samachara
www.samachara.com
ರಫೇಲ್ ಡೀಲ್ ಸುತ್ತ ನಾಟಕೀಯ ಬೆಳವಣಿಗೆ: ಹುಟ್ಟಿದ ಅನುಮಾನಗಳಿಗೆ ಕಾರಣ ಯಾರು?
COVER STORY

ರಫೇಲ್ ಡೀಲ್ ಸುತ್ತ ನಾಟಕೀಯ ಬೆಳವಣಿಗೆ: ಹುಟ್ಟಿದ ಅನುಮಾನಗಳಿಗೆ ಕಾರಣ ಯಾರು?

‘ರಕ್ಷಣಾ ಇಲಾಖೆಯಿಂದಲೇ ರಫೇಲ್‌ ಡೀಲ್‌ಗೆ ಸಂಬಂಧಿಸಿದ ಅಮೂಲ್ಯ ಮತ್ತು ಗೌಪ್ಯ ದಾಖಲೆಗಳು ಕಳುವಾಗಿವೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ!’  - ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಸುಪ್ರೀಂ ಕೋರ್ಟ್‌ಗೆ ನೀಡಿದ ಮಾಹಿತಿ.

ಭಾರತ ಪಾಕಿಸ್ತಾನದ ನಡುವೆ ಆವರಿಸಿದ್ದ ಮಾಧ್ಯಮ ಪ್ರೇರಿತ ಯುದ್ಧದ ಕಾರ್ಮೋಡ ತಿಳಿಯಾಗುತ್ತಿದ್ದಂತೆ ರಫೇಲ್‌ ಆರ್ಭಟ ಮತ್ತೆ ಶುರುವಾಗಿದೆ.

'ದಿ ಹಿಂದೂ' ವರದಿ, ಸುಪ್ರೀಂ ಕೋರ್ಟ್‌ನಲ್ಲಿ ರಫೇಲ್‌ ವಿಚಾರಣೆ, ರಕ್ಷಣಾ ದಾಖಲೆಗಳ ಕಳ್ಳತನ ಹೀಗೆ ರಫೇಲ್‌ ಡೀಲ್‌ಗೆ ಸಂಬಂಧಪಟ್ಟ ಹಾಗೆ ನಾಟಕೀಯ ಅನ್ನಿಸುವಂತಹ ಸಾಲು ಸಾಲು ಬೆಳವಣಿಗೆಗಳಿಗೆ ಬುಧವಾರ ಸಾಕ್ಷಿಯಾಯಿತು.

ರಫೇಲ್‌ ಡೀಲ್‌ ತನಿಖೆಗೆ ಕೋರಿ ಪ್ರಶಾಂತ್‌ ಭೂಷಣ್‌, ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ಇನ್ನೂ ಇತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಇಂದು ದಿನ ನಿಗದಿಯಾಗಿತ್ತು. ಇದರ ನಡುವೆಯೇ ಬೆಳಿಗ್ಗೆ 'ದಿ ಹಿಂದೂ' ಎಕ್ಸ್‌ಕ್ಲೂಸಿವ್‌ ವರದಿಯೊಂದನ್ನು ಪ್ರಕಟಿಸಿತ್ತು.

ವರದಿಯು, "ಭಾರತದ ಸಮಾಲೋಚಕರ ತಂಡ (ಐಎನ್‌ಟಿ)ಕ್ಕೆ ಸಮಾನಾಂತರವಾಗಿ ಪ್ರಧಾನಿ ಕಾರ್ಯಾಲಯ ಮಾತುಕತೆಗಳನ್ನು ನಡೆಸಿದ್ದರಿಂದ ಫ್ರಾನ್ಸ್‌ ಕಡೆಯವರಿಗೆ ಹೆಚ್ಚಿನ ಲಾಭವಾಗಿದೆ; ಭಾರತಕ್ಕೆ ನಷ್ಟವಾಗಿದೆ," ಎಂಬ ಅರ್ಥದ ಆರೋಪವನ್ನು ಮಾಡಿದೆ.

ಇದಕ್ಕೆ ಆಧಾರವಾಗಿ 'ಐಎನ್‌ಟಿ' ರಕ್ಷಣಾ ಇಲಾಖೆಗೆ ಸಲ್ಲಿಸಿದ ವರದಿಯನ್ನು ಪತ್ರಿಕೆ ಪ್ರಕಟಿಸಿದೆ.

ವರದಿಯಲ್ಲೇನಿದೆ?

ಜುಲೈ 21, 2016ರಂದು ಭಾರತದ 7 ಜನ ಸಮಾಲೋಚಕರ ತಂಡ ರಕ್ಷಣಾ ಇಲಾಖೆಗೆ ವರದಿಯೊಂದನ್ನು ನೀಡಿತ್ತು. ಈ ವರದಿಯಲ್ಲಿ ಇದ್ದಿದ್ದು ಇಷ್ಟೇ. ‘574 ಮಿಲಿಯನ್‌ ಯೂರೋ ಮೊತ್ತವನ್ನು ಬ್ಯಾಂಕ್‌ ಗ್ಯಾರಂಟಿಯಾಗಿ ಪಾವತಿ ಮಾಡಲು ಫ್ರಾನ್ಸ್‌ನ ಕಂಪನಿ ನಿರಾಕರಿಸಿದೆ. ಇದಕ್ಕೆ ಫ್ರೆಂಚ್‌ ಸರಕಾರದ ಬೆಂಬಲವೂ ಇದೆ. ಈ ಬೆಳವಣಿಗೆಯಿಂದಾಗಿ ಸೆಪ್ಟೆಂಬರ್‌ 23, 2016ರಂದು 36 ವಿಮಾನಗಳ ಖರೀದಗೆ ಸಹಿ ಹಾಕಿದ ಎನ್‌ಡಿಎ ಸರಕಾರದ ಡೀಲ್‌ ಯುಪಿಎ ಸರಕಾರದ ಡೀಲ್‌ಗಿಂತ 246.11 ಮಿಲಿಯನ್‌ ಯೂರೋ (1963 ಕೋಟಿ ರೂ.) ದುಬಾರಿಯಾಗಿದೆ,’ ಎಂಬುದು.

ಭಾರತದ 7 ಜನ ಸಮಾಲೋಚಕರ ತಂಡ ರಕ್ಷಣಾ ಇಲಾಖೆಗೆ ಸಲ್ಲಿಸಿದ ವರದಿ.
ಭಾರತದ 7 ಜನ ಸಮಾಲೋಚಕರ ತಂಡ ರಕ್ಷಣಾ ಇಲಾಖೆಗೆ ಸಲ್ಲಿಸಿದ ವರದಿ.
/ದಿ ಹಿಂದೂ

ವಿಚಿತ್ರವೆಂದರೆ ಇದಕ್ಕೆ ಉಲ್ಟಾ ಅಫಿಡವಿಟ್‌ನ್ನು ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.

ಉತ್ತಮ ಬೆಲೆಗೆ ನಾವು ಯುದ್ಧ ವಿಮಾನಗಳನ್ನು ಖರೀದಿಸಿದ್ದೇವೆ ಎನ್ನುವುದು ಸರಕಾರದ ವಾದವಾಗಿತ್ತು. ಇದೇ ವಾದ ಸಿಎಜಿಯ ಪರ್ಫಾರ್ಮೆನ್ಸ್‌ ಅಡಿಟ್ ವರದಿಯ ಎರಡನೇ ವಾಲ್ಯೂಮ್‌ನಲ್ಲಿಯೂ ಇದೆ. ಆದರೆ ಸಿಎಜಿ ಬ್ಯಾಂಕ್‌ ಗ್ಯಾರಂಟಿಯ ಮೊತ್ತವನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಿ ಪಟ್ಟಿ ಮಾಡಿತ್ತು. ಹೀಗಾಗಿ ಮೋದಿ ಸರಕಾರದ ಡೀಲ್‌ ಯುಪಿಎ ಅವಧಿಯ ಡೀಲ್‌ಗಿಂತ ಶೇಕಡಾ 2.86ರಷ್ಟು ಅಗ್ಗ ಎಂಬ ಲೆಕ್ಕಾಚಾರಕ್ಕೆ ಬಂದಿತ್ತು.

ಇದೀಗ ‘ದಿ ಹಿಂದೂ’ಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಎನ್‌ಡಿಎ ಸರಕಾರ ಬ್ಯಾಂಕ್‌ ಗ್ಯಾರಂಟಿಯಾಗಿ 574 ಮಿಲಿಯನ್‌ ಯೂರೋಗಳನ್ನು ಪಾವತಿ ಮಾಡಬೇಕಾಗಿತ್ತು. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಇದ್ದರೆ ಮಾತ್ರ ಯುಪಿಎ ಅವಧಿಯ ಡೀಲ್‌ಗಿಂತ ಎನ್‌ಡಿಎ ಕಾಲದ ರಫೇಲ್‌ ಡೀಲ್‌ 327.89 ಮಿಲಿಯನ್‌ ಯೂರೋ ಕಡಿಮೆಯಾಗುತ್ತದೆ. ಇಲ್ಲದೇ ಇದ್ದಲ್ಲಿ 246.11 ಮಿಲಿಯನ್‌ ಯೂರೋ ಹೆಚ್ಚಾಗುತ್ತದೆ.

ವಿಶೇಷವೆಂದರೆ ಯುಪಿಎ ಕಾಲದಲ್ಲಿ ಬಿಡ್‌ನಲ್ಲಿ ಪಾಲ್ಗೊಂಡಿದ್ದ ‘ಡಸಾಲ್ಟ್‌ ಏವಿಯೇಷನ್‌’ ತಾನೇ ಬ್ಯಾಂಕ್‌ ಗ್ಯಾರಂಟಿ ನೀಡುವುದಾಗಿ ಹೇಳಿತ್ತು. ಆದರೆ ಎನ್‌ಡಿಎ ಅಧಿಕಾರಕ್ಕೆ ಬರುತ್ತಿದ್ದಂತೆ ಈ ವಿಚಾರದಲ್ಲಿ ಅದು ತನ್ನ ನಿಲುವಿನಿಂದ ಹಿಂದೆ ಸರಿಯಿತು. ಈ ಬಗ್ಗೆ ಚರ್ಚೆ ಮಾಡೋಣವೆಂದರೆ ಇಬ್ಬಿಬ್ಬರು ಏಕಕಾಲದಲ್ಲಿ ಸಮಾಲೋಚನೆಯಲ್ಲಿ ನಿರತವಾಗಿದ್ದರಿಂದ ಭಾರತದ ಐಎನ್‌ಟಿ ತಂಡಕ್ಕೆ ಅವಕಾಶವೇ ಸಿಗಲಿಲ್ಲ. ಇವೆಲ್ಲದರ ಒಟ್ಟು ಪರಿಣಾಮ ರಫೇಲ್‌ ಖರೀದಿಗೆ ಭಾರತ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನ ಮಂತ್ರಿ ಕಾರ್ಯಾಲಯ.

ರಕ್ಷಣ ಇಲಾಖೆ ದಾಖಲೆಗಳ ಕಳ್ಳತನ:

ಒಂದೆಡೆ ‘ದಿ ಹಿಂದೂ’ ಎಕ್ಸ್‌ಕ್ಲೂಸಿವ್‌ ವರದಿ ಹೊರ ಬೀಳುತ್ತಿದ್ದಂತೆ ಪತ್ರಿಕೆ ಮತ್ತು ದೂರು ನೀಡಿದವರ ವಿರುದ್ಧ ಹೊಸ ಆರೋಪ ಹೊರಿಸಲು ಸರಕಾರ ಮುಂದಾದಂತೆ ಭಾಸವಾಗುತ್ತಿದೆ.

ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರಫೇಲ್‌ ಡೀಲ್‌ಗೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಇಲಾಖೆಯಿಂದಲೇ ಕಳುವಾಗಿವೆ ಎಂದು ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್‌ ಕೋರ್ಟ್‌ ಗಮನಕ್ಕೆ ತಂದರು. ಇವೆಲ್ಲವೂ ಅಧಿಕೃತ ಗೌಪ್ಯ ದಾಖಲೆಗಳಾಗಿದ್ದು ಇವು ಅರ್ಜಿದಾರರಿಗೆ ಮತ್ತು ಪತ್ರಿಕೆಗೆ ಸಿಕ್ಕಿರುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಈ ದಾಖಲೆಗಳು ಅರ್ಜಿದಾರರಿಗೆ, ಪತ್ರಿಕೆಗೆ ಸಿಕ್ಕಿದ್ದು ಹೇಗೆ? ಇದರ ಮೂಲ ಯಾವುದು? ಎಂಬುದನ್ನು ಇವರುಗಳು ನ್ಯಾಯಾಲಯಕ್ಕೆ ತಿಳಿಸಬೇಕು ಎಂಬ ಬೇಡಿಕೆಯನ್ನು ವೇಣುಗೋಪಾಲ್‌ ಸುಪ್ರೀಂ ಕೋರ್ಟ್‌ ಮುಂದಿಟ್ಟರು. ಈ ಮೂಲಕ ದಾಖಲೆ ಕಳ್ಳತನದಲ್ಲಿ ‘ದಿ ಹಿಂದೂ’ ಮತ್ತು ಪ್ರಶಾಂತ್‌ ಭೂಷಣ್‌ ಕೈವಾಡವಿರಬಹುದು ಎಂಬುದನ್ನು ಬಿಂಬಿಸಲು ಮುಂದಾದರು.

ಜತೆಗೆ ‘ದಿ ಹಿಂದೂ’ ಮೇಲೆ ಮತ್ತಷ್ಟು ಆರೋಪ ಹೊರಿಸಿದ ಅವರು, ನ್ಯಾಯಾಲಯದ ವಿಚಾರಣೆ ಮೇಲೆ ಪ್ರಭಾವ ಬೀರಲೆಂದೇ ಪತ್ರಿಕೆ ಈ ವರದಿ ಪ್ರಕಟಿಸಿದೆ ಎಂದು ಆರೋಪಿಸಿ, ಪತ್ರಿಕೆಯ ವರದಿ ನ್ಯಾಯಾಂಗದ ನಿಂದನೆಯಾಗಿದೆ ಎಂಬುದಾಗಿಯೂ ಅವರು ನ್ಯಾಯಾಲಯದ ಗಮನ ಸೆಳೆದರು.

ಈ ನಡುವೆ ಕಳುವಾದ ದಾಖಲೆಗಳನ್ನು ಒಂದೋ ಅಧಿಕಾರಿಗಳು ಅಪಹರಿಸಿರಬೇಕು ಎಂಬ ಅನುಮಾನ ವ್ಯಕ್ತಪಡಿಸಿದ ಕೆ. ಕೆ. ವೇಣುಗೋಪಾಲ್‌, ಈ ಸಂಬಂಧ ತನಿಖೆ ಜಾರಿಯಲ್ಲಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಅಚ್ಚರಿಯ ವಿಚಾರವೆಂದರೆ ಈ ಬಗ್ಗೆ ಯಾವೂದೇ ದೂರು ದಾಖಲಿಸಿಲ್ಲ ಎಂಬುದನ್ನು ಅವರೇ ಹೇಳಿದರು.

ಮೇಲ್ಮನವಿ ರದ್ದಿಗೆ ಆಗ್ರಹ:

ವಾದದ ಅಂತ್ಯದಲ್ಲಿ ಕಳುವಾದ ದಾಖಲೆಗಳನ್ನೇ ಅರ್ಜಿದಾರರು ಆಧಾರವಾಗಿ ಇಟ್ಟುಕೊಂಡಿರುವುದರಿಂದ ಈ ಮೇಲ್ಮನವಿಯನ್ನು ರದ್ದುಗೊಳಿಸಬೇಕು ಎಂಬುದಾಗಿ ಅಟಾರ್ನಿ ಜನರಲ್‌ ವಾದಿಸಿದರು. ಇದನ್ನು ಸಾರ್ವಜನಿಕವಾಗಿ ಇಡುವ ಮೂಲಕ ಗೌಪ್ಯತಾ ಕಾಯ್ದೆಯನ್ನು ಮುರಿಯಲಾಗಿದೆ ಮತ್ತು ಇದು ನ್ಯಾಯಾಂಗ ನಿಂದನೆ ಎಂಬುದಾಗಿ ಅವರು ಪತ್ರಿಕೆಯ ಮೇಲೂ ಆರೋಪಿಸಿದರು.

ಅರ್ಜಿದಾರರಲ್ಲಿ ಒಬ್ಬರಾದ ಎಎಪಿಯ ಸಂಸದ ಸಂಜಯ್‌ ಸಿಂಗ್‌ ಮೇಲೆಯೂ ಮುಗಿ ಬಿದ್ದ ವೇಣುಗೋಪಾಲ್, ಸುಪ್ರೀಂ ಕೋರ್ಟ್‌ ಬಗ್ಗೆ ನೀಡಿರುವ ಅವಹೇಳನಕಾರಿ ಎನ್ನಲಾದ ಹೇಳಿಕೆಯನ್ನೂ ನ್ಯಾಯಾಲಯದ ಅವಗಾಹನೆಗೆ ತಂದರು. ಆದರೆ ಈ ಬಗ್ಗೆ ಮುಂದೆ ವಿಚಾರಣೆ ಮಾಡುತ್ತೇವೆ, ವಿಷಯಾಂತರವಾಗುವುದು ಬೇಡ ಎಂಬ ತೀರ್ಮಾನವನ್ನು ನ್ಯಾಯಪೀಠ ತಳೆಯಿತು.

ಅಲ್ಲದೆ, ‘ಒಂದೊಮ್ಮೆ ಹಗರಣ ನಡೆದಿದ್ದರೆ ಸರಕಾರ ಅಧಿಕೃತ ಗೌಪ್ಯತಾ ಕಾಯ್ದೆಯ ಮರೆಯಲ್ಲಿ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ನ್ಯಾ. ಎಸ್‌. ಕೆ. ಕೌಲ್‌ ಮತ್ತು ನ್ಯಾ. ಕೆ. ಎಂ. ಜೋಸೆಫ್‌ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಒಂದೊಮ್ಮೆ ಕಳ್ಳತನ ಮಾಡಿದ ದಾಖಲೆಗಳು ಭ್ರಷ್ಟಾಚಾರ ಪ್ರಕರಣಕ್ಕೆ ಪೂರಕವಾದುದು ಎಂಬುದು ಕೋರ್ಟ್‌ ಗಮನಕ್ಕೆ ಬಂದರೆ ಇದರ ಬಗ್ಗೆ ಗಮನ ಹರಿಸಲಿದ್ದೇವೆ ಎಂದು ನ್ಯಾಯಾಲಯ ಹೇಳಿತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಜಿ ಈ ಸಂದರ್ಭದಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದರೆ ಅದು ದೇಶದ ರಕ್ಷಣೆ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದರು. ಜತೆಗೆ ದಾಖಲೆಗಳತ್ತ ನ್ಯಾಯಾಲಯ ಕಣ್ಣಾಡಿಸಬಾರದು. ಇದರಲ್ಲಿ ಭದ್ರತೆಗೆ ಸಂಬಂಧಿಸಿದ ಗೌಪ್ಯ ಅಂಶಗಳಿವೆ ಎಂದು ಅವರು ಆಗ್ರಹಿಸಿದರು.

ಮೂಲ ಬಿಟ್ಟುಕೊಡಲು ನಿರಾಕರಿಸಿದ ಎನ್. ರಾಮ್:

ದಾಖಲೆಯ ಮೂಲಗಳನ್ನು ಅಡ್ವೊಕೇಟ್‌ ಜನರಲ್‌ ಉಲ್ಲೇಖಿಸಿದ್ದರಿಂದ, “ತಮಗೆ 2ಜಿ ಮತ್ತು ಕೋಲ್‌ಗೇಟ್‌ ಹಗರಣದ ದಾಖಲೆಗಳು ವಿಷಲ್‌ಬ್ಲೋವರ್‌ಗಳಿಂದ ಸಿಕ್ಕಿತ್ತು,” ಎಂದು ಪ್ರಶಾಂತ್‌ ಭೂಷಣ್‌ ನ್ಯಾಯಾಲಯಕ್ಕೆ ತಿಳಿಸಿದರು.

ಖ್ಯಾತ ವಕೀಲ ಮತ್ತು ರಫೇಲ್‌ ಪ್ರಕರಣದ ಓರ್ವ ಅರ್ಜಿದಾರ ಪ್ರಶಾಂತ್‌ ಭೂಷಣ್.
ಖ್ಯಾತ ವಕೀಲ ಮತ್ತು ರಫೇಲ್‌ ಪ್ರಕರಣದ ಓರ್ವ ಅರ್ಜಿದಾರ ಪ್ರಶಾಂತ್‌ ಭೂಷಣ್.
/ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

ಇನ್ನು ನ್ಯಾಯಾಲಯದ ಹೊರಗೆ ಪ್ರತಿಕ್ರಿಯೆ ನೀಡಿರುವ ‘ದಿ ಹಿಂದೂ’ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಎನ್‌. ರಾಮ್‌ ‘ದಾಖಲೆಗಳ ಯಾವ ಮೂಲವನ್ನು ಹೇಳಲಾರೆ’ ಎಂದು ಗುಡುಗಿದ್ದಾರೆ.

ಇವೆಲ್ಲಾ ವಾದದ ನಡುವೆ ಭಾರತದ ವಾಯುಸೇನೆಗೆ ರಫೇಲ್‌ ಯುದ್ಧ ವಿಮಾನಗಳು ಅತ್ಯಗತ್ಯವಾಗಿವೆ ಎಂದು ಎಜಿ ಮತ್ತೊಂದು ವಾದ ಹೂಡಿದರು. 1960ರಲ್ಲಿ ನಿರ್ಮಿತ ಮಿಗ್‌ 21 ಯುದ್ಧ ವಿಮಾನಗಳೂ ಉತ್ತಮವಾಗಿ ಕೆಲಸ ಮಾಡುತ್ತಿವೆ; ಎಫ್‌ 16ನ್ನು ಹೊಡೆದುರುಳಿಸುವಷ್ಟು ಶಕ್ತಿಶಾಲಿಯಾಗಿವೆ ಎಂದು ಹೇಳುತ್ತಲೇ ರಫೇಲ್‌ ತುರ್ತಾಗಿ ಬೇಕಾಗಿದೆ ಎಂಬ ಅರ್ಥದಲ್ಲಿ ವಾದಿಸಿದರು.

ಹಾರಾಟ ನಡೆಸಬಹುದಾದ ಸ್ಥಿತಿಯಲ್ಲಿ ಎರಡು ರಫೇಲ್‌ ಯುದ್ಧ ವಿಮಾನಗಳ ತಂಡಗಳು ಸೆಪ್ಟೆಂಬರ್‌ನಲ್ಲಿ ಇಲ್ಲಿಗೆ ಬರಲು ಸಿದ್ಧವಾಗಿವೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿದ ಅವರು, ರಫೇಲ್‌ ಖರೀದಿ ರಕ್ಷಣಾ ಸ್ವಾಧೀನಕ್ಕೆ ಸಂಬಂಧಿಸಿದಾಗಿರುವುದರಿಂದ ಈ ಪ್ರಕ್ರಿಯೆಯನ್ನು ನ್ಯಾಯಾಂಗ ಮರುಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂಬುದನ್ನೂ ಅವರು ವಾದದ ನಡುವೆ ಉಲ್ಲೇಖಿಸಿದರು.

ಇಲ್ಲಿಗೆ ವಾದ ನಿಲ್ಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮಾರ್ಚ್‌ 14ಕ್ಕೆ ಮುಂದೂಡಿದೆ.

‘ರಫೇಲ್’ ಪ್ರಶ್ನೆಗಳು:

ನ್ಯಾಯಾಲಯದ ಬೆಳವಣಿಗೆಗಳು ಒಂದು ಕಡೆಯಾದರೆ ಇನ್ನೊಂದು ಕಡೆ ರಫೇಲ್‌ ಡೀಲ್‌ ಪರವಾಗಿ ಪ್ರಧಾನಿಯಾದಿಯಾಗಿ ಒಂದಷ್ಟು ಜನರು ಬಹಿರಂಗವಾಗಿ ವಾದಿಸಲು ಆರಂಭಿಸಿದ್ದಾರೆ. ಮತ್ತು ಇದಕ್ಕೆ ಕಾಂಗ್ರೆಸ್‌ ಅಡ್ಡಿ ಉಂಟು ಮಾಡಿತು ಎಂಬ ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ.

ಇತ್ತೀಚೆಗೆ ನಡೆದ ಇಂಡಿಯಾ ಟುಡೇ ಕಾನ್ಕ್ಲೇವ್‌ನಲ್ಲಿ ಮೋದಿ, “ಭಾರತ ರಫೇಲ್‌ನ ಉಪಸ್ಥಿತಿಯನ್ನು ಕಳೆದುಕೊಳ್ಳುತ್ತಿದೆ. ಒಂದೊಮ್ಮೆ ರಫೇಲ್‌ ಇದ್ದಿದ್ದರೆ ಪರಿಣಾಮವೇ ಬೇರೆಯಾಗುತ್ತಿತ್ತು ಎಂಬುದಾಗಿ ಇಡೀ ದೇಶವೇ ಇವತ್ತು ಏಕಸ್ವರದಲ್ಲಿ ಕೂಗುತ್ತಿದೆ,” ಎಂದಿದ್ದರು.

ವಿಚಿತ್ರವೆಂದರೆ ವಿರೋಧ ಪಕ್ಷಗಳಾಗಲಿ, ಮಾಧ್ಯಮಗಳಾಗಲಿ ರಫೇಲ್‌ನ ಸಾಮಾರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ. ಖರೀದಿಯನ್ನು ವಿರೋಧಿಸಿಲ್ಲ. ಪ್ರಶ್ನೆ ಇರುವುದು ಖರೀದಿ ನಿರ್ಧಾರ, ಅವುಗಳ ಸಂಖ್ಯೆ, ಗುತ್ತಿಗೆ ನೀಡಿರುವ ವ್ಯಕ್ತಿ ಮತ್ತು ಬೆಲೆಯ ಬಗ್ಗೆ ಮಾತ್ರ.

ಆದರೆ ಪ್ರಧಾನಿಯಾದಿಯಾಗಿ ಆಡಳಿತ ವರ್ಗ ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದಲ್ಲದೆ, ನಿರಂತರವಾಗಿ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ನಡುವೆ ರಕ್ಷಣಾ ಇಲಾಖೆಯಿಂದಲೇ ಡೀಲ್‌ನ ದಾಖಲೆಗಳು ಕಳುವಾಗಿವೆ ಎನ್ನುವ ಮೂಲಕ ಇನ್ನೊಂದಿಷ್ಟು ಅನುಮಾನಗಳು ಏಳಲು ಕೇಂದ್ರ ಸರಕಾರ ಕಾರಣವಾಗಿದೆ.