samachara
www.samachara.com
ಪಟ್ಟು ಬಿಡದ ಸುಮಲತಾ, ‘ಮೈತ್ರಿ’ಗಳ ಪಾಲಿಗೆ ಕಗ್ಗಂಟಾದ ಮಂಡ್ಯ ಅಖಾಡ
COVER STORY

ಪಟ್ಟು ಬಿಡದ ಸುಮಲತಾ, ‘ಮೈತ್ರಿ’ಗಳ ಪಾಲಿಗೆ ಕಗ್ಗಂಟಾದ ಮಂಡ್ಯ ಅಖಾಡ

ಕಾಂಗ್ರೆಸ್‌ ಸುಮಲತಾಗೆ ಬೆಂಗಳೂರು ಉತ್ತರ ಅಥವಾ ದಕ್ಷಿಣದಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿತ್ತು. ಅದಕ್ಕೂ ಒಪ್ಪದ ಅವರು ಮಂಡ್ಯದಿಂದಲೇ ಸ್ಪರ್ಧೆಗೆ ಪಟ್ಟು ಹಿಡಿದಿದ್ದಾರೆ.

ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಖ್ಯಾತಿಯ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಚುನಾವಣಾ ಅಖಾಡಕ್ಕಿಳಿಯಲು ಖಚಿತ ನಿಲುವು ತಳೆದಿರುವುದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇದು ದಿನದ 24ಗಂಟೆಯೂ ರಾಜಕೀಯವನ್ನೆ ಉಂಡೆದ್ದು ಮಲಗುವ ಸಕ್ಕರೆ ಜಿಲ್ಲೆ ಮಂಡ್ಯದ ಲೋಕಸಭಾ ಚುನಾವಣಾ ಕಣದ ಚಿತ್ರಣವನ್ನೇ ಬುಡಮೇಲು ಮಾಡಿದೆ.

ಕಾವೇರಿ ನದಿ ಸೀಮೆಯ ಮಂಡ್ಯ ಜಿಲ್ಲೆ ಮೊದಲಿನಿಂದಲೂ ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರುವಾಸಿ. ರೈತ ಹೋರಾಟಗಾರ ನಾಗೇಗೌಡ, ಎಸ್.ಎಂ.ಕೃಷ್ಣ, ಎಚ್‌.ಎಂ. ಅಂಬರೀಶ್, ಸಿನಿಮಾ ನಟಿ ರಮ್ಯ ಮೊದಲಾದವರಿಗೆ ಸೋಲಿನ ರುಚಿ ತೋರಿಸಿದ ಈ ಜಿಲ್ಲೆ ಎಂದಿನಂತೆ ಈ ಬಾರಿಯ ರಾಜ್ಯದ 28 ಕ್ಷೇತ್ರಗಳಲ್ಲೇ ಅತ್ಯಂತ ಹೆಚ್ಚಿನ ಗಮನ ಸೆಳೆಯುತ್ತಿದೆ.

ತನ್ನ ಪತಿಯ ಸಾವಿನ ಅನುಕಂಪವನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಸುಮಲತಾ ಕಾಂಗ್ರೆಸ್‍ನ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ‘ತಾನು ಕಾಂಗ್ರೆಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿ’ ಎಂದು ಸ್ವತಃ ಅವರೇ ಹೇಳಿದ್ದಾರೆ.

ಈಗಾಗಲೇ ಅಘೋಷಿತ ಪ್ರಚಾರಕ್ಕೂ ಚಾಲನೆ ನೀಡಿರುವ ಅವರು ಕಳೆದ ಒಂದು ತಿಂಗಳಿನಿಂದ ಜಿಲ್ಲೆಗೆ ಅನೇಕ ಬಾರಿ ಭೇಟಿ ನೀಡಿ ಎಲ್ಲಾ ಪಕ್ಷಗಳ ಮುಖಂಡರು, ಗಣ್ಯರು, ಮಠಾಧೀಶರನ್ನು ಭೇಟಿಯಾಗುತ್ತಿದ್ದಾರೆ. ಜತೆಗೆ ತಮ್ಮನ್ನು ಬೆಂಬಲಿಸುವಂತೆಯೂ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಆರಂಭದಲ್ಲೇ ವಿಘ್ನ ಎಂಬಂತೆ ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ಈವರೆ ಯಾವುದೇ ಭರವಸೆ ನೀಡಿಲ್ಲ. ಕಾರಣ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಈ ಕ್ಷೇತ್ರವನ್ನು ತನಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದೆ.

ಎಲ್ಲಾ ಕೋನಗಳಿಂದ ನೋಡಿದರೂ ಜೆಡಿಎಸ್‌ ಬೇಡಿಕೆ ಸರಿಯಾಗಿಯೇ ಇದೆ. ಇಲ್ಲಿನ ಹಾಲಿ ಸಂಸದರೂ ಅದೇ ಪಕ್ಷಕ್ಕೆ ಸೇರಿದ್ದಾರೆ. ಇನ್ನೊಂದು ಕಡೆ ಮಂಡ್ಯದ ಎಲ್ಲಾ 7 ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರಿದ್ದಾರೆ. ಹೀಗಾಗಿ ಸಹಜವಾಗಿಯೇ ದಳ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ.

ಆದರೆ ಸುಮಲತಾ ಕಣಕ್ಕಿಳಿಯಲು ಹೊರಟಿದ್ದು ಕಾಂಗ್ರೆಸ್‌-ಜೆಡಿಎಸ್‌ ಪಾಲಿಗೆ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್‌ ನೀಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿಯೇ ತೀರುತ್ತೇನೆ ಎಂದು ಅಂಬರೀಷ್‌ ಪತ್ನಿ ಹೇಳಿರುವುದು ಮೈತ್ರಿ ಪಕ್ಷಗಳ ಪಾಲಿಗೆ ತಲೆನೋವು ತಂದಿದೆ.

ತಲೆಕೆಳಗಾದ ಲೆಕ್ಕಾಚಾರ:

ಶುಕ್ರವಾರದವರೆಗೂ ಜೆಡಿಎಸ್‍ನಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮಂಡ್ಯದ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಮೈಸೂರು-ಕೊಡಗಿನಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳು ಕಾಣಿಸುತ್ತಿವೆ ಈ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಆಹ್ವಾನ ನೀಡಿರುವುದು, ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ನಿಖಿಲ್‌ ಕುಮಾರಸ್ವಾಮಿ ‘ಒಂದು ಅವಕಾಶ ನೀಡಿ’ ಎಂದು ಹೇಳಿರುವುದನ್ನು ನೋಡಿದರೆ ಅವರು ನೆಲೆ ಬದಲಿಸುವ ಮುನ್ಸೂಚನೆಗಳು ಕಾಣಿಸುತ್ತಿವೆ.

‘ಮಂಡ್ಯದ ಮಣ್ಣಿನ ಋಣ ತೀರಿಸುತ್ತೇನೆ’ ಎನ್ನುವ ಮಾತುಗಳನ್ನಾಡುತ್ತಿರುವ ಸುಮಲತಾಗೆ ತಿರುಗೇಟು ನೀಡಲು ಮುಂದಾಗಿರುವ ಜೆಡಿಎಸ್ ಇಲ್ಲಿಂದ ನಿವೃತ್ತ ಐಆರ್‌ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್‍ಗೌಡ ಅವರನ್ನು ಕಣಕ್ಕಿಳಿಸುವ ಆಲೋಚನೆಯಲ್ಲಿದೆ.

ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರ ಕೈತಪ್ಪಿ ಹೋಗಬಾರದು ಎಂದು ಜೆಡಿಎಸ್‌ ತೀರ್ಮಾನಿಸಿದ್ದು ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಒಂದು ಹಂತಕ್ಕೆ ಪೂರ್ಣಗೊಳಿಸಿದೆ. ಅಸ್ತಿತ್ವದಲ್ಲಿರುವ ಮೈತ್ರಿ ಸರಕಾರಗಳ ಕಡೆಯಿಂದ ನಾಲ್ಕು ದಿನಗಳ ಹಿಂದೆಯಷ್ಟೇ ಇಲ್ಲಿ 5 ಸಾವಿರ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಅಂಬರೀಶ್ ಮಾಡಬೇಕಾಗಿದ್ದ ಕೆಲಸವನ್ನು ನಾನು ಮುಂದುವರೆಸುತ್ತಿದ್ದೇನೆ. ಮಂಡ್ಯಕ್ಕೆ ಅಂಬರೀಶ್ ಮೃತದೇಹವನ್ನು ಕೊಂಡೊಯ್ಯುವುದೇ ಬೇಡ ಎನ್ನುತ್ತಿದ್ದವರು ಮಣ್ಣಿನ ಋಣದ ಬಗ್ಗೆ ಮಾತನಾಡುತ್ತಿದ್ದಾರೆ,’ ಎಂದು ಪರೋಕ್ಷವಾಗಿ ಸುಮಲತಾಗೆ ತಿರುಗೇಟು ನೀಡಿದ್ದರು.

ಆದರೆ ಸುಮಲತಾ ಪಟ್ಟು ಬಿಡುತ್ತಿಲ್ಲ. ಒಂದು ಮೂಲಗಳ ಪ್ರಕಾರ ಕಾಂಗ್ರೆಸ್‌ ಅವರಿಗೆ ಬೆಂಗಳೂರು ಉತ್ತರ ಅಥವಾ ದಕ್ಷಿಣದಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿತ್ತು. ಅದಕ್ಕೂ ಒಪ್ಪದ ಅವರು ಮಂಡ್ಯದಿಂದಲೇ ಸ್ಪರ್ಧೆಗೆ ಪಟ್ಟು ಹಿಡಿದಿದ್ದಾರೆ.

ಜತೆಗೆ ಭಾವನಾತ್ಮಕ ದಾಳಗಳನ್ನು ಉರುಳಿಸುತ್ತಿರುವ ಸುಮಲತಾ, ಇಲ್ಲಿನ ಜನ ಅಂಬರೀಶ್ ಅವರನ್ನು ಎರಡು ಬಾರಿ ಸಚಿವರನ್ನಾಗಿ, ಸಂಸದರನ್ನಾಗಿ ಮಾಡಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನನಗೆ ಅಪಾರ ನಂಬಿಕೆ ಇದೆ ಹಾಗಾಗಿ ನಾನು ಚುನಾವಣೆಗೆ ನಿಂತರೆ ಇಲ್ಲಿಂದ ಮಾತ್ರ ಎನ್ನುತ್ತಿದ್ದಾರೆ.

ಇವೆಲ್ಲದರ ನಡುವೆ ತಮ್ಮ ಪ್ರಚಾರವನ್ನು ಇನ್ನೂ ಒಂದು ಹಂತ ಮುಂದಕ್ಕೆ ಕೊಂಡೊಯ್ಯಲು ಸುಮಲತಾ ನಿರ್ಧರಿಸಿದ್ದು, ಅಂಬರೀಶ್ ಅದೃಷ್ಟದ ಮನೆಯನ್ನೇ ಚುನಾವಣಾ ಕಚೇರಿ ಮಾಡಿಕೊಳ್ಳಲು ನಿರ್ಧಾರಿಸಿದ್ದಾರೆ. ನಗರದ ಪ್ರತಿಷ್ಠಿತ ಬಡಾವಣೆ ಚಾಮುಂಡೇಶ್ವರಿ ನಗರದ 3 ನೇ ಕ್ರಾಸ್‍ನಲ್ಲಿರುವ ಮನೆಯಲ್ಲಿ ಶೀಘ್ರವೇ ಒಂದೊಳ್ಳೆ ದಿನ ನೋಡಿ ಕಚೇರಿ ಉದ್ಘಾಟನೆ ನೆರವೇರಲಿದೆ.

ಹೀಗೆ ಸುಮಲತಾ ದಿನೇ ದಿನೇ ಮುಂದುವರಿಯುತ್ತಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇನ್ನೊಂದು ಕಡೆ ಇಬ್ಬರ ಜಗಳದಲ್ಲಿ ನನಗೇನಾದರು ದಕ್ಕಬಹುದಾ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಗಾಳ ಹಾಕುತ್ತಿದೆ. ಸುಮಲತಾ ಬಿಜೆಪಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ‘ಒಂದೊಮ್ಮೆ ಅವರು ಪಕ್ಷೇತರರಾಗಿ ನಿಂತರೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ. ಇದು ಮೈತ್ರಿ ಪಕ್ಷಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಒಟ್ಟಿನಲ್ಲಿ ಸುಮಲತಾ ಅವರ ನಿರ್ಧಾರದಿಂದ ಕಾಂಗ್ರೆಸ್ ನಾಯಕರೀಗ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ.