samachara
www.samachara.com
ಸುಳ್ಳರ ಸಂತೆಯಲ್ಲಿ ಧರೆ ಹೊತ್ತಿ ಉರಿದಾಗ: ಬಂಡೀಪುರದ ಅಗ್ನಿ ಅನಾಹುತದ ಸುತ್ತ...
COVER STORY

ಸುಳ್ಳರ ಸಂತೆಯಲ್ಲಿ ಧರೆ ಹೊತ್ತಿ ಉರಿದಾಗ: ಬಂಡೀಪುರದ ಅಗ್ನಿ ಅನಾಹುತದ ಸುತ್ತ...

ನಾಲ್ಕು ದಿನ ಕಳೆದರೂ ಬಂಡೀಪುರ ಕಾಡ್ಗಿಚ್ಚು ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕೋರಿಕೆ ಮೇರೆಗೆ ಇಂದಿನಿಂದ ವಾಯುಸೇನೆಯ ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕೆಲಸಕ್ಕೆ ಕೈ ಹಾಕಿವೆ.

ದೇಶದ ಅತ್ಯಂತ ಪ್ರಮುಖ ವನ್ಯಜೀವಿ ತಾಣ 'ಬಂಡೀಪುರ ರಾಷ್ಟ್ರೀಯ ಉದ್ಯಾನ'ದಲ್ಲಿ ಕಾಣಿಸಿಕೊಂಡಿರುವ ಬೆಂಕಿ ಜಾಗತಿಕ ಸುದ್ದಿಯಾಗಿದೆ. 874.20 ಚದರ ಕಿಲೋಮೀಟರ್‌ ವಿಸ್ತೀರ್ಣದ ಬಂಡೀಪುರ ಅರಣ್ಯದಲ್ಲಿ ಶುಕ್ರವಾರ ಕಾಣಿಸಿಕೊಂಡ ಅಗ್ನಿ ನಾಲ್ಕು ದಿನಗಳಾದರೂ ನಿಯಂತ್ರಣಕ್ಕೆ ಬಾರದಿರುವುದು ಆತಂಕ ಹುಟ್ಟಿಸಿದೆ.

ದೇಶದ ಅತ್ಯಂತ ಪ್ರಮುಖ ಉದ್ಯಾನವನಗಳ ಪೈಕಿ ಬಂಡೀಪುರವೂ ಒಂದು. 1974ರಲ್ಲಿ 'ಹುಲಿ ಯೋಜನೆ'ಯಡಿಯಲ್ಲಿ ಇದನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಹುಲಿ ಮಾತ್ರವಲ್ಲದೆ ದೇಶದ ಹಲವಾರು ಅಪರೂಪದ ಪ್ರಾಣಿಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಬಂಡೀಪುರದ ಜಗದ್ವಿಖ್ಯಾತವಾಗಿದೆ.

ಬಂಡೀಪುರದ ಸುತ್ತ ಇತರ ರಾಷ್ಟ್ರೀಯ ಉದ್ಯಾನವನವನಗಳಾದ ನಾಗರಹೊಳೆ, ತಮಿಳುನಾಡಿನ ಮದುಮಲೈ, ಕೇರಳದ ವಯನಾಡು ಇದ್ದು ಒಟ್ಟಾರೆ ಇದನ್ನು 'ನೀಲಗಿರಿ ಜೀವವೈವಿಧ್ಯ ಸಂರಕ್ಷಿತ ಪ್ರದೇಶ' ಎಂದು ಕರೆಯುತ್ತಾರೆ. ಇದರ ಒಟ್ಟು ವಿಸ್ತೀರ್ಣ ಬರೋಬ್ಬರಿ 5,520 ಚದರ ಕಿಲೋಮೀಟರ್‌ಗಳಾಗಿದ್ದು ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ.

ಇಲ್ಲಿ ಪ್ರತಿ ವರ್ಷ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು ಈ ಬಾರಿ ನಿಯಂತ್ರಣಕ್ಕೇ ಸಿಗದ ಬೆಂಕಿ ಮೂರು ದಿನಗಳನ್ನು ದಾಟಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮತ್ತು ಈಗಲೂ ನಿಯಂತ್ರಣಕ್ಕೆ ಬಾರದೇ ಇರುವುದು ವನ್ಯಜೀವಿ ಪ್ರೇಮಿಗಳಲ್ಲಿ, ಪರಿಸರ ಆಸಕ್ತರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಸುಳ್ಳರ ಸಂತೆಯಲ್ಲಿ ಧರೆ ಹೊತ್ತಿ ಉರಿದಾಗ: ಬಂಡೀಪುರದ ಅಗ್ನಿ ಅನಾಹುತದ ಸುತ್ತ...

ಮುಂಜಾಗ್ರತೆ ಭೇದಿಸಿದ ಬೆಂಕಿ:

ಪ್ರತಿ ವರ್ಷ ಮಳೆಗಾಲ ಕಳೆದು ಚಳಿಗಾಲದಲ್ಲಿ ಮರಗಳ ಎಲೆಗಳು ಉದುರುತ್ತವೆ. ಬೇಸಿಗೆ ಪ್ರವೇಶಿಸುತ್ತಿದ್ದಂತೆ ಒಣಗಿದ ಹುಲ್ಲಿಗೆ ಬೆಂಕಿ ಬೀಳುತ್ತದೆ ಎಂಬ ನಿರೀಕ್ಷೆ ಅರಣ್ಯ ಇಲಾಖೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ಒಂದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ ಈ ಬಾರಿಯೂ ಕೆಲವು ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು.

ಜನವರಿ 12ರಂದೇ ನಂಜನಗೂಡಿನ ಹೆಡಿಯಾ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅಗ್ನಿ ಶಾಮಕ ಮತ್ತು ತುರ್ತು ಸೇವೆ ಡಿಜಿಪಿಗೆ ಪತ್ರ ಬರೆದು ಅಗ್ನಿ ಶಾಮಕ ವಾಹನಗಳಿಗಾಗಿ ಬೇಡಿಕೆ ಸಲ್ಲಿಸಿದ್ದರು. ಇದಾಗಿ ನಾಲ್ಕೇ ದಿನಕ್ಕೆ ಅಂದರೆ ಜನವರಿ 16ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಾದ ಹೆಡಿಯಾಲ, ಎಂಎಂ ಗುಡಿ, ಮೊಳೆಯೂರು, ಎನ್‌. ಬೇಗೂರು, ಗುಂಡ್ರೆಗೆ ತಲಾ ಒಂದು ಅಗ್ನಿ ಶಾಮಕ ವಾಹನಗಳಿಗೆ ಅನುಮೋದನೆ ನೀಡಲಾಗಿತ್ತು . ಅಲ್ಲದೆ ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿ ಶಾಮಕ ಅಧಿಕಾರಿ ಯುನಸ್‌ ಅಲಿ ಕೌಸರ್‌ರನ್ನು ಇಲ್ಲಿಗೆ ನೋಡಲ್‌ ಅಧಿಕಾರಿಯಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿತ್ತು.

ಇದೇ ರೀತಿ ಜನವರಿ 8ರಂದೇ ಹುಣಸೂರಿನ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿಗಳು ಪತ್ರ ಬರೆದು ಕಾಡಿನ ಪ್ರದೇಶಗಳಿಗೆ ಅಗ್ನಿಶಾಮಕ ವಾಹನಗಳನ್ನು ಕೇಳಿದ್ದರು. ಅದರಂತೆ ಜನವರಿ 11ರಂದೇ ಅಂತರ ಸಂತೆ, ವೀರನ ಹೊಸಹಳ್ಳಿ, ನಾಗರಹೊಳೆಗಳಿಗೆ ಅಗ್ನಿಶಾಮಕ ವಾಹನಗಳನ್ನು ಮಂಜೂರು ಮಾಡಲಾಗಿತ್ತು.

ಕೆಲವೇ ದಿನಗಳಿಗೆ ಅಂದರೆ ಫೆಬ್ರವರಿ 6ರಂದೇ ಈ ಎಲ್ಲಾ ವಾಹನಗಳು ಬಂಡೀಪುರ ತಲುಪಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಗೆ ವರದಿ ಮಾಡಿಕೊಂಡಿದ್ದವು. ಬಂಡೀಪುರ ವಲಯದ ಬಂಡೀಪುರಕ್ಕೆ 6, ಮದ್ದೂರು ವಲಯದ ಮದ್ದೂರಿಗೆ 8, ಪುಣಜನೂರು ವಲಯದ ಪುಣಜನೂರು ಗೇಟ್‌ ಬಳಿ 4, ಯಳಂದೂರು ವಲಯದ ಗುಂಬಳ್ಳಿ ಗೇಟ್‌ ಬಳಿ 7, ಮಲೈಮಹದೇಶ್ವರ ವಲಯದ ಕೌದಳ್ಳಿಗೆ 6 ಸಿಬ್ಬಂದಿಗಳನ್ನು ಮತ್ತು ಎಲ್ಲಾ ಕಡೆಗಳಿಗೆ ತಲಾ ಒಂದು ಅಗ್ನಿ ಶಾಮಕ ವಾಹನಗಳನ್ನು ನಿಯೋಜನೆ ಮಾಡಲಾಗಿತ್ತು.

ಅಗ್ನಿ ಶಾಮಕ ವಾಹನಗಳು ಮತ್ತು ಸಿಬ್ಬಂದಿ ನಿಯೋಜನೆ ಬಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರಿಗೆ ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಯುನಸ್‌ ಅಲಿ ಕೌಸರ್‌ ಬರೆದ ಪತ್ರ.
ಅಗ್ನಿ ಶಾಮಕ ವಾಹನಗಳು ಮತ್ತು ಸಿಬ್ಬಂದಿ ನಿಯೋಜನೆ ಬಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರಿಗೆ ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಯುನಸ್‌ ಅಲಿ ಕೌಸರ್‌ ಬರೆದ ಪತ್ರ.
/ಸಮಾಚಾರ.

ಅಂದರೆ ಬೆಂಕಿ ಬೀಳುವ ಹೊತ್ತಿಗೆ ಬಂಡೀಪುರ ವ್ಯಾಪ್ರಿಯಲ್ಲೇ 5 ಅಗ್ನಿ ಶಾಮಕ ವಾಹನಗಳು 31 ಸಿಬ್ಬಂದಿಗಳು ಕಾರ್ಯಚರಿಸುತ್ತಿದ್ದರು. ಜತೆಗೆ ನೂರಾರು ಅರಣ್ಯ ಸಿಬ್ಬಂದಿಗಳೂ ಕೆಲಸ ನಿರ್ವಹಿಸುತ್ತಿದ್ದರು. ಹೀಗಿದ್ದೂ ಬೆಂಕಿ ಬಿದ್ದ ನಂತರ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.

ಶುಕ್ರವಾರರಿಂದ-ಸೋಮವಾರದವರೆಗೆ:

ಮೊದಲಿಗೆ ಶುಕ್ರವಾರ ಮಧ್ಯಾಹ್ನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಸುತ್ತ ಬೆಂಕಿ ಕಾಣಿಸಿಕೊಂಡಿತ್ತು. ಒಳಗಿದ ಹುಲ್ಲು, ಲಂಟಾನದ ಪೊದೆಗಳು, ಚಳಿಗಾಲದಲ್ಲಿ ಉದುರಿದ ಮರಗಳ ಎಲೆಗಳ ಜತೆಗೆ ಬೀಸಿ ಬರುತ್ತಿದ್ದ ಗಾಳಿಯ ಸಹಾಯದಿಂದ ನೋಡ ನೋಡುತ್ತಲೇ ಬೆಂಕಿ ಲೊಕ್ಕೆರೆ, ಚಿಕ್ಕೆಲಚಟ್ಟಿ, ಕಳ್ಳಿ ಗೌಡನಹಳ್ಳಿ, ಶಿವಪುರ, ಕಣಿಯನಪುರ, ಮಾಗಿನಹಳ್ಳಿ, ಆಂಜನಿಬೆಟ್ಟ, ಮಾದಿಗಿತ್ತಿ ಬೆಟ್ಟ, ಸಿದ್ಧ ದೇವರ ಖಾನೆ, ನೀರುಗುಂಡಿ ಹಳ್ಳಿ, ಮಾದಪ್ಪನ ಕಾಡು ಪ್ರದೇಶಗಳಲ್ಲಿ ಆವರಿಸಿಕೊಂಡಿತ್ತು. ಸದ್ಯಕ್ಕೆ ಅಗ್ನಿ ದುರಂತಕ್ಕೆ ಅಂದಾಜು 4 ಸಾವಿರ ಎಕರೆ ಅರಣ್ಯ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನೂ ಹಲವೆಡೆ ಬೆಂಕಿ ಹೊತ್ತಿ ಉರಿಯುತ್ತಿದ್ದು ಒಟ್ಟಾರೆ ಎಷ್ಟು ಅರಣ್ಯ ನಾಶವಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳೀಯವಾಗಿ 500 ಜನ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳು, 1000 ಕ್ಕೂ ಹೆಚ್ಚು ಸ್ಥಳೀಯ ಜನರು ಹಾಗೂ ಕಾರ್ಯಕರ್ತರು ಸೇರಿಕೊಂಡು ಬೆಂಕಿ ನಂದಿಸುವ ಕೆಲಸ ನಡೆಸುತ್ತಿದ್ದಾರೆ.

ಹೀಗಿದ್ದೂ ಬೆಂಕಿ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಇದೀಗ ಹೆಚ್ಚುವರಿಯಾಗಿ ಚಾಮರಾಜನಗರ, ದಾವಣಗೆರೆಯಿಂದ ಕ್ವಿಕ್‌ ರೆಸ್ಪಾನ್ಸ್‌ ತಂಡಗಳು ಬಂಡೀಪುರ ತಲುಪಿವೆ. ಜತೆಗೆ ಮತ್ತಷ್ಟು ಅಗ್ನಿ ಶಾಮಕ ವಾಹನಗಳು ಬೆಂಗಳೂರು, ಚಾಮರಾಜನಗರಿಂದ ಬಂಡೀಪುರಕ್ಕೆ ತೆರಳಿದ್ದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರೂ ಇಂದು ಬೆಳಿಗ್ಗೆ ಬಂಡೀಪುರ ತಲುಪಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ‘ಸಮಾಚಾರ’ಕ್ಕೆ ತಿಳಿಸಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಕೋರಿಕೆ ಮೇರೆಗೆ ವಾಯುಸೇನೆಯ ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕೆಲಸಕ್ಕೆ ಕೈ ಹಾಕಿವೆ.

ಬಂಡೀಪುರ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಜತೆಗೆ ಸಫಾರಿಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.

ಸುಳ್ಳರ ಸಂತೆಯಲ್ಲಿ ಧರೆ ಹೊತ್ತಿ ಉರಿದಾಗ: ಬಂಡೀಪುರದ ಅಗ್ನಿ ಅನಾಹುತದ ಸುತ್ತ...

ಕಾಡ್ಗಿಚ್ಚಿನ ಇತಿಹಾಸ

ಹಾಗೆ ನೋಡಿದರೆ ವಾರದ ಹಿಂದೆಯೇ ಕುಂದಕೆರೆ ಪ್ರದೇಶದಲ್ಲಿ ಬೆಂಕಿ ಬಿದ್ದಿತ್ತು. ಇಲ್ಲಿ ಸುಮಾರು 60 ಎಕರೆ ಅರಣ್ಯ ನಾಶವಾಗಿತ್ತು. ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಶುಕ್ರವಾರ ಮತ್ತೆ ಬಂಡೀಪುರದಲ್ಲಿ ಬೆಂಕಿ ಬಿದ್ದಿದೆ. ಮತ್ತು ಈ ಬಾರಿಯ ಬೆಂಕಿ ಸುಲಭಕ್ಕೆ ಹಿಡಿತಕ್ಕೆ ಸಿಗುವಂತೆ ಕಾಣಿಸುತ್ತಿಲ್ಲ.

ಎರಡು ವರ್ಷದ ಹಿಂದೆ ಇದೇ ರೀತಿ ಕಲ್ಕೆರೆ ಪ್ರದೇಶದಲ್ಲಿ ಬೆಂಕಿ ಬಿದ್ದು ಅದನ್ನು ನಂದಿಸಲು ತೆರಳಿದ್ದ ಮುರುಗಪ್ಪ ತಮ್ಮನಗೋಳ್‌ ಎಂಬ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಸಜೀವ ದಹನವಾಗಿದ್ದರು. ಜತೆಗೆ ಹಲವರಿಗೆ ಗಾಯವಾಗಿತ್ತು. ಈ ಘಟನೆಯಲ್ಲಿ ಸಾವಿರಕ್ಕೂಅಧಿಕ ಎಕರೆ ಅರಣ್ಯ ನಾಶವಾಗಿತ್ತು.

ಇಷ್ಟೆಲ್ಲಾ ನಡೆದರೂ ಕಾಡ್ಗಿಚ್ಚಿನಂಥ ಘಟನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಮತ್ತು ಇದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಗತ್ಯತೆಗಳು ಚರ್ಚೆಗೆ ಬಂದಿವೆ.

‘ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದಂತ ಸಂಸ್ಥೆಗಳು ಎಲ್ಲೆಲ್ಲಿ ಭೂಮಿ ಮೇಲೆ ಬೆಂಕಿ ಬಿದ್ದಿವೆ ಎಂಬುದರ ಅಲರ್ಟ್‌ ಕಳುಹಿಸುತ್ತಿರುತ್ತವೆ. ಅರಣ್ಯ ಇಲಾಖೆ ಇವುಗಳನ್ನು ಬಳಸಿಕೊಳ್ಳಬೇಕು’ ಎಂಬರ್ಥದಲ್ಲಿ ಎನ್‌ಜಿಒ ಒಂದರ ನಿರ್ದೇಶಕ ಅಖೀಲೇಶ್‌ ಚಿಪ್ಲಿ ‘ಬೆಂಗಳೂರು ಮಿರರ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್‌ ಹೊಳ್ಳ, ಈ ನಿಟ್ಟಿನಲ್ಲಿ ಸಹಾಯವಾಗಲು ಅರಣ್ಯ ಇಲಾಖೆಗೆ ಹೆಲಿಕಾಪ್ಟರ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಕಾಡ್ಗಿಚ್ಚು ಬೀಳುವ ಸಮಯದಲ್ಲಿ ಅರಣ್ಯಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸುಳ್ಳಿನ ಸಂತೆಯಲ್ಲಿ:

ಈ ನಡುವೆ ಬಂಡೀಪುರದ ಅಗ್ನಿ ಅನಾಹುತಕ್ಕೆ ಜನ ದಂಗಾಗುವಂತಹ ಕೃತಕ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ‘ಫೇಕ್‌’ ಚಿತ್ರಗಳನ್ನು ಬಂಡೀಪುರ ಅಗ್ನಿ ದುರಂತದ ಚಿತ್ರಗಳು ಎಂಬಂತೆ ಪ್ರಸಾರ ಮಾಡಲಾಗುತ್ತಿದೆ.

ಹಲವು ಪ್ರಮುಖ ಚಿತ್ರಗಳನ್ನು ‘ಸಮಾಚಾರ’ ತನಿಖೆಗೆ ಒಳಪಡಿಸಿದ್ದು, ಈ ಹಿಂದೆ ದಿಲ್ಲಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಗ್ನಿ ದುರಂತದ ಸಮಯದ ಚಿತ್ರಗಳು ಎಂದು ತಿಳಿದು ಬಂದಿದೆ.

ಸದ್ಯ, ಬಂಡೀಪುರದ ಅಗ್ನಿ ಅನಾಹುತದಿಂದ ಆಗಿರುವ ಹಾನಿಯ ಅಂದಾಜಿನ ಕುರಿತು ನಿಖರ ಮಾಹಿತಿಗಳು ಇನ್ನಷ್ಟೆ ಹೊರಬೀಳಬೇಕಿದೆ.

ಚಿತ್ರ ಕೃಪೆ: ಅಮಿತ್‌ ಉಪಾಧ್ಯ/ಟ್ಟಿಟ್ಟರ್‌