samachara
www.samachara.com
ಗ್ರೌಂಡ್‌ ರಿಪೋರ್ಟ್‌: ಬಾಲಕೋಟ್‌ ದಾಳಿಗೆ ಸಾಯದ 300 ಫಿದಾಯೀನ್‌ಗಳನ್ನು ಹುಡುಕುತ್ತಾ...
COVER STORY

ಗ್ರೌಂಡ್‌ ರಿಪೋರ್ಟ್‌: ಬಾಲಕೋಟ್‌ ದಾಳಿಗೆ ಸಾಯದ 300 ಫಿದಾಯೀನ್‌ಗಳನ್ನು ಹುಡುಕುತ್ತಾ...

ಬಾಂಬ್‌ ಹಾಕಿದ ಸ್ಥಳದಲ್ಲೇ ಮದರಸಾವೊಂದಿದ್ದು ಇದನ್ನು ಉಗ್ರ ಸಂಘಟನೆ ‘ಜೈಷ್‌-ಎ-ಮೊಹಮ್ಮದ್‌ (ಜೆಇಎಂ)’ ನಡೆಸುತ್ತಿದೆ. ಇದರ ಸುತ್ತ ನಿಗೂಢತೆಯೊಂದು ಬೆಳೆದು ನಿಂತಿದೆ.

ಈ ವಾರದ ಆರಂಭದಲ್ಲಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ವಾಯು ದಾಳಿಯಲ್ಲಿ ನಾಶವಾಗಿದ್ದು ನಿರ್ಜನ ಕಾಡು ಮತ್ತು ರೈತರ ಗದ್ದೆ; ಹೀಗಂತ ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಅಲ್‌ಜಝೀರಾಗೆ ತಿಳಿಸಿದ್ದಾರೆ.

ಆದರೆ ಈ ಬಾಂಬ್‌ ಹಾಕಿದ ಸ್ಥಳದಲ್ಲೇ ಮದರಸಾವೊಂದಿದ್ದು ಇದನ್ನು ಉಗ್ರ ಸಂಘಟನೆ ‘ಜೈಷ್‌-ಎ-ಮೊಹಮ್ಮದ್‌ (ಜೆಇಎಂ)’ ನಡೆಸುತ್ತಿದೆ. ಇದರ ಸುತ್ತ ನಿಗೂಢತೆಯೊಂದು ಬೆಳೆದು ನಿಂತಿದೆ.

ಉತ್ತರ ಪಾಕಿಸ್ತಾನದಲ್ಲಿ ಜಬಾ ಎಂಬ ಪಟ್ಟಣವೊಂದಿದೆ. ಇಸ್ಲಮಾಬಾದ್‌ನಿಂದ 100 ಕಿಲೋಮೀಟರ್‌ ದೂರದಲ್ಲಿರುವ ಇಲ್ಲಿನ ಗ್ರಾಮೀಣ ಪ್ರದೇಶದ ಕಾಡಿನಲ್ಲಿ ಮತ್ತು ಗದ್ದೆಯೊಂದರ ಮೇಲೆ ಒಟ್ಟು ನಾಲ್ಕು ಬಾಂಬ್‌ಗಳು ಬಿದ್ದಿವೆ.

ಬಾಂಬ್‌ ಬಿದ್ದ ಸ್ಥಳದಲ್ಲಿ ದೇವದಾರು ಮರಗಳು ನೆಲಕ್ಕುರುಳಿದ್ದರೆ, ಕಲ್ಲು ಬಂಡೆಗಳು ಛಿದ್ರವಾಗಿವೆ. ಇಲ್ಲಿ ಯಾವುದೇ ಕಟ್ಟಡ ಧರೆಗುರುಳದ ಕುರುಹುಗಳ್ಯಾವೂ ಇಲ್ಲ. ಬದಲಿಗೆ ನಾಲ್ಕೂ ಸ್ಥಳಗಳಲ್ಲಿ ಬಾಂಬ್‌ನ ಕೆಲವು ಲೋಹದ ತುಂಡುಗಳಷ್ಟೇ ಇವೆ.

ಆದರೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ‘ಜೆಇಎಂ’ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದ್ದರು. ಮತ್ತು ಜೆಇಎಂನ ಉಗ್ರರು, ತರಬೇತುದಾರರು, ಹಿರಿಯ ಕಮಾಂಡರ್‌ಗಳು ಮತ್ತು ಆತ್ಮಾಹುತಿ ದಾಳಿಗೆ ಸಿದ್ಧಪಡಿಸಿದ ಜಿಹಾದಿಗಳ ಗುಂಪನ್ನು ನಾಶಪಡಿಸಿದ್ದೇವೆ ಎಂದಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ವಾದಿಸಿದ್ದ ಪಾಕಿಸ್ತಾನ ಇಲ್ಲಿ ಯಾವುದೇ ಜೀವಹಾನಿ ನಡೆದಿಲ್ಲ ಎಂದು ಹೇಳಿತ್ತು. ಘಟನೆ ನಡೆದ ದಿನವೂ ಸ್ಥಳೀಯ ಆಸ್ಪತ್ರೆ ಅಧಿಕಾರಿಗಳು ಮತ್ತು ಹಲವು ನಿವಾಸಿಗಳು ಬಾಂಬ್‌ ಬಿದ್ದ ಸ್ಥಳಕ್ಕೆ ಓಡಿಹೋಗಿದ್ದು ಅಲ್ಲಿ ಯಾವುದೇ ದೇಹಗಳೂ ಸಿಕ್ಕಿಲ್ಲ, ಗಾಯಗೊಂಡವರೂ ಪತ್ತೆಯಾಗಿಲ್ಲ.

ಸ್ಥಳೀಯ ಕಾಲಮಾನ ಮುಂಜಾನೆ ಅಂದಾಜು ಮೂರು ಗಂಟೆ ಹೊತ್ತಿಗೆ ಈ ದಾಳಿ ನಡೆಯಿತು. "ನಾನು ಮೊದಲ ಸ್ಫೋಟದ ಶಬ್ದಕ್ಕೆ ಎದ್ದುಕೊಂಡೆ. ಬೆಡ್‌ನಿಂದ ಎದ್ದು ಓಡಿದೆ," ಎನ್ನುತ್ತಾರೆ 58 ವರ್ಷದ ಕೃಷಿಕ ನೂರನ್‌ ಶಾ. ಇವರ ಜಮೀನಿನ ಮೇಲೆಯೇ ಎರಡು ಬಾಂಬ್‌ಗಳು ಬಿದ್ದಿವೆ. "ಎರಡನೇ ಬಾಂಬ್‌ ಸ್ಫೋಟದಿಂದ ನನ್ನ ಮನೆಯ ಬಾಗಿಲು ಬಡಿದಂತಾಯಿತು." ಎನ್ನುತ್ತಾರೆ ಅವರು.

ತಲೆಗೆ ಬ್ಯಾಂಡೇಜ್‌ ಕಟ್ಟಿಕೊಂಡಿದ್ದ ನೂರನ್‌ ಶಾ.
ತಲೆಗೆ ಬ್ಯಾಂಡೇಜ್‌ ಕಟ್ಟಿಕೊಂಡಿದ್ದ ನೂರನ್‌ ಶಾ.
/ಅಲ್‌ಜಝೀರಾ

ಏನಾಯಿತು ಎಂದು ಶಾ ಮನೆಯಿಂದ ಹೊರಗೆ ಹೋದಾಗ ಚೂಪಾದ ವಸ್ತುವೊಂದು ಅಥವಾ ಕಲ್ಲು ಬಂದು ಅವರ ಹಣೆಗೆ ಬಡಿಯಿತು. ಇದರಿಂದ ಅವರು ಗಾಯಗೊಂಡರು.

ಇದೇ ಸಂದರ್ಭದಲ್ಲಿ, “ನಾನು ಕೂಡ ಸ್ಫೋಟದ ಸದ್ದು ಕೇಳಿ ಮನೆಯಿಂದ ಹೊರಗೆ ಓಡಿ ಬಂದಿದ್ದೆ,” ಎನ್ನುತ್ತಾರೆ ಇನ್ನೋರ್ವ ಸ್ಥಳೀಯ ನಿವಾಸಿ ಸಯೀದ್‌ ರೆಹಮಾನ್‌ ಶಾ. "ನಾನು ನಾಲ್ಕು ಬೃಹತ್‌ ಸ್ಫೋಟದ ಸದ್ದನ್ನು ಕೇಳಿದೆ. ಎಲ್ಲವೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ನಡೆದವು" ಎನ್ನುತ್ತಾರೆ 50 ವರ್ಷ ಪ್ರಾಯದ ರೆಹಮಾನ್‌ ಶಾ.

ಮನೆಯಿಂದ ಹೊರ ಬಂದಾಗ ನಾನು ಬೆಂಕಿ ಮತ್ತು ಹೊಗೆಯನ್ನು ಕಂಡೆ ಎನ್ನುತ್ತಾರೆ ಅವರು. ನಂತರ ಅವರು ಗಾಯಗೊಂಡು ಬಿದ್ದಿದ್ದ ತಮ್ಮ ಪಕ್ಕದ ಮನೆಯ ನೂರನ್‌ ಶಾ ಸಹಾಯಕ್ಕೆ ಧಾವಿಸಿದರು.

ಅಷ್ಟೊತ್ತಿಗೆ ನೂರನ್‌ ಶಾಗೆ ಪ್ರಜ್ಞೆ ತಪ್ಪಿತ್ತು. ನೆಲದ ಮೇಲೆ ಬಿದ್ದಿದ್ದರು ಎಂದು ಅಂದು ನಡೆದ ಬೆಳವಣಿಗೆಯನ್ನು ವಿವರಿಸುತ್ತಾ ಹೋದರು ರೆಹಮಾನ್‌ ಶಾ. “ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದೆವು. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದೆವು.” ಶಾ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಚೂಪಾದ ವಸ್ತುಗಳು ಬಂದು ಅಪ್ಪಳಿಸಿದ ಹೊಡೆತಕ್ಕೆ ಗೋಡೆಗಳ ಮೇಲೆ ರಂಧ್ರಗಳು ನಿರ್ಮಾಣವಾಗಿವೆ.

ಜಬಾದಲ್ಲಿ ಬಿದ್ದ ಬಾಂಬ್‌ನ ಚೂಪಾದ ಲೋಹದ ಭಾಗವೊಂದನ್ನು ತೋರಿಸುತ್ತಿರುವ ಸ್ಥಳೀಯರು.
ಜಬಾದಲ್ಲಿ ಬಿದ್ದ ಬಾಂಬ್‌ನ ಚೂಪಾದ ಲೋಹದ ಭಾಗವೊಂದನ್ನು ತೋರಿಸುತ್ತಿರುವ ಸ್ಥಳೀಯರು.
/ಅಲ್‌ಜಝೀರಾ

"ನಾವು ಕೇವಲ ಕೃಷಿಕರು ಮಾತ್ರ. ನಾವಿಲ್ಲಿ ಗೋಧಿ ಮತ್ತು ಮೆಕ್ಕೆ ಜೋಳ ಬೆಳೆಯುತ್ತೇವೆ," ಎನ್ನುತ್ತಾರೆ ರೆಹಮಾನ್‌ ಶಾ. ಕೆಲವರು ಒಂದಷ್ಟು ಜಾನುವಾರುಗಳನ್ನೂ ಇಟ್ಟುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡುತ್ತಾರೆ.

ನಿಗೂಢ ಜೆಇಎಂ ಮದರಸಾ:

ದಾಳಿ ಬೆನ್ನಿಗೆ ನಾವು ಜೆಇಎಂ ಸಂಸ್ಥಾಪಕ ಮಸೂದ್‌ ಅಝರ್‌ ಅಳಿಯ ಯೂಸುಫ್‌ ಅಝರ್‌ ನಡೆಸುತ್ತಿದ್ದ ತರಬೇತಿ ಶಿಬಿರವನ್ನು ನಾಶಗೊಳಿಸಿರುವುದಾಗಿ ಭಾರತ ಹೇಳಿಕೊಂಡಿತ್ತು.

2000ನೇ ಇಸವಿಯಲ್ಲಿ ಹುಟ್ಟಿಕೊಂಡ ಜೆಇಎಂ ಎಂಬ ಉಗ್ರ ಸಂಘಟನೆಗೆ ಭಾರತದಲ್ಲಿ ಹಲವು ದಾಳಿಗಳನ್ನು ನಡೆಸಿದ ಇತಿಹಾಸವಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಪುಲ್ವಾಮದಲ್ಲಿ ನಡೆದ ಆತ್ಮಾಹುತ ದಾಳಿ. ಇದರಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರು ಸಾವನ್ನಪ್ಪಿದ್ದರು. ಇದು ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ದಾಳಿ ಬೆನ್ನಿಗೆ ಪಾಕಿಸ್ತಾನ ಜೆಇಎಂನಂಥ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆಯೇ ಈ ದಾಳಿಯನ್ನು ನಿರ್ದೇಶಿಸಿದೆ ಎಂಬುದಕ್ಕೆ ಬೇಕಾದ ಸಾಕ್ಷ್ಯಗಳಿವೆ ಎಂದೂ ಭಾರತದ ಅಧಿಕಾರಿಗಳು ಹೇಳಿಕೊಂಡಿದ್ದರು.

ಆದರೆ ಇದಕ್ಕೆ ಒಪ್ಪದ ಪಾಕಿಸ್ತಾನ ತಾನು ಜೆಇಎಂ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿತ್ತು. 2002ರಲ್ಲೇ ಸಂಘಟನೆಯನ್ನು ನಿಷೇಧ ಮಾಡಿರುವುದಾಗಿಯೂ ಹೇಳಿತ್ತು. ಇದರ ನಡುವೆ ಬಾಂಬ್‌ ಬಿದ್ದ ಜಾಗದಲ್ಲೇ ಜೆಇಎಂ ನಡೆಸುವ ಮದರಸಾ ಇದೆ.

ಬಾಂಬೊಂದು ಬಿದ್ದ ಸ್ಥಳದಿಂದ ಪೂರ್ವಕ್ಕೆ ಕಿಲೋಮೀಟರ್‌ ದೂರಕ್ಕೂ ಕಡಿಮೆ ಅಂತರದಲ್ಲಿ ಜೆಇಎಂನ ಮದರಸಾ ಇದೆ ಎನ್ನುತ್ತಾರೆ ಸ್ಥಳೀಯರು. ಇದಕ್ಕೆ ಸಾಕ್ಷಿಯಾಗಿ ಮದರಸಾಕ್ಕೆ ದಾರಿ ತೋರಿಸುವ ಫಲಕ ರಸ್ತೆಯ ಮೇಲಿದೆ.

ಮದರಸಾಗೆ ದಾರಿ ತೋರಿಸುವ ಬೋರ್ಡ್. ಇದರಲ್ಲಿ ತಮ್ಮ ನಾಯಕ ಮಸೂದ್‌ ಅಝರ್‌ ಎಂದು ಬರೆಯಲಾಗಿದ್ದು, ಮುಹಮ್ಮದ್‌ ಯೂಸುಫ್‌ ಅಝರ್‌ ಇದರ ಆಡಳಿತಾಧಿಕಾರಿ ಎನ್ನುತ್ತಿದೆ.
ಮದರಸಾಗೆ ದಾರಿ ತೋರಿಸುವ ಬೋರ್ಡ್. ಇದರಲ್ಲಿ ತಮ್ಮ ನಾಯಕ ಮಸೂದ್‌ ಅಝರ್‌ ಎಂದು ಬರೆಯಲಾಗಿದ್ದು, ಮುಹಮ್ಮದ್‌ ಯೂಸುಫ್‌ ಅಝರ್‌ ಇದರ ಆಡಳಿತಾಧಿಕಾರಿ ಎನ್ನುತ್ತಿದೆ.
/ಅಲ್‌ಜಝೀರಾ

ಮದರಸಾದ ಬೋರ್ಡ್‌ನಲ್ಲಿ, ‘ಮದರಸಾ ತಲೀಮ್‌-ಉಲ್‌-ಕುರಾನ್‌’ ಎಂದು ಬರೆಯಲಾಗಿದ್ದು ಇದರ ನಾಯಕ ಮಸೂದ್‌ ಅಝರ್‌ ಎಂದು ಅದರಲ್ಲಿ ಉಲ್ಲೇಖವಾಗಿದೆ. ಮುಹಮ್ಮದ್‌ ಯೂಸುಫ್‌ ಅಝರ್‌ ಇದರ ಆಡಳಿತಾಧಿಕಾರಿ ಎಂಬುದನ್ನೂ ಈ ಬೋರ್ಡ್‌ ಹೇಳುತ್ತದೆ.

1999ರಲ್ಲಿ 150ಕ್ಕೂ ಹೆಚ್ಚು ಜನರಿದ್ದ ವಿಮಾನವನ್ನು ಅಪಹರಿಸಿ, ಭಾರತದ ಜೈಲಿನಿಂದ ಬಿಡುಗಡೆಯಾದ ನಂತರ ಮಸೂದ್‌ ಅಝರ್‌ ಜೆಇಎಂ ಸ್ಥಾಪನೆ ಮಾಡಿದ್ದ. ಅಫ್ಘಾನಿಸ್ತಾನದ ತಾಲಿಬಾನ್‌ ಜತೆ ಸಂಬಂಧ ಹೊಂದಿರುವ ಕಾರಣಕ್ಕೆ ಜೆಇಎಂ ಮೇಲೆ ಅಮೆರಿಕಾ ನಿರ್ಬಂಧ ಹೇರಿತ್ತು.

1999ರ ವಿಮಾನ ಹೈಜಾಕ್‌ಗೆ ಸಂಬಂಧಿಸಿದಂತೆ ಭಾರತ ಯೂಸುಫ್‌ ಅಝರ್‌ಗಾಗಿ ಹುಡುಕಾಡುತ್ತಲೇ ಇದೆ ಎಂಬುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಇಂಥಹದ್ದೊಂದು ಹಿನ್ನೆಲೆ ಇರುವ ಜೆಇಎಂನ ಮದರಸಾ ಇದ್ದ ಜಾಗಕ್ಕೆ ತೆರಳಲು ಅಲ್‌ಜಝೀರಾಗೆ ಸಾಧ್ಯವಾಗಿಲ್ಲ.

ಧಾರ್ಮಿಕ ಹೋರಾಟಗಾರರು

ಇಲ್ಲಿನ ನಿವಾಸಿಗಳು ಊರಿನಲ್ಲಿರುವ ಮದರಸಾ ಕುರಿತು ಗೊಂದಲದ ಹೇಳಿಕೆ ನೀಡುತ್ತಾರೆ. ಕೆಲವರು ಇಲ್ಲಿ ಶಾಲೆಯ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿತ್ತು ಎಂದರೆ, ಇನ್ನು ಕೆಲವರು ಇಲ್ಲಿ ಜೈಷ್‌ನ ತರಬೇತಿ ಶಿಬಿರ ನಡೆಯುತ್ತಿತ್ತು ಎನ್ನುತ್ತಾರೆ.

"ಅಲ್ಲಿ ಪರ್ವತ ತುದಿಯಲ್ಲಿ ಮದರಸಾ ಇದೆಯಲ್ಲ ಅಲ್ಲಿ ಮುಜಾಹಿದೀನ್‌ (ಧಾರ್ಮಿಕ ಹೋರಾಟಗಾರರು)ಗಳಿಗೆ ತರಬೇತಿ ನೀಡಲಾಗುತ್ತಿತ್ತು,'' ಎನ್ನುತ್ತಾ ಒಬ್ಬರು ದೂರದಲ್ಲಿದ್ದ ಧಾರ್ಮಿಕ ಶಿಕ್ಷಣ ಕೇಂದ್ರದತ್ತ ಬೆರಳು ತೋರಿಸಿದರು. ವಿಚಾರದ ಸೂಕ್ಷ್ಮತೆಯನ್ನು ಮನಗಂಡಿದ್ದ ಅವರು ತಮ್ಮ ಗುರುತನ್ನು ಬಹಿರಂಗಪಡಿಸದಂತೆ ಷರತ್ತು ವಿಧಿಸಿದರು.

"ಎಲ್ಲರಿಗೂ ಗೊತ್ತು ಈ ಪ್ರದೇಶದಲ್ಲಿ ಜೈಷ್‌ನ ಕ್ಯಾಂಪ್‌ ಇದೆ,'' ಎನ್ನುತ್ತಾರೆ 31 ವರ್ಷದ ಸ್ಥಳೀಯರೊಬ್ಬರು. ಅವರು ಕೂಡ ಅನಾಮಿಕರಾಗಿಯೇ ಉಳಿಯಲು ಬಯಸಿದರು. "ಇದು ತುಂಬಾ ಕ್ರೀಯಾಶೀಲವಾಗಿದ್ದ ತರಬೇತಿ ಕೇಂದ್ರವಾಗಿತ್ತು ಮತ್ತು ಇಲ್ಲಿ ಅವರು ಹೇಗೆ ಹೋರಾಟ ಮಾಡಬೇಕು ಎಂದು ಹೇಳಿಕೊಡುತ್ತಿದ್ದರು,'' ಎಂದು ಮಾಹಿತಿ ನೀಡಿದರು.

ಆದರೆ ಉಳಿದವರು ಈ ಹೇಳಿಕೆಗಳನ್ನು ನಿರಾಕರಿಸುತ್ತಾರೆ.

"ಇಲ್ಲಿ ಯಾವ ಕ್ಯಾಂಪ್‌ ಇರಲಿಲ್ಲ, ಭಯೋತ್ಪಾದಕರೂ ಇರಲಿಲ್ಲ,'' ಎನ್ನುತ್ತಾರೆ ಮಿರ್ ಅಫ್ಝಲ್ ಗುಲ್ಝಾರ್. ಇವರು ಬಾಂಬ್‌ ದಾಳಿ ನಡೆದ ಪ್ರದೇಶದಿಂದ ಕೆಲವೇ ದೂರದಲ್ಲಿ ವಾಸಿಸುತ್ತಾರೆ. "1980ರಲ್ಲಿ ಇಲ್ಲೊಂದು ಮುಜಾಹಿದೀನ್ ಕ್ಯಾಂಪ್‌ ಇತ್ತು. ಆದರೆ ಈಗ ಇಲ್ಲ,'' ಎಂದರು ಅವರು.

ಆದರೆ ಅಲ್ಲಿ ಸಿಕ್ಕ ಸಾಕ್ಷಿಗಳು ಈ ಧಾರ್ಮಿಕ ಕೇಂದ್ರ ಜೈಷ್‌ನ ತರಬೇತಿ ಶಿಬಿರ ಅಲ್ಲದಿದ್ದರೂ ನೇಮಕಾತಿ ಕೇಂದ್ರವಾಗಿತ್ತು ಎಂಬುದನ್ನು ತಿಳಿಸಿ ಹೇಳುತ್ತಿದ್ದವು.

2018ರ ಏಪ್ರಿಲ್‌ನಲ್ಲಿ ಈ ಜಾಗದಲ್ಲಿ ಜೈಷ್‌ನ ಮುಖ್ಯ ಕಮಾಂಡರ್, ಮಸೂದ್ ಅಝರ್ ತಮ್ಮ ಅಬ್ದುಲ್ ರವೂಫ್‌ ಅಸ್ಘರ್ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದ ಎಂದು ಜೈಷ್‌ ಜತೆ ಸಂಬಂಧ ಹೊಂದಿರುವ 'ಅಲ್‌-ಖ್ಹಲಮ್' ಎಂಬ ಪತ್ರಿಕೆಯ ವರದಿಯೊಂದು ಹೇಳುತ್ತದೆ. ಈ ಸಮಯದಲ್ಲಿ ಆತ ಜಿಹಾದ್‌ ಅಥವಾ ಇಸ್ಲಾಂ ಧರ್ಮ ಯುದ್ಧಕ್ಕೆ ಸೇರುವಂತೆ ನೆರೆದಿದ್ದವರಿಗೆ ಕರೆ ನೀಡಿದ್ದ ಎಂದು ಪತ್ರಿಕೆ ಹೇಳಿತ್ತು.

"ಈ ಸಂಸ್ಥೆ ಶಿಕ್ಷಣ ಹಾಗೂ ಧಾರ್ಮಿಕ ಕಟ್ಟುಪಾಡುಗಳನ್ನು ಮತ್ತು ಜಿಹಾದ್ ಬೋಧಿಸುವ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದೆ,'' ಎಂದು ವರದಿ ಹೇಳಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದವರು ಜಿಹಾದ್ ವಿರುದ್ಧ ಬೆಳೆಯುತ್ತಿರುವ ಮನಸ್ಥಿತಿಯನ್ನು ಖಂಡಿಸಿದ್ದರು ಮತ್ತು ಧರ್ಮಕ್ಕಾಗಿ ಹೋರಾಟ ಮಾಡಲು ಕರೆ ನೀಡಿದ್ದರು ಎಂದು ವರದಿ ತಿಳಿಸಿತ್ತು.

ಜಬಾದ ಭೌಗೋಳಿಕ ಪ್ರದೇಶದಲ್ಲಿ ಜೈಷ್‌ನ ತರಬೇತಿ ಕೇಂದ್ರವಿದೆ. ಇಲ್ಲಿ ಕೆಲವು ಮೂಲಭೂತ ಹಾಗೂ ಅತ್ಯಾಧುನಿಕ ಶಶ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂದು 2004 ಜನವರಿ 31ರಂದು ಅಮೆರಿಕಾದ ರಕ್ಷಣಾ ಇಲಾಖೆಯ ಮೆಮೊ ಹೇಳಿತ್ತು. ಇದನ್ನು 2011ರಲ್ಲಿ ವಿಕಿಲೀಕ್ಸ್‌ ಬಹಿರಂಗಪಡಿಸಿತ್ತು.

ಈ ಮೆಮೊದಲ್ಲಿ ಪಾಕಿಸ್ತಾನದ ಪ್ರಜೆ, ಜೈಷ್‌ನ ಸದಸ್ಯನಾಗಿದ್ದ ಖಾಲಿಲ್‌ ರೆಹ್ಮಾನ್‌ ಹಫೀಸ್‌ ಎಂಬಾತನ ಕತೆಯನ್ನು ವಿವರಿಸಿತ್ತು. ಈತ ಅಮೆರಿಕಾ ಪಡೆಗಳ ವಿರುದ್ಧ ಹೋರಾಟ ಮಾಡುವ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ಸೆರೆ ಸಿಕ್ಕಿದ್ದ ಮತ್ತು ಆತನನ್ನು ಗ್ವಾಟೆನಾಮೋ ಬೇ ಜೈಲಿಗೆ ಸ್ಥಳಾಂತರಿಸಲಾಗಿತ್ತು. 2004ರಲ್ಲಿ ಹಫೀಸ್‌ ಬಿಡುಗಡೆಗೊಂಡು ಮತ್ತೆ ಪಾಕಿಸ್ತಾನಕ್ಕೆ ವಾಪಾಸಾಗಿದ್ದ.

ಜಬಾದ ಬಾಂಬ್‌ ಬಿದ್ದ ಸ್ಥಳಕ್ಕೆ ವಾಪಾಸ್ ಬರುವುದಾದರೆ, ದಪ್ಪನೆಯ ಗಾಳಿ ಮರಗಳ ನಡುವಿನಿಂದ ಮಧ್ಯಾಹ್ನದ ಸೂರ್ಯನ ಕಿರಣಗಳು ನೆಲಕ್ಕೆ ತಾಕುತ್ತಿದ್ದ ಸಮಯದಲ್ಲಿ ಸ್ಥಳೀಯರು ನೂರನ್ ಶಾ ಮನೆಯಲ್ಲಿ ನೆರೆದಿದ್ದರು. ಕೆಲವರು ಬಾಂಬ್ ಬಿದ್ದ ಸ್ಥಳವನ್ನು ಪಾಕಿಸ್ತಾನ ಸೈನಿಕರ ಕಣ್ಗಾವಲಿನಲ್ಲಿ ಗಮನಿಸುತ್ತಿದ್ದರೆ, ಉಳಿದವರು ಸ್ಥಳೀಯ ಸುದ್ದಿ ವಾಹಿನಿಗಳಿಗೆ ಪೋಸ್ ಕೊಡಲು ಶುರುಮಾಡಿದರು.

ಬಿರುಕು ಬಿಟ್ಟ ಶಾ ಮನೆಯ ಗೋಡೆಗಳ ನೆರಳಿನಲ್ಲಿ ನಿಂತ ಜನ ಟಿವಿ ಕ್ಯಾಮೆರಾಗಳ ಮುಂದೆ ದೇಶಪ್ರೇಮದ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಕಡು ನೀಲಿ ಬಣ್ಣದ ಸಲ್ವಾರ್ ಕಮೀಝ್ ತೊಟ್ಟಿದ್ದ, ಇನ್ನೂ ತನ್ನ ತಲೆಗೆ ಬಿಳಿ ಬಣ್ಣದ ಬ್ಯಾಂಡೇಜ್ ಕಟ್ಟಿಕೊಂಡಿದ್ದ ತೆಳ್ಳನೆಯ ವ್ಯಕ್ತಿ ಶಾ, ಮತ್ತೊಂದು ಕ್ಯಾಮೆರಾಗೆ ತಿರುಗಿ ಸಂದರ್ಶನ ನೀಡಲು ಶುರುಮಾಡಿದರು.

ಭಾರತದ ನಾಲ್ಕು ಬಾಂಬ್‌ ದಾಳಿಯಿಂದ ಸೃಷ್ಟಿಯಾದ ನಾಲ್ಕು ಕಂದಕಗಳು.
ಭಾರತದ ನಾಲ್ಕು ಬಾಂಬ್‌ ದಾಳಿಯಿಂದ ಸೃಷ್ಟಿಯಾದ ನಾಲ್ಕು ಕಂದಕಗಳು.
/ಅಲ್‌ಜಝೀರಾ

ಕೃಪೆ: ಅಸದ್‌ ಹಶೀಮ್‌/ಅಲ್‌ಜಝೀರಾ