samachara
www.samachara.com
ಪಾಕ್‌ ವಶದಲ್ಲಿ ಭಾರತದ ಸೈನಿಕ; ಆಂಕರ್‌ಗಳು, ರಾಜಕಾರಣಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ
COVER STORY

ಪಾಕ್‌ ವಶದಲ್ಲಿ ಭಾರತದ ಸೈನಿಕ; ಆಂಕರ್‌ಗಳು, ರಾಜಕಾರಣಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ

ಪುಲ್ವಾಮಾ ದಾಳಿ ನಂತರ ಆರಂಭವಾದ ಉಭಯ ದೇಶಗಳ ನಡುವಿನ ಸಮರ ಈಗ ಇನ್ನೊಂದು ಹಂತ ಮುಟ್ಟಿದೆ. ಭಾರತದ ಯೋಧರೊಬ್ಬರು ಪಾಕ್ ವಶದಲ್ಲಿದ್ದಾರೆ. ಅವರನ್ನು ವಾಪಸ್‌ ಕರೆ ತನ್ನಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.

ಪಾಕಿಸ್ತಾನದ ನೆಲದಲ್ಲಿ ಭಾರತದ ಯುದ್ಧ ವಿಮಾನ ಪತನವಾಗಿರುವುದನ್ನು ವಿದೇಶಾಂಗ ಇಲಾಖೆ ಒಪ್ಪಿಕೊಂಡಿದೆ. ಪತನದ ವೇಳೆ ಓರ್ವ ಪೈಲಟ್‌ ನಾಪತ್ತೆಯಾಗಿರುವುದಾಗಿ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ. ಈ ಪೈಲಟ್‌ ನಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ‘ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಕುಮಾರ್‌ ತಿಳಿಸಿದ್ದಾರೆ.

ಇಂದು ಬೆಳಿಗ್ಗೆಯೇ ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಇದೀಗ ಪ್ರತಿಕ್ರಿಯೆ ನೀಡಿರುವ ಭಾರತ, “ತಾನು ಮಂಗಳವಾರ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಗೆ ಪಾಕಿಸ್ತಾನ ವಾಯು ಪಡೆ ಮೂಲಕ ಇಂದು ಪ್ರತಿಕ್ರಿಯೆ ನೀಡಿದೆ,” ಎಂದು ಆರೋಪಿಸಿದೆ.

"ಭಾರತದ ಗಡಿಯೊಳಗಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿ ತನ್ನ ವಾಯುಸೇನೆಯ ಮೂಲಕ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ. ಆದರೆ ಅತ್ಯಂತ ಎಚ್ಚರಿಕೆಯಿಂದ ಇದ್ದುದರಿಂದ ಪಾಕಿಸ್ತಾನದ ಯತ್ನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ," ಎಂದು ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಆಕಾಶದಲ್ಲಿ ನಡೆದ ಕಾದಾಟದಲ್ಲಿ ಪಾಕಿಸ್ತಾನ ವಾಯು ಸೇನೆಯ ಯುದ್ಧ ವಿಮಾನವೊಂದನ್ನು ಮಿಗ್‌ 21 ಬಿಷನ್‌ ಹೊಡೆದುರುಳಿಸಿದೆ. ಪಾಕಿಸ್ತಾನ ಭಾಗದಲ್ಲಿ ಆಕಾಶದಿಂದ ವಿಮಾನ ಬೀಳುತ್ತಿರುವುದನ್ನು ಕೆಳಗಿರುವ ಸೈನಿಕರು ನೋಡಿದ್ದಾರೆ. ಈ ಕಾದಾಟದಲ್ಲಿ ದುರಾದೃಷ್ಟಕ್ಕೆ ಮಿಗ್‌ 21 ವಿಮಾನವೊಂದನ್ನು ನಾವು ಕಳೆದುಕೊಂಡಿದ್ದೇವೆ. ಮತ್ತು ಪೈಲಟ್‌ ಒಬ್ಬರು ನಾಪತ್ತೆಯಾಗಿದ್ದಾರೆ. ಈ ಪೈಲಟ್‌ ನಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ಹೇಳಿದ್ದು, ನಾವು ಮಾಹಿತಿಯನ್ನು ಖಚಿತಪಡಿಸುತ್ತಿದ್ದೇವೆ,” ಎಂದು ವಿವರಿಸಿದ್ದಾರೆ.

ಭಾರತದ ಪೈಲಟ್‌ ಕಾಣೆಯಾಗಿರುವ ಸುದ್ದಿಯನ್ನು ಭಾರತ ಖಚಿತಪಡಿಸುತ್ತಿದ್ದಂತೆ ಅತ್ತ ಪಾಕಿಸ್ತಾನ ಬಂಧಿತ ಸೈನಿಕರ ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

ಒಟ್ಟು ಮೂರು ಪೈಲಟ್‌ಗಳನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್‌ನ ನಿರ್ದೇಶಕ ಜನರಲ್‌ ಅಸೀಫ್‌ ಘಫೂರ್‌ ಹೇಳಿದ್ದರು. ಇಬ್ಬರು ಸೈನಿಕರು ಕಸ್ಟಡಿಯಲ್ಲಿದ್ದು ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಒಬ್ಬರು ಗಾಯಗೊಂಡಿದ್ದು ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಘಫೂರ್‌ ತಿಳಿಸಿದ್ದರು. ಇದೀಗ ಅವರು ಹೇಳಿಕೆ ಬದಲಿಸಿದ್ದು ಕೇವಲ ಓರ್ವ ಸೈನಿಕ ವಿಂಗ್‌ ಕಮಾಂಡರ್‌ ಅಭಿನಂದನ್‌ ಮಾತ್ರ ತಮ್ಮ ವಶದಲ್ಲಿರುವುದಾಗಿ ಹೇಳಿದ್ದಾರೆ. ಮತ್ತು “ಭಾರತ ಹೇಳಿರುವಂತೆ ಯಾವುದೇ ಎಫ್‌-16ಗಳು ಪತನವಾಗಿಲ್ಲ. ಈ ಕಾದಾಟದಲ್ಲಿ ಎಫ್‌-16 ಭಾಗವಹಿಸಿಯೇ ಇರಲಿಲ್ಲ,” ಎಂದು ಅವರು ವಿವರಿಸಿದ್ದಾರೆ.

ಇನ್ನು ಪೈಲಟ್‌ ವಿಡಿಯೋವನ್ನು ರೇಡಿಯೋ ಪಾಕಿಸ್ತಾನ ಬಿಡುಗಡೆ ಮಾಡಿದ್ದು ಇದರಲ್ಲಿ "ನನ್ನ ಹೆಸರು ವಿಂಗ್‌ ಕಮಾಂಡರ್‌ ಅಭಿನಂದನ್‌. ನನ್ನ ಸರ್ವಿಸ್‌ ನಂಬರ್ 27981. ನಾನು ಮುಖ್ಯ ಪೈಲಟ್ ಅಲ್ಲ. ನನ್ನ ಧರ್ಮ ಹಿಂದೂ," ಎಂದು ಹೇಳಿಸಿದ್ದಾರೆ. ಜತೆಗೆ “ವಿದೇಶಾಂಗ ಇಲಾಖೆಯ ಮಾಹಿತಿಗೆ ನಾನು ಸದ್ಯ ಪಾಕಿಸ್ತಾನ ಸೇನೆಯ ಜತೆಗಿದ್ದೇನೆ,” ಎಂದು ಅಭಿನಂದನ್‌ ತಿಳಿಸಿದ್ದಾರೆ.

ವಿಡಿಯೋದಲ್ಲಿ ಅವರ ಕೈಯನ್ನು ಹಿಂದಕ್ಕೆ ಕಟ್ಟಲಾಗಿದ್ದು, ಕಣ್ಣುಗಳಿಗೆ ಬಟ್ಟೆ ಕಟ್ಟಲಾಗಿದೆ. ಮುಖದಿಂದ ರಕ್ತ ಸುರಿಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇವರದ್ದೇ ಇನ್ನೂ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ವಿಡಿಯೋಗಳಲ್ಲಿ ತೊರೆಯೊಂದರ ಪಕ್ಕ ಅಭಿನಂದನ್‌ ಅವರಿಗೆ ಪಾಕಿಸ್ತಾನದ ನಾಗರೀಕರು ಥಳಿಸುತ್ತಿರುವ ದೃಶ್ಯಗಳಿವೆ. ಈ ವಿಡಿಯೋ ಮತ್ತು ಮುಖದಲ್ಲಿ ರಕ್ತ ಸುರಿಯುತ್ತಿರುವ ಚಿತ್ರಗಳನ್ನು ಹಾಕಿ ಹಲವರು ರಾಜಕಾರಣಿಗಳು ಮತ್ತು ಸುದ್ದಿ ವಾಹಿನಿಗಳು ಯುದ್ಧೋನ್ಮಾದ ವಾರ್ತಾ ನಿರೂಪಕರ ವಿರುದ್ಧ ಕಿಡಿಕಾಡಿದ್ದಾರೆ. ಸದ್ಯ ಟಾಪ್‌ ಟ್ರೆಂಡಿಂಗ್‌ನಲ್ಲಿರುವ #SayNoToWar ಹ್ಯಾಷ್‌ ಟ್ಯಾಗ್‌ ಬಳಸಿ ‘ಇದಕ್ಕೆಲ್ಲಾ ನೀವೇ ಕಾರಣ’ ಎಂದು ಬೇಜವಾಬ್ದಾರಿಯ ಆಂಕರ್‌ಗಳನ್ನು, ದೇಶದ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದಯವಿಟ್ಟು ಆದಷ್ಟು ಬೇಗ ದೇಶಕ್ಕಾಗಿ ಹೋರಾಡಿದ ಅಭಿನಂದನ್‌ರನ್ನು ಭಾರತಕ್ಕೆ ವಾಪಸ್‌ ಕರೆ ತನ್ನಿ ಎಂಬ ಬೇಡಿಕೆಯನ್ನೂ ಇವರುಗಳು ಸರಕಾರದ ಮುಂದೆ ಇಟ್ಟಿದ್ದಾರೆ.

ವಿಶೇಷವೆಂದರೆ ಪಾಕಿಸ್ತಾನದಲ್ಲೂ ಇದೇ ಕಾಲಕ್ಕೆ #SayNoToWar ಹ್ಯಾಷ್‌ ಟ್ಯಾಂಗ್‌ ಟ್ರೆಂಡ್‌ ಆಗಿದೆ.

ಯುದ್ಧೋನ್ಮಾದಕ್ಕೆ ಬ್ರೇಕ್:

ಹೀಗೆ ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹುಟ್ಟಿಕೊಂಡಿದ್ದ ಯುದ್ಧೋನ್ಮಾದವೊಂದು ಮಾನವೀಯತೆ ನೆಲೆಯಲ್ಲಿ ಕೊಂಚ ಮಟ್ಟಿಗೆ ತಿಳಿಯಾಗಿದೆ.

ಇಂದು ಬೆಳಿಗ್ಗೆ ಪ್ರತಿಕ್ರಿಯೆ ನೀಡಿರುವ ಅಸೀಫ್‌ ಘಫೂರ್‌ “ ಯುದ್ಧದಲ್ಲಿ ಗೆದ್ದವರೆಂದು ಇರುವುದಿಲ್ಲ. ಮಾನವೀಯತೆ ಮಾತ್ರ ನಷ್ಟವಾಗುತ್ತದೆ,” ಎಂಬ ಎಚ್ಚರಿಕೆಯ ಮಾತುಗಳನ್ನಾಡಿದ್ದರು. ಮಧ್ಯಾಹ್ನ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಯುದ್ಧ ಬೇಡ ಎಂಬ ದೃಢ ನಿಲುವು ವ್ಯಕ್ತಪಡಿಸಿದ್ದಾರೆ. “ಯುದ್ಧ ಆರಂಭಿಸುವುದು ಸುಲಭ, ಆದರೆ ನಿಲ್ಲಿಸುವುದು ಕಷ್ಟ. ತಪ್ಪು ಲೆಕ್ಕಾಚಾರದಲ್ಲಿ ವಿಶ್ವದ ಎಲ್ಲಾ ಯುದ್ಧಗಳು ಕೊನೆಯಾಗಿವೆ,” ಎಂಬ ಕಿವಿಮಾತನ್ನು ಪಾಕಿಸ್ತಾನದ ಜನರಿಗೆ ತಿಳಿಸಿದ್ದಾರೆ.

ಜತೆಗೆ ಪ್ರಸ್ತುತ ಉದ್ವಿಗ್ನ ಪರಿಸ್ಥಿಯನ್ನು ತಣ್ಣಗಾಗಿಸಲು ಮತ್ತು ಎಲ್ಲಾ ಸಮಸ್ಯೆಗಳಿಗೆ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಲು ಅವರು ಮಾತುಕತೆಯ ಪ್ರಸ್ತಾಪವನ್ನು ಭಾರತದ ಮುಂದಿಟ್ಟಿದ್ದಾರೆ. ಇದಕ್ಕೆ ಭಾರತದ ಪ್ರಧಾನಿ ನರೇಂದ್ರ ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಎರಡೂ ದೇಶಗಳ ನಡುವೆ ಸೃಷ್ಟಿಯಾಗಿರುವ ಪ್ರಕ್ಷುಬ್ಧ ವಾತಾವರಣ ಮೋದಿ ನಡೆಯನ್ನು ಅವಲಂಬಿಸಿದೆ. ಜತೆಗೆ, ಯೋಧ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಬೇಕಿದೆ. ಅದು ‘ಸಮಾಚಾರ’ದ ಹಾರೈಕೆ ಕೂಡ.