samachara
www.samachara.com
ಕಾಂಗ್ರೆಸ್ ‘ಡಿಸ್ಕವರಿ’:  ಪುಲ್ವಾಮ ಉಗ್ರರ ದಾಳಿ ದಿನ ಪ್ರಧಾನಿ ಮೋದಿ ಎಲ್ಲಿದ್ದರು ಗೊತ್ತಾ?
COVER STORY

ಕಾಂಗ್ರೆಸ್ ‘ಡಿಸ್ಕವರಿ’: ಪುಲ್ವಾಮ ಉಗ್ರರ ದಾಳಿ ದಿನ ಪ್ರಧಾನಿ ಮೋದಿ ಎಲ್ಲಿದ್ದರು ಗೊತ್ತಾ?

ಇಡೀ ದೇಶವೇ ಸೈನಿಕರ ಸಾವಿನ ದುಖಃದಲ್ಲಿರುವಾಗ ದೇಶದ ಪ್ರಧಾನಿ ಮೋದಿ ಮಾತ್ರ ಉತ್ತರಾಖಂಡದಲ್ಲಿನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಸಾಕ್ಷ್ಯ ಚಿತ್ರಕ್ಕಾಗಿ ಚಿತ್ರೀಕರಣದಲ್ಲಿದ್ದರು; ಹಾಗಂತ ಕಾಂಗ್ರೆಸ್ ದಾಖಲೆಗಳನ್ನು ಮುಂದಿಟ್ಟರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ.14 ರಂದು ಉಗ್ರರು ನಡೆಸಿದ ದಾಳಿಗೆ 45 ಕ್ಕೂ ಹೆಚ್ಚು ಜನ ಸಿಆರ್‌ಪಿಎಪ್ ಯೋಧರು ಮೃತಪಟ್ಟಿದ್ದರು. ಆದರೆ ಇದೇ ಸಂರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಡಾಕ್ಯುಮೆಂಟರಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಕಾಂಗ್ರೆಸ್ ಮುಖಂಡ ರಣ್ದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಓಡಾಟದ ದಾಖಲೆಗಳನ್ನು ದೇಶವಾಸಿಗಳ ಮುಂದಿಟ್ಟ ಅವರು, “ಇಡೀ ದೇಶವೇ ಸೈನಿಕರ ಸಾವಿನ ದುಖಃದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದಲ್ಲಿನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಸಾಕ್ಷ್ಯಚಿತ್ರವೊಂದರ ಚಿತ್ರೀಕರಣದಲ್ಲಿದ್ದರು. ಶೂಟಿಂಗ್ ಹಿನ್ನೆಲೆಯಲ್ಲಿ ದೋಣಿ ವಿಹಾರವನ್ನೂ ನಡೆಸಿದರು. ಇದು ದೇಶದ ಹೊಣೆಹೊತ್ತ ನಾಯಕನೊಬ್ಬ ಅಂತಹದೊಂದು ಭೀಭತ್ಸ ಸಮಯದಲ್ಲಿ ಮುಂದುವರಿಸಬಹುದಾದ ಕೆಲಸವೇ?” ಎಂದು ಪ್ರಶ್ನಿಸಿದರು.

“ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದ್ದು ಮಧ್ಯಾಹ್ನ 3.10 ನಿಮಿಷಕ್ಕೆ. ಅದೇ ಸಮಯಲ್ಲಿ ಪ್ರಧಾನಿ ಮೋದಿ 'ಹಿಮಾಲಯದಲ್ಲಿ ನನ್ನ ದಿನಗಳು' ಎಂಬ ಡಾಕ್ಯುಮೆಂಟರಿ ಶೂಟಿಂಗ್‌ನಲ್ಲಿ ತೊಡಗಿದ್ದರು. ಇದು ಮೋದಿ ಹಿಮಾಲಯದಲ್ಲಿ ಕಳೆದ ದಿನಗಳ ಕುರಿತ ಚಿತ್ರವಾಗಿದ್ದು, ಇದರ ಚಿತ್ರೀಕರಣದಲ್ಲಿ ಮೋದಿ ಜೊತೆಗೆ ಡಿಸ್ಕವರಿ ಚಾನೆಲ್‌ನ ಸಂಪೂರ್ಣ ತಂಡವಿತ್ತು. 6.30 ರ ವರೆಗೆ ಶೂಟಿಂಗ್‌ನಲ್ಲಿ ತೊಡಗಿದ್ದ ಮೋದಿ 6.45 ಕ್ಕೆ ಚಹಾ ಕೂಟದಲ್ಲಿಯೂ ಪಾಲ್ಗೊಂಡು ಸಮೋಸ ತಿಂದರು,’’ ಎಂದು ದಾಳಿ ದಿನದ ಪ್ರಧಾನಿ ದಿನಚರಿಯ ಸಾಕ್ಷಿಗಳನ್ನು ಜನರ ಮಂದಿಟ್ಟರು ಪ್ರತಿಪಕ್ಷದ ನಾಯಕ.

ಇದಕ್ಕಿಂತ ಶೋಕದಾಯವ ವಿಷಯವೆಂದರೆ ಸೈನಿಕರ ಸಾವಿಗೆ ಕೇಂದ್ರ ಸರಕಾರ ರಾಷ್ಟ್ರಾದ್ಯಂತ ಶೋಕಾಚರಣೆ ಘೋಷಿಸಲಿಲ್ಲ. ಶೋಕಾಚರಣೆ ಘೋಷಿಸಿದರೆ ಮೋದಿ ನೇತೃತ್ವದಲ್ಲಿ ನಡೆಯಬೇಕಿದ್ದ ರಾಜಕೀಯ ರ್ಯಾಲಿ ಉದ್ಘಾಟನಾ ಸಮಾರಂಭಗಳು ರದ್ದಾಗುತ್ತಿದ್ದವು. ಇದೇ ಕಾರಣಕ್ಕೆ ಶೋಕಾಚರಣೆ ಘೋಷಿಸಿಲ್ಲ. ಅಲ್ಲದೆ ಮೃತಪಟ್ಟ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳುವುದನ್ನು ಬಿಟ್ಟು ಮೋದಿ ಇಂತಹಾ ಸಂದರ್ಭದಲ್ಲೂ ಇರಾನ್ ಪ್ರವಾಸ ಕೈಗೊಂಡಿದ್ದಾರೆ. ಮೋದಿಯ ಇಂತಹ ವರ್ತನೆಗಳು ತನ್ನ ಅಧಿಕಾರದ ದುರಾಸೆಗಾಗಿ ಅಟಲ್ ಬಿಹಾರಿ ವಾಜಪೇಯಿ ಭೋಧಿಸಿದ ರಾಜಧರ್ಮವನ್ನು ಮರೆತಿದ್ದಾರೆ ಎಂಬುದನ್ನು ಸೂಚಿಸುವಂತಿದೆ ಎಂದು ಸುರ್ವೆವಾಲಾ ರಾಜಕೀಯ ಟೀಕೆ ಮಾಡಿದ್ದಾರೆ.

ಕಾಂಗ್ರೆಸ್‌ನ ಈ ಕುರಿತ ಟೀಕೆಗೆ ಉತ್ತರಿಸಿರುವ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, "ಕಾಂಗ್ರೆಸ್ ಪುಲ್ವಾಮಾ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ನೋಡುತ್ತಿದೆ. ದಾಳಿಯ ಸಂದರ್ಭದಲ್ಲಿ ಮೋದಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದನ್ನೇ ದೊಡ್ಡ ವಿಚಾರವಾಗಿ ಬಿಂಬಿಸಲು ಹೊರಟಿದೆ. ಆದರೆ ಇದು ಯಾವುದೇ ಕಾರಣಕ್ಕೂ ದೇಶದ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ದೇಶದಲ್ಲಿ ಉಗ್ರವಾದವನ್ನು ಮಟ್ಟಹಾಕಲು ಬದ್ಧರಾಗಿದ್ದೇವೆ" ಎಂದು ಆಂಧ್ರಪ್ರದೇಶದ ರ್ಯಾಲಿಯಲ್ಲಿ ಹೇಳಿದ್ದಾರೆ.

ಈ ಮೂಲಕ ದಾಳಿ ದಿನ ಪ್ರಧಾನಿ ಶೂಟಿಂಗ್‌ನಲ್ಲಿ ಇದ್ದರು ಎಂಬುದನ್ನು ಒಪ್ಪಿಕೊಂಡಿರುವ ಬಿಜೆಪಿ, ಭಯೋತ್ಪಾದನೆ ವಿರುದ್ಧ ತನ್ನ ಹೋರಾಟ ಹೀಗೆಯೇ ಮುಂದುವರಿಯಲಿದೆ ಎಂದು ಹೇಳಿದೆ.