samachara
www.samachara.com
ಜೈಷ್‌ನ ಶಿಬಿರದ ಮೇಲೆ ಸೈನಿಕೇತರ ವೈಮಾನಿಕ ದಾಳಿ: ನಸುಕಿನಲ್ಲಿ ನಿಜಕ್ಕೂ ನಡೆದಿದ್ದೇನು?
COVER STORY

ಜೈಷ್‌ನ ಶಿಬಿರದ ಮೇಲೆ ಸೈನಿಕೇತರ ವೈಮಾನಿಕ ದಾಳಿ: ನಸುಕಿನಲ್ಲಿ ನಿಜಕ್ಕೂ ನಡೆದಿದ್ದೇನು?

ಪಾಕಿಸ್ತಾನದ ನೆಲದ ಮೇಲಿರುವ ಜೆಇಎಂನ ಒಂದು ತರಬೇತಿ ಶಿಬಿರದ ಮೇಲೆ ಮಾತ್ರವೇ ದಾಳಿ ನಡೆಸಿರುವುದಾಗಿ ಭಾರತ ಸರಕಾರ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ದೇಶದ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕಪೋಲ ಕಲ್ಪಿತ ಕತೆಗಳಿಗೆ ತೆರೆ ಬಿದ್ದಿದೆ.

ಇದೇ ತಿಂಗಳಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಅರೆ ಸೇನಾ ಪಡೆಗಳ ಮೇಲೆ ಫಿದಾಯೀನ್‌ ದಾಳಿಗೆ ಭಾರತ ‘ರಾಜತಾಂತ್ರಿಕ’ ಉತ್ತರ ನೀಡಿದೆ.

ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಪಾಕಿಸ್ತಾನ ನೆಲದಲ್ಲಿದ್ದ ಜೈಷ್‌- ಎ- ಮೊಹಮದ್‌ನ ಅತಿ ದೊಡ್ಡ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿದೆ. ದಾಳಿ ನಡೆದು ಸುಮಾರು 6 ಗಂಟೆಗಳ ನಂತರ ಭಾರತ ಸರಕಾರ ಈ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡಿದೆ.

ಬೆಳಗ್ಗೆ 11.30ಕ್ಕೆ ಪತ್ರಿಕಾಗೋಷ್ಠಿಯಲ್ಲಿ ದಾಳಿಯ ವಿವರ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ, “ಜೈಷ್‌ ಎ ಮೊಹಮ್ಮದ್‌ ಸಂಘಟನೆ ದೇಶದ ವಿವಿಧ ಭಾಗಗಳಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸುವ ಬಗ್ಗೆ ನಿಖರವಾದ ಗುಪ್ತಚರ ಮಾಹಿತಿಗಳು ಬಂದಿದ್ದವು. ಇದಕ್ಕಾಗಿ ಫಿದಾಯೀನ್‌ಗಳಿಗೆ ತರಬೇತಿ ನೀಡಲಾಗಿತ್ತು. ಈ ಕಾರಣಕ್ಕೆ ಈ ತುರ್ತು ದಾಳಿ ಅನಿವಾರ್ಯವಾಗಿತ್ತು,” ಎಂದು ಮಾಹಿತಿ ನೀಡಿದರು.

“ಬಾಲಕೋಟ್‌ (ಪಾಕಿಸ್ತಾನದ ಖೈಬರ್‌-ಪಂಖ್ತುಂಕ್ವಾ ಪ್ರಾಂತ್ಯದಲ್ಲಿದೆ) ನಲ್ಲಿರುವ ಜೈಷ್‌ ಎ ಮೊಹಮ್ಮದ್‌ ಅತ್ಯಂತ ದೊಡ್ಡ ಕ್ಯಾಂಪ್‌ನ್ನು ಧ್ವಂಸ ಮಾಡಿದ್ದೇವೆ. ಈ ಕಾರ್ಯಾಚರಣೆಯಲ್ಲಿ ದೊಡ್ಡ ಸಂಖ್ಯೆಯ ಜೆಇಎಂ ಉಗ್ರರು, ತರಬೇತಿದಾರರು, ಹಿರಿಯ ಕಮಾಂಡರುಗಳು ಮತ್ತು ಜಿಹಾದಿಗಳು ಸಾವನ್ನಪ್ಪಿದ್ದಾರೆ. ಈ ಕ್ಯಾಂಪ್‌ನ್ನು ಜೆಇಎಂ ಮುಖ್ಯಸ್ಥ ಮೌಲಾನ ಮಸೂದ್‌ ಅಝರ್‌ ಬಾವ ಮೌಲಾನಾ ಯೂಸುಫ್‌ ಅಝರ್‌ ಅಲಿಯಾಸ್‌ ಉಸ್ತಾದ್‌ ಘೌರಿ ಮುನ್ನಡೆಸುತ್ತಿದ್ದ,” ಎಂದು ಅವರು ವಿವರಿಸಿದ್ದಾರೆ. ಆದರೆ ಆತ ಸಾವಿಗೀಡಾದ ಬಗ್ಗೆಯಾಗಲಿ, ಮಾಧ್ಯಮಗಳು ಹೇಳುತ್ತಿರುವ ಮೂರು ಪ್ರತ್ಯೇಕ ದಾಳಿಗಳ ಕುರಿತಾಗಲೀ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಅಧಿಕೃತವಾಗಿ ಸಾವಿಗೀಡಾದ ಉಗ್ರರ ಲೆಕ್ಕವಾಗಲಿ, ಅಂದಾಜು ಸಂಖ್ಯೆಯನ್ನಾಗಲಿ ಅವರು ಉಲ್ಲೇಖಿಸಲಿಲ್ಲ. “ಕೆಲವೇ ಕ್ಷಣಗಳ ಹಿಂದಷ್ಟೆ ದಾಳಿ ನಡೆದಿದ್ದು, ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಿದೆ,’’ ಎಂದು ಮಾಧ್ಯಮಗಳಿಂದ ಪ್ರಶ್ನೆಗಳನ್ನು ಸ್ವೀಕರಿಸಲು ನಿರಾಕರಿಸಿದ ಅವರು ತಿಳಿಸಿದರು.

“ಕೇವಲ ಜೆಇಎಂ ಕ್ಯಾಂಪ್‌ಗಳನ್ನು ಮಾತ್ರ ಗುರಿಯಾಗಿಸಿ 'ನಾನ್- ಮಿಲಿಟರಿ ಪ್ರೀಎಂಪ್ಟೀವ್‌ ದಾಳಿ’ ನಡೆಸಲಾಗಿದೆ. ಈ ಸಂದರ್ಭದಲ್ಲಿ ನಾಗರಿಕರ ಮೇಲೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ದಟ್ಟ ಕಾಡಿನಲ್ಲಿ ಬೆಟ್ಟದ ಮೇಲಿದ್ದ ಬಾಲಕೋಟ್‌ ಕ್ಯಾಂಪ್‌ ಮೇಲೆ ದಾಳಿ ನಡೆಸಲಾಗಿದೆ,” ಎಂದು ಗೋಖಲೆ ದಾಳಿಯ ವಿವರಗಳನ್ನು ಹಂಚಿಕೊಂಡರು. ಭಯೋತ್ಪಾದನೆಯಿಂದಾಗುವ ಹಾನಿಯ ವಿರುದ್ಧ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಭಾರತದ ಧೃಡ ಸಂಕಲ್ಪ ಮಾಡಿದೆ ಮತ್ತು ಅದಕ್ಕೆ ಬದ್ಧವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ದಾಳಿಯ ಹಿನ್ನೆಲೆಯನ್ನು ವಿವರಿಸಿರುವ ಅವರು, 14 ಫೆಬ್ರವರಿ 2019ರಂದು ಪುಲ್ವಾಮದಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರರು ಆತ್ಮಾಹುತಿ ಬಾಂಬ್‌ ದಾಳಿ ನಡೆಸಿ 40 ಸಿಆರ್‌ಪಿಎಫ್‌ ಜವಾನರು ಸಾವನ್ನಪ್ಪಿದ್ದರು. ಈ ಸಂಘಟನೆ ಎರಡು ದಶಕಗಳಿಂದ ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿದ್ದು ಬಹವಲ್‌ಪುರ್‌ನಲ್ಲಿ ಇದರ ಕೇಂದ್ರ ಕಚೇರಿ ಇದೆ. ಸಂಸತ್‌ ಮೇಲಿನ ದಾಳಿ, ಪಠಾನ್‌ಕೋಟ್‌ ದಾಳಿಗಳ ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿರುವ ಸಂಘಟನೆಯ ಕ್ಯಾಂಪ್‌ಗಳ ಬಗ್ಗೆ ಮಾಹಿತಿ ನೀಡಿದ್ದರೂ ಈ ಬಗ್ಗೆ ಪಾಕಿಸ್ತಾನ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ದೂರಿದ್ದಾರೆ.

ಪಾಕಿಸ್ತಾನದ ನೆಲದ ಮೇಲಿರುವ ಜೈಷ್‌ ಎ ಮೊಹಮ್ಮದ್‌ನ ಒಂದು ತರಬೇತಿ ಶಿಬಿರದ ಮೇಲೆ ಮಾತ್ರವೇ ದಾಳಿ ನಡೆಸಿರುವುದಾಗಿ ಭಾರತ ಸರಕಾರ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ದೇಶದ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕಪೋಲ ಕಲ್ಪಿತ ಕತೆಗಳಿಗೆ ತೆರೆ ಬಿದ್ದಿದೆ.

ದಾಳಿ ನಿರಾಕರಿಸಿದ ಪಾಕಿಸ್ತಾನ:

ಆದರೆ ಭಾರತದ ವಾದವನ್ನು ಪಾಕಿಸ್ತಾನ ನಿರಾಕರಿಸಿದೆ. ಭಾರತದ ಯುದ್ಧ ವಿಮಾನಗಳು ‘ಖಾಲಿ ಜಾಗದ ಮೇಲೆ ಬಾಂಬ್‌ ಹಾಕಿವ ಎಂದಿರುವುದರಲ್ಲದೆ, ಭಾರತದ ವಿಮಾನಗಳನ್ನು ಓಡಿಸಿರುವುದಾಗಿ ನೆರೆಯ ರಾಷ್ಟ್ರ ಹೇಳಿಕೊಂಡಿವೆ. ಮತ್ತು ಇದಕ್ಕೆ ತಾಂತ್ರಿಕ ಸಾಕ್ಷ್ಯಗಳನ್ನು ಮುಂದಿಡುವುದಾಗಿ ಸವಾಲು ಹಾಕಿದೆ.

ಭಾರತದ ಅಧಿಕೃತ ಪ್ರತಿಕ್ರಿಯೆಗೂ ಮುನ್ನ ಬೆಳಿಗ್ಗೆ ಮುಂಜಾನೆ 4.30ಕ್ಕೆ ಎದ್ದುಕೊಂಡಿರುವ ಪಾಕಿಸ್ತಾನದ ಅಧಿಕಾರಿಗಳು ಮತ್ತು ಸೇನೆಯ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಘಫೂರ್ ಸರಣಿ ಟ್ಟೀಟ್‌ಗಳನ್ನು ಮಾಡಿದ್ದಾರೆ.

ಭಾರತದ ಯುದ್ಧ ವಿಮಾನಗಳು ಬೆಳಿಗ್ಗೆ 3.30ಕ್ಕೆ ಮುಝಾಫರಾಬಾದ್‌ ಸೆಕ್ಟರ್‌ನಿಂದ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನಿ ಆಕ್ರಮಿತ ಕಾಶ್ಮೀರ (ಅಝಾದ್‌ ಕಾಶ್ಮೀರ) ಪ್ರವೇಶಿಸಿವೆ. ಈ ಸಂದರ್ಭದಲ್ಲಿ “ಪಾಕಿಸ್ತಾನ ವಾಯು ಸೇನೆಯ ಸಕಾಲಿಕ ಮತ್ತು ಪರಿಣಾಮಕಾರಿ ಪ್ರತಿ ದಾಳಿಯಿಂದ ಪಾರಾಗುವ ಯತ್ನದಲ್ಲಿ ಬಾಲಕೋಟ್‌ ಸಮೀಪ ಬಾಂಬ್‌ ಎಸೆದು ಹೋಗಿದ್ದಾರೆ. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ,” ಎಂದು ಘಫೂರ್‌ ಇಂದು ಮುಂಜಾನೆಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅವರು ಒಂದಷ್ಟು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ಉನ್ಮಾದ- ಪ್ರತಿಪಕ್ಷಗಳ ಬೆಂಬಲ:

ಮಂಗಳವಾರದ ನಸುಕಿನಲ್ಲಿ ನಡೆದ ಘಟನೆ ಬೆನ್ನಲ್ಲೇ ಕೇಂದ್ರ ಸರಕಾರದ ಸುರಕ್ಷತಾ ಸಮಿತಿ ಸಭೆ ನಡೆಯಿತು. ಸಭೆಯ ನಂತರವೇ ವಿದೇಶಾಂಗ ಕಾರ್ಯದರ್ಶಿ ಮೂಲಕ ಅಧಿಕೃತ ಪ್ರಕಟಣೆ ನೀಡಲಾಯಿತು. ಸಂಜೆ 5 ಗಂಟೆಗೆ ಪ್ರತಿಪಕ್ಷಗಳೊಂದಿಗೆ ದಾಳಿಯ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ಹೇಳಿವೆ.

ಇದಕ್ಕೂ ಮೊದಲೇ, ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಮಾಯವತಿ, ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾರತದ ನಾನ್ ಮಿಲಿಟರಿ ದಾಳಿಗಾಗಿ ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕವೂ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರಧಾನಿ ಮೋದಿ ಬೆಂಬಲಿಗರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಪುಲ್ವಾಮಾ ದಾಳಿಗೆ ಇದು ಸರಿಯಾದ ಪ್ರತಿಕ್ರಿಯೆ ಎಂದು ಕೇಂದ್ರ ಸರಕಾರವನ್ನು ಅಭಿನಂದಿಸಿದ್ದಾರೆ.

ಇವೆಲ್ಲವುಗಳ ನಡುವೆ ಎರಡು ಅಣುಬಾಂಬ್ ಹೊಂದಿರುವ ದಕ್ಷಿಣ ಏಷಿಯಾ ದೇಶಗಳ ನಡುವಿನ ಈ ಭಿನ್ನಮತ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಎರಡೂ ಸರಕಾರಗಳ ಮುಂದಿನ ಪ್ರತಿ ನಡೆ, ಮಾತುಗಳು ತಮ್ಮದೇ ಆದ ಪರಿಣಾಮಗಳನ್ನು ಹುಟ್ಟುಹಾಕಲಿವೆ.