samachara
www.samachara.com
ಪಿಒಕೆ, ಸಿಒಕೆ ಮತ್ತು ‘ಪ್ರೇಮ ಕಾಶ್ಮೀರ’; ನಿಮ್ಮ ಅರಿವಿನಂಗಳಕ್ಕೆ ಭಾರತದ ಮುಕುಟದ ಕತೆ- ವ್ಯಥೆ
COVER STORY

ಪಿಒಕೆ, ಸಿಒಕೆ ಮತ್ತು ‘ಪ್ರೇಮ ಕಾಶ್ಮೀರ’; ನಿಮ್ಮ ಅರಿವಿನಂಗಳಕ್ಕೆ ಭಾರತದ ಮುಕುಟದ ಕತೆ- ವ್ಯಥೆ

ಭಾರತದ ಪಠ್ಯಪುಸ್ತಕಗಳ ಭೂಪಟದಲ್ಲಿರುವ ಕಾಶ್ಮೀರದ ಪೂರ್ಣ ಭಾಗ ಯಾವತ್ತೂ ಭಾರತದೊಂದಿಗೆ ಇರಲಿಲ್ಲ. ಕಳೆದ 70 ವರ್ಷಗಳಿಂದಲೂ ಈ ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಭಾರತ ಇಲ್ಲ.

ಕಾಶ್ಮೀರ ಮಾನಸಿಕವಾಗಿ ಭಾರತದೊಂದಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಭಾರತ ಮಾತ್ರ ಅತಿ ಭಾವನಾತ್ಮಕವಾಗಿ ಕಾಶ್ಮೀರದೊಂದಿಗಿದೆ. ಪುಲ್ವಾಮ ಘಟನೆಯ ನಂತರ ಮಂಗಳವಾರ ನಡೆದಿರುವ ಭಾರತದ ವೈಮಾನಿಕ ದಾಳಿಯನ್ನು ದೇಶ 'ಸಂಭ್ರಮಿಸುತ್ತಿದೆ'. ಭಾರತ ಪಾಕಿಸ್ತಾನವನ್ನು ಸೋಲಿಸಿ ಇಡೀ ಕಾಶ್ಮೀರವನ್ನು ಗೆದ್ದಿರುವ ಗುಂಗಿನಲ್ಲಿ ದೇಶದ ಬಹುತೇಕರು ಇದ್ದಾರೆ. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೂ ಈಗ ಭೂಪಟದಲ್ಲಿ ಕಾಣುವ ಪೂರ್ಣ ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ.

ಭಾರತದ ಶಾಲೆಗಳಲ್ಲಿ ಮಕ್ಕಳಿಗೆ ಭೂಗೋಳ ಪಾಠ ಮಾಡುವಾಗ ತೋರಿಸುವ ಭಾರತಕ್ಕೂ ನೈಜ ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ದೇಶ 'ಭಾವಿಸಿ'ಕೊಂಡಿರುವ ಭಾರತದ ಭೂಪಟವೇ ಬೇರೆ, ನಿಜಕ್ಕೂ ಭಾರತದೊಂದಿಗೆ ಇರುವ ಭೂ ಪ್ರದೇಶವೇ ಬೇರೆ. ಭಾರತದ ಪಠ್ಯ ಪುಸ್ತಕಗಳ ಭೂಪಟದಲ್ಲಿರುವ ಕಾಶ್ಮೀರದ ಪೂರ್ಣ ಭಾಗ ಯಾವತ್ತೂ ಭಾರತದೊಂದಿಗೆ ಇರಲಿಲ್ಲ. ಕಳೆದ 70 ವರ್ಷಗಳಿಂದಲೂ ಈ ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಭಾರತ ಇಲ್ಲ.

ಭಾರತ ಮತ್ತು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕ ಬೆನ್ನಲ್ಲೇ ಕಾಶ್ಮೀರದ ಸಮಸ್ಯೆಯೂ ಹುಟ್ಟಿಕೊಂಡಿದೆ. 'ಪಾಕ್‌ ಆಕ್ರಮಿತ ಕಾಶ್ಮೀರ' (ಪಿಒಕೆ) ಎಂದು ಕರೆಯಲಾಗುವ ಭೂ ಭಾಗ ತನ್ನದೇ ಆದ ಆಡಳಿತ, ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ. ಪಿಒಕೆಗೆ ಒಂದು ಸಂಸತ್ತು ಹಾಗೂ ಒಂದು ಸುಪ್ರೀಂಕೋರ್ಟ್‌ ಕೂಡಾ ಇದೆ. ಪಾಕಿಸ್ತಾನ ಈ ಪಿಒಕೆಯನ್ನು ಪೋಷಿಸುತ್ತಿದೆ.

ಕಾಶ್ಮೀರವನ್ನು ಕೇವಲ ಪಾಕಿಸ್ತಾನವಷ್ಟೇ ಆಕ್ರಮಿಸಿಕೊಂಡಿಲ್ಲ. ಪಶ್ಚಿಮದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಇದ್ದರೆ, ಕಾಶ್ಮೀರದ ಈಶಾನ್ಯ ಭಾಗದಿಂದ ಚೀನಾ ಆಕ್ರಮಿತ ಕಾಶ್ಮೀರವೂ ಇದೆ. ಪಿಒಕೆಯಲ್ಲಿ ಚೀನಾ- ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌ ಕೂಡಾ ನಿರ್ಮಾಣವಾಗುತ್ತಿದೆ. ಇಷ್ಟೆಲ್ಲಾ ಆದರೂ ಭಾರತ ಇನ್ನೂ ಇಡೀ ಕಾಶ್ಮೀರ ನಮ್ಮದೇ ಎಂದು ಕುರುಡು ನಂಬಿಕೆಯ ಹಿಂದೆ ಬಿದ್ದಿದೆ.

ಏಳನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿರುವ ಭಾರತದ ಭೂಪಟ. 
ಏಳನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿರುವ ಭಾರತದ ಭೂಪಟ. 

ಏನಿದು ಪಿಒಕೆ?

ಪಿಒಕೆಯನ್ನು ಸಾಮಾನ್ಯವಾಗಿ 'ಪಾಕ್‌ ಆಕ್ರಮಿತ ಕಾಶ್ಮೀರ' ಎಂದು ಕರೆದರೂ ವಿಶ್ವಸಂಸ್ಥೆ ಈ ಭೂ ಭಾಗವನ್ನು 'ಪಾಕ್‌ ಆಡಳಿತವಿರುವ ಕಾಶ್ಮೀರ' (ಪಿಎಕೆ) ಎಂದೇ ಕರೆಯುತ್ತಾ ಬಂದಿದೆ. ಈ ಪಿಒಕೆ ಈಶಾನ್ಯ ಭಾಗದಲ್ಲಿ ಚೀನಾ ಹಾಗೂ ವಾಯವ್ಯ ಭಾಗದಲ್ಲಿ ಆಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ. ಆದರೆ, ಈ ಗಡಿ ನಮ್ಮದೆಂಬುದು ಭಾರತದ ವಾದ.

13,297 ಚದರ ಕಿ.ಮೀ. ವ್ಯಾಪ್ತಿ ಇರುವ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇದೆ. ಮುಜಫರಾಬಾದ್‌ ಪಿಒಕೆಯ ರಾಜಧಾನಿ. ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಅಜ್ಮಲ್‌ ಕಸಬ್‌ಗೆ ಉಗ್ರರು ತರಬೇತಿ ನೀಡಿದ್ದೂ ಇದೇ ಮುಜಫರಾಬಾದ್‌ನಲ್ಲಿ ಎಂಬುದು ಭಾರತದ ವಾದ. ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸುತ್ತಾ ಬಂದಂತೆಲ್ಲಾ ಪಾಕಿಸ್ತಾನದ ಗಡಿ ಪ್ರದೇಶದಂತೆ ಪಿಒಕೆ ಕೂಡಾ ಉಗ್ರರ ಕ್ಯಾಂಪ್‌ಗಳಿಗೆ ನೆಲೆಯಾಗುತ್ತಾ ಬಂದಿದೆ. ಪಿಒಕೆಯಲ್ಲಿ ತರಬೇತಿ ಪಡೆದ ಉಗ್ರರು ಭಾರತದ ಗಡಿಗೆ ಬಂದು ದಾಳಿ ನಡೆಸುತ್ತಾರೆ ಎಂಬುದು ಭಾರತದ ಸಾಮಾನ್ಯ ಆರೋಪ.

ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲದಲ್ಲಿ ಕಾಶ್ಮೀರ ಮಹಾರಾಜ ಹರಿಸಿಂಗ್‌ ಆಳ್ವಿಕೆಯ ಅಡಿಯಲ್ಲಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ದೇಶ ವಿಭಜನೆಯಾಗುವ ಸಂದರ್ಭದಲ್ಲಿ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗಿಯೇ ಉಳಿಯಬೇಕೆಂಬುದು ಹರಿಸಿಂಗ್‌ ಬಯಕೆಯಾಗಿತ್ತು. ಆದರೆ, ದೇಶ ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರಕ್ಕೆ ಪಠಾಣ್‌ ಬುಡಕಟ್ಟು ಜನರ ದಾಳಿ ದೊಡ್ಡ ತಲೆನೋವಾಗಿತ್ತು. ಇದೇ ಕಾರಣಕ್ಕೆ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ಒಪ್ಪಿದ ಹರಿಸಿಂಗ್‌ ಕಾಶ್ಮೀರಕ್ಕೆ ರಕ್ಷಣೆ ಕೋರಿ ಭಾರತದ ಅಂದಿನ ಗವರ್ನರ್‌ ಜನರಲ್‌ ಮೌಂಟ್‌ ಬ್ಯಾಟನ್‌ಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದಲ್ಲಿ 1947ರ ಅಕ್ಟೋಬರ್‌ 26ರಂದು ಹರಿಸಿಂಗ್‌ ಮತ್ತು ಮೌಂಟ್‌ ಬ್ಯಾಟನ್‌ ಮಧ್ಯೆ ಒಪ್ಪಂದ ಪತ್ರಕ್ಕೆ ಸಹಿ ಬಿತ್ತು.

ಹರಿಸಿಂಗ್‌ ಬರೆದ ಪತ್ರದ ಆಧಾರದ ಮೇಲೆ ಕಾಶ್ಮೀರ ಭಾರತಕ್ಕೇನೋ ಸೇರಿತು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ನಿರಂತರ ಸಂಘರ್ಷಕ್ಕೆ ಕಾಶ್ಮೀರ ಕಾರಣವಾಯಿತು. ಏಳು ದಶಕಗಳಿಂದಲೂ ಭಾರತ ಮತ್ತು ಪಾಕಿಸ್ತಾನದ ಕಾಶ್ಮೀರ ವಿಚಾರವನ್ನು ಪ್ರತಿಷ್ಠೆಯಾಗಿಯೇ ತೆಗೆದುಕೊಂಡಿವೆ. ಅತ್ತ ಪಾಕಿಸ್ತಾನ, ಇತ್ತ ಭಾರತ ಮತ್ತು ಮತ್ತೊಂದು ಕಡೆಗೆ ಚೀನಾ ಅಕ್ಷರಶಃ ಕಾಶ್ಮೀರವನ್ನು ಕಿತ್ತುಕೊಂಡಿವೆ. ಈ ಮಧ್ಯದಲ್ಲಿ ಶ್ರೀನಗರ ಒಳಗೊಂಡ ಕಣಿವೆ ಪ್ರದೇಶ ಸ್ವತಂತ್ರ ಕಾಶ್ಮೀರ ಅಥವಾ ಆಜಾದಿ ಕಾಶ್ಮೀರ ಎಂದು ಪ್ರತ್ಯೇಕತಾವಾದಿಗಳು ಘೋಷಿಸಿಕೊಳ್ಳುತ್ತಲೇ ಇದ್ದಾರೆ. ಆದರೆ, ತಾಂತ್ರಿಕವಾಗಿ ಈ ಪ್ರದೇಶ ಇನ್ನೂ ಭಾರತದ ಆಳ್ವಿಕೆಯ ಅಡಿಯಲ್ಲೇ ಇದೆ.

26 ಅಕ್ಟೋಬರ್‌ 1947ರಂದು ಕಾಶ್ಮೀರದ ನೆಲದಲ್ಲಿ ಭಾರತದ ರಾಷ್ಟ್ರಧ್ವಜ ಹಾರಿ, ಭಾರತದ ರಾಷ್ಟ್ರಗೀತೆಯೂ ಮೊಳಗಿತ್ತು. ಆದರೆ, ನೆರೆಹೊರೆಯ ಪ್ರದೇಶಗಳನ್ನು ಒಳಗೊಂಡು ಭಾರತ ರಚಿಸಿಕೊಂಡ ಕಾಶ್ಮೀರ ಈ ಹೊತ್ತಿಗೂ ಭಾರತದ ಜೊತೆಗಿಲ್ಲ. ಭಾರತದ್ದೆಂದು ಹೇಳಲಾಗುವ ಕಾಶ್ಮೀರದ ಭೂಭಾಗ ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಇರಲಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಭಾರತದ ಮುಕುಟ ಭಾಗ ಎಂದು ರಾಷ್ಟ್ರಭಕ್ತರು ಗುರುತಿಸುವ ಭೂಭಾಗ ಹಿಂದೂ ಮತ್ತು ಇಂದೂ ಭಾರತದ ಜತೆಗಿಲ್ಲ.

1880ರಲ್ಲಿನ ಬ್ರಿಟಿಷ್‌ ಆಳ್ವಿಕೆಯ ಕಾಲದ ಭಾರತ. ಉತ್ತರದಲ್ಲಿ ಕಾಶ್ಮೀರದ ಭಾಗ ಹೇಗಿದೆ ಎಂಬುದನ್ನು ಕಾಣಬಹುದು.
1880ರಲ್ಲಿನ ಬ್ರಿಟಿಷ್‌ ಆಳ್ವಿಕೆಯ ಕಾಲದ ಭಾರತ. ಉತ್ತರದಲ್ಲಿ ಕಾಶ್ಮೀರದ ಭಾಗ ಹೇಗಿದೆ ಎಂಬುದನ್ನು ಕಾಣಬಹುದು.

ಕಾಶ್ಮೀರದ ವಾಯವ್ಯ ಭಾಗ ಪಾಕ್‌ ಆಕ್ರಮಿತ ಅಥವಾ ಪಾಕ್‌ ಆಳ್ವಿಕೆ ಇರುವ ಕಾಶ್ಮೀರ ಎನಿಸಿದರೆ ಪೂರ್ವ ಭಾಗದ 'ಅಕ್ಸಾಯ್‌ ಚಿನ್‌' ಪ್ರಾಂತ್ಯವನ್ನು ಚೀನಾ ಆಕ್ರಮಿತ ಎಂದು ಗುರುತಿಸಲಾಗುತ್ತದೆ. ಕೇವಲ ಕಾಶ್ಮೀರದಲ್ಲಿ ಮಾತ್ರವಲ್ಲದೆ ಹಿಮಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ವಾದಿಸುತ್ತಿದೆ. ಭಾರತ ಇದನ್ನು ಗಟ್ಟಿಯಾಗಿ ವಿರೋಧಿಸಲು ಸಿದ್ಧವಿಲ್ಲ. ಇದೇ ಕಾರಣಕ್ಕೆ ಈಶಾನ್ಯ ಭಾಗದಲ್ಲಿ ಚೀನಾ ಕೂಡಾ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕಾಶ್ಮೀರಕ್ಕಾಗಿ ಆರಂಭದ ಎರಡು ಯುದ್ಧ:

ಭಾರತ ಕಾಶ್ಮೀರದ ವಿಚಾರಕ್ಕಾಗಿಯೇ ನೆರೆ ಹೊರೆಯ ಎರಡು ದೇಶಗಳ ಜತೆಗೆ ಯುದ್ಧ ನಡೆಸಿದೆ. ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಆರಂಭದ ಯುದ್ಧಗಳಿಗೆ ನೇರ ಕಾರಣ ಕಾಶ್ಮೀರದೊಂದಿಗಿನ ಗಡಿ ವಿಚಾರಗಳೇ. ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಸಿಕ್ಕ ಬೆನ್ನಲ್ಲೇ ಕಾಶ್ಮೀರದ ವಿಚಾರಕ್ಕೆ ಯುದ್ಧ ಹೂಡಿದ್ದವು. 22 ಅಕ್ಟೋಬರ್‌ 1947ರಿಂದ 1948ರ ಜನವರಿ 1ರವರೆಗೆ ಇಂಡೊ- ಪಾಕ್‌ ಯುದ್ಧ ನಡೆಯಿತು.

ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಸಂಧಾನ ಮಾಡಿಕೊಂಡ ಎರಡೂ ರಾಷ್ಟ್ರಗಳು ಕಾಶ್ಮೀರದ ದಕ್ಷಿಣ ಭಾಗ ಭಾರತದ ಆಳ್ವಿಕೆಯಲ್ಲಿ ಹಾಗೂ ಬಹುತೇಕ ಉತ್ತರ ಭಾಗ ಪಾಕಿಸ್ತಾನದ ಆಳ್ವಿಕೆಯಲ್ಲಿ ಮುಂದುವರಿಯುವ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದವು. ಅಂದಿನಿಂದ ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಎಂಬುದು ಜಾರಿಯಾಯಿತು. ಆದರೆ, ಅಲ್ಲಿಂದ ಇಲ್ಲಿಯವರೆಗೂ ಲೆಕ್ಕವಿಲ್ಲದಷ್ಟು ಬಾರಿ ಕದನ ವಿರಾಮ ಉಲ್ಲಂಘನೆಗಳಾಗಿವೆ. 'ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ತಿರುಗೇಟು' ಎಂಬ ಹೆಸರಿನಲ್ಲಿ ಭಾರತವೂ ಪಿಒಕೆ ಕಡೆಗೆ ದಾಳಿ ನಡೆಸಿದೆ.

1962ರಲ್ಲಿ ಚೀನದೊಂದಿಗಿನ ಯುದ್ಧಕ್ಕೆ ಕಾರಣವೂ ಕಾಶ್ಮೀರವೇ. 'ಅಕ್ಸಾಯ್‌ ಚಿನ್‌' ಪ್ರಾಂತ್ಯದ ವಿಚಾರಕ್ಕೆ ಗಡಿಯಲ್ಲಿ ಚೀನಾ ಮತ್ತು ಭಾರತ 1962ರ ಯುದ್ಧದಲ್ಲಿ ಕಾದಾಡಿದವು. ಇದರ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ ಈಶಾನ್ಯ ಭಾಗದ ಶಾಕ್ಸ್‌ಗಮ್‌ ಕಣಿವೆ ಪ್ರದೇಶವನ್ನು ಪಾಕಿಸ್ತಾನ 1963ರಲ್ಲಿ ಚೀನಾಕ್ಕೆ ಬಿಟ್ಟುಕೊಡುವ ಮೂಲಕ ಭಾರತದ ಸಿಟ್ಟಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿತ್ತು.

1984ರ ಸಿಯಾಚಿನ್‌ ಯುದ್ಧದ ಬಳಿಕ ಭಾರತ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ನಡುವೆ ನಿಜವಾಗಿ ಗಡಿ ನಿಯಂತ್ರಣ ರೇಖೆ ಎಂಬುದು ಪೂರ್ಣವಾಗಿ ಇಲ್ಲ. ಭಾರತ, ಪಾಕಿಸ್ತಾನ ಮತ್ತು ಚೀನಾ ಆಳ್ವಿಕೆಯನ್ನು ಒಳಗೊಂಡ ಕಾಶ್ಮೀರಕ್ಕೆ ನೈಜವಾದ ಅಂತರರಾಷ್ಟ್ರೀಯ ಗಡಿ ಎಂಬುದು ಇಲ್ಲ. ಪಿಒಕೆ ಹಾಗೂ ಭಾರತ ಆಳ್ವಿಕೆಯ ಕಾಶ್ಮೀರದ ನಡುವೆ ಇರುವ ಗಡಿಯನ್ನೇ ಗಡಿ ನಿಯಂತ್ರಣ ರೇಖೆ ಎಂದು ಕರೆದುಕೊಳ್ಳಲಾಗುತ್ತಿದೆ. 1972ರಲ್ಲಿ ಶಿಮ್ಲಾ ಒಪ್ಪಂದದ ಬಳಿಕ ಎರಡೂ ರಾಷ್ಟ್ರಗಳ ಸಾರ್ವಭೌಮತೆಯನ್ನು ಪರಸ್ಪರ ಗೌರವಿಸುವ ಹಾಗೂ ಶಾಂತಿ ಸ್ಥಾಪಿಸುವ ಮಾತುಗಳು ಒಪ್ಪಂದ ಪತ್ರದ ಮೇಲೆ ಉಳಿದಿವೆಯೇ ಹೊರತು ಸಮರ್ಪಕವಾಗಿ ಜಾರಿಗೆ ಬಂದಿಲ್ಲ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಸಂಸತ್ತನ್ನು ಪಾಕಿಸ್ತಾನವೇ ನಿಯಂತ್ರಿಸುತ್ತದೆ. ತಾನು ಸ್ವತಂತ್ರ ಎಂದು ಪಿಒಕೆ ಹೇಳಿಕೊಂಡರೂ ಅದು ಸಂಪೂರ್ಣವಾಗಿ ಪಾಕಿಸ್ತಾನದ ಹಿಡಿತದಲ್ಲೇ ಇದೆ. ಭಾರತದೊಂದಿಗೆ ಉಳಿದುಕೊಂಡಿರುವ ಕಾಶ್ಮೀರದಲ್ಲಿ ನಾವು ಭಾರತದ ಜತೆಗೆ ಇರುವುದಿಲ್ಲ ಎಂದು ಪ್ರತ್ಯೇಕತಾವಾದಿಗಳು ಹೇಳುವಂತೆ, ಪಿಒಕೆಯಲ್ಲಿರುವ ಪ್ರತ್ಯೇಕತಾವಾದಿಗಳೂ ನಾವು ಪಾಕಿಸ್ತಾನದ ಜತೆಗೆ ಇರುವುದಿಲ್ಲ ಎನ್ನುತ್ತಿದ್ದಾರೆ. ಕಾಶ್ಮೀರದ ಹಲವರಿಗೆ ಈಗ ಭಾರತವೂ ಬೇಡ, ಪಾಕಿಸ್ತಾನವೂ ಬೇಡ. ನಾವು ಸ್ವತಂತ್ರ್ಯ ರಾಷ್ಟ್ರವಾಗುತ್ತೇವೆ ಎಂಬ ಕೂಗೇ ಹೆಚ್ಚಾಗಿದೆ. ಮೂರು ಪ್ರಬಲ ದೇಶಗಳ ಮಧ್ಯದ ಪ್ರತಿಷ್ಠೆಯ ತಿಕ್ಕಾಟಕ್ಕೆ ಸಿಲುಕಿರುವ ಕಾಶ್ಮೀರದ ಸ್ವಾತಂತ್ರ್ಯದ ಕೂಗು ಈಗ ಈ ಮೂರೂ ದೇಶಗಳಿಗೂ ಬೇಕಾಗಿಲ್ಲ. ಸಂಘರ್ಷ ಮುಂದುವರಿಯುತ್ತದೆ ಮತ್ತು ಆಯಾ ಕಾಲಘಟ್ಟದಲ್ಲಿ ಅಧಿಕಾರದಲ್ಲಿದ್ದವರು ಅದರ ರಾಜಕೀಯ ಲಾಭಕ್ಕಾಗಿ ಅದನ್ನು ವ್ಯವಸ್ಥಿತವಾಗಿ ಬಳಸಿದ್ದಾರೆ, ಬಳಸಿಕೊಳ್ಳುತ್ತಿದ್ದಾರೆ ಮತ್ತು ಮುಂದೆಯೂ ಬಳಸಿಕೊಳ್ಳುತ್ತಾರೆ, ಅಷ್ಟೆ.

ಕೃಪೆ: ಡಬ್ಲ್ಯುಟಿಡಿ ನ್ಯೂಸ್‌