samachara
www.samachara.com
ಬಿಎಸ್‌ವೈ V/S ಹೈಕಮಾಂಡ್: ‘ಪರಿವಾರದ ಜಿಲ್ಲೆ’ಯಲ್ಲೇ ಮೊದಲ ಸ್ಫೋಟ ನಿರೀಕ್ಷಿಸಿ...
COVER STORY

ಬಿಎಸ್‌ವೈ V/S ಹೈಕಮಾಂಡ್: ‘ಪರಿವಾರದ ಜಿಲ್ಲೆ’ಯಲ್ಲೇ ಮೊದಲ ಸ್ಫೋಟ ನಿರೀಕ್ಷಿಸಿ...

ಕರ್ನಾಟಕ ಬಿಜೆಪಿ ಸಂಘಟನಾತ್ಮಕವಾಗಿ ಉಳಿದ ಪಕ್ಷಗಳಿಗೆ ಹೋಲಿಸಿದರೆ ಹೆಚ್ಚು ತಳಮಟ್ಟಕ್ಕೆ ಇಳಿದಿದೆ. ಶಕ್ತಿ ಕೇಂದ್ರಗಳ ಹೆಸರಿನಲ್ಲಿ ಬೂತ್ ಮಟ್ಟದ ಮತದಾರರನ್ನು ತಲುಪುವ ಕೆಲಸ ಆರಂಭಿಸಿದೆ. ಆದರೆ...

‘ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿ, ಕರ್ನಾಟಕದಲ್ಲಿ ಬಿಜೆಪಿಗೆ 22 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಹಾಯಕವಾಗಲಿದೆ…’ ಎಂಬರ್ಥದ ವಿವಾದಾತ್ಮಕ ಹೇಳಿಕೆ ನೀಡಿದವರು ಕರ್ನಾಟಕ ಬಿಜೆಪಿಯ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ.

ಅವರ ಈ ಹೇಳಿಕೆ ಬಿಎಸ್‌ವೈ ಎಂಬ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗುವಂತೆ ಮಾಡಿತ್ತು. ಬಿಜೆಪಿ ದೊಡ್ಡ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿತ್ತು.

ಹಾಗಾದರೆ, 75 ವರ್ಷದ, ಸುಮಾರು 45 ವರ್ಷಗಳ ರಾಜಕೀಯ ಜೀವನವನ್ನು ಕಂಡ ಯಡಿಯೂರಪ್ಪ ಯಾಕೆ ಇಂತಹದೊಂದು ಹೇಳಿಕೆ ನೀಡಿದರು?

ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ ಕರ್ನಾಟಕ ಬಿಜೆಪಿ ಒಳಗೆ ಇನ್ನೂ ಜೀವಂತವಾಗಿರುವ, ಬಹುಶಃ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವೇಳೆ ಭುಗಿಲೇಳುವ ‘ನಾಯಕತ್ವ ಕಲಹ’ದ ಮುನ್ಸೂಚನೆಯೊಂದು ಸಿಗುತ್ತದೆ.

ಕಲಬುರಗಿಯ ಬುಧವಾರದ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಬಿ. ಎಸ್. ಯಡಿಯೂರಪ್ಪ. 
ಕಲಬುರಗಿಯ ಬುಧವಾರದ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಬಿ. ಎಸ್. ಯಡಿಯೂರಪ್ಪ. 
/ಬಿಜೆಪಿ ಕರ್ನಾಟಕ. 

ಕಲಬುರಗಿಯ ಬಿಸಿಲಿನಲ್ಲಿ:

ಬುಧವಾರ ಪ್ರಧಾನಿ ನರೇಂದ್ರ ಮೋದಿ ಕಲಬುರಗಿಯ ಎಂ.ವಿ. ಮೈದಾನದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಬಂದು ಕುಳಿತಾಗ ವಾತಾವರಣದ ತಾಪಮಾನ 36° ಸೆಲ್ಸಿಯಸ್ ಮುಟ್ಟಿತ್ತು. ವೇದಿಕೆಯ ನಟ್ಟ ನಡುವೆ ಕುಳಿತಿದ್ದ ಪ್ರಧಾನಿ ಬಲಕ್ಕೆ ಕುಳಿತಿದ್ದವರು ಕೇಂದ್ರ ಸಚಿವ ಸದಾನಂದ ಗೌಡ. ಅವರ ಪಕ್ಕದಲ್ಲಿ ಬಿ. ಎಸ್. ಯಡಿಯೂರಪ್ಪ ಆಸೀನರಾಗಿದ್ದರು. ಪ್ರಧಾನಿ ವೇದಿಕೆ ಏರುವಾಗ ಎಲ್ಲರ ಕೈಕುಲುಕಿದರು. ಯಡಿಯೂರಪ್ಪ ಕೂಡ ಕೈ ಕೊಟ್ಟು, ಅಭಿನಂದಿಸಿ ಸುಮ್ಮನಾದರು. ಮತ್ತೆ ಅವರು ಆಗಾಗ್ಗೆ ಪ್ರಧಾನಿ ಎಡೆಗೆ ನಿರ್ಲಿಪ್ತವಾಗಿ ನೋಡುತ್ತಿದ್ದದ್ದು ಬಿಟ್ಟರೆ, ಮತ್ಯಾವ ಭಾವನೆಯೂ ಅವರ ಮುಖದಲ್ಲಿ ಕಾಣಿಸುತ್ತಿರಲಿಲ್ಲ.

ಮಾತಿಗೆ ನಿಂತಾಗಲೂ ಬರೆದುಕೊಂಡು ಬಂದಿದ್ದ ಇಂಗ್ಲಿಷ್ ಭಾಷಣವನ್ನು ಯಡಿಯೂರಪ್ಪ ಓದಿದರು. ನಂತರ ಕನ್ನಡದಲ್ಲಿ ಒಂದಷ್ಟು ಅಂಕಿ ಅಂಶಗಳ ಸಮೇತ ಟೀಕೆಗಳನ್ನು ಮುಂದಿಟ್ಟರು. ಈ ಸಮಯದಲ್ಲಿ ಮೋದಿ ಮುಖದಲ್ಲಿ ನಿರ್ಲಿಪ್ತತೆ ಎದ್ದು ಕಾಣಿಸುತ್ತಿತ್ತು. ಕೊನೆಯಲ್ಲಿ ಯಡಿಯೂರಪ್ಪ ‘ನರೇಂದ್ರ ಮೋದಿಜಿ ಕೀ ಜೈ’ ಎಂದರು. ಎರಡನೇ ಬಾರಿ, ‘ನರೇಂದ್ರ ಮೋದಿ ಕೀ ಜೈ’ ಎನ್ನುವಾಗ ತಡವರಿಸಿದರು, ‘ಜಿ’ಯನ್ನು ಕೈಬಿಟ್ಟರು.

ಮೇಲ್ನೋಟಕ್ಕೆ ಒಂದು ಸಭಾ ಕಾರ್ಯಕ್ರಮದ ಅವಸರದಲ್ಲಿ ನಡೆಯುವ ವಿರೋಧಾಭಾಸಗಳಿವು ಅಂತ ಅನ್ನಿಸಿದರೂ, ಬಿಎಸ್‌ವೈ ಮತ್ತು ಬಿಜೆಪಿ ಕೇಂದ್ರ ನಾಯಕತ್ವದ ನಡುವೆ ಇಂತಹದೊಂದು ಮುನಿಸು ಆಗಾಗ್ಗೆ, ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ.

“ಒಂದು ಕಾಲದಲ್ಲಿ ಬಿಜೆಪಿಗೆ ಯಾವ ಅಲೆಯೂ ಇರಲಿಲ್ಲ. ಅವತ್ತಿಗೆ ಮೋದಿ ಹೆಸರು ದೇಶದ ರಾಜಕಾರಣದಲ್ಲಿ ಇನ್ನೂ ಚಾಲ್ತಿಗೆ ಬಂದಿರಲಿಲ್ಲ. ಹೀಗಿರುವಾಗಲೂ 2009ರಲ್ಲಿ ಕರ್ನಾಟಕದ ಬಿಜೆಪಿ ಸುಮಾರು 19 ಸಂಸದರನ್ನು ಲೋಕಸಭೆಗೆ ಕಳುಹಿಸಿತ್ತು. ಅದೂ ಇಡೀ ದೇಶದಲ್ಲಿ ಬಿಜೆಪಿಯ ಪ್ರಚಾರ ಮಕಾಡೆ ಮಲಗಿದ ಸಮಯದಲ್ಲಿ; ಇದೇ ದಾಖಲೆ. ಮೋದಿ ಅಲೆ, ಬಿಜೆಪಿಯ ಅಬ್ಬರದ ಪ್ರಚಾರ, ಬಲಗೊಂಡ ಆರ್ಥಿಕತೆಗಳ ಹೊರತಾಗಿಯೂ ಕರ್ನಾಟಕ ಬಿಜೆಪಿಗೆ ಇದನ್ನು ಮುಟ್ಟಲು ಈವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಯಡಿಯೂರಪ್ಪ ಅವರಿಗೆ ಕರ್ನಾಟಕ ಬಿಜೆಪಿಯ ವಿಚಾರದಲ್ಲಿ ಕೇಂದ್ರ ನಾಯಕತ್ವ ಮೂಗು ತೂರಿಸುವುದು ಇಷ್ಟವಿಲ್ಲ,’’ ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕರೊಬ್ಬರು.

ಮತ್ತು, “ಇದೇ ಕಾರಣಕ್ಕೆ ಬಾಲಕೋಟ್ ದಾಳಿಯ ಸಮಯದಲ್ಲಿ ಯಡಿಯೂರಪ್ಪ ಬಾಯಲ್ಲಿ ವಿವಾದ ಹುಟ್ಟುಹಾಕುವ ಹೇಳಿಕೆ ಹೊರಬಿದ್ದಿರಬಹುದು. ಇದರಿಂದ ಹೈಕಮಾಂಡ್‌ ಮುಜುಗರಕ್ಕೆ ಒಳಗಾಗಿತ್ತು,’’ ಎಂದವರು ಸಂಶಯ ವ್ಯಕ್ತಪಡಿಸುತ್ತಾರೆ.

ಹೈಕಮಾಂಡ್‌ಗೆ ಬಗ್ಗದ ಬಿಎಸ್‌ವೈ:

ಹಾಗೆ ನೋಡಿದರೆ ಯಡಿಯೂರಪ್ಪ ಮತ್ತು ಹೈಕಮಾಂಡ್ ನಡುವಿನ ಮುನಿಸು ತೀರಾ ಪಕ್ಷದ ಆಂತರಿಕ ವಿಚಾರವಾಗಿ ಉಳಿದಿಲ್ಲ. ಕಾಲಕಾಲಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿಗಳು, ಯಡಿಯೂರಪ್ಪ ಅವರ ಬಗೆಗೆ ಅಸಮಾಧಾನ ಹೊರಹಾಕುವ ಸಂಗತಿಗಳು, ರಾಜ್ಯಾಧ್ಯಕ್ಷ ಸ್ಥಾನ ನಿಭಾವಣೆ ಕುರಿತು ದೂರಗಳು ಹೊರಬೀಳುತ್ತಿರುತ್ತವೆ.

ಉದಾಹರಣೆಗೆ, ಕೆಲವು ದಿನಗಳ ಹಿಂದೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಆಡಿದ ಮಾತುಗಳು. “ಕರ್ನಾಟಕದಲ್ಲಿ ಸರ್ಕಾರ ರಚಿಸಲು ನಾವು ಯಾರ ಬಳಿಯೂ ಭಿಕ್ಷೆ ಬೇಡಬೇಕಿಲ್ಲ. ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿ. ಮರು ವಾರವೇ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳುತ್ತದೆ. ಆ ಜಾಗದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದು ಕೂರುತ್ತದೆ,’’ ಎಂಬುದಾಗಿ ಅಮಿತ್ ಷಾ ರಾಜ್ಯ ನಾಯಕರಿಗೆ ಭರವಸೆ ನೀಡಿದ್ದರು.

ಇದು ಏಕಕಾಲಕ್ಕೆ ‘ಯಡಿಯೂರಪ್ಪ ಸರಕಾರ ರಚನೆಗೆ ಭಿಕ್ಷೆ ಬೇಡುವ ಹಂತಕ್ಕೆ ಇಳಿದಿದ್ದಾರೆ’ ಎಂಬುದನ್ನೂ, ಅದೇ ವೇಳೆ 20 ಸ್ಥಾನಗಳು ಬಂದರೆ ಮಾತ್ರವೇ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಲಿಂಗಾಯತ ಸಮಯದಾಯವನ್ನು ಸಮಾಧಾನಗೊಳಿಸುವ ಪ್ರಯತ್ನವನ್ನು ಅಮಿತ್ ಶಾ ನಡೆಸಿದರು ಎಂದು ವಿಶ್ಲೇಷಿಸಲಾಗಿತ್ತು.

ಇಂತಹ ಹಲವು ಅವಮಾನದ ನಡೆಗಳು, ಹೈಕಮಾಂಡ್‌ನ ಬಲಪ್ರಯೋಗಗಳ ಆಚೆಗೂ ಯಡಿಯೂರಪ್ಪ ಕರ್ನಾಟಕ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿಯೇ ಉಳಿಸಿಕೊಂಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಬಂದಾಗಲೂ ಅವರೇ ನಿರ್ಣಾಯಕ ಪಾತ್ರವಹಿಸುವ ಉಮೇದಿಯಲ್ಲಿದ್ದಾರೆ.

“ಇನ್ನೂ ಶಕ್ತಿ ಕೇಂದ್ರ (ಇದರ ಬಗ್ಗೆ ಪ್ರತ್ಯೇಕ ವರದಿಯನ್ನು ನಿರೀಕ್ಷಿಸಿ)ಗಳ ಸಭೆ ನಡೆದು, ಆಕಾಂಕ್ಷಿಗಳ ವರದಿಯನ್ನು ಹೈಮಾಂಡ್‌ಗೆ ಕಳುಹಿಸಬೇಕಿದೆ. ಜತೆಗೆ ಪರಿವಾರದ ಕಡೆಯಿಂದಲೂ ಸಲಹೆಗಳು ಬರಬಹುದು. ಆದರೆ ಅಂತಿಮವಾಗಿ ಬಿ- ಫಾರಂ ಪಡೆದುಕೊಳ್ಳುವ ಅಭ್ಯರ್ಥಿಗಳ ಪಟ್ಟಿ ಅಮಿತ್ ಶಾ ಕಡೆಯಿಂದಲೇ ಬರುವ ಸಾಧ್ಯತೆ ಇದೆ. ಒಂದೆರಡು ಕ್ಷೇತ್ರಗಳ ವಿಚಾರದಲ್ಲಿ ಇದು ನಮ್ಮ ರಾಜ್ಯ ನಾಯಕರು ಮತ್ತು ಅಮಿತ್ ಶಾ ನಡುವೆ ಮತ್ತೊಂದು ಸುತ್ತಿನ ಅಸಮಾಧಾನಕ್ಕೆ ಕಾರಣವಾಗಬಹುದು,’’ ಎನ್ನುತ್ತಾರೆ ಬಿಜೆಪಿಯ ಒಳಹೊರಗು ಬಲ್ಲ ರಾಜಕಾರಣಿಯೊಬ್ಬರು.

ಇಲ್ಲಿ ಒಂದೆರಡು ಕ್ಷೇತ್ರಗಳು ಎಂದು ಹೇಳುತ್ತಾರಾದರೂ, ಅಂತಿಮವಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಅಮಿತ್ ಶಾ ನಡುವೆ ದೊಡ್ಡಮಟ್ಟದ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆಯನ್ನು ಇವರು ‘ಅಫ್‌ ದಿ ರೆಕಾರ್ಡ್‌’ ಹೆಸರಿನಲ್ಲಿ ಮುಂದಿಡುತ್ತಾರೆ.

ಕರ್ನಾಟಕ ರಾಜಕೀಯ ಕಂಡ ಅಪರೂಪದ ಜೋಡಿ ಶೋಭ- ಯಡಿಯೂರಪ್ಪ. ಬಿಎಸ್‌ವೈರನ್ನು ‘ತಂದೆ ಸಮಾನ’ ಎನ್ನುವ ಶೋಭ ಅವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದು ಬಿಜೆಪಿ ಒಳಗಿರುವ ಆತಂಕ. 
ಕರ್ನಾಟಕ ರಾಜಕೀಯ ಕಂಡ ಅಪರೂಪದ ಜೋಡಿ ಶೋಭ- ಯಡಿಯೂರಪ್ಪ. ಬಿಎಸ್‌ವೈರನ್ನು ‘ತಂದೆ ಸಮಾನ’ ಎನ್ನುವ ಶೋಭ ಅವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದು ಬಿಜೆಪಿ ಒಳಗಿರುವ ಆತಂಕ. 

ಶೋಭ ಎಂಬ ಅಧಿನಾಯಕಿ:

ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ, ಇವತ್ತು ಪ್ರತ್ಯೇಕ ಜಿಲ್ಲೆಯಾಗಿರುವ ಉಡುಪಿ, ಲೋಕಸಭೆಯ ವಿಚಾರಕ್ಕೆ ಬಂದರೆ ವಿಚಿತ್ರವಾದ ಮತಕ್ಷೇತ್ರ. ಮಲೆನಾಡಿನ ಚಿಕ್ಕಮಗಳೂರನ್ನು ತನ್ನೊಳಗೆ ಎಳೆದುಕೊಂಡು, ಅದೇ ವೇಳೆ ಕುಂದಾಪುರ ಪಕ್ಕದ ಮರವಂತೆ (ಬೈಂದೂರು ಕ್ಷೇತ್ರ)ಯನ್ನು ಬಿಟ್ಟುಕೊಟ್ಟ ಲೋಕಸಭಾ ಕ್ಷೇತ್ರವನ್ನು ಸದ್ಯ ಪ್ರತಿನಿಧಿಸುತ್ತಿರುವವರು ಶೋಭಾ ಕರಂದ್ಲಾಜೆ.

ಕೇವಲ ಬಿಜೆಪಿ ಮಾತ್ರ ಅಲ್ಲ, ಸಂಘ ಪರಿವಾರವೂ ಕೂಡ ಬೂತ್ ಮಟ್ಟದಲ್ಲಿ ತನ್ನ ಸಂಘಟನೆಯನ್ನು ಇಲ್ಲಿ ಗಟ್ಟಿಗೊಳಿಸಿಕೊಂಡಿರುವ ಸಮಯ ಇದು. ಹೀಗಾಗಿ ‘ಪರಿವಾರ ಜಿಲ್ಲೆ’ ಎಂದು ಕರೆಸಿಕೊಳ್ಳುವ ಉಡುಪಿಯ ರಾಜಕಾರಣ ರಾಜ್ಯ ನಾಯಕರ ಹೊರತಾಗಿಯೂ ಬಿಜೆಪಿಗೆ ಪೂರಕವಾಗಿಯೇ ಇದೆ. “ಇಲ್ಲಿ ನೀವೇ ಅಮಿತ್ ಶಾ ಕಡೆಯಿಂದ ಟಿಕೆಟ್ ಪಡೆದುಕೊಂಡು ಬಂದರೂ ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ,’’ ಎನ್ನುತ್ತಾರೆ ಕುಂದಾಪುರದ ತಾಲೂಕು ಬಿಜೆಪಿ ಘಟಕದ ಕಾರ್ಯದರ್ಶಿ ಭಾಸ್ಕರ್ ಬಿಲ್ಲವ.

ಹೀಗೆ, ಈ ಲೋಕಸಭಾ ಕ್ಷೇತ್ರ ಬಿಜೆಪಿಗೆ ಪೂರಕವಾಗಿ ಕಾಣಿಸುತ್ತಿದೆಯಾದರೂ, ಅಂತರಾಳದಲ್ಲಿ ಅಸಮಾಧಾನವೊಂದು ಇಲ್ಲಿ ಹೊಗೆಯಾಡುತ್ತಿದೆ. ಶೋಭಾ ಕರಂದ್ಲಾಜೆ ನಾಯಕತ್ವವನ್ನು ಒಪ್ಪುವ ಮನಸ್ಥಿತಿಯಿಂದ ಸ್ಥಳೀಯ ರಾಜಕೀಯ ದೂರ ಸರಿದಿದೆ.

ಇದಕ್ಕೆ ಕಳೆದ ನಾಲ್ಕೂ ಮುಕ್ಕಾಲು ವರ್ಷಗಳಲ್ಲಿ ಶೋಭಾ ನಡೆದುಕೊಂಡು ರೀತಿ ಹಾಗೂ ರಾಜಕೀಯವಾಗಿ ಜಿಲ್ಲೆಯನ್ನು ಸಮರ್ಪಕವಾಗಿ ಪ್ರತಿನಿಧಿಸದೇ ಹೋಗಿದ್ದು ಮೇಲ್ನೋಟದ ಕಾರಣಗಳು. ಆಳದಲ್ಲಿ ಯಡಿಯೂರಪ್ಪ- ಶೋಭಾ ಕರಂದ್ಲಾಜೆ ಕುರಿತು ರಾಜ್ಯ ಬಿಜೆಪಿಯಲ್ಲಿರುವ ಅಸಮಾಧಾನದ ಪರಿಣಾಮಗಳು ಲೋಕಸಭೆಗೆ ಮರು ಆಯ್ಕೆ ಬಯಸುವ ಶೋಭಾ ಆಸೆಗೆ ಅಡ್ಡಿಯಾಗಿ ನಿಂತಿವೆ.

ಇತ್ತೀಚೆಗಷ್ಟೆ ಶೋಭಾ ಕರಂದ್ಲಾಜೆ ಗೋ ಬ್ಯಾಕ್ ಅಥವಾ ಶೋಭಾ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ವಾಪಾಸ್ ಹೋಗಿ ಎಂಬ ಸ್ಥಳೀಯ ಕೂಗಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿದ್ದವು.

ಶೋಭಾ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡವರು ಸಂಘ ಪರಿವಾರದ ಜತೆಗೆ ಇರುವವರು. ಬಿಜೆಪಿಯ ಸ್ಥಳೀಯ ಪದಾಧಿಕಾರಿಗಳು ಈ ಅಭಿಯಾನದಿಂದ ಮೇಲ್ನೋಟಕ್ಕೆ ಅಂತರವನ್ನು ಕಾಯ್ದುಕೊಂಡರೂ, ಅಂತರಾಳದಲ್ಲಿ ಶೋಭಾ ನಾಯಕತ್ವ ಒಪ್ಪದ ವಿರೋಧಿ ಪಾಳಯದ ‘ಯುವಕರ’ ಬೆಂಬಲಕ್ಕೆ ನಿಂತಿದ್ದಾರೆ ಮತ್ತವರಿಗೆ ಪರಿವಾರದ ಹಿರಿಯ ನಾಯಕರು, ಪಕ್ಷದ ವರಿಷ್ಠ ನಾಯಕರ ಬೆಂಬಲವೂ ಇದೆ ಎಂಬ ಶಂಕೆ ಯಡಿಯೂರಪ್ಪ ಅವರದ್ದು. ಇದು ಕೂಡ ಯಡಿಯೂರಪ್ಪ ಕೇಂದ್ರ ನಾಯಕತ್ವದ ವಿರುದ್ಧ ಕೆರಳಲು ಕಾರಣವಾಗಿರಬಹುದು ಎಂಬುದು ಸಹಜ ಅನುಮಾನ.

ಜಿಲ್ಲೆಯ ಬಿಜೆಪಿ ಶಾಸಕರೂ ಕೂಡ ಖುದ್ದು ರಾಜ್ಯಾಧ್ಯಕ್ಷ ಯಡಿಯೂರಪ್ಪರಿಗೆ ಶೋಭಾ ಕುರಿತು ಇರುವ ಸ್ಥಳೀಯ ಅಸಮಾಧಾನಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಆದರೆ, ‘ನೀವೇ ಅದನ್ನು (ಅಸಮಾಧಾನ) ಹೋಗಲಾಡಿಸಿ’ ಎಂದು ಯಡಿಯೂರಪ್ಪ ಶಾಸಕರಿಗೆ ತಾಕೀತು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತವೆ ಪಕ್ಷದ ಸ್ಥಳೀಯ ಮೂಲಗಳು.

ದೇಶದ ಭವಿಷ್ಯವನ್ನು ಮುಂದಿನ ಐದು ವರ್ಷಗಳಿಗೆ ನಿರ್ಧರಿಸಲಿರುವ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ತಯಾರಿಯಲ್ಲಿವೆ. ಇಂತಹ ಸಮಯದಲ್ಲಿ ಕರ್ನಾಟಕ ಬಿಜೆಪಿ ಸಂಘಟನಾತ್ಮಕವಾಗಿ ಉಳಿದ ಪಕ್ಷಗಳಿಗೆ ಹೋಲಿಸಿದರೆ ಹೆಚ್ಚು ತಳಮಟ್ಟಕ್ಕೆ ಇಳಿದಿದೆ. ಶಕ್ತಿ ಕೇಂದ್ರಗಳ ಹೆಸರಿನಲ್ಲಿ ಬೂತ್ ಮಟ್ಟದ ಮತದಾರರನ್ನು ತಲುಪುವ ಕೆಲಸ ಆರಂಭಿಸಿದೆ.

ಆದರೆ ಅಭ್ಯರ್ಥಿಗಳ ಆಯ್ಕೆ ವಿಚಾರ ಪಕ್ಷದ ಗುರಿಯನ್ನು ತೂಗುಯ್ಯಾಲೆಗೆ ಒಡ್ಡಬಹುದು ಎಂಬ ಅನುಮಾನಗಳನ್ನು ಪಕ್ಷದ ಮೂಲಗಳು ಹೊರಹಾಕುತ್ತಿವೆ. ಮತ್ತು, ಅದಕ್ಕೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಎಂಬ ಬಿಜೆಪಿಯ ನೆಚ್ಚಿನ ಕ್ಷೇತ್ರವೇ ಮುನ್ನುಡಿ ಬರೆಯುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಹೇಗಿದೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ? ಶೋಭಾ ಬಗ್ಗೆ ಇರುವ ಅಸಮಾಧಾನದ ತೀವ್ರತೆ ಎಷ್ಟಿದೆ? ಬಿಜೆಪಿ ಬಳಿ ಇರುವ ಇತರೆ ಆಯ್ಕೆಗಳಾದರೂ ಏನು? ನಾಯಕತ್ವದ ನಿರ್ಧಾರ ತಳಮಟ್ಟದಲ್ಲಿ ಬೀರುವ ಪರಿಣಾಮಗಳು ಹೇಗಿರಲಿವೆ? ನಿರೀಕ್ಷಿಸಿ ನಾಳಿನ ‘ಗ್ರೌಂಡ್ ರಿಪೋರ್ಟ್‌’ನಲ್ಲಿ…