samachara
www.samachara.com
‘ಅಪಾಯದಂಚಿನಲ್ಲಿ ಮಲೆನಾಡು’: ಮಂಗನ ಕಾಯಿಲೆ ಜಾತಕ ಬಿಚ್ಚಿಟ್ಟ ಪಿಐಎಲ್‌ನಲ್ಲಿ ಏನಿದೆ? 
COVER STORY

‘ಅಪಾಯದಂಚಿನಲ್ಲಿ ಮಲೆನಾಡು’: ಮಂಗನ ಕಾಯಿಲೆ ಜಾತಕ ಬಿಚ್ಚಿಟ್ಟ ಪಿಐಎಲ್‌ನಲ್ಲಿ ಏನಿದೆ? 

2018ರ ಡಿಸೆಂಬರ್‌ನಲ್ಲಿ ಸಾಗರ ತಾಲೂಕಿನ ಅರಳಗೋಡುವಿನಲ್ಲಿ ಮೊದಲ ಬಾರಿಗೆ ಕೆಎಫ್‌ಡಿ ಕಂಡು ಬಂದಿತ್ತು. ಕಾರಣ ಕಳೆದ ವರ್ಷ ಚುನಾವಣೆ ಇದ್ದಿದ್ದರಿಂದ ಈ ಭಾಗದ ಜನರಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳನ್ನು ಹಾಕಿರಲಿಲ್ಲ. ಪರಿಣಾಮ...

ಕರ್ನಾಟಕದ ಮಲೆನಾಡು ಎಂಬ ಅಪ್ಪಟ ಜೀವ ವೈವಿಧ್ಯದ ತೊಟ್ಟಿಲು ಈಗ ಅಪಾಯದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಇಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಮನುಷ್ಯರ ಜೀವನವನ್ನೇ ಸಂಕಷ್ಟಕ್ಕೆ ತಳ್ಳಲು ಆರಂಭಿಸಿದ್ದವು. ಇದಕ್ಕೀಗ ಮಂಗನ ಖಾಯಿಲೆ ಎಂಬ ‘ದೇಸಿ ರೋಗ’ವೂ ಸೇರ್ಪಡೆಯಾಗಿದ್ದು ಇಲ್ಲಿನ ಜನರ ಬದುಕನ್ನು ಕಿತ್ತು ತಿನ್ನಲು ಆರಂಭಿಸಿದೆ.

'ಕೆಎಫ್‌ಡಿ' (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುವ ಈ ಮಂಗನ ಖಾಯಿಲೆಗೆ ಈಗಾಗಲೇ ಹತ್ತಾರು ಜನರು ಅಸುನೀಗಿದ್ದಾರೆ. ನೂರಾರು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸಾವಿರಾರು ಜನರು ಭಯದಲ್ಲೇ ದಿನ ದೂಡುತ್ತಿದ್ದಾರೆ. ಆದರೆ ಈ ದುರಂತಕ್ಕೆ ಸರಕಾರ ಸ್ಪಂದಿಸಿದ್ದು ಮಾತ್ರ ಚಿಟಿಕೆಯಷ್ಟು. ಹೀಗಾಗಿ ಬೇಸತ್ತ ಜನರೀಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯ ರೂಪದಲ್ಲಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಶಿವಮೊಗ್ಗದ ವಕೀಲರಾದ ಕೆ.ಪಿ.ಶ್ರೀಪಾಲ್‌ ಮತ್ತು ಎನ್‌. ಜಿ. ರಮೇಶಪ್ಪ ಉಚ್ಛ ನ್ಯಾಯಾಲಯಕ್ಕೆ ಬುಧವಾರ ಅರ್ಜಿ ಸಲ್ಲಿಸಿದ್ದು ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಧಿಕಾರಿಗಳು, ಸರಕಾರಿ ಇಲಾಖೆಗಳಿಗೆ ನೊಟೀಸ್‌ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಕೋರ್ಟ್‌ ಫೆಬ್ರವರಿ 25ಕ್ಕೆ ಮುಂದೂಡಿದೆ.

ಏನಿದು ಕೆಎಫ್‌ಡಿ?

ಶಿವಮೊಗ್ಗ ಜಿಲ್ಲೆಯ ಸಾಗರದ ಕ್ಯಾಸನೂರಿನಲ್ಲಿ ಮೊದಲ ಬಾರಿಗೆ 1957ರ ಮಾರ್ಚ್‌ನಲ್ಲಿ ಅಪರಿಚಿತ ಖಾಯಿಲೆಯೊಂದು ಪತ್ತೆಯಾಗಿತ್ತು. ಒಂದೇ ರೀತಿಯ ರೋಗ ಹಲವು ಜನರಲ್ಲಿ ಕಂಡು ಬಂದು, ಕೆಲವು ಜನರು ಸಾವಿಗೀಡಾಗಿದ್ದರು. ನಂತರ ಈ ಬಗ್ಗೆ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿದಾಗ ಇದು ಮಂಗನಿಂದ ಹರಡುವ ಖಾಯಿಲೆ ಎಂದು ತಿಳಿದು ಬಂದಿತ್ತು. ವಿಶ್ವದಲ್ಲೇ ಮೊದಲ ಬಾರಿಗೆ ಕ್ಯಾಸನೂರಿನಲ್ಲಿ ಕಂಡು ಬಂದ ಈ ವೈರಾಣು ಖಾಯಿಲೆಗೆ ‘ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌’ ಎಂದು ಹೆಸರಿಡಲಾಯಿತು. ಸ್ಥಳೀಯವಾಗಿ ಜನರು ಮಂಗನ ಖಾಯಿಲೆ ಎಂದೇ ಇದನ್ನು ಕರೆಯಲು ಆರಂಭಿಸಿದರು.

ಆದರೆ ಈ ಖಾಯಿಲೆ ಇಲ್ಲಿಗೆ ಹೇಗೆ ಬಂತು? ಬರಲು ಕಾರಣ ಏನು? ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಈ ಕಾರಣಕ್ಕೆ ಇದರ ಮೇಲೆ ಹಲವಾರು ಸಂಶೋಧನೆಗಳು ಆರಂಭಗೊಂಡವು.

ರಷ್ಯಾದಲ್ಲೂ ಬೇಸಿಗೆಯಲ್ಲಿ ಇದೇ ರೀತಿಯ ಖಾಯಿಲೆಯೊಂದು ಕಂಡು ಬರುತ್ತಿತ್ತು. ಹಾಗಾಗಿ ಅಲ್ಲಿನಿಂದ (ಮುಖ್ಯವಾಗಿ ಸೈಬೀರಿಯಾ) ಇಲ್ಲಿಗೆ ವಲಸೆ ಬರುವ ಹಕ್ಕಿಗಳ ಮೂಲಕ ಖಾಯಿಲೆ ಹರಡುತ್ತಿರಬಹುದು ಎಂಬ ಆರಂಭಿಕ ತೀರ್ಮಾನಕ್ಕೆ ಬರಲಾಯಿತು. ಈ ರೋಗಾಣುಗಳನ್ನು ತಮ್ಮಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಾಣಿಗಳು ಯಾವುವು, ಅವುಗಳಿಂದ ರೋಗವನ್ನು ಹರಡುವ ಜೀವಿಗಳು ಯಾವುವು ಎಂಬುದರ ಬಗ್ಗೆ ಅಧ್ಯಯನಗಳು ನಡೆದವು. ಆದರೆ ವಲಸೆ ಹಕ್ಕಿಗಳು ರೋಗವನ್ನು ಹೊತ್ತು ತರುತ್ತವೆ ಎಂಬುದಕ್ಕೆ ಸೂಕ್ತ ಸಾಕ್ಷಿ ಸಿಗಲಿಲ್ಲ. ಇದರ ಜತೆಗೆ ರಷ್ಯಾದಲ್ಲಿ ಕಂಡು ಬರುವ ವೈರಸ್‌ಗಳಿಗೂ ಇಲ್ಲಿನ ವೈರಸ್‌ಗಳಿಗೂ ವ್ಯತ್ಯಾಸಗಳಿದ್ದವು.

ಆದರೆ ಇದೇ ರೀತಿಯ ಇನ್ನೂ ಹಲವು ಖಾಯಿಲೆಗಳು ಜಗತ್ತಿನಾದ್ಯಂತ ಪತ್ತೆಯಾದವು. ಉದಾಹರಣೆಗೆ ಸೈಬೀರಿಯಾದಲ್ಲಿ ಒಎಚ್‌ಎಫ್‌ ಎಂಬ ಖಾಯಿಲೆಗೂ ಇದಕ್ಕೂ ಹೋಲಿಕೆ ಇತ್ತು. ಜತೆಗೆ ಸೈಬೀರಿಯಾದ ಪಕ್ಷಿಗಳೂ ಮಲೆನಾಡಲ್ಲಿ ಪತ್ತೆಯಾಗಿದ್ದವು. ಆದರೆ ಅಧ್ಯಯನ ನಡೆಸುತ್ತಾ ಹೋದಂತೆ ಸೌದಿ ಅರೇಬಿಯಾದಲ್ಲಿ ಪತ್ತೆಯಾದ ಅಲ್ಖುರ್ಮಾ ವೈರಸ್‌ ಇದರ ಜತೆ ತಾಳೆಯಾಗುತ್ತಿತ್ತು.

ಇದಕ್ಕಿಂತ ಹೆಚ್ಚಾಗಿ 1989ರಲ್ಲಿ ಚೀನಾದಲ್ಲಿ ನಂಜಿಯಾನಿನ್‌ ಎಂಬ ವ್ಯಕ್ತಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರ ವೈರಾಣುಗಳು 1957ರಲ್ಲಿ ಪತ್ತೆಯಾದ ಕೆಎಫ್‌ಡಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿದ್ದವು. ಆದರೆ ಕೆಎಫ್‌ಡಿಗೆ ಒಂದು ಗುಣಲಕ್ಷಣವಿತ್ತು. ಅದು ಸಮಯದಿಂದ ಸಮಯಕ್ಕೆ ಬದಲಾವಣೆಯಾಗುತ್ತಾ ಹೋಗುತ್ತಿತ್ತು. 1957ರಲ್ಲಿ ಪತ್ತೆಯಾದ ವೈರಸ್‌ಗೂ 1989ರಲ್ಲಿ ಚೀನಾದಲ್ಲಿ ಪತ್ತೆಯಾದ ವೈರಸ್‌ಗೂ ತಾಳೆ ಬರಬೇಕು ಎಂಬು ಬಯಸಲು ಸಾಧ್ಯವಿರಲಿಲ್ಲ. ಆದರೆ ಅವುಗಳ ಬದಲಾವಣೆಯನ್ನು ವಿಶ್ಲೇಷಣೆಗೆ ಒಳಪಡಿಸಿದಾಗ 1942ರ ಸುಮಾರಿಗೆ ಈ ವೈರಸ್‌ಗಳ ಸಮೀಪದ ಪೂರ್ವಜ ವೈರಾಣುಗಳಿದ್ದವು ಎಂಬ ತೀರ್ಮಾನಕ್ಕೆ ಬರಲಾಯಿತು. ಸುಮಾರು 700 ವರ್ಷಗಳ ಕೆಳಗೆ ಇವುಗಳು ವೈರಸ್‌ ಒಂದರಿಂದ ಇಭ್ಭಾಗವಾದವು ಎಂದು ಅಂದಾಜಿಸಲಾಯಿತು.

ದಕ್ಷಿಣ ಭಾರತದಲ್ಲಿ ಖಾಯಿಲೆ ಕಾಟ:

ಹೀಗೆ ಅಧ್ಯಯನ ಒಂದು ಹಂತಕ್ಕೆ ಬರುವಷ್ಟರಲ್ಲಿ ರೋಗ ದಕ್ಷಿಣ ಭಾರತದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿತು. ಮೊದಲಿಗೆ ಶಿವಮೊಗ್ಗದಲ್ಲಿ ಕಾಣಿಸಿಕೊಂಡ ರೋಗ ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾವನದಲ್ಲಿಯೂ ಕಾಣಿಸಿಕೊಂಡಿತು. ನಂತರ ನೀಲಗಿರಿ ಬೆಟ್ಟಗಳಲ್ಲಿ ಪತ್ತೆಯಾಯಿತು. ಇಷ್ಟಲ್ಲದೆ ಕೇರಳದ ವಯನಾಡು, ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಗುಜರಾತ್‌ಗಳಲ್ಲೂ ಇಲ್ಲಿಯವರೆಗೆ ಮಂಗನ ಖಾಯಿಲೆ ಪತ್ತೆಯಾಗಿದೆ.

ಸತ್ತ ಮಂಗಗಳನ್ನು ಚಿಕ್ಕಮಗಳೂರಿನಲ್ಲಿ ಸುಡುತ್ತಿರುವುದು. (ಸಾಂದರ್ಭಿಕ ಚಿತ್ರ)
ಸತ್ತ ಮಂಗಗಳನ್ನು ಚಿಕ್ಕಮಗಳೂರಿನಲ್ಲಿ ಸುಡುತ್ತಿರುವುದು. (ಸಾಂದರ್ಭಿಕ ಚಿತ್ರ)
/ನ್ಯೂಸ್‌18 ಕನ್ನಡ

ಈ ಸಂದರ್ಭದಲ್ಲಿ ಮುಳ್ಳುಹಂದಿಗಳು, ಇಲಿಗಳು, ಅಳಿಲುಗಳು ಈ ವೈರಸ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂಬುದು ತಿಳಿದು ಬಂತು. ಕಾಡಿನಲ್ಲಿರುವ ಸಣ್ಣ ಜಿಗಣೆ ರೂಪದ ಜೀವಿಗಳಿಂದ ಇವು ಮಂಗಗಳಿಗೆ, ಮನುಷ್ಯರಿಗೆ ಹರಡುತ್ತವೆ ಎಂಬ ತೀರ್ಮಾನಕ್ಕೆ ಬರಲಾಯಿತು.

ರೋಗದ ಲಕ್ಷಣಗಳು:

ಹೀಗೆ ಜಿಗಣೆ ರೂಪದ ಜೀವಿಗಳಿಂದ ಮನುಷ್ಯರಿಗೆ ರೋಗ ಬಂದರೂ ಅದನ್ನು ಪತ್ತೆ ಹಚ್ಚುವುದೂ ಸ್ವಲ್ಪ ಮಟ್ಟಿಗೆ ಕಷ್ಟವಿದೆ. ಕಾರಣ ಮಲೆನಾಡಿನಲ್ಲಿ ಕಂಡು ಬರುವ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾಗಳಂತ ರೋಗಗಳಂತೆಯೇ ಇದರ ಲಕ್ಷಣಗಳೂ ಇವೆ. ಈ ವೈರಸ್‌ ತಗುಲಿಸಿಕೊಂಡವರಿಗೆ ಮೊದಲಿಗೆ ಭಾರೀ ಜ್ವರ ಕಂಡು ಬರುತ್ತದೆ. ನಂತರ ತಲೆಯ ಮುಂಭಾಗದಲ್ಲಿ ನೋವು, ಮೂಗಿನಿಂದ ರಕ್ತಸ್ರಾವ, ಗಂಟಲು, ಮತ್ತು ಒಸಡುಗಳು ಮತ್ತು ಜಠರಗರುಳಿನಲ್ಲಿ ರಕ್ತಸ್ರಾವ, ವಾಂತಿ, ಸ್ನಾಯು ಬಿಗಿತ, ನಡುಕ, ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಾಣಿಸುತ್ತವೆ.

ಮಲೆನಾಡಿನಲ್ಲಿ ಪ್ರತಿ ವರ್ಷ ಏನಿಲ್ಲವೆಂದರೂ 500-600 ಜನರಿಗೆ ಈ ಖಾಯಿಲೆ ಬರುವುದು ರೂಢಿ. ಆದರೆ ಹೆಚ್ಚಿನ ಸಂದರ್ಭದಲ್ಲಿ ಮುನ್ನಚ್ಚರಿಕೆಗಳನ್ನು ವಹಿಸುತ್ತಾ ಬಂದಿದ್ದರಿಂದ ಇತ್ತೀಚಿನ ದಿನಗಳಲ್ಲಿ ಈ ಖಾಯಿಲೆಯಿಂದ ಸಾವಿಗೀಡಾಗುವವರ ಪ್ರಮಾಣ ಹೆಚ್ಚು ಕಡಿಮೆ ನಿಂತೇ ಹೋಗಿತ್ತು. ಇದಾದ ನಂತರ 2014, 15 ರಲ್ಲೊಮ್ಮೆ ಈ ಭಾಗದಲ್ಲಿ ಮಂಗನ ಖಾಯಿಲೆ ತೀವ್ರವಾಗಿ ಕಾಣಿಸಿಕೊಂಡಿತ್ತು. ಇದೀಗ ಮತ್ತೆ 2018-19ರಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡಿದೆ.

ಈ ಋತುವಿನಲ್ಲಿ 2018ರ ಡಿಸೆಂಬರ್‌ನಲ್ಲಿ ಸಾಗರ ತಾಲೂಕಿನ ಅರಳಗೋಡುವಿನಲ್ಲಿ ಮೊದಲ ಬಾರಿಗೆ ಕೆಎಫ್‌ಡಿ ಕಂಡು ಬಂದಿತ್ತು. ಇದಕ್ಕೆ ಕಾರಣ ಕಳೆದ ವರ್ಷ ಚುನಾವಣೆ ಇದ್ದಿದ್ದರಿಂದ ಈ ಭಾಗದ ಜನರಿಗೆ ಪ್ರತಿ ವರ್ಷದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳನ್ನು ಹಾಕಿರಲಿಲ್ಲ. ಇದರಿಂದ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡ ಏಕಾಏಕಿ ರೋಗ ಉಲ್ಭಣಿಸಿ ಇಲ್ಲಿ ಹಲವಾರು ಜನರು ನೇರವಾಗಿ ಸಾವಿಗೂ ಗುರಿಯಾದರು. ಯಾವಾಗ ಆರಂಭದಲ್ಲೇ 8 ಜನರು ಬಲಿಯಾಗಿ ಇದು ಮಂಗನ ಖಾಯಿಲೆಯ ಅಬ್ಬರ ಎಂದು ತಿಳಿಯುತೋ ಅಷ್ಟೊತ್ತಿಗೆ ಶಿವಮೊಗ್ಗದಾಚೆಯ ಜಿಲ್ಲೆಗಳಿಗೂ ರೋಗಿ ಹಬ್ಬಿಕೊಂಡಾಗಿತ್ತು.

ಸರಕಾರದ ನಿರ್ಲಕ್ಷ್ಯ:

ರೋಗ ಕಾಣಿಸಿಕೊಂಡಾಗ ಸರಕಾರ ನಿರ್ಲಕ್ಷ್ಯ ತಾಳಿತು. ಆದರೆ ಇದೀಗ ರೋಗ ಉಲ್ಬಣಿಸಿ ಹಲವಾರು ಜನರು ಬಲಿಯಾದಾಗಲೂ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಶಿವಮೊಗ್ಗದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿದ್ದರೂ ಇಲ್ಲಿ ರೋಗಿಗಳ ರೋಗ ಪತ್ತೆ ಹಚ್ಚುವ ಪ್ರಯೋಗಾಲಯಗಳಿಲ್ಲ. ಹೀಗಾಗಿ ಡಯಾಗ್ನಾಸಿಸ್‌ಗೆ ಜನರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಬೇಕಾಗಿದೆ, ಜತೆಗೆ ವೈರಸ್‌ಗಳನ್ನು ಪುಣೆಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ ಎಂಬುದಾಗಿ ಪಿಎಎಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಶಿವಮೊಗ್ಗದಲ್ಲಿ ಪ್ರತಿ ಬಾರಿ ಡಿಸೆಂಬರ್‌ನಲ್ಲಿ ಕೆಎಫ್‌ಡಿ ಕಂಡು ಬರುತ್ತಲೇ ಇದ್ದರೂ ಸರಕಾರ ಜಿಲ್ಲೆಯಲ್ಲಿ ಡಯಾಗ್ನಾಸ್ಟಿಕ್ ಸೆಂಟರ್‌ ತೆರೆಯಲು ಮುಂದಾಗಿಲ್ಲ. ಇಲ್ಲಿ ಈ ಹಿಂದೆ ಇದ್ದ ಕೇಂದ್ರವನ್ನು ಪುನರುಜ್ಜೀವನಗೊಳಿಸಲೂ ಇಲ್ಲ ಎಂದು ದೂರಲಾಗಿದೆ. ಸರಕಾರದ ಬೇಜವಾಬ್ದಾರಿಯಿಂದಾಗಿ ಸಾಗರದಲ್ಲಿ ಈಗಾಗಲೇ 10 ಜನರು ಕೆಎಫ್‌ಡಿಯಿಂದ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದು, ಕೆಎಫ್‌ಡಿಯಿಂದಲೇ ಸಾವಿಗೀಡಾಗಿದ್ದಾರೆ ಎಂಬುದು ಖಚಿತಪಡಬೇಕಿದೆ.

ಒಂದು ಕಡೆ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ಇನ್ನೊಂದು ಕಡೆ ಕೆಲವು ಖಾಸಗಿ ಆಸ್ಪತ್ರೆಗಳು ಕೆಎಫ್‌ಡಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಆದರೆ ಇದರ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಜತೆಗೆ ರೋಗ ಪೀಡಿತರಿಗೆ ಚಿಕಿತ್ಸೆ ಮತ್ತು ಔಷಧಿಗಳನ್ನು ದೊರೆಯುವಂತೆಯೂ ಮಾಡಿಲ್ಲ.

ಜನವರಿ 3ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಖಾಯಿಲೆಗೆ 5 ಜನರು ಸಾವನ್ನಪ್ಪಿದ್ದರು. ಜಿಲ್ಲಾಡಳಿತ ಆಗಲೇ ಪ್ರಕರಣದ ಗಂಭೀರತೆ ಅರಿತುಕೊಳ್ಳಬೇಕಿತ್ತು. ಆದರೆ ಸರಕಾರ ನಿದ್ದೆಯಿಂದ ಎದ್ದೇಳದ ಹಿನ್ನೆಲೆಯಲ್ಲಿ ಸಾಗರದ ಶಾಸಕ ಹರತಾಳು ಹಾಲಪ್ಪ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಹೀಗಿದ್ದೂ ಡಯಾಗ್ನಾಸಿಸ್‌ ಕೇಂದ್ರ ಆರಂಭಗೊಂಡಿಲ್ಲ. ಕೆಎಫ್‌ಡಿ ಹರಡುವುದನ್ನು ತಡೆಯಲು ಸಾಕಷ್ಟು ಸಿಬ್ಬಂದಿಯನ್ನೂ ನೀಡಿಲ್ಲ. ಹೀಗಾಗಿ ಶಾಸಕರು ಕೇಂದ್ರ ಸರಕಾರಕ್ಕೂ ಅನುದಾನ ನೀಡುವಂತೆ ಪತ್ರ ಬರೆದಿದ್ದರು. ಹೀಗಿದ್ದೂ ಇಲ್ಲಿಯವರೆಗೆ ಯಾವ ಬದಲಾವಣೆಗಳೂ ಜಿಲ್ಲೆಯಲ್ಲಿ ನಡೆದಿಲ್ಲ.

ಔಷಧ ಕೊರತೆ:

ಜತೆಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳನ್ನು ಹಾಕುವಂತೆ ಒತ್ತಾಯಿಸಲಾಗಿತ್ತು. ಆದರೆ ಜಿಲ್ಲಾಡಳಿತದ ಬಳಿ ಲಸಿಕೆಗಳಿಗೆ ತೀವ್ರ ಕೊರತೆ ಇದೆ. ಆರೋಗ್ಯ ಇಲಾಖೆ ಬಳಿಯಲ್ಲಿರುವ ಲಸಿಕೆಗಳು ಒಂದು ತಾಲೂಕಿಗೆ ಸಾಲುತ್ತಿಲ್ಲ.

ಜನವರಿ 26ರಂದು ಶಿವಮೊಗ್ಗ ಜಿಲ್ಲಾಡಳಿತ ನೀಡಿದ ಪ್ರತಿಕ್ರಿಯೆ ಪ್ರಕಾರ ಕೆಎಫ್‌ಡಿ ತಡೆಗಟ್ಟಲು 1,65,000 ಡಿಎಂಪಿ ತೈಲ ಬಾಟಲಿಗಳು ಅಗತ್ಯವಾಗಿವೆ. ಆದರೆ 7,000 ಬಾಟಲಿಗಳಷ್ಟೇ ಲಭ್ಯವಿವೆ. ಇನ್ನು ಲಸಿಕೆಯ ವಿಚಾರಕ್ಕೆ ಬಂದಾಗ 2,23,000 ಜನರಲ್ಲಿ ಕಳೆದೆರಡು ತಿಂಗಳಲ್ಲಿ ಕೇವಲ 71,989 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಎರಡು ಡೋಸ್‌ಗಳಲ್ಲಿ ಲಸಿಕೆ ನೀಡಬೇಕಾಗಿದ್ದು, ಲಸಿಕೆ ಲಭ್ಯವಿಲ್ಲದ ಕಾರಣ ಹೆಚ್ಚಿನ ಕಡೆಗಳಲ್ಲಿ ಎರಡನೇ ಡೋಸ್‌ ಲಸಿಕೆ ನೀಡಿಯೇ ಇಲ್ಲ.

ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದಲ್ಲಿ ಜನರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಸಿಕೆ ಹಾಕುತ್ತಿರುವುದು.
ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದಲ್ಲಿ ಜನರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಸಿಕೆ ಹಾಕುತ್ತಿರುವುದು.
/ದಿ ಹಿಂದೂ

ಇಂಥಹದ್ದೊಂದು ಪರಿಸ್ಥಿತಿಯಲ್ಲಿ ದಿನೇ ದಿನೇ ಖಾಯಿಲೆಯ ವಿಸ್ತಾರ ಬೆಳೆಯುತ್ತಲೇ ಇದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ನೂರಕ್ಕೂ ಹೆಚ್ಚು ಜನರಿಗೆ ಖಾಯಿಲೆ ಇದ್ದರೆ ಮಂಗಗಳ ಸಾವು ಕೂಡ ಹೆಚ್ಚುತ್ತಿದೆ. ಶಿವಮೊಗ್ಗದ ಪಕ್ಕದಲ್ಲಿರುವ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಮೈಸೂರಿನ ಎಚ್‌.ಡಿ. ಕೋಟೆಯಲ್ಲೂ ರೋಗ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಧ್ಯಮಗಳೂ ದನಿ ಎತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ರೂಪಿಸುವ ಬಗ್ಗೆ ಉಲ್ಲೇಖಿಸಿವೆ. ಇದಕ್ಕಾಗಿ ಚಳಿಗಾಲದ ಅಂತ್ಯದಲ್ಲಿ ಮತ್ತು ಬೇಸಿಗೆ ಆರಂಭದಲ್ಲಿ ಶಾಶ್ವತ ವೈದ್ಯಕೀಯ ತಂಡವನ್ನು ಒದಗಿಸುವಂತೆ ಕೇಳಿಕೊಂಡಿವೆ.

ಕಾರಣ; ತಳ ಮಟ್ಟದ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಸಮೀಕ್ಷಾ ವರದಿಗಳ ಪ್ರಕಾರ ದಟ್ಟ ಕಾಡುಗಳಿಂದ ಕೂಡಿರುವ ಶಿವಮೊಗ್ಗ ಜಿಲ್ಲೆಯಲ್ಲಿ ವೇಗವಾಗಿ ಖಾಯಿಲೆ ಹರಡುತ್ತಿದ್ದು ವಿಸ್ತಾರದ ಜಿಲ್ಲೆಯಲ್ಲಿ ಕೇವಲ ಐದು ತಂಡಗಳು ಜನರಿಂದ ಸ್ಯಾಂಪಲ್‌ ಸಂಗ್ರಹದಲ್ಲಿ ನಿರತವಾಗಿವೆ. ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ನರ್ಸ್‌ಗಳಿಲ್ಲ. ಸಿಬ್ಬಂದಿಗಳಿಲ್ಲದೆ ಹಲವು ಕೇಂದ್ರಗಳು ಬಾಗಿಲೆಳೆದುಕೊಂಡಿವೆ. ಕೆಲವು ಕಡೆಗಳಲ್ಲಿ ವಾರಕ್ಕೊಮ್ಮೆ, ಎರಡು ವಾರಕ್ಕೊಮ್ಮೆ ವೈದ್ಯರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಬದುಕೇ ಅಪಾಯದಲ್ಲಿದೆ.

ಅರಣ್ಯ ಪ್ರದೇಶ ಹೆಚ್ಚಾಗಿರುವ ಶಿವಮೊಗ್ಗದಲ್ಲಿ ಕಾಡುತ್ಪತಿ ನಂಬಿ ಬುಡಕಟ್ಟು ಜನರು ವಾಸವಾಗಿದ್ದಾರೆ. ಇದರ ಜತೆಗೆ ಕಾಡಿಗೆ ಹೊಂದಿಕೊಂಡ ಕೃಷಿ ಭೂಮಿ ಇದೆ. ಇದೀಗ ಮಂಗನ ಖಾಯಿಲೆಯಿಂದ ಕಾಡಿಗೆ ಹೋಗಬೇಕಿದ್ದರೆ, ಕಾಡಿಗೆ ಹೊಂದಿಕೊಂಡ ಜಮೀನಿನಲ್ಲಿ ಕೃಷಿ ಮಾಡಬೇಕಿದ್ದರೆ ಜನರು ಡಿಎಂಪಿ ಎಣ್ಣೆಗಳನ್ನು ಅಗತ್ಯವಾಗಿ ಬಳಸಬೇಕಿದೆ. ಆದರೆ ತೈಲದ ಅಲಭ್ಯತೆಯಿಂದಾಗಿ ಕಾಡಿಗೆ ಕಾಲಿಡದ, ಅದಕ್ಕೆ ಸಮೀಪದಲ್ಲಿರುವ ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಈ ವಿಷಯದಲ್ಲಿ ಹೈಕೋರ್ಟ್‌ ಮಧ್ಯ ಪ್ರವೇಶ ಮಾಡಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ. ಒಂದೊಮ್ಮೆ ಈಗಲೂ ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಮಲೆನಾಡಿನ ಜನ ಜೀವನವೇ ಮಂಗನ ಖಾಯಿಲೆಗೆ ಏರುಪೇರಾಗುವ ಅಪಾಯವಿದೆ.

ಚಿತ್ರ ಕೃಪೆ: ಡೆಕ್ಕನ್‌ ಹೆರಾಲ್ಡ್‌