samachara
www.samachara.com
‘ಹಿಂದುತ್ವ ಪ್ರಯೋಗಾಶಾಲೆ’ಗೆ ಅಧಿಕಾರದ ರುಚಿ ಹತ್ತಿಸಿದ್ದವರು ವಿ. ಧನಂಜಯ್ ಕುಮಾರ್; ಇನ್ನಿಲ್ಲ...
COVER STORY

‘ಹಿಂದುತ್ವ ಪ್ರಯೋಗಾಶಾಲೆ’ಗೆ ಅಧಿಕಾರದ ರುಚಿ ಹತ್ತಿಸಿದ್ದವರು ವಿ. ಧನಂಜಯ್ ಕುಮಾರ್; ಇನ್ನಿಲ್ಲ...

ಕರಾವಳಿ ಭಾಗದ ಮೊದಲ ಬಿಜೆಪಿ ಶಾಸಕ. ದಕ್ಷಿಣ ಭಾರತದ ಮೊದಲ ಬಿಜೆಪಿ ಸಂಸದ ಹಾಗೂ ಸಚಿವ ಎಂಬ ಶ್ರೇಯಕ್ಕೆ ಪಾತ್ರರಾಗಿರುವ ವಿ. ಧನಂಜಯ್ ಕುಮಾರ್ ಅವರ ರಾಜಕೀಯ ಪ್ರಯಾಣ ಅಷ್ಟು ಸಲೀಸಾಗಿರಲಿಲ್ಲ. 

‘ಯಾರೋ ನೆಟ್ಟ ಮರ ಮತ್ಯಾರಿಗೋ ಫಲ ನೀಡುತ್ತೆ’ ಎಂಬ ಮಾತು ಕರ್ನಾಟಕದ ರಾಜಕೀಯದ ವಿಚಾರದಲ್ಲಿ ದಿವಂಗತ ವಿ.ಧನಂಜಯ ಕುಮಾರ್ ಪಾಲಿಗೆ ಮಾತ್ರ ಸೂಕ್ತವಾಗುವಂತಿದೆ.

ಒಂದು ಕಾಲದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ. ಕರಾವಳಿ ಭಾಗದ ಮೊದಲ ಬಾರಿಗೆ ಬಿಜೆಪಿ ಶಾಸಕರಾದವರ ಪೈಕಿ ದನಂಜಯ್ ಕುಮಾರ್ ಕೂಡ ಒಬ್ಬರು. ದಕ್ಷಿಣ ಭಾರತದ ಮೊದಲ ಬಿಜೆಪಿ ಸಂಸದ ಹಾಗೂ ಸಚಿವ. ಕಾಂಗ್ರೆಸ್‌ನ ಜನಾರ್ದನ ಪೂಜಾರಿಯಂತಹ ಹಿರಿಯ ನಾಯಕನಿಗೇ ಮಣ್ಣು ಮುಕ್ಕಿಸಿದವರು.

ಬಿಜೆಪಿ ಇನ್ನೂ ಶೈಶವಾವಸ್ಥೆಯಲ್ಲಿದ್ದ ದಿನಗಳಲ್ಲಿಯೇ ಹೀಗೆ ತನ್ನ ಹೆಸರಿನಲ್ಲಿ ಹತ್ತಾರು ದಾಖಲೆಗಳನ್ನು ಹೊಂದಿದ್ದರು ದನಂಜಯ ಕುಮಾರ್. ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿಸಲಾಗಿದ್ದ ಕರಾವಳಿ ಭಾಗದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿ ಇಂದು ಕರಾವಳಿಯನ್ನು ಕಮಲದ ಕೋಟೆ ಎನ್ನುವಷ್ಟರ ಮಟ್ಟಿಗೆ ಪಕ್ಷವನ್ನು ತಳಮಟ್ಟದಿಂದ ಬೆಳೆಸಿದ್ದವರು. ಸೋಮವಾರ ಅವರು ಬಹು ಅಂಗಾಂಗ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಅದಿನ್ನೂ 80 ರ ದಶಕ. ಆಗಿನ್ನೂ ಬಿಜೆಪಿ ಪಕ್ಷ ರಾಜ್ಯದಲ್ಲಿ ಖಾತೆಯನ್ನೇ ತೆರೆದಿರಲಿಲ್ಲ. ರಾಜ್ಯ ರಾಜಕಾರಣದಲ್ಲಿ ಯಾರೂ ಮುಟ್ಟದ ಎತ್ತರಕ್ಕೆ ಬೆಳೆದಿದ್ದ ಕಾಂಗ್ರೆಸ್ ಒಂದು ಕಡೆಯಾದರೆ, ಜನತಾ ದಳ ಮತ್ತೊಂದು ದೊಡ್ಡ ಪಕ್ಷವಾಗಿತ್ತು. ಈ ಎರಡೂ ಪಕ್ಷಗಳ ನಡುವೆ ಬಿಜೆಪಿಯನ್ನು ಅಧಿಕಾರ ಗದ್ದುಗೆ ಏರುವ ಮಟ್ಟಕ್ಕೆ ಬೆಳೆಸುವುದು ಸಾಧಾರಣ ಮಾತಾಗಿರಲಿಲ್ಲ. ಆದರೆ ಇಂದು ಬಿಜೆಪಿ ಅದನ್ನು ಸಾಧಿಸಿದೆ. ಬಿಜೆಪಿಯ ಈ ಸಾಧನೆಯ ಹಿಂದೆ ದನಂಜಯ ಕುಮಾರ್ ಅವರ ಶ್ರಮವೂ ಸಾಕಷ್ಟಿದೆ.

ಯಡಿಯೂರಪ್ಪನವರ ಜೊತೆ ಸೇರಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೆಲವೇ ಕೆಲವು ನಾಯಕರಲ್ಲಿ ಧನಂಜಯ ಕುಮಾರ್ ಪ್ರಮುಖರು. ಆದರೆ ಬಿಜೆಪಿ ಅಭ್ಯುದಯಕ್ಕೆ ಕಾರಣವಾದ ಅದೇ ನಾಯಕ ತನ್ನ ಕೊನೆಗಾಲದಲ್ಲಿ ಬಿಜೆಪಿಯಿಂದ ದೂರ ಸರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾತ್ರ ವಿಪರ್ಯಾಸ.

ವಕೀಲಿಕೆಯಿಂದ ರಾಜಕೀಯಕ್ಕೆ:

ವಿ. ಧನಂಜಯ ಕುಮಾರ್
ವಿ. ಧನಂಜಯ ಕುಮಾರ್
/ ದಿ ನ್ಯೂಸ್ ಮಿನಿಟ್

70-80ರ ದಶಕ ಭಾರತದ ರಾಜಕೀಯ ರಂಗದಲ್ಲಿ ಹೊಸ ಶಕೆ ಆರಂಭವಾಗಿದ್ದ ಕಾಲವದು. ಇಂದಿರಾ ಗಾಂದಿ ಯುಗದಲ್ಲಿ ಭಾರತದಲ್ಲಿ ಕಾಂಗ್ರೆಸ್ ಹೊರತಾದ ಮತ್ತೊಂದು ಬಲಿಷ್ಠ ರಾಜಕೀಯ ಪಕ್ಷವೇ ಇಲ್ಲದಂತಾಗಿತ್ತು. ಆದರೆ ಅದಕ್ಕೆ ವೇದಿಕೆ ಕಲ್ಪಿಸಿದ್ದು 1975ರ ತುರ್ತು ಪರಿಸ್ಥಿತಿ.

ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ಕಾಲದಲ್ಲಿ ಕಾಂಗ್ರೆಸ್ ವಿರೋಧಿ ನಿಲುವು ಹೊಂದಿದ್ದ ಸಾಕಷ್ಟು ನಾಯಕರು ಜೈಲು ಪಾಲಾಗಿದ್ದರು. ಈ ಕಾಲದಲ್ಲಿ ಇಂದಿರಾ ಗಾಂಧಿಯನ್ನು ಸೋಲಿಸಲೇಬೇಕು ಎಂಬ ಏಕೈಕ ಉದ್ದೇಶದಿಂದ ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಒಂದಾದ ಶಕ್ತಿಯೇ ಜನತಾ ಪಾರ್ಟಿ.

1951ರಲ್ಲೇ ಆರ್‌ಎಸ್‌ಎಸ್‌ ತನ್ನ ರಾಜಕೀಯ ಶಕ್ತಿಯಾಗಿ 'ಭಾರತೀಯ ಜನ ಸಂಘ'ವನ್ನು ಕಟ್ಟಿತ್ತು. ರಾಜಕೀಯ ಪಕ್ಷ ಸ್ಥಾಪನೆಯಲ್ಲಿ ಶ್ಯಾಮ ಪ್ರಸಾದ ಮುಖರ್ಜಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಏಕಾಂಗಿಯಾಗಿ ಇಂದಿರಾ ಕಾಂಗ್ರೆಸ್ ಎದುರು ಗೆಲ್ಲುವುದು ಕಷ್ಟ ಎಂಬ ಅರಿವು ಜನ ಸಂಘಕ್ಕಿತ್ತು. ಇದೇ ಸಂದರ್ಭದಲ್ಲಿ 1977ರಲ್ಲಿ ಇಂದಿರಾ ಗಾಂಧಿಗೆ ವಿರುದ್ಧವಾಗಿ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ವಿರೋಧ ಪಕ್ಷಗಳೆಲ್ಲ ಒಂದಾಗುತ್ತಿದ್ದವು.

ಸೋಷಿಯಲ್ ಪಾರ್ಟಿ, ಭಾರತೀಯ ಲೋಕ ದಳದ ಜೊತೆಗೆ ಜನಸಂಘವೂ ಜನತಾ ಪಾರ್ಟಿಯ ಭಾಗವಾಯಿತು. 1977 ರ ಚುನಾವಣೆಯಲ್ಲಿ ಜನತಾ ಪಾರ್ಟಿ ಅಭುತಪೂರ್ವ ಯಶಸ್ಸು ಗಳಿಸಿತ್ತು. ಮೊರಾರ್ಜಿ ದೇಸಾಯಿ ಪ್ರಧಾನಿ ಹುದ್ದೆಗೆ ಏರುವ ಮೂಲಕ ಕಾಂಗ್ರೇಸೇತರ ಮೊದಲ ಪ್ರಧಾನಿ ಎಂಬ ಶ್ರೇಯಕ್ಕೆ ಪಾತ್ರರಾದರು. ಜನ ಸಂಘ 93 ಸ್ಥಾನಗಳಲ್ಲಿ ಜಯಗಳಿಸಿತ್ತು ಜನಸಂಘದ ಪ್ರಮುಖ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾದರು.

1979 ರಲ್ಲಿ ಜನತಾ ಪಾರ್ಟಿಯಿಂದ ಚರಣ್ ಸಿಂಗ್ ಪ್ರಧಾನಿಯಾದರು. ಆದರೆ 1980ರಲ್ಲಿ ನಡೆದ ಏಳನೇ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಪರಿಣಾಮ ಜನತಾ ಪಾರ್ಟಿ ಎರಡು ಹೋಳಾಗಿತ್ತು. ಅಲ್ಲದೆ ಆರ್‌ಎಸ್‌ಎಸ್‌ನ ಜನಸಂಘ ಅಧಿಕೃತವಾಗಿ ‘ಭಾರತೀಯ ಜನತಾ ಪಾರ್ಟಿ’ (ಬಿಜೆಪಿ) ಎಂಬ ಹೆಸರಿನೊಂದಿದೆ ಕಾಂಗ್ರೆಸ್ ಎದುರಾಗಿ ಹೊಸ ಶಕ್ತಿಯಾಗಿ ಹೊರಹೊಮ್ಮಿತ್ತು.

ರಾಷ್ಟ್ರ ರಾಜಕಾರಣದಲ್ಲಿ ನಡೆದ ಇಂತಹ ಮಹತ್ತರವಾದ ಘಟನೆಗಳು ಕರ್ನಾಟಕದ ಕರಾವಳಿ ಭಾಗದಲ್ಲಿ ವಿ. ಧನಂಜಯ ಕುಮಾರ್ ಎಂಬ ನಾಯಕನ ಉದಯಕ್ಕೆ ಕಾರಣವಾಗುತ್ತದೆ ಹಾಗೂ ಆವರು ಭವಿಷ್ಯದಲ್ಲಿ ದಕ್ಷಿಣ ಭಾರತದ ಮೊದಲ ಸಂಸದನಾಗಿ ದಾಖಲೆ ಬರೆಯುತ್ತಾರೆ.

ಧನಂಜಯ್ ರಾಜಕೀಯ ಮೈಲುಗಲ್ಲು

1951 ಜೂನ್ 4ರಂದು ವೇಣೂರಿನಲ್ಲಿ ಜನಿಸಿದ್ದ ಧನಂಜಯ್ ಮೂಲತಃ ಜೈನ ಸಮೂದಾಯಕ್ಕೆ ಸೇರಿದವರು. ಉಡುಪಿಯ ವೈಕುಂಠ ಬಾಳಿಗ ಕಾನೂನು ಪದವಿ ಕಾಲೇಜಿನಲ್ಲಿ 1973 ರಲ್ಲಿ ಕಾನೂನು ಪದವಿ ಪಡೆದಿದ್ದ ಅವರು ಮಂಗಳೂರಿನಲ್ಲಿ ವಕೀಲಿ ವೃತ್ತಿಯ ಅಭ್ಯಾಸದಲ್ಲಿ ತೊಡಗಿದ್ದರು.

ಆರ್‌ಎಸ್ಎಸ್‌ನ ಪಕ್ಕಾ ಬೆಂಬಲಿಗರಾಗಿದ್ದ ಇವರು ಹಿಂದುತ್ವ ಹಾಗೂ ಬಲಪಂಥೀಯ ಚಿಂತನೆಗಳಿಗೆ ಮಾರುಹೋಗಿದ್ದರು. ಅಲ್ಲದೆ ಆರ್‌ಎಸ್‌ಎಸ್ ಚಿಂತನೆಗಳನ್ನು ಕರಾವಳಿಯಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜನ ಸಂಘದಲ್ಲಿ ಗುರುತಿಸಿಕೊಳ್ಳಲು ಇಷ್ಟು ಸಾಕಿತ್ತು.

ಕರ್ನಾಟಕದಲ್ಲಿ ಬಿಜೆಪಿಯನ್ನು ಬಲಿಷ್ಟ ಪಕ್ಷವಾಗಿ ಬೆಳೆಸುವ ಕನಸು ಹೊತ್ತಿದ್ದ ಬಿಜೆಪಿ 1980ರಲ್ಲಿ ಧನಂಜಯ್ ಅವರಿಗೆ ಬಿಜೆಪಿಯ ಯುವ ಘಟಕದ ನಾಯಕತ್ವ ನೀಡಿತ್ತು. ಅಲ್ಲದೆ 1983ರಲ್ಲಿ ಮಂಗಳೂರಿನಿಂದ ವಿಧಾನಸಭೆಗೆ ಟಿಕೆಟ್ ಘೋಷಿಸಿತ್ತು. ರಾಜಕೀಯ ಆಟದಲ್ಲಿ ತಾವು ಎದುರಿಸಿದ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದ ಧನಂಜಯ್ ಕರಾವಳಿ ಭಾಗದಲ್ಲಿ ಶಾಸಕನಾಗಿ ಆಯ್ಕೆಯಾದ ಬಿಜೆಪಿಯ ಮೊದಲ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಕರಾವಳಿ ಭಾಗದಲ್ಲಿ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಜನ ಈ ಚುನಾವಣೆಯಲ್ಲಿ ಧನಂಜಯ್ ಅವರನ್ನು ಗೆಲ್ಲಿಸಿದ್ದರು. ಈ ಗೆಲುವು ಧನಂಜಯ್ ಅವರನ್ನು ರಾಜ್ಯ ನಾಯಕನ ಮಟ್ಟಕ್ಕೆ ಏರಿಸಿತ್ತು. ಆದರೆ ಈ ಖುಷಿ ತುಂಬಾ ದಿನ ಉಳಿಯಲಿಲ್ಲ. 1985 ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಪ್ರಬಲ ಪೈಪೋಟಿಯ ನಡುವೆಯೂ ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಚುನಾವಣೆಯಲ್ಲಿ ಸೋತರೂ ಸಹ ಹೋರಾಟವನ್ನು ಕೈಬಿಟ್ಟಿರಲಿಲ್ಲ.

ರಥಯಾತ್ರೆ ತಂದ ಗೆಲುವು

1990 ರಲ್ಲಿ ಬಿಜೆಪಿ ಹಿರಿಯ ನಾಯಕ ಚಾಲನೆ ನೀಡಿದ್ದ ರಾಮ ರಥ ಯಾತ್ರೆ.
1990 ರಲ್ಲಿ ಬಿಜೆಪಿ ಹಿರಿಯ ನಾಯಕ ಚಾಲನೆ ನೀಡಿದ್ದ ರಾಮ ರಥ ಯಾತ್ರೆ.
/ ಓಪನ್ ದಿ ಮ್ಯಾಗಝಿನ್

ರಾಷ್ಟ್ರದಲ್ಲಿ ಬಿಜೆಪಿಯನ್ನು ಪ್ರಬಲ ಶಕ್ತಿಯನ್ನಾಗಿಸುವ ಏಕೈಕ ಗುರಿಯೊಂದಿಗೆ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾನಿ 1990 ಸೆಪ್ಟೆಂಬರ್ 25ರಂದು ‘ರಾಮ ರಥ ಯಾತ್ರೆ’ ಕೈಗೊಂಡಿದ್ದರು. ಈ ಯಾತ್ರೆ ದೇಶದೆಲ್ಲೆಡೆ ಬಿಜೆಪಿ ಪರವಾದ ದೊಡ್ಡ ಅಲೆ ಸೃಷ್ಟಿಸಿತ್ತು. 1991ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇದರ ಫಲ ಅನುಭವಿಸಿದ್ದು ಇಂದು ಇತಿಹಾಸ.

ಆದರೆ ಇದೇ ರಥಯಾತ್ರೆ ಬೆನ್ನಿಗೆ 1991ರಲ್ಲಿ ಮಂಗಳೂರಿನಿಂದ ವಿ.ಧನಂಜಯ್ ಕುಮಾರ್ ಅವರಿಗೂ ಬಿಜೆಪಿ ಲೋಕಸಭಾ ಟಿಕೆಟ್ ನೀಡಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕ ಟಿ. ಜನಾರ್ಧನ ಪೂಜಾರಿ ಎದುರು ಸ್ಫರ್ಧೆ ಮಾಡಿದ್ದ ಧನಂಜಯ್ ಅಭುತಪೂರ್ವ ಗೆಲುವು ಸಾಧಿಸುವ ಮೂಲಕ ದಕ್ಷಿಣ ಭಾರತದ ಮೊದಲ ಬಿಜೆಪಿ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜನಾರ್ಧನ ಪೂಜಾರಿ ಎದುರಿನ ಗೆಲುವ ಅವರನ್ನು ಬಿಜೆಪಿಯ ದೊಡ್ಡ ನಾಯಕರ ಪಟ್ಟಿಗೆ ತಂದು ನಿಲ್ಲಿಸಿತ್ತು. ನಿರಂತರವಾಗಿ 1996, 1998 ಹಾಗೂ 1999ರ ಚುನಾವಣೆಯಲ್ಲೂ ಮಂಗಳೂರಿನಿಂದ ಸ್ಫರ್ಧಿಸಿದ್ದ ಇವರು ನಿರಂತರವಾಗಿ ಗೆಲುವು ದಾಖಲಿಸುತ್ತಾ ಬಂದರು.

1996 ರಲ್ಲಿ ಎನ್‌ಡಿಎ ಸರಕಾರದ ಅವಧಿಯಲ್ಲಿ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಧನಂಜಯ್ ಕುಮಾರ್, ಸಂಸದರ ನಿಧಿಯನ್ನು ಶೇ.100 ರಷ್ಟು ಬಳಕೆ ಮಾಡಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು. ಅಲ್ಲದೆ ದಕ್ಷಿಣ ಭಾರತದಿಂದ ಸಚಿವನಾದ ಮೊದಲ ಬಿಜೆಪಿ ಸಂಸದ ಎಂಬ ಪ್ರಶಂಸೆಗೂ ಪಾತ್ರರಾದರು. ಇದಲ್ಲದೆ 1999-2000 ವಾಜಪೇಯಿ ನೇತೃತ್ವದ ಸರಕಾರದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಹಾಗೂ 2000-03ರ ಅವಧಿಯಲ್ಲಿ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವನಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

ಆದರೆ ಚುನಾವಣಾ ರಾಜಕಾರಣದಲ್ಲಿ ಸತತವಾಗಿ ದಾಖಲಿಸಿದ ಗೆಲುವುಗಳು ಹಾಗೂ ಸಚಿವ ಸ್ಥಾನ ಧನಂಜಯ್ ಕುಮಾರ್ ಅವರನ್ನು ಕಾರ್ಯಕರ್ತರಿಂದ ಮಾರುದೂರ ಸರಿಸಿತ್ತು ಎಂಬುದು ಅಷ್ಟೇ ಸತ್ಯ. ಗೆಲುವಿನ ಅಲೆಯಲ್ಲಿದ್ದ ಅವರು ಕಾರ್ಯಕರ್ತರ ಜೊತೆಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂಬ ಆರೋಪವಿದೆ. ಪರಿಣಾಮ 2004 ರ ಲೋಕಸಭಾ ಚುನಾವಣೆ ವೇಳೆ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ದ್ವನಿ ಬದಲಾಗಿತ್ತು. ಬಿಜೆಪಿಗೆ ಸೋಲುವ ಭೀತಿ ಎದುರಾಗಿತ್ತು.

ಇದೇ ಕಾರಣಕ್ಕೆ ಮಂಗಳೂರನ್ನು ಉಳಿಸಿಕೊಳ್ಳುವ ಸಲುವಾಗಿ ಧನಂಜಯ್ ಕುಮಾರ್ ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ಡಿ. ವಿ. ಸದಾನಂದ ಗೌಡ ಅವರಿಗೆ ಟಿಕೆಟ್ ನೀಡುವ ಮೂಲಕ ಮಂಗಳೂರನ್ನು ಉಳಿಸಿಕೊಂಡಿತ್ತು. ಆದರೆ ಧನಂಜಯ್ ಮಾನಸಿಕವಾಗಿ ಬಿಜೆಪಿಯಿಂದ ದೂರವಾಗಿದ್ದರು.

ಮುಳುವಾದ ಯಡಿಯೂರಪ್ಪ ನಿರ್ಧಾರ

ಯಡಿಯೂರಪ್ಪ  ಜೊತೆ ವಿ.ಧನಂಜಯ್ ಕುಮಾರ್
ಯಡಿಯೂರಪ್ಪ ಜೊತೆ ವಿ.ಧನಂಜಯ್ ಕುಮಾರ್
/ ಒನ್ ಇಂಡಿಯಾ 

ವಿ. ಧನಂಜಯ್ ಕುಮಾರ್ ಅವರಿಗೆ ಹಿಂದಿ ಭಾಷೆಯ ಮೇಲೆ ಸ್ಪಷ್ಟ ಹಿಡಿತವಿತ್ತು. ಅಪ್ಪಟ ಭಾಷಣಕಾರರಾದ ಧನಂಜಯ್ ತನ್ನ ಮಾತಿನ ಮೂಲಕವೇ ಕಾರ್ಯಕರ್ತರನ್ನು ಹಿಡಿದಿಡುವ ಶಕ್ತಿ ಹೊಂದಿದ್ದರು. ಇದೇ ಕಾರಣಕ್ಕೆ ಕೇಂದ್ರದಿಂದ ಯಾವುದೇ ನಾಯಕರು ರಾಜ್ಯಕ್ಕೆ ಬಂದು ಭಾಷಣ ಮಾಡಿದರು ಅವರ ಭಾಷಣವನ್ನು ಅದೇ ಧಾಟಿಯಲ್ಲಿ ಸಮರ್ಥವಾಗಿ ಅನುವಾದದ ಕೆಲಸವನ್ನು ಧನಂಜಯ್ ಅವರಿಗೆ ನೀಡಲಾಗುತ್ತಿತ್ತು. ಆ ಕೆಲಸವನ್ನು ಅಷ್ಟೇ ಸಮರ್ಥವಾಗಿ ಅವರು ನಿಭಾಯಿಸುತ್ತಿದ್ದರು.

80ರ ದಶಕ ಆಗಿನ್ನು ಬಿಜೆಪಿಗೆ ಕರ್ನಾಟಕದಲ್ಲಿ ನೆಲೆಯೇ ಇರಲಿಲ್ಲ. ಬೆರಳೆಣಿಕೆಯ ಶಾಸಕರು ಹಾಗೂ ಸಂಸದರ ಹೊರತಾಗಿ ದೊಡ್ಡ ಧನಿ ಇರಲಿಲ್ಲ. ಈ ಕಾಲಘಟ್ಟದಲ್ಲಿ ಯಡಿಯೂರಪ್ಪನವರ ಜೊತೆ ಜೊತೆಗೆ ಕೆಲಸ ಮಾಡುತ್ತಾ ಬಿಜೆಪಿಯನ್ನು ರಾಜ್ಯದಲ್ಲಿ ಬಲಿಷ್ಟ ಪಕ್ಷವಾಗಿ ಕಟ್ಟಿದ ಹಿರಿಮೆ ಧನಂಜಯ್ ಅವರಿಗೆ ಸಲ್ಲುತ್ತದೆ.

ಬೆರಳೆಣಿಕೆಯ ಬಿಜೆಪಿ ನಾಯಕರ ಪೈಕಿ ಅವರು ಅಗ್ರಗಣ್ಯರಾಗಿದ್ದರು. ಅಲ್ಲದೆ ಆಗಿಲಿಂದಲೂ ಯಡಿಯೂರಪ್ಪನವರನ್ನೇ ತಮ್ಮ ರಾಜಕೀಯ ನಾಯಕ ಎಂದು ಹೇಳುತ್ತಾ ಕೆಲಸ ಮಾಡುತ್ತಿದ್ದರು. ಆದರೆ ಅವರ ರಾಜಕೀಯ ಜೀವನಕ್ಕೆ ಈ ನಿರ್ಧಾರವೇ ಮುಳುವಾಗುತ್ತದೆ ಎಂದು ಸ್ವತಃ ಅವರು ಸಹ ಭಾವಿಸಿರಲಿಲ್ಲ.

ಅನುಕಂಪದ ಅಲೆಯಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ ಅವರು ಆ ಸ್ಥಾನದಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಕೇವಲ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನಂತರ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಬೇಕಾಗಿ ಬಂದಿತ್ತು.

ಜೈಲಿನಿಂದ ಹೊರಬಂದ ಯಡಿಯೂರಪ್ಪ ಬಿಜೆಪಿ ಪಕ್ಷದ ಜೊತೆಗೆ ಮುನಿಸಿಕೊಂಡು ಡಿಸೆಂಬರ್ 6, 2012ರಲ್ಲಿ ಕರ್ನಾಟಕ ಜನತಾ ಪಕ್ಷ (ಕೆ.ಜೆ.ಪಿ) ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಜೊತೆ ಅನೇಕ ಬಿಜೆಪಿ ನಾಯಕರು ಪಕ್ಷವನ್ನು ತೊರೆದಿದ್ದರು. ಅವರಲ್ಲಿ ಪ್ರಮುಖರಾದವರೆಂದರೆ ಧನಂಜಯ್ ಕುಮಾರ್.

ಯಡಿಯೂರಪ್ಪನವರ ಪಕ್ಕಾ ಬೆಂಬಲಿಗರಾದ ಧನಂಜಯ್ ಕುಮಾರ್, 2012 ರಲ್ಲಿ ಬಿಜೆಪಿಯನ್ನು ತೊರೆದು ಕೆಜೆಪಿ ಪಕ್ಷ ಸೇರಿದರು. ಅಲ್ಲದೆ ಕೆಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದರು. ಈ ಸಂದರ್ಭದಲ್ಲಿ ಮಾತನಾಡುವ ಭರದಲ್ಲಿ ಎಲ್‌. ಕೆ. ಅಡ್ವಾನಿ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿ ದೊಡ್ಡ ಮಟ್ಟದ ಸುದ್ದಿಯಾಗಿದ್ದರು. ಆದರೆ ಅಡ್ವಾನಿ ಕುರಿತ ಅವರ ಹೇಳಿಕೆಯೇ ಕೊನೆಗೆ ಅವರಿಗೆ ಮುಳುವಾಗಿತ್ತು.

ಕಾಲ ಉರುಳಿದಂತೆ ಬಿಜೆಪಿ ಕುರಿತು ಮುನಿಸಿಕೊಂಡಿದ್ದ ಯಡಿಯೂರಪ್ಪ ಮತ್ತೆ ಮಾತೃ ಪಕ್ಷಕ್ಕೆ ಹಿಂದಿರುಗಿದರು. ಯಡಿಯೂರಪ್ಪನವರ ಜೊತೆಗೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲಾ ನಾಯಕರು ಮತ್ತೆ ಬಿಜೆಪಿಗೆ ಮರಳಿದರು. ಆದರೆ ಮಾಜಿ ಸಚಿವ ವಿ. ಧನಂಜಯ್ ಕುಮಾರ್ ಮಾತ್ರ ಮತ್ತೆ ಬಿಜೆಪಿಗೆ ಕಾಲಿಡಲಿಲ್ಲ. 2014 ರಲ್ಲಿ ಜನತಾ ದಳಕ್ಕೆ ಸೇರ್ಪಡೆಯಾಗಿದ್ದ ಧನಂಜಯ್ ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ 2017 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಬಿಜೆಪಿ ಎಂಬ ಪಕ್ಷವನ್ನು ರಾಜ್ಯದಲ್ಲಿ ಆರಂಭಿಕ ಕಾಲದಿಂದಲೂ ಕಟ್ಟಿ ಬೆಳೆಸಿದ ನಾಯಕನೊಬ್ಬ ಇಂದು ಅದೇ ಪಕ್ಷ ರಾಜ್ಯದಲ್ಲಿ ಉಚ್ಚ್ರಾಯ ಸ್ಥಿತಿ ತಲುಪಿರುವಾಗ ಪಕ್ಷದಿಂದ ದೂರ ಸರಿದು ನಿಂತದ್ದು, ಒಂದು ಕಾಲದಲ್ಲಿ ದಕ್ಷಿಣ ಭಾರತದ ಮೊದಲ ಬಿಜೆಪಿ ಸಂಸದ ಹಾಗೂ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅದೇ ವ್ಯಕ್ತಿ ತನ್ನ ರಾಜಕೀಯ ಸಂದ್ಯಾಕಾಲದಲ್ಲಿ ಯಾವುದೇ ಸ್ಥಾನಮಾನಗಳಿಲ್ಲದೆ, ಡೋಲಾಯಮಾನ ಸ್ಥಿತಿಗೆ ಸರಿದು ಕೊನೆಗೆ ಇಹಲೋಕ ತ್ಯಜಿಸಿದ್ದು ಮಾತ್ರ ವಿಪರ್ಯಾಸವೇ ಸರಿ.