samachara
www.samachara.com
ಶ್ರೀಸಾಮಾನ್ಯರ ಕೈಗೆ ಸಿಗದ  ‘ಶೂಟರ್ ಶೋಭಾ’: ತಳಮಟ್ಟದ ಅಸಮಾಧಾನಗಳು; ಅದಕ್ಕೊಂದಿಷ್ಟು ಪುರಾವೆಗಳು...
COVER STORY

ಶ್ರೀಸಾಮಾನ್ಯರ ಕೈಗೆ ಸಿಗದ ‘ಶೂಟರ್ ಶೋಭಾ’: ತಳಮಟ್ಟದ ಅಸಮಾಧಾನಗಳು; ಅದಕ್ಕೊಂದಿಷ್ಟು ಪುರಾವೆಗಳು...

ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳಲು ಇದೊಂದು ಘಟನೆ ಸಾಂಕೇತಿಕ ಎಂಬಂತೆ ಎದುರಿಗೆ ನಡೆದು ಹೋಗಿತ್ತು.

ಅದು ಉಡುಪಿಯಿಂದ ಕುಂದಾಪುರದೆಡೆಗೆ ಸಾಗುತ್ತಿದ್ದ ಒಳಹಾದಿ. ಬಸ್ರೂರು- ಹುಣಸೆಮಕ್ಕಿಯ ನಡುವೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ರಸ್ತೆ ಪಕ್ಕದಲ್ಲಿ ‘ಫೈರ್‌ ಟೇಪ್(ಬೆಂಕಿ ರೇಖೆ)’ ನಿರ್ಮಿಸುತ್ತಿದ್ದರು. ಉಡುಪಿ ಜಿಲ್ಲೆಯ ತಾಪಮಾನ ಸುತ್ತಲಿನ ಕುರುಚಲು ಕಾಡುಗಳಲ್ಲಿನ ಹುಲ್ಲನ್ನು ಒಣಗಿಸಿ ಹಾಕಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಲ್ಲಿ ರಸ್ತೆ ಪಕ್ಕದ ಹುಲ್ಲನ್ನು ಸುಡುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆ ಕೆಲಸದ ಜಾಗವನ್ನು ಹಾದು ಮುಂದೆ ಬಂದರೆ, ಯಾರೂ ಇಲ್ಲದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿತ್ತು.

ಇದನ್ನು ಮೊದಲು ಗಮನಿಸಿದವರು ಕಾರು ಚಾಲನೆ ಮಾಡುತ್ತಿದ್ದ ಬ್ರಹ್ಮಾವರದ ಭಾಸ್ಕರ್ ಶೆಟ್ಟಿ. ತಕ್ಷಣ ಕಾರು ನಿಲ್ಲಿಸಿ, ಪಕ್ಕದ ಅಕೇಶಿಯಾ ಮರದ ಹಸಿ ಕೊಂಬೆಯನ್ನು ಕಿತ್ತುಕೊಂಡು ಬಂದು ಬೆಂಕಿ ನಂದಿಸಲು ಹೊರಟರು. ಅದೇ ಹೊತ್ತಿಗೆ ಬಂದ ಆಟೋ ಡ್ರೈವರ್ ಒಬ್ಬರು ವಾಹನ ನಿಲ್ಲಿಸಿ ಭಾಸ್ಕರ್ ಶೆಟ್ಟರ ಕೆಲಸದಲ್ಲಿ ಕೈ ಜೋಡಿಸಿದರು. ಬೈಕ್‌ ಸವಾರರೊಬ್ಬರು ಇವರಿಗೆ ಜತೆಯಾದರು. ಮುಂದಿನ ಐದಾರು ನಿಮಿಷದಲ್ಲಿ ಆಗಷ್ಟೆ ಹೊತ್ತಿಕೊಂಡ ಬೆಂಕಿಯನ್ನು ಅವರೆಲ್ಲಾ ಹತೋಟಿಗೆ ತಂದರು. ಆಗಬಹುದಾದ ದೊಡ್ಡ ಹಾನಿಯನ್ನು ತಪ್ಪಿಸಿದರು.

ಬಸ್ರೂರು- ಹುಣಸೆಮಕ್ಕಿ ಮಾರ್ಗ ಮಧ್ಯ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ ಭಾಸ್ಕರ್ ಶೆಟ್ಟಿ ಮತ್ತು ಸ್ಥಳೀಯರು. 
ಬಸ್ರೂರು- ಹುಣಸೆಮಕ್ಕಿ ಮಾರ್ಗ ಮಧ್ಯ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ ಭಾಸ್ಕರ್ ಶೆಟ್ಟಿ ಮತ್ತು ಸ್ಥಳೀಯರು. 
/ಸಮಾಚಾರ. 

ಮತ್ತೆ ಕಾರಿನ ಡ್ರೈವಿಂಗ್ ಸೀಟಿಗೆ ಬಂದು ಕುಳಿತ ಭಾಸ್ಕರ್ ಶೆಟ್ಟಿ, “ಅಂತೂ ಇವತ್ತು ಒಂದು ಒಳ್ಳೆಯ ಕೆಲಸ ಆಯಿತು ನೋಡಿ,’’ ಎಂದರು. ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳಲು ಇದೊಂದು ಘಟನೆ ಸಾಂಕೇತಿಕ ಎಂಬಂತೆ ಎದುರಿಗೆ ನಡೆದು ಹೋಗಿತ್ತು.

ಉಡುಪಿಯ ಶೋಭಾ:

ಉಡುಪಿ ಬುದ್ಧಿವಂತರ ಜಿಲ್ಲೆ. ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ, ಕರಾವಳಿಯನ್ನು ಹೊಂದಿರುವ ಭೂ ಪ್ರದೇಶ ಇವತ್ತು ಹಿಂದುತ್ವ ನೆಲೆಯ ರಾಜಕೀಯ ಆಲೋಚನೆಯ ಜತೆ ಸರಸವಾಡುತ್ತಿದೆ.

ಪ್ರತ್ಯೇಕ ಜಿಲ್ಲೆಯ ಸ್ಥಾನಮಾನ ಪಡೆದುಕೊಂಡಿದೆ. ಜಿಲ್ಲಾ ಕೇಂದ್ರಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಕುಂದಾಪುರದಂತಹ ತಾಲೂಕು ಇಲ್ಲಿದೆ. ಈ ಲೋಕಸಭಾ ಕ್ಷೇತ್ರದ ಮತದಾರರ ಸಂಖ್ಯೆ ಕಳೆದ ಬಾರಿ 14. 78 ಲಕ್ಷದಷ್ಟಿತ್ತು. 7 ಬಿಜೆಪಿ ಶಾಸಕರು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾರೆ. ಇಂತಹದೊಂದು ಕ್ಷೇತ್ರವನ್ನು ಸದ್ಯ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವವರು ಶೋಭಾ ಕರಂದ್ಲಾಜೆ.

ಶೋಭಾಗೂ ಉಡುಪಿಗೂ ಹತ್ತಿರದ ನಂಟೊಂದಿದೆ. ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಶೋಭಾ ವೃತ್ತಿ ಜೀವನ ಆರಂಭಿಸಿದ್ದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಸ್ಥಳೀಯರು. ಇದೇ ಜಿಲ್ಲೆಯ ಬಿಳುವೆ ಎಂಬ ಗ್ರಾಮ ಪಂಚಾಯ್ತಿಯಲ್ಲಿ ಶೋಭಾ ಪರಿವಾರದ ಸ್ವಯಂ ಸೇವಕಿಯಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು ಎಂದವರು ನೆನಪಿಸಿಕೊಳ್ಳುತ್ತಾರೆ.

ಅಷ್ಟೆ, ಅದರಾಚೆಗೆ ಶೋಭಾ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲು ಸ್ಥಳೀಯ ಬಿಜೆಪಿ ನಾಯಕರೇ ಹಿಂದೇಟು ಹಾಕುತ್ತಾರೆ.

ಆದರೆ, ರಾಜ್ಯದ ಪಾಲಿಗೆ ಶೋಭಾ ಕರಂದ್ಲಾಜೆ ನಾಯಕ ಯಡಿಯೂರಪ್ಪ ಅವರ ಅಪ್ಪಟ ಬೆಂಬಲಿಗರು. ಯಾವುದೇ ಸಮಸ್ಯೆ ಇರಲಿ ಇವರು ಒಂದು ರೀತಿಯ ‘ಟ್ರಬಲ್ ಶೂಟರ್’. ಆದರೆ ಇವ್ಯಾವುದೂ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗಾಗಲೀ, ಜನರಿಗಾಗಲೀ ಮುಖ್ಯವಾದಂತೆ ಕಾಣಿಸುತ್ತಿಲ್ಲ.

ಬಹುಶಃ ಅದೇ ಕಾರಣಕ್ಕೋ ಏನೋ ಶೋಭಾ ರಾಜಕೀಯ ಇಲ್ಲಿ ಒಣಗಿ ನಿಂತ ಹುಲ್ಲಿನ ಮಾದರಿಯಲ್ಲಿದೆ. ಚಿಕ್ಕ ಕಿಡಿ ಕೂಡ ಬಿಜೆಪಿ ಕಟ್ಟಿದ ಹುಲುಸು ಕಾಡನ್ನು ನಾಶಗೊಳಿಸಬಹುದು ಎಂಬ ವಾತಾವರಣ ಇದೆ. ಈಗಾಗಲೇ ಕಿಡಿಗಳು ಹೊತ್ತಿ ಉರಿದಿವೆ. ಅದನ್ನು ಸಣ್ಣ ಮಟ್ಟದಲ್ಲಿ ನಂದಿಸುವ ಕೆಲಸವೂ ನಡೆದಿದೆ. ಆದರೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಅಸಮಾಧಾನದ ಕಿಡಿಗಳು ದೊಡ್ಡ ಮಟ್ಟದಲ್ಲಿ ಕಾಣಸಿಗುತ್ತಿವೆ. ಅವೆಲ್ಲವೂ ಒಂದಾದರೆ ಏಳುವ ಕೆನ್ನಾಲಿಗೆಯನ್ನು ಬಿಜೆಪಿಯ ಭದ್ರಕೋಟೆಯಂತೆ ಕಾಣುವ ಕ್ಷೇತ್ರದ ಒಳಗೆ ಸ್ವಯಂ ಪ್ರೇರಣೆಯಿಂದ ನಂದಿಸುವುದು ಕಷ್ಟವಾಗಬಹುದು; ಹಾಗೊಂದು ಮನ್ಸೂಚನೆಯೂ ಇಲ್ಲಿ ಸಿಗುತ್ತದೆ.

ಉಡುಪಿ ಜಿಲ್ಲೆಯ ಪಡುಮಂಡು- ಶಿರಿಯಾರ ಬಳಿ ಕಾಣಿಸುವ ‘ಮೋದಿಜೀ ಅಭಿಮಾನಿ ಬಳಗ’ದ ಫ್ಲೆಕ್ಸ್. 
ಉಡುಪಿ ಜಿಲ್ಲೆಯ ಪಡುಮಂಡು- ಶಿರಿಯಾರ ಬಳಿ ಕಾಣಿಸುವ ‘ಮೋದಿಜೀ ಅಭಿಮಾನಿ ಬಳಗ’ದ ಫ್ಲೆಕ್ಸ್. 
/ಸಮಾಚಾರ. 

ಮೋದಿ ಮೇನಿಯಾ:

ಯಾವ ಆಯಾಮದಿಂದ ನೋಡಿದರೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿಗೆ ಹೇಳಿ ಮಾಡಿಸಿದ ಹಾಗಿದೆ. ಇಲ್ಲಿ ಹೆಜ್ಜೆಗೊಂದು ದೇವಸ್ಥಾನ ಸಿಗುತ್ತದೆ. ಮೂರರಲ್ಲಿ ಒಂದು ದೇವಸ್ಥಾನದಲ್ಲಿ ಕಳಶೋತ್ಸವ, ಪ್ರತಿಷ್ಠಾಪನೆಯಂತಹ ಸಮಾರಂಭದ ಬೋರ್ಡ್‌ ಕಾಣಿಸುತ್ತದೆ. ಗ್ರಾಮ ಪಂಚಾಯ್ತಿಗಳು ‘ಮೋದಿ ಮತ್ತೊಮ್ಮೆ’ ಎಂಬ ಫ್ಲೆಕ್ಸ್‌ ಮೂಲಕ ಸ್ವಾಗತಿಸುತ್ತವೆ. ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಬಂದು ರಾಜಕಾರಣಿಯಾಗಿರುವ ಬಿ.ಎಲ್. ಸಂತೋಷ್‌ ಕಟೌಟ್‌ ನಿಲ್ಲಿಸಿರುವ ಅಪರೂಪದ ಊರಿದು. ಅಷ್ಟರ ಮಟ್ಟಿಗೆ ಇದೀಗ ‘ಪರಿವಾರದ ಜಿಲ್ಲೆ’.

“ಹಿಂದೆ ಇದೆಲ್ಲಾ ಕಾಂಗ್ರೆಸ್ ಬಲ ಇದ್ದ ಜಾಗಗಳು. ಆದರೆ ಇವತ್ತು ಕಾಂಗ್ರೆಸ್ ಮುಖಂಡರು ಜನರ ಕೈಗೆ ಸಿಗುತ್ತಿಲ್ಲ. ಇದ್ದ ನೆಲೆಯನ್ನೂ ಅವರು ಸಂಪೂರ್ಣವಾಗಿ ಕಳೆದುಕೊಂಡರು. ಅದೇ ಹೊತ್ತಿಗೆ ಬಿಜೆಪಿ ದೇವಸ್ಥಾನದ ಸಮಿತಿಯಿಂದ ಹಿಡಿದು ಯಕ್ಷಗಾನದ ಮೇಳಗಳವರೆಗೆ ತಮ್ಮದೇ ಜನರನ್ನು ತಂದು ಕೂರಿಸಿತು. ಹೀಗಾಗಿ ಇಲ್ಲಿನ ಜನರನ್ನು ಒಂದಿಲ್ಲೊಂದು ಕಾರಣದಿಂದ ಬಿಜೆಪಿ ಆವರಿಸಿಕೊಂಡಿದೆ. ಬಿಜೆಪಿ ಎಂದರೆ ಹಿಂದುತ್ವ,’’ ಎಂಬುದು ಚಾಲಕರಾಗಿರುವ ಭಾಸ್ಕರ್ ಶೆಟ್ಟಿ ಅವರ ಅನುಭವದ ಮಾತುಗಳು.

ಇದು ನಿಜ ಕೂಡ. ಇಲ್ಲಿನ ಬಿಜೆಪಿ ರಾಜಕಾರಣ ಪರಿವಾರದ ಮೂಗಿನ ನೇರಕ್ಕೆ ನಡೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕುಂದಾಪುರದ ಬಿಜೆಪಿ ಕಾರ್ಯಾಲಯದ ದಾಖಲೆಗಳು ‘ಸಮಾಚಾರ’ಕ್ಕೆ ಲಭ್ಯವಾದವು.

ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಎರಡು ಮೂರು ಬೂತ್‌ಗಳನ್ನು ಸೇರಿಸಿ ಸಮಿತಿಯನ್ನು ರಚಿಸುವ ಕೆಲಸ ಮಾಡಿತ್ತು. ಅದಕ್ಕೆ ಶಕ್ತಿಕೇಂದ್ರಗಳು ಎಂದು ಹೆಸರು ಇಟ್ಟಿತ್ತು. ವಿಶೇಷ ಅಂದರೆ, ಇಂತಹ ಶಕ್ತಿಕೇಂದ್ರಗಳ ಅಧ್ಯಕ್ಷರಾಗಿ ಬಿಜೆಪಿ ಕಡೆಯಿಂದ ಒಬ್ಬರಿದ್ದರೆ, ‘ಪರಿವಾರ’ದ ಕಡೆಯಿಂದ ‘ಪ್ರಮುಖ್’ಗಳ ನೇಮಕ ಮಾಡಲಾಗುತ್ತಿದೆ. ಇಲ್ಲಿರುವ ದಾಖಲೆಗಳಲ್ಲಿ ಪರಿವಾರದ ಕಡೆಯಿಂದ ನಮೂದಾಗಬೇಕಾದ ಹೆಸರು ಖಾಲಿ ಇದೆ.

ಕುಂದಾಪುರದ ತಾಲೂಕು ಬಿಜೆಪಿ ಕಚೇರಿಯಲ್ಲಿ ಬಳಸುವ ಶಕ್ತಿಕೇಂದ್ರಗಳ ಪಟ್ಟಿ. 
ಕುಂದಾಪುರದ ತಾಲೂಕು ಬಿಜೆಪಿ ಕಚೇರಿಯಲ್ಲಿ ಬಳಸುವ ಶಕ್ತಿಕೇಂದ್ರಗಳ ಪಟ್ಟಿ. 
/ಸಮಾಚಾರ. 

“ಮೊದಲು ನಾವು ನಮ್ಮ ಹೆಸರನ್ನು ತುಂಬಿಸಿ ಮೇಲೆ ಕಳುಹಿಸುತ್ತೇವೆ. ಅಲ್ಲಿ ಪರಿವಾರದ ಕಡೆಯಿಂದ ಅವರೇ ಹೆಸರು ಹಾಕಿಕೊಳ್ಳುತ್ತಾರೆ,’’ ಎಂದರು ಕಚೇರಿಯಲ್ಲಿದ್ದವರು. ಸದ್ಯ ಲೋಕಸಭಾ ಚುನಾವಣೆಗೂ ಇದೇ ಪಟ್ಟಿಯನ್ನು ಇಲ್ಲಿನ ಬಿಜೆಪಿ ಮುಂದುವರಿಸಿದೆ.

ಬಿಜೆಪಿಯ ಈ ಸಂಘಟನಾ ಸಂರಚನೆಯ ಕುರಿತು ಇನ್ನಷ್ಟು ಆಳಕ್ಕಿಳಿದರೆ ಲೋಕಸಭೆಗಾಗಿ ಪಕ್ಷ ಸ್ಥಳೀಯ ಮಟ್ಟದಲ್ಲಿ ನಡೆಸಿದ ಈವರೆಗಿನ ಕೆಲಸಗಳ ಪಟ್ಟಿ ಸಿಗುತ್ತದೆ.

“ಕೇಂದ್ರ ಸರಕಾರದ ಹಲವು ಯೋಜನೆಗಳ ಫಲಾನುಭವಿಗಳು ಇಲ್ಲಿದ್ದಾರೆ. ಅವರನ್ನೆಲ್ಲಾ ಸೇರಿಸಿ ಒಂದು ಸಭೆ ನಡೆಸಿದ್ದೇವೆ. ‘ಕಮಲ ಜ್ಯೋತಿ ಸಂಕಲ್ಪ ಯಾತ್ರೆ’ ಹೆಸರಿನಲ್ಲಿ ಇವರುಗಳನ್ನು ಒಂದು ಕಡೆ ಸೇರಿಸಿ ಮೋದಿ ಕೈ ಬಲಪಡಿಸುವ ಕೆಲಸ ಆಗಿದೆ. ಜತೆಗೆ ಬೈಕ್‌ ರ್ಯಾಲಿಗಳಿಂದ ಹಿಡಿದು ಬೂತ್ ಮಟ್ಟದ ಪ್ರಚಾರ ನಡೆಯುತ್ತಿದೆ,’’ ಎಂದು ಮಾಹಿತಿ ನೀಡುತ್ತಾರೆ ಕುಂದಾಪುರ ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು.

ಬಿಜೆಪಿ ಕಚೇರಿಯಲ್ಲಿದ್ದ ‘ಸಮಾಚಾರ’ದ ಈ ಪ್ರತಿನಿಧಿ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಬಿಜೆಪಿ ಎಲ್ಲಾ ರೀತಿಯಲ್ಲೂ ತಯಾರಾಗಿದೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದರು.

ಅವರ ಟೇಬಲ್‌ ಮೇಲೆ ಇತ್ತೀಚೆಗೆ ನಿಧನರಾದ ಬಿಜೆಪಿ ನಾಯಕ ಅನಂತ್ ಕುಮಾರ್ ಭಾವಚಿತ್ರವಿತ್ತು. ಗೋಡೆ ಮೇಲೆ ಅಗಲಿದ ಇನ್ನೊಬ್ಬ ಹಿರಿಯ ನಾಯಕ ವಿ. ಎಸ್. ಆಚಾರ್ಯ ಅವರ ಚಿತ್ರ ಕಾಣಿಸುತ್ತಿತ್ತು.

ಶೋಭಾ ಅವರ ನಾಯಕತ್ವದ ವಿರುದ್ಧ ಎದ್ದಿರುವ ಅಸಮಾಧಾನಗಳನ್ನು ಸುರೇಶ್ ಮುಂದಿಟ್ಟರೆ, “ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಅಮಿತ್ ಶಾ ನಿರ್ಧಾರ ಮಾಡುತ್ತಾರೆ. ನಮಗೆ ಇಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದಕ್ಕಿಂತ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಮುಖ್ಯ. ಮೋದಿ ಎಂದರೆ ಬಿಜೆಪಿ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ,’’ ಎಂದರು.

ಹೆಚ್ಚು ಕಡಿಮೆ ಇದೇ ಮಾತುಗಳನ್ನು ಬಿಜೆಪಿ ಕಚೇರಿಯಲ್ಲಿದ್ದ ಇತರೆ ಪದಾಧಿಕಾರಿಗಳೂ ಪುನರಾವರ್ತನೆ ಮಾಡಿದರು. ವಿಶೇಷ ಎಂದರೆ ಯಾರೊಬ್ಬರ ಬಾಯಲ್ಲೂ ಶೋಭಾ ಕರಂದ್ಲಾಜೆ ಅವರೇ ಮತ್ತೆ ಅಭ್ಯರ್ಥಿಯಾಗಬೇಕು ಎಂಬ ಮಾತು ಕೇಳಿ ಬರಲಿಲ್ಲ.

ಹೀಗೆ ಮಾತುಕತೆ ನಡೆಯುತ್ತಿದ್ದಾಗ ಮತ್ತೆ ಕರೆ ಮಾಡಿದ ಸುರೇಶ್ ಶೆಟ್ಟಿ, “ಶೋಭಾ ಅವರೇ ಅಭ್ಯರ್ಥಿಯಾದರೆ ನಮಗೆ ಏನೂ ಸಮಸ್ಯೆ ಇಲ್ಲ. ಅವರು ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ತಂದಿದ್ದಾರೆ. ಅವರು ಕ್ಷೇತ್ರಕ್ಕೆ ಬರದೇ ಹೋದರೂ ಜನರಿಗೆ ಏನು ಕೆಲಸ ಮಾಡಬೇಕು ಅದನ್ನು ಮಾಡಿದ್ದಾರೆ,’’ ಎಂದು ಸಮರ್ಥಿಸಿಕೊಂಡರು. ಅಥವಾ ಮೊದಲು ಮರೆತಿದ್ದ ಶಿಷ್ಟಾಚಾರದ ಮಾತುಗಳನ್ನು ಅವರು ನೆನಪು ಮಾಡಿಕೊಂಡರು.

ಇದು ಜಿಲ್ಲೆಯ ದೊಡ್ಡ ತಾಲೂಕಿನ ಬಿಜೆಪಿ ಘಟಕದಲ್ಲಿ ಸಿಗುವ ಮಾಹಿತಿ. ಜಿಲ್ಲೆಯಲ್ಲಿ ಸ್ಥಳೀಯ ಅಭ್ಯರ್ಥಿಗಿಂತ ಮೋದಿ ಕುರಿತು ಅಭಿಮಾನ ಹೆಚ್ಚು ಕಾಣಿಸುತ್ತದೆ. ಲೋಕಸಭೆಯಲ್ಲಿ ತಮ್ಮನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ ಕಾರ್ಯಕರ್ತರ ಕೈಗೆ ಸಿಗಲಿಲ್ಲ, ಸ್ಥಳೀಯ ಪ್ರತಿನಿಧಿಗಳಿಗೂ ಲಭ್ಯರಾಗುವುದಿಲ್ಲ ಎಂಬ ಅಸಮಾಧಾನ ಇಲ್ಲಿ ಕೇಳಿ ಬರುತ್ತಿದೆ. ಬಿಜೆಪಿಯ ರಾಜ್ಯ ಕಾರ್ಯದರ್ಶಿ ಆಗಿರುವ ಶೋಭಾ ನಿಜಕ್ಕೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕಾಗಿ ಏನೂ ಕೆಲಸ ಮಾಡಿಲ್ಲವಾ? ಇಲ್ಲಿ ವ್ಯಕ್ತವಾಗುವ ಸಾರ್ವಜನಿಕ ಅಭಿಪ್ರಾಯಗಳಿಗೆ ಆಧಾರ ಇದೆಯಾ? ಶೋಭ ಅವರ ಕುರಿತು ಲೋಕಸಭೆಯಲ್ಲಿ ಲಭ್ಯವಾಗುವ ದಾಖಲೆಗಳು ಏನು ಹೇಳುತ್ತವೆ?

ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟರೆ ನಮ್ಮ ಜನಪ್ರತಿನಿಧಿಗಳ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಅದು ನಾಳೆಗೆ...