samachara
www.samachara.com
ಕಲುಷಿತ ನಗರಗಳ ಸಮೀಕ್ಷೆ; ಭಾರತದ ನಗರವಾಸಿಗಳಿಗೆ ಎಚ್ಚರಿಕೆ ಗಂಟೆ...
COVER STORY

ಕಲುಷಿತ ನಗರಗಳ ಸಮೀಕ್ಷೆ; ಭಾರತದ ನಗರವಾಸಿಗಳಿಗೆ ಎಚ್ಚರಿಕೆ ಗಂಟೆ...

ಬೆಂಗಳೂರಿನ ವಿಚಾರಕ್ಕೆ ಬಂದರೆ ಸದ್ಯಕ್ಕೆ ಕರ್ನಾಟಕದ ರಾಜಧಾನಿ ಮಾಲಿನ್ಯಕಾರಕ ನಗರಗಳಲ್ಲಿ 309ನೇ ಸ್ಥಾನದಲ್ಲಿದ್ದು ಸರಾಸರಿ ಏರ್‌ ಕ್ವಾಲಿಟಿ ಇಂಡೆಕ್ಸ್34.5 ಇದೆ.

ವಾಯು ಮಾಲಿನ್ಯ; ಇವತ್ತು ಹೆಚ್ಚು ಕಡಿಮೆ ದೇಶದ ಎಲ್ಲಾ ನಗರಗಳನ್ನು ಕಾಡುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ. ಇದಕ್ಕೆ ಕನ್ನಡಿ ಹಿಡಿದಿರುವ ಜಾಗತಿಕ ಸಮೀಕ್ಷೆಯೊಂದು ಇಡೀ ದಕ್ಷಿಣ ಭಾರತದ ನಗರಗಳು ‘ರೆಡ್‌ ಝೋನ್‌’ನಲ್ಲಿವೆ ಎಂದು ಹೇಳಿದೆ. ಭಾರತದ ನಗರಗಳಲ್ಲೀಗ ‘ಅಕ್ಷರಶಃ ಉಸಿರುಗಟ್ಟುವ ವಾತಾವರಣ’ ಇದೆ ಎಂಬುದು ಈ ಸಮೀಕ್ಷೆಯ ತಿರುಳು. ಜತೆಗೆ ಎಚ್ಚರಿಕೆಯ ಗಂಟೆ ಕೂಡ.

ವಿಶ್ವದ ಅತೀ ಹೆಚ್ಚು ವಾಯು ಮಾಲಿನ್ಯ ಹೊಂದಿರುವ, ಜೀವಿಗಳಿಗೆ ಬದುಕಲು ಅಪಾಯಕಾರಿ ವಾತಾವರಣವನ್ನು ಹೊಂದಿರುವ ಟಾಪ್‌ 30 ನಗರಗಳಲ್ಲಿ 22 ಭಾರತದಲ್ಲಿವೆ.

ರಾಜಧಾನಿ ನವದೆಹಲಿಯ ಉಪನಗರ ಗುರುಗ್ರಾಮ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ವಾಯು ಮಾಲಿನ್ಯ ಹೊಂದಿರುವ ನಗರ ಎಂಬ ಕುಖ್ಯಾತಿ ಗಳಿಸಿದೆ.

‘ಗ್ರೀನ್‌ಪೀಸ್‌’ ಮತ್ತು ‘ಏರ್‌ ವಿಷುವಲ್‌’ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದು ಬಂದಿವೆ.

ಗುರುಗ್ರಾಮದಲ್ಲಿ ಏರ್‌ ಕ್ವಾಲಿಟಿ ಇಂಡೆಕ್ಸ್‌ (ಎಕ್ಯೂಐ) 135.8 ಇದ್ದು, ಇಲ್ಲಿನ ಗಾಳಿ ಸಾಮಾನ್ಯ ಆರೋಗ್ಯಕರ ವಾತಾವರಣಕ್ಕಿಂತ ಸರಿ ಸುಮಾರು ಮೂರು ಪಟ್ಟು ಹೆಚ್ಚು ಕಲುಷಿತಗೊಂಡಿದೆ. ಇದರಿಂದ ಇಲ್ಲಿನ ಹೆಚ್ಚಿನ ಜನರು ಆರೋಗ್ಯ ಸಮಸ್ಯೆ ಎದುರಿಸಬಹುದು ಎಂದು ವರದಿ ಎಚ್ಚರಿಸಿದೆ.

2ನೇ ಸ್ಥಾನದಲ್ಲಿ ಗಾಜಿಯಾಬಾದ್‌ ಇದ್ದು ನಂತರದ ಸ್ಥಾನದಲ್ಲಿ ಕ್ರಮವಾಗಿ ಪಾಕಿಸ್ತಾನದ ಫೈಸಲಾಬಾದ್‌, ಫರೀದಾಬಾದ್‌, ಭಿವಾಡಿ, ನೋಯ್ಡಾ, ಪಾಟ್ನಾ, ಚೀನಾದ ಹೋಟಾನ್‌, ಲಕ್ನೋ ಮತ್ತು ಪಾಕಿಸ್ತಾನದ ಲಾಹೋರ್‌ ಇದೆ. ಹೀಗೆ ಟಾಪ್‌ 10 ಕಲುಷಿತಗೊಂಡ ನಗರಗಳಲ್ಲಿ 7 ನಗರಗಳು ಭಾರತದಲ್ಲೇ ಇವೆ. ಉಳಿದ ಮೂರರಲ್ಲಿ ಎರಡು ಪಾಕಿಸ್ತಾನದಲ್ಲಿದ್ದರೆ ಮತ್ತೊಂದು ಚೀನಾದಲ್ಲಿದೆ.

ರಾಜಧಾನಿ ನವದೆಹಲಿ 11ನೇ ಸ್ಥಾನದಲ್ಲಿದ್ದರೆ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಣಾಸಿ 14ನೇ ಸ್ಥಾನದಲ್ಲಿದೆ.

ಜಗತ್ತಿನ ಟಾಪ್‌ 30 ಮಾಲಿನ್ಯ ಕಾರಕ ನಗರಗಳು.
ಜಗತ್ತಿನ ಟಾಪ್‌ 30 ಮಾಲಿನ್ಯ ಕಾರಕ ನಗರಗಳು.
/ಏರ್‌ವಿಷುವಲ್

ರೆಡ್‌ ಝೋನ್‌ನಲ್ಲಿ ದಕ್ಷಿಣ ಏಷ್ಯಾ:

ವಿಶ್ವದ ಉಳಿದೆಲ್ಲಾ ಭಾಗಗಳಿಗೆ ಹೋಲಿಸಿದರೆ ಚೀನಾ ಮತ್ತು ದಕ್ಷಿಣ ಏಷ್ಯಾದ ನಗರಗಳು ಅತೀ ಹೆಚ್ಚು ಮಲಿನಗೊಂಡಿವೆ. ಟಾಪ್‌ 30ರ ಪಟ್ಟಿಯಲ್ಲಿರುವ ಅಷ್ಟೂ ನಗರಗಳು ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಕ್ಕೆ ಸೇರಿವೆ. ಅದರಲ್ಲೂ ಈ ಇವುಗಳಲ್ಲಿ ಭಾರತದ ಪಾಲು 22 ನಗರಗಳು.

ಈ ಪ್ರಮಾಣ ಯಾವ ಮಟ್ಟಕ್ಕೆ ಇದೆ ಎಂದರೆ ಅತಿ ಹೆಚ್ಚ ವಾಯು ಮಾಲಿನ್ಯಕ್ಕೆ ಗುರಿಯಾದ ಮೊದಲ 100 ನಗರಗಳಲ್ಲಿ 94 ಚೀನಾ ಮತ್ತು ದಕ್ಷಿಣ ಏಷ್ಯಾದಲ್ಲಿವೆ. ಇಲ್ಲಿನ ವಾತಾವರಣ ಹದಗೆಟ್ಟಿದ್ದು, ಜೀವಿಸಲು ಯೋಗ್ಯವಾಗಿಲ್ಲ ಎಂಬುದಾಗಿ ವರದಿ ಹೇಳುತ್ತಿದೆ.

ರೆಡ್‌ ಝೋನ್‌ನಲ್ಲಿ ಚೀನಾ ಮತ್ತು ದಕ್ಷಿಣ ಏಷ್ಯಾದ ನಗರಗಳು. ಈ ಪ್ರದೇಶದಲ್ಲಿ ಒಂದು ಪೂರ್ಣ ಪ್ರಮಾಣದ ಯುದ್ಧವೂ ನಡೆದು, ಅಣು ಬಾಂಬ್‌ಗಳು ಸ್ಫೋಟಗೊಂಡರೆ ಜೀವ ಸಂಕುಲದ ಕತೆ ಏನಾಗಬಹುದು? 
ರೆಡ್‌ ಝೋನ್‌ನಲ್ಲಿ ಚೀನಾ ಮತ್ತು ದಕ್ಷಿಣ ಏಷ್ಯಾದ ನಗರಗಳು. ಈ ಪ್ರದೇಶದಲ್ಲಿ ಒಂದು ಪೂರ್ಣ ಪ್ರಮಾಣದ ಯುದ್ಧವೂ ನಡೆದು, ಅಣು ಬಾಂಬ್‌ಗಳು ಸ್ಫೋಟಗೊಂಡರೆ ಜೀವ ಸಂಕುಲದ ಕತೆ ಏನಾಗಬಹುದು? 
/ಸಿಎನ್‌ಎನ್‌

ಆರೋಗ್ಯ ಸಮಸ್ಯೆಗೆ ನಾಂದಿ:

ವಾಯು ಮಾಲಿನ್ಯ ಸಹಜವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ದೇಶಗಳ ಆರ್ಥಿಕತೆಗೂ ಹೊರೆಯಾಗುತ್ತದೆ ಎಂದು ವರದಿ ಹೇಳಿದೆ.

ವಾಯು ಮಾಲಿನ್ಯದಿಂದಾಗಿ ಅವಧಿಗೂ ಮುನ್ನವೇ ಜನರು ಸಾವಿಗೀಡಾಗಬೇಕಾಗುತ್ತದೆ. ಮುಂದಿನ ಒಂದು ವರ್ಷ ಅವಧಿಯಲ್ಲಿ ಜಗತ್ತಿನ 70 ಲಕ್ಷಕ್ಕೂ ಅಧಿಕ ಜನರು ಅವಧಿಗೂ ಮುನ್ನ ಅಸುನೀಗಲಿದ್ದಾರೆ. ಅದಕ್ಕೆ ಅವರು ನಗರ ಪ್ರದೇಶಗಳಲ್ಲಿ ಉಸಿರಾಡುವ ಗಾಳಿಯ ಕೊಡುಗೆಯೂ ಇದೆ ಎಂದು ವರದಿ ಹೇಳಿದೆ.

“ವಾಯು ಮಾಲಿನ್ಯ ನಮ್ಮ ದಿನ ನಿತ್ಯದ ಜೀವನ ಮತ್ತು ಭವಿಷ್ಯವನ್ನೇ ಕಿತ್ತುಕೊಳ್ಳಲಿದೆ,” ಎಂಬುದಾಗಿ ದಕ್ಷಿಣ ಏಷ್ಯಾದ ಗ್ರೀನ್‌ಪೀಸ್‌ ನಿರ್ದೇಶಕ ಯೆಬ್‌ ಸಾನೋ ‘ಸಿಎನ್‌ಎನ್‌’ಗೆ ತಿಳಿಸಿದ್ದಾರೆ.

ಇದಲ್ಲದೆ ವಾಯು ಮಾಲಿನ್ಯದಿಂದ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯಾಗಲಿದ್ದು, ಆರೋಗ್ಯ ನಷ್ಟದಿಂದಾಗಿ ಅನಗತ್ಯ ವೈದ್ಯಕೀಯ ವೆಚ್ಚಗಳಾಗಲಿವೆ. ಆರೋಗ್ಯದ ಮೇಲಿನ ಪರಿಣಾಮ ಜೇಬಿಗೂ ಭಾರವಾಗಲಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟು 3,000 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಶೇಕಡಾ 64ರಷ್ಟು ನಗರಗಳಲ್ಲಿ ‘ಪಿಎಂ2.5’ ಮಾಪನದ ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಮೀರಿದೆ ಎಂಬುದಾಗಿ ವರದಿ ಹೇಳಿದೆ.

ಗಾಳಿಯಲ್ಲಿರುವ ಸಲ್ಫೇಟ್‌, ನೈಟ್ರೇಟ್ಸ್‌ ಮತ್ತು ಕಪ್ಪು ಇಂಗಾಲದ ಅಂಶಗಳನ್ನು ‘ಪಿಎಂ2.5’ ಎಂಬ ಹೆಸರಿನಲ್ಲಿ ಅಳೆಯಲಾಗುತ್ತದೆ. ಇದು ಹೆಚ್ಚಾಗಿದ್ದಲ್ಲಿ ಶಾಸಕೋಶ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮರಗಳನ್ನು ಹೆಚ್ಚಾಗಿ ಕಡಿಯುತ್ತಿರುವುದು ಮತ್ತು ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳ ದಹನ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂಬುದಾಗಿ ಯೆಬ್‌ ಸಾನೋ ವಿವರಿಸಿದ್ದಾರೆ.

ಸುಧಾರಿಸಿದ ಚೀನಾ:

ವಿಶೇಷವೆಂದರೆ ಕೈಗಾರಿಕಾ ಕ್ರಾಂತಿಯ ನಾಗಾಲೋಟದಲ್ಲಿರುವ ಚೀನಾ ವಾಯು ಮಾಲಿನ್ಯದ ವಿಚಾರದಲ್ಲಿ ಸುಧಾರಣೆಯಾಗಿದೆ. ಒಂದು ಕಾಲದಲ್ಲಿ ವಾಯ ಮಾಲಿನ್ಯಕ್ಕೆ ಪರ್ಯಾಯ ಹೆಸರಾಗಿದ್ದ ಚೀನಾದಲ್ಲಿ ಇವತ್ತು ವಾಯು ಮಾಲಿನ್ಯದ ಪ್ರಮಾಣ ಕುಸಿಯಲು ಆರಂಭವಾಗಿದೆ. ಕಳೆದೊಂದು ವರ್ಷದಲ್ಲಿ ಇಲ್ಲಿನ ನಗರಗಳಲ್ಲಿ ಒಟ್ಟಾರೆ ಶೇಕಡಾ 12ರಷ್ಟು ಮಾಲಿನ್ಯ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ರಾಜಧಾನಿ ಬೀಜಿಂಗ್‌ ಟಾಪ್‌ 100ನೇ ಸ್ಥಾನದಿಂದಲೂ ಹೊರಗುಳಿದಿರುವುದು ಮಾಲಿನ್ಯ ನಿಯಂತ್ರಣ ಚೀನಾ ತೆಗೆದುಕೊಂಡಿರುವ ಕ್ರಮಗಳನ್ನು ಸಾರಿ ಹೇಳುತ್ತಿದೆ.

ಹಳೆಯ ವಾಹನಗಳನ್ನು ಚೀನಾ ನಿಷೇಧಿಸಿತ್ತು. ಜತೆಗೆ ಕಸ, ತಂದೂರಿಯಂತ ಒಲೆಯಲ್ಲಿ ಬೇಯಿಸುವ ಆಹಾರಗಳನ್ನು ನಿಷೇಧಿಸಲಾಗಿತ್ತು. ನಗರದಲ್ಲಿದ್ದ ಕಲ್ಲಿದ್ದಲು ಘಟಕವನ್ನು ಸರಕಾರ ಸ್ಥಗಿತಗೊಳಿಸಿತ್ತು. ಹೀಗಿದ್ದೂ ಪರಿಸ್ಥಿತಿ ನಿಯಂತ್ರಣ ಬರದಿದ್ದಾಗ, ಪೊಲೀಸ್‌ ಇಲಾಖೆಯಲ್ಲಿ ‘ಪರಿಸರ ರಕ್ಷಣಾ ವಿಭಾಗ’ವನ್ನು ತೆರೆಯಲಾಗಿತ್ತು. ಇವೆಲ್ಲದರ ಪರಿಣಾಮ ಇವತ್ತು ಚೀನಾದಲ್ಲಿ ವಾಯು ಮಾಲಿನ್ಯ ಪ್ರಮಾಣ ದೊಡ್ಡ ಮಟ್ಟಕ್ಕೆ ತಗ್ಗಿದೆ.

ಇದೇ ಅವಧಿಯಲ್ಲಿ ಭಾರತದಲ್ಲಿ ಮಾತ್ರ ವಾಯುಮಾಲಿನ್ಯ ಪ್ರಮಾಣ ಏರುತ್ತಲೇ ಇದೆ.

ಇನ್ನು ಬೆಂಗಳೂರಿನ ವಿಚಾರಕ್ಕೆ ಬಂದರೆ ಸದ್ಯಕ್ಕೆ ಕರ್ನಾಟಕದ ರಾಜಧಾನಿ ಮಾಲಿನ್ಯಕಾರಕ ನಗರಗಳಲ್ಲಿ 309ನೇ ಸ್ಥಾನದಲ್ಲಿದ್ದು ಸರಾಸರಿ ಏರ್‌ ಕ್ವಾಲಿಟಿ ಇಂಡೆಕ್ಸ್34.5 ಇದೆ.

ಹೀಗಾಗಿ ಇಲ್ಲಿನ ವಾತಾವರಣ ವಾಸಕ್ಕೆ ಯೋಗ್ಯವಾಗಿದೆ. ಆದರೆ 2017ರಲ್ಲಿ 32.1 ಇದ್ದ ಎಕ್ಯೂಐ 2018ರ ಹೊತ್ತಿಗೆ 2.4ರಷ್ಟು ಏರಿಕೆಯಾಗಿರುವುದು ಗಾಳಿ ಮತ್ತಷ್ಟು ಮಲಿನಗೊಳ್ಳುತ್ತಿರುವುದರ ಸೂಚನೆಯಾಗಿದೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ಸ್ಥಳೀಯಾಡಳಿತ ಇದನ್ನು ಗಮನಿಸಬೇಕಿದೆ.