samachara
www.samachara.com
ಜಿನೇವಾ ಒಪ್ಪಂದ ಉಲ್ಲಂಘಿಸಿದ ಪಾಕ್; ಪ್ರಚಾರ ನಿರತ ಪ್ರಧಾನಿಗೆ ಅರ್ಥವಾಗುವುದು ಯಾವಾಗ?
COVER STORY

ಜಿನೇವಾ ಒಪ್ಪಂದ ಉಲ್ಲಂಘಿಸಿದ ಪಾಕ್; ಪ್ರಚಾರ ನಿರತ ಪ್ರಧಾನಿಗೆ ಅರ್ಥವಾಗುವುದು ಯಾವಾಗ?

ಅಂತರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಮೇಲೆ ಒತ್ತಡವನ್ನು ಹೇರುವಂತೆ ಮಾಡಬಹುದು. ‘ತನ್ನ ನಡವಳಿಕೆಗಳನ್ನು ಬದಲಾಯಿಸುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಬಹುದು. ಆದರೆ ಇದನ್ನು ಮುನ್ನಡೆಸಬೇಕಾದ ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿದ್ದಾರೆ.

ಪಾಕಿಸ್ತಾನದ ನೆಲದಲ್ಲಿ ಬುಧವಾರ ಭಾರತದ ಯುದ್ಧ ವಿಮಾನ ಮಿಗ್‌ 21 ಪತನವಾಗಿದ್ದು, ಭಾರತದ ಪೈಲಟ್‌ ಒಬ್ಬರು ಪಾಕಿಸ್ತಾನದ ವಶದಲ್ಲಿದ್ದಾರೆ.

ಪಾಕಿಸ್ತಾನದ ಸರಕಾರಿ ಮಾಧ್ಯಮಗಳಾದ ಪಾಕಿಸ್ತಾನ ರೇಡಿಯೋ, ಕೆಲವು ಮಿಲಿಟರಿ ಅಧಿಕಾರಿಗಳು ತಮ್ಮ ವಶದಲ್ಲಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ವಿಡಿಯೋಗಳನ್ನು ಹರಿಯ ಬಿಟ್ಟು, ಸೇನಾ ನಿಯಮಗಳ ಪ್ರಕಾರ ಅವರನ್ನು ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಹೀಗೆ ಯುದ್ಧ ಖೈದಿಗಳ ಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುವುದು ಜಿನೇವಾ ಒಪ್ಪಂದದ ಕಲಂ 13ರ ಸ್ಪಷ್ಟ ಉಲ್ಲಂಘನೆ. ಜಿನೇವಾ ಒಪ್ಪಂದಕ್ಕೆ ಭಾರತ- ಪಾಕಿಸ್ತಾನ ಎರಡೂ ದೇಶಗಳು ಸಹಿ ಹಾಕಿದ್ದು, ಆರ್ಟಿಕಲ್‌ 13ರಲ್ಲಿ ಹೇಳಲಾದ ‘ಅವಮಾನ ಮತ್ತು ಸಾರ್ವಜನಿಕ ಗುರುತಿಸುವಿಕೆ’ಯಿಂದ ಖೈದಿಯನ್ನು ರಕ್ಷಿಸಬೇಕಿದೆ. ಆದರೆ ಪಾಕಿಸ್ತಾನ ಅಭಿನಂದನ್ ವಿಚಾರದಲ್ಲಿ ಹಾಗೆ ನಡೆದುಕೊಂಡಿಲ್ಲ ಎಂದು ತಜ್ಞರು ಹೇಳಿದ್ದಾರೆ.

“ಆರ್ಟಿಕಲ್‌ 13 ಅಡಿಯಲ್ಲಿ (ಯುದ್ಧ ಖೈದಿಯ) ವಿಡಿಯೋವನ್ನು ಬಿಡುಗಡೆ ಮಾಡದಂತೆ ನಿರ್ಬಂಧಿಸಲಾಗಿದೆ," ಎಂದು ಸೌತ್‌ ವೆಸ್ಟರ್ನ್‌ ಲಾ ಸ್ಕೂಲ್‌ನ ಮಿಲಿಟರಿ ಕಾನೂನು ತಜ್ಞರಾದ ರಾಶೆಲ್‌ ಎ. ವ್ಯಾನ್‌ಲ್ಯಾಂಡಿಗಂ ‘ವಾಷಿಂಗ್ಟನ್‌ ಪೋಸ್ಟ್‌’ಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನದ ಟಿವಿಗಳಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿರುವ, ಮುಖದ ಮೇಲೆ ರಕ್ತವಿರುವ ಪೈಲಟ್‌ ವಿಡಿಯೋ, ಚಿತ್ರಗಳನ್ನು ಪ್ರಸಾರ ಮಾಡಲಾಗಿದ್ದು ಯುದ್ಧ ಕೈದಿಗಳನ್ನು ನಡೆಸಿಕೊಳ್ಳುವ ಸಂಬಂಧ ಜಿನೇವಾ ಒಪ್ಪಂದ ಉಲ್ಲಂಫನೆಯಾಗಿದೆ ಎಂದು ವಿದೇಶಾಂಗ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

"ಗಾಯಗೊಂಡಿರುವ ವ್ಯಕ್ತಿಯನ್ನು ಕೀಳು ಮಟ್ಟದಲ್ಲಿ ಪ್ರದರ್ಶನ ಮಾಡುತ್ತಿರುವ ಪಾಕಿಸ್ತಾನದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದೇವೆ,” ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದ್ದು, "ಅವರು ತುರ್ತಾಗಿ ಮತ್ತು ಸುರಕ್ಷಿತವಾಗಿ ಮರಳಿ ಬರುವುದನ್ನು ಬಯಸುತ್ತಿದ್ದೇವೆ,’’ ಎಂದಿದೆ.

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, "ಪಾಕಿಸ್ತಾನ ಸರಕಾರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ನಂತರ ಡಿಲೀಟ್‌ ಮಾಡಿದೆ," ಎಂದು ದೂರಿದ್ದಾರೆ.

ಆದರೆ ಇದು, "ತಾವು ವಿಡಿಯೋ ಬಿಡುಗಡೆ ಮಾಡಬಾರದಿತ್ತು ಎಂದು ಹೇಳುವುದರ ಸ್ಪಷ್ಟ ಸೂಚನೆ," ಎಂದು ವ್ಯಾನ್‌ಲ್ಯಾಂಡಿಗಂ ವ್ಯಾಖ್ಯಾನಿಸಿದ್ದಾರೆ. ಮತ್ತು ಪಾಕಿಸ್ತಾನದ ನಡೆಯಲ್ಲಿ ಪಶ್ಚಾತ್ತಾಪವನ್ನು ಅವರು ಗುರುತಿಸಿದ್ದಾರೆ.

ರೇಡಿಯೋ ಪಾಕಿಸ್ತಾನ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ತಮ್ಮ ಹೆಸರು, ರ್ಯಾಂಕ್‌ ಮತ್ತು ಸರ್ವಿಸ್‌ ನಂಬರ್‌ ಹೇಳಿದ್ದರು. ಮತ್ತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದರು. ಇದು ಸಾಮಾನ್ಯ ಸೇನಾ ಪದ್ಧತಿಯಾಗಿದ್ದು, ವಿಡಿಯೋದಲ್ಲಿ ಅವರು ಪಾಕಿಸ್ತಾನದ ಅಧಿಕಾರಿಗಳನ್ನು ಸರ್‌ ಎಂದು ಸಂಬೋಧಿಸಿದ್ದರು.

ಇದಲ್ಲದೆ ಇನ್ನೂ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋದಲ್ಲಿ ಸ್ಥಳೀಯರು ಪೈಲಟ್‌ ಮೇಲೆ ದಾಳಿ ಮಾಡುತ್ತಿರುವುದು ದಾಖಲಾಗಿದೆ. ನಂತರ ಸೈನಿಕರು ಹಲ್ಲೆಕೋರರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಚಹಾ ಕುಡಿಯುತ್ತಾ ಪಾಕಿಸ್ತಾನದ ಉಪಚಾರವನ್ನು ಅಭಿನಂದನ್‌ ಹೊಗಳಿದ್ದಾರೆ. ಅದೇ ವಿಡಿಯೋದಲ್ಲಿ ಅವರು ತಮ್ಮ ಮೂಲ ಮತ್ತು ಪಾಕಿಸ್ತಾನಕ್ಕೆ ಬಂದ ಉದ್ದೇಶವನ್ನು ಬಿಟ್ಟುಕೊಟ್ಟಿಲ್ಲ. ವಿಮಾನದ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಿಲ್ಲ.

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್.
ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್.

ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಬಿಡುಗಡೆ ಮಾಡುವ ಪಾಕಿಸ್ತಾನದ ತಂತ್ರಗಳಿಗೆ ಭಾರತ ವಿರೋಧ ವ್ಯಕ್ತಪಡಿಸಿದೆ.

ಆದರೆ “ಇಂಥಹ ಪರಿಸ್ಥಿತಿಯಲ್ಲಿ ಜಿನೇವಾ ಒಪ್ಪಂದವನ್ನು ಯಾರಿಗಾದರೂ ಪಾಲಿಸುವುದು ಕಷ್ಟ,” ಎನ್ನುತ್ತಾರೆ ಸೆಂಟರ್‌ ಫಾರ್‌ ಸ್ಟ್ರಾಟೆಜಿಕ್ ಆಂಡ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನ ತಜ್ಞ ಆಂಟನಿ ಎಚ್‌ ಕೋರ್ಡ್ಸ್‌ಮನ್. ಇದಕ್ಕವರು ಜಿನೇವಾ ಒಪ್ಪಂದದಲ್ಲಿ ಯುದ್ಧ ಖೈದಿಗಳನ್ನು ನಡೆಸಿಕೊಳ್ಳುವ ಸಂಬಂಧ ಇರುವ, ವಾಸ್ತವದಲ್ಲಿ ಪಾಲಿಸಲು ತುಸು ಕಷ್ಟವಾಗಿರುವ ನಿಯಮಗಳನ್ನು ಉಲ್ಲೇಖಿಸಿದ್ದಾರೆ.

"ಈ ಪ್ರಕರಣದಲ್ಲಿ ಮತ್ತು ಹೆಚ್ಚಿನ ಎಲ್ಲಾ ಪ್ರಕರಣದಗಳಲ್ಲಿಯೂ ಯುದ್ಧ ಕೈದಿಗಳು ಸೆರೆಯಾದಾಗ ಯುದ್ಧದ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆ,” ಎಂದು ಅವರು ವಾಸ್ತವ ವಿಚಾರವನ್ನು ತೆರೆದಿಟ್ಟಿದ್ದಾರೆ.

ಜತೆಗೆ ಜಿನೇವಾ ಒಪ್ಪಂದದ ಎಲ್ಲಾ ಉಲ್ಲಂಘನೆಗಳೂ ಯುದ್ಧ ಅಪರಾಧವಾಗುವುದಿಲ್ಲ ಎನ್ನುವ ವಿವರಣೆ ನೀಡುತ್ತಾರೆ ವ್ಯಾನ್‌ಲ್ಯಾಂಡಿಗಂ. ಆದರೆ, “ವಿಡಿಯೋ ಬಿಡುಗಡೆಯ ಉದ್ದೇಶವೇನು? ಮತ್ತು ಇದರಿಂದ ಖೈದಿ ಗುರುತಿಸಲ್ಪಟ್ಟಿದ್ದಾರೆಯೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ,” ಎನ್ನುತ್ತಾರೆ ಆಕೆ.

“ಈ ಪ್ರಕರಣವನ್ನು ನೋಡಿದಾಗ ಇಲ್ಲಿ ವಿಡಿಯೋ ಬಿಡುಗಡೆ ಮಾಡುವ ಯಾವ ಅಗತ್ಯವೂ ಪಾಕಿಸ್ತಾನ ಸೇನೆಗೆ ಇರಲಿಲ್ಲ. ಬಂಧಿತರನ್ನು ಹಾಗೂ ಭಾರತವನ್ನು ಅವಮಾನಿಸುವ ಉದ್ದೇಶದಿಂದಲೇ ಬಹುಶಃ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಪಾಕಿಸ್ತಾನ ಆರ್ಟಿಕಲ್‌ 13ನ್ನು ಉಲ್ಲಂಘಿಸಿದೆ,” ಎಂದು ಅವರು ವಿವರಿಸಿದ್ದಾರೆ. ಎರಡೂ ದೇಶಗಳು ಅಧಿಕೃತವಾಗಿ ಯುದ್ಧ ಘೋಷಣೆ ಮಾಡದೆ ಅಂತರಾಷ್ಟ್ರೀಯ ಬಿಕ್ಕಟ್ಟುಗಳು ಉದ್ಭವವಾದಾಗ ಈ ಕಲಂ ಅನ್ವಯವಾಗುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ 2003ರಲ್ಲಿ ಇರಾಕ್‌ನಲ್ಲಿ ಸೆರೆ ಹಿಡಿದ ಅಮೆರಿಕಾದ ಪಡೆಗಳ ವಿಡಿಯೋವನ್ನು ಟಿವಿಗಳಲ್ಲಿ ಪ್ರಸಾರ ಮಾಡಿದಾಗ ಈ ನಿಯಮವನ್ನು ಅನ್ವಯ ಮಾಡಲಾಗಿತ್ತು. ಆಗಿನ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ಎಚ್‌ ರಮ್ಸ್‌ಫೆಲ್ಡ್‌ ಜಿನೇವಾ ಒಪ್ಪಂದವನ್ನು ಪ್ರಸ್ತಾಪಿಸಿದ್ದರು. “ಜಿನೇವಾ ಒಪ್ಪಂದ ಯುದ್ಧ ಖೈದಿಗಳ ಚಿತ್ರ ತೆಗೆಯಲು ಮತ್ತು ಅವರಿಗೆ ಅವಮಾನ ಮಾಡಲು ಅವಕಾಶ ನೀಡುವುದಿಲ್ಲ," ಎಂದು ರಮ್ಸ್‌ಫೆಲ್ಡ್‌ ಗುಡುಗಿದ್ದರು.

ಈ ಹಿಂದೆ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿಯೂ ನಾರ್ತ್‌ ವಿಯೆಟ್ನಾಂ ಅಮೆರಿಕಾದ ಯುದ್ಧ ಖೈದಿಗಳನ್ನು ಪ್ರಚಾರಕ್ಕೆ ಬಳಸಿದಾಗಲೂ ಇದರ ವಿರುದ್ದ ದೊಡ್ಡ ಮಟ್ಟದ ಆಕ್ರೋಶ ಕೇಳಿ ಬಂದಿತ್ತು.

1946ರಲ್ಲಿ ಯುದ್ಧ ಖೈದಿಗಳನ್ನು ಕೆಟ್ಟದಾಗಿ ನಡೆಸಿಕೊಂಡ ಹಿನ್ನೆಲೆಯಲ್ಲಿ ಜರ್ಮನ್‌ ಲೆಫ್ಟಿನೆಂಟ್‌ ಜನರಲ್‌ ರನ್ನು ದೋಷಿ ಎಂದು ಸಾಬೀತು ಮಾಡಿ ಅವರಿಗೆ ಶಿಕ್ಷೆಯಾಗುವಂತೆಯೂ ಅಮೆರಿಕಾದ ಸೇನಾ ಆಯೋಗ ನೋಡಿಕೊಂಡಿತ್ತು. ಈ ಜರ್ಮನ್‌ ಲೆಫ್ಟಿನೆಂಟ್‌ ಜನರಲ್‌ 1944ರಲ್ಲಿ ರೋಮ್‌ನಲ್ಲಿ ಅಮೆರಿಕಾದ ಖೈದಿಗಳನ್ನು ಪೆರೇಡ್‌ ಮಾಡಿದ್ದ. ಈ ದೃಶ್ಯಗಳು ಸೆರೆಯಾಗಿ ಇಟಲಿಯ ಪತ್ರಿಕೆಗಳಲ್ಲಿ ಅಚ್ಚವಾಗಿತ್ತು. ಅಷ್ಟಕ್ಕೇ ಆತನಿಗೆ ಶಿಕ್ಷೆಯಾಗುವಂತೆ ಅಮೆರಿಕಾ ಮಾಡಿತ್ತು.

ಸಾಮಾನ್ಯವಾಗಿ ವಿಡಿಯೋ ಬಿಡುಗಡೆಯಂತ ಉಲ್ಲಂಘನೆಗಳಿಗೆ ಜಿನೇವಾ ಒಪ್ಪಂದವನ್ನು ಜಾರಿಗೊಳಿಸುವುದು ಕಷ್ಟ. ಆದರೆ ಅಂತರಾಷ್ಟ್ರೀಯ ಸಮುದಾಯಗಳು ಪಾಕಿಸ್ತಾನದ ಮೇಲೆ ಒತ್ತಡವನ್ನು ಹೇರಬಹುದು. ತನ್ನ ನಡವಳಿಕೆಗಳನ್ನು ಬದಲಾಯಿಸುವಂತೆ ಒತ್ತಾಯಿಸಬಹುದು ಎನ್ನುತ್ತಾರೆ ವ್ಯಾನ್‌ಲ್ಯಾಂಡಿಗಂ.

"ಜಿನೀವಾ ಸಮಾವೇಶದಲ್ಲಿ ಭಾಗಿಯಾದ ವಿಶ್ವದ ಯಾವುದೇ ದೇಶವೂ ಇದರ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಆದರೆ ಕಾನೂನನ್ನು ತಾವಾಗಿ ಪಾಲಿಸುವುದರಲ್ಲಿ ಮೌಲ್ಯವಿದೆ,” ಎನ್ನುವ ವ್ಯಾನ್‌ಲ್ಯಾಂಡಿಗಂ, “ನಿಮ್ಮ ನಡವಳಿಕೆಗಳು ದಾಖಲಾಗುತ್ತಿವೆ. ಇದನ್ನು ಮರೆಯಬೇಡಿ ಎಂದು ಅವರಿಗೆ (ಪಾಕಿಸ್ತಾನಕ್ಕೆ) ದೃಢವಾಗಿ ಹೇಳಬಹುದು," ಎನ್ನುತ್ತಾರೆ.

ಆದರೆ ಇದನ್ನು ಮಾಡಬೇಕಾದವರು ಯಾರು? ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅವರೀಗಾಗಲೇ ಅಂತರಾಷ್ಟ್ರೀಯ ಒತ್ತಡವನ್ನು ಪಾಕಿಸ್ತಾನದ ಮೇಲೆ ತರಬೇಕಾಗಿತ್ತು. ಸ್ಪಷ್ಟ ಶಬ್ದಗಳಲ್ಲಿ ಆ ದೇಶಕ್ಕೆ ಎಚ್ಚರಿಕೆಯನ್ನು ನೀಡಬೇಕಾಗಿತ್ತು. ಹೀಗೊಂದು ಜವಾಬ್ದಾರಿಯನ್ನು ಮರೆತು ಅವರು ಹೊಣೆಗೇಡಿಯಂತೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ದೇಶದ ಹೆಮ್ಮೆಯ ಸೈನಿಕನ ಎದುರು ಅವರಿಗೆ ಮುಂಬರಲಿರುವ ಚುನಾವಣೆಯೇ ಮುಖ್ಯವಾಗಿದೆ.

ಅವರನ್ನು ಪ್ರಶ್ನಿಸಬೇಕಾದ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಅಭಿನಂದನ್‌ ಪಾಕಿಸ್ತಾನದ ಅಧಿಕಾರಿಗಳಿಂದ ಮುಚ್ಚಿಟ್ಟ ವಿವರಗಳನ್ನು ಕೆಣಕುವುದರಲ್ಲಿ ನಿರತವಾಗಿವೆ. ಈ ಮೂಲಕ ತಾವೇ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿವೆ.

ಯಾರಾದರೂ ಕುಳಿತುಕೊಂಡು ಜೀನೇವಾ ಒಪ್ಪಂದದ ಪಾಠವನ್ನು ಈ ದೇಶದ ಪ್ರಧಾನಿ ಮತ್ತು ಯುದ್ಧೋನ್ಮಾದದಲ್ಲಿರುವ ಮಾಧ್ಯಮಗಳಿಗೆ ತುರ್ತಾಗಿ ತಿಳಿಸಿ ಹೇಳಬೇಕಿದೆ. ಅಂದಹಾಗೆ ಜಿನೇವಾ ಒಪ್ಪಂದದ ಪ್ರತಿಯೊಂದು ಇಲ್ಲಿದೆ. ಸಮಯ ಇದ್ದರೆ ಓದಿಕೊಳ್ಳಿ...

ಪೂರಕ ಮಾಹಿತಿ: ವಾಷಿಂಗ್ಟನ್‌ ಪೋಸ್ಟ್‌