samachara
www.samachara.com
ಎಲೆಕ್ಷನ್ ಇಯರ್ 2019: 53 ದೇಶಗಳು, 2 ಬಿಲಿಯನ್ ಮತದಾರರು; ಚುನಾವಣೆ ಸುತ್ತ ಜಾಗತಿಕ ನೋಟ...
COVER STORY

ಎಲೆಕ್ಷನ್ ಇಯರ್ 2019: 53 ದೇಶಗಳು, 2 ಬಿಲಿಯನ್ ಮತದಾರರು; ಚುನಾವಣೆ ಸುತ್ತ ಜಾಗತಿಕ ನೋಟ...

ವಿಶ್ವದ ಎಷ್ಟು ರಾಷ್ಟ್ರಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ? ಯಾವ ರಾಷ್ಟ್ರದಲ್ಲಿ ಎಷ್ಟು ಜನ ಮತ ಚಲಾವಣೆಗೆ ಸಿದ್ದರಾಗಿದ್ದಾರೆ? ಮಹಿಳೆಯರಿಗೂ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ನೀಡಿದ ರಾಷ್ಟ್ರ ಯಾವುದು ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

ಭಾರತದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ಇಡೀ ದೇಶ ಸಜ್ಜಾಗುತ್ತಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ದಿನಾಂಕ ನಿಗದಿಯಾಗುವ ಎಲ್ಲಾ ಸಾಧ್ಯತೆಗಳು ಇವೆ.

ಆದರೆ ಭಾರತ ಮಾತ್ರವಲ್ಲ 2019ರಲ್ಲಿ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಚುನಾವಣೆಗೆ ಸಜ್ಜಾಗುತ್ತಿವೆ. ಸುಮಾರು 2 ಬಿಲಿಯನ್‌ಗೂ ಅಧಿಕ ಜನ ಮತ ಚಲಾಯಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ವಿಶ್ವದ ಎಷ್ಟು ರಾಷ್ಟ್ರಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ? ಯಾವ ರಾಷ್ಟ್ರದಲ್ಲಿ ಎಷ್ಟು ಜನ ಮತ ಚಲಾವಣೆಗೆ ಸಿದ್ದರಾಗಿದ್ದಾರೆ.? ಯಾವ ರಾಷ್ಟ್ರದಲ್ಲಿ ಅಧಿಕಾರ ಅವಧಿ ಎಷ್ಟು ? ಮಹಿಳೆಯರಿಗೂ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ನೀಡಿದ ರಾಷ್ಟ್ರ ಯಾವುದು ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

53 ರಾಷ್ಟ್ರಗಳಲ್ಲಿ ನಡೆಯಲಿದೆ ಎಲೆಕ್ಷನ್

ಈ ವರ್ಷ ವಿಶ್ವದ 53 ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಫೆಬ್ರವರಿ ತಿಂಗಳಲ್ಲಿ ಪಶ್ಚಿಮ ಆಫ್ರಿಕಾ ದೇಶಗಳಾದ ಸೆನೆಗಲ್, ಎಲ್ ಸಾಲ್ವಡಾರ್ ಹಾಗೂ ನೈಜೀರಿಯಾ ದೇಶಗಳ ಚುನಾವಣೆ ಮುಗಿದೆ. ಮಾರ್ಚ್ ತಿಂಗಳಲ್ಲಿ ಸ್ಲೋವಾಕಿಯಾ, ಥಾಯ್ಲೆಂಡ್ ಹಾಗೂ ಉಕ್ರೇನ್ ಸೇರಿದಂತೆ ಒಟ್ಟು 7 ದೇಶಗಳಲ್ಲಿ ಚುನಾವಣೆ ನಡೆಯಲಿದೆ.

ಏಪ್ರಿಲ್‌ ತಿಂಗಳಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಚುನಾವಣೆ ನಡೆಯುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಈ ಹಿಂದೆ ಭಾರತೀಯ ಚುನಾವಣಾ ಆಯೋಗ ಹೇಳಿಕೆ ನೀಡಿತ್ತಾದರೂ ಈವರೆಗೆ ದಿನಾಂಕವನ್ನು ನಿಗದಿ ಮಾಡಿಲ್ಲ.

ಇದಲ್ಲದೆ ಇಸ್ರೇಲ್, ಫಿನ್‌ಲ್ಯಾಂಡ್, ಇಂಡೋನೇಷಿಯಾ ಸೇರಿದಂತೆ ಒಟ್ಟು 10 ರಾಷ್ಟ್ರಗಳ ಚುನಾವಣೆಗೆ ಏಪ್ರಿಲ್‌ನಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ.

ಮೇ ತಿಂಗಳಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ನೆದರ್‌ಲ್ಯಾಂಡ್ ಸೇರಿದಂತೆ ಒಟ್ಟು 10 ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿದ್ದರೆ, ಜೂನ್ ತಿಂಗಳಲ್ಲಿ ಗ್ವಾಟೆಮಾಲಾ ಸೇರಿದಂತೆ 3, ಜುಲೈನಲ್ಲಿ ಗಯಾನ ಸೇರಿದಂತೆ 3, ಅಕ್ಟೋಬರ್‌ ತಿಂಗಳಲ್ಲಿ ಸ್ವಿಜರ್‌ಲೆಂಡ್, ಅರ್ಜೆಂಟೈನಾ ಸೇರಿದಂತೆ ಒಟ್ಟು 9 ರಾಷ್ಟ್ರಗಳಲ್ಲಿ ಚುನಾವಣೆ ಜರುಗಲಿವೆ.

ಇನ್ನು ವರ್ಷಾಂತ್ಯದ ನವೆಂಬರ್, ಡಿಸೆಂಬರ್ ತಿಂಗಳಲ್ಲೂ ಯುರೋಪ್ ಖಂಡದ 6 ರಾಷ್ಟ್ರಗಳ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ.

ಭಾರತದಲ್ಲಿ ಈ ಬಾರಿ 10 ಕೋಟಿ ಯುವ ಮತದಾರರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ (ಸಾಂದರ್ಭಿಕ ಚಿತ್ರ).
ಭಾರತದಲ್ಲಿ ಈ ಬಾರಿ 10 ಕೋಟಿ ಯುವ ಮತದಾರರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ (ಸಾಂದರ್ಭಿಕ ಚಿತ್ರ).
/ಡಿಎನ್‌ಎ

ಮತ ಚಲಾಯಿಸಲಿದ್ದಾರೆ ಕೋಟ್ಯಾಂತರ ಜನ

ಈ ವರ್ಷ ವಿಶ್ವದಾದ್ಯಂತ 50ಕ್ಕೂ ಹೆಚ್ಚು ದೇಶಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸುಮಾರು 2 ಬಿಲಿಯನ್‌ಗೂ ಅಧಿಕ ಜನ ಮತ ಚಲಾಯಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದರಲ್ಲಿ ಅತಿಹೆಚ್ಚು ಅಂದರೆ ಸುಮಾರು 800 ಮಿಲಿಯನ್ ಮತದಾರರನ್ನು ಹೊಂದಿರುವ ಭಾರತ ಅಧಿಕ ಮತದಾರರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲಿರುವ 800 ಮಿಲಿಯನ್ ಮತಗಳ ಪೈಕಿ 10 ಕೋಟಿ ಯುವ ಮತದಾರರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ.

ಆಗ್ನೇಯ ಏಷ್ಯಾದ 18,110 ದ್ವೀಪಗಳ ಒಕ್ಕೂಟ ರಾಷ್ಟ್ರವಾಗಿರುವ ಇಂಡೋನೇಷಿಯಾ 200 ಮಿಲಿಯನ್ ಜನಸಂಖ್ಯೆ ಹೊಂದಿದ್ದು, ಸುಮಾರು 187 ಮಿಲಿಯನ್ ಜನ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

ಪಶ್ಚಿಮ ಆಫ್ರಿಕಾ ದೇಶವಾದ ನೈಜೀರಿಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಸುಮಾರು 84 ಮಿಲಿಯನ್ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಮಹಿಳೆಯರಿಗೆ ಮತ ನೀಡಿದ ದೇಶಗಳು

ಚುನಾವಣಾ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಮಹಿಳೆಯರನ್ನು ಕಡೆಗಣಿಸಲಾಗುತ್ತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಎಲ್ಲರಿಗೂ ಮತ ಚಲಾಯಿಸುವ ಹಕ್ಕನ್ನು ನೀಡಿದ್ದರೂ ಮಹಿಳೆಯರಿಗೆ ಮಾತ್ರ ಮತ ಚಲಾಯಿಸುವ ಹಕ್ಕನ್ನು ನಿರಾಕರಿಸಲಾಗಿತ್ತು.

ಯುರೋಪ್ ಸೇರಿದಂತೆ ಅನೇಕ ಮುಂದುವರಿದ ದೇಶಗಳಲ್ಲೂ ಇದನ್ನು ಪಾಲಿಸಲಾಗುತ್ತಿತ್ತು. ಆದರೆ 1883ರಲ್ಲಿ ನ್ಯೂಜಿಲೆಂಡ್ ಸರಕಾರ ಮೊದಲ ಬಾರಿಗೆ ಮಹಿಳೆಯರಿಗೂ ಮತ ಚಲಾಯಿಸುವ ಹಕ್ಕು ನೀಡುವ ಮೂಲಕ ಇತಿಹಾಸ ನಿರ್ಮಿಸಿತ್ತು.

ನಂತರ ಯುರೋಪ್ ದೇಶಗಳಲ್ಲಿ ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಕಾಣುವ ಪರಿಪಾಠ ಆರಂಭವಾಯಿತು. ಪರಿಣಾಮ 1971ರಲ್ಲಿ ಸ್ವಿಜರ್‌ಲೆಂಡ್, 1994ರಲ್ಲಿ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಯಿತು.

ಅಪಘಾನಿಸ್ತಾನದ ಮಹಿಳೆಯರು ಮತ ಚಲಾಯಿಸುವ ಹಕ್ಕನ್ನು ಪಡೆಯಲು ತೀರಾ ಇತ್ತೀಚನ ವರೆಗೆ ಅಂದರೆ 2004 ರ ವರೆಗೆ ಕಾಯಬೇಕಾಗಿ ಬಂತು.

ಈ ವರ್ಷ ಚುನಾವಣೆಯನ್ನು ಎದುರುಗೊಳ್ಳಲಿರುವ ಅಷ್ಟೂ ದೇಶಗಳಲ್ಲಿ ಮಹಿಳೆಯರೂ ಮತದಾನ ಮಾಡಲಿದ್ದಾರೆ. ಈ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಲಿಂಗ ಅಸಮಾನತೆಯನ್ನು ಕಳೆದುಕೊಂಡ ಚುನಾವಣಾ ವರ್ಷ ಇದಾಗಲಿದೆ.

ಮಹಿಳೆಯರಿಗೆ ಮತದಾನದ ಅವಕಾಶ ನೀಡಿದ ಮೊದಲ ದೇಶ ನ್ಯೂಝಿಲ್ಯಾಂಡ್. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯರು ಮತದಾನಕ್ಕೆ ಹೊರಟು ನಿಂತ ಐತಿಹಾಸಿಕ ಚಿತ್ರ. 
ಮಹಿಳೆಯರಿಗೆ ಮತದಾನದ ಅವಕಾಶ ನೀಡಿದ ಮೊದಲ ದೇಶ ನ್ಯೂಝಿಲ್ಯಾಂಡ್. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯರು ಮತದಾನಕ್ಕೆ ಹೊರಟು ನಿಂತ ಐತಿಹಾಸಿಕ ಚಿತ್ರ. 
/ನ್ಯೂಝಿಲ್ಯಾಂಡ್ ಹಿಸ್ಟರಿ. 

ಎಂತೆಂತಾ ಚುನಾವಣೆಗಳು?:

2019ರಲ್ಲಿ ವಿಶ್ವದಾದ್ಯಂತ ಮೂರು ರೀತಿಯ ಚುನಾವಣೆಗಳು ನಡೆಯುತ್ತವೆ.

ಇದರಲ್ಲಿ ಮೊದಲನೇಯದು ಅಧ್ಯಕ್ಷೀಯ ಚುನಾವಣೆ. ಈ ಮಾದರಿಯ ಚುನಾವಣೆಯಲ್ಲಿ ಮತದಾರರು ತಮ್ಮ ದೇಶದ ನಾಯಕನನ್ನು ಅಂದರೆ ಅಧ್ಯಕ್ಷನನ್ನು ನೇರವಾಗಿ ಆಯ್ಕೆ ಮಾಡುತ್ತಾರೆ. ಹೀಗೆ ಚುನಾಯಿತನಾಗುವ ಅಧ್ಯಕ್ಷನಿಗೆ ರಾಜಕೀಯದ ಅತ್ಯುನ್ನತ ಸ್ಥಾನಮಾನ ದೊರಕುತ್ತದೆ. ಆತ ಸಂಪೂರ್ಣ ಅಧಿಕಾರದೊಂದಿಗೆ ದೇಶವನ್ನು ಮುನ್ನಡೆಸುತ್ತಾನೆ ಉದಾಹರಣೆಗೆ ಅಮೇರಿಕಾ ಅಧ್ಯಕ್ಷೀಯ ಚುನಾವಣೆ.

ಎರಡನೇಯ ಮಾದರಿ ಚುನಾವಣೆ ಎಂದರೆ ಪಾರ್ಲಿಮೆಂಟರಿ ಚುನಾವಣೆ (ಸಂಸತ್ ಚುನಾವಣೆ). ಈ ಮಾದರಿಯ ಚುನಾವಣೆಗಳಲ್ಲಿ ಮತದಾರರು ಸಂಸದೀಯ ಪಟುಗಳನ್ನು (ಶಾಸಕಾಂಗ) ಆಯ್ಕೆ ಮಾಡುತ್ತಾರೆ. ಈ ಸಂಸದೀಯ ಪಟುಗಳು ತಮ್ಮ ಸರಕಾರವನ್ನು ಮುನ್ನಡೆಸುವ ನಾಯಕನನ್ನು ಅಂದರೆ ಪ್ರಧಾನಿಯನ್ನು ತಮ್ಮೊಳಗೆ ಒಬ್ಬನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಆಯ್ಕೆಯಾಗುವ ಪ್ರಧಾನಿ ಸರಕಾರ ಹಾಗೂ ದೇಶದ ಮುಖ್ಯಸ್ಥನಾಗುತ್ತಾನೆ. ಉದಾಹರಣೆಗೆ ಭಾರತ.

ಸಾರ್ವತ್ರಿಕ ಚುನಾವಣೆ ವಿಶ್ವದಾದ್ಯಂತ ಪ್ರಚಲಿತವಿರುವ ಮೂರನೇ ಮಾದರಿಯ ಚುನಾವಣೆಯಾಗಿದ್ದು. ಮತದಾರರು ರಾಜ್ಯದ ಮುಖ್ಯಸ್ಥರನ್ನು ಹಾಗೂ ಸ್ಥಳೀಯ ಪ್ರತಿನಿಧಿಗಳನ್ನು ನೇರವಾಗಿ ತಾವೇ ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.

2019ರಲ್ಲಿ ಚುನಾವಣೆ ನಡೆಯಲಿರುವ 53 ದೇಶಗಳ ಪೈಕಿ ಈ ಮೂರೂ ಮಾದರಿಯ ಆಯ್ಕೆ ಪ್ರಕ್ರಿಯೆಗೆ ಜನ ಮತ ಚಲಾಯಿಸಲಿದ್ದಾರೆ.

ಮತದಾರರ ವಯಸ್ಸು:

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ವಿಶ್ವದಾದ್ಯಂತ ಮತದಾರರ ಸರಾಸರಿ ವಯಸ್ಸು 18. ಭಾರತ ಸೇರಿದಂತೆ ಸುಮಾರು 160 ರಾಷ್ಟ್ರಗಳಲ್ಲಿ 18 ದಾಟಿದ ಯುವಕ-ಯುವತಿಯರು ಮತ ಚಲಾಯಿಸುವ ಅರ್ಹತೆ ಗಳಿಸುತ್ತಾರೆ.

ಆದರೆ ಕೆಲವು ದೇಶಗಳಲ್ಲಿ ಮತ ಚಲಾಯಿಸುವ ವಯಸ್ಸಿನ ಮಿತಿಯಲ್ಲೂ ಕೆಲವು ವಿನಾಯಿತಿ ನೀಡಲಾಗಿದೆ.

ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಸಿಜ್, ಕ್ಯೂಬಾ, ಈಕ್ವೆಡಾರ್, ಮಾಲ್ಟ ಹಾಗೂ ನಿಕರಾಗುವಾ ಸೇರಿದಂತೆ ಒಟ್ಟು 7 ದೇಶಗಳಲ್ಲಿ 16ನೇ ವರ್ಷಕ್ಕೆ ಮತದಾರರಿಗೆ ಮತಚಲಾಯಿಸುವ ಹಕ್ಕನ್ನು ನೀಡಲಾಗಿದೆ.

ಇಂಡೋನೇಶಿಯಾ, ಇಥಿಯೋಪಿಯಾ, ದಕ್ಷಿಣ ಸೂಡಾನ್ ಹಾಗೂ ಟಿಮೋರ್-ಲೆಸ್ಟ್ ಸೇರಿದಂತೆ ನಾಲ್ಕು ದೇಶಗಳಲ್ಲಿ 17ನೇ ವರ್ಷಕ್ಕೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದೆ.

ದಕ್ಷಿಣ ಕೋರಿಯಾದಲ್ಲಿ ಮತ ಚಲಾಯಿಸಲು 19 ವರ್ಷವನ್ನು ನಿಗದಿಗೊಳಿಸಿದ್ದರೆ, ಮಧ್ಯ ಏಷ್ಯಾ ಖಂಡದ ಕ್ಯಾಮರೂನ್ ಹಾಗೂ ಐಸ್‌ಲೆಂಡ್ ದ್ವೀಪವಾದ ರಿಪಬ್ಲಿಕ್ ಆಫ್ ನೌರು ದೇಶಗಳಲ್ಲಿ 20 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಲಾಗಿದೆ.

ಇನ್ನೂ ಲೆಬನಾನ್, ಮಲೇಶಿಯಾ, ಸಿಂಗಪೂರ್ ಹಾಗೂ ದಕ್ಷಿಣ ಶಾಂತಸಾಗರದ ದ್ವೀಪ ರಾಷ್ಟ್ರಗಳಾದ ಸಮೋವಾ ಹಾಗೂ ಟೋಂಗ ದೇಶಗಳಲ್ಲಿ ಮತ ಚಲಾಯಿಸಲು 21 ವರ್ಷ ವಯಸ್ಸಾಗಿರಬೇಕು.

ಅತ್ಯಂತ ಕಡಿಮೆ ವಯಸ್ಸಿಗೇ ಮತದಾನಕ್ಕೆ ಅವಕಾಶ ಇರುವ ಕೆಲವೇ ದೇಶಗಳ ಪೈಕಿ ಕ್ಯೂಬಾ ಕೂಡ ಒಂದು. ವಿಶೇಷ ಅಂದರೆ ಇಲ್ಲಿ ಮತದಾನ ನಡೆಯುವಾಗ ಮತ ಪೆಟ್ಟಿಗೆಯ ಕಾವಲಿಗೆ ವಿದ್ಯಾರ್ಥಿಗಳನ್ನು ಸಾಂಕೇತಿಕವಾಗಿ ನೇಮಕ ಮಾಡಲಾಗುತ್ತದೆ. 
ಅತ್ಯಂತ ಕಡಿಮೆ ವಯಸ್ಸಿಗೇ ಮತದಾನಕ್ಕೆ ಅವಕಾಶ ಇರುವ ಕೆಲವೇ ದೇಶಗಳ ಪೈಕಿ ಕ್ಯೂಬಾ ಕೂಡ ಒಂದು. ವಿಶೇಷ ಅಂದರೆ ಇಲ್ಲಿ ಮತದಾನ ನಡೆಯುವಾಗ ಮತ ಪೆಟ್ಟಿಗೆಯ ಕಾವಲಿಗೆ ವಿದ್ಯಾರ್ಥಿಗಳನ್ನು ಸಾಂಕೇತಿಕವಾಗಿ ನೇಮಕ ಮಾಡಲಾಗುತ್ತದೆ. 
/ಹವಾನ ಟೈಮ್ಸ್. 

ಎಷ್ಟು ವರ್ಷಕ್ಕೊಮ್ಮೆ ಚುನಾವಣೆ?

ಭಾರತದ ಲೋಕಸಭೆ, ವಿಧಾನ ಸಭೆ ಸೇರಿದಂತೆ ಎಲ್ಲಾ ಸಾರ್ವಜನಿಕ ಚುನಾವಣೆಯೂ ಪ್ರತಿ 5 ವರ್ಷಕ್ಕೊಮ್ಮೆ ನಡೆಯುತ್ತದೆ (ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಮಾತ್ರ 2 ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ ಚುನಾಯಿತರ ಅಧಿಕಾರ ಅವಧಿ 6 ವರ್ಷ).

ಅಪಘಾನಿಸ್ತಾನ, ಅಲ್ಜೀರಿಯಾ, ಬೆಲ್ಜಿಯಂ, ಐರ್ಲೆಂಡ್‌, ಇಟಲಿ ಸೇರಿದಂತೆ ವಿಶ್ವದ ಒಟ್ಟು 104 ದೇಶಗಳಲ್ಲಿ ಮಾತ್ರ 5 ವರ್ಷಕ್ಕೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಉಳಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಚುನಾವಣಾ ಕಾಲಮಾನದಲ್ಲಿ ವ್ಯತ್ಯಾಸವಿದೆ.

ಅರ್ಜೆಂಟೈನಾ, ಜಪಾನ್, ಥಾಯ್ಲೆಂಡ್ ಹಾಗೂ ಸ್ವಿಜರ್‌ಲೆಂಡ್ ಸೇರಿದಂತೆ ಒಟ್ಟು 48 ರಾಷ್ಟ್ರಗಳಲ್ಲಿ ಪ್ರತಿ 4 ವರ್ಷಕ್ಕೊಮ್ಮೆ ಚುನಾವಣೆ ನಡೆದರೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿಜಿ ಹಾಗೂ ರಿಪಬ್ಲಿಕ್ ಆಫ್ ನೌರು ದೇಶಗಳಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ಚುನಾವಣೆ ನಡೆಸಲಾಗುತ್ತದೆ.

ಮೆಕ್ಸಿಕೋ, ಫಿಲಿಫೈನ್ಸ್, ರಷ್ಯಾ, ವೆನಿಜಯವೆಲಾ, ಕಿರ್ಗೀಸ್ತಾನ್ ಹಾಗೂ ಪಶ್ಚಿಮ ಆಫ್ರಿಕಾ ದೇಶವಾದ ಲಿಬೇರಿಯಾ ದೇಶಗಳಲ್ಲಿ ಪ್ರತಿ 6 ವರ್ಷಕ್ಕೊಮ್ಮೆ ಚುನಾವಣೆ ನಡೆದರೆ, ಮಧ್ಯ ಏಷ್ಯಾ ಖಂಡದ ರಾಷ್ಟ್ರಗಳಾದ ಕ್ಯಾಮರೂನ್, ಈಕ್ವೆಟೋರಿಯಲ್ ಗ್ವಿನಿಯಾ, ಪಶ್ಚಿಮ ಏಷ್ಯಾದ ಅಜೆರ್ಬೈಜಾನ್, ಸಿರಿಯಾ, ರ್ವಾಂಡ, ತಜಕಿಸ್ತಾನ್, ತುರ್ಕ್‌ಮೇನಿಸ್ತಾನ್, ಸಿರಿಯಾ ಹಾಗೂ ಗೆಬಾನ್ ದೇಶಗಳಲ್ಲಿ 7 ವರ್ಷಕ್ಕೊಮ್ಮೆ ಚುನಾವಣೆ ನಡೆಸಲಾಗುತ್ತದೆ.

ಯುರೋಪ್ ಖಂಡದ ಸ್ಯಾನ್ ಮರಿನೋ ದೇಶದಲ್ಲಿ ಪ್ರತಿ ವರ್ಷಕ್ಕೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಇನ್ನೂ ಡೆನ್ಮಾರ್ಕ್, ಗ್ರೀಸ್, ಜೋರ್ಡನ್ ಸೇರಿದಂತೆ ವಿಶ್ವದ ಸುಮಾರು 6 ರಾಷ್ಟ್ರಗಳಲ್ಲಿ ಚುನಾವಣೆಗೆ ನಿಗದಿತ ಸಮಯವೆಂಬುದೇ ಇಲ್ಲ.

ಎಷ್ಟು ಬಾರಿ ಅಧಿಕಾರ?

ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಜನರಿಂದ ಅಧ್ಯಕ್ಷ ಅಥವಾ ಪ್ರಧಾನಿಯಾಗಿ ಚುನಾಯಿತನಾಗುವ ವ್ಯಕ್ತಿ ಒಂದು ಅಥವಾ ಎರಡು ಅವಧಿಗೆ ಮಾತ್ರ ದೇಶವನ್ನು ಮುನ್ನಡೆಸುವ ಅಧಿಕಾರವನ್ನು ಹೊಂದಿರುತ್ತಾನೆ. ಆದರೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ನಲ್ಲಿ ಮಾತ್ರ ಚುನಾಯಿತ ಸರಕಾರ ರಾಜೀನಾಮೆ ನೀಡುವವರೆಗೆ ಅಥವಾ ಸಂಸತ್‌ನಲ್ಲಿ ಬಹುಮತ ಕಳೆದುಕೊಳ್ಳುವವರೆಗೆ ಆಡಳಿತ ನಡೆಸಬಹುದಾಗಿದೆ.

ಉಳಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಚುನಾಯಿತ ನಾಯಕರು ಎಷ್ಟು ಬಾರಿಯಾದರೂ ಅಧಿಕಾರ ಪಡೆಯುವ ಹಕ್ಕನ್ನು ಹೊಂದಿದ್ದಾರೆ.

ಬಾರ್ಬಡೋಸ್, ಬಲ್ಗೇರಿಯಾ, ಕೋಲಂಬಿಯಾ ಹಾಗೂ ಫ್ರಾನ್ಸ್ ಸೇರಿದಂತೆ ಒಟ್ಟು 34 ರಾಷ್ಟ್ರಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ಬಾರಿ ಮಾತ್ರ ದೇಶವನ್ನು ಮುನ್ನಡೆಸುವ ಅಧಿಕಾರವನ್ನು ನೀಡಲಾಗಿದೆ. ಇನ್ನೂ ಅಮೇರಿಕಾ, ವಿಯೆಟ್ನಾಂ, ರಷ್ಯಾ, ಈಜಿಪ್ಟ್ ಸೇರಿದಂತೆ ವಿಶ್ವದ 85 ರಾಷ್ಟ್ರಗಳಲ್ಲಿ ಒಬ್ಬ ವ್ಯಕ್ತಿಗೆ 2 ಬಾರಿ ಈ ಅವಕಾಶವನ್ನು ನೀಡುವ ಪರಿಪಾಠವಿದೆ.

ಉಳಿದಂತೆ ಭಾರತ, ಅರ್ಜೆಂಟೈನಾ, ಜೋರ್ಡನ್ ಹಾಗೂ ಗ್ರೀಸ್ ಸೇರಿದಂತೆ ವಿಶ್ವದ 59 ರಾಷ್ಟ್ರಗಳಲ್ಲಿ ಒಬ್ಬ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶವನ್ನು ಕಲ್ಪಿಸಲಾಗಿದೆ.

ಒಬ್ಬರು ಒಮ್ಮೆ ಮಾತ್ರ ಅಧಿಕಾರ ಅನುಭವಿಸಲು ಸಾಧ್ಯ ಎಂಬ ಕಾನೂನು ಇರುವ ಕೆಲವೇ ದೇಶಗಳ ಪೈಕಿ ಕೊಲಂಬಿಯಾ ಕೂಡ ಒಂದು. 
ಒಬ್ಬರು ಒಮ್ಮೆ ಮಾತ್ರ ಅಧಿಕಾರ ಅನುಭವಿಸಲು ಸಾಧ್ಯ ಎಂಬ ಕಾನೂನು ಇರುವ ಕೆಲವೇ ದೇಶಗಳ ಪೈಕಿ ಕೊಲಂಬಿಯಾ ಕೂಡ ಒಂದು. 
/ಎನ್‌ವೈ ಟೈಮ್ಸ್. 

ಖೈದಿಗಳಿಗೆ ಮತದಾನ?

ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವ ಅಪರಾಧಿಗಳಿಗೆ ಮತ ಚಲಾಯಿಸುವ ಹಕ್ಕು ನೀಡುವ ಕುರಿತು ಎಲ್ಲಾ ದೇಶಗಳಲ್ಲೂ ಒಂದೊಂದು ಕಾನೂನಿದೆ. ವಿಶ್ವದ 1/3 ರಷ್ಟು ದೇಶಗಳು ಅಪರಾಧಿಗಳಿಗೆ ಮತ ಚಲಾಯಿಸುವ ಹಕ್ಕನ್ನು ನೀಡಿಲ್ಲ. 1/3 ರಷ್ಟು ದೇಶಗಳು ಕಾನೂನಿನ ಅಡಿಯಲ್ಲಿ ಕೆಲವರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದರೆ, ಉಳಿದ ದೇಶಗಳಲ್ಲಿ ಜೈಲಿನ ಖೈದಿಗಳಿಗೆ ಮತ ಚಲಾಯಿಸುವ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ.

ಐರ್ಲೆಂಡ್‌, ಬಾಂಗ್ಲಾದೇಶ, ನಮೀಬಿಯಾ, ಡೆನ್ಮಾರ್ಕ್ ಸೇರಿದಂತೆ ವಿಶ್ವದ 52 ದೇಶಗಳಲ್ಲಿ ಜೈಲು ಖೈದಿಗಳಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದ್ದರೆ, ಅಮೇರಿಕ, ಐಸ್‌ಲ್ಯಾಂಡ್, ಸ್ಲೊವಾಕಿಯಾ ಹಾಗೂ ಫ್ರಾನ್ಸ್ ಸೇರಿದಂತೆ 65 ದೇಶಗಳಲ್ಲಿ ಕೆಲವು ಖೈದಿಗಳಿಗೆ ಮಾತ್ರ ಈ ಹಕ್ಕನ್ನು ನೀಡಲಾಗಿದೆ.

ಇನ್ನೂ ಭಾರತ, ಜೋರ್ಡನ್, ಇಂಗ್ಲೆಂಡ್ ಹಾಗೂ ರಷ್ಯಾ ಸೇರಿದಂತೆ ಒಟ್ಟು 60 ರಾಷ್ಟ್ರಗಳಲ್ಲಿ ಖೈದಿಗಳಿಗೆ ಮತದಾನ ನೀಡುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇವೆಲ್ಲ ವಿಶ್ವದ ನಾನಾ ದೇಶಗಳಲ್ಲಿ ನಡೆಯುವ ಚುನಾವಣೆ ಕ್ರಮಗಳ ಸಣ್ಣ ಪರಿಚಯವಷ್ಟೆ. ಆದರೆ ಎಲ್ಲಾ ಚುನಾವಣೆಗಳ ಗೆಲುವು ಅಂತಿಮವಾಗಿ ನಿರ್ಣಯವಾಗುವುದು ಮತ ಚಲಾಯಿಸುವುದರ ಮೇಲೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಂತು ಮತ ಚಲಾಯಿಸುವುದನ್ನೇ ಪ್ರಜಾಪ್ರಭುತ್ವದ ಗೆಲುವು ಎನ್ನಲಾಗುತ್ತದೆ.