samachara
www.samachara.com
ಮೂರೂ ಪಕ್ಷಗಳಲ್ಲಿ ಸೀಟು ಹಂಚಿಕೆ ಕಗ್ಗಂಟು; 28 ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ತಳಮಳ
COVER STORY

ಮೂರೂ ಪಕ್ಷಗಳಲ್ಲಿ ಸೀಟು ಹಂಚಿಕೆ ಕಗ್ಗಂಟು; 28 ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ತಳಮಳ

ಸಾಮಾನ್ಯವಾಗಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವಲ್ಲಿ ಇತರೆ ಪಕ್ಷಗಳಿಗಿಂತ ಬಿಜೆಪಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತಿತ್ತು. ಆದರೆ ಈ ಬಾರಿ ಹಾಗಾಗಿಲ್ಲ.

ಯಾವುದೇ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಿದ್ದೂ ಪ್ರಮುಖ ಮೂರು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಘೋಷಿಸದೇ ಇರುವುದು ಟಿಕೆಟ್‌ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.

ಸಾಮಾನ್ಯವಾಗಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವಲ್ಲಿ ಇತರೆ ಪಕ್ಷಗಳಿಗಿಂತ ಬಿಜೆಪಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತಿತ್ತು. ಆದರೆ ಈ ಬಾರಿ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷ, ಆಡಿಯೋ ಪ್ರಕರಣ ಇತ್ಯಾದಿ ಕಾರಣಗಳಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಇನ್ನು ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿಯೇ ಕಾಲಹರಣ ಮಾಡುತ್ತಿರುವುದರಿಂದ ಹಾಲಿ ಅಭ್ಯರ್ಥಿಗಳು ಸೇರಿದಂತೆ ಸ್ಪರ್ಧೆಯ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ, ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬ ಭೀತಿ ಕಾಡುತ್ತಿದೆ.

ಈಗಾಗಲೇ ಜೆಡಿಎಸ್ ಕನಿಷ್ಠ 10 ಕ್ಷೇತ್ರಗಳನ್ನಾದರೂ ಬಿಟ್ಟುಕೊಡುವಂತೆ ಪಟ್ಟು ಹಿಡಿದಿರುವುದರಿಂದ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಯುತ್ತಿಲ್ಲ. ಬುಧವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಮಾಲೋಚನೆ ನಡೆಸಿದರೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಸೀಟು ಹಂಚಿಕೆಯೇ ಮುಗಿಯದೆ ಮೈತ್ರಿ ಪಕ್ಷಗಳಲ್ಲಿ ಟಿಕೆಟ್‌ ಹಂಚಿಕೆ ಆರಂಭವಾಗಲು ಸಾಧ್ಯವೂ ಇಲ್ಲ.

ಸದ್ಯಕ್ಕೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪರಿಸ್ಥಿತಿ ಹೀಗಿದೆ,

ಬೆಂಗಳೂರು ದಕ್ಷಿಣ:

ಬಹುತೇಕ ಸುಶಿಕ್ಷಿತರು, ವಿದ್ಯಾವಂತ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಈವರೆಗೂ ದೃಢಪಟ್ಟಿಲ್ಲ.
1996ರಿಂದ 2014ರವರೆಗೆ ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ದಿವಂಗತ ಅನಂತ ಕುಮಾರ್ ಅನುಪಸ್ಥಿತಿ ಕಮಲ ಪಕ್ಷವನ್ನು ಕಾಡುತ್ತಿದೆ. ಬಿಜೆಪಿಯಿಂದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಸ್ಪರ್ಧೆಗೆ ಅಣಿಯಾಗಿದ್ದಾರೆ, ಕಾಂಗ್ರೆಸ್‍ನಿಂದ ಪ್ರಿಯಕೃಷ್ಣ ಹೆಸರು ಕೇಳಿ ಬಂದಿದೆ.

ಬೆಂಗಳೂರು ಕೇಂದ್ರ:

ಮಧ್ಯಮ ವರ್ಗ, ವಲಸಿಗರು ಹೆಚ್ಚಾಗಿರುವ ಬೆಂಗಳೂರು ಕೇಂದ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪಿ.ಸಿ.ಮೋಹನ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಈ ಕ್ಷೇತ್ರದಿಂದ ಚಿತ್ರನಟ ಪ್ರಕಾಶ್ ರೈ ಕಣಕ್ಕಿಳಿದಿದ್ದು ಸಹಜವಾಗಿ ಬೆಂಗಳೂರು ಕೇಂದ್ರ ಈ ಬಾರಿ ರಾಜ್ಯದ ಗಮನ ಸೆಳೆದಿದೆ. ಇಲ್ಲಿ ಕಾಂಗ್ರೆಸ್‍ನಿಂದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಶಾಸಕ ರೋಷನ್ ಬೇಗ್ ಟಿಕೆಟ್‌ ಬಯಸಿದ್ದಾರೆ.

ಬೆಂಗಳೂರು ಉತ್ತರ:

ಒಕ್ಕಲಿಗ ಸಮುದಾಯದ ಇಬ್ಬರು ದಿಗ್ಗಜರು ಒಂದೇ ಕ್ಷೇತ್ರದಿಂದ ಅಖಾಡಕ್ಕಿಳಿಯಲಿರುವ ಸಾಧ್ಯತೆಗಳು ಬೆಂಗಳೂರು ಉತ್ತರದಲ್ಲಿ ಕಾಣಿಸುತ್ತಿವೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಬಿಜೆಪಿಯಿಂದ ಅಖಾಡಕ್ಕಿಳಿಯಲಿದ್ದಾರೆ.

ಒಂದೊಮ್ಮೆ ದೇವೇಗೌಡರು ಕಣಕ್ಕಿಳಿದಿದ್ದೇ ಆದರೆ ಗೌಡದ್ವಯರ ಸೆಣಸಾಟದಿಂದ ಬೆಂಗಳೂರು ಉತ್ತರ ಕ್ಷೇತ್ರ ರಾಷ್ಟ್ರದಲ್ಲೇ ಹೈ ವೋಲ್ಟೇಜ್ ಎನಿಸಲಿದೆ.

ಬೆಂಗಳೂರು ಗ್ರಾಮಾಂತರ:

ಡಿ.ಕೆ. ಸಹೋದರರ ಸಾಮ್ರಾಜ್ಯ ಹಾಗೂ ದಳಪತಿಗಳ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಮೈತ್ರಿ ಅಭ್ಯರ್ಥಿಯಾಗುವುದು ಖಚಿತವಾಗಿದೆ.

ಆದರೆ ಬಿಜೆಪಿ ಈವರೆಗೂ ತನ್ನ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ. ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ತುಳಸಿ ಮುನಿರಾಜು, ರುದ್ರೇಶ್ ಹೆಸರುಗಳು ಇಲ್ಇ ಬಿಜೆಪಿಯಿಂದ ಕೇಳಿಬರುತ್ತಿವೆ.

ಮಂಡ್ಯ:

ಚುನಾವಣೆಗೂ ಮುನ್ನ ಅನೇಕ ಕಾರಣಗಳಿಂದ ರಾಜ್ಯದ ಗಮನಸೆಳೆದ ಕ್ಷೇತ್ರವೆಂದರೆ ಸಕ್ಕರೆ ಜಿಲ್ಲೆ ಮಂಡ್ಯ.
ಜೆಡಿಎಸ್‍ನ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ನಂತರ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಲು ಉತ್ಸುಕವಾಗಿದ್ದರೆ, ಅಂಬರೀಶ್ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಇಲ್ಲಿ ಬಿಜೆಪಿ ತಾನೇನು ಮಾಡಬೇಕು ಎಂಬುದನ್ನು ಅರಿಯದೆ ಸಂಧಿಗ್ಧ ಪರಿಸ್ಥಿತಿಯಲ್ಲಿದೆ.

ಮೈಸೂರು-ಕೊಡಗು:

ಇಲ್ಲಿ ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನೀಡಬಾರದೆಂಬ ಕೂಗು ಕೇಳಿ ಬರುತ್ತಿದೆಯಾದರೂ ಅಭ್ಯರ್ಥಿ ಬದಲಿಸುವ ಸಾಧ್ಯತೆ ತೀರಾ ಕಡಿಮೆ. ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಜೆಡಿಎಸ್ ಕೂಡ ತನಗೇ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ.

ಕಾಂಗ್ರೆಸ್‍ನಿಂದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಮೊಮ್ಮಗ ಸೂರಜ್ ಹೆಗ್ಡೆ ಹಾಗೂ ಮಾಜಿ ಸಚಿವ ವಿಜಯ ಶಂಕರ್, ಜೆಡಿಎಸ್‍ನಿಂದ ಮಾಜಿ ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಹೆಸರುಗಳು ಕೇಳಿಬರುತ್ತಿವೆ.

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಆರ್.ಕೆ.ಧ್ರುವನಾರಾಯಣ್ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಎಂ. ಶ್ರೀನಿವಾಸ್ ಪ್ರಸಾದ್, ಎಂ.ಶಿವಣ್ಣ ಆಕಾಂಕ್ಷಿಗಳಾಗಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರ:

ಶಾಶ್ವತ ಬರಪೀಡಿತ ಜಿಲ್ಲೆಗಳೆಂಬ ಹಣೆಪಟ್ಟಿ ಹೊತ್ತುಕೊಂಡಿರುವ ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಈ ಬಾರಿ ತನಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಬೇಡಿಕೆ ಮುಂದಿಟ್ಟಿದೆ. ಆದರೆ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕೈ ಮುಖಂಡರು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಸ್ಥಳೀಯರ ವಿರೋಧದ ನಡುವೆಯೂ ಕೋಲಾರದಿಂದ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರದಿಂದ ವೀರಪ್ಪ ಮೊಯ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರೆ ಬಿಜೆಪಿಯಿಂದ ಈಗಾಗಲೇ ಚಿಕ್ಕಬಳ್ಳಾಪುರಕ್ಕೆ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅಭ್ಯರ್ಥಿಯಾಗಿದ್ದಾರೆ. ಕೋಲಾರಕ್ಕೆ ಮಾತ್ರ ಬಿಜೆಪಿಯಿಂದ ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ, ಚಿ.ನಾ.ರಾಮು ಆಕಾಂಕ್ಷಿಗಳಾಗಿದ್ದಾರೆ.

ಕರಾವಳಿಗೆ ಯಾರು:

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರೇ ಇದ್ದಾರೆ. ವಿಶೇಷವೆಂದರೆ ಮೂರು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ನೀಡಬಾರದೆಂದು ಸ್ವಪಕ್ಷೀಯರೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡದಿಂದ ನಳಿನ್‌ ಕುಮಾರ್‌ ಕಟೀಲ್‌, ಉಡುಪಿ-ಚಿಕ್ಕಮಗಳೂರಿನಿಂದ ಅತ್ತ ತಲೆ ಹಾಕಿಯೂ ಮಲಗದ ಶೋಭಾ ಕರಂದ್ಲಾಜೆಗೆ, ಉತ್ತರ ಕನ್ನಡ ಜಿಲ್ಲೆಯಿಂದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ನೀಡಬಾರದೆಂಬ ಕೂಗು ಹೆಚ್ಚಾಗುತ್ತಿದೆ. ಈಗಾಗಲೇ 'ಗೋ ಬ್ಯಾಕ್ ಶೋಭಕ್ಕ' ಅಭಿಯಾನ ಆರಂಭವಾಗಿರುವುದರಿಂದ ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

ಈ ಮೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿರುವುದರಿಂದ ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಗಳು ಕಣಕ್ಕಿಳಿಯಬಹುದು.

ಮಧ್ಯ ಕರ್ನಾಟಕ:

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಧ್ಯ ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಕಾವು ಬೇಸಿಗೆ ಬಿರು ಬಿಸಿಲಿನಂತೆ ರಂಗೇರಿದೆ.

ಶಿವಮೊಗ್ಗದಿಂದ ಯಡಿಯೂರಪ್ಪನವರ ಪುತ್ರ ರಾಘವೇಂದ್ರ, ದೋಸ್ತಿ ಪಕ್ಷದಿಂದ ಮಧು ಬಂಗಾರಪ್ಪ ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಬೆಣ್ಣೆ ದೋಸೆ ಖ್ಯಾತಿಯ ದಾವಣಗೆರೆಯಿಂದ 4ನೇ ಬಾರಿಗೆ ಜಿ.ಎಂ.ಸಿದ್ದೇಶ್ವರ್‌ ಬಿಜೆಪಿಯಿಂದ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದರೆ, ಕಾಂಗ್ರೆಸ್‍ನಿಂದ ಎಸ್.ಎಸ್.ಮಲ್ಲಿಕಾರ್ಜುನ್ ಆಕಾಂಕ್ಷಿಯಾಗಿದ್ದಾರೆ.

ಚಿತ್ರದುರ್ಗದಲ್ಲಿ ಕಾಂಗ್ರೆಸ್‍ನಿಂದ ಸಂಸದ ಚಂದ್ರಪ್ಪ, ಬಿಜೆಪಿಯಿಂದ ಜನಾರ್ಧನ ಸ್ವಾಮಿ ಮತ್ತು ನಿವೃತ್ತ ಐಎಎಸ್‍ ಅಧಿಕಾರಿ ಲಕ್ಷ್ಮೀ ನಾರಾಯಣ ಟಿಕೆಟ್‍ಗಾಗಿ ಲಾಬಿ ನಡೆಸುತ್ತಿದ್ದಾರೆ.

ತುಮಕೂರು ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಬೇಕೆಂದು ದೋಸ್ತಿಗಳಲ್ಲಿ ಜಿಜ್ಞಾಸೆ ಉಂಟಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಮುದ್ದೆ ಹನುಮೇಗೌಡ ಪ್ರತಿನಿಧಿಸುತ್ತಿರುವುದರಿಂದ ಇದನ್ನು ತನ್ನಲ್ಲೇ ಉಳಿಸಿಕೊಳ್ಳಲು ಕೈ ಪಕ್ಷ ಮುಂದಾಗಿದೆ. ಇಲ್ಲಿ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ನೋಡಬೇಕಷ್ಟೆ.

ಮುಂಬೈ ಕರ್ನಾಟಕ:

ಇನ್ನು ಮುಂಬೈ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿಯಲ್ಲಿ ಆಯಾ ಪಕ್ಷಗಳಿಂದ ಹಾಲಿ ಅಭ್ಯರ್ಥಿಗಳು ಮತ್ತೊಮ್ಮೆ ಸ್ಪರ್ಧಿಸುವುದು ಖಚಿತ. ಬಿಜೆಪಿಯಿಂದ ಬೆಳಗಾವಿ ಅಭ್ಯರ್ಥಿಯಾಗಿ ಸುರೇಶ್‌ ಅಂಗಡಿ, ಧಾರವಾಡ ಅಭ್ಯರ್ಥಿಯಾಗಿ ಪ್ರಹ್ಲಾದ್‌ ಜೋಷಿ, ಹಾವೇರಿಯಿಂದ ಶಿವಕುಮಾರ್‌ ಉದಾಸಿ ಸ್ಪರ್ಧಿಸಲಿದ್ದಾರೆ. ಪ್ರಹ್ಲಾದ್‌ ಜೋಷಿ, ಸುರೇಶ್ ಅಂಗಡಿಗೆ ಪಕ್ಷದಲ್ಲೇ ವಿರೋಧವಿದ್ದರೂ ಅನಿವಾರ್ಯವಾಗಿ ಅವರಿಗೇ ಬಿಜೆಪಿಗರು ಮಣೆ ಹಾಕಲಿದ್ದಾರೆ.

ಚಿಕ್ಕೋಡಿಯಲ್ಲಿ ಮಾತ್ರ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲಿ ಕಳೆದ ಬಾರಿ ಸ್ಪರ್ಧಿಸಿ ಅಲ್ಪ ಸಂತರದಿಂದ ಸೋಲೊಪ್ಪಿಕೊಂಡಿದ್ದ ರಮೇಶ್‌ ಕತ್ತಿಯನ್ನೇ ಪುನಃ ಕಣಕ್ಕಿಳಿಸುವ ಸಾಧ್ಯತೆ ಇದೆ.

ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನಿಂದ ಹಾಲಿ ಸಂಸದ ಪ್ರಕಾಶ್‌ ಹುಕ್ಕೇರಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೆಳಗಾವಿ, ಹಾವೇರಿಯಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ಮುಂದುವರಿದಿದ್ದರೆ, ಧಾರವಾಡದಲ್ಲಿ ವಿನಯ್‌ ಕುಲಕರ್ಣಿ ಸ್ಪರ್ಧೆಗೆ ಬೇಡಿಕೆ ಕೇಳಿ ಬರುತ್ತಿದೆ.

ಹೈದರಾಬಾದ್‌ ಕರ್ನಾಟಕ:

ಹೈದರಾಬಾದ್ ಕರ್ನಾಟಕದ ಕಲಬುರಗಿಯಲ್ಲಿ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ್‌ ಖರ್ಗೆ ಬಿಜೆಪಿಯಿಂದ ಬಹುತೇಕ ಉಮೇಶ್‌ ಜಾಧವ್‌ ಸ್ಪರ್ಧಿಸಲಿದ್ದಾರೆ.

ಬೀದರ್‌ನಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಭಗಂತ್‌ ಖೂಬಾ ಅಭ್ಯರ್ಥಿಯಾದರೆ ಕಾಂಗ್ರೆಸ್‌ನಿಂದ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ.

ಬಾಗಲಕೋಟೆಯಿಂದ ಪಿ.ಸಿ. ಗದ್ದಿಗೌಡರ್‌ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಯಾರು ಎಂಬುದು ಕಾದು ನೋಡಬೇಕಿದೆ.

ರಾಯಚೂರಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ವಿ. ನಾಯಕ್‌ ಸ್ಪರ್ಧಿಸಲಿದ್ದಾರೆ, ಇಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಾಗಿ ಹುಡುಕಾಡುತ್ತಿದೆ.

ಅತ್ಯಂತ ಕುತೂಹಲ ಕೆರಳಿಸಿರುವ ಇನ್ನೊಂದು ಕ್ಷೇತ್ರ ಬಳ್ಳಾರಿ. ಹಾಲಿ ಸಂಸದ ವಿ.ಎಸ್‌. ಉಗ್ರಪ್ಪ ಇಲ್ಲಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, ಬಿ. ನಾಗೇಂದ್ರರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರ ಸಹೋದರ ವೆಂಕಟೇಶ್‌ ಪ್ರಸಾದ್‌ ಕಣಕ್ಕಿಳಿಸಲು ಮುಂದಾಗಿದೆ. ಆದರೆ ಇನ್ನೂ ಯಾವುದೂ ಅಂತಿಮಗೊಂಡಿಲ್ಲ.

ಹೀಗೆ ಚುನಾವಣೆ ಸಮೀಪಿಸುತ್ತಿದ್ದರೂ 28 ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್‌ ಹಂಚಿಕೆ ನಡೆಯದೆ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗಿದೆ. ಕೊನೆಯ ಕ್ಷಣದಲ್ಲಿ ಸೀಟು ಹಂಚಿಕೆಯಾದರೆ ಪ್ರಚಾರ ಕಷ್ಟ ಎಂಬುದು ಅವರ ಆತಂಕಕ್ಕೆ ಕಾರಣ.