samachara
www.samachara.com
ಕಾಂಗ್ರೆಸ್- 18; ಜೆಡಿಎಸ್‌- 10: ವರಿಷ್ಠರ ಅಂಗಳಕ್ಕೆ  ರಾಜ್ಯ ನಾಯಕರ ಸೀಟು ಹಂಚಿಕೆ ಅನುಪಾತ
COVER STORY

ಕಾಂಗ್ರೆಸ್- 18; ಜೆಡಿಎಸ್‌- 10: ವರಿಷ್ಠರ ಅಂಗಳಕ್ಕೆ ರಾಜ್ಯ ನಾಯಕರ ಸೀಟು ಹಂಚಿಕೆ ಅನುಪಾತ

ಲೋಕಸಭೆ ಚುನಾವಣೆಗೆ ಸಮ್ಮಿಶ್ರ ಸರಕಾರಗಳ ನಡುವಿನ ಸೀಟು ಹಂಚಿಕೆ ಲೆಕ್ಕಾಚಾರ ನಾಯಕರ ಹಂತದಲ್ಲಿಯೇ ಕಚ್ಚಾಟಕ್ಕೆ ಕಾರಣವಾಗಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ...

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ಹೋರಾಡಲು ಕಾಂಗ್ರೆಸ್-ಜೆಡಿಎಸ್ ನಿರ್ಧರಿಸಿವೆ. ಉಭಯ ಪಕ್ಷಗಳ ನಡುವೆ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ. ಇಪ್ಪತ್ತೆಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ, ಜೆಡಿಎಸ್ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪರಸ್ಪರ ಅನುವು ಮಾಡಿಕೊಡಲಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಸೋಮವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ನಡೆಸಿದ ಉಭಯ ಪಕ್ಷಗಳ ನಾಯಕರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಜೆಡಿಎಸ್‌ನ ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. “ಇಪ್ಪತ್ತೆಂಟು ಕ್ಷೇತ್ರಗಳ ಪೈಕಿ 22ರಷ್ಟು ಕ್ಷೇತ್ರಗಳ ಹಂಚಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದ ಆರು ಸೀಟುಗಳ ಹಂಚಿಕೆ ವಿಷಯವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಮಾರ್ಚ್ 5ರಂದು ಅಂತಿಮಗೊಳಿಸಲಿದ್ದಾರೆ,” ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಹಿತಿ ಹಂಚಿಕೊಂಡರು.

“ಇಂದು ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಒಂದು ಹಂತದ ಸಹಮತ ಸಾಧಿಸಲಾಗಿದೆ. ಕೋಮುವಾದಿ ಬಿಜೆಪಿಯನ್ನು ಬಗ್ಗು ಬಡಿಯುವುದನ್ನೇ ಮುಖ್ಯ ಗುರಿಯಾಗಿಸಿಕೊಂಡು ಎರಡೂ ಪಕ್ಷಗಳ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದಾರೆ,” ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

“ಕಳೆದ ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಪಡೆದ ಮತಗಳ ಸಂಖ್ಯೆ, ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತಗಳ ಪ್ರಮಾಣವನ್ನು ಇಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ. ಒಂದೊಮ್ಮೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಬಿಜೆಪಿಗೆ ಲಾಭವಾಗುತ್ತದೆ. ಹೀಗಾಗಿ ಒಮ್ಮಸ್ಸಿನಿಂದ ಬಿಜೆಪಿಯೇತರ ಮತಗಳನ್ನು ಸೆಳೆಯಬೇಕು. ಹಾಗೆ ಮಾಡಿದರೆ ಮೈತ್ರಿ ಪಕ್ಷಗಳಿಗೆ ದೊಡ್ಡ ಗೆಲುವು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.’’ ಎಂದು ಸಭೆಯಲ್ಲಿ ಪಾಲ್ಗೊಂಡ ನಾಯಕರೊಬ್ಬರು ತಿಳಿಸಿದರು.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, “ಲೋಕಸಭಾ ಚುನಾವಣೆಯಲ್ಲಿ ನಮಗೆ ಸೀಟುಗಳ ಸಂಖ್ಯೆ ಮುಖ್ಯವಲ್ಲ, ಬದಲಿಗೆ ಉಭಯ ಪಕ್ಷಗಳು ಸೇರಿ ಕನಿಷ್ಟ 25 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬುದು ಮುಖ್ಯ,” ಎಂದರು. ಈ ಮೂಲಕ ಎರಡೂ ಪಕ್ಷಗಳು ಗೆಲುವಿಗಾಗಿ ಕೆಲವೊಂದು ವಿಚಾರದಲ್ಲಿ ಸಹಮತಕ್ಕೆ ಬಂದಿವೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು.

"ಸೀಟು ಹಂಚಿಕೆಯ ವಿಷಯದಲ್ಲಿ ಉತ್ತಮ ರೀತಿಯಲ್ಲಿ ಚರ್ಚೆಯಾಗಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅಂತಿಮವಾಗಿ ಕೋಮುವಾದಿ ಶಕ್ತಿಗಳನ್ನು ದೂರವಿಡಬೇಕು ಎಂಬುದೇ ನಮ್ಮ ಗುರಿ," ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಹೇಳಿದರು. ಹೀಗಾಗಿ, “ಗೆಲ್ಲುವ ಅಭ್ಯರ್ಥಿಗಳು ಯಾರು ಎಂಬುದನ್ನು ಪ್ರಮುಖ ಮಾನದಂಡವಾಗಿ ಇರಿಸಿಕೊಳ್ಳಲಾಗಿದೆ. ಎಲ್ಲಿ ಯಾವ ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲಲು ಉತ್ತಮ ಅವಕಾಶವಿದೆ ಎಂಬುದನ್ನು ಗಮನಿಸಿದ್ದೇವೆ,” ಎಂದು ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಗುಂಡೂರಾವ್‌, "ಮಂಡ್ಯದ ವಿಷಯವೇ ಇರಲಿ, ಬೇರೆ ಯಾವುದೇ ಕ್ಷೇತ್ರದ ವಿಷಯವೇ ಇರಲಿ, ಅಂತಿಮವಾಗಿ ಗೆಲ್ಲುವುದು ಮುಖ್ಯ. ಕ್ಷೇತ್ರಗಳ ಬಗ್ಗೆ ಇವತ್ತು ಹೆಚ್ಚು ಹೇಳುವುದಿಲ್ಲ," ಎಂದು ನುಡಿದರು. “ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬ ವಿಚಾರದಲ್ಲಿ ಉಭಯ ಪಕ್ಷಗಳಿಗೆ ಸ್ವ ಪ್ರತಿಷ್ಠೆ ಇಲ್ಲ. ನಾವು ಗೆಲ್ಲುವ ಸಾಧ್ಯತೆ ಇರುವಲ್ಲಿ ನಮಗೆ, ಅವರು ಗೆಲ್ಲುವ ಜಾಗದಲ್ಲಿ ಅವರ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ತೀರ್ಮಾನ,” ಎಂದು ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದರು.

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಭಾವನೆಗಳನ್ನು ಸಭೆಗೆ ವಿವರಿಸಿದ್ದೇನೆ ಎಂದರು.

"ಯಾರಿಗೆ ಎಷ್ಟು ಸೀಟು ಎನ್ನುವ ಕುರಿತು ನಾವೇನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅದನ್ನು ವರಿಷ್ಟರು ತೆಗೆದುಕೊಳ್ಳುತ್ತಾರೆ. ಸಮನ್ವಯ ಸಮಿತಿ ಸಭೆಯಲ್ಲೂ ಈ ಕುರಿತು ಚರ್ಚೆಯಾಗಲಿದೆ," ಎಂದು ಜನತಾದಳ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಹೆಚ್ಚಿನ ಮಾಹಿತಿ ಹಂಚಿಕೊಂಡರು.

ಸಭೆಯಲ್ಲಿದ್ದ ಯಾವ ನಾಯಕರೂ ಅಧಿಕೃತವಾಗಿ ತಮ್ಮ ಸೀಟು ಹಂಚಿಕೆ ಅನುಪಾತವನ್ನು ಹೇಳಲಿಲ್ಲ. ಆದರೆ ‘ಆಫ್‌ ದಿ ರೆಕಾರ್ಡ್‌’ ಹೆಸರಿನಲ್ಲಿ ಸದ್ಯ ಚರ್ಚೆಯಾದ ಸಂಖ್ಯೆಗಳನ್ನು ಮುಂದಿಟ್ಟರು. “ಕಾಂಗ್ರೆಸ್‌ಗೆ 18 ಕ್ಷೇತ್ರಗಳು, ಜೆಡಿಎಸ್‌ಗೆ 10 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯಬೇಕು ಎಂಬುದು ನಮ್ಮ ತೀರ್ಮಾನ. ವರಿಷ್ಠ ನಾಯಕರು ಯಾವ ತೀರ್ಮಾನ ತೆಗೆದುಕೊಂಡರೂ ಬದ್ಧ. ಯಾವ ಸ್ವತಂತ್ರ ಅಭ್ಯರ್ಥಿಗಳ ಜತೆಯಲ್ಲೂ ಹೊಂದಾಣಿಕೆ ಅಗತ್ಯವಿಲ್ಲ ಎಂಬುದು ನಮ್ಮ ಭಾವನೆ. ಇದೂ ಕೂಡ ಅಂತಿಮವಾಗಿ ವರಿಷ್ಠರಿಗೆ ಬಿಟ್ಟಿದ್ದು,’’ ಎಂದು ಸಭೆಯಲ್ಲಿದ್ದ ನಾಯಕರೊಬ್ಬರು ಮಾಹಿತಿ ನೀಡಿದರು.

ಒಟ್ಟಾರೆ, ಲೋಕಸಭೆ ಚುನಾವಣೆಗೆ ಸಮ್ಮಿಶ್ರ ಸರಕಾರಗಳ ನಡುವಿನ ಸೀಟು ಹಂಚಿಕೆ ಲೆಕ್ಕಾಚಾರ ನಾಯಕರ ಹಂತದಲ್ಲಿಯೇ ಕಚ್ಚಾಟಕ್ಕೆ ಕಾರಣವಾಗಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ ಸಮನ್ವಯ ಸಮಿತಿ ಸಭೆಗೆ ಮುನ್ನವೇ ಪ್ರಾಥಮಿಕ ಹಂತದ ಸಂಧಾನ ನಡೆದಿದೆ ಎಂಬ ಸಂದೇಶವನ್ನು ರಾಜ್ಯ ನಾಯಕರು ರವಾನಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಮಾರ್ಚ್‌ ಮೊದಲ ವಾರದವರೆಗೂ ಈ ಪ್ರಕ್ರಿಯೆ ಜೀವಂತವಾಗಿರಲಿದೆ.