samachara
www.samachara.com
ಇದು ನಕಲಿ ಅಲಿಯಾಸ್‌ ಫೇಕುಗಳ ಹೈ-ಟೈಮ್‌; ಎಚ್ಚರ!
COVER STORY

ಇದು ನಕಲಿ ಅಲಿಯಾಸ್‌ ಫೇಕುಗಳ ಹೈ-ಟೈಮ್‌; ಎಚ್ಚರ!

ನಕಲಿ ಮಾಹಿತಿಯನ್ನು ಯಾವುದೋ ಹಿತಾಸಕ್ತಿಯ ಕಾರಣಕ್ಕೆ ಹಂಚುವುದು ಒಂದು ಕಡೆಗಿದ್ದರೆ, ಬಂಡೀಪುರದಂತಹ ಘಟನೆಗಳು ನಡೆದಾಗ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸುವ ಉದ್ದೇಶಗಳೂ ಇನ್ನೊಂದು ಕಡೆಯಲ್ಲಿ ಕಾಣಿಸುತ್ತದೆ. ಇದಕ್ಕೆ ಪರಿಹಾರ ಏನು?

ಇದೇನಿದು ದೇಶ ಯುದ್ಧೋತ್ಸಾಹದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವ ಸಮಯದಲ್ಲಿ ನಕಲಿ ವಿಚಾರ ಅಂತೀರಾ? ಒಂದೈದು ನಿಮಿಷ ಪುರುಸೊತ್ತು ಮಾಡಿಕೊಂಡು ನೀವು ಇವತ್ತು ನಂಬಿರುವ ಸಾಮಾಜಿಕ ಜಾಲತಾಣದ ಸರಕುಗಳನ್ನು ಜಾಲಾಡಿ ನೋಡಿ. ಇಲ್ಲಾ, ಅದಕ್ಕೂ ಟೈಮಿಲ್ಲ ಅನ್ನೋರು, ಒಂದೆರಡು ನಿಮಿಷದಲ್ಲಿ ಕೆಳಗಿನ ಮಾಹಿತಿ ಮೇಲೆ ಕಣ್ಣಾಡಿಸಿ.

ಅದು ಫೆ. 14ರ ಮಧ್ಯಾಹ್ನ ಮೂರು ಗಂಟೆ ಹದಿನೈದು ನಿಮಿಷ. ಜಮ್ಮುವಿನಿಂದ ಹೊರಟಿದ್ದ ಅರೆಸೇನಾಪಡೆ ವಾಹನಗಳ ಮೇಲೆ ಭೀಕರ ದಾಳಿ ನಡೆದಿತ್ತು. ಈ ದಾಳಿ ನಡೆದಿದ್ದು ಸ್ಕಾರ್ಪಿಯೋ ವಾಹನದಲ್ಲಿ ಸ್ಥಳೀಯ ಯುವಕ ತುಂಬಿಕೊಂಡು ಬಂದ ಸ್ಫೋಟಕಗಳಿಂದ ಎಂದು ಸುದ್ದಿಯಾಯಿತು. ಇವತ್ತಿಗೆ ಎನ್‌ಐಎ ಅದು ಸ್ಕಾರ್ಪಿಯೋ ವಾಹನ ಅಲ್ಲ, ಮಾರುತಿ ಇಕೋ ಎಂದು ಹೇಳುತ್ತಿದೆ. ಜತೆಗೆ, ದಾಳಿಕೋರ ಭಾಗಿಯಾಗಿದ್ದ ಎನ್ನುವುದಕ್ಕೆ ಒಂದೇ ಒಂದೂ ಸಾಕ್ಷ್ಯವೂ ಸಿಗದೆ ಒದ್ದಾಡುತ್ತಿದೆ.

ಒಂದು ಕಡೆ ಇಂತಹದೊಂದು ಭೀಕರ ಫಿದಾಯೀನ್ ದಾಳಿ ನಡೆದು ಸೈನಿಕ ಮಾರಣಹೋಮ ನಡೆದರೆ, ಕಳೆದ ವಾರ ಜಮ್ಮು ಕಾಶ್ಮೀರದ ಮನೆಯೊಂದರಲ್ಲಿ ಅಡಗಿದ್ದರು ಎನ್ನಲಾದ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಈ ಸಮಯದಲ್ಲಿ ಸೇನಾಪಡೆಗಳು ಸದೆ ಬಡಿದ ಉಗ್ರನ ಫೊಟೋ ಒಂದು ವೈರಲ್‌ ಆಯಿತು. ಆದರೆ ನಂತರ ಗೊತ್ತಾಗಿದ್ದು ಏನು ಎಂದರೆ ಅದು ಉಗ್ರನ ಎಡಿಟೆಡ್ ಚಿತ್ರ ಎಂಬುದು.

ಮಂಗಳವಾರ ದೇಶವಾಸಿಗಳು ನಿದ್ದೆಯಲ್ಲಿದ್ದಾಗ ವಾಯುಪಡೆ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಜೈಷ್‌ ಎ ಮೊಹಮ್ಮದ್‌ನ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿವೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.

ಆದರೆ ಈ ಕಾರ್ಯಾಚರಣೆ ಹೇಗಾಯಿತು? ಎಷ್ಟು ಜನ ಉಗ್ರಗಾಮಿಗಳನ್ನು ಕೊಲ್ಲಲಾಗಿದೆ? ಎಷ್ಟು ಉಗ್ರರ ಅಡಗುದಾಣಗಳನ್ನು ಉಡಾಯಿಸಲಾಗಿದೆ? ಎಂದು ಭಾರತೀಯ ಸೇನೆಯಾಗಲೀ ಅಥವಾ ಭಾರತೀಯ ರಕ್ಷಣಾ ಇಲಾಖೆಯಾಗಲೀ ಈವರೆಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೂ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ವಿಡಿಯೋ ಗೇಮ್‌ನ ದೃಶ್ಯವನ್ನು ಕಟ್‌ ಅಂಡ್ ಪೇಸ್ಟ್‌ ಮಾಡಿ, ಅದನ್ನೇ ಭಾರತೀಯ ವಾಯು ಸೇನೆ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ಎಂದು ಹಂಚಲಾಗುತ್ತಿದೆ. ಇದನ್ನೇ ಮಾಧ್ಯಮಗಳೂ ಕೂಡ ಭಿತ್ತರಿಸುವ ಮೂಲಕ ನಕಲಿ ಮಾಹಿತಿಗೆ ಅಸಲಿ ಮುಖವಾಡ ತೊಡಿಸುವ ಯತ್ನದಲ್ಲಿ ಕೈಜೋಡಿಸಿವೆ.

ಅಂದಹಾಗೆ, ಈ ಕೆಳಗೆ ಇರುವ ವಿಡಿಯೋ, ಗೇಮ್‌ ಒಂದರ ಹಿನ್ನೆಲೆಯಲ್ಲಿ ಸೃಷ್ಟಿಸಿದ ಗ್ರಾಫಿಕ್‌ ಅವತರಣಿಕೆ. ನೀವೀಗಾಗಲೇ ಇದನ್ನೇ ಪಾಕ್‌ ಗಡಿ ದಾಟಿ ಭಾರತೀಯ ಸೇನೆ ನಡೆಸಿದ ದಾಳಿ ಎಂದು ನೋಡಿದ್ದರೆ, ಮಾಹಿತಿ ತಪ್ಪು ಎಂಬುದನ್ನು ಮನಸ್ಸಿಗೆ ಹಾಕಿಕೊಳ್ಳಿ.

ಇಂದಿನ ಕಾಲಗಳಲ್ಲಿ ನಕಲಿ ಸುದ್ದಿಗಳು ಎಂಬುದು ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಆಡಳಿತ ಪಕ್ಷಗಳು ತಮ್ಮ ಪೊಲಿಟಿಕಲ್ ಅಜೆಂಡಾಗಳನ್ನು ಜನರ ನಡುವೆ ಸುಲಭಕ್ಕೆ ತಲುಪಿಸುವ ಸಲುವಾಗಿ ಇಂತಹ ಫೇಕ್ ಸುದ್ದಿಗಳನ್ನು ಹರಡುತ್ತಿರುತ್ತವೆ. ಪ್ರತಿಯೊಂದು ಫೇಕ್ ಸುದ್ದಿಗಳ ಹಿಂದೆ ಒಂದು ಕಾರಣ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣಗಳು ಅವರ ಫೇಕ್ ಸುದ್ದಿ ಹಾಗೂ ಪೋಟೋಗಳಿಗೆ ಒಂದು ಮಾಧ್ಯಮವಷ್ಟೇ.
ಡಾ.ಕಿರಣ್ ಗಾಜನೂರ್, ರಾಜಕೀಯಶಾಸ್ತ್ರ ಉಪನ್ಯಾಸಕರು, ಕೇಂದ್ರ ವಿಶ್ವವಿದ್ಯಾನಿಲಯ, ಬೆಂಗಳೂರು.

ಕಿರಣ್ ಹೇಳುವಂತೆ ರಾಜಕೀಯ ಹಿತಾಸಕ್ತಿಗಳ ಕಾರಣಕ್ಕೆ ನಡೆದಿದ್ದೋ, ಇಲ್ಲಾ ಉತ್ಸಾಹಿಗಳು ಹಂಚಿಕೊಂಡಿದ್ದೋ ಗೊತ್ತಿಲ್ಲ. ಆದರೆ ಯಾವುದೇ ಪ್ರಮುಖ ಘಟನೆಯೊಂದು ಸುದ್ದಿ ಕೇಂದ್ರಕ್ಕೆ ಬಂದಾಗಲೆಲ್ಲಾ ಇಂತಹ ನಕಲಿಗಳ ಹಾವಳಿ ಹೆಚ್ಚುವುದನ್ನು ಇತ್ತೀಚಿನ ದಿನಗಳು ಸಾರಿ ಸಾರಿ ಹೇಳುತ್ತಿವೆ. ಉದಾಹರಣೆಗೆ, ನಮ್ಮಲ್ಲೇ ನಡೆದ ಬಂಡೀಪುರ ಬೆಂಕಿ ಅನಾಹುತ.

ಬಂಡೀಪುರದ ಫೇಕ್ ಪೋಟೋಗಳು

ದೇಶದ ಅತ್ಯಂತ ಪ್ರಮುಖ ರಾಷ್ಟ್ರೀಯ ಉದ್ಯನವನಗಳಲ್ಲಿ ಒಂದಾದ ಬಂಡೀಪುರದಲ್ಲಿ ಕಳೆದ ಶುಕ್ರವಾರ ಬೆಂಕಿ ಕಾಣಿಸಿಕೊಂಡಿತ್ತು. ಸತತ ನಾಲ್ಕು ದಿನ ಹೊತ್ತಿ ಉರಿದ ಬೆಂಕಿ ಇನ್ನೂ ಹತೋಟಿಗೆ ಬಂದಿಲ್ಲ. ಅಷ್ಟರಲ್ಲಿ ಸುಮಾರು 875 ಚದರ ಕಿ. ಮೀ. ವಿಸ್ತೀರ್ಣದ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಈ ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಜೀವಹಾನಿಯೂ ಸಂಭವಿಸಿರುವ ಸಾಧ್ಯತೆ ಇದೆ. ಆದರೆ ಆ ಕುರಿತು ಅರಣ್ಯ ಇಲಾಖೆ ಈವರೆಗೆ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ. ಆದರೆ, ಅಷ್ಟರೊಳಗೆ ಈ ಕುರಿತ ಹತ್ತಾರು ನಕಲಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದವು.

ಬಂಡೀಪುರದಲ್ಲಿ ಉಂಟಾದ ಕಾಡ್ಗಿಚ್ಚಿಗೆ ಬಲಿಯಾದ ಕಾಡುಪ್ರಾಣಿಗಳು ಎಂದು ಸುದ್ದಿ ಹಬ್ಬಿಸಲು ಬಳಸಿದ ಈ ಎಲ್ಲಾ ಫೊಟೋಗಳು ನಕಲಿ. 
ಬಂಡೀಪುರದಲ್ಲಿ ಉಂಟಾದ ಕಾಡ್ಗಿಚ್ಚಿಗೆ ಬಲಿಯಾದ ಕಾಡುಪ್ರಾಣಿಗಳು ಎಂದು ಸುದ್ದಿ ಹಬ್ಬಿಸಲು ಬಳಸಿದ ಈ ಎಲ್ಲಾ ಫೊಟೋಗಳು ನಕಲಿ. 

ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಮೊಲ, ಸಹಸ್ರ ಸಂಖ್ಯೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಕಾಡು ಮೇಕೆ, ಸಿಂಹದ ಚಿತ್ರಗಳು ಕಳೆದ ಎರಡು ದಿನಗಳಿಂದ ದೊಡ್ಡ ಮಟ್ಟದಲ್ಲಿ ಜನರ ಅಂತಃಕರಣವನ್ನು ಕಲಕುತ್ತಿವೆ. ಇವೆಲ್ಲ ಬಂಡೀಪುರದ ಕಾಡ್ಗಿಚ್ಚಿಗೆ ಸಿಕ್ಕು ಪ್ರಾಣ ಕಳೆದುಕೊಂಡ ಕಾಡುಪ್ರಾಣಿಗಳು ಎನ್ನುವ ಮೂಲಕ ಅನಾಹುತವೊಂದಕ್ಕೆ ಮಾನವೀಯ ಟಚ್ ಕೊಡುವ ನಕಲಿ ಪ್ರಯತ್ನವೊಂದು ನಡೆದಿತ್ತು. ಇಲ್ಲಿಯೂ ಕೂಡ ಹೊಣೆಗಾರಿಕೆ ಹೊಂದಿರುವ ಮುಖ್ಯವಾಹಿನಿ ಮಾಧ್ಯಮಗಳೂ ಇದೇ ಚಿತ್ರಗಳನ್ನು ಹಿಂದು ಮುಂದೂ ಆಲೋಚನೆ ಮಾಡದೆ ಬಳಸಿದವು. ನಕಲಿಗೆ ಅಸಲಿಯತ್ತಿನ ಮುಖವಾಡ ಹಾಕುವ ಪ್ರಯತ್ನದಲ್ಲಿ ಪಾತ್ರವಹಿಸಿದವು.

ಹುಡುಕಿಕೊಂಡು ಹೊರಟರೆ ಭಾರತದ ಅಂತರ್ಜಾಲ ಬೆಳವಣಿಗೆ ಜತೆ ಜತೆಗೆ ಇಂತಹ ಹತ್ತು ಹಲವು ನಿದರ್ಶನಗಳು ಕಣ್ಣಿಗೆ ಬೀಳುತ್ತವೆ. ಕೆಲ ವರ್ಷಗಳಿಂದ ಫೇಕ್ ಪೋಟೋಗಳ ಮೂಲಕ ನಕಲಿ ಮಾಹಿತಿ ನೀಡುವ ದೊಡ್ಡ ಪಟ್ಟಿಯೇ ಸಿಗುತ್ತದೆ.

ಕೆಲ ದಿನಗಳ ಹಿಂದೆ ಅರೇಬಿಯಾದ ಪೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಕೆಲವರು ಅದನ್ನು ಭಾರತದ ಕುಂಭ ಮೇಳದ ಪೋಟೋ ಎಂದು ಜನರನ್ನು ನಂಬಿಸಿದ್ದರು.

ಮಲೇಷ್ಯಾದ ಬಸ್ ನಿಲ್ದಾಣದ ಪೋಟೋವನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಹೊಸ ಬಸ್ ನಿಲ್ದಾಣ ಎಂದು ಶೀರ್ಷಿಕೆ ನೀಡಲಾಗಿತ್ತು. ಇರಾನ್ ರೈಲಿನ ಪೋಟೋವನ್ನು ಭಾರತದ ಮೊದಲ ಸೋಲಾರ್ ರೈಲ್ ಎಂದು ಶೀರ್ಷಿಕೆ ನೀಡಿ ದೊಡ್ಡ ಮಟ್ಟದ ಸುದ್ದಿ ಮಾಡಲಾಗಿತ್ತು.

5 ಜನರ ಪ್ರಾಣ ನುಂಗಿದ ಫೇಕ್ ಮೆಸೇಜ್

ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೇಕ್ ಪೋಟೋ ಮತ್ತು ವಿಡಿಯೋಗಳನ್ನು ಮಾತ್ರ ಹರಿಬಿಡಲಾಗುತ್ತಿಲ್ಲ. ಬದಲಿಗೆ ಸುಳ್ಳು ಸುದ್ದಿಗಳನ್ನು ಆಗಾಗ್ಗೆ ಹರಿಬಿಡಲಾಗುತ್ತಿದೆ. ಇಂತಹ ಸುಳ್ಳು ಸುದ್ದಿಗಳು ಹಲವಾರು ಜನರ ಪ್ರಾಣಕ್ಕೂ ಎರವಾಗಿರುವ ಘಟನೆಗಳು ಆಗಿಂದಾಗ್ಗೆ ಸಂಭವಿಸುತ್ತಲೇ ಇದೆ.

ಜುಲೈ 2018ರಲ್ಲಿ ಮಹಾರಾಷ್ಟ್ರದ ಪ್ರದೇಶವೊಂದರಲ್ಲಿ ಮಕ್ಕಳ ಕಳ್ಳರ ಕುರಿತ ಸುಳ್ಳು ಸುದ್ದಿಯೊಂದು ವಾಟ್ಸಾಪ್‌ ಮೂಲಕ ಹರಿದಾಡಲು ಆರಂಭಿಸಿತ್ತು. ವದಂತಿಯನ್ನು ಸತ್ಯವೆಂದು ನಂಬಿದ ಜನ ಸಮೂಹವೊಂದು ಅದೇ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು ಎಂದು ಆರೋಪಿಸಿ 5 ಜನರ ಗುಂಪನ್ನು ಮನಸ್ಸೋ ಇಚ್ಚೆ ಥಳಿಸಿದ್ದರು. ಈ ಅಮಾನವೀಯ ಘಟನೆಯಲ್ಲಿ 5 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ಇಡೀ ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.

ಈ ಪ್ರಕರಣದ ಕುರಿತು ನಂತರ ತನಿಖೆ ನಡೆಸಿದಾಗ ಗಲಭೆಯಲ್ಲಿ ಕೊಲ್ಲಲ್ಪಟ್ಟವರೆಲ್ಲರೂ ಅಮಾಯಕರು ಎಂಬ ಅಂಶ ಬಯಲಾಗಿತ್ತು. "ವಾಟ್ಸಾಪ್ ಕಿಲ್ಲಿಂಗ್" ಎಂಬ ಹೆಸರಿನಲ್ಲಿ ಈ ಘಟನೆ ಜಾಗತಿಕ ಕುಖ್ಯಾತಿ ಗಳಿಸಿದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಫೇಕ್ ಸುದ್ದಿಗಳಿಂದಾಗಿ ದೇಶದ ನಾನಾ ಕಡೆ ಕೋಮು ಗಲಭೆಗಳೂ ಜರುಗಿದ ಉದಾಹರಣೆಗಳಿವೆ.

“ನಕಲಿ ಸುದ್ದಿಗಳ ಪರಿಣಾಮ ಭೀಕರವಾಗಿರುತ್ತದೆ. ಈ ಕಾರಣಕ್ಕೆ ಅಂತವುಗಳ ಕಡಿವಾಣಕ್ಕೆ ರಾಜ್ಯ ಸರಕಾರಗಳು ತಮ್ಮ ಮಟ್ಟದಲ್ಲಿ ಗಂಭೀರವಾಗಿ ಆಲೋಚನೆ ಮಾಡಬೇಕಿದೆ,’’ ಎನ್ನುತ್ತಾರೆ ಪತ್ರಕರ್ತ ಪ್ರದೀಪ್ ಮಾಲ್ಗುಡಿ.

ನಕಲಿ ಮಾಹಿತಿಯನ್ನು ಯಾವುದೋ ಹಿತಾಸಕ್ತಿಯ ಕಾರಣಕ್ಕೆ ಹಂಚುವುದು ಒಂದು ಕಡೆಗಿದ್ದರೆ, ಬಂಡೀಪುರದಂತಹ ಘಟನೆಗಳು ನಡೆದಾಗ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸುವ ಉದ್ದೇಶಗಳೂ ಇನ್ನೊಂದು ಕಡೆಯಲ್ಲಿ ಕಾಣಿಸುತ್ತದೆ. ಇದಕ್ಕೆ ಪರಿಹಾರ ಏನು? ಸದ್ಯಕ್ಕೆ ನಿಯಂತ್ರಣ, ಸ್ವ ನಿಯಂತ್ರಣ ಎಂದು ಹೇಳಬಹುದಾದರೂ, ಶಾಶ್ವತ ಪರಿಹಾರವನ್ನು ಸಾಮಾಜಿಕ ಜಾಲತಾಣಗಳ ಲಾಭ ಪಡೆಯುತ್ತಿರುವ ಕಂಪನಿಗಳು ನೀಡಬೇಕಿದೆ. ಅಲ್ಲೀವರೆಗೂ ಏನಕ್ಕೂ ನೀವು ಎಚ್ಚರಿಕೆ ವಹಿಸುವುದು ನಿಮ್ಮ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯಕ್ಕೆ ಒಳ್ಳೆಯದು.