samachara
www.samachara.com
‘ಯುದ್ಧೋನ್ಮಾದ ಪತ್ರಿಕೋದ್ಯಮ’: ದೇಶಗಳ ನಡುವೆ ಬೆಂಕಿ ಹಚ್ಚಿದ್ದ ಇಬ್ಬರು ನಿವ್ವಳ ಲಾಭ ಗಳಿಸಿದ್ದರು!
COVER STORY

‘ಯುದ್ಧೋನ್ಮಾದ ಪತ್ರಿಕೋದ್ಯಮ’: ದೇಶಗಳ ನಡುವೆ ಬೆಂಕಿ ಹಚ್ಚಿದ್ದ ಇಬ್ಬರು ನಿವ್ವಳ ಲಾಭ ಗಳಿಸಿದ್ದರು!

ಈ ಸ್ಟೋರಿ ಓದಿ ಭಾರತದ ಈ ಹೊತ್ತಿನ ಇಂದಿನ ಯುದ್ಧೋನ್ಮಾದ ಮಾಧ್ಯಮಗಳ ನೆನಪು ನಿಮಗೆ ಬಂದರೆ ಅದು ಕಾಕತಾಳೀಯ ಅಷ್ಟೆ. ಅಂದಿನ ಘಟನಾವಳಿಗಳಿಗೂ, ಇವತ್ತಿನ ವ್ಯಕ್ತಿಗಳಿಗೂ ಯಾವುದೇ ಸಂಬಂಧ ಇಲ್ಲ. 

1895ರಲ್ಲಿ ಕ್ಯೂಬಾ ಸ್ವಾತಂತ್ರ ಸಂಗ್ರಾಮ ಆರಂಭವಾಗುತ್ತಿದ್ದಂತೆ ಅಮೆರಿಕಾದ ಪತ್ರಿಕೋದ್ಯಮದಲ್ಲಿ ವಿಚಿತ್ರ ಜ್ವರವೊಂದು ಕಾಣಿಸಿಕೊಂಡಿತು. ದೂರದಲ್ಲಿ ಕ್ಯೂಬಾ ಎಂಬ ಪುಟ್ಟ ದೇಶ ಸ್ಪೇನ್‌ ವಿರುದ್ಧ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಿಸಿದ್ದರೆ ಇಲ್ಲಿ ನ್ಯೂಯಾರ್ಕ್‌ನಲ್ಲಿ ಜೋಸೆಫ್‌ ಪುಲಿಟ್ಜರ್‌ ಮತ್ತು ವಿಲಿಯಂ ರಾಂಡಾಲ್ಫ್‌ ಹರ್ಸ್ಟ್‌ ಎಂಬ ಇಬ್ಬರು ಅಪ್ಪಟ ಪತ್ರಿಕೋದ್ಯಮಿಗಳ ನಡುವೆ ಪೈಪೋಟಿಯ ಯುದ್ಧ ಆರಂಭಗೊಂಡಿತು.

ಅಷ್ಟೊತ್ತಿಗಾಗಲೇ ಪುಲಿಟ್ಜರ್‌ ಒಡೆತನದ ಪತ್ರಿಕೆ ‘ನ್ಯೂಯಾರ್ಕ್‌ ವರ್ಲ್ಡ್‌’ ನಂಬಲರ್ಹ ಸುದ್ದಿ ಮೂಲವಾಗಿ ಹೆಸರು ಗಳಿಸಿತ್ತು. ಹೀಗಾಗಿ ಓದುಗರನ್ನು ಸೆಳೆಯಲು ಹರ್ಸ್ಟ್‌ ಒಡೆತನದ ‘ನ್ಯೂಯಾರ್ಕ್‌ ಜರ್ನಲ್‌’ ಕಸರತ್ತು ಮಾಡಲೇಬೇಕಿತ್ತು. ಆಗ ಯಾರೂ ಊಹಿಸದ ತಂತ್ರವೊಂದನ್ನು ಕಂಡುಕೊಂಡ ಹರ್ಸ್ಟ್‌ ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ.

ಹಾಗೆ ಅವತ್ತು ಆತ ಕಂಡುಕೊಂಡ ಮಾರ್ಗಗಳೇ ಇವತ್ತು ‘ಎಲ್ಲೋ ಜರ್ನಲಿಸಂ (ಪೀತ ಪತ್ರಿಕೋದ್ಯಮ)’ ಎಂದು ಕರೆಯುವ ಪತ್ರಿಕೋದ್ಯಮದ ಗುಣಲಕ್ಷಣಗಳಾದವು. ಅಂದಹಾಗೆ, ಈ ‘ಎಲ್ಲೊ ಜರ್ನಲಿಸಂ’ ಎಂದರೆ ಸಾಮಾನ್ಯ ಸುದ್ದಿಗಳನ್ನು ಭಾವೋದ್ರೇಕಗೊಳಿಸುವಂತೆ ಓದುಗರ ಮುಂದೆ ಪ್ರಸ್ತುತ ಪಡಿಸುವುದು. ಪ್ರತಿ ಸುದ್ದಿಯನ್ನೂ ರಂಜನೀಯಗೊಳಿಸುವುದು. ಸುಳ್ಳು ಬೆರೆಸಿ ಸುದ್ದಿಯನ್ನು ಪ್ರಚೋದನಾಕಾರಿಯಾಗಿ ನೀಡುವುದು.

ಸಾಮಾನ್ಯವಾಗಿ ಒಣಒಣ ಅನ್ನಿಸುವಂತಿದ್ದ ಸುದ್ದಿಮನೆಗಳ ಕಾಲದಲ್ಲಿ, ಸುದ್ದಿ ಜತೆಗೆ ಮಸಾಲೆ ಬೆರೆತರೆ ಏನಾಗಬಹುದೋ? ಅದೇ ಅಲ್ಲೂ ನಡೆದು ಹೋಯಿತು. ಜನ ಪತ್ರಿಕೋದ್ಯಮದ ಈ ಶೈಲಿಗೆ ಮಾರು ಹೋದರು. ಒಂದು ಕಾಲದಲ್ಲಿ ಮುಮ್ಮಟಿ ಸಿನೆಮಾಗಳ ಎದುರು ಶಕೀಲಾ ಸಿನೆಮಾಗಳು ಸೆಂಚುರಿ ಬಾರಿಸಿದ ಸ್ಥಿತಿ!

ಯುದ್ಧಭೂಮಿಗೆ:

ಜೋಸೆಫ್‌ ಪುಲಿಟ್ಜರ್‌ ಮತ್ತು ವಿಲಿಯಂ ರಾಂಡಾಲ್ಫ್‌ ಹರ್ಸ್ಟ್‌.
ಜೋಸೆಫ್‌ ಪುಲಿಟ್ಜರ್‌ ಮತ್ತು ವಿಲಿಯಂ ರಾಂಡಾಲ್ಫ್‌ ಹರ್ಸ್ಟ್‌.

ಹರ್ಸ್ಟ್, ಸ್ಪೇನ್ ಮತ್ತು ಕ್ಯೂಬಾ ನಡುವೆ ಯುದ್ಧದ ಸನ್ನಿವೇಶವನ್ನು ತನ್ನ ಪತ್ರಿಕೆಗಳಿಗೆ ಪ್ರಮುಖ ಆಹಾರ ಎಂಬುದನ್ನು ಮೊದಲು ಗ್ರಹಿಸಿದ. ಇದಕ್ಕಾಗಿ ತನ್ನ ವರದಿಗಾರ ಫೆಡ್ರಿಕ್‌ ರೆಮಿಂಗ್ಟನ್‌ರನ್ನು ಕ್ಯೂಬಾಕ್ಕೆ ಕಳುಹಿಸಿ ಅಲ್ಲಿನ ಪರಿಸ್ಥಿತಿಯ ಕುರಿತು ವರದಿ ಮಾಡುವಂತೆ ತಿಳಿಸಿದ. ಆದರೆ ಅಲ್ಲಿಗೆ ಹೋದ ಆ ವರದಿಗಾರ, ಯುದ್ಧದ ಸನ್ನಿವೇಶದಂತಹ ವಾತಾವರಣ ಇಲ್ಲದಿರುವುದನ್ನು ಹರ್ಸ್ಟ್ ಗಮನಕ್ಕೆ ತಂದ. ಹಾಗಂತ ಒಪ್ಪಿಕೊಳ್ಳಲು ಇವನು ತಯಾರಿರಲಿಲ್ಲ. ಆತ ವಾಪಸ್‌ ಬರುತ್ತೇನೆ ಎಂದಾಗ "ದಯವಿಟ್ಟು ಅಲ್ಲೇ ಇರು, ನೀನು ಚಿತ್ರಗಳನ್ನು ಕಳುಹಿಸುತ್ತಿರು ಮತ್ತು ನಾನು ಯುದ್ಧವನ್ನು ಸಾರುತ್ತೇನೆ," ಎಂದು ಬಿಟ್ಟ ಹರ್ಸ್ಟ್‌. ಮತ್ತು ಆತ ಹಾಗೆಯೇ ಮಾಡಿದ.

ಹೀಗಿರುವಾಗಲೇ ಸ್ಪೇನ್, ಕ್ಯೂಬಾವನ್ನು ತನ್ನ ವಶದಲ್ಲಿ ಇಟ್ಟುಕೊಳ್ಳುವ ಚಿಕ್ಕದೊಂದು ಪ್ರಯತ್ನ ಮಾಡಿತು. ಒಂದಷ್ಟು ನಾಗರಿಕರ ಮೇಲೆ ದೌರ್ಜನ್ಯಗಳಾದವು. ಹೀಗೊಂದು ‘ನ್ಯೂಸ್ ಪೆಗ್’ ಸಿಗುತ್ತಲೇ ಹರ್ಸ್ಟ್ ತನ್ನ ಪತ್ರಿಕೆಗಳಲ್ಲಿ ದಿನದಿನಕ್ಕೂ ಅತಿ ರಂಜಕ ಸುದ್ದಿಗಳನ್ನು ಅಚ್ಚು ಹಾಕತೊಡಗಿದ. ಸ್ಥಳೀಯ ಪರಿಸ್ಥಿತಿ ಹೇಗೇ ಇದ್ದರೂ, ತನಗೆ ಅನ್ನಿಸಿದ ರೀತಿಯಲ್ಲಿ ವರದಿಗಳನ್ನು ನೀಡತೊಡಗಿದ.

ಇವತ್ತು 120 ವರ್ಷಗಳ ನಂತರ, ಹರ್ಸ್ಟ್ ಹಾಗೂ ಅವತ್ತು ಆತ ಪ್ರಕಟಿಸಿದ ಪತ್ರಿಕಾ ವರದಿಗಳ ಮೇಲೆ ನಡೆದ ಸಂಶೋಧನೆಗಳು ಹೊರಬಂದಿವೆ. ಇವು ವಾಸ್ತವಕ್ಕೂ, ಹರ್ಸ್ಟ್ ನೀಡಿದ ವರದಿಗಳಿಗೂ ನಡುವೆ ಇಲ್ಲದ ಸಂಬಂಧವನ್ನು ಬಿಡಿಸಿಡುತ್ತಿವೆ. ಲ್ಯಾಟಿನ್ ಅಮೆರಿಕಾ ದೇಶದ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಇದನ್ನೊಂದು ವಿಷಯವನ್ನಾಗಿ ಇಡಲಾಗಿದ್ದು, ಪತ್ರಕರ್ತರಾಗುವ ಕನಸು ಇಟ್ಟುಕೊಂಡು ಬರುವ ವಿದ್ಯಾರ್ಥಿಗಳು, ಹರ್ಸ್ಟ್ ಪತ್ರಿಕೋದ್ಯಮದ ಪರಿಣಾಮಗಳನ್ನು ಅಧ್ಯಯನ ನಡೆಸುತ್ತಿದ್ದಾರೆ.

ಅಂದಹಾಗೆ, ಅವತ್ತು ಹರ್ಸ್ಟ್ ತನ್ನ ಪತ್ರಿಕೆಯಲ್ಲಿ ಸ್ಪೇನ್ ವಿರುದ್ಧ ವರದಿಗಳನ್ನು ಪ್ರಕಟಿಸುತ್ತಿದ್ದಂತೆ ಜನ ಮುಗಿಬಿದ್ದು ಕೊಳ್ಳತೊಡಗಿದರು. ಅತಿ ರಂಜಕ ಸುದ್ದಿಗಳಿಂದಾಗಿ ಇಲ್ಲಿನ ಕೆಳ ವರ್ಗದ ಜನ, ಕಾರ್ಮಿಕರೇ ಪತ್ರಿಕೆಯ ಹೆಚ್ಚಿನ ಓದುಗರಾಗಿ ಬದಲಾಗಿದ್ದರು. ನೋಡ ನೋಡುತ್ತಲೇ ಅಂದಿಗೆ ನ್ಯೂಯಾರ್ಕ್‌ ನಗರದಲ್ಲಿ ಜರ್ನಲ್‌ ಅತೀ ಹೆಚ್ಚು ಪ್ರಸಾರ ಹೊಂದಿದ ಪತ್ರಿಕೆಯಾಗಿ ಬದಲಾಯಿತು. ಈ ಸಮಯದಲ್ಲಿ ಪತನದ ಹಾದಿಯಲ್ಲಿದ್ದ ಪುಲಿಟ್ಜರ್ ಕೂಡ ಅನಿವಾರ್ಯವಾಗಿ ಹರ್ಸ್ಟ್ ಹಾದಿಯನ್ನು ತುಳಿಯತೊಡಗಿದ. ಸುಳ್ಳುಗಳನ್ನು ಬರೆಯುವುದಕ್ಕೇ ದೊಡ್ಡ ಪೈಪೋಟಿ ಶುರುವಾಗಿತ್ತು. ಕೊನೆಗೆ, ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿತು ಎಂದರೆ, ಸತ್ಯ ಬರೆದರೆ ಜನ ನಂಬುವ ಪರಿಸ್ಥಿತಿಯೇ ಇಲ್ಲವಾಗಿತ್ತು!

‘ಯೆಲ್ಲೋ ಕಿಡ್‌’ ವೇಷದಲ್ಲಿ ಪೈಪೋಟಿಯ ಮೇಲೆ ಅತಿ ರಂಜಕ ಸುದ್ದಿ ಪ್ರಕಟಿಸಿದ ಪುಲಿಟ್ಜರ್‌ ಮತ್ತು ಹರ್ಸ್ಟ್‌. ‘ನ್ಯೂಯಾರ್ಕ್ ವರ್ಲ್ಡ್’ನಲ್ಲಿ ‘ಹೋಗನ್ಸ್ ಆಲೇ’ ಎಂಬ ಹೆಸರಿನಲ್ಲಿ ರಿಚರ್ಡ್ ಎಫ್ ಔಟ್ಕಾಲ್ಟ್ ಕಾರ್ಟೂನ್ ರಚಿಸುತ್ತಿದ್ದರು. ಇದರಲ್ಲಿ ‘ಯೆಲ್ಲೋ ಕಿಡ್’ ಎಂಬುದು ಒಂದು ಕಾರ್ಟೂನ್‌ ಕ್ಯಾರೆಕ್ಟರ್‌ ಆಗಿತ್ತು.  ಮುಂದೆ ‘ಯೆಲ್ಲೋ ಜರ್ನಲಿಸಂ (ಪೀತ ಪತ್ರಿಕೋದ್ಯಮ)‘ ಎಂಬ ಪದ ಇದರಿಂದಲೇ ಹುಟ್ಟಿಕೊಂಡಿತು.
‘ಯೆಲ್ಲೋ ಕಿಡ್‌’ ವೇಷದಲ್ಲಿ ಪೈಪೋಟಿಯ ಮೇಲೆ ಅತಿ ರಂಜಕ ಸುದ್ದಿ ಪ್ರಕಟಿಸಿದ ಪುಲಿಟ್ಜರ್‌ ಮತ್ತು ಹರ್ಸ್ಟ್‌. ‘ನ್ಯೂಯಾರ್ಕ್ ವರ್ಲ್ಡ್’ನಲ್ಲಿ ‘ಹೋಗನ್ಸ್ ಆಲೇ’ ಎಂಬ ಹೆಸರಿನಲ್ಲಿ ರಿಚರ್ಡ್ ಎಫ್ ಔಟ್ಕಾಲ್ಟ್ ಕಾರ್ಟೂನ್ ರಚಿಸುತ್ತಿದ್ದರು. ಇದರಲ್ಲಿ ‘ಯೆಲ್ಲೋ ಕಿಡ್’ ಎಂಬುದು ಒಂದು ಕಾರ್ಟೂನ್‌ ಕ್ಯಾರೆಕ್ಟರ್‌ ಆಗಿತ್ತು. ಮುಂದೆ ‘ಯೆಲ್ಲೋ ಜರ್ನಲಿಸಂ (ಪೀತ ಪತ್ರಿಕೋದ್ಯಮ)‘ ಎಂಬ ಪದ ಇದರಿಂದಲೇ ಹುಟ್ಟಿಕೊಂಡಿತು.

ಅಂದಿಗೆ ನಗರದಲ್ಲಿಯ ಮೇಲ್ವರ್ಗದ ಜನರು ಟೈಮ್ಸ್‌ ಮತ್ತು ಸನ್‌ ಓದುತ್ತಿದ್ದರು. ಆ ಪತ್ರಿಕೆಗಳಲ್ಲೆಲ್ಲೂ ಯುದ್ಧದ ಸುದ್ದಿಗಳು ಬರುತ್ತಿರಲಿಲ್ಲ. ನಗರದ ಹೊರಗೆ ನ್ಯೂಯಾರ್ಕ್‌ ಜರ್ನಲ್‌ ಮತ್ತು ನ್ಯೂಯಾರ್ಕ್ ವರ್ಲ್ಡ್‌ ಎರಡೂ ಪತ್ರಿಕೆಗಳಿಗೆ ಮಾನ್ಯತೆಯೂ ಇರಲಿಲ್ಲ. ನಗರದ ಹೊರಗೆ ನಂಬಲರ್ಹ ಸುದ್ದಿ ಮೂಲವಾಗಿ ಟಾಪ್‌ 10ರಲ್ಲೂ ಇವೆರಡೂ ಪತ್ರಿಕೆಗಳು ಜಾಗವಿರಲಿಲ್ಲ. ಆದರೆ ಅಮೆರಿಕಾದ ವಾಣಿಜ್ಯ ನಗರಿ ನ್ಯೂಯಾರ್ಕ್‌ನಲ್ಲಿ ಕೃತಕ ಯುದ್ಧದ ಸನ್ನಿವೇಶವನ್ನು ಹರ್ಸ್ಟ್‌ ಮತ್ತು ಪುಲಿಟ್ಜರ್‌ ಸೃಷ್ಟಿಸಿದ್ದರು.

ಹೀಗಿರುವಾಗಲೇ, 1898ರ ಡಿಸೆಂಬರ್‌ 24ರಂದು ಹವಾನಾ ದಂಡೆಯಲ್ಲಿ ಅಮೆರಿಕಾದ ಮೈನೆ ಹಡಗನ್ನು ಅಪರಿಚಿತರು (ಇಂದಿಗೂ ಯಾರು ಎಂದು ತಿಳಿದು ಬಂದಿಲ್ಲ) ಸ್ಟೋಟಿಸಿ ಮುಳುಗಿಸಿ ಹಾಕಿದರು. ಈ ಸುದ್ದಿ ಹರ್ಸ್ಟ್ ಕಿವಿಗೆ ಬೀಳುತ್ತಲೇ ತನ್ನ ಪೀತ ಪತ್ರಿಕೋದ್ಯಮದ ಕೊನೆಯ ಅಸ್ತ್ರವೊಂದನ್ನು ಆತ ಪ್ರಯೋಗಿಸಲು ಸಿದ್ಧನಾದ. ಈ ಬಗ್ಗೆ ಯಾವೊಂದು ಮಾಹಿತಿ ಇಲ್ಲದಿದ್ದರೂ ಇದನ್ನು ಮಾಡಿದ್ದು ಸ್ಪೇನ್‌ನವರೇ ಎಂದು ಖಡಾಖಂಡಿತವಾಗಿ ಬರೆದ. ‘ಅಮೆರಿಕಾ ಹಡಗನ್ನು ಮುಳುಗಿಸಿದ ಸ್ಪೇನ್’ ಎಂದು ದೊಡ್ಡ ತಲೆ ಬರಹ ನೀಡಿ ವರದಿಯನ್ನು ಪ್ರಕಟಿಸಿ ಬಿಟ್ಟ. ಮೊದಲೇ, ಕ್ಯೂಬಾ ಹಾಗೂ ಸ್ಪೇನ್ ಸುತ್ತ ಕಪೋಲಕಲ್ಪಿತ ಸುದ್ದಿಗಳಿಗೆ ಕಿವಿಯಾಗಿದ್ದ ಅಮೆರಿಕಾ ಜನರಲ್ಲಿ ಅದರಲ್ಲೂ ನ್ಯೂಯಾರ್ಕ್‌ನ ದೊಡ್ಡ ಸಮುದಾಯದಲ್ಲಿ ಆಕ್ರೋಶದ ಕಟ್ಟೆ ಒಡೆಯಿತು. ಬಿಸಿ ಮೇಲ್ವರ್ಗಗಳನ್ನು ಮಿಲಿಟರಿ ಅಧಿಕಾರಿಗಳೂ ತಟ್ಟಿತು. ನಿಜಕ್ಕೂ ಹಡಗು ಮುಳುಗಿತಾ ಎಂದು ನೋಡುವುದಕ್ಕೆ ಯಾರಿಗೂ ಪುರುಸೊತ್ತು ಇರಲಿಲ್ಲ. ಅಮೆರಿಕಾ ಸ್ಪೇನ್ ಮೇಲೆ ಯುದ್ಧ ಘೋಷಿಸಿ ಬಿಟ್ಟಿತು.

ಅದಕ್ಕೆ ಕಾರಣವಾಗಿದ್ದು ಹರ್ಸ್ಟ್ ಮತ್ತು ಪುಲಿಟ್ಜರ್ ಪೈಪೋಟಿ ಮೇಲೆ ಬಿದ್ದು ಪ್ರಕಟಿಸಿದ ಸುದ್ದಿಗಳು. ಯುದ್ಧಾಪರಾಧಿಗಳ ಸ್ಥಾನದಲ್ಲಿ ‘ಪೀತ ಪತ್ರಿಕೋದ್ಯಮ’ವೂ ಮೊದಲ ಬಾರಿಗೆ ಕಟಕಟೆ ಏರಿ ನಿಂತಿತ್ತು. ವೃತ್ತಿಪರ ಪತ್ರಿಕೋದ್ಯಮಕ್ಕೆ ಎದುರಾಗಿ ‘ಪೀತ ಪತ್ರಿಕೋದ್ಯಮ’ ಎದೆ ಸೆಟೆದು ನಿಂತು, ಗೆದ್ದಿತ್ತು. ಮುಂದೆ ಅಮೆರಿಕಾ ಸ್ಪೇನ್‌ ನಡುವಿನ ಯುದ್ಧಕ್ಕೆ ‘ಜರ್ನಲ್‌ನ ಯುದ್ಧ (The Journal's War)‘ ಎಂದೇ ಹೆಸರು ಬಂತು.

ಈ ದಿನಗಳಲ್ಲಿ ಹರ್ಸ್ಟ್ ಮಾಲೀಕತ್ವದ ‘ನ್ಯೂಯಾರ್ಕ್ ಜರ್ನಲ್' (ಬೆಳಗ್ಗೆ ಮತ್ತು ಸಂಜೆಗೆ ಪ್ರತ್ಯೇಕ ಆವೃತ್ತಿಗಳು ಬರುತ್ತಿದ್ದವು)ನ ಪ್ರಸಾರ 10 ಲಕ್ಷದ ಗಡಿ ದಾಟಿತ್ತು. ಇವತ್ತು ಕನ್ನಡದ ನಂಬರ್ 1 ಪತ್ರಿಕೆಯೂ, ಈ ಗಡಿಯನ್ನು ಮುಟ್ಟಲಾಗಿಲ್ಲ ಎಂಬುದನ್ನು ಗಮನಿಸಬೇಕು. ಅವತ್ತಿಗೆ ನ್ಯೂಯಾರ್ಕ್ ಜನಸಂಖ್ಯೆ 30 ಲಕ್ಷ. ಅಂದರೆ ಅಮೆರಿಕಾದ ಮೂವರಲ್ಲಿ ಒಬ್ಬರು ಹರ್ಸ್ಟ್ ಪತ್ರಿಕೆಯನ್ನು ಕೊಂಡು ಓದುತ್ತಿದ್ದರು. ಹಾಗಂತ ಅವತ್ತು ಸತ್ಯನಿಷ್ಟ ವರದಿ ಮಾಡುವ ಪತ್ರಿಕೆಗಳು ಇರಲಿಲ್ಲ ಎಂದಲ್ಲ. ‘ನ್ಯೂಯಾರ್ಕ್ ಹೆರಾಲ್ಡ್’ ಎಂಬ ಪತ್ರಿಕೆ ಯುದ್ಧದ ಬಗ್ಗೆ ವಸ್ತುನಿಷ್ಠವಾಗಿ ವರದಿ ಮಾಡುತ್ತಿತ್ತು. ಆದರೆ ಸುಳ್ಳುಗಳ ಭರಾಟೆಯಲ್ಲಿ ಅದನ್ನು ನಂಬುವ ಸ್ಥಿತಿಯಲ್ಲಿ ಓದುಗರು ಇರಲಿಲ್ಲ.

ಕ್ರಾಂತಿಭೂಮಿಯಲ್ಲಿ:

ಇದೇ ವೇಳೆ, ಕ್ಯೂಬಾದ ಹಳ್ಳಿಗಾಡಿನಲ್ಲಿ ಕ್ರಾಂತಿಯ ಕಹಳೆ ಮೊಳಗಿತ್ತು. ಈ ಸಮಯದಲ್ಲಿ ಬೇರೆ ಸಂಪಾದಕರಾದರೆ, ಮಾಲೀಕರಾದರೆ ಅರಾಮಾಗಿ ಕುಳಿತುಕೊಂಡು ವರದಿಗಳನ್ನು ತರಿಸಿಕೊಳ್ಳುತ್ತಿದ್ದರೇನೋ? ಆದರೆ ಹರ್ಸ್ಟ್ ಎಂತ ಹುಚ್ಚು ಮನಸ್ಥಿತಿಯವನು ಎಂದರೆ, ಒಂದಷ್ಟು ವರದಿಗಾರರ ತಂಡ ಕಟ್ಟಿಕೊಂಡು, ಜತೆಗೊಂದು ಪ್ರಿಂಟಿಂಗ್ ಮಷೀನ್ ಹೇರಿಕೊಂಡು ಕ್ಯೂಬಾದ ಹಡಗನ್ನು ಏರಿ ಬಿಟ್ಟಿದ್ದ.

ಅವತ್ತು ಕ್ಯೂಬಾ ವಿಮೋಚನಾ ಕ್ರಾಂತಿಯ ಬಗ್ಗೆ ಉತ್ತಮ ವರದಿಗಳನ್ನೂ ಬರೆದಿದ್ದ. ಆತ ಇವತ್ತಿನ ಪತ್ರಿಕಾ ಸಂಸ್ಥೆಗಳ ಮಾಲೀಕರು ಅಥವಾ ಸಂಪಾದಕರಂತೆ ನಾಲ್ಕು ಕೋಣೆಗಳ ಮಧ್ಯೆ ಕುಳಿತುಕೊಂಡಿರಲಿಲ್ಲ. ಯುದ್ಧ ಭೂಮಿಯಿಂದಲೇ ಹೊಸ ಆವೃತ್ತಿಯನ್ನು ಹೊರತರಲು ಹೊರಟ ಸಾಹಸಿ ಆತ. ಈ ವರದಿಗಾರಿಕೆಯಲ್ಲಿ ಆತನವ ರಿಫೋರ್ಟರ್‌ಗಳು ಗಾಯಗಳನ್ನೂ ಮಾಡಿಕೊಂಡಿದ್ದರು. ಕೊನೆಗೆ, ವಿಮೋಚನಾ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದಕ್ಕಾಗಿ ಕ್ಯೂಬಾ ಬಂಡುಕೋರರ ನಾಯಕ ಜನರಲ್ ಕ್ಯಾಲಿಕ್ಸ್ಟೋ ಗಾರ್ಸಿಯಾ, ಹರ್ಸ್ಟ್ ಕೈಗೆ ಕ್ಯೂಬಾದ ಧ್ವಜ ನೀಡಿ ಧನ್ಯವಾದ ಹೇಳಿ ಕಳುಹಿಸಿದ್ದ. ಆದರೆ ಆತನ ನಕಾರಾತ್ಮಕ ಅಂಶಗಳ ಪಾಲು ಎಷ್ಟಿತ್ತು ಎಂದರೆ, ಇಂತಹ ವಿಚಾರಗಳು ಮುನ್ನೆಲೆಗೆ ಬರದೇ ಹೋದವು.

ಜಾಗತಿಕ ಪತ್ರಿಕೋದ್ಯಮದ ಇತಿಹಾಸದ ಪುಟಗಳನ್ನು ತೆರೆದರೆ ಮತ್ತೆ ಮತ್ತೆ ಕಾಡುವ ಹೆಸರು ವಿಲಿಯಂ ರಾಂಡೋಲ್ಫ್ ಹರ್ಸ್ಟ್. ಪತ್ರಿಕೆಗಳು ಹೇಗಿರಬಾರದು? ಪತ್ರಿಕೋದ್ಯಮ ಯಾವ ಮಟ್ಟಕ್ಕೆ ಇಳಿಯಬಾರದು? ಎಂಬುದಕ್ಕೆ ಈತನ ಬದುಕು ಅತ್ಯುತ್ತಮ ಪಾಠ. ಶತಮಾನದ ಹಿಂದೆಯೇ ದರ ಸಮರ, ಅತಿ ರಂಜಕ ಸುದ್ದಿಗಳು ಹಾಗೂ ಪತ್ರಿಕೋದ್ಯಮವನ್ನು ಅಸಹ್ಯಕರ ಉದ್ಯಮವನ್ನಾಗಿ ಪರಿವರ್ತಿಸಿದ ಕುಖ್ಯಾತಿ ಈತನಿಗೇ ಸಲ್ಲುತ್ತದೆ. ಇಲ್ಲಿರುವುದು ಆತನ ಸುದೀರ್ಘ ಕತೆಯ ಒಂದು ಭಾಗ ಮಾತ್ರ. ಸರಣಿ ರೂಪದಲ್ಲಿ ಅದರ ಐದೂ ಕಂತುಗಳು ಇಲ್ಲಿ ಕೆಳಗಿವೆ. ಈ ಮೂಲಕ ಪತ್ರಿಕೋದ್ಯಮ ಹಾಗೂ ಅದರ ಹೆಸರಿನಲ್ಲಿ ನಡೆದುಕೊಂಡು ಬಂದ ಅಸಹ್ಯಗಳ ಮೂಲಕ್ಕೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನವಿದು, ಅಷ್ಟೆ...

Also read: ಪತ್ರಿಕೋದ್ಯಮ ಸರಣಿ-1: ‘ಪೀತ ಪತ್ರಿಕೋದ್ಯಮಿ’ಯೊಬ್ಬನ ಬದುಕಿನ ಪುಟಗಳಿಂದ...

Also read: ಪತ್ರಿಕೋದ್ಯಮ ಸರಣಿ-2: ‘ದರ ಸಮರ’ ಹುಟ್ಟುಹಾಕಿದವನು ಗೆದ್ದ ಮೇಲೂ ವಿರಾಮ ಘೋಷಿಸಲಿಲ್ಲ!

Also read: ಪತ್ರಿಕೋದ್ಯಮ ಸರಣಿ-3: ಯುದ್ಧಭೂಮಿ ವರದಿಗಾರಿಕೆಯಲ್ಲಿ ಸತ್ಯ ಬರೆದರೆ ನಂಬುವವರೇ ಇರಲಿಲ್ಲ!

Also read: ಪತ್ರಿಕೋದ್ಯಮ ಸರಣಿ-4: ಏಳು ಬೀಳುಗಳನ್ನು ಕಂಡವನು ಸತ್ತಾಗಲೂ ಮೀಸೆ ಮಾತ್ರ ಮಣ್ಣಾಗಿರಲಿಲ್ಲ!

Also read: ಪತ್ರಿಕೋದ್ಯಮ ಸರಣಿ-5: ಕೊನೆಗೆ ಎಲ್ಲವನ್ನೂ ಬಿಟ್ಟು ಹೋದವನು ಉಳಿಸಿದ ಪಾಠಗಳು!