samachara
www.samachara.com
ಕಾಂಗ್ರೆಸ್‌ನ ಶಸ್ತ್ರಚಿಕಿತ್ಸಾ ತಜ್ಞನಿಗೇ ಬಿಜೆಪಿ ‘ಆಪರೇಷನ್’: ಯಾರಿವರು ಡಾ. ಜಾದವ್?
COVER STORY

ಕಾಂಗ್ರೆಸ್‌ನ ಶಸ್ತ್ರಚಿಕಿತ್ಸಾ ತಜ್ಞನಿಗೇ ಬಿಜೆಪಿ ‘ಆಪರೇಷನ್’: ಯಾರಿವರು ಡಾ. ಜಾದವ್?

ಇಂತಹದೊಂದು ಹಿನ್ನೆಲೆಯಿಂದ ಬಂದ ಡಾ. ಜಾದವ್‌ರನ್ನು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರೇ ಕಾಂಗ್ರೆಸ್‌ಗೆ ಕರೆ ತಂದು ಟಿಕೆಟ್‌ ಕೊಡಿಸಿ, ಚಿಂಚೋಳಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿಸಿದ್ದರು ಎನ್ನುತ್ತವೆ ಸ್ಥಳೀಯ ಮೂಲಗಳು.

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ತಂತ್ರದ ಮುಂದುವರೆದ ಭಾಗವಾಗಿ ‘ಆಪರೇಷನ್ ಕಮಲ’ಕ್ಕೆ ಪಾಲುದಾರ ಪಕ್ಷ ಕಾಂಗ್ರೆಸ್‌ನ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ. ಶಿವರಾತ್ರಿ ಹಬ್ಬ ದಿನವೇ ಚಿಂಚೋಳಿ ಶಾಸಕ ಡಾ. ಉಮೇಶ್ ಜಾದವ್ ತಮ್ಮ ಹೊಣೆಗಾರಿಕೆಯಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ತೀರಾ ನಾಟಕೀಯ ಎನ್ನಿಸುವಂತೆ, ಸರಕಾರಿ ರಜೆ ದಿನದಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿರುವ ಸ್ಪೀಕರ್ ರಮೇಶ್ ಕುಮಾರ್ ನಿವಾಸಕ್ಕೆ ತೆರಳಿದ ಡಾ. ಜಾದವ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಅವರು ಫೊಟೋ ಕೂಡ ತೆಗೆಸಿಕೊಂಡಿದ್ದು, ಅದನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ.

ರಾಜೀನಾಮೆ ಪತ್ರದಲ್ಲಿ, ‘ವೈಯಕ್ತಿಕ ಕಾರಣಗಳಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ’ ಅವರು ಹೇಳಿಕೊಂಡಿದ್ದಾರೆ.

ಈಗಾಗಲೇ ಪಕ್ಷದ ತೀರ್ಮಾನಗಳಿಗೆ ಬದ್ಧವಾಗಿರದ ಹಿನ್ನೆಲೆಯಲ್ಲಿ ಡಾ. ಜಾದವ್‌ ಅವರನ್ನು ಅನರ್ಹಗೊಳಿಸುವಂತೆ ಶಾಸಕಾಂಗ ಪಕ್ಷದ ನಾಯಕರು ಸ್ಪೀಕರ್‌ಗೆ ದೂರು ಸಲ್ಲಿಸಿದ್ದರು. ಡಾ. ಜಾದವ್ ಮಾತ್ರ ಅಲ್ಲ, ಕಾಂಗ್ರೆಸ್ ಶಾಸಕರಾದ ರಮೇಶ್‍ ಜಾರಕಿಹೊಳಿ, ಬಿ.ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಅವರುಗಳನ್ನೂ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಫೆ. 11ರಂದು ಸಿದ್ದರಾಮಯ್ಯ ದೂರು ನೀಡಿದ್ದರು.

ಆದರೆ ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಅವರ ‘ಆಡಿಯೋ ಪ್ರಕರಣ’ ಮುನ್ನೆಲೆ ಬಂದಿತ್ತು. ಅಧಿವೇಶನದ ಅಷ್ಟೂ ದಿನಗಳನ್ನು ಇದೇ ಚರ್ಚೆ ಆವರಿಸಿಕೊಂಡಿತ್ತು. ಹೀಗಾಗಿ ಆಡಳಿತದ ಪಾಲುದಾರ ಪಕ್ಷ ನೀಡಿದ ದೂರಿನ ಕುರಿತು ಸ್ಪೀಕರ್ ತೀರ್ಮಾನ ತೆಗೆದುಕೊಂಡಿರಲಿಲ್ಲ. ಇದೀಗ ಶಾಸಕರೇ ಮುಂದೆ ಬಂದು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷರ ತೀರ್ಮಾನ ಗಮನ ಸೆಳೆಯುತ್ತಿದೆ.

ಹಳೇ ಸುದ್ದಿ:

ಉಮೇಶ್‍ ಜಾಧವ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದು ಕಳೆದ ಹಲವು ತಿಂಗಳುಗಳಿಂದ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. “ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉಮೇಶ್ ಯಾಧವ್ ನಡುವೆ ಮೊದಲಿನಿಂದಲೂ ಸಂಬಂಧ ಸರಿಯಿರಲಿಲ್ಲ. ಪ್ರಿಯಾಂಕ್ ಖರ್ಗೆ ಸರ್ವಾಧಿಕಾರಿ ಧೋರಣೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಜಾಧವ್ ಪಕ್ಷ ತೊರೆಯಲು ಮಾನಸಿಕವಾಗಿ ಸಿದ್ಧರಾಗಿದ್ದರು. ಜಿಲ್ಲೆ ಮತ್ತು ಪಕ್ಷದಲ್ಲಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮಂತ್ರಿ ಸ್ಥಾನ ಸಿಗದಂತೆ ಪ್ರಿಯಾಂಕ್ ಖರ್ಗೆ ಕೊಕ್ಕೆ ಹಾಕಿದ್ದರು ಎಂದು ಮುನಿಸಿಕೊಂಡು ಕಾಂಗ್ರೆಸ್ ಬಿಡುವ ಸುಳಿವು ನೀಡಿದ್ದರು,” ಎಂದು ವರದಿಗಳು ಹೇಳಿದ್ದವು.

ಅದೇ ವೇಳೆ, ಅಸಮಾಧಾನಿತ ಶಾಸಕ ಡಾ. ಜಾದವ್ ಮನವೊಲಿಸುವಂತಹ ಕೆಲಸಕ್ಕೆ ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರು ಮುಂದಾಗಲಿಲ್ಲ. ‘ಶಿಸ್ತು ಕ್ರಮ’ಕ್ಕೆ ಹೆದರಿ ಸುಮ್ಮನಾಗುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇತ್ತು. ಅಲ್ಲದೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಯಾವುದೇ ಶಾಸಕರು ರಾಜೀನಾಮೆ ನೀಡುವಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದರು. ಆದರೆ, ಇದೀಗ ಅದೇ ಲೋಕಸಭೆ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲು ಡಾ. ಜಾದವ್ ರಾಜನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಶಾಸಕ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, "ಕಾಂಗ್ರೆಸ್ ಉಮೇಶ್ ಜಾಧವ್‌ಗೆ ಅನ್ಯಾಯ ಮಾಡಿಲ್ಲ. ಸ್ವಾರ್ಥ ರಾಜಕಾರಣಕ್ಕೋಸ್ಕರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದಾರೆ. ಈ ಬೆಳವಣಿಗೆ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲ," ಎಂದಿದ್ದಾರೆ.

2018ರ ಮಾರ್ಚ್‌ ತಿಂಗಳಿನಲ್ಲಿ ಚಿಂಚೋಳಿಯ ಪೋಲಕಪಲ್ಲಿ ಎಂಬಲ್ಲಿ ಡಾ. ಜಾದವ್ ಕಾರು ಅಪಘಾತಕ್ಕೀಡಾಗಿತ್ತು. 
2018ರ ಮಾರ್ಚ್‌ ತಿಂಗಳಿನಲ್ಲಿ ಚಿಂಚೋಳಿಯ ಪೋಲಕಪಲ್ಲಿ ಎಂಬಲ್ಲಿ ಡಾ. ಜಾದವ್ ಕಾರು ಅಪಘಾತಕ್ಕೀಡಾಗಿತ್ತು. 
/ಉದಯವಾಣಿ. 

ಬಿಜೆಪಿಗೆ ಕಾಂಗ್ರೆಸ್ಸಿಗ:

ಡಾ. ಉಮೇಶ್ ಜಾದವ್ ವೃತ್ತಿಯಲ್ಲಿ ಸರ್ಜನ್‌ ಆಗಿದ್ದವರು. 2013ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಚಿಂಚೋಳಿ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸೌಧಕ್ಕೆ ಕಾಲಿಟ್ಟಿದ್ದರು. ಡಾ. ಜಾದವ್ ತಂದೆ ಗೋಪಾಲ್ ದೇವ್ ತಮ್ಮ ಸಮುದಾಯದಲ್ಲೇ ವಿದ್ಯಾವಂತರಾಗಿದ್ದರು. ಬಡವರ ವಿದ್ಯಾಭ್ಯಾಸ ಅನುಕೂಲಕ್ಕಾಗಿ ಮೂಲಸೌಕರ್ಯಗಳಿಗಾಗಿ ಹೋರಾಟ ನಡೆಸಿದ್ದವರು. ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರೂ, ಚುನಾವಣೆಯಿಂದ ದೂರವೇ ಉಳಿದಿದ್ದರು.

ಇಂತಹದೊಂದು ಹಿನ್ನೆಲೆಯಿಂದ ಬಂದ ಡಾ. ಜಾದವ್‌ರನ್ನು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರೇ ಕಾಂಗ್ರೆಸ್‌ಗೆ ಕರೆ ತಂದು ಟಿಕೆಟ್‌ ಕೊಡಿಸಿ, ಚಿಂಚೋಳಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿಸಿದ್ದರು ಎನ್ನುತ್ತವೆ ಸ್ಥಳೀಯ ಮೂಲಗಳು.

2018ರಲ್ಲಿಯೂ ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧಿಸಿ ಸತತ ಎರಡನೇ ಬಾರಿಗೂ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. ಇವರ ಮೇಲೆ ಒಂದು ‘ಅಪರಾಧಕ್ಕೆ ಉತ್ತೇಜನ’ ನೀಡಿದ ಅಪರಾಧ ಪ್ರಕರಣ ದಾಖಲಾಗಿದೆ. ಬಿಟ್ಟರೆ 3 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಯಾವುದೇ ಕೃಷಿ ಭೂಮಿ ಹೊಂದಿಲ್ಲದ ಇವರು ಸುಮಾರು 19 ಲಕ್ಷ ಸಾಲವನ್ನೂ ಹೊಂದಿದ್ದಾರೆ.

2018 ಅಕ್ಟೋಬರ್‌ನಲ್ಲಿ ಡಾ. ಉಮೇಶ್ ಜಾಧವ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಅವರು, "ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ನಮ್ಮ ನಾಯಕರು. ಅವರು ವಿರುದ್ಧ ಸ್ಫರ್ಧೆ ಮಾಡುವುದಿಲ್ಲ," ಎಂದು ಹೇಳಿದ್ದರು. ಈ ಮಾತುಗಳು ಅವರ ನಡೆಯ ಮುನ್ಸೂಚನೆಯಂತಿದ್ದವು.

ಸ್ಥಳೀಯ ಮೂಲಗಳ ಪ್ರಕಾರ, ಕಲಬುರಗಿ ಜಿಲ್ಲೆಯಲ್ಲಿ ಲಂಬಾಣಿ ಸಮುದಾಯ ನಿರ್ಣಾಯಕ ಮತಗಳನ್ನು ಹೊಂದಿದೆ. ಜಾಧವ್ ಕೂಡ ಅದೇ ಸಮುದಾಯದಿಂದ ಬಂದ ವಿದ್ಯಾವಂತರು. ಜತೆಗೆ ಸತತ ಗೆಲುವುಗಳು ಅವರಿಗೆ ಇರುವ ಜನಬೆಂಬಲವನ್ನು ಸೂಚಿಸುತ್ತಿವೆ. ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮೀಸಲು ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯಾಗಿ ಡಾ. ಜಾದವ್ ಬಿಜೆಪಿಗೆ ಕಂಡಿದೆ. ಹೀಗಾಗಿ ಅವರನ್ನು ರಾಜೀನಾಮೆ ಕೊಡಿಸಿ, ಲೋಕಸಭೆಗೆ ಖರ್ಗೆ ವಿರುದ್ಧವೇ ಅಭ್ಯರ್ಥಿಯಾಗಿಸುವುದು ಬಿಜೆಪಿಯ ಕಾರ್ಯತಂತ್ರ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಜತೆಗೆ, ಈಗಾಗಲೇ ಶಾಸಕರಾದ ರಮೇಶ್‍ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ) ಮತ್ತು ಬಿ. ನಾಗೇಂದ್ರ (ಬಳ್ಳಾರಿ ಗ್ರಾಮಾಂತರ) ಕೂಡ ಡಾ. ಜಾದವ್ ಹಾದಿಯನ್ನು ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ, ರಾಜ್ಯದ ಸುದ್ದಿ ಕೇಂದ್ರಕ್ಕೆ ಮತ್ತದೇ ಕಿತ್ತಾಟದ ರಾಜಕಾರಣ ಆವರಿಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.