samachara
www.samachara.com
‘ಸಿಂಧೂ ನದಿ ನೀರು ಹಂಚಿಕೆ’: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ‘ಜಲಯುದ್ಧ’ ಸಾಧ್ಯವೇ?
COVER STORY

‘ಸಿಂಧೂ ನದಿ ನೀರು ಹಂಚಿಕೆ’: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ‘ಜಲಯುದ್ಧ’ ಸಾಧ್ಯವೇ?

ಇಷ್ಟು ದಿನ ಗಡಿ ಭಾಗದಲ್ಲಿ ಉಗ್ರರ ದಾಳಿ ರಾಜತಾಂತ್ರಿಕ ಮಟ್ಟದ ಆರೋಪ-ಪ್ರತ್ಯಾರೋಪಗಳಿಗಷ್ಟೇ ಸೀಮಿತವಾಗಿತ್ತು. ಹೆಚ್ಚೆಂದರೆ ಎರಡೂ ದೇಶಗಳ ವಾಣಿಜ್ಯ-ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿತ್ತು. ಆದರೆ ಈಗ ಜಲಯುದ್ಧದ ವಾತಾವರಣ ಸೃಷ್ಟಿಯಾಗಿದೆ.

ಒಟ್ಟೊಟ್ಟಿಗೆ ಸ್ವಾತಂತ್ರ್ಯ ಪಡೆದರೂ ದೇಶ ವಿಭಜನೆಯ ನಂತರ ಭಾರತ ಮತ್ತು ಪಾಕಿಸ್ತಾನ ಪರಸ್ಪರ ವಿರುದ್ಧ ಧಿಕ್ಕುಗಳಿಗೆ ಮುಖಮಾಡಿದ ದೇಶಗಳು. ಈ ಎರಡೂ ದಾಯಾದಿ ದೇಶಗಳ ನಡುವಿನ ಒಳ ಬೇಗುದಿ ಕಳೆದ 7 ದಶಕಗಳಿಂದ ತಣಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಸಮಯದಲ್ಲಿ ಎರಡೂ ದೇಶಗಳ ನಡುವೆ ಮೂರು ಯುದ್ಧಗಳಾಗಿವೆ. ಉಗ್ರಗಾಮಿ ಚಟುವಟಿಕೆಗಳು ಎರಡೂ ದೇಶಗಳಲ್ಲೂ ಸಾಕಷ್ಟು ಗಾಯಗಳನ್ನು ರಕ್ತಪಾತವನ್ನು ಸೃಷ್ಟಿಸಿದೆ.

ಕಣಿವೆ ರಾಜ್ಯದಲ್ಲಿ ಹರಿದ ರಕ್ತವನ್ನು ಸಿಂಧೂ ಅಷ್ಟೇ ನಾಜೂಕಾಗಿ ತೊಳೆಯುತ್ತಾ ಬಂದಿದ್ದಾಳೆ.

ಭಾರತ ಹಾಗೂ ಪಾಕ್ ನಡಿವೆ ಈಗಲೂ ಏಕೈಕ ಬಂಧದ ಕೊಂಡಿಯಾಗಿರುವುದು ಸಿಂಧೂ ನದಿ ಮಾತ್ರ. ಈ ಎರಡೂ ರಾಷ್ಟ್ರಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸಹ ಈವರೆಗೆ ಸಿಂಧೂ ನದಿ ನೀರು ಒಪ್ಪಂದಕ್ಕೆ ಯಾವುದೇ ತೊಡಕಾಗಿರಲಿಲ್ಲ. ಕಳೆದ 5 ದಶಕಗಳಲ್ಲಿ ಭಾರತ-ಪಾಕಿಸ್ತಾನದ ನಡುವೆ ಎರಡು ಯುದ್ಧಗಳು ನಡೆದಿವೆ, ಸಂಸತ್ ದಾಳಿ, ಮುಂಬೈ ತಾಜ್ ಹೋಟೆಲ್ ದಾಳಿ ನಡೆದಾಗಲು ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿಯನ್ನು ತಡೆಯುವ ಕುರಿತು ಭಾರತೀಯ ನಾಯಕರು ಧ್ವನಿ ಎತ್ತಿರಲಿಲ್ಲ.

ಆದರೆ, ಈಗ ಆ ದ್ವನಿಗೆ ಬಲ ಬರುತ್ತಿದೆ. ಆಡಳಿತರೂಢ ಬಿಜೆಪಿ ಪಕ್ಷದ ನಾಯಕರು ಪಾಕಿಸ್ತಾನದ ಸಿಂಧೂ ನದಿ ಹರಿವಿಗೆ ತಡೆಯೊಡ್ಡುವ ಮಾತುಗಳನ್ನಾಡುತ್ತಿದ್ದಾರೆ. ಹಾಗಾದ್ರೆ ಏನಿದು ಸಿಂಧೂ ನದಿ ಒಪ್ಪಂದ? ಈ ಒಪ್ಪಂದದಿಂದ ಪಾಕಿಸ್ತಾನಕ್ಕಾಗುವ ಲಾಭವೇನು? ನೀರಿನ ಹರಿವನ್ನು ನಿಲ್ಲಿಸಿದರೆ ಪಾಕ್‌ಗೆ ಆಗುವ ನಷ್ಟವೇನು? ಹಾಗೂ ಸಿಂಧೂ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ತಡೆಯುವುದು ಸಾಧ್ಯವೇ? ಇಲ್ಲಿದೆ ಮಾಹಿತಿ.

ಸಿಂಧೂ ನದಿಯ ಹರಿವು.
ಸಿಂಧೂ ನದಿಯ ಹರಿವು.

ನಾನು ಸಿಂಧೂ..!

ಭಾರತದ ಮೊದಲ ನಾಗರೀಕತೆ ಉಗಮವಾಗಿದ್ದು ಇದೇ ಸಿಂಧೂ ನದಿ ಪಾತ್ರದಲ್ಲಿ. ಇದೇ ಕಾರಣಕ್ಕೆ ಭಾರತೀಯ ನಾಗರೀಕತೆಯನ್ನು ಸಿಂಧೂ ಬಯಲಿನ ನಾಗರೀಕತೆ ಎಂದು ಗುರತಿಸಲಾಗಿದೆ. ಈ ನದಿಯ ಹರಿವಿನ ಕುರಿತು ಋಗ್ವೇದದಲ್ಲೂ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ ಇದು ಭಾರತದ ಪವಿತ್ರ ಹಾಗೂ ಪುಣ್ಯ ನದಿಗಳಲ್ಲೊಂದು.

ಹಿಮಾಲಯದಲ್ಲಿ ಹುಟ್ಟಿ ಭಾರತ ಮತ್ತು ಪಾಕಿಸ್ತಾನದಲ್ಲಿ 2,000 ಮೈಲಿ ಹರಿದು ಅರಬ್ಬಿ ಸೇರುವ ಸಿಂಧೂ ಜಗತ್ತಿನ ಅತೀ ಉದ್ದದ ನದಿಗಳಲ್ಲೊಂದು. ಝೀಲಂ, ಜೀನಾಬ್, ರಾವಿ, ಬಿಯಾಸ್ ಹಾಗೂ ಸಟ್ಲೇಜ್ ಸೇರಿದಂತೆ ಆರು ಉಪ ನದಿಗಳಿವೆ. ಈ ಎಲ್ಲಾ ನದಿಗಳ ಉಗಮ ಸ್ಥಾನ ಭಾರತದ ಹಿಮಾಲಯ.

ಈ ನದಿಯ ಒಟ್ಟು ಜಲಾನಯನ ಪ್ರದೇಶ 5,96,800 ಚದರ ಕಿ.ಮೀ ಇದ್ದು, 1,17,864 ಚದರ.ಕಿ.ಮೀ ಪ್ರದೇಶ ಭಾರತದಲ್ಲಿದೆ. ಪಾಕಿಸ್ತಾನದಲ್ಲಿ ಹೆಚ್ಚಿನ ಹರಿವನ್ನು ಹೊಂದಿರುವ ಸಿಂಧೂ ಅಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ 154 ಮಿಲಿಯನ್ ಏಕರೆ ಭೂಮಿಯನ್ನು ಹಸಿರಾಗಿಸುತ್ತಿದ್ದಾಳೆ.

ವಾರ್ಷಿಕ 58 ಘನ ಮೈಲಿ ನೀರಿನ ಹರಿವನ್ನು ಹೊಂದಿರುವ ಸಿಂಧೂ ನದಿಯ ಅಗಾಧತೆ ವಿಶ್ವದ ಉದ್ದದ ನದಿ ಎಂದು ಹೆಸರಾದ ನೈಲ್‌ ನದಿಯ ಎರಡರಷ್ಟಾದರೆ, ಯುಪ್ರಟೀಸ್ ಮತ್ತು ಟೈಗ್ರೀಸ್ ನದಿಯ ಮೂರರಷ್ಟು. ಭಾರತದಲ್ಲಿ ಹುಟ್ಟಿದರೂ ದಾಯಾದಿ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹರಿವ ಸಿಂಧೂ ಇಡೀ ಪಾಕಿಸ್ತಾನದ ನೀರಿನ ಮೂಲ ಹಾಗೂ ಅಲ್ಲಿನ ಏಕೈಕ ಜೀವನದಿ.

ಜಲಾಲಾಬಾದ್, ಪೇಶಾವರ್, ಫೈಸಲಾಬಾದ್, ಮುಲ್ತಾನ್, ಹೈದರಾಬಾದ್ ಹಾಗೂ ಕರಾಚಿ ಸೇರಿದಂತೆ ಪಾಕಿಸ್ತಾನದ ಅನೇಕ ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಮೂಲಾಧಾರ.

ಕಣಿವೆ ರಾಜ್ಯದಲ್ಲಿ ಸಿಂಧೂ ನದಿಯ ಹರಿವು.
ಕಣಿವೆ ರಾಜ್ಯದಲ್ಲಿ ಸಿಂಧೂ ನದಿಯ ಹರಿವು.
/ಸಿಎನ್‌ಬಿಸಿ

ಏನಿದು ಸಿಂಧೂ ಒಪ್ಪಂದ?

ಸ್ವಾತಂತ್ರ್ಯ ನಂತರ ಸಿಂಧೂ ನದಿ ನೀರಿನ ಹಂಚಿಕೆ ವಿವಾದದ ಕುರಿತಾಗಿ ಭಾರತ-ಪಾಕ್ ನಡುವೆ ನಿರಂತರ ಭಿನ್ನಾಭಿಪ್ರಾಯವಿತ್ತು. ಈ ಪ್ರಕರಣದ ನಡುವೆ ಪ್ರವೇಶಿಸಿದ ವಿಶ್ವಬ್ಯಾಂಕ್ ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಕೊನೆಗೆ ಸಿಂಧೂ ಹಾಗೂ ಅದರ ಜಲಾನಯನ ವ್ಯಾಪ್ತಿಗೆ ಸೇರುವ ಝೀಲಂ, ಜೀನಾಬ್, ರಾವಿ, ಬಿಯಾಸ್ ಹಾಗೂ ಸಟ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960 ರಲ್ಲಿ ಅಂದಿನ ಭಾರತದ ಪ್ರಧಾನಿ ಜವಹರ್‌ಲಾಲ್ ನೆಹರು ಹಾಗೂ ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ನಡುವೆ ಏರ್ಪಟ್ಟ ಒಪ್ಪಂದವೆ ಐತಿಹಾಸಿಕ ‘ಸಿಂಧೂ ನದಿ ನೀರು ಒಪ್ಪಂದ’.

ವಿಶ್ವಸಂಸ್ಥೆಯ ಮುಂದಾಳತ್ವದಲ್ಲಿ ನಡೆದ ಈ ಒಪ್ಪಂದಕ್ಕೆ ಒಪ್ಪಿದ್ದ ಭಾರತ ಸಿಂಧೂ ನದಿಯ ಹರಿವಿನ ಶೇ.20 ರಷ್ಟನ್ನು ಮಾತ್ರ ಬಳಸಿಕೊಂಡು ಉಳಿದ ಶೇ.80 ರಷ್ಟು ನೀರನ್ನು ಪಾಕಿಸ್ತಾನಕ್ಕೆ ಹರಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಯಾವುದೇ ಪ್ರಮುಖ ಜೀವನದಿಗಳಿಲ್ಲದ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗಬಾರದು ಎಂಬ ದೂರದೃಷ್ಟಿಯಿಂದ ಮಾಡಿಕೊಂಡ ಒಪ್ಪಂದ ಅದಾಗಿತ್ತು. ಆ ಕಾಲಕ್ಕೆ ಈ ಒಪ್ಪಂದವನ್ನು ಇಡೀ ವಿಶ್ವದಲ್ಲೇ ಉದಾರವಾದಿ ನದಿನೀರು ಹಂಚಿಕೆಯ ಒಪ್ಪಂದ ಎಂದು ಬಣ್ಣಿಸಲಾಗಿತ್ತು.

ಈ ಒಪ್ಪಂದ ಪ್ರಕಾರ, ಭಾರತ ಸಿಂಧೂ ನದಿಯ ನೀರನ್ನು 9.12 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಗಾಗಿ ಬಳಸಿಕೊಳ್ಳಬಹುದು. ಅಲ್ಲದೆ ಇನ್ನೂ 4.2 ಲಕ್ಷ ಎಕರೆಗೆ ವಿಸ್ತರಿಸಿಕೊಳ್ಳಲೂ ಭಾರತಕ್ಕೆ ಅವಕಾಶವಿದೆ. ಆದರೆ ಭಾರತ ಈವರೆಗೆ 8 ಲಕ್ಷ ಎಕರೆಗೆ ಮಾತ್ರ ಸಿಂಧೂ ನದಿಯಿಂದ ನೀರಾವರಿ ಸೌಕರ್ಯ ಒದಗಿಸಿದೆ. ಹಾಗೆಯೇ ಈ ಮೂರೂ ನದಿ ನೀರನ್ನು ಬಳಸಿಕೊಂಡು 18,600 ಮೆ.ವ್ಯಾ ವಿದ್ಯುತ್ ಉತ್ಪಾದಿಸಿಕೊಳ್ಳಲು ಅವಕಾಶವಿದೆ. ಆದರೆ ಭಾರತ 3,034 ಮೆ.ವ್ಯಾ. ವಿದ್ಯುತ್ ಮಾತ್ರ ಉತ್ಪಾದಿಸುತ್ತಿದೆ.

ಉರಿ ದಾಳಿಯ ನಂತರದ ಬೆಳವಣಿಗೆ

ಉರಿ ಸೇನಾ ನೆಲೆ ಮೇಲಿನ ಉಗ್ರರ ದಾಳಿ.
ಉರಿ ಸೇನಾ ನೆಲೆ ಮೇಲಿನ ಉಗ್ರರ ದಾಳಿ.
/ಜಂತಾ ಕಾ ರಿಪೋರ್ಟರ್

ಕಳೆದ 6 ದಶಕಗಳಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸಹ ಸಿಂಧೂ ನದಿ ನೀರು ಒಪ್ಪಂದಕ್ಕೆ ಯಾವುದೇ ತೊಡಕಾಗಿರಲಿಲ್ಲ. ಆದರೆ 2016 ರಲ್ಲಿ ಕಾಶ್ಮೀರದ ಉರಿಯಲ್ಲಿನ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿದ ದಾಳಿಯ ನಂತರ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಹದಗೆಟ್ಟಿತ್ತು. ಸಿಂಧೂ ನದಿ ನೀರು ಒಪ್ಪಂದ ಪುನರ್ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ “ನೀರು ಹಾಗೂ ರಕ್ತ ಜತೆಯಾಗಿ ಹರಿಯದು” ಎಂದು ಕಠಿಣ ಮಾತುಗಳಿಂದ ಪಾಕಿಸ್ತಾನವನ್ನು ಟೀಕಿಸಿದ್ದರು.

ಮೋದಿಯ ಈ ಮಾತು ಭಾರತ ಸರಕಾರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪರಿಶೀಲನೆಗೆ ಮುಂದಾಗುವ ಎಲ್ಲಾ ಸಾಧ್ಯತೆಗಳನ್ನು ತೆರೆದಿಟ್ಟಿತ್ತು. ಭಾರತದ ಸರಕಾರ ಈ ನಡೆಯಿಂದ ಮುಂದಾಗಬಹುದಾದ ಅನಾಹುತಗಳನ್ನು ಮನಗಂಡಿದ್ದ ಪಾಕ್ ಸರಕಾರ ಈ ಕುರಿತು ವಿಶ್ವಬ್ಯಾಂಕ್ ಅನ್ನು ಸಂಪರ್ಕಿಸಿತ್ತು. ಅಲ್ಲದೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು.

ಇದೀಗ ಪುಲ್ವಾಮಾದಲ್ಲಿ ಮತ್ತೊಮ್ಮೆ ಭಾರತೀಯ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 45 ಕ್ಕೂ ಹೆಚ್ಚು ಜನ ಯೋಧರು ಮೃತಪಟ್ಟಿದ್ದಾರೆ. ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಬೆಂಬಲವಿದೆ ಎಂಬುದು ಭಾರತದ ಆರೋಪ. ಈ ದಾಳಿಯ ನಂತರ ಮತ್ತೆ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಭಾರತ ಸರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಹಲವಾರು ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ ಪಾಕ್ ಮೇಲೆ ಜಲಯುದ್ಧ ಘೋಷಿಸಲು ಸಿಂಧೂ ನದಿಯ ಚರ್ಚೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಆಡಳಿತರೂಢ ಬಿಜೆಪಿ ಪಕ್ಷದ ಎಲ್ಲಾ ನಾಯಕರು ಪಾಕಿಸ್ತಾನಕ್ಕೆ ಹರಿಯುವ ಭಾರತದ ಪಾಲಿನ ಸಿಂಧೂ ನದಿಯ ನೀರನ್ನು ತಡೆಯುವ ಬಗ್ಗೆ ಮಾತುಗಳನ್ನಾಡುತ್ತಿದ್ದಾರೆ. ಇಷ್ಟು ದಿನ ಗಡಿ ಭಾಗದಲ್ಲಿ ಉಗ್ರರ ದಾಳಿಗಳು ನಡೆಯುತ್ತಿದ್ದರೂ, ಅದು ರಾಜತಾಂತ್ರಿಕ ಮಟ್ಟದ ಆರೋಪ-ಪ್ರತ್ಯಾರೋಪಗಳಿಗಷ್ಟೇ ಸೀಮಿತವಾಗಿತ್ತು. ಇನ್ನೂ ಹೆಚ್ಚೆಂದರೆ ಎರಡೂ ದೇಶಗಳ ವಾಣಿಜ್ಯ-ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿತ್ತು. ಆದರೆ ಈಗ ನದಿ ನೀರಲ್ಲಿ ಪಾಕಿಸ್ತಾನವನ್ನು ಮಣಿಸುವ ಮಾತುಗಳು ಕೇಳಿಬರುತ್ತಿವೆ.

ಇದು ಸಾಧ್ಯವೇ..?

ಭಾರತ ಈವರೆಗೆ ಸಿಂಧೂ ನದಿಯಲ್ಲಿ ತನಗಿದ್ದ ಶೇ.20 ರಷ್ಟು ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಕಳೆದ 58 ವರ್ಷದಲ್ಲಿ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದದ ಸಧ್ವಿನಿಯೋಗ ಮಾಡಿಕೊಂಡಿದ್ದರೆ, ನೀರಾವರಿ ಹಾಗೂ ಕೃಷಿ ಕ್ಷೇತ್ರದಲ್ಲಿ ಜಮ್ಮು-ಕಾಶ್ಮೀರ ಸಾಕಷ್ಟು ಅಭಿವೃದ್ಧಿ ಸಾಧಿಸಿರುತ್ತಿತ್ತು. ಆದರೆ ಕಣಿವೆ ರಾಜ್ಯದ ಅಭಿವೃದ್ಧಿಯ ಕಡೆಗೆ ತಲೆ ಕೆಡಿಸಿಕೊಳ್ಳದ ಭಾರತ ಸರಕಾರ ಈವರೆಗೆ ಆ ಭಾಗದಲ್ಲಿ ಕನಿಷ್ಟ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಿಲ್ಲ. ಸರಿಯಾದ ನೀರಾವರಿ ಯೋಜನೆಗಳಾಗಲಿ, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿಲ್ಲ.

ನಿಜ ಹೇಳಬೇಕೆಂದರೆ ಒಪ್ಪಂದದ ಪ್ರಕಾರ ನಮಗೆ ಸೇರಬೇಕಾದ ನಮ್ಮ ಪಾಲಿನ ಸಿಂಧೂ ನದಿಯ ನೀರನ್ನು ಸಮರ್ಥವಾಗಿ ಬಳಸಿಕೊಂಡರೆ ಸಾಕು. ಸರಕಾರದ ಇಂತಹ ನಡೆಯಿಂದ ಪಾಕಿಸ್ತಾನಕ್ಕೆ ಅಗಾಧ ಪ್ರಮಾಣದ ನೀರನ ಕೊರತೆ ಎದುರಾಗುತ್ತದೆ. ಪಾಕಿಸ್ತಾನದಲ್ಲಿ ಜಲಕ್ಷಾಮವೇ ಉಂಟಾಗುತ್ತದೆ. ಆದರೆ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಸಂಗ್ರಹಿಸಲು ಅಗತ್ಯವಾದ ಮೂಲ ಸೌಕರ್ಯಗಳಾದ ಜಲಾಶಯಗಳಾಗಲಿ, ಕಾಲುವೆಗಳಾಗಲಿ ನಮ್ಮಲ್ಲಿ ಇಲ್ಲ.

ಇವೆಲ್ಲ ಸಾಧ್ಯಾಸಾಧ್ಯತೆಗಳನ್ನು ಪರಾಮರ್ಶಿಸಿದರೆ ಸಿಂಧೂ ನದಿಯ ಕುರಿತ ನಮ್ಮ ರಾಜಕೀಯ ನಾಯಕರ ಮಾತುಗಳು ಕೇವಲ ಜನರ ಮೆಚ್ಚುಗೆ ಗಳಿಸುವ ವೀರಾವೇಶದ ಮಾತುಗಳಷ್ಟೇ ಎಂಬುದು ಸ್ಪಷ್ಟವಾಗುತ್ತದೆ. ಏನಕ್ಕೂ ಇದು ಕೂಡ ಯುದ್ಧ, ಸರ್ಜಿಕಲ್ ಸ್ಟ್ರೈಕ್‌ನಂತೆ ಕೇವಲ ಮಾತಲ್ಲೇ ಮುಗಿದು ಹೋಗುವ ಸಾಧ್ಯತೆಯಾ ಎಂಬುದನ್ನು ಕಾಲವೇ ಹೇಳಲಿದೆ.