samachara
www.samachara.com
ರಾವಲ್ಪಿಂಡಿ ಟು ವಾಘಾ: ಅಭಿನಂದನ್‌ ಹಸ್ತಾಂತರ ಪ್ರಕ್ರಿಯೆಯ ರೋಚಕ ಹಾದಿ ಹೀಗಿತ್ತು...
COVER STORY

ರಾವಲ್ಪಿಂಡಿ ಟು ವಾಘಾ: ಅಭಿನಂದನ್‌ ಹಸ್ತಾಂತರ ಪ್ರಕ್ರಿಯೆಯ ರೋಚಕ ಹಾದಿ ಹೀಗಿತ್ತು...

ಅಂದುಕೊಂಡಂತೆ ನಡೆದಿದ್ದರೆ ಅಭಿನಂದನ್‌ ಹಸ್ತಾಂತರ ಪ್ರಕ್ರಿಯೆ ತೀರಾ ಬೇಗ ಮುಗಿದು ಹೋಗಬೇಕಿತ್ತು. ಆದರೆ ಹಾಗಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು. ಏನವು?

ಶುಕ್ರವಾರ ಮುಂಜಾನೆ ಬೆಳಕು ಹರಿಯುತ್ತಿದ್ದಂತೆ ದೇಶದಾದ್ಯಂತ ಸಂಭ್ರಮಾಚರಣೆ ಆರಂಭವಾಗಿತ್ತು. ಪಾಕಿಸ್ತಾನದ ಕೈಗೆ ಸೆರೆ ಸಿಕ್ಕಿದ್ದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಆಗಮನಕ್ಕಾಗಿ ದೇಶದ ಜನರು ಕಾತರತೆಯಿಂದ ಕಾಯುತ್ತಾ ಕುಳಿತಿದ್ದರು. ಒಂದಷ್ಟು ಜನರು ಹಸ್ತಾಂತರ ಪ್ರಕ್ರಿಯೆ ನಡೆಯಲಿರುವ ವಾಘಾ-ಅಟ್ಟಾರಿ ಗಡಿಯಲ್ಲಿ ನೆರೆದಿದ್ದರು.

ಆರಂಭದಲ್ಲಿ ಹಸ್ತಾಂತರ ಪ್ರಕ್ರಿಯೆ ಮಧ್ಯಾಹ್ನ ನಡೆಯಲಿದೆ ಎಂಬ ಸುದ್ದಿ ಹೊರ ಬಿದ್ದಿತ್ತು. ನಂತರ ಮೂರು ಗಂಟೆಗೆ ಅಭಿನಂದನ್‌ ಭಾರತಕ್ಕೆ ಬರಲಿದ್ದಾರೆ ಎಂದು ಹೇಳಲಾಯ್ತು. ಆದರೆ ಸಂಜೆ ಕಳೆದರೂ ಹಸ್ತಾಂತರ ಪ್ರಕ್ರಿಯೆಯ ಸುಳಿವಿಲ್ಲ. ಕ್ಷಣ ಕ್ಷಣಕ್ಕೂ ಭಾರತೀಯರ ಎದೆ ಬಡಿತ ಹೆಚ್ಚಾಗುತ್ತಲೇ ಇತ್ತು.

ಕೊನೆಗೊಮ್ಮೆ 9 ಗಂಟೆ ಹೊತ್ತಿಗೆ ಗಡಿಯಾಚೆಗಿನ ಮಂದ ಬೆಳಕಲ್ಲಿ ಅಭಿನಂದನ್‌ ಮುಖ ಕಾಣಿಸಿಕೊಂಡಿತು. ಮಂದಸ್ಮಿತರಾಗಿ ಪಾಕಿಸ್ತಾನದ ಅಧಿಕಾರಿಗಳ ಜತೆ ನಿಂತಿದ್ದ ವಿಂಗ್‌ ಕಮಾಂಡರ್‌ ಮುಖ ನೋಡಿ ಭಾರತೀಯರು ಒಮ್ಮೆ ನಿಟ್ಟುಸಿರು ಬಿಟ್ಟರು. ನಂತರ ನಿಧಾನಕ್ಕೆ ನಡೆದು ಬಂದ ಯೋಧ ಅಭಿನಂದನ್‌ ಭಾರತದ ಮಣ್ಣಿನಲ್ಲಿ ಹೆಜ್ಜೆ ಇಟ್ಟಾಗ ದೇಶದ ಮಾಧ್ಯಮಗಳಲ್ಲದೆ, ಬಿಬಿಸಿ, ಅಲ್‌ಜಝೀರಾ ಮೊದಲಾದ ಅಂತಾರಾಷ್ಟ್ರೀಯ ವಾಹಿನಿಗಳಲ್ಲೂ ಪ್ರೈಮ್‌ ಟೈಮ್‌ ಬುಲೆಟಿನ್‌ ಪ್ರಸಾರವಾಗುತ್ತಿತ್ತು. ಎಲ್ಲದರಲ್ಲೂ ಹಸ್ತಾಂತರ ಪ್ರಕ್ರಿಯೆ ನೇರ ಪ್ರಸಾರಗೊಂಡಿತು.

ಆದರೆ ಅಂದುಕೊಂಡಂತೆ ನಡೆದಿದ್ದರೆ ಅಭಿನಂದನ್‌ ಹಸ್ತಾಂತರ ತೀರಾ ಬೇಗ ಮುಗಿದು ಹೋಗಬೇಕಿತ್ತು. ಆದರೆ ಹಾಗಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು.

ರಾವಲ್ಪಿಂಡಿ ಟು ವಾಘಾ:

ಅಭಿನಂದನ್‌ ಹಸ್ತಾಂತರ ಪ್ರಕ್ರಿಯೆ ಯಾಕೆ ಅಷ್ಟೊಂದು ತಡವಾಯಿತು ಎಂಬುದಕ್ಕೆ ಖಚಿತ ಕಾರಣಗಳನ್ನು ಪಾಕಿಸ್ತಾನ ಎಲ್ಲೂ ನೀಡಿಲ್ಲ. ಆದರೆ ಹಸ್ತಾಂತರಕ್ಕೂ ಮುನ್ನ ನಡೆಯಬೇಕಿದ್ದ ಕೆಲವು ಸೇನಾ ಪ್ರಕ್ರಿಯೆಗಳಲ್ಲಾದ ವಿಳಂಬ, ಅವರ ವಿಡಿಯೋವೊಂದನ್ನು ರೆಕಾರ್ಡ್‌ ಮಾಡಿಕೊಳ್ಳಲು ತೀರ್ಮಾನಿಸಿದ್ದು ಹಾಗೂ ವಾಘಾದಲ್ಲಿ ಸಂಜೆ ನಡೆಯುವ ಧ್ವಜ ವಂದನೆ ಸಂದರ್ಭ ಬಿಡುಗಡೆಗೆ ಅಲ್ಲಿನ ಸರಕಾರ ಪಟ್ಟು ಹಿಡಿದಿದ್ದರಿಂದ ಅಭಿನಂದನ್‌ ಬರುವುದು ತಡವಾಯಿತು ಎಂಬುದು ಈಗ ಸಿಕ್ಕಿರುವ ಮಾಹಿತಿ.

ಮೊದಲಿಗೆ ಅಭಿನಂದನ್‌ ಅವರನ್ನು ವಿಶೇಷ ವಿಮಾನದಲ್ಲಿ ಕರೆತರಲು ಭಾರತ ಸಜ್ಜಾಗಿತ್ತು. ಆದರೆ ತನ್ನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿರ್ಬಂಧಿಸಿದ್ದರಿಂದ ಭಾರತದ ಬೇಡಿಕೆಯನ್ನು ಪಾಕಿಸ್ತಾನ ತಿರಸ್ಕರಿಸಿತು. ಹೀಗಾಗಿ ರಸ್ತೆ ಮಾರ್ಗವಾಗಿ ಕರೆತರುವುದು ಅನಿವಾರ್ಯವಾಯಿತು.

ಶುಕ್ರವಾರ ಬೆಳಗ್ಗೆ ಅಭಿನಂದನ್‌ರನ್ನು ರಾವಲ್ಪಿಂಡಿಯ ಸೇನಾ ಕೇಂದ್ರ ಕಚೇರಿಯಿಂದ ಲಾಹೋರ್‌ಗೆ ಕರೆತರಲಾಯಿತು. ಅಲ್ಲಿಂದ ಅವರು ವಾಘಾ-ಅಟ್ಟಾರಿಯಲ್ಲಿರುವ ಭಾರತ ಪಾಕಿಸ್ತಾನ ಜಂಟಿ ಚೆಕ್‌ಪೋಸ್ಟ್‌ಗೆ ಬರಬೇಕಾಗಿತ್ತು. ಲಾಹೋರ್‌ನಿಂದ ಇಲ್ಲಿಗೆ ಇರುವ ದೂರ ಕೇವಲ 22.4 ಕಿಲೋಮೀಟರ್‌. ಹೀಗಾಗಿ ಆದಷ್ಟು ಬೇಗ ಬರಲಿದ್ದಾರೆ ಎಂದು ಭಾರತೀಯರು ಗಡಿಯಲ್ಲಿ ಕಾಯುತ್ತಾ ಕುಳಿತಿದ್ದರು.

ಭಾರತೀಯರು ಮಾತ್ರವಲ್ಲದೆ ಹಸ್ತಾಂತರ ಪ್ರಕ್ರಿಯೆ ನೋಡಲು ಅತ್ತ ಪಾಕಿಸ್ತಾನ ಗಡಿ ಪ್ರದೇಶದಲ್ಲಿಯೂ ಅಲ್ಲಿನ ನಾಗರಿಕರೂ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಆರಂಭದಲ್ಲಿ ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಅಭಿನಂದನ್‌ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ಆದರೆ ಪಾಕಿಸ್ತಾನ ಇದಕ್ಕೆ ಸಿದ್ಧವಿರಲಿಲ್ಲ.

ಅಭಿನಂದನ್‌ ಹಸ್ತಾಂತರ ಪ್ರಕ್ರಿಯೆ ನೋಡಲು ಪಾಕಿಸ್ತಾನ ಭಾಗದಲ್ಲಿ ನೆರೆದಿದ್ದ ಜನರು.
ಅಭಿನಂದನ್‌ ಹಸ್ತಾಂತರ ಪ್ರಕ್ರಿಯೆ ನೋಡಲು ಪಾಕಿಸ್ತಾನ ಭಾಗದಲ್ಲಿ ನೆರೆದಿದ್ದ ಜನರು.
/ಡಾನ್

ವಾಘಾ ಗಡಿಯಲ್ಲಿ ಪ್ರತಿ ದಿನ ಸಂಜೆ 5 ಗಂಟೆಗೆ ಧ್ವಜ ವಂದನೆ ಕಾರ್ಯಕ್ರಮ ನಡೆಯುತ್ತದೆ. ಇದನ್ನು ನೋಡಲು ದೊಡ್ಡ ಸಂಖ್ಯೆಯ ಜನರು ಆಗಮಿಸುತ್ತಾರೆ. ಹಾಗಾಗಿ ಪೈಲಟ್‌ ಬಿಡುಗಡೆಗೆ ಇದೇ ಸೂಕ್ತ ಸಮಯ ಎಂದು ಪಾಕಿಸ್ತಾನ ಲೆಕ್ಕ ಹಾಕಿತ್ತು. ಆದರೆ ಭಾರತ ಧ್ವಜ ವಂದನೆಯನ್ನೇ ರದ್ದುಗೊಳಿಸಿ ಪಾಕಿಸ್ತಾನದ ಪ್ರಚಾರ ಪ್ರಿಯ ಆಲೋಚನೆಗೆ ಕಲ್ಲು ಹಾಕಿತು.

ಗಡಿಯಾರದ ಮುಳ್ಳು 5 ಗಂಟೆ ದಾಟಿ ಮುಂದುವರಿಯಲು ಆರಂಭಿಸಿತ್ತು. ಆದರೆ ಅಭಿನಂದನ್‌ ಸುಳಿವಿಲ್ಲ. ಕೊನೆಗೆ 7.30ಕ್ಕೆ ಹಸ್ತಾಂತರವಾಗಲಿದೆ ಎಂಬ ಸುದ್ದಿ ಬಂತು. ಆದರೆ ಗಂಟೆ ಮುಂದುವರಿಯುತ್ತಲೇ ಇತ್ತು. ಜನರು ಕಾಯುತ್ತಲೇ ಇದ್ದರು. ಆದರೆ ಪಾಕಿಸ್ತಾನದಿಂದ ಯಾವ ಸುದ್ದಿಯೂ ಇಲ್ಲ.

ಎಡಿಟ್‌ ಮಾಡಿದ ವಿಡಿಯೋ ಬಿಡುಗಡೆ:

ಇಷ್ಟೊಂದು ತಡವಾಗಲು ಪಾಕಿಸ್ತಾನದಲ್ಲಿ ನಡೆದ ಹಲವು ಬೆಳವಣಿಗೆಗಳು ಕಾರಣವಾಗಿತ್ತು. ಹಾಗೆ ನೋಡಿದರೆ ಲಾಹೋರ್‌ನಿಂದ ಅಭಿನಂದನ್‌ ನೇರವಾಗಿ ಭಾರತಕ್ಕೆ ಬರಬೇಕಾಗಿತ್ತು. ಆದರೆ ಅಷ್ಟರಲ್ಲಿ ಪಾಕಿಸ್ತಾನ ಅವರ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳುವ ತೀರ್ಮಾನ ತೆಗೆದುಕೊಂಡಿತು. ಹೀಗಾಗಿ, ‘ಟೈಮ್ಸ್‌ ಆಫ್‌ ಇಂಡಿಯಾ’ ಮೂಲಗಳ ಪ್ರಕಾರ ಲಾಹೋರ್‌ನಲ್ಲಿದ್ದ ಅಭಿನಂದನ್‌ರನ್ನು ಐಎಸ್‌ಐ ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರ ವಿಡಿಯೋ ಹೇಳಿಕೆ ರೆಕಾರ್ಡ್‌ ಮಾಡಿಕೊಳ್ಳಲಾಯಿತು. ಜತೆಗೆ ಸುಮಾರು ಹೊತ್ತು ಅವರು ಅಲ್ಲೇ ಇದ್ದರು.

9 ಗಂಟೆ ಹೊತ್ತಿಗೆ ಈ ವಿಡಿಯೋ ಪಾಕಿಸ್ತಾನ ಮಾಹಿತಿ ಇಲಾಖೆ ಟ್ಟಿಟ್ಟರ್‌ ಖಾತೆ ಮೂಲಕ ಹೊರ ಬಿತ್ತು. ಈ ವಿಡಿಯೋದಲ್ಲಿ ಅಭಿನಂದನ್‌, ‘ನಾನು ಗುರಿಯನ್ನು ಹುಡುಕಿಕೊಂಡು ಪಾಕಿಸ್ತಾನದೊಳಕ್ಕೆ ತೆರಳಿದೆ. ಆದರೆ ನನ್ನ ವಿಮಾನವನ್ನು ಹೊಡೆದುರುಳಿಸಲಾಯಿತು’ ಎಂದಿದ್ದಾರೆ. ಜತೆಗೆ ‘ಪಾಕಿಸ್ತಾನ ಸೇನೆ ತೀರಾ ವೃತ್ತಿಪರವಾಗಿದ್ದು ನನ್ನನ್ನು ಚೆನ್ನಾಗಿ ನೋಡಿಕೊಂಡಿತು’ ಎಂಬ ಸಾಲುಗಳೂ ವಿಡಿಯೋದಲ್ಲಿದ್ದವು.

ಅನುಮಾನವೇ ಬೇಕಿರಲಿಲ್ಲ. ತನ್ನ ಸ್ವ ಪ್ರಚಾರಕ್ಕಾಗಿ ಪಾಕಿಸ್ತಾನ ಇಂಥಹದ್ದೊಂದು ಹೆಜ್ಜೆ ಇಟ್ಟಿತ್ತು. ಆದರೆ ಯಾವಾಗ ವಿಡಿಯೋಗೆ ವಿರೋಧ ಕೇಳಿ ಬಂತೋ, ಅದನ್ನು ಪಾಕಿಸ್ತಾನ ಸರಕಾರ ಹಿಂತೆಗೆದುಕೊಂಡು ಬಿಟ್ಟಿತು. ಆದರೆ ಅಷ್ಟರಲ್ಲಾಗಲೇ ವಿಡಿಯೋ ತಲುಪಬೇಕಾದವರಿಗೆ ತಲುಪಿಯಾಗಿತ್ತು.

ಪ್ರಕ್ರಿಯೆಗಳ ವಿಳಂಬ:

ಅವರ ಆಗಮನ ತಡವಾಗಲು ಇದೂ ಒಂದು ಕಾರಣವಾದರೆ ಇನ್ನೊಂದು ಕಡೆಯಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ನಿಧಾನಗೊಳಿಸಲಾಗಿತ್ತು. ನಡುವೆ ದಾಖಲೆಗಳ ಸಮಸ್ಯೆಯೂ ಉದ್ಭವವಾಯಿತು. ಜತೆಗೆ ಕೊನೆಯ ಕ್ಷಣದಲ್ಲಿ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಹೀಗಾಗಿ ವಾಘಾ ಗಡಿಯತ್ತ ಅವರು ಬರುವುದು ತಡವಾಯಿತು.

ವಿಶೇಷವೆಂದರೆ ಅವರನ್ನು ಪಾಕಿಸ್ತಾನದ ಸೇನೆಯೇ ಭಾರತದ ಗಡಿಯವರೆಗೆ ತಂದು ಬಿಟ್ಟಿದ್ದು. ಸಾಮಾನ್ಯವಾಗಿ ಜಿನೇವಾ ಒಪ್ಪಂದದ ಪ್ರಕಾರ ಯುದ್ಧ ಖೈದಿಗಳನ್ನು ಅಂತಾರಾಷ್ಟ್ರೀಯ ಎನ್‌ಜಿಒ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗುತ್ತದೆ. ನಂತರ ರೆಡ್‌ಕ್ರಾಸ್‌ನ ಅಧಿಕಾರಿಗಳು ಅವರನ್ನು ತವರು ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಸುತ್ತಾರೆ.

ಆದರೆ ಪಾಕಿಸ್ತಾನ ಸರಕಾರ ರೆಡ್‌ಕ್ರಾಸ್‌ ಕೈಗೆ ಅಭಿನಂದನ್‌ರನ್ನು ಹಸ್ತಾಂತರಿಸದೇ ತಾನೇ ಗಡಿಯವರೆಗೂ ಕರೆದುಕೊಂಡು ಬಂತು. ಶಸ್ತ್ರ ಸಜ್ಜಿತ ಸೈನಿಕರ ಬೆಂಗಾವಲಿನಲ್ಲಿ ಸೇನೆಯ ಅಧಿಕಾರಿಗಳೇ ಅವರನ್ನು ಗಡಿಯವರೆಗೆ ಕರೆ ತಂದರು. ಇವರ ಜತೆಗೆ ರೆಡ್‌ಕ್ರಾಸ್‌ ಅಧಿಕಾರಿಗಳೂ ಉಪಸ್ಥಿತರಿದ್ದರು ಎಂದು ‘ಎಪಿ’ ವರದಿ ಮಾಡಿದೆ.

ಕೊನೆಗೆ ರಾತ್ರಿ 9 ಗಂಟೆಯ ಹೊತ್ತಿಗೆ ಬೂದು ಬಣ್ಣದ ಪ್ಯಾಂಟ್, ಬಿಳಿ ಅಂಗಿ, ನೀಲಿ ಬಣ್ಣದ ಕೋಟ್‌ ತೊಟ್ಟಿದ್ದ ಅಭಿನಂದನ್‌ ಓರ್ವ ಮಹಿಳೆ, ಒಬ್ಬರು ಅಧಿಕಾರಿ ಮತ್ತು ಬಂದೂಕು ಹಿಡಿದಿದ್ದ ಸೈನಿಕರ ಜತೆಯಲ್ಲಿ ಭಾರತದ ಗಡಿಯತ್ತ ನಡೆದು ಬರಲಾರಂಭಿಸಿದರು.

ಅಭಿನಂದನ್‌ ಜತೆ ನಡೆದು ಬಂದ ಮಹಿಳೆ ಯಾರು?

ಪಾಕಿಸ್ತಾನ ವಿದೇಶಾಂಗ ಇಲಾಖೆಯ ಭಾರತೀಯ ವಿಭಾಗ ನಿರ್ದೇಶಕಿ ಡಾ. ಫರಿಹಾ ಬುಗ್ತಿ ಜತೆ ಅಭಿನಂದನ್.
ಪಾಕಿಸ್ತಾನ ವಿದೇಶಾಂಗ ಇಲಾಖೆಯ ಭಾರತೀಯ ವಿಭಾಗ ನಿರ್ದೇಶಕಿ ಡಾ. ಫರಿಹಾ ಬುಗ್ತಿ ಜತೆ ಅಭಿನಂದನ್.
/ಫಸ್ಟ್‌ಪೋಸ್ಟ್‌

ಸಹಜವಾಗಿಯೇ ಅಭಿನಂದನ್‌ ಅವರ ಜತೆಗೆ ನಗು ಮೊಗದಲ್ಲಿ ನಡೆದು ಬರುತ್ತಿದ್ದ ಮಹಿಳೆ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಟಿವಿ ನೋಡುತ್ತಿದ್ದವರಿಗೆ ಆಕೆ ರೆಡ್‌ ಕ್ರಾಸ್‌ ಸಂಘಟನೆ ಪದಾಧಿಕಾರಿಯಿರಬಹುದಾ? ಭಾರತದ ರಾಯಭಾರ ಕಚೇರಿ ಅಧಿಕಾರಿಯಾ? ಎಂಬ ಪ್ರಶ್ನೆ ಮೂಡಿ ಬರಲಾರಂಭಿಸಿತು.

ಆದರೆ ಆಕೆ ಇದ್ಯಾವುದೂ ಅಗಿರಲಿಲ್ಲ; ಬದಲಿಗೆ ಪಾಕಿಸ್ತಾನದ ವಿದೇಶಾಂಗ ಇಲಾಖೆಯಲ್ಲಿ ಭಾರತೀಯ ವ್ಯವಹಾರ ವಿಭಾಗದ ನಿರ್ದೇಶಕಿ (ಭಾರತದ ಐಎಫ್‌ಎಸ್‌ ಅಧಿಕಾರಿಗೆ ಸಮ). ಯಾಗಿದ್ದರು. ವಿದೇಶಾಂಗ ಇಲಾಖೆಯಲ್ಲಿ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುವುದು ಡಾ. ಫರಿಹಾ ಬುಗ್ತಿ ಅವರ ಕೆಲಸ. ಅಭಿನಂದನ್‌ ಭಾರತದ ಸೈನಿಕರಾಗಿದ್ದರಿಂದ ಅವರ ಜತೆಗೆ ಬುಗ್ತಿಯೂ ವಾಘಾ ಗಡಿವರೆಗೂ ಬಂದಿದ್ದರು.

ಕುಲಭೂಷಣ್‌ ಜಾಧವ್‌ ಪ್ರಕರಣವನ್ನು ನಿರ್ವಹಣೆ ಮಾಡುವ ಅಧಿಕಾರಿಗಳಲ್ಲೂ ಈಕೆ ಇದ್ದಾರೆ. ಕಳೆದ ವರ್ಷ ಇಸ್ಲಮಾಬಾದ್‌ನಲ್ಲಿ ಜಾಧವ್‌ರ ಭೇಟಿಗೆಂದು ಆಕೆಯ ತಾಯಿ ಮತ್ತು ಪತ್ನಿ ತೆರಳಿದ್ದಾಗ ಅವರ ಜತೆ ಇದ್ದಿದ್ದು ಇದೇ ಬುಗ್ತಿ. ನಿನ್ನೆ ರಾತ್ರಿ 9.20 ಗಂಟೆವರೆಗೆ ಅಭಿನಂದನ್‌ ಜತೆ ನಗುತ್ತಾ ಬಂದು ಅವರನ್ನು ಗಡಿಯಲ್ಲಿ ಭಾರತಕ್ಕೆ ಬೀಳ್ಕೊಟ್ಟು ತೆರಳಿದರು.

ನಂತರ 9.22ಕ್ಕೆ ಸರಿಯಾಗಿ ಅಭಿನಂದನ್‌ ಭಾರತದ ನೆಲಕ್ಕೆ ಕಾಲಿಟ್ಟರು. ಅವರನ್ನು ಬಿಎಸ್‌ಎಫ್‌ ಅಧಿಕಾರಿಗಳು ಆದರದಿಂದ ಬರಮಾಡಿಕೊಂಡರು. ಈ ಸಂದರ್ಭ ಪ್ರತಿಕ್ರಿಯೆ ನೀಡಿದ ಏರ್‌ ವೈಸ್‌ ಮಾರ್ಷಲ್‌ ಆರ್‌.ಜಿ.ಕೆ ಕಪೂರ್‌, “ಅಭಿನಂದನ್‌ ವಾಪಸ್‌ ಬಂದಿರುವುದಕ್ಕೆ ಐಎಎಫ್‌ ಸಂತಸಗೊಂಡಿದೆ. ಇದೀಗ ಅವರನ್ನು ವಿವರವಾದ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದೇವೆ,” ಎಂದು ಅಲ್ಲಿಂದ ಕರೆದುಕೊಂಡು ಹೋದರು.

ಹೀಗೆ ಫೆಬ್ರವರಿ 27 ರಂದು ಮುಂಜಾನೆ ಭಾರತದ ಯುದ್ಧ ವಿಮಾನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಪತನವಾದ ನಂತರ ಅಲ್ಲಿನ ಸೇನೆ ಕೈಗೆ ಸೆರೆ ಸಿಕ್ಕಿದ್ದ ಅಭಿನಂದನ್‌ 60 ಗಂಟೆಗಳ ಒಳಗೆ ಮತ್ತೆ ಭಾರತಕ್ಕೆ ತಲುಪಿದ್ದರು.

ಚಿತ್ರ ಕೃಪೆ: ಗಲ್ಫ್‌ ನ್ಯೂಸ್