samachara
www.samachara.com
ವಿಚಿತ್ರವಾದರೂ ಸತ್ಯ, ಒಂದೇ ದಾಳಿಗೆ ಭಾರತ-ಪಾಕ್ ಎರಡೂ ದೇಶಗಳಲ್ಲಿ ಸಂಭ್ರಮಾಚರಣೆ!
COVER STORY

ವಿಚಿತ್ರವಾದರೂ ಸತ್ಯ, ಒಂದೇ ದಾಳಿಗೆ ಭಾರತ-ಪಾಕ್ ಎರಡೂ ದೇಶಗಳಲ್ಲಿ ಸಂಭ್ರಮಾಚರಣೆ!

ಪಾಕಿಸ್ತಾನವನ್ನು ಹೀಯಾಳಿಸುವ, ಭಾರತದ ಸೈನಿಕರ ಶೌರ್ಯವನ್ನು ಮೆಚ್ಚುವ ಟ್ಟೀಟ್‌ಗಳು, ಮೀಮ್ಸ್‌ಗಳು, ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿಕೊಂಡಿವೆ. ಅತ್ತ ಪಾಕಿಸ್ತಾನದಲ್ಲೂ ಇದೇ ಕತೆ!

ಯುದ್ಧಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಚ್ಚರಿಯ ಘಟನೆಯೊಂದಕ್ಕೆ ಜಗತ್ತು ಸಾಕ್ಷಿಯಾಗಿದೆ. ಪರಸ್ಪರ ವೈರಿ ದೇಶಗಳಲ್ಲಿ ನಡೆದ ಬಾಂಬ್‌ ದಾಳಿಯೊಂದಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳು ಏಕಕಾಲಕ್ಕೆ ಸಂಭ್ರಮಾಚರಣೆ ನಡೆಸುತ್ತಿರುವ ವಿದ್ಯಮಾನ ನಡೆದಿದೆ. ಅಂದ ಹಾಗೆ ಇಲ್ಲಿ ವೈರಿ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನ.

ಇಂದು (ಫೆ. 26) ಮುಂಜಾನೆ 3.30ರ ಸುಮಾರಿಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಭಾರತದ ವಾಯುಪಡೆಯ ಮಿರಾಜ್‌-2000 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದ ಉಗ್ರರ ಅಡಗುದಾಣದ ಮೇಲೆ ದಾಳಿ ನಡೆಸಿವೆ ಎಂದು ಸರಕಾರ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಭಾರತದ ವಾಯು ಸೇನೆ ಯೋಧರಿಗೆ ಆಡಳಿತ, ವಿರೋಧ ಪಕ್ಷಗಳಾದಿಯಾಗಿ ಎಲ್ಲರೂ ಅಭಿನಂದನೆಗಳ ಸುರಿಮಳೆ ಸುರಿಸುತ್ತಿದ್ದಾರೆ.

ಪಾಕಿಸ್ತಾನವನ್ನು ಹೀಯಾಳಿಸುವ, ಭಾರತದ ಸೈನಿಕರ ಶೌರ್ಯವನ್ನು ಮೆಚ್ಚುವ ಟ್ಟೀಟ್‌ಗಳು, ಮೀಮ್ಸ್‌ಗಳು, ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿಕೊಂಡಿವೆ.

ವಿಚಿತ್ರವೆಂದರೆ ಪಾಕಿಸ್ತಾನದಲ್ಲೂ ಇದೇ ಪರಿಸ್ಥಿತಿ ಇದೆ. ಕೊಂಚ ಭಿನ್ನ ಅಷ್ಟೇ.

ಎರಡು ದೇಶ, ಒಂದು ದಾಳಿ, ಒಂದೇ ಪ್ರತಿಕ್ರಿಯೆ!

ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನದ ಅಂಗಳ ಪ್ರವೇಶಿಸುತ್ತಿದ್ದಂತೆ ‘ಪ್ರತಿ ದಾಳಿ ನಡೆಸಿದೆವು’ ಎಂದು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಘಫೂರ್ ಇಂದು ಬೆಳಿಗ್ಗೆಯೇ ಹೇಳಿದ್ದರು.

ಇದೀಗ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಭಾರತೀಯ ಪಡೆಗಳ ಮೇಲೆ ‘ಸಕಾಲಿಕ ಮತ್ತು ಪರಿಣಾಮಕಾರಿ ಪ್ರತಿ ದಾಳಿ’ ನಡೆಸಿದ್ದಕ್ಕೆ ಪಾಕಿಸ್ತಾನ ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯರಂತೆ ಪಾಕಿಸ್ತಾನದ ಟ್ಟಿಟ್ಟರ್‌, ಸಾಮಾಜಿಕ ಜಾಲತಾಣಗಳು ಭಾರತ ವಿರೋಧಿ ವ್ಯಂಗ್ಯದ ಪೋಸ್ಟ್‌ಗಳಿಂದ ತುಳುಕಾಡುತ್ತಿವೆ.

ಹೀಗೆ ಎರಡೂ ದೇಶಗಳು ಒಂದೇ ದಾಳಿಯನ್ನು ಇನ್ನಿಲ್ಲದಂತೆ ಸಂಭ್ರಮಿಸುತ್ತಿವೆ. ಇದು ವಿಚಿತ್ರವಾದರೂ ಸತ್ಯ.

ಪ್ರತಿದಾಳಿಯ ಸವಾಲು:

ಇವೆಲ್ಲಾ ಒಂದು ಕಡೆಗಾದರೆ ಭಾರತಕ್ಕೆ ಪ್ರತಿ ದಾಳಿಯ ಮೂಲಕ ತಕ್ಕ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ಭಾರತದ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿದ ಹಿನ್ನೆಲೆಯಲ್ಲಿ ಭಾರಿ ಒತ್ತಡದಲ್ಲಿ ಇಂದು ಇಸ್ಲಾಮಾಬಾದ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸಭೆಯನ್ನು ಪ್ರಧಾನಿ ಇಮ್ರಾನ್‌ ಖಾನ್‌ ನಡೆಸಿದರು. ಸಭೆಯ ನಂತರ ಹೇಳಿಕೆ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಭಾರತದ ವಾದವನ್ನು ತಳ್ಳಿ ಹಾಕಲಾಗಿದೆ. ಮಾತ್ರವಲ್ಲದೆ ದಾಳಿ ನಡೆದಿದೆ ಎನ್ನುವುದು ‘ಕಪೋಲ ಕಲ್ಪಿತ ವಾದ’ ಎಂದು ಆರೋಪಿಸಲಾಗಿದೆ.

ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸಭೆಯನ್ನು ಪ್ರಧಾನಿ ಇಮ್ರಾನ್‌ ಖಾನ್‌.
ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸಭೆಯನ್ನು ಪ್ರಧಾನಿ ಇಮ್ರಾನ್‌ ಖಾನ್‌.
/ರೇಡಿಯೋ ಪಾಕಿಸ್ತಾನ

ಭದ್ರತಾ ಸಮಿತಿಯ ಹೇಳಿಕೆಯಲ್ಲಿ, "ಬಾಲಾಕೋಟ್ ಬಳಿ ಭಯೋತ್ಪಾದಕ ಶಿಬಿರವನ್ನು ಗುರಿಯಾಗಿಟ್ಟು ದಾಳಿ ನಡೆಸಿದ್ದೇವೆ ಮತ್ತು ಭಾರಿ ಸಾವು ನೋವುಗಳು ಸಂಭವಿಸಿದೆ ಎನ್ನುವ ಭಾರತೀಯ ವಾದವನ್ನು ಬಲವಾಗಿ ತಿರಸ್ಕರಿಸುತ್ತಿದ್ದೇವೆ," ಎಂದು ತಿಳಿಸಲಾಗಿದೆ.

ಭಾರತೀಯ ವಾದವನ್ನು ‘ಅಜಾಗರೂಕತೆಯಿಂದ ಕೂಡಿದ ಕಾಲ್ಪನಿಕ ಹೇಳಿಕೆ’ ಎಂದಿರುವ ಪಾಕಿಸ್ತಾನ, “ಚುನಾವಣಾ ವಾತಾವರಣದಲ್ಲಿ ದೇಶೀಯ ಬಳಕೆಗೆ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇದರಿಂದ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಅಪಾಯ ಒದಗಿದೆ,” ಎಂದು ಆತಂಕ ವ್ಯಕ್ತಪಡಿಸಿದೆ.

ತನ್ನ ನೆಲದಲ್ಲಿ ಉಗ್ರರ ಮೇಲೆ ದಾಳಿಯೇ ನಡೆದಿಲ್ಲ ಎನ್ನುತ್ತಿರುವ ಪಾಕಿಸ್ತಾನ, “ದಾಳಿ ನಡೆದಿದೆ ಎನ್ನುತ್ತಿರುವ ಪ್ರದೇಶ ಎಲ್ಲಾ ರೀತಿಯ ಪರಿಶೀಲಗೆ ಮುಕ್ತವಾಗಿದೆ. ಸ್ಥಳಕ್ಕೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಕರೆದುಕೊಂಡು ಹೋಗಲಾಗುವುದು,” ಎಂದು ಸವಾಲು ಹಾಕಿದೆ. ಜತೆಗೆ, “ಭಾರತ ಏಕಪಕ್ಷೀಯವಾಗಿ ಆಕ್ರಮಣಕಾರಿ ನಿಲುವು ತಳೆದಿದೆ ಎಂಬ ತೀರ್ಮಾನಕ್ಕೆ ಸಮಿತಿ ಬಂದಿದ್ದು, ತನಗೆ ಇಷ್ಟ ಬಂದ ಸಮಯ ಮತ್ತು ಸ್ಥಳದಲ್ಲಿ ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇವೆ," ಎಂದು ಎಚ್ಚರಿಕೆ ನೀಡಿದೆ.

ಇವೆಲ್ಲಾ ಘಟನೆಗಳ ನಡುವೆ ರಾಜಸ್ಥಾನದ ಚುರುವಿನಲ್ಲಿ ಮಾಜಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ದೇಶ ಸರಿಯಾದ ವ್ಯಕ್ತಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂಬ ಭರವಸೆಯನ್ನು ನಿಮಗೆ ನೀಡಲು ಇಚ್ಛಿಸುತ್ತೇನೆ,” ಎಂದಿದ್ದಾರೆ. 2014ಕ್ಕೂ ಮೊದಲೂ ಅವರು ಇದೇ ಭರವಸೆ ನೀಡಿದ್ದರು. ಅದಾದ ನಂತರ ದೇಶದಲ್ಲಿ ನಡೆದ ಬೆಳವಣಿಗೆಗಳು ಇದೀಗ ಕಣ್ಣ ಮುಂದಿವೆ. ಇದೀಗ ಮತ್ತೊಮ್ಮೆ ಅವರು ಅಂತಹದ್ದೇ ಭರವಸೆಯನ್ನು ನೀಡುತ್ತಿದ್ದಾರೆ.

ಹೀಗೊಂದು ಭರವಸೆ ನಮ್ಮ ಪ್ರಧಾನಿಯಿಂದ ಬರುತ್ತಿದ್ದರೆ ಅತ್ತ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್‌ ಖುರೇಷಿ ಭಾರತ ಶಾಂತಿಯನ್ನು ಕದಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಜತೆಗೆ ಪಾಕಿಸ್ತಾನಕ್ಕೆ ಸವಾಲು ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿಗೆ ಸೋ ಕಾಲ್ಡ್‌ ‘ಸರ್ಜಿಕಲ್‌ಸ್ಟ್ರೈಕ್‌ 2.0’ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಮಾಧ್ಯಮ ಪ್ರೇರಿತ ಯುದ್ಧೋನ್ಮಾದಲ್ಲಿರುವ ಭಾರತ ಮತ್ತು ಪಾಕಿಸ್ತಾನದ ಆಡಳಿತಗಳು ಯಾವ ನಿಲುವುಗಳನ್ನು ತೆಗೆದುಕೊಳ್ಳಲಿವೆ? ಅಣ್ವಸ್ತ್ರಗಳನ್ನು ಹೊಂದಿರುವ ಎರಡು ವೈರಿ ದೇಶಗಳ ಮುಂದಿನ ನಡೆ ಏನು? ಎಂಬುದನ್ನು ಜಗತ್ತು ಕುತೂಹಲ ಮತ್ತು ಆತಂಕದಿಂದ ನೋಡುತ್ತಿದೆ.

ಪೂರಕ ಮಾಹಿತಿ: ಡಾನ್, ರೇಡಿಯೋ ಪಾಕಿಸ್ತಾನ