಕಾರ್ಮಿಕರ ಬಳಿ ಸಿಕ್ಕಿ ಬಿದ್ದಿದ್ದಾರೆ. ಇವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಅಲ್ಲದೆ ಈ ಹೋರಾಟದಲ್ಲಿ ಭಾಗಿಯಾಗಿದ್ದ ಹೆಣ್ಣು ಮಕ್ಕಳನ್ನೂ ಥಳಿಸುವ ಮೂಲಕ ಪೊಲೀಸರು ಕಂಪೆನಿಯವರ ಕೈಗೊಂಬೆಗಳಂತೆ ವರ್ತಿಸಿದ್ದಾರೆ.

ಕಂಪೆನಿಯ ಕೈಗೊಂಬೆಯಾದ ಪೊಲೀಸ್

ಕಂಪನಿಯ ಉದ್ಯೋಗಿಗಳ ಮೇಲೆ ಪೊಲೀಸರ ಪ್ರತಾಪ. 
ಕಂಪನಿಯ ಉದ್ಯೋಗಿಗಳ ಮೇಲೆ ಪೊಲೀಸರ ಪ್ರತಾಪ. 

ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕಾರ್ಮಿಕನನ್ನೇ ಅಪಹರಣ ಮಾಡುವ ಹೀನ ಕೃತ್ಯಕ್ಕೆ ಕಂಪೆನಿಯ ಆಡಳಿತ ಮಂಡಳಿ ಕೈಹಾಕಿದ ನಂತರ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದಿತ್ತು. ಕಂಪೆನಿಯವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಎಲ್ಲಾ ಕಾರ್ಮಿಕರು ಏಪ್ರಿಲ್ 30 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೆಲಸ ಕಳೆದುಕೊಂಡ ಕಾರ್ಮಿಕರ ಪರವಾಗಿ ಕಂಪೆನಿಯ ಒಳಗೆ ಕೆಲಸ ಮಾಡುತ್ತಿದ್ದವರೂ ಸಹ ತಮ್ಮ ಕೆಲಸ ಮುಗಿಸಿ ಉಳಿದ ಸಮಯದಲ್ಲಿ ಮನೆಗೆ ಹೋಗದೆ ಕಾರ್ಖಾನೆಯ ಒಳಗೆ ಶಾಂತಿಯುತವಾಗಿ ಉಪವಾಸ ಹೋರಾಟ ನಡೆಸಿದ್ದಾರೆ. ಆದರೆ ಮೇ.4 ರ ಬೆಳಗಿನ ಜಾವ ದಾಬಸ್‌ ಪೇಟೆ ಪೊಲೀಸ್ ಠಾಣಾಧಿಕಾರಿ ಗೋವರ್ಧನ್ ಹಾಗೂ ಆಗಿನ ಬೆಂಗಳೂರು ಗ್ರಾಮಾಂತರ ಡಿವೈಎಸ್‌ಪಿ ರಾಜೇಂದ್ರ 100 ಜನ ಪೊಲೀಸ್ ಪೇದೆಗಳ ಜೊತೆ ಪ್ರತಿಭಟನಾಕಾರರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಲಾಠಿಚಾರ್ಚ್ ಮಾಡಿ ಕಾರ್ಖಾನೆಯಿಂದ ಹೊರಹಾಕಲಾಗಿದೆ. ಲಾಠಿಚಾರ್ಚ್‌ನಲ್ಲಿ ಹಲವರಿಗೆ ಗಾಯಗಳಾಗಿದ್ರೆ, ಮಹಿಳಾ ಕಾರ್ಮಿಕರ ಬಟ್ಟೆ ಹರಿದು ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಪುರುಷ ಪೊಲೀಸ್‌ ಪೇದೆಗಳು ಮಹಿಳಾ ಕಾರ್ಮಿಕರನ್ನು ಎಳೆದಾಡಿ ಮನ ಬಂದಂತೆ ಥಳಿಸಿದರೆ, ಸ್ವತಃ ಡಿವೈಎಸ್‌ಪಿ ರಾಜೇಂದ್ರ ದಿವ್ಯ ಎಂಬ ಹುಡುಗಿಯ ಶರ್ಟ್ ಅನ್ನು ಸಂಪೂರ್ಣವಾಗಿ ಹರಿದು ವಿಕೃತಿ ಮೆರೆದಿದ್ದರು. ಅಲ್ಲದೆ ಕಂಪೆನಿಯ ಹೊರಗಿದ್ದ ಕಾರ್ಮಿಕರ ಪೆಂಡಾಲ್‌ಗಳನ್ನು ಹರಿದು ಇನ್ನೂ ಇಲ್ಲಿ ಪ್ರತಿಭಟನೆ ನಡೆಸಬಾರದು ಎಂದು ಎಚ್ಚರಿಕೆ ನೀಡಿ ಹಲವರನ್ನು ಅರೆಸ್ಟ್ ಮಾಡಿ ಎಫ್‌ಐಆರ್ ದಾಖಲು ಮಾಡಿ ದೌರ್ಜನ್ಯವೆಸಗಿದ್ದಾರೆ. ಈ ಲಾಠಿಚಾರ್ಚ್‌ನಲ್ಲಿ ಕನಿಷ್ಟ 60 ಜನ ಗಾಯಾಳುಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಮಹಿಳಾ ಮತ್ತು ಮಾನವ ಹಕ್ಕು ಆಯೋಗ

ಮಹಿಳಾ ಕಾರ್ಮಿಕರ ಮೇಲೆ ಇಂತಹ ಅಮಾನವೀಯ ಹಲ್ಲೆ ನಡೆದ ಬೆನ್ನಿಗೆ ಸಿಐಟಿಯು ಕಾರ್ಮಿಕ ಸಂಘಟನೆ ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಆಯೋಗಕ್ಕೆ ಸಾಕ್ಷಿ ಸಮೇತ ದೂರು ನೀಡಿದೆ. ಆದರೆ ಯಾವ ಆಯೋಗಗಳೂ ಬಡ ಕಾರ್ಮಿಕರ ನೆರವಿಗೆ ಧಾವಿಸಲೇ ಇಲ್ಲ.

ಇದಲ್ಲದೆ ಕಾರ್ಮಿಕ ಸಂಘಟನೆ ಕಾರ್ಮಿಕ ಸಚಿವಾಲಯ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಖುದ್ದು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಕಾರ್ಮಿಕರನ್ನು ಪಶುಗಳಂತೆ ನಡೆಸಿಕೊಂಡು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ಕಂಪೆನಿಯ ವಿರುದ್ಧ ದೂರನ್ನೂ ಸಹ ನೀಡಿದ್ದಾರೆ. ಆದರೆ ಈವರೆಗೆ ಕಾರ್ಮಿಕ ಇಲಾಖೆಯಾಗಲಿ ಅಧಿಕಾರಿಗಳಾಗಿ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಇನ್ನೂ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬಡ ಕಾರ್ಮಿಕರು.

ಸಂವಿಧಾನ ಅನುಚ್ಛೇದ 14 ರಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡಲಾಗಿದೆ. ಅನುಚ್ಚೇದ 19ರಲ್ಲಿ ಸಂಘಟಿತರಾಗುವ ಹಕ್ಕು, ಅನುಚ್ಛೇದ 21 ರಲ್ಲಿ ಎಲ್ಲರಿಗೂ ಬದುಕುಳಿಯುವ ಹಕ್ಕು, ಅನುಚ್ಛೇದ 39ಡಿ ಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಹಕ್ಕು, ಅನುಚ್ಛೇದ 15 ರಲ್ಲಿ ಲಿಂಗ ತಾರತಮ್ಯದ ವಿರುದ್ಧದ ಹಕ್ಕು, 38-39ರಲ್ಲಿ ದುಡಿಯುವ ಜನರಿಗೆ ಉತ್ತಮ ಸೌಲ್ಯಭ್ಯ ಹಾಗೂ ಅನುಚ್ಛೇದ 42ರ ಅಡಿಯಲ್ಲಿ ಹೆರಿಗೆ ಮುಂತಾದ ವಿಚಾರದಲ್ಲಿ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ.

ಸಂವಿಧಾನವೇನೋ ಕಾರ್ಮಿಕರಿಗೆ ಈ ಎಲ್ಲಾ ಹಕ್ಕುಗಳನ್ನು ನೀಡಿದೆ. ಆದರೆ ಸಂವಿಧಾನ ಬದ್ಧ ಯಾವ ಹಕ್ಕುಗಳೂ ಟೋಕೈ ರಿಕಾ ಮಿಂಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಕಂಪೆನಿಯ ಒಳಗೆ ಕಾಲಿಡದಂತೆ ನೋಡಿಕೊಳ್ಳುವಲ್ಲಿ ಅಲ್ಲಿನ ಆಡಳಿತ ಮಂಡಳಿ ಯಶಸ್ವಿಯಾಗಿದೆ. ಪರಿಣಾಮ ಕಾರ್ಮಿಕರ ಘನತೆಯುಕ್ತ ಬದುಕಿಗೆ ಇಲ್ಲಿ ಕೊಡಲಿ ಪೆಟ್ಟು ಬಿದ್ದಿದೆ.

ಈ ಕುರಿತು ಪ್ರಶ್ನಿಸಬೇಕಾದ ಇಲಾಖೆಗಳು, ಅಧಿಕಾರಿಗಳು ಜಾಣ ಕುರುಡು ಕಿವುಡಿಗೆ ಒಳಗಾಗಿದ್ದಾರೆ. ಇನ್ನೂ ಮಾನವ ಹಕ್ಕು, ಮಹಿಳಾ ಆಯೋಗಕ್ಕಂತೂ ಈ ಯಾವ ವಿಚಾರವೂ ಬೇಡವಾಗಿರುವುದು ಮಾತ್ರ ವಿಪರ್ಯಾಸ. ಪರಿಣಾಮ ಇಲ್ಲಿನ ಕಾರ್ಮಿಕರು ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೆ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಕಾರ್ಮಿಕ ಅಹವಾಲನ್ನು ಸ್ವೀಕರಿಸಲು ಮನಸ್ಸು ಮಾಡುತ್ತಾರಾ? ಇವರ ಸಮಸ್ಯೆ ಬಗೆಹರಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಅಂದಹಾಗೆ ಇವತ್ತು ವಿಶ್ವ ಮಹಿಳಾ ದಿನಾಚರಣೆ. ಊರಿಗಿಂತ ಮುಂಚೆ ಕಾರ್ಪೊರೇಟ್ ಪ್ರಪಂಚ ಮಹಿಳೆಯರನ್ನು ಕೊಂಡಾಡಲು ಮುಂದಾಗಿದೆ. ಅದೇ ವೇಳೆಯಲ್ಲಿ ಅದೇ ಕಾರ್ಪೊರೇಟ್ ಪ್ರಪಂಚದ ಕಂಪೆನಿಯೊಂದು ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಇಂತಹ ವಿಪರ್ಯಾಸವನ್ನು ಹೇಗೆ ಎದುರಿಸುತ್ತೀರಿ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.