samachara
www.samachara.com
 ಅಭಿನಂದನ್‌ ಆಗಮನದ ನಿರೀಕ್ಷೆಯಲ್ಲಿರುವಾಗ ಹುಟ್ಟಿಕೊಂಡ ಉತ್ತರವಿಲ್ಲದ 6 ಪ್ರಶ್ನೆಗಳು 
COVER STORY

ಅಭಿನಂದನ್‌ ಆಗಮನದ ನಿರೀಕ್ಷೆಯಲ್ಲಿರುವಾಗ ಹುಟ್ಟಿಕೊಂಡ ಉತ್ತರವಿಲ್ಲದ 6 ಪ್ರಶ್ನೆಗಳು 

ಪ್ರಶ್ನೆ 4: ಪ್ರಧಾನಿ ನರೇಂದ್ರ ಮೋದಿ ಎಲ್ಲಿದ್ದಾರೆ?

ಕಳೆದ ಮೂರು ದಿನಗಳಿಂದ ಉದ್ವಿಗ್ನವಾಗಿದ್ದ ದಕ್ಷಿಣ ಏಷ್ಯಾ ಭಾಗ ನಿನ್ನೆಯಿಂದ ಸ್ವಲ್ಪ ಮಟ್ಟಿಗೆ ಶಾಂತವಾಗಿದೆ.

ಸೆರೆ ಸಿಕ್ಕ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ರನ್ನು ‘ಶಾಂತಿ ಸೂಚಕ’ವಾಗಿ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಗುರುವಾರ ಘೋಷಿಸಿದ್ದರು. ಇದರಿಂದ ಭಾರತೀಯರಲ್ಲಿ ಆವರಿಸಿದ್ದ ಆತಂಕ ದೂರವಾಗಿತ್ತು. ಇದೀಗ ಶುಕ್ರವಾರ ಸಂಜೆಗೂ ಮೊದಲು ಅಭಿನಂದನ್ ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಲಿದ್ದು ಅವರ ಬರುವಿಕೆಗಾಗಿ ದೇಶದ ಜನರು ಕಾತರದಿಂದ ಕಾಯುತ್ತಿದ್ದಾರೆ.

ಆದರೆ ಕತೆ ಇಲ್ಲಿಗೇ ಮುಗಿದಿಲ್ಲ. ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿ, ಬಾಲಕೋಟ್‌ ಮೇಲೆ ಭಾರತ ಹಾಕಿದ ಬಾಂಬ್‌ಗಳು, ಬುಧವಾರ ಗಡಿ ನಿಯಂತ್ರಣ ರೇಖೆ ಬಳಿ ಭಾರತ- ಪಾಕಿಸ್ತಾನ ಯುದ್ಧ ವಿಮಾನಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಂದಷ್ಟು ಪ್ರಶ್ನೆಗಳು ಉತ್ತರ ಸಿಗದೆ ಉಳಿದುಕೊಂಡಿವೆ.

1. ಅಭಿನಂದನ್‌ ಬಿಡುಗಡೆಯೊಂದಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಎಲ್‌ಒಸಿಯಲ್ಲಿ ಉದ್ಭವಿಸಿದ್ದ ಆಂತಕದ ಕಾರ್ಮೋಡ ತಿಳಿಯಾಗುವುದೇ?

ಮೊದಲೆರಡು ದಿನ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಕ್ಕಿ ಎಂಬ ವಾತಾವರಣವಿತ್ತು. ಇದಕ್ಕೂ ಮೊದಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ವೈಮಾನಿಕ ದಾಳಿ ಮೊದಲಾದ ಘಟನೆಗಳ ನಂತರ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಂತೂ ಯುದ್ಧ ಭೀತಿ ಸೃಷ್ಟಿಯಾಗಿತ್ತು. ಪರಸ್ಪರ ಶೆಲ್‌ ದಾಳಿಗಳು ನಡೆದು ಕೆಲವರು ಗಾಯಗೊಂಡಿದ್ದರು. ಸಮೀಪದ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದೀಗ ಪಾಕಿಸ್ತಾನದ ಏಕಪಕ್ಷೀಯ ಶಾಂತಿ ಮಾತುಕತೆ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇವೆಲ್ಲದರ ಮೇಲೆ ಪರಿಣಾಮ ಬೀರಲೇಬೇಕು. ಹಾಗಾಗದಿದ್ದಲ್ಲಿ ಮತ್ತೊಮ್ಮೆ ಅದು ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಕ್ಷುಬ್ಧ ವಾತಾವರಣ ಸೃಷ್ಟಿಗೆ ಕಾರಣವಾಗಬಲ್ಲುದು. ಇದರ ನಡುವೆ ಪುಲ್ವಾಮಾ ದಾಳಿಯಲ್ಲಿ ಸಂಭವಿಸಿದ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾದ ಗುಪ್ತಚರ ವೈಫಲ್ಯವನ್ನು ಇವುಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕಾಗಿದೆ.

2. ಬಾಲಕೋಟ್‌ ಮತ್ತು ಆಕಾಶದಲ್ಲಿ ನಿಜಕ್ಕೂ ಏನು ನಡೆಯಿತು?

ಪಾಕಿಸ್ತಾನ ತನ್ನ ಸೆರೆಯಲ್ಲಿರುವ ಪೈಲಟ್‌ರನ್ನು ಬಿಡುಗಡೆ ಮಾಡುವ ಮೂಲಕ, ಎರಡೂ ದೇಶಗಳಲ್ಲಿ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದೆ. ಜತೆಗೆ ಇದಕ್ಕೆ ಕಾರಣವಾದ ಘಟನೆಗಳ ಬಗ್ಗೆಯೂ ಒಂದಷ್ಟು ಪ್ರಶ್ನೆಗಳಿವೆ. ಫೆಬ್ರವರಿ 26ರಂದು ಬಾಲಕೋಟ್‌ನಲ್ಲಿ ನಡೆದ ದಾಳಿಯಲ್ಲಿ ಉಗ್ರರಿಗೆ ಎಷ್ಟರ ಮಟ್ಟಿಗೆ ಹಾನಿಯಾಗಿದೆ? ಬುಧವಾರ ಪಾಕಿಸ್ತಾನದ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದು ಹೇಗೆ? ದಾಟಿದ್ದಲ್ಲದೆ ಭಾರತದ ಯುದ್ಧ ವಿಮಾನವನ್ನು ಪತನಗೊಳಿಸಿದ್ದು ಹೇಗೆ? ಪಾಕಿಸ್ತಾನದ ಯುದ್ಧ ವಿಮಾನವನ್ನೂ ಹೊಡೆದುರುಳಿಸಲಾಯಿತೇ? ಬುಧವಾರ ಬುದ್ಗಾಮ್‌ನಲ್ಲಿ ಎಂಐ 17 ಹೆಲಿಕಾಪ್ಟರ್‌ ಪತನವಾಗಲು ಕಾರಣವೇನು? 7 ಜನರು ಸಾವನ್ನಪ್ಪಿದ್ದ ಈ ಘಟನೆ ತಾಂತ್ರಿಕ ಸಮಸ್ಯೆಯಿಂದ ಆಗಿದ್ದೇ?

3. ಭಾರತ ತನ್ನ ಕಾರ್ಯಾಚರಣೆಯಿಂದ ಪಾಕಿಸ್ತಾನವನ್ನು ಬದಲಿಸಿತೇ?

ಬಾಲಕೋಟ್‌ ದಾಳಿಯ ಪ್ರಮುಖ ಉದ್ದೇಶವಿದ್ದುದು ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವುದು. ಈ ಮೂಲಕ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡುವುದು ಜತೆಗೆ ಭಾರತದ ವಿರುದ್ಧದ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವ ಅದರ ಕ್ರಮವನ್ನು ತಡೆಯುವುದಾಗಿತ್ತು.

ಪಾಕಿಸ್ತಾನ ದಶಕಗಳಿಂದ ಭಾರತ ವಿರೋಧಿ ಉಗ್ರ ಚಟುವಟಿಕೆಗಳಿಗೆ ತನ್ನ ನೆಲದಲ್ಲಿ ಅವಕಾಶ ನೀಡುತ್ತಲೇ ಬಂದಿದೆ. ಇದೆಲ್ಲಾ ಗೊತ್ತಿದ್ದರೂ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರ ಎಂಬ ಕಾರಣಕ್ಕೆ ಭಾರತ ಗಡಿ ನಿಯಂತ್ರಣ ರೇಖೆ ದಾಟಲು ಹಿಂದೆ ಮುಂದೆ ನೋಡುತ್ತಿತ್ತು. ಆದರೆ ಎರಡು ಸಂದರ್ಭದಲ್ಲಿ ಮೋದಿ ಈ ದೃಷ್ಟಿಕೋನವನ್ನು ಬದಲಿಸಲು ಯತ್ನಿಸಿದರು. ಮೊದಲಿಗೆ 2016ರ ಸರ್ಜಿಕಲ್‌ ಸ್ಟ್ರೈಕ್‌ ಹೆಸರಿನಲ್ಲಿ ಭಾರತವೇ ಗಡಿ ದಾಟಿ ದಾಳಿ ನಡೆಸಿತು. ಇದೀಗ ಬಾಲಕೋಟ್‌ ದಾಳಿ ಮೂಲಕ ಎರಡನೇ ಬಾರಿ ಈ ರೀತಿಯ ಘಟನೆ ನಡೆದಿದೆ.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಗಡಿ ನಿಯಂತ್ರಣ ರೇಖೆ ದಾಟಿ ಬಂದು ಹಿಂದಿನ ಯಥಾಸ್ಥಿತಿ ಮುಂದುವರಿಸಲು ಯತ್ನಿಸಿದೆ. ಮುಂದಿನ ಬಾರಿ ದಾಳಿ ನಡೆಸದಂತೆ ಭಾರತವನ್ನು ತಡೆ ಹಿಡಿಯಲು ಯತ್ನಿಸಿದೆ. ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ದಿನಗಳಿಂದ ನಡೆದ ಘಟನೆಗಳು ಪಾಕಿಸ್ತಾನದ ನಡೆಗಳನ್ನು ನಿಜಕ್ಕೂ ಬದಲಿಸಿವೆಯೇ ಅಥವಾ ಇದು ಕೇವಲ ತಾತ್ಕಾಲಿಕವೇ?

4. ಪ್ರಧಾನಿ ನರೇಂದ್ರ ಮೋದಿ ಎಲ್ಲಿದ್ದಾರೆ?

ಕಳೆದ ಎರಡು ದಿನಗಳಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಲ್ಲಿನ ದೇಶದ ಜನತೆ ಮತ್ತು ಭಾರತವನ್ನು ಉದ್ದೇಶಿಸಿ ಎರಡು ಸಲ ಮಾತನಾಡಿದ್ದಾರೆ. ಕೊನೆಗೆ ಗುರುವಾರ ಸಂಸತ್‌ನ ಜಂಟಿ ಅಧಿವೇಶನದಲ್ಲಿ ಅಭಿನಂದನ್‌ ವರ್ತಮಾನ್‌ ಬಿಡುಗಡೆಯನ್ನು ಘೋಷಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸಾರ್ವಜನಿಕವಾಗಿ ಮಾತನಾಡಿದ್ದು ತೀರಾ ಕಡಿಮೆ.

ಅಭಿನಂದನ್‌ ವರ್ತಮಾನ್‌ ಪಾಕಿಸ್ತಾನದ ಕೈಯಲ್ಲಿ ಸೆರೆ ಸಿಕ್ಕಿದ್ದಾರೆ ಎಂದು ಗೊತ್ತಾದ ಬಳಿಕವೂ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಪೂರ್ವ ನಿಗದಿಯಾದ ಕಾರ್ಯಕ್ರಮಗಳಲ್ಲಿ ತಲ್ಲೀನರಾಗಿದ್ದರು. ಸಾಮಾನ್ಯವಾಗಿ ನರೇಂದ್ರ ಮೋದಿ ಹೆಡ್‌ಲೈನ್‌ಗಳಲ್ಲಿ ಜಾಗ ಪಡೆದುಕೊಳ್ಳುವುದರಲ್ಲಿ ನಿಸ್ಸೀಮರು. ಆದರೆ ಅಭಿನಂದನ್‌ ಸೆರೆಯಾದ ನಂತರ ಮೋದಿ ಮತ್ತು ಅವರ ಸರಕಾರ ಹೆಚ್ಚು ಕಡಿಮೆ ಮೌನಕ್ಕೆ ಶರಣಾಗಿತ್ತು. ಭಾರತದ ಹೆಚ್ಚಿನ ಮಾಧ್ಯಮಗಳು ಮೋದಿ ಮತ್ತವರ ಸರಕಾರದ ಮೌನವನ್ನು ಪ್ರಶ್ನಿಸಲಿಲ್ಲವಾದರೂ, ದೇಶ ಆತಂಕದಲ್ಲಿದ್ದಾಗ ಪಕ್ಷದ ಕಾರ್ಯಕರ್ತರ ಜತೆ ಸಮಾಲೋಚನೆ ಮುಂದುವರಿಸಿದ್ದ ಪ್ರಧಾನಿ ನಡೆಯನ್ನು ವಿರೋಧ ಪಕ್ಷಗಳು ಟೀಕಿಸಬೇಕಾಗಿ ಬಂತು.

5. ಸ್ಥಳೀಯ ಮಾಧ್ಯಮಗಳೀಗ ಯಾವ ತಿರುವು ತೆಗೆದುಕೊಳ್ಳುತ್ತವೆ?

ಅಂತರಾಷ್ಟ್ರೀಯ ಮಾಧ್ಯಮಗಳು ಅನಿವಾರ್ಯವಾಗಿ ಇಮ್ರಾನ್‌ ಖಾನ್‌ ನಿರ್ಧಾರದ ಬಗ್ಗೆ ಗಮನ ಕೇಂದ್ರೀಕರಿಸಿವೆ. ಇದರಲ್ಲೆಲ್ಲೂ ಅಭಿನಂದನ್‌ರನ್ನು ಭಾರತಕ್ಕೆ ಒಪ್ಪಿಸುವಂತೆ ಸೌದಿ ಅರೇಬಿಯಾ ಮತ್ತು ಅಮೆರಿಕಾ ಹಾಕಿದ ಒತ್ತಡದ ಉಲ್ಲೇಖವಿಲ್ಲ. ಆದರೆ, ಕಳೆದ ಕೆಲವು ವರ್ಷಗಳಿಂದ ಸರಕಾರದ ಪ್ರಪಗಂಡಾವನ್ನು ಮತ್ತಷ್ಟು ದೊಡ್ಡ ದನಿಯಲ್ಲಿ ತಲುಪಿಸುವ ಕೆಲಸ ಮಾಡಿಕೊಂಡು ಬಂದ ಭಾರತದ ಮಾಧ್ಯಮಗಳು ಮಾತ್ರ ‘ಇದು ಮೋದಿಯ ಜಯ’ ಎಂದು ಬಣ್ಣಿಸುವುದರಲ್ಲಿ ನಿರತವಾಗಿವೆ. ‘ಪಾಕಿಸ್ತಾನದ ಜತೆ ನವದೆಹಲಿ ಮಾತುಕತೆಗೆ ನಿರಾಕರಿಸಿತು ಹೀಗಾಗಿ ಜಾಗತಿಕ ಒತ್ತಡಕ್ಕೆ ಮಣಿದು ಇಮ್ರಾನ್‌ ಖಾನ್ ವರ್ಧಮಾನ್‌ರನ್ನು ತಂದು ಒಪ್ಪಿಸಿದರು ಎಂಬಂತೆ’ ಮಾಧ್ಯಮಗಳು ಸುದ್ದಿ ಹರಡುತ್ತಿವೆ. ಆದರೆ ಸತ್ಯ ಇದರ ನಡುವೆ ಎಲ್ಲೋ ಕಳೆದು ಹೋದಂತೆ ಭಾಸವಾಗುತ್ತಿದೆ. ಜಾಗತಿಕ ಪತ್ರಿಕೆಗಳನ್ನು ತೆಗೆದು ನೋಡಿದರೆ ಪಿಆರ್‌ ಮ್ಯಾನೇಜ್‌ಮೆಂಟ್‌ ವಿಚಾರದಲ್ಲಿ ಪಾಕಿಸ್ತಾನ ಜಾಗತಿಕ ಜಯ ಸಾಧಿಸಿದ್ದು ಕಾಣಿಸುತ್ತದೆ.

6. ಎರಡೂ ದೇಶಗಳಲ್ಲಿ ಇರುವ ಯುದ್ಧ ಪಿಪಾಸುಗಳು ಈ ನಡೆಯನ್ನು ಒಪ್ಪಿಕೊಳ್ಳಬಲ್ಲರೇ?

ಪ್ರತಿಯಾಗಿ ಏನನ್ನೂ ಪಡೆದುಕೊಳ್ಳದೆ ಅಭಿನಂದನ್‌ರನ್ನು ಬಿಟ್ಟು ಕಳುಹಿಸುತ್ತಿರುವುದರ ಬಗ್ಗೆ ಪಾಕಿಸ್ತಾನದಲ್ಲಿ ಈಗಾಗಲೇ ಇಮ್ರಾನ್‌ ಖಾನ್‌ ವಿರುದ್ಧ ಅಪಸ್ವರ ಎದ್ದಿದೆ. ಅಸಾಧ್ಯವಾದರೂ, ಭಾರತಕ್ಕೆ ಇನ್ನೂ ಹೆಚ್ಚಿನ ತಕ್ಕ ಶಾಸ್ತಿ ಮಾಡಬೇಕು ಎಂಬ ಕೂಗು ಅಲ್ಲಿ ಇನ್ನೂ ಜೀವಂತವಾಗಿದೆ.

ಈ ನಡುವೆ ಭಾರತದಲ್ಲಿ ‘ಮೋದಿ ಇಮ್ರಾನ್‌ ಖಾನ್‌ ಸೋಲೊಪ್ಪಿಕೊಳ್ಳುವಂತೆ ಮಾಡಿದರು’ ಎಂಬುದಾಗಿ ಭಕ್ತರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಭಾರತದ ಹೆಮ್ಮೆಯ ಯೋಧರೊಬ್ಬರನ್ನು ಪಾಕಿಸ್ತಾನ ಬಂಧಿಸಿದ್ದು ಹೇಗೆ ಎಂಬ ಗೊಂದಲ ಇನ್ನೂ ತಲೆಯಿಂದ ಹೋಗಿಲ್ಲ. ಸರ್ಜಿಕಲ್‌ ಸ್ಟೈಕ್‌ ನಡೆದ ಬಳಿಕ ಭಾರತ ಸರಕಾರ ಒಂದು ತಲೆ ಹೋದರೆ ವೈರಿಗಳ ಹತ್ತು ತಲೆ ತರುವುದಾಗಿ ಹೇಳಿಕೊಂಡಿತ್ತು. ಈಗ ಭಾರತದ ಮಾಧ್ಯಮಗಳು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಬಾಲಕೋಟ್‌ ವೈಮಾನಿಕ ದಾಳಿಯಲ್ಲಿ 200-300 ಉಗ್ರರು ಫಿನಿಷ್‌ ಎನ್ನುತ್ತಿವೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ನಿನ್ನೆ ಈ ಪ್ರಶ್ನೆಯನ್ನು ಏರ್ ವೈಸ್‌ ಮಾರ್ಷಲ್‌ ಆರ್‌.ಜಿ.ಕೆ ಕಪೂರ್‌ ಮುಂದಿಟ್ಟಾಗ ಅವರು, ‘ಜೀವಹಾನಿಯ ಸಂಖ್ಯೆ ಹೇಳಲು ಇನ್ನೂ ಸರಿಯಾದ ಸಮಯ ಬಂದಿಲ್ಲ’ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಒಂದೊಮ್ಮೆ ಆಗಿರುವ ಹಾನಿಯ ಬಗ್ಗೆ ಇನ್ನೂ ಸಾಕ್ಷ್ಯಗಳು ಸಿಗದಿದ್ದಲ್ಲಿ ‘ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಿದೆ’ ಎಂಬ ಧ್ವನಿ ಟೊಳ್ಳಾಗಬಹುದು.

ಕೃಪೆ: ಸ್ಕ್ರಾಲ್‌ ಡಾಟ್‌ ಇನ್, ಚಿತ್ರ ಕೃಪೆ: ಡಿಎನ್‌ಎ