samachara
www.samachara.com
ಲಕ್ಷಾಂತರ ಆದಿವಾಸಿಗಳ ಮೇಲೆ  ಸರ್ವೋಚ್ಛ ತೂಗುಗತ್ತಿ: ಏನಿದು ಅರಣ್ಯ ಹಕ್ಕು ಕಾಯ್ದೆ?
COVER STORY

ಲಕ್ಷಾಂತರ ಆದಿವಾಸಿಗಳ ಮೇಲೆ ಸರ್ವೋಚ್ಛ ತೂಗುಗತ್ತಿ: ಏನಿದು ಅರಣ್ಯ ಹಕ್ಕು ಕಾಯ್ದೆ?

ಅತ್ಯಂತ ಕಳವಳಕಾರಿ ಬೆಳವಣಿಗೆಯೊಂದರಲ್ಲಿ ದೇಶದ ಸುಪ್ರಿಂ ಕೋರ್ಟು 16 ರಾಜ್ಯಗಳ ಸುಮಾರು 10,00,000 ಕ್ಕೂ ಮೀರಿದ ಆದಿವಾಸಿಗಳನ್ನು, ಸಣ್ಣ ರೈತರನ್ನು ಅವರ ಮನೆ, ಜಮೀನುಗಳಿಂದ ಬಲವಂತವಾಗಿ ಎತ್ತಂಗಡಿ ಮಾಡಬೇಕು ಎಂದು ತೀರ್ಪು ನೀಡಿದೆ. ಪರಿಣಾಮ?

ಅರಣ್ಯ ಹಕ್ಕು ಕಾಯಿದೆಯಡಿ ತಮ್ಮ ಅರಣ್ಯ ಭೂಮಿಯ ಮೇಲೆ ಹಕ್ಕು ಕೋರಿ ಸಲ್ಲಿಸಿದ್ದ ಅರ್ಜಿಗಳ ಪೈಕಿ ತಿರಸ್ಕೃತಗೊಂಡ ಎಲ್ಲರ ಕುಟುಂಬಗಳನ್ನೂ ಇನ್ನು ನಾಲ್ಕು ತಿಂಗಳಲ್ಲಿ ಎತ್ತಂಗಡಿ ಮಾಡುವ ಕೆಲಸವನ್ನು ಕೂಡಲೇ ಆರಂಭಿಸಬೇಕು. ಮುಂದಿನ ವಿಚಾರಣೆಯ ದಿನಾಂಕವಾದ ಜುಲೈ 27ರ ಒಳಗಾಗಿ ಈ ಎತ್ತಂಗಡಿ ನಡೆಸಬೇಕು...’

ಇದು ದೇಶದ ಸರ್ವೋಚ್ಚ ನ್ಯಾಯಾಲಯ ಫೆ. 20ರಂದು ನೀಡಿದ ಲಿಖಿತ ರೂಪದ ತೀರ್ಪಿನ ಸಾರಾಂಶ ಮತ್ತು ಭಾರಿ ಪರಿಣಾಮಗಳನ್ನು ಹುಟ್ಟುಹಾಕಲಿರುವ ಹೇಳಿಕೆ. ನ್ಯಾ. ಅರುಣ್ ಮಿಶ್ರಾ, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿಯವರನ್ನೊಳಗೊಂಡ ತ್ರಿಸದಸ್ಯ ಪೀಠ ಹೀಗೊಂದು ತೀರ್ಪು ನೀಡಲು ಕಾರಣವಾಗಿದ್ದ ಅರಣ್ಯ ಹಕ್ಕು ಕಾಯ್ದೆ.

ಕಳೆದ ಫೆಬ್ರವರಿ 13ರಂದು ಅರಣ್ಯ ಹಕ್ಕು ಕಾಯ್ದೆನ್ನು ರದ್ದುಗೊಳಿಸಬೇಕು ಎಂದು ಕೋರಿ ಸುಪ್ರಿಂ ಕೋರ್ಟಿನಲ್ಲಿ ಬೆಂಗಳೂರು ಮೂಲದ ವೈಲ್ಡ್ ಲೈಫ್‍ ಫಸ್ಟ್ (Wild Life First) ಮತ್ತಿತರ ಸರ್ಕಾರೇತರ ಸಂಸ್ಥೆಗಳು ಮತ್ತು ಕೆಲವು ಸ್ವಘೋಷಿತ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ತಮ್ಮ ಪಾರಂಪರಿಕ ಅರಣ್ಯ ಭೂಮಿಯ ಮೇಲೆ ಹಕ್ಕನ್ನು ಕೋರಿ ಅರ್ಜಿ ಸಲ್ಲಿಸಿದ್ದು, ಅವುಗಳ ಪೈಕಿ ತಿರಸ್ಕೃತ ಅರ್ಜಿದಾರರನ್ನು, ಅವರ ಕುಟುಂಬಗಳನ್ನು ಕೂಡಲೇ ಎತ್ತಂಗಡಿ ಮಾಡಬೇಕೆಂದು ಅರ್ಜಿದಾರರು ವಾದ ಮಂಡಿಸಿದ್ದರು. ಸರ್ವೋಚ್ಛ ನ್ಯಾಯಾಲಯವು ಈ ವಾದವನ್ನು ಪುರಸ್ಕರಿಸಿ ತನ್ನ ತೀರ್ಪು ನೀಡಿದೆ.

ಫೆಬ್ರವರಿ 13ರಂದು ಅರ್ಜಿದಾರರಿಗೆ ವಿರುದ್ಧವಾಗಿ ಸರ್ಕಾರದ ವಾದವನ್ನು ಮಂಡಿಸಬೇಕಿದ್ದವರು ಗೈರು ಹಾಜರಾಗಿದ್ದರು ಎಂದು ಆದಿವಾಸಿ ಪರ ಸಂಘಟನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಇಂತಹದೊಂದು ತೀರ್ಪಿ ಹೊರಬಿದ್ದಾಗ ಆದಿವಾಸಿಗಳನ್ನು ಸರಿಯಾಗಿ ಪ್ರತಿನಿಧಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
/ಟ್ರುಥ್‌ ಇಂಡಿಯಾ ಕನ್ನಡ

ಏನಿದು ಅರಣ್ಯ ಹಕ್ಕು ಕಾಯ್ದೆ?:

ಅರಣ್ಯ ಹಕ್ಕು ಕಾಯ್ದೆಯನ್ನು 2006ನೇ ಇಸವಿಯಲ್ಲಿ ಅಂದಿನ ಮನಮೋಹನ್‍ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ರೂಪಿಸಿ, ಜಾರಿಗೊಳಿಸಿತ್ತು.

ಅರಣ್ಯವನ್ನು ತಮ್ಮ ಸೀಮಿತ ಉಪಯೋಗಗಳಿಗೆ ಬಳಸಿಕೊಳ್ಳಲು, ಕಾಡಿನ ನಿರ್ವಹಣೆ ನಡೆಸಲು ಹಾಗೂ ಅರಣ್ಯ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಹಳ್ಳಿಗಳ ಗಡಿಗಳ ಸುಪರ್ದಿಯಲ್ಲಿ ಅಧಿಕಾರ ಹೊಂದಿ ನಿರ್ವಹಣೆ ನಡೆಸಲು ಅರಣ್ಯ ಹಕ್ಕು ಕಾಯಿದೆ ಆದಿವಾಸಿಗಳಿಗೆ ಅಧಿಕಾರ ನೀಡುತ್ತದೆ. ಅರಣ್ಯ ಭೂಮಿಗಳನ್ನು ನಿರ್ವಹಿಸುವ ಮತ್ತು ರಕ್ಷಿಸುವ ಹೊಣೆ ಗ್ರಾಮ ಸಭೆಗಳದ್ದೇ ಆಗಿರುತ್ತದೆ ಎಂದೂ ಕಾಯಿದೆ ಹೇಳುತ್ತದೆ. ಆ ಅರಣ್ಯ ಭೂಮಿಯ ಮೇಲೆ ಅದರ ಸ್ವಾಧೀನ ಹೊಂದಿರುವ ವ್ಯಕ್ತಿ ಅಥವಾ ಸಮುದಾಯದ ಹಿಡಿತ ಇರುವವರೆಗೂ ಅದನ್ನು ಇತರ ಯಾವುದೇ ಚಟುವಟಿಕೆಗೆ ಬಳಸುವಂತಿಲ್ಲ.

ಆದರೆ ಕಾಯ್ದೆಯ ಅನುಷ್ಠಾನದ ವಿಷಯದಲ್ಲಿ ದೇಶದಾದ್ಯಂತ ಸರ್ಕಾರಗಳು, ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಿರಾಸಕ್ತಿ ತಳೆದಿದ್ದರು. ಅದರಲ್ಲೂ ಮುಖ್ಯವಾಗಿ, ಬ್ರಿಟಿಷರ ಕಾಲದಿಂದಲೂ ಅರಣ್ಯಗಳನ್ನು ತಮ್ಮಿಚ್ಛೆಯಂತೆ ನಿರ್ವಹಣೆ ಮಾಡಿಕೊಂಡು ಬಂದಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಒಂದು ವರ್ಗವು ಅರಣ್ಯ ಹಕ್ಕು ಕಾಯ್ದೆಯಿಂದ ಅರಣ್ಯದ ಮೇಲಿನ ಹಿಡಿತ ತಮ್ಮ ಕೈಜಾರಿ ಹೋಗುತ್ತದೆ ಎಂದು ಬಗೆದು ಕಾಯ್ದೆಯ ಅನುಷ್ಟಾನದಲ್ಲಿ ಅತ್ಯಂತ ನಿಷ್ಕಾಳಜಿ ತೋರಿತ್ತು .

ಎಷ್ಟೋ ಕಡೆ ಆದಿವಾಸಿಗಳು ಸಾಕಷ್ಟು ಒತ್ತಡ ತಂದು, ಅರಣ್ಯ ಅಧಿಕಾರ ಕಾಯ್ದೆಯ ಪ್ರಕಾರ ಅರ್ಜಿಗಳನ್ನು ಸಲ್ಲಿಸಿದ್ದರೂ ಅವುಗಳಲ್ಲಿ ಮುಕ್ಕಾಲುವಾಸಿ ಅರ್ಜಿದಾರರ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಹೀಗೆ ತಿರಸ್ಕಾರಗೊಳ್ಳಲು ಮುಖ್ಯ ಕಾರಣ ಅಧಿಕಾರಿಗಳ ಸ್ವಾರ್ಥ, ನಿಷ್ಕಾಳಜಿ ಮತ್ತು ಅಸಡ್ಡೆಗಳೇ ಆಗಿದ್ದವು. ಅಲ್ಲದೇ ಅರಣ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಆದಿವಾಸಿಗಳ ಪಾತ್ರವನ್ನು ಅರಿಯದ ಅವರ ಅಜ್ಞಾನ, ಮತ್ತು ಸಂಕುಚಿತ ತಿಳುವಳಿಕೆಗಳೂ ಕಾರಣವಾಗಿವೆ.

ಈ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿನ ಮೆಟ್ಟಿಲು ಹತ್ತಿದ್ದ ಎನ್‍ಜಿಒಗಳೂ ಆದಿವಾಸಿಗಳಿಂದಲೇ ಕಾಡಿನ ನಾಶವಾಗುತ್ತಿದೆ ಎಂಬ ಅಭಿಪ್ರಾಯ ಹೊಂದಿದವರು. ಅರಣ್ಯ ಹಕ್ಕು ಕಾಯಿದೆ ಜಾರಿಗೊಳ್ಳದೇ ಇರುವುದರಲ್ಲಿ ಇವರ ಪಾಲೂ ಇದೆ ಎಂಬ ಅಭಿಪ್ರಾಯವೂ ಇದೆ.

ಇದೀಗ ಸುಪ್ರಿಂ ಕೋರ್ಟ್ ಆದೇಶದಲ್ಲಿ 16 ರಾಜ್ಯಗಳಲ್ಲಿ ಅರ್ಜಿ ತಿರಸ್ಕೃತಗೊಂಡಿರುವ ಕುಟುಂಬಗಳ ಸಂಖ್ಯೆ 11,27,446 ಎಂದು ದಾಖಲೆ ಒದಗಿಸಲಾಗಿದೆ. ಮಿಕ್ಕ ರಾಜ್ಯಗಳು ಇನ್ನೂ ತಮ್ಮ ತಮ್ಮ ರಾಜ್ಯಗಳ ಅಂಕಿ ಅಂಶಗಳನ್ನು ಒದಗಿಸಿಲ್ಲ. ಮಿಕ್ಕ ರಾಜ್ಯಗಳಲ್ಲಿ ತಿರಸ್ಕತಗೊಂಡ ಅರ್ಜಿಗಳನ್ನೂ ಸೇರಿಸಿದರೆ ಈ ತೀರ್ಪಿನಿಂದಾಗಿ ಎತ್ತಂಗಡಿ ಆಗಬೇಕಾದ ಆದಿವಾಸಿ ಕುಟುಂಬಗಳ ಸಂಖ್ಯೆ ಇನ್ನೂ ಹೆಚ್ಚುತ್ತದೆ.

ಸುಪ್ರಿಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಸಿದ ಮಾರನೇ ದಿನ ಅಂದರೆ ಫೆಬ್ರವರಿ 14 ರಂದು ಈ ಗಂಭೀರ ವಿಷಯದ ಕುರಿತು ಮಾತನಾಡಿದ್ದ ಕಾಂಗ್ರೆಸ್‍ ರಾಷ್ಟ್ರಾಧ್ಯಕ್ಷ ರಾಹುಲ್‍ ಗಾಂಧಿಯವರು ಈ ವಿಷಯದಲ್ಲಿ ಬಿಜೆಪಿಯ ಮೇಲೆ ಗಂಭೀರ ಆರೋಪ ಹೊರಿಸಿದ್ದರು.

ಅರಣ್ಯ ಹಕ್ಕು ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ವಾದ ನಡೆಸುತ್ತಿರುವಾಗ ಭಾರತೀಯ ಜನತಾ ಪಕ್ಷವು ‘ಮೂಕ ಪ್ರೇಕ್ಷಕ’ನಾಗಿ ನಿಂತುಕೊಂಡಿದೆ. ಲಕ್ಷಾಂತರ ಆದಿವಾಸಿಗಳನ್ನು ಮತ್ತು ಬಡ ರೈತರನ್ನು ಕಾಡಿನಿಂದ ಹೊರದಬ್ಬಲು ಬಿಜೆಪಿ ಉದ್ದೇಶಿಸಿದೆ.
ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್‍ ಗಾಂಧಿಯವರು ಕಾಂಗ್ರೆಸ್‍ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, "ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ನ್ಯಾಯಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಸೂಕ್ತ ರೀತಿಯಲ್ಲಿ ಕಾನೂನು ಪ್ರತಿನಿಧಿತ್ವ ಒದಗಿಸಬೇಕು. ಇದರೊಂದಿಗೆ ಕಾಯ್ದೆಯ ಅನುಷ್ಟಾನದ ಪರಾಮರ್ಶೆಯನ್ನೂ ನಡೆಸಬೇಕಿದೆ. ಅರಣ್ಯ ಹಕ್ಕು ಕಾಯ್ದೆ ಅಡಿ ತಿರಸ್ಕೃತಗೊಂಡಿರುವ ಪ್ರಕರಣಗಳನ್ನು ಮರುಪರಿಶೀಲನೆಗೆ ಒಳಪಡಿಸಿ, ಅರ್ಜಿದಾರರಿಗೆ ಅರಣ್ಯದ ಮೇಲಿನ ಹಕ್ಕನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು, ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಜನಾದೇಶವನ್ನು ಗೌರವಿಸಬೇಕು” ಎಂದೂ ತಿಳಿಸಿದ್ದರು.

ರಾಷ್ಟ್ರವ್ಯಾಪಿ ಹೋರಾಟಕ್ಕೆ ಸಿದ್ಧತೆ

ದೇಶದ ಲಕ್ಷಾಂತರ ಜನರ ಬದುಕಿನ ಮೇಲೆ ನೇರ ವ್ಯತಿರಿಕ್ತ ಪರಿಣಾಮ ಬೀರಲಿರುವ ಈ ಸುಪ್ರಿಂ ಕೋರ್ಟಿನ ಈ ತೀರ್ಪು ಹೊರಬರುತ್ತಿದ್ದಂತೆ ವಿಷಯ ತಿಳಿದ ಆದಿವಾಸಿ ಕುಟುಂಬಗಳು ದಿಕ್ಕು ತೋಚದಾಗಿದ್ದಾರೆ. ಆದಿವಾಸಿಗಳ ಹಕ್ಕುಗಳಿಗಾಗಿ ಪ್ರಯತ್ನಶೀಲರಾಗಿರುವ ಸಾಮಾಜಿಕ ಕಾರ್ಯಕರ್ತರು ತೀರ್ಪಿನ ಮೂಲಕ ಆದಿವಾಸಿಗಳಿಗೆ ಆಗಲಿರುವ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಹೆಚ್‌.ಡಿ.ಕೋಟೆ ಬಳಿಯ ಆದಿವಾಸಿ ಕುಟುಂಬ. 
ಹೆಚ್‌.ಡಿ.ಕೋಟೆ ಬಳಿಯ ಆದಿವಾಸಿ ಕುಟುಂಬ. 
/ದಿ ಹಿಂದೂ

ಸುಪ್ರಿಂ ಕೋರ್ಟಿನ ತೀರ್ಪಿನ ಕುರಿತಂತೆ ಪ್ರತಿಕ್ರಿಯಿಸಿರುವ ರಾಜ್ಯ ಅರಣ್ಯಮೂಲ ಬುಡಕಟ್ಟು ಸಂಘಟನೆಯ ಮುಖಂಡ ಅಶೋಕ್‍ ಶೆಟ್ಟಿ, “ಕೇವಲ ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ಸೇರಿದಂತೆ ಬಹುತೇಕ ಆದಿವಾಸಿಗಳ ಅರ್ಜಿಗಳು ತಿರಸ್ಕೃತಗೊಂಡಿವೆ. ಅರ್ಜಿಗಳು ತಿರಸ್ಕಾರಗೊಳ್ಳಲು ಅಧಿಕಾರಿಗಳ ಅಜ್ಞಾನ, ಅಸಡ್ಡೆಯೇ ಕಾರಣ. ಈ ಕುರಿತು ಇತ್ತೀಚೆಗೆ 11 ದಿನಗಳ ಕಾಲ ಮುಷ್ಕರ ನಡೆಸಿ ಅಧಿಕಾರಿಗಳು ಹಾಗೂ ಸಂಸದ ಧೃವನಾರಾಯಣ ಅವರೊಂದಿಗೆ ಚರ್ಚಿಸಿದ್ದೇವೆ. ಅವರೂ ವಾಸ್ತವವನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಮತ್ತೆ ಅರ್ಜಿಗಳನ್ನು ಸ್ವೀಕರಿಸುವುದಾಗಿ ಭರವಸೆ ನೀಡಿದ್ದಾರೆ,” ಎಂದರು.

ಹೀಗಿರುವಾಗಲೇ ಸುಪ್ರಿಂ ಕೋರ್ಟ್ ಇಂತಹ ತೀರ್ಪು ಆದಿವಾಸಿಗಳು ತಮ್ಮ ಬದುಕಿನ ಹಕ್ಕನ್ನೇ ಕಸಿದುಕೊಳ್ಳುವಂತಿದೆ. “ಇದರ ಕುರಿತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಳವಳಿ ನಡೆಸಿ, ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದೊಂದೇ ನಮಗೆ ಉಳಿದಿರುವ ದಾರಿ,”ಎಂದರು ಶೆಟ್ಟಿ.

ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗ್ಡೆ, “ಪರಿಸರ ಎಂದರೆ ಅದರಲ್ಲಿ ಗಿಡಮರಗಳು, ಪಶು ಪಕ್ಷಿಗಳೊಂದಿಗೆ ಮನುಷ್ಯನೂ ಸೇರಿಕೊಂಡೇ ಇರುತ್ತಾನೆ. ಇಂದು ಕಾಡುಗಳನ್ನು ಅವಲಂಭಿಸಿ ಬದುಕುವ ಆದಿವಾಸಿಗಳು ಸಣ್ಣ ರೈತರು ನಗರದ ಜನರಂತೆ ಐಷಾರಾಮಿತನಕ್ಕೆ ಕಾಡನ್ನು ನಾಶ ಮಾಡಿ ಬದುಕುವವರಲ್ಲ. ಅವರು ಕಾಡನ್ನು ರಕ್ಷಿಸಿಕೊಳ್ಳುತ್ತಲೇ, ಕಾಡಿನ ಜೊತೆಯಲ್ಲಿ ಬಾಳುವವರು. ಕೆಲವು ಬುದ್ಧಿಗೇಡಿ, ಸ್ವಾರ್ಥಪರ ಎನ್‍ಜಿಓಗಳು ಈ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

“ಇಂದು ಅರಣ್ಯ ಹಕ್ಕು ಕಾಯಿದೆಯ ಕುರಿತು ತಮ್ಮ ಮೂಗಿನ ನೇರಕ್ಕೆ ತೀರ್ಮಾನ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ನಗರದ ಕೊಳಚೆ ಬದುಕಿನಲ್ಲಿರುವವರೇ ವಿನಃ ಕಾಡಿನಲ್ಲಿರುವ ಆದಿವಾಸಿಗಳ ಸ್ವಚ್ಛ ಬದುಕಿನ ಅರಿವಿರುವವರಲ್ಲ. ಹೀಗಾಗಿ ಅವರಿಗೆ ಆದಿವಾಸಿಗಳೂ ಕ್ರಿಮಿನಲ್‍ಗಳಾಗಿ ಕಾಣುತ್ತಿದ್ದಾರೆ. ಈ ವಿಷಯದಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲು ವಿಫಲವಾಗಿರುವ ಕೇಂದ್ರ ಸರ್ಕಾರ ತಾನು ಜನವಿರೋಧಿ ಎಂಬುದನ್ನು ತೋರ್ಪಡಿಸಿದೆ,” ಎಂದು ಇನ್ನೊಂದು ಆಯಾಮವನ್ನು ಮುಂದಿಟ್ಟರು.

ಹೋರಾಟಗಾರ ಶಿವಾನಂದ ಕುಗ್ವೆ, “ಅರಣ್ಯ ಹಕ್ಕು ಕಾಯ್ದೆಯ ಮಹತ್ವವನ್ನು ಅರಿತು ಅದರ ಅನುಷ್ಟಾನಕ್ಕಾಗಿ ಕೆಲಸ ಮಾಡಿರುವ ಜನಪ್ರತಿನಿಧಿಗಳೇ ವಿರಳ. ಕರ್ನಾಟಕದಲ್ಲಿ ಕಾಗೋಡು ತಿಮ್ಮಪ್ಪನವರನ್ನು ಬಿಟ್ಟರೆ ಮತ್ಯಾರು ಈ ಬಗ್ಗೆ ಚಕಾರವೆತ್ತಲಿಲ್ಲ. ಆದರೆ ಇದರ ಅನುಷ್ಟಾನದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಸಹಕಾರದಿಂದಾಗಿ ಬಹುತೇಕ ಅರ್ಜಿಗಳು ತಿರಸ್ಕಾರಗೊಂಡಿವೆ,” ಎನ್ನುತ್ತಾರೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
/ಟ್ರುಥ್‌ ಇಂಡಿಯಾ ಕನ್ನಡ

ಈಗ ಸುಪ್ರಿಂ ಕೋರ್ಟು ತೀರ್ಪು ಈ ಆದಿವಾಸಿಗಳ ಎತ್ತಂಗಡಿಗೆ ಆದೇಶ ನೀಡಿದೆ ಎಂದಾಗ ಅದನ್ನು ಜಾರಿಗೊಳಸುವ ಹೊಣೆ ರಾಜ್ಯ ಸರ್ಕಾರಗಳ ಮೇಲೆ ಬೀಳುತ್ತದೆ. ಇದು ಎಲ್ಲಾ ರಾಜ್ಯಗಳಲ್ಲಿ ಆದಿವಾಸಿಗಳಿಗೂ ಮತ್ತು ಅರಣ್ಯ ಇಲಾಖೆ- ಸರ್ಕಾರಗಳಿಗೂ ನಡುವೆ ಸಂಘರ್ಷವನ್ನು ಹುಟ್ಟು ಹಾಕುವುದರಲ್ಲಿ ಸಂಶಯವಿಲ್ಲ. ದೇಶದಾದ್ಯಂತ ಹತ್ತು ಲಕ್ಷ ಕುಟುಂಬಗಳನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸುವ ಕೆಲಸ ಮಾಡುವುದು ಸರ್ಕಾರಗಳಿಗೂ ಅಷ್ಟು ಸುಲಭದ ಕೆಲಸವಾಗಿಲ್ಲ.

ಸಂಭಾವ್ಯ ರಾಜಕೀಯ ಪರಿಣಾಮಗಳು:

ಲೋಕಸಭೆಯ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಇಂತಹ ಕೋರ್ಟ್ ಆದೇಶ ಬಂದಿರುವುದು ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಇಕ್ಕಟ್ಟಿನ ಸ್ಥಿತಿ ಉಂಟು ಮಾಡುವ ಸಂಭವವೂ ಇದೆ.

ಇಂತಹುದೇ ಸನ್ನಿವೇಶವು 2002ರಿಂದ 2004ರ ನಡುವೆ ವಾಜಪೇಯಿ ಆಡಳಿತದ ಅವಧಿಯಲ್ಲಿ ಉಂಟಾಗಿತ್ತು, ದೇಶದಾದ್ಯಂತ ಸುಮಾರು 3 ಲಕ್ಷ ಜನರ ಜಮೀನುಗಳನ್ನು ಖುಲ್ಲಾ ಮಾಡಿಸುವ ಕೆಲಸಕ್ಕೆ ಅಂದಿನ ಕೇಂದ್ರ ಸರ್ಕಾರ ಮುಂದಾಗಿತ್ತು. ಇದು ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಜನಾಕ್ರೋಶವನ್ನು ಉಂಟು ಮಾಡಿದ ಪರಿಣಾಮವಾಗಿ ಮುಂಬೈನಲ್ಲಿ ಲಕ್ಷಾಂತರ ಆದಿವಾಸಿಗಳು ಬೀದಿಗಿಳಿದು ಪ್ರತಿಭಟಿಸಿ ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದರು.

ತದ ನಂತರ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ್ದ ಕಾಂಗ್ರೆಸ್‍ ನೇತೃತ್ವದ ಯುಪಿಎ ಈ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದಲೇ ಅರಣ್ಯ ಹಕ್ಕು ಕಾಯ್ದೆ 2006ನ್ನು ರಚಿಸಿ ಜಾರಿಗೊಳಿಸಿದ್ದನ್ನು ಸ್ಮರಿಸಬಹುದು.

ಮೂಲ ವರದಿ: ಟ್ರುಥ್‌ ಇಂಡಿಯಾ ಕನ್ನಡ