samachara
www.samachara.com
ಭಾರತೀಯ ಚಿತ್ರೋದ್ಯಮವನ್ನೇ ಬೆದರಿಸುತ್ತಿರುವ ತಮಿಳ್ ರಾಕರ್ಸ್; ಕಡಿವಾಣ ಯಾಕೆ ಸಾಧ್ಯವಿಲ್ಲ? 
COVER STORY

ಭಾರತೀಯ ಚಿತ್ರೋದ್ಯಮವನ್ನೇ ಬೆದರಿಸುತ್ತಿರುವ ತಮಿಳ್ ರಾಕರ್ಸ್; ಕಡಿವಾಣ ಯಾಕೆ ಸಾಧ್ಯವಿಲ್ಲ? 

ಕೆಲವೊಮ್ಮೆ ಚಿತ್ರಗಳ ಬಿಡುಗಡೆಗೂ ಮುನ್ನವೇ ತಮಿಳ್ ರಾಕರ್ಸ್ ತಮ್ಮ ವೆಬ್‌ಸೈಟಿನಲ್ಲಿ ಸವಾಲಿನ ರೀತಿ ರಿಲೀಸ್ ಮಾಡಿದ ಇತಿಹಾಸವೂ ಇದೆ. 

ಭಾರತದ ಅತ್ಯಂತ ದೊಡ್ಡ ಮನರಂಜನಾ ಉದ್ಯಮ ಎಂದರೆ ಸಿನಿಮಾ. ಬಾಲಿವುಡ್‌ನಿಂದ ಮಾಲಿವುಡ್‌ವರೆಗೆ ವರ್ಷಕ್ಕೆ ಸಾವಿರಾರು ಕೋಟಿಯ ಉದ್ಯಮವಿದು. ಒಂದು ಚಿತ್ರ ನಿರ್ಮಿಸಬೇಕು ಎಂದರೆ ಕೋಟಿ ಕೋಟಿ ಹಣಬೇಕು. ಹಣ ಹೂಡಿಕೆ ಮಾಡಿದರೂ ಚಿತ್ರ ಯಶಸ್ವಿಯಾಗುವ ವಿಶ್ವಾಸವಿಲ್ಲ. ಆದರೆ ಯಾವುದೇ ಹೂಡಿಕೆಯಿಲ್ಲ ಇದೇ ಚಿತ್ರರಂಗದ ಹೆಸರಿನಲ್ಲಿ ಕೋಟಿ ಕೋಟಿ ಹಣ ಬಾಚುತ್ತಿರುವವರು ‘ತಮಿಳ್ ರಾಕರ್ಸ್’.

ತಮಿಳು, ತೆಲುಗು, ಹಿಂದಿ, ಮಳಯಾಳಂ ಹೀಗೆ ಯಾವುದೇ ಭಾಷೆಯ ಚಿತ್ರಗಳ ರಿಲೀಸ್‌ಗೆ ರೆಡಿಯಾದರೂ ಚಿತ್ರ ಬಿಡುಗಡೆಯಾಗಿ ಕೇವಲ ಒಂದೆರಡು ಗಂಟೆಗಳಲ್ಲಿ ಈ ಚಿತ್ರದ ಲಿಂಕ್‌ಗಳು ತಮಿಳ್ ರಾಕರ್ಸ್ ಅಥವಾ ಟೊರೆಂಟ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುತ್ತವೆ.

ಕೆಲವೊಮ್ಮೆ ಚಿತ್ರಗಳ ಬಿಡುಗಡೆಗೂ ಮುನ್ನವೇ ತಮಿಳ್ ರಾಕರ್ಸ್ ತಮ್ಮ ವೆಬ್‌ಸೈಟಿನಲ್ಲಿ ಸವಾಲು ಹಾಕಿ ರಿಲೀಸ್ ಮಾಡಿದ ಇತಿಹಾಸವೂ ಇದೆ.

ಕಳೆದ ವರ್ಷ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದ ರಜನಿಕಾಂತ್ ಅಭಿನಯದ ‘2.0’ ಹಾಗೂ ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಗಳನ್ನು ಚಿತ್ರತಂಡ ಬಿಡುಗಡೆ ಮಾಡುವ ಹಿಂದಿನ ದಿನವೇ ತಮಿಳ್ ರಾಕರ್ಸ್‌ ವೆಬ್‌ಸೈಟಿನಲ್ಲಿ ಆ ಚಿತ್ರಗಳ ಪೈರೆಸಿ ಕಾಪಿ ಲಭ್ಯವಾಗಿದ್ದವು. ಕಳೆದ ವಾರ ಬಿಡುಗಡೆಯಾದ ಹಿಂದಿಯ ಬಹುನಿರೀಕ್ಷಿತ ‘ಉರಿ’ ಚಿತ್ರ ಈಗಗಾಲೇ ತಮಿಳ್ ರಾಕರ್ಸ್ ವೆಬ್‌ಸೈಟಿನಲ್ಲಿದೆ.

ಹಾಗಾದರೆ ಯಾರಿವರು ತಮಿಳ್ ರಾಕರ್ಸ್? ತಮಿಳುನಾಡಿನಲ್ಲಿ ಪೈರೆಸಿ ಗೂಂಡಾ ಕಾಯ್ದೆ ಅಡಿ ಬಂದರೂ ಹೇಗೆ ಇವರು ಕ್ರೀಯಶೀಲರಾಗಿದ್ದಾರೆ? ಇಷ್ಟಕ್ಕೂ ಅಂತರ್ಜಾಲದ ಯುಗದಲ್ಲಿ ಪೈರೆಸಿ ಸಿನೆಮಾ ನೀಡುವುದರಿಂದ ಇವರಿಗೇನು ಲಾಭ? ಅಪರೂಪದ ಮಾಹಿತಿ ಇಲ್ಲಿದೆ.

ತಮಿಳ್ ರಾಕರ್ಸ್

ತಮಿಳ್ ರಾಕರ್ಸ್ ಕಂಪನಿಯಾಗಿ ಅಧಿಕೃತವಾಗಿ ಆರಂಭವಾಗಿದ್ದು 2011ರಲ್ಲಿ. ಈ ಕಂಪೆನಿಯ ಅಡ್ಮಿನ್‌ಗಳಾಗಿ ಹಲವಾರು ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ್ಯಾರ ಗುರುತು ವಿಳಾಸವಿಲ್ಲ. ಯಾರೂ ಭಾರತದಲ್ಲಿಲ್ಲ ಎಂಬುದು ಮಾತ್ರ ಖಚಿತವಾಗಿದೆ.

ಕೆನಡ, ಫ್ರಾನ್ಸ್, ಇಂಗ್ಲೆಂಡ್‌ನಿಂದ ಸೇರಿದಂತೆ ವಿಶ್ವದ ನಾನಾ ಮೂಲೆಗಳಲ್ಲಿ ಕುಳಿತು ಚಿತ್ರಗಳನ್ನು ಕದ್ದು ತಮ್ಮ ವೆಬ್‌ಸೈಟಿನಲ್ಲಿ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈವರೆಗೆ ಇವರನ್ನು ಪತ್ತೆಹಚ್ಚುವುದು ಸಾಧ್ಯವಾಗಿಲ್ಲ.

ಕಳೆದ ವರ್ಷ ಬಿಡುಗಡೆಯಾಗಿದ್ದ ಬಹುನಿರೀಕ್ಷಿತ ಸರ್ಕಾರ್ ಚಿತ್ರವನ್ನು ಚಿತ್ರ ಬಿಡುಗಡೆಗೆ ಮುನ್ನವೇ ತಮ್ಮ ವೆಬ್‌ಸೈಟಿನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ ತಮಿಳ್‌ ರಾಕರ್ಸ್ ಕೊನೆಗೂ ಬಿಡುಗಡೆ ಮಾಡಿತ್ತು.
ಕಳೆದ ವರ್ಷ ಬಿಡುಗಡೆಯಾಗಿದ್ದ ಬಹುನಿರೀಕ್ಷಿತ ಸರ್ಕಾರ್ ಚಿತ್ರವನ್ನು ಚಿತ್ರ ಬಿಡುಗಡೆಗೆ ಮುನ್ನವೇ ತಮ್ಮ ವೆಬ್‌ಸೈಟಿನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ ತಮಿಳ್‌ ರಾಕರ್ಸ್ ಕೊನೆಗೂ ಬಿಡುಗಡೆ ಮಾಡಿತ್ತು.

ಒಂದು ಕಾಲದಲ್ಲಿ ಚಿತ್ರ ಬಿಡುಗಡೆಯಾದ ಮಾರನೇಯ ದಿನವೇ ಪೈರಸಿ ಸಿಡಿಗಳನ್ನು ಬಿಡುಗಡೆ ಮಾಡುವ ಜಾಲ ವ್ಯಾಪಕವಾಗಿ ಕೆಲಸ ನಿರ್ವಹಿಸುತ್ತಿತ್ತು. ಆ ಸಂದರ್ಭದಲ್ಲಿ ಕೆಲವು ಕಾನೂನು ಕ್ರಮಗಳ ಮೂಲಕ ಪೈರಸಿಯನ್ನು ನಿರ್ಮೂಲನೆ ಮಾಡಲಾಗಿತ್ತು. ಆದರೆ ಈಗ ಚಲನಚಿತ್ರಗಳನ್ನು ಮೊಬೈಲ್‌ನಲ್ಲೇ ಡೌನ್‌ಲೋಡ್‌ ಮಾಡುವ ತಂತ್ರಜ್ಞಾನದ ಸಾಧ್ಯತೆಗಳು ಹೆಚ್ಚಾದಂತೆ ತಮಿಳ್ ರಾಕರ್ಸ್ ನಂತಹ ಕಂಪೆನಿಗಳು ಅಸುರ ವೇಗದಲ್ಲಿ ಬೆಳೆದುನಿಂತಿದೆ.

ಈ ವೆಬ್‌ಸೈಟಿನಿಂದ ಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹಣ ನೀಡಬೇಕಾದ ಅವಶ್ಯಕತೆ ಇಲ್ಲ. ಆದರೆ ಇವರ ವೆಬ್‌ಸೈಟಿನಲ್ಲಿ ಪಾಪ್‌ ಅಪ್ ಆಗುವ ಜಾಹೀರಾತುಗಳಿಂದಲೇ ಇವರಿಗೆ ಕೋಟ್ಯಾಂತರ ಹಣ ಹರಿದು ಬರುತ್ತದೆ. ಇದೇ ಕಾರಣಕ್ಕೆ ಚಿತ್ರರಂಗದ ಘಟಾನುಘಟಿಗಳನ್ನೇ ಹೆದರಿಸುವ ಮಟ್ಟಿಗೆ ಈ ವೆಬ್‌ಸೈಟ್ ಬೆಳೆದು ನಿಂತಿದೆ ಎಂದರೆ ಅದು ಸುಮ್ಮನೆ ಮಾತಲ್ಲ.

ಇವರು ಸಿನಿಮಾ ಕಳ್ಳರು

ಯಾವುದೇ ಚಿತ್ರದ ಚಿತ್ರೀಕರಣ ಮುಗಿದ ನಂತರ ಆ ಚಿತ್ರ ಫೂಟೇಜ್‌ಗಳನ್ನು (ದೃಶ್ಯಾವಳಿ) ಸಿನಿಮಾ ಬಿಡುಗಡೆಯಾಗುವವರೆಗೆ ಭದ್ರವಾಗಿಡಲು ಅನುಕೂಲವಾಗುವಂತೆ ಅನೇಕ ಕಂಪೆನಿಗಳು ಕೆಲಸ ನಿರ್ವಹಿಸುತ್ತಿವೆ. ನಿರ್ಮಾಪಕ ತನ್ನ ಚಿತ್ರದ ಎಲ್ಲಾ ದೃಶ್ಯಾವಳಿಗಳ ರಕ್ಷಣೆಗಾಗಿ ಯಾವುದಾದರೊಂದು ಕಂಪೆನಿಯ ಮೊರೆ ಹೋಗುತ್ತಾನೆ. ಚಿತ್ರ ಬಿಡುಗಡೆಯಾದ ನಂತರವೂ ಕಂಪ್ಯೂಟರ್ ಹ್ಯಾಕ್‌ ಮಾಡಿ ಕದಿಯುವುದು ದುಸ್ಸಾಧ್ಯ.

ಆದರೆ ತಮಿಳ್ ರಾಕರ್ಸ್ ಬೇರೆ ಬೇರೆ ಮೂಲಗಳಿಂದ ಚಿತ್ರಗಳನ್ನು ಕದಿಯುವುದರಲ್ಲಿ ನಿಷ್ಣಾತರು.

ಸಾಮಾನ್ಯವಾಗಿ ತಮಿಳು ಹಿಂದಿ ಹಾಗೂ ತೆಲುಗು ಚಿತ್ರಗಳು ದೊಡ್ಡ ಬಜೆಟ್‌ನ ಚಿತ್ರಗಳಾಗಿದ್ದು, ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ವಿದೇಶದಲ್ಲಿ ಬಿಡುಗಡೆಯಾಗುತ್ತವೆ. ವಿದೇಶದಿಂದಲೇ ಕಾರ್ಯ ನಿರ್ವಹಿಸುತ್ತಿರುವ ತಮಿಳ್ ರಾಕರ್ಸ್ ತಂಡ ಅಲ್ಲಿಂದಲೇ ಚಿತ್ರವನ್ನು ಕದ್ದು ತನ್ನ ವೆಬ್‌ಸೈಟಿನಲ್ಲಿ ಹಾಕುತ್ತಿದೆ. ಇನ್ನೂ ಭಾರತದಲ್ಲೂ ಚಿತ್ರಮಂದಿರದಲ್ಲೇ ಕುಳಿತು ಚಿತ್ರವನ್ನು ಶೂಟ್ ಮಾಡುವ ದೊಡ್ಡ ಜಾಲವೇ ತಮಿಳ್ ರಾಕರ್ಸ್‌ಗೆ ಇದೆ.

ಚಿತ್ರಮಂದಿರಗಳಲ್ಲಿ ಕುಳಿತು ಸಣ್ಣ ಕ್ಯಾಮರಾಗಳ ಮೂಲಕ ಚಿತ್ರೀಕರಿಸಿ ಅದನ್ನು ಬಿಡುಗಡೆ ಮಾಡುವುದು ಒಂದು ಬಗೆಯಾದರೆ, ಅದೇ ಹೊಸ ಚಿತ್ರಗಳು ಹಾಟ್‌ಸ್ಟಾರ್, ಅಮೇಜಾನ್ , ಸನ್‌ನೆಕ್ಟ್ಸ್ ಹಾಗೂ ವೂಟ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದಂತೆ ಅದರ ಹೆಚ್‌ಡಿ ಕ್ವಾಲಿಟಿ ಪ್ರಿಂಟ್‌ ಅನ್ನು ಬಟ್ಟಿ ಇಳಿಸುವ ಮಾಡುವ ಮೂಲಕ ಸುಲಭವಾಗಿ ಕದ್ದು ಬಿಡುಗಡೆ ಮಾಡುತ್ತಿದೆ.

ಇನ್ನೂ ಸಿನಿಮಾ ಎಡಿಟ್ ಆಗುವ ಸಂದರ್ಭದಲ್ಲೇ ಅದರ ಫೂಟೇಜ್‌ಗಳನ್ನು ಕದ್ದು ತಮಿಳ್ ರಾಕರ್ಸ್‌ಗೆ ಮಾರುವ ಜಾಲವೂ ಇದೆ.

ಹೀಗೆ ಕದಿಯಲಾಗುವ ಚಿತ್ರಗಳನ್ನು ವೆಬ್‌ಸೈಟಿನಲ್ಲಿ ಅಪ್ಲೋಡ್‌ ಮಾಡುವುದು ಅವರ ಮುಂದಿರುವ ಮತ್ತೊಂದು ಸವಾಲು. ವೆಬ್‌ಸೈಟಿಗೆ ಅಪ್‌ಲೋಡ್ ಮಾಡಲು ಸಾಮಾನ್ಯವಾಗಿ ಸರ್ವರ್ ಅವಶ್ಯಕತೆ ಇರುತ್ತದೆ.

ಅಪ್ಲೋಡ್ ಮಾಡುವಾಗ ಐಪಿ ವಿಳಾಸ ನಮೂದಾಗಿರುತ್ತದೆ. ಈ ಐಪಿ ವಿಳಾಸದ ಮೂಲಕ ಅವರನ್ನು ಹಿಡಿಯಬಹುದು. ಆದರೆ ತಮಿಳ್ ರಾಕರ್ಸ್ ಬಹಳ ಚಾಲಾಕಿಗಳು. ಕಾರಣ ಅವರಿಗೆಂದು ಯಾವುದೇ ಸರ್ವರ್ ಆಗಲಿ ಅಥವಾ ಐಪಿ ವಿಳಾಸವಾಗಲಿ ಇಲ್ಲ.

ವಿಶ್ವದ ನಾನಾ ಮೂಲೆಯಲ್ಲಿ ಕೆಲಸ ಮಾಡುವ ಇವರು ಸುಲಭಕ್ಕೆ ಯಾವುದೇ ಸರ್ವರ್‌ ಹಾಗೂ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಬಲ್ಲರು. ಬಳಕೆದಾರರ ಕಂಪ್ಯೂಟರ್‌ಗಳನ್ನೇ ಹ್ಯಾಕ್ ಮಾಡುವ ಇವರು ಆ ಕಂಪ್ಯೂಟರ್ ಗಳ ಮೂಲಕ ಅವರಿಗೆ ತಿಳಿಯದೆ ಸಿನಿಮಾವನ್ನು ತಮ್ಮ ವೆಬ್‌ಸೈಟಿಗೆ ಹಾಕುತ್ತಾರೆ. ಹೀಗಾಗಿ ಇವರ ವೆಬ್‌ಸೈಟಿನಲ್ಲಿ ಬಿಡುಗಡೆಯಾಗುವ ಒಂದೊಂದು ಚಿತ್ರಗಳು ಒಂದೊಂದು ಐಪಿ ವಿಳಾಸವನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಈವರೆಗೆ ಇವರ ಹೆಡೆಮುರಿಕಟ್ಟುವುದು ಸಾಧ್ಯವಾಗಿಲ್ಲ.

ತಮಿಳ್ ರಾಕರ್ಸ್ ಕಂಪನಿಯ ಮಾಲೀಕ ಎಂಬ ಗುಮಾನಿಯ ಮೇಲೆ 2016ರಲ್ಲಿ ಚೆನ್ನೈ ಪೊಲೀಸರು ಗೌರಿ ಶಂಕರ್ ಎಂಬಾತನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ನಂತರ ಈತನ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಲಾಗಿದ್ದು, ಅದರ ಮೂಲಕ ತಮಿಳ್ ರಾಕರ್ಸ್ ಕದ್ದ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂಬ ಸತ್ಯಾಂಶ ಬಯಲಾಗಿ ಕೊನೆಗೆ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಕಠಿಣ ಕಾನೂನಿಗೂ ಜಗ್ಗದ ಪೈರಸಿ ಪಿಡುಗು

ಚಿತ್ರರಂಗವನ್ನು ಕಾಡುತ್ತಿರುವ ಈ ಪೈರಸಿ ಪಿಡುಗನ್ನು ಕೊನೆಗಾಣಿಸಿ ಒತ್ತಾಯಿಸಿ 2003-04 ರಲ್ಲಿ ತಮಿಳುನಾಡಿನ ಚಲನಚಿತ್ರ ವಾಣಿಜ್ಯ ಮಂಡಳಿ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ರಜನಿಕಾಂತ್, ಕಮಲಹಾಸನ್ ಸೇರದಂತೆ ಎಲ್ಲಾ ನಟರೂ ಇದರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬೀದಿಗಳಿದು ಹೋರಾಟ ನಡೆಸಿದ್ದರು.

ಚಿತ್ರರಂಗದವರ ಹೋರಾಟಕ್ಕೆ ಮಣಿದಿದ್ದ ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತ 2004 ರಲ್ಲಿ ಸಿನಿಮಾ ಪೈರಸಿ ಸಿಡಿ ಜಾಲದಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದರು. ಸಾಮಾನ್ಯವಾಗಿ ಈ ಕಾಯ್ದೆಯನ್ನು ಕೊಲೆ ಆರೋಪಿಗಳು ಹಾಗೂ ಭೂಗಳ್ಳರ ಮೇಲೆ ಮಾತ್ರ ಉಪಯೋಗಿಸುತ್ತಾರೆ.

ಭಾರತದಲ್ಲೇ ಪೈರಸಿ ಜಾಲದ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿದ ಮೊದಲ ರಾಜ್ಯ ತಮಿಳುನಾಡು. ನಂತರ ಮಹಾರಾಷ್ಟ್ರ ಸರಕಾರವೂ ಪೈರಸಿ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿತ್ತು.

ಜೆ. ಜಯಲಲಿತ ಅವರ ನಿರ್ಣಯದಿಂದಾಗಿ ಒಮ್ಮೆಲೆ ಸಿಡಿ ಅಂಗಡಿಗಳ ಮೇಲೆ ದಾಳಿದ ಮಾಡಿದ ಪೊಲೀಸರು ಲಕ್ಷಾಂತರ ಸಿಡಿಗಳನ್ನು ವಶಕ್ಕೆ ಪಡೆದಿದ್ದರು. ಸಾಕಷ್ಟು ಜನರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಪರಿಣಾಮ ಪೈರಸಿ ಸಿಡಿ ಮಾರಾಟ ಜಾಲ ಸಾಕಷ್ಟು ಹಿಡಿತಕ್ಕೆ ಬಂದಿತ್ತು.

ಆದರೆ ಇಂದು ತಂತ್ರಜ್ಞಾನ ಬದಲಾಗಿದೆ. ಪೈರಸಿ ಸಿಡಿಯಲ್ಲಿ ಸಿನಿಮಾ ನೋಡುವ ಟ್ರೆಂಡ್ ಕಾಲಗರ್ಭ ಸೇರಿದೆ. ಮೊಬೈಲ್‌ನಲ್ಲೇ ಸಿನಿಮಾಗಳನ್ನು ಡೌನ್‌ಲೋಡ್ ಮಾಡುವ ಸೌಲಭ್ಯ ಬಂದಾಗಿನಿಂದಂತೂ ಈ ಜಾಲವನ್ನು ಮಟ್ಟಹಾಕುವುದು ಸಾಧ್ಯವೇ ಇಲ್ಲದಂತಾಗಿದೆ.

ಪರಿಣಾಮ ತಮಿಳ್ ರಾಕರ್ಸ್ ನಂತಹ ಸಿನಿಮಾ ಕಳ್ಳರು ಬಹುಕೋಟಿ ವ್ಯವಹಾರದ ಚಿತ್ರೋದ್ಯಮವನ್ನೇ ಹೆದರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಆನ್‌ಲೈನ್ ಜಗತ್ತು ಪೈರೆಸಿಯನ್ನು ಹೇಗೆಲ್ಲಾ ಬದಲಾಯಿಸಿದೆ ಎಂಬುದಕ್ಕೆ ಇವರು ಇವತ್ತು ಜೀವಂತ ಸಾಕ್ಷಿಯಾಗಿ ನಮ್ಮ ಮುಂದಿದ್ದಾರೆ.