samachara
www.samachara.com
26 ಫೆಬ್ರುವರಿ 2019: ಉನ್ಮಾದದ ಸುನಾಮಿಯಲ್ಲಿ ವಿಪಕ್ಷಗಳು ಹುತಾತ್ಮರಾದ ದಿನ...
COVER STORY

26 ಫೆಬ್ರುವರಿ 2019: ಉನ್ಮಾದದ ಸುನಾಮಿಯಲ್ಲಿ ವಿಪಕ್ಷಗಳು ಹುತಾತ್ಮರಾದ ದಿನ...

ಸೇನೆ, ಯುದ್ಧ ಎಂದು ಏನೇ ಮಾತನಾಡಿದರೂ ಪ್ರಜಾಪ್ರಭುತ್ವ ದೇಶದ ರಾಜಕಾರಣ ಅಂತಿಮವಾಗಿ ಬಂದು ನಿಲ್ಲುವುದು ಚುನಾವಣೆ ವ್ಯವಸ್ಥೆಗೆ. ಇಲ್ಲಿ ಮತ ಎಂಬುದು ಯಾವ ಮದ್ದುಗುಂಡಿಗಿಂತಲೂ ಪ್ರಬಲವಾದ ಅಸ್ತ್ರ.

ಮಂಗಳವಾರ ಇಡೀ ದಿನ ನಡೆದ ಘಟನಾವಳಿಗಳು ಮತ್ತು ಅದಕ್ಕೆ ಭಾರತದ ವಿಪಕ್ಷಗಳ ರಾಜಕೀಯ ನಾಯಕರುಗಳು ನೀಡಿದ ಪ್ರತಿಕ್ರಿಯೆಗಳ ಶವ ಪರೀಕ್ಷೆಯ ವರದಿ ಇದು.

ಫೆ. 26, 2019; ಭಾರತದ ಮಟ್ಟಿಗೆ ಇತಿಹಾಸದಲ್ಲಿ ದಾಖಲಾದ ಪ್ರಮುಖ ದಿನ. ಸಾಮಾನ್ಯವಾಗಿ ಎಲ್ಲಾ ದಿನಗಳು ಬೆಳಕು ಬಿಟ್ಟ ಮೇಲೆ ಆರಂಭವಾದರೆ, ದಕ್ಷಿಣ ಏಷಿಯಾ ಉಪಖಂಡದ ಪಾಲಿಗೆ ಇದೊಂದು ದಿನ ಮಾತ್ರ ಇನ್ನೂ ನಸುಕಿನಲ್ಲೇ ಆರಂಭಗೊಂಡಿತ್ತು.

ಭಾರತದ ವಾಯುಸೇನೆ ವಿಮಾನಗಳು 1971ರ ನಂತರ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆ ದಾಟಿ ಭಯೋತ್ಪಾದಕರ ಕ್ಯಾಂಪ್‌ ಒಂದನ್ನು ಗುರಿಯಾಗಿಸಿ ದಾಳಿ ನಡೆಸಿ ನಸುಕಿನ ಜಾವ 3.30ರ ಸುಮಾರಿಗೆ ವಾಪಸ್‌ ಬಂದಿದ್ದವು. ಹೀಗೆ, ದಿನದ ಆರಂಭಕ್ಕೆ ಗಮನ ಸೆಳೆಯುವ ಸಂಗತಿಯೊಂದು ಮುನ್ನುಡಿ ಬರೆದಿತ್ತು.

ಭಾರತ ನಡೆಸಿದ ಈ ದಾಳಿಯನ್ನು ‘ಸೈನಿಕೇತರ ಪೂರ್ವ ಎಚ್ಚರಿಕೆ’ಯ ದಾಳಿ ಎಂದು ವಿದೇಶಾಂಗ ಕಾರ್ಯದರ್ಶಿ ರಾಜತಾಂತ್ರಿಕ ಭಾಷೆಯಲ್ಲಿ ಸುಮಾರು 8 ಗಂಟೆಗಳ ನಂತರ ವಿವರಣೆ ನೀಡಿದರು. ದಾಳಿಯಲ್ಲಿ ಜೈಷ್‌ ಎ ಮೊಹಮ್ಮದ್‌ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಹೇಳಿದರು. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ ಎಂಬುದಾಗಿ ಅವರು ತಿಳಿಸಿದರಾದರೂ, ಅದಾಗಲೇ ಭಾರತದ ಮಾಧ್ಯಮಗಳು 300ಕ್ಕೂ ಹೆಚ್ಚು ಉಗ್ರರು ಹತ ಎಂದು ‘ಮೂಲ’ಗಳನ್ನು ಉಲ್ಲೇಖಿಸಿ ವರದಿ ಮಾಡಲು ಆರಂಭಿಸಿಯಾಗಿತ್ತು. ಜತೆಗೆ, ಇಡೀ ದೇಶವನ್ನು ಸಮೂಹ ಸನ್ನಿಗೆ ಎಳೆದು ತರುವ ಪ್ರಯತ್ನಕ್ಕೆ ಮುನ್ನುಡಿ ಬರೆದಾಗಿತ್ತು.

'ಸೈನಿಕೇತರ ವೈಮಾನಿಕ ದಾಳಿ’ ರಾಜತಾಂತ್ರಿಕ ಮಟ್ಟದ, ಮಿಲಿಟರಿ ವಿಚಾರ. ಹಾಗಂತ ಅಷ್ಟಕ್ಕೆ ಸೀಮಿತವಾಗಿ ನೋಡಲು ಸಾಧ್ಯವಿಲ್ಲ ಕೂಡ. ಈ ದೇಶದಲ್ಲಿ ಏನೇ ಬೆಳವಣಿಗೆಗಳು ನಡೆದರೂ ಅಂತಿಮವಾಗಿ ಬಂದು ನಿಲ್ಲುವುದು ರಾಜಕೀಯ ಪಡಸಾಲೆಗೆ ಎಂಬುದನ್ನು ಮರೆಯುವಂತಿಲ್ಲ. ಪೂರಕ ಎಂಬಂತೆ ಭಾರತ ನಡೆಸಿದ ಈ ವೈಮಾನಿಕ ದಾಳಿಯನ್ನು ಆಡಳಿತ ಪಕ್ಷ ರಾಜಕೀಯವಾಗಿ ಬಳಸಿಕೊಳ್ಳಲು ಆರಂಭಿಸಿತು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತಿತರ ಬಿಜೆಪಿಯ ನಾಯಕರೆಲ್ಲಾ ಈ ದಾಳಿಯ ಗರಿಯನ್ನು ಸೇನೆಯ ಕಿರೀಟದಿಂದ ಕಿತ್ತು ಬಿಜೆಪಿಯ ಕಿರೀಟಕ್ಕೆ ಸಿಕ್ಕಿಸಿಕೊಳ್ಳುವ ಪ್ರಯತ್ನವನ್ನು ಢಾಳಾಗಿಯೇ ನಡೆಸಿದರು. ಅವರುಗಳ ಐಟಿ ತಂಡದ ಪ್ರಯತ್ನಗಳು ಕಣ್ಣಿಗೆ ರಾಚುವಂತಿತ್ತು. ಅಂತಿಮವಾಗಿ ಭಾರತದ ಸೇನೆಯನ್ನೇ ‘ಮೋದಿ ಸೇನೆ’ ಎನ್ನುವ ಮಟ್ಟಿಗೆ ಒಂದು ಸೈನಿಕೇತರ ಕಾರ್ಯಾಚರಣೆ ಪರಿಣಾಮ ಬೀರಿತು.

ಒಂದು ಕಡೆ ಆಡಳಿತ ಪಕ್ಷ, ಇಂತಹದೊಂದು ಬೆಳವಣಿಗೆಯನ್ನು ಮುಂಬರುವ ಚುನಾವಣಾ ಅಖಾಡದಲ್ಲಿ ದಾಳವಾಗಿ ಬಳಸುವ ಹುಮ್ಮಸ್ಸು ತೋರಿಸುತ್ತಿದ್ದರೆ, ಅಧಿಕೃತ ವಿರೋಧ ಪಕ್ಷಗಳ ನಾಯಕರಿಗೆ ಎಚ್ಚರಾಗಿದ್ದೇ ಸುಮಾರು ಐದು ಗಂಟೆಗಳ ಬೆಳವಣಿಗೆ ನಡೆದ ನಂತರ ಎಂಬುದು ವಿಪರ್ಯಾಸ.

ಬೆಳಗಿನ ಜಾವ 3.30ರ ಸುಮಾರಿಗೆ ನಡೆದಿರುವ ಈ ವೈಮಾನಿಕ ದಾಳಿಗೆ ಬೆಳಿಗ್ಗೆ 8 ಗಂಟೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, "ಭಾರತೀಯ ವಾಯು ಪಡೆಯ ಪೈಲಟ್‌ಗಳಿಗೆ ನನ್ನ ಸೆಲ್ಯೂಟ್‌" ಎಂದು ರಾಷ್ಟ್ರಧ್ವಜದ ಎರಡು ಚಿತ್ರಗಳ ಜತೆಗೆ ಟ್ವೀಟ್‌ ಮಾಡಿದ್ದರು. ಈ ಮೂಲಕ, ಉನ್ಮಾದದ ತುತ್ತ ತುದಿಗೆ ದೇಶವನ್ನು ಕೊಂಡೊಯ್ಯುವ ಆಡಳಿತ ಪಕ್ಷದ ‘ರಾತ್ರಿ ತೋರಿಸಿದ ಬಾವಿ’ಗೆ ಪ್ರತಿಪಕ್ಷದ ನಾಯಕರು ಹಾಡು ಹಗಲೇ ಹೋಗಿ ಬಿದ್ದಾಗಿತ್ತು.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಅಧ್ಯಕ್ಷರ ಪಾಡೇ ಹೀಗಾದ ಮೇಲೆ, ವಿರೋಧ ಪಕ್ಷಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಉನ್ಮಾದದ ಅಲೆಯಲ್ಲಿ ಕೊಚ್ಚಿ ಹೋಗುವ ತೀರ್ಮಾನ ತೆಗೆದುಕೊಂಡರು.

9 ಗಂಟೆ ಸುಮಾರಿಗೆ ಟ್ವೀಟ್‌ ಮಾಡಿದ್ದ ಮಮತಾ ಬ್ಯಾನರ್ಜಿ, "ಐಎಎಫ್‌ ಎಂದರೆ ಭಾರತದ ಅದ್ಭುತ ಹೋರಾಟಗಾರರು ಎಂದೂ ಅರ್ಥ. ಜೈ ಹಿಂದ್‌" ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದರು.

ಒಂದು ಸೇನಾ ಕಾರ್ಯಾಚರಣೆ ನಡೆದಿದೆ, ಇದರ ಕ್ರೆಡಿಟ್‌ನ್ನು ಆಡಳಿತ ಪಕ್ಷಕ್ಕೆ ನೀಡಬಾರದು ಎಂಬ ಉಮೇದು ಇಲ್ಲಿ ವ್ಯಕ್ತವಾಯಿತೇ ಹೊರತು, ವಿರೋಧ ಪಕ್ಷಗಳ ಸ್ಥಾನದಲ್ಲಿದ್ದು ತಮ್ಮ ಹೊಣೆಗಾರಿಕೆ ಏನು ಎಂಬುದನ್ನು ಇವರು ಪ್ರದರ್ಶಿಸಲು ಹೋಗಲಿಲ್ಲ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇದೇ ಹಾದಿ ಅನುಸರಿಸಿದರು.

ಸಾಮಾನ್ಯವಾಗಿ ಕಮ್ಯುನಿಸ್ಟರನ್ನು ‘ಎಲ್ಲದರಲ್ಲೂ ತಪ್ಪು ಹುಡುಕುವವರು’ ಎಂದು ಗುರುತಿಸಲಾಗುತ್ತದೆ. ಆದರೆ ಫೆ. 26ರಂದು ಸಿಪಿಐ (ಎಂ) ನೀಡಿದ ಪ್ರತಿಕ್ರಿಯೆ ಈ ಮಾತಿಗೆ ಅಪವಾದದಂತಿತ್ತು.

"ಭಾರತೀಯ ವಾಯುಸೇನೆ ಪರಿಣಾಮಕಾರಿಯಾದ ದಾಳಿ ನಡೆಸಿದೆ" ಎಂದು ಸಿಪಿಐ(ಎಂ) ನಾಯಕ ಸೀತಾರಾಮ್‌ ಯಚೂರಿ ಪರೋಕ್ಷವಾಗಿ ನಡೆಯುತ್ತಿರುವ ಘಟನಾವಳಿಗಳಿಂದ ‘ಸುರಕ್ಷಿತ ಅಂತರ’ ಕಾಯ್ದುಕೊಂಡರು. ಅಷ್ಟೊತ್ತಿಗೆ ಮಧ್ಯಾಹ್ನ ಸಮೀಪಿಸಿತ್ತು.

ಲೋಕಸಭೆಯಲ್ಲಿ ವಿಪಕ್ಷ ನಾಯಕರಾದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಕೂಡಾ, "ನಮ್ಮ ಸೈನಿಕರು ಏನು ಕ್ರಮ ಕೈಗೊಳ್ಳುತ್ತಾರೋ ಅದಕ್ಕೆ ಸಂಪೂರ್ಣ ಬೆಂಬಲ ಕೊಡಬೇಕು. ಸೈನ್ಯದ ಜತೆಗೆ ಇಡೀ ದೇಶ ಇರಲಿದೆ. ಸೇನಾ ಕಾರ್ಯಾಚರಣೆಗೆ ಭಿನ್ನಾಭಿಪ್ರಾಯ ತೋರುವುದಿಲ್ಲ," ಎಂದರು.

ಈ ಮೂಲಕ ಈ ಕಾರ್ಯಾಚರಣೆಯನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ನೀಡಲು ವಿಪಕ್ಷಗಳು ಹೆಣಗಾಡಿದವೇ ಹೊರತು, ಘಟನೆಯನ್ನು ಆಡಳಿತ ಪಕ್ಷ ರಾಜಕೀಯಕ್ಕೆ ಬಳಸದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅವುಗಳ ಮಾತುಗಳಲ್ಲಿ ಕಾಣಿಸಲಿಲ್ಲ.

ರಾಜ್ಯದ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಕೂಡಾ ಅವಸರದಲ್ಲೆಂಬಂತೆ ಟ್ವೀಟ್‌ ಮಾಡಿ, "ಉಗ್ರರ ಕ್ಯಾಂಪ್‌ಗಳ ಮೇಲೆ ಎರಡನೇ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಭಾರತೀಯ ವಾಯುಪಡೆಗೆ ನನ್ನ ಸೆಲ್ಯೂಟ್‌. ತನ್ನ ನೆಲದಲ್ಲಿರುವ ಉಗ್ರರ ಗುಂಪುಗಳನ್ನು ನಿಯಂತ್ರಿಸುವುದು ಹೇಗೆ ಎಂಬುದಕ್ಕೆ ಪಾಕಿಸ್ತಾನಕ್ಕೆ ಇದೊಂದು ದೊಡ್ಡ ಪಾಠ," ಎಂದರು.

ಪಕ್ಷದ ಅಧ್ಯಕ್ಷರೇ ‘ಟೋನ್ ಡೌನ್‌ ಅಪ್ರೋಚ್’ ಇಟ್ಟುಕೊಂಡ ಮೇಲೆ ಪ್ರಾದೇಶಿಕ ನಾಯಕರು ಶೌರ್ಯ ಪ್ರದರ್ಶಿಸಲಾದರೂ ಹೇಗೆ ಸಾಧ್ಯ?

ಮಂಗಳವಾರ ಸಂಜೆ ವೇಳೆಗೆ ನಡೆದ ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌, "ಈ ವಿಚಾರದಲ್ಲಿ ವಿಪಕ್ಷಗಳೆಲ್ಲವೂ ಒಗ್ಗಟ್ಟಾಗಿರಲಿವೆ. ಸೇನೆಯ ಕ್ರಮಗಳ ವಿಚಾರದಲ್ಲಿ ವಿಪಕ್ಷಗಳು ಸರಕಾರದ ಜತೆಗಿರಲಿವೆ," ಎಂದರು. ಅಧ್ಯಕ್ಷರ ಬೆಳಗ್ಗಿನ ನಿಲುವಿಗೆ ಸಂಜೆಯೂ ಪಕ್ಷ ಬದ್ಧವಾಗಿದೆ ಎಂಬುದನ್ನು ಇವರು ಖಾತ್ರಿ ಪಡಿಸಿದರು.

ಹೀಗೆ ಮಂಗಳವಾರ ಇಡೀ ದಿನ ವಿಪಕ್ಷಗಳು ತಾವು ಮಾಡಬೇಕಾದ ವಿರೋಧ ಪಕ್ಷದ 'ರಿಸ್ಕಿ' ಕೆಲಸವನ್ನು ಹೆಗಲ ಮೇಲೆ ಹೊತ್ತುಕೊಳ್ಳಲು ಹೋಗಲಿಲ್ಲ. ಬದಲಿಗೆ ಉನ್ಮಾದದ ಸುನಾಮಿಯನ್ನು ಎದುರಿಸುವುದು ಹೇಗೆ ಎಂಬುದು ತಿಳಿಯದೇ, ಕೊನೆಯಲ್ಲಿ ಹರಿದ ಪ್ರವಾಹದೊಂದಿಗೇ ಸೇರಿ ನೆಮ್ಮದಿಯಾಗಿ ದಡ ಸೇರಿಕೊಳ್ಳುವ ತೀರ್ಮಾನಕ್ಕೆ ಬಂದಂತೆ ಕಂಡು ಬಂದರು. ವಾಸ್ತವದಲ್ಲಿ ಸುನಾಮಿ ಎಂಬುದು ಸಮೂಹ ಸನ್ನಿಯ ರೂಪದಲ್ಲಿತ್ತು ಮತ್ತು ಅಲ್ಲೊಂದು ದಡವೇ ಇರಲಿಲ್ಲ ಎಂಬುದನ್ನು ಅವು ಮರೆತವು.

ವಾರ್ ವರ್ಸಸ್‌ ಪ್ರಾಪಗಂಡಾ ವಾರ್:

ಸೇನೆ, ಯುದ್ಧ ಅಂತ ಎಂದು ಏನೇ ಮಾತನಾಡಿದರೂ ಪ್ರಜಾಪ್ರಭುತ್ವ ದೇಶದ ರಾಜಕಾರಣ ಅಂತಿಮವಾಗಿ ಬಂದು ನಿಲ್ಲುವುದು ಚುನಾವಣೆ ವ್ಯವಸ್ಥೆಗೆ. ಇಲ್ಲಿ ಮತ ಎಂಬುದು ಮದ್ದುಗುಂಡಿಗಿಂತಲೂ ಪ್ರಬಲವಾದ ಅಸ್ತ್ರ.

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ನಡೆಯುತ್ತಿರುವ ಈ ಘಟನಾವಳಿಗಳನ್ನೂ ಈ ದೇಶದ ಸಾಮಾನ್ಯ ವ್ಯಕ್ತಿಗಳೂ ವರ್ಷಗಳ ಹಿಂದೆಯೇ ಊಹಿಸಿದ್ದರು, ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದರು. ಹೀಗಿರುವಾಗ ವಿರೋಧ ಪಕ್ಷಗಳಿಗೆ ಇಂತಹದೊಂದು ಸನ್ನಿವೇಶ ಎದುರಾಗಬಹುದು ಎಂಬ ಕನಿಷ್ಟ ಆಲೋಚನೆಯೂ ಇರಲಿಲ್ಲವಾ?

ಇವತ್ತಿನ ಅವರುಗಳ ನಡೆಗಳನ್ನು ನೋಡಿದರೆ ಇಂಥಹದ್ದೊಂದು ಮುನ್ಸೂಚನೆ ಅವರುಗಳಿಗೆ ಇದ್ದ ಹಾಗೆ ಕಾಣಿಸುತ್ತಿಲ್ಲ . ದೇಶದ ಗಡಿಯಲ್ಲಿ ಸದ್ಯ ನಿರ್ಮಾಣವಾಗಿರುವುದು ಯುದ್ಧದ ವಾತಾವರಣ. ಆದರೆ ದೇಶದ ಒಳಗೆ ನಡೆಯುತ್ತಿರುವುದು ಪ್ರಾಪಗಂಡಾ ವಾರ್!

ಯುದ್ಧಕ್ಕೂ, ಪ್ರಚಾರದ ಯುದ್ಧಕ್ಕೂ ವ್ಯತ್ಯಾಸಗಳನ್ನು ಗುರುತಿಸಿ, ಅದನ್ನು ಜನರ ಮುಂದಿಡಲು ವಿರೋಧ ಪಕ್ಷಗಳು ಸೋತವು. ಅಷ್ಟೆ ಅಲ್ಲ, ಕೇಂದ್ರದ ಆಡಳಿತದ ನ್ಯೂನತೆಗಳ ವಿರುದ್ಧ ಕಳೆದ ನಾಲ್ಕೂವರೆ ವರ್ಷಗಳ ಅಂತರದಲ್ಲಿ ಎತ್ತಿದ ಸ್ವತಂತ್ರ ದನಿಗಳನ್ನು ಇವು ಅನುಮಾನಿಸಿದವು. ಅವರುಗಳನ್ನು ನೇರವಾಗಿ ಆಡಳಿತ ಸರ್ಕಾರದ ಬೆಂಬಲಿಗರ ದಾಳಿಗೆ ಈಡಾಗುವಂತೆ ಮಾಡಿದವು.

ಒಟ್ಟಾರೆ, ಕೃತವಾಗಿ ಸೃಷ್ಟಿಸಿದ ಉನ್ಮಾದದ ಅಲೆಯೊಂದನ್ನು ಎದುರಿಸಲಾಗದೆ ವಿಪಕ್ಷಗಳು ಹುತಾತ್ಮರಾದವು. ಇನ್ನು ಬಾಕಿ ಇರುವುದು ಇವುಗಳ ತಿಥಿ ಕಾರ್ಯ ಅಷ್ಟೆ.

ಹಾಗಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾತ್ರೋ ರಾತ್ರಿ ವಿರೋಧ ಪಕ್ಷಗಳನ್ನು ಹುಟ್ಟು ಹಾಕಲು ಸಾಧ್ಯವಿಲ್ಲ. ಬಾಕಿ ಉಳಿದಿರುವುದು ತಮ್ಮ ತಿಥಿಯನ್ನು ಮುಗಿಸಿಕೊಂಡು, ವಿರೋಧ ಪಕ್ಷಗಳು ಹೊಸ ಆಲೋಚನೆಯ ಮೂಲಕ ಮರು ಹುಟ್ಟು ಪಡೆದುಕೊಳ್ಳಬೇಕಿದೆ. ಈಗಲೂ ವಿಪಕ್ಷಗಳು ಎಚ್ಚರಾಗದೇ ಹೋದರೆ, ರಕ್ತದ ರುಚಿ ತೋರಿಸಿ, ಉನ್ಮಾದದ ಅಲೆ ಎಬ್ಬಿಸಿ, ಚುನಾವಣೆಯ ಅಖಾಡಕ್ಕೆ ಇಳಿದ ಆಡಳಿತ ಪಕ್ಷವನ್ನು ಇವು ಪ್ರಜಾಪ್ರಭುತ್ವದ ಹೆಸರಿನಲ್ಲಿ ಎದುರಿಸುವ ಬದಲು ಅಖಾಡದಿಂದ ದೂರು ಉಳಿಯುವುದೇ ಒಳ್ಳೆಯದು.