samachara
www.samachara.com
‘ಭಾರತಕ್ಕೂ ಹೆದರಲ್ಲ; ಪಾಕ್‌ಗೂ ಹೆದರಲ್ಲ’: ಮೋದಿ ನೀರಸ ಭಾಷಣದಲ್ಲಿ ಹೊಸತೇನಿತ್ತು?
COVER STORY

‘ಭಾರತಕ್ಕೂ ಹೆದರಲ್ಲ; ಪಾಕ್‌ಗೂ ಹೆದರಲ್ಲ’: ಮೋದಿ ನೀರಸ ಭಾಷಣದಲ್ಲಿ ಹೊಸತೇನಿತ್ತು?

ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣದ ಪೂರ್ಣಪಾಠ ಇಲ್ಲಿದೆ. ಈ ಭಾಷಣದ ತುಂಬಾ ‘ಈಗಾಗಲೇ ಎಲ್ಲೋ ಕೇಳಿದಂತಿದ್ದ ಮಾತುಗಳೇ’ ತುಂಬಿಕೊಂಡಿದ್ದವು.  

ನರೇಂದ್ರ ಮೋದಿ ಎಂದರೆ ಅಬ್ಬರದ ಪ್ರಚಾರಕ; ಬಿಜೆಪಿಯ ಫೈರ್‌ಬ್ರಾಂಡ್. ಮಾತು ಆರಂಭಿಸಿದರೆ ಸಾಕು ಬೆಂಕಿ, ಎಂಥವರನ್ನೂ ಸೆಳೆಯುವ ಹಾವ ಭಾವ. ಇಂತಹ ಉತ್ಪ್ರೇಕ್ಷೆಗಳ ಕಾಲ ಮುಗಿಯಿತಾ?

ಬುಧವಾರ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಮಾತುಗಳು ತಣ್ಣಗಿದ್ದವು. ಎಂದಿನಂತೆ ಅದೇ ಚರ್ವಿತ ಚರ್ವಣ ಭಾಷಣ, ಹೊಸತೇನೂ ಕಾಣಿಸಲೇ ಇಲ್ಲ ಎಂಬ ಮಾತುಗಳೀಗ ಕೇಳಿಬರುತ್ತಿವೆ.

ಲೋಕಸಭೆಯ ಕೊನೆ ಭಾಷಣದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ಪರೋಕ್ಷವಾಗಿ ಕೆಣಕಿದ್ದ ಪ್ರಧಾನಿ ನರೇಂದ್ರ ಮೋದಿ "ನೀವು ಕೊನೆಯ ಬಾರಿಗೆ ಲೋಕಸಭೆ ಪ್ರವೇಶಿಸಿದ್ದೀರಿ," ಎಂದು ಮಾರ್ಮಿಕವಾಗಿ ನುಡಿದಿದ್ದರು. ಅವರ ಈ ಹೇಳಿಕೆಯಿಂದಾಗಿ ಖರ್ಗೆ ಸೋಲಿಗೆ ಮೋದಿ ರಣತಂತ್ರ ಹೆಣೆದಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಅವರ ಹೇಳಿಕೆಯ ಬೆನ್ನಿಗೆ ಕಾಂಗ್ರೆಸ್ ಪಕ್ಷದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು.

ಹೀಗಾಗಿ ಇಂದಿನ ಕಲಬುರ್ಗಿಯ ಸಮಾವೇಶದಲ್ಲಿ ಮೋದಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಘರ್ಜಿಸಲಿದ್ದಾರೆ. ಡಾ. ಉಮೇಶ್ ಜಾಧವ್ ಅವರನ್ನೇ ಕಲಬುರ್ಗಿಯ ಬಿಜೆಪಿ ಹುರಿಯಾಳು ಎಂದು ಘೋಷಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಕೇವಲ ರಾಜ್ಯ ಸರಕಾರ ಟೀಕೆಗೆ 30 ನಿಮಿಷ ಮೀಸಲಿಟ್ಟ ಮೋದಿ ಬಿಜೆಪಿ ನಾಯಕರ ನಿರೀಕ್ಷೆಯನ್ನು ಹುಸಿಗೊಳಿಸಿದರು. ಪರಿಣಾಮ ಕಾಂಗ್ರೆಸ್ ತೊರೆದು ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಜಾಧವ್ ತೀವ್ರ ಮುಖಭಂಗಕ್ಕೆ ಗುರಿಯಾದರು.

ಮೋದಿ ಭಾಷಣದಲ್ಲೇನಿತ್ತು?

ಎಂದಿನಂತೆ ಕನ್ನಡದಲ್ಲಿ ಮಾತನಾಡುವ ಮೂಲಕವೇ ತಮ್ಮ ಭಾಷಣ ಆರಂಭಿಸಿದ ಮೋದಿ ಮೊದಲ 10 ನಿಮಿಷವನ್ನು ತಮ್ಮ ಸರಕಾರದ ಸಾಧನೆಗಳನ್ನು ಹಾಗೂ ಭವಿಷ್ಯದ ಯೋಜನೆಗಳನ್ನು ವಿವರಿಸಲು ಬಳಸಿಕೊಂಡರು.

ಆಯುಷ್ಮಾನ್ ಭಾರತ ಯೋಜನೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಸೂಪರ್ ಸ್ಪೆಷಾಲಿಟಿ ವಾರ್ಡ್, ಬೀದರ್-ಕಲಬುರಗಿ ರೈಲ್ವೆ ಲೇನ್ ಹಾಗೂ ಚಿತಾಪುರ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಿದ ಮೋದಿ ಉಳಿದ ಸಮಯವನ್ನು ಎಂದಿನಿಂತೆ ರಾಜ್ಯ ಸರಕಾರದ ಟೀಕೆಗೆ ಬಳಸಿಕೊಂಡರು.

ಸಂಪ್ರದಾಯವೆಂಬಂತೆ ಕಾಂಗ್ರೆಸ್ ವಿರುದ್ಧದ ಟೀಕೆಯೊಂದಿಗೆ ಭಾಷಣಕ್ಕೆ ಅಂಕಿತ ಹಾಕಿದ್ದ ಮೋದಿ “ಅಧಿಕಾರ ದಾಹಿ ಕಾಂಗ್ರೆಸ್, ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ” ಎಂದು ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಟೀಕಿಸಿದರು.

“ನಿಮ್ಮ ರಾಜ್ಯದಲ್ಲಿ ರೈತ ವಿರೋಧಿ ಸರಕಾರವಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನ ರಿಮೋಟ್ ಕಂಟ್ರೋಲ್‌ನಂತೆ ಕೆಲಸ ಮಾಡುತ್ತಿದ್ದಾರೆ. ಇಂತವರಿಂದ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಕಿಡಿಕಾರಿದರು.

“ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ 2 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕ 6 ಸಾವಿರ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕುತ್ತಿದೆ. ಆದರೆ ಇದು ರಾಜ್ಯ ಸರಕಾರಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯಲ್ಲಿ ಹಣ ಎಗರಿಸಲು ಸಾಧ್ಯವಾಗುತ್ತಿಲ್ಲ ಎಂಬುದೇ ಇವರಿಗೆ ಸಮಸ್ಯೆಯಾಗಿದೆ. ಇದೇ ಕಾರಣಕ್ಕೆ ಈವರೆಗೆ ಸಮ್ಮಿಶ್ರ ಸರಕಾರ ಫಲಾನುಭವಿಗಳ ಬ್ಯಾಂಕ್ ಖಾತೆ ವಿವರ ನೀಡಿಲ್ಲ,” ಎಂದರು ಪ್ರಧಾನಿ ಮೋದಿ.

“ಎಲ್ಲಾ ರಾಜ್ಯದಲ್ಲೂ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಮೊದಲ ಕಂತಿನ ಹಣ ಜಮಾವಣೆಯಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನೂ ರೈತರ ಖಾತೆಗಳಿಗೆ ಹಣ ಜಮಾವಣೆ ಆಗಿಲ್ಲ. ದೆಹಲಿ ಸರಕಾರ ರೈತರಿಗೆ ನೇರವಾಗಿ ಖಾತೆಗೆ ಹಣ ಜಮಾ ಮಾಡಿದರೆ ನಿಮಗೇಕೆ ಹೊಟ್ಟೆ ಉರಿ,” ಎಂದು ಖಾರವಾಗಿ ಪ್ರಶ್ನಿಸಿದರು.

ಸಾಲಮನ್ನಾ ಕುರಿತು ಉಲ್ಲೇಖಿಸಿ, "ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ ಈಗ ರೈತರಿಗೆ ವಂಚನೆ ಮಾಡಿದ್ದಾರೆ. ರೈತರ ಬದ್ಧ ವೈರಿಯಂತಹ ಇಂತಹ ಸರಕಾರ ಅಭಿವೃದ್ಧಿಗೆ ತಡೆಗೋಡೆ. ಇದನ್ನು ಸರಿಸಿದರೆ ರೈತರೇ ರಾಜ್ಯವನ್ನು ಅಭಿವೃದ್ಧಿಯೆಡೆಗೆ ನಡೆಸುವರು,” ಎಂದು ಸಮ್ಮಿಶ್ರ ಸರಕಾರವನ್ನು ದೂಷಿಸಿದರು.

ಭ್ರಷ್ಟಾಚಾರದ ಕುರಿತು ಮಾತನಾಡಿದ ಅವರು, “ಕಾಂಗ್ರೆಸ್ ಕಾಲದಲ್ಲಿ ಇನ್ನೂ ಜನಿಸದ ವ್ಯಕ್ತಿಯ ಹೆಸರಲ್ಲಿ ಜನನ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ ಸಿಗುತ್ತಿತ್ತು. ಕಾಗದಗಳಲ್ಲಿ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಅವರ ಹೆಸರಿನಲ್ಲಿ ವಿದ್ಯಾರ್ಥಿ ವೇತನ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅನೇಕ ಸರಕಾರಿ ಸೌಲಭ್ಯಗಳಲ್ಲಿ ಭ್ರಷ್ಟಾಚಾರ ಎಸಗಲಾಗುತ್ತಿತ್ತು. ಆದರೆ ಕೇಂದ್ರ ಸರಕಾರ ಆಧಾರ್ ಮೂಲಕ 8 ಕೋಟಿ ನಕಲಿ ಫಲಾನುಭವಿಗಳನ್ನು ತೊಲಗಿಸಿದೆ. ಆದರೆ ಆಧಾರ್ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು,” ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

“ನಾನು ಬಡತನ, ಉಗ್ರವಾದ ಹಾಗೂ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಹೋರಾಟ ನಡೆಸುತ್ತಿದ್ದೇನೆ. ಆದರೆ ಭ್ರಷ್ಟರು ನನ್ನನ್ನೇ ತೊಲಗಿಸಲು ಒಂದಾಗಿದ್ದಾರೆ. ಮೋದಿ ಇರುವವರೆಗೆ ಕಳ್ಳರ ಅಂಗಡಿ ಬಂದ್ ಆಗಲಿದೆ. ನಾನು ಹಿಂದೂಸ್ತಾನಕ್ಕೂ ಹೆದರಲ್ಲ ಪಾಕಿಸ್ತಾನಕ್ಕೂ ಹೆದರಲ್ಲ” ಎಂದು ಸವಾಲು ಹಾಕಿದ ಮೋದಿ ಎಂದಿನಂತೆ ಭಾಷಣ ಮುಗಿಸಿದರು.

ಇನ್ನೂ ಬೆಂಗಳೂರಿನಲ್ಲಿ ಮೋದಿ ಭಾಷಣಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಕುಮಾಸ್ವಾಮಿ, “ನಮಗೂ ರೈತರ ಮೇಲೆ ಕಾಳಜಿ ಇದೆ. ಸಾನಮನ್ನಾ ಮಾಡುವ ಮಾತಿನಿಂದ ಫಲಾಯನ ಮಾಡಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮೋದಿಯವರ ಹಿಂದಿನ ಭಾಷಣಗಳಿಗೂ ಇಂದಿನ ಭಾಷಣಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಕಲಬುರಗಿಗೆ ಬಂದು ಖರ್ಗೆಯವರ ಕುರಿತು ಒಂದೇ ಒಂದು ಮಾತನಾಡದ ಮೋದಿ ನಡೆ ಈಗ ಎಲ್ಲೆಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅಲ್ಲದೆ ಮೋದಿ ತಮ್ಮ ಭಾಷಣದಲ್ಲಿ ಎಲ್ಲೂ ತಮ್ಮ ಕುರಿತು ಸೊಲ್ಲೆತ್ತದ ಬಗ್ಗೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಮೋದಿ ಭಾಷಣ ನೀರಸವಾಗಿ ಅಂತ್ಯ ಕಂಡಿದೆ.

ಲೋಕಸಭಾ ಚುನಾವಣೆಗೆ ಮುನ್ನವೇ ಸಮ್ಮಿಶ್ರ ಸರಕಾರವನ್ನು ಬೀಳಿಸಬೇಕು ಎಂದು ಪಣ ತೊಟ್ಟಿರುವ ರಾಜ್ಯ ಬಿಜೆಪಿ ಘಟಕಕ್ಕೆ ಇಂದಿನ ಕಲಬುರಗಿ ಸಮಾವೇಶ ಬಲ ತರಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಇಂದಿನ ಮೋದಿ ಭಾಷಣ ರಾಜ್ಯ ರಾಜಕಾರಣದಲ್ಲಿ ಯಾವ ಮೋಡಿಯೂ ಮಾಡದಿರುವ ಸಾಧ್ಯತೆಯನ್ನು ವಿಶ್ಲೇಷಕರು ಮುಂದಿಡುತ್ತಿದ್ದಾರೆ.