samachara
www.samachara.com
ಗಡಿಯಲ್ಲಿ ಉದ್ವಿಗ್ನತೆ: ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಪಾಕಿಸ್ತಾನದ ಕತೆ ಎಷ್ಟು ಸತ್ಯ?
COVER STORY

ಗಡಿಯಲ್ಲಿ ಉದ್ವಿಗ್ನತೆ: ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಪಾಕಿಸ್ತಾನದ ಕತೆ ಎಷ್ಟು ಸತ್ಯ?

ಪಾಕಿಸ್ತಾನದ ವಾಯು ಪ್ರದೇಶ ಪ್ರವೇಶಿಸಿದ್ದ ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ. ಇದು ಎಷ್ಟರ ಮಟ್ಟಿಗೆ ಸತ್ಯ?

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಬುಧವಾರ ಪ್ರಮುಖ ತಿರುವು ತೆಗೆದುಕೊಂಡಿದೆ.

ಮಂಗಳವಾರ ಮುಂಜಾನೆ ಭಾರತೀಯ ವಾಯುಪಡೆ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದ ಮೇಲೆ ನಡೆಸಿದ ಬಾಲಕೋಟ್‌ ಬಾಂಬ್‌ ದಾಳಿಗೆ ಸೂಕ್ತ ಸಮಯದಲ್ಲಿ ಸರಿಯಾದ ಜಾಗದಲ್ಲಿ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಅದರಂತೆ ಬುಧವಾರ ಮುಂಜಾನೆ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ಭಾರತದ ವಾಯುಪ್ರದೇಶ ಪ್ರವೇಶಿಸಿವೆ. ವಿವಾದಿತ ಕಾಶ್ಮೀರ ಗಡಿಭಾಗದ ಬಿಂಬರ್ ಗಾಲಿ-ನೌಶೇರಾ ಸೆಕ್ಟರ್‌ನಲ್ಲಿ ಹಾರಾಟ ನಡೆಸಿದ ಪಾಕ್ ಯುದ್ಧ ವಿಮಾನಗಳಿಗೆ ಪ್ರತಿದಾಳಿ ನಡೆಸಿದ್ದರಿಂದ ಅವು ಪಲಾಯನ ನಡೆಸಿವೆ ಎಂದು ಸೇನಾ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹೀಗಿದ್ದೂ ಪಾಕಿಸ್ತಾನ ಭಿನ್ನರಾಗ ಹಾಡುತ್ತಿದ್ದು ತಾನು ತನ್ನ ದೇಶದ ವಾಯು ಪ್ರದೇಶದೊಳಕ್ಕೆ ಇದ್ದುಕೊಂಡೇ ಗಡಿ ನಿಯಂತ್ರಣ ರೇಖೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾಗಿ ಹೇಳಿದೆ. ಮತ್ತು ನಿನ್ನೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ನೀಡಿದ ಹೇಳಿಕೆಯನ್ನೇ ತನ್ನ ಪತ್ರಿಕಾ ಪ್ರಕಟಣೆ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ‘ಯಾವುದೇ ಮನುಷ್ಯರಿಗೆ ಹಾನಿಯಾದಂತೆ ನೋಡಿಕೊಂಡು ಸೇನೆಗ ಹೊರತಾದ ಗುರಿಗಳ ಮೇಲೆ ದಾಳಿ ನಡೆಸಿದ್ದೇವೆ’ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾನು ಭಾರತದ ಎರಡು ವಿಮಾನಗಳನ್ನು ಹೊಡೆದು ಹಾಕಿರುವುದಾಗಿ ಹೇಳಿಕೊಂಡಿದೆ. ತಾನು ಭಾರತದ ಗಡಿ ಪ್ರವೇಶಿಸಿದ ನಂತರ ಪಾಕಿಸ್ತಾನದ ವಾಯು ಪ್ರದೇಶ ಪ್ರವೇಶಿಸಿದ ಭಾರತದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ.

“ಎರಡು ಯುದ್ಧ ವಿಮಾನಗಳಲ್ಲಿ ಒಂದು ಅಜಾದ್‌ ಕಾಶ್ಮೀರ ಭಾಗದಲ್ಲಿ ಬಿದ್ದಿದ್ದರೆ ಒಂದು ಭಾರತದ ಆಡಳಿತದಲ್ಲಿರುವ ಕಾಶ್ಮೀರದಲ್ಲಿ ಬಿದ್ದಿದೆ. ಜತೆಗೆ ಓರ್ವ ಪೈಲಟ್‌ನನ್ನು ಬಂಧಿಸಿದ್ದೇವೆ,” ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್‌ ಜನರಲ್‌ ಆಸೀಫ್‌ ಘಫೂರ್‌ ಟ್ಟೀಟ್‌ ಮಾಡಿದ್ದಾರೆ. ಜತೆಗೆ ಪೈಲಟ್‌ನಿಂದ ವಶಕ್ಕೆ ಪಡೆದುಕೊಂಡಿದ್ದೇವೆ ಎನ್ನಲಾದ ವಸ್ತುಗಳ ಚಿತ್ರಗಳನ್ನು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ‘ಐಎಸ್‌ಪಿಆರ್’ (ಇಂಟರ್‌ ಸರ್ವೀಸಸ್ ಪಬ್ಲಿಕ್‌ ರಿಲೇಷನ್ಸ್‌) ಬಿಡುಗಡೆ ಮಾಡಿದೆ.

ಭಾರತದ ಬಂಧಿತ ಸೈನಿಕನಿಂದ ವಶಕ್ಕೆ ಪಡೆದ ವಸ್ತುಗಳು ಎನ್ನುತ್ತಿರುವ ಪಾಕಿಸ್ತಾನದ ಸೇನೆಯ ಮಾಧ್ಯಮ ವಿಭಾಗದ ಚಿತ್ರ.
ಭಾರತದ ಬಂಧಿತ ಸೈನಿಕನಿಂದ ವಶಕ್ಕೆ ಪಡೆದ ವಸ್ತುಗಳು ಎನ್ನುತ್ತಿರುವ ಪಾಕಿಸ್ತಾನದ ಸೇನೆಯ ಮಾಧ್ಯಮ ವಿಭಾಗದ ಚಿತ್ರ.
/ಐಎಸ್‌ಪಿಆರ್‌

ಪೊಲೀಸ್‌ ಅಧಿಕಾರಿಗಳ ಪ್ರಕಾರ ಬುಧವಾರ ಕಾಶ್ಮೀರದ ಬುದ್ಗಾಮ್‌ನಲ್ಲಿ ಭಾರತದ ವಾಯುಪಡೆ ವಿಮಾನವೊಂದು ಪತನಗೊಂಡಿದ್ದು ಇಬ್ಬರು ಪೈಲಟ್‌ಗಳು ಸಾವಿಗೀಡಾಗಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಪತನಗೊಂಡಿದ್ದೇ ಅಥವಾ ಪಾಕಿಸ್ತಾನ ಹೊಡೆದು ಹಾಕಿದ್ದೇ ಎನ್ನುವುದರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಗಡಿಯಲ್ಲಿ ಗುಂಡಿನ ದಾಳಿ:

ಇದಕ್ಕೂ ಮೊದಲು ಮಂಗಳವಾರ ಸಂಜೆಯಿಂದ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಹಲವು ಭಾಗದಲ್ಲಿ ಗುಂಡಿನ ದಾಳಿ ನಡೆಸಲು ಆರಂಭಿಸಿದೆ. ಎಲ್‌ಓಸಿ ಭಾಗದ ಜಿಲ್ಲೆಗಳಾದ ಜಮ್ಮು, ರಜೌರಿ ಹಾಗೂ ಫೂಂಚ್‌ನಲ್ಲಿ ಪಾಕ್ ಸೇನೆ ಶೆಲ್ ದಾಳಿ ನಡೆಸಿದ್ದು, ಈವರೆಗೆ 50ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ.

ಫೂಂಚ್ ಜಿಲ್ಲೆಯ ಕೃಷ್ಣ ಘಾಟಿ, ಬಾಲಾಕೋಟ್, ಖಾರಿ ಕರ್ಮರ, ಮಾನ್ಕೋಟ್, ತರ್ಕುಂಡಿ, ರಜೌರಿ ಜಿಲ್ಲೆಯ ಕಲಾಲ್, ಬಾಬಾ ಕೋರಿ, ಕಲ್ಶಿಯಾನ್, ಲಾಮ್ ಮತ್ತು ಜಂಗರ್ ಪ್ರದೇಶ, ಜಮ್ಮುವಿನ ಪಲ್ಲನ್ವಾಲಾ ಹಾಗೂ ಲಲೈಲಿ ಸೆಕ್ಟರ್‌ಗಳಲ್ಲಿ ಪಾಕ್ ಸೇನೆ ಶಕ್ತಿಯುತ ಶೆಲ್ ದಾಳಿ ನಡೆಸಿದೆ. ಪರಿಣಾಮ ಪೂಂಚ್‌ನ ಮಾನ್ಕೋಟ್ ಸೆಕ್ಟರ್‌ನಲ್ಲಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಜನ ವಸತಿ ಭಾಗಗಳಲ್ಲಿ ಶೆಲ್ ದಾಳಿ ನಡೆಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗಡಿಭಾಗದ ಎಲ್ಲಾ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಜೌರಿ ಹಾಗೂ ಫೂಂಚ್ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪಾಕ್ ದಾಳಿಗೆ ಅಂಕೂರ್ ಸೆಕ್ಟರ್‌ನಲ್ಲಿ ಭಾರತದ 5 ಸೈನಿಕರಿಗೆ ತೀವ್ರ ತೆರನಾದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದ್ದು, ಇದರಿಂದ ನಾಲ್ವರು ನಾಗರೀಕರು ಸಾವನ್ನಪ್ಪಿದ್ದು 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಪಾಕಿಸ್ತಾನ ವಾದಿಸಿದೆ.

ಭಾರತ-ಪಾಕಿಸ್ತಾನ ಸರಕಾರಗಳ ನಡುವೆ 2003 ರಲ್ಲಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಪಾಕಿಸ್ತಾನ ಈವರೆಗೆ ಈ ಒಪ್ಪಂದಕ್ಕೆ ಬದ್ಧತೆ ತೋರಿಸದೆ ಕದನ ವಿರಾಮ ಉಲ್ಲಂಘಿಸುತ್ತಲೇ ಇದೆ. ಕಳೆದ 15 ವರ್ಷದಲ್ಲಿ ಸುಮಾರು 2,936 ಬಾರಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಇದೀಗ ಎಲ್‌ಒಸಿ ದಾಟುವ ಸಾಹಸಕ್ಕೆಯೂ ಕೈ ಹಾಕಿದೆ.

ಬುದ್ಗಾಮ್‌ನಲ್ಲಿ ಪತನಗೊಂಡ ಭಾರತದ ವಾಯುಪಡೆಯ ವಿಮಾನ. ಇದು ಸರಕು ಸಾಗಣಿಕೆ ವಿಮಾನ ಎಂಐ 17 ಎಂಬುದಾಗಿ ಎಬಿಪಿ ವರದಿ ಮಾಡಿದೆ.
ಬುದ್ಗಾಮ್‌ನಲ್ಲಿ ಪತನಗೊಂಡ ಭಾರತದ ವಾಯುಪಡೆಯ ವಿಮಾನ. ಇದು ಸರಕು ಸಾಗಣಿಕೆ ವಿಮಾನ ಎಂಐ 17 ಎಂಬುದಾಗಿ ಎಬಿಪಿ ವರದಿ ಮಾಡಿದೆ.
/ಹಿಂದೂಸ್ಥಾನ್‌ ಟೈಮ್ಸ್‌

ದೇಶದೊಳಗೆ ಹೈ-ಅಲರ್ಟ್:

ಪಾಕ್ ಯುದ್ಧ ವಿಮಾನಗಳು ಭಾರತದ ಗಡಿ ದಾಟಿ ಹಾರಾಡಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದ ವಿಮಾನ ನಿಲ್ದಾಣದ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಶ್ರೀನಗರ, ಜಮ್ಮು ಮತ್ತು ಲೇಹ್‌ ವಾಯು ಪ್ರದೇಶದಲ್ಲಿ ವಿಮಾನ ಹಾರಾಟ ನಿಷೇಧಗೊಳಿಸಲಾಗಿದ್ದು, ಅಮೃತಸರ ಮತ್ತು ಚಂಡೀಗಢ ವಾಯು ಪ್ರದೇಶಗಳಿಗೂ ಇದೇ ಕ್ರಮವನ್ನು ವಿಸ್ತರಿಸುವ ಸಾಧ್ಯತೆ ಇದೆ. ಪಾಕಿಸ್ತಾನ ಕೂಡ ಪೇಶಾವರ ವಿಮಾನ ನಿಲ್ದಾಣದ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದೆ.

ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಮಂಗಳವಾರ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ದೇಶದ ಒಳಗೆ ಉಗ್ರರು ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಹೀಗಾಗಿ ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಪಾಕಿಸ್ತಾನ ಗಡಿಗೆ ಹತ್ತಿರವಿರುವ ರಾಜ್ಯಗಳಾದ ಪಂಜಾಬ್, ರಾಜಸ್ತಾನ್, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಯುದ್ಧೋನ್ಮಾದ ಬೇಡ:

ಒಂದು ಕಡೆಯಲ್ಲಿ ಈ ಎಲ್ಲಾ ಬೆಳವಣಿಗೆಗಳಿಂದ ಭಾರತದ ಮಾಧ್ಯಮಗಳು ತೀವ್ರ ಯುದ್ಧೋನ್ಮಾದದ ಸ್ಥಿತಿ ತಲುಪಿದ್ದು ಪಾಕಿಸ್ತಾನದ ವಿರುದ್ಧದ ಪ್ರತೀಕಾರಕ್ಕೆ ಹಾತೊರೆಯುತ್ತಿವೆ. ಇದೇ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಪಾಕಿಸ್ತಾನದಲ್ಲೂ ಇದೆ.

ಆದರೆ ಮಾಧ್ಯಮಗಳು ಜವಾಬ್ದಾರಿಯಿಂದ ವರದಿ ಮಾಡಬೇಕು ಎಂದು ಪಾಕಿಸ್ತಾನ ಸೇನೆಯ ವಕ್ತಾರ ಆಸೀಫ್‌ ಘಫೂರ್‌ ಅಲ್ಲಿನ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. “ಯುದ್ಧ ಎಂದರೆ ಅಲ್ಲಿ ಸೋಲು ಗೆಲುವು ಎಂಬುದು ಇರುವುದಿಲ್ಲ. ಒಮ್ಮೆ ಆರಂಭಿಸಿದರೆ ಮುಂದುವರಿಯುತ್ತಾ ಹೋಗುತ್ತದೆ. ಬೇರೆ ಸಂದರ್ಭಗಳ ವರದಿಗಾರಿಕೆ ಬೇರೆ. ಈ ಸಮಯದ ವರದಿಯಾರಿಕೆಯೇ ಬೇರೆ. ದಯವಿಟ್ಟು ವಸ್ತು ನಿಷ್ಠವಾದ ಜವಾಬ್ದಾರಿಯುತ ವರದಿಗಾರಿಕೆ ಮಾಡಿ,” ಎಂದಿದ್ದಾರೆ. ಈ ಮೂಲಕ ಪ್ರತೀಕಾರ, ಯುದ್ಧ ಉನ್ಮಾದ ಬೇಡ ಎಂಬುದನ್ನು ತಿಳಿಸಿ ಹೇಳಿದ್ದಾರೆ. ಸದ್ಯ ಈ ಮಾತುಗಳನ್ನು ಭಾರತೀಯ ಮಾಧ್ಯಮಗಳಿಗೂ ಇಲ್ಲಿನ ಆಳುವ ಸರಕಾರ ತಿಳಿಸಿ ಹೇಳಬೇಕಾಗಿದೆ. ಆದರೆ ಹೇಳುತ್ತಾರೆ ಎಂಬುದನ್ನು ನಿರೀಕ್ಷಿಸುವುದು ಕಷ್ಟ.

ಚಿತ್ರ ಕೃಪೆ: ಐಎಸ್‌ಪಿಆರ್‌/ಡಾನ್