samachara
www.samachara.com
ನರೇಂದ್ರ ಮೋದಿ- ಇಮ್ರಾನ್‌ ಖಾನ್‌: ದ್ವೇಷ ಬಿತ್ತಿ ಅಧಿಕಾರಕ್ಕೆ ಬಂದ ಇಬ್ಬರ ನಡುವೆ ಅದೆಷ್ಟು ಸಾಮ್ಯತೆ? 
COVER STORY

ನರೇಂದ್ರ ಮೋದಿ- ಇಮ್ರಾನ್‌ ಖಾನ್‌: ದ್ವೇಷ ಬಿತ್ತಿ ಅಧಿಕಾರಕ್ಕೆ ಬಂದ ಇಬ್ಬರ ನಡುವೆ ಅದೆಷ್ಟು ಸಾಮ್ಯತೆ? 

ಇಬ್ಬರೂ ನಾಯಕರು ಪ್ರತೀಕಾರದ ಉನ್ಮಾದವನ್ನು ಬಿತ್ತಿ, ಅಧಿಕಾರದ ಫಸಲನ್ನು ಕೊಯ್ದು, ಈಗ ‘ಬಾಳೆಗಿಡಕ್ಕೆ ಗೊನೆ ಭಾರ’ ಎಂಬ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ನರೇಂದ್ರ ಮೋದಿ & ಇಮ್ರಾನ್‌ ಖಾನ್.

ಒಬ್ಬರು ಭಾರತದ ಪ್ರಧಾನ ಮಂತ್ರಿ. ಮತ್ತೊಬ್ಬರು ಪಾಕಿಸ್ತಾನದ ಪ್ರಧಾನಿ. ಎರಡು ಅಕ್ಕಪಕ್ಕದ ಪ್ರಜಾಪ್ರಭುತ್ವ ಆಳ್ವಿಕೆಯನ್ನು ಒಪ್ಪಿಕೊಂಡ ದೇಶಗಳ ಜನರಿಂದ ಚುನಾಯಿತರಾಗಿ ಅತ್ಯುನ್ನತ ಹುದ್ದೆಯಲ್ಲಿ ಇವತ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವತ್ತು ಈ ಎರಡೂ ದೇಶಗಳು ‘ಶತ್ರು ರಾಷ್ಟ್ರ’ಗಳ ಮಾದರಿಯಲ್ಲಿ ರಾಜತಾಂತ್ರಿಕ ಸಂಬಂಧದ ಐತಿಹಾಸಿಕ ಬಿಕ್ಕಟ್ಟನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ.

ಈ ಇಬ್ಬರು ನಾಯಕರು, ಒಂದು ನಿರ್ಧಿಷ್ಟ ಕಾಲಘಟ್ಟದಲ್ಲಿ ಉಭಯ ದೇಶಗಳಲ್ಲಿ ಅಧಿಕಾರಕ್ಕೇರಿದ ರೀತಿ, ಅದಕ್ಕಾಗಿ ಅವರು ಚುನಾವಣಾ ವೇಳೆಯಲ್ಲಿ ಬಳಸಿದ ‘ಪರದೇಶಿ ವಿರೋಧಿ ರಾಷ್ಟ್ರಪ್ರೇಮ’ದ ಮಾತುಗಳು, ಅಧಿಕಾರಕ್ಕೇರಿದ ನಂತರ ಅವರು ಬೆಳೆಸಿಕೊಳ್ಳಲು ಯತ್ನಿಸಿದ ಅಂತಾರಾಷ್ಟ್ರೀಯ ಸಂಬಂಧಗಳು, ರಾಷ್ಟ್ರ ನಿರ್ಮಾಣಕ್ಕಾಗಿ ವಿದೇಶದಿಂದ ಸಾಲ ಎತ್ತುವ ರೀತಿ ಹಾಗೂ ಕಾಶ್ಮೀರ ವಿಚಾರದಲ್ಲಿ ತಳೆದ ನಿಲುವುಗಳಲ್ಲಿ ಸಾಮ್ಯತೆಗಳು ಕಾಣಿಸುತ್ತವೆ. ಇನ್ನೊಂದು ಅಯಾಮದಲ್ಲಿ ಇಬ್ಬರೂ ಪ್ರತೀಕಾರದ ಉನ್ಮಾದವನ್ನು ಬಿತ್ತಿ, ಅಧಿಕಾರದ ಫಸಲನ್ನು ಕೊಯ್ದು, ಈಗ ‘ಬಾಳೆಗಿಡಕ್ಕೆ ಗೊನೆ ಭಾರ’ ಎಂಬ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಇವರು ನರೇಂದ್ರ ಮೋದಿ:

2014ರ ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಅಬ್ಬರಿಸುತ್ತಿದ್ದವರು ಆಗಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ. ದೆಹಲಿ ದರ್ಬಾರ್‌ ಮೇಲೆ ದೃಷ್ಟಿ ನೆಟ್ಟಿದ್ದ ಅವರ ಆರ್ಭಟ ಕೇಳಿ ಇನ್ನೇನು ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಧೂಳೀಪಟ ಎಂದೇ ಎಲ್ಲರೂ ಅಂದುಕೊಂಡಿದ್ದರು.

‘ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮನಮೋಹನ್‌ ಸಿಂಗ್‌ ಸರಕಾರ ತಾಕತ್ತಿಲ್ಲ,’ ಎಂದು ಅವರು ಆರೋಪಿಸುತ್ತಿದ್ದರು. ಮತ್ತು 56 ಇಂಚಿನ ಎದೆಯ ಬಗ್ಗೆ ಉಲ್ಲೇಖಿಸುತ್ತಿದ್ದರು. ‘ಭಾರತದ ಸುರಕ್ಷತೆ ಮತ್ತು ದೇಶದ ರಕ್ಷಣೆ ನನ್ನ ಮೊದಲ ಆದ್ಯತೆ’ ಎಂದು ಎದೆ ತಟ್ಟಿಕೊಂಡು ಭಾಷಣ ಬಿಗಿದಿದ್ದರು. ‘ಪಾಕಿಸ್ತಾನದ ಪ್ರಧಾನಿಗೆ ಚಿಕನ್‌ ಬಿರಿಯಾನಿ ತಿನ್ನಿಸುವುದಲ್ಲ’ ಎಂದು ಅಧಿಕಾರದಲ್ಲಿದ್ದವರ ವಿರುದ್ಧ ವಿಡಂಬನೆಗಳ ಬಾಣವನ್ನು ತೂರಿ ಬಿಟ್ಟಿದ್ದರು. ಇವೆಲ್ಲವೂ ಇವತ್ತಿಗೆ ಟೀಕೆಗಳು ಅಂತ ಅನ್ನಿಸಿದರೂ, ಅವತ್ತಿನ ಮೋದಿ ಅವರ ಮಾತುಗಳನ್ನು ಕೇಳಿದರೆ ಇದ್ಯಾವುದು ಉತ್ಪ್ರೇಕ್ಷೆ ಅಂತ ಅನ್ನಿಸುವುದಿಲ್ಲ.

ಇಷ್ಟಕ್ಕೇ ನಿಲ್ಲದೆ ಪಾಕಿಸ್ತಾನದ ಆಗಿನ ಪ್ರಧಾನಿ ಆಸಿಫ್‌ ಅಲಿ ಝರ್ದಾರಿ ಜತೆ ಮನಮೋಹನ್‌ ಸಿಂಗ್‌ ಗೌಪ್ಯ ಸಭೆ ನಡೆಸುತ್ತಾರೆ ಎಂದು ದೂರಿದ್ದರು. ಇಂತಹದ್ದೇ ಆರೋಪವನ್ನು ಅವರ ಇತ್ತೀಚಿನ ಪ್ರತಿ‍‍‍‍ಷ್ಠೆಯ ಕಣವಾಗಿದ್ದ ತವರು ರಾಜ್ಯದ ಚುನಾವಣೆ ಸಮಯದಲ್ಲಿಯೂ ಗಾಳಿಗೆ ತೂರಿದ್ದರು. ‘ಗುಜರಾತ್‌ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಲು ಶತ್ರು ರಾಷ್ಟ್ರದ ಜತೆ ಸೇರಿ ಮನಮೋಹನ್‌ ಸಿಂಗ್‌ ಸಂಚು ನಡೆಸುತ್ತಿದ್ದಾರೆ’ ಎಂದು ಆಪಾದಿಸಿದ್ದರು.

ಹಾಗಂತ, ಇಂತಹದೊಂದು ಪರದೇಶಿ ವಿರೋಧಿ ಹೇಳಿಕೆಗಳನ್ನು ಪ್ರಧಾನಿ ಅಭ್ಯರ್ಥಿಯಾಗಿ, ಪ್ರಧಾನಿಯಾಗಿ ಮೋದಿ ಒಬ್ಬರೇ ನೀಡುತ್ತಿದ್ದರು ಅಂತೇನೂ ಅಲ್ಲ. ಅವರದ್ದೇ ಪಕ್ಷದ ಇತರ ನಾಯಕರ ಬಾಯಲ್ಲೂ ದ್ವೇಷಪೂರಿತ ಮಾತುಗಳು ಹೊರಬೀಳುತ್ತಿದ್ದವು. ಇನ್ನು, ಬಿಜೆಪಿ ಮಾಹಿತಿ ತಂತ್ರಜ್ಞಾನದ ಅವತರಣಿಕೆಗಳಂತೂ ಹಿಂದೆಂದೂ ಇಲ್ಲದಷ್ಟು ಕ್ರೀಯಾಶೀಲವಾಗಿ ಪಾಕ್‌ ವಿರೋಧಿ ಮನಸ್ಥಿತಿಯನ್ನು ಹರಡಿಕೊಂಡು ಬಂತು.

ಭರವಸೆಗಳು ಎಂಬ ತುಂತುರು ಮಳೆ:

ಒಂದು ಕಡೆ ಪರದೇಶಿ ವಿರೋಧಿ ದ್ವೇಷ ಭಾಷಣಗಳ ಮೂಲಕ ‘ಹಿಂದೂ ರಾಷ್ಟ್ರೀಯತೆ’ ಗಿಡಕ್ಕೆ ಪೋಷಣೆ ಮಾಡುತ್ತಲೇ ಅದರ ಮೇಲೆ ಸಾಮಾಜಿಕ ಭದ್ರತೆಯ ಭರವಸೆಗಳ ತುಂತುರು ಹನಿಗಳನ್ನೂ ಮೋದಿ ಉದುರಿಸಿಕೊಂಡು ಬಂದರು. ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ತುಂಬುವ ಚುನಾವಣೆ ಸಮಯದ ಬೀಸು ಭರವಸೆಯಿಂದ ಹಿಡಿದು, ಡಾಲರ್‌ ಮುಂದೆ ರೂಪಾಯಿ ಪ್ರಬಲಗೊಳಿಸುವ, ಭ್ರಷ್ಟಾಚಾರಕ್ಕೆ ಕೊನೆ ಹಾಡುವ ಮಾತುಗಳನ್ನು ಪ್ರಚಾರದ ಸರಕಾಗಿಸಿಕೊಂಡಿದ್ದರು.

ಅಧಿಕಾರಕ್ಕೇರುತ್ತಿದ್ದಂತೆ ಮೋದಿ ಅವರಿಗೆ ತಾವೇ ಬಿತ್ತಿದ ಭರವಸೆಗಳನ್ನು ಈಡೇರಿಸುವ ಸವಾಲಿನ ದಿನಗಳು ಆರಂಭವಾಗಿದ್ದವು. ಭಯೋತ್ಪಾದನಾ ದಾಳಿಗಳು ಕೊನೆಯಾಗಲಿಲ್ಲ. ಗಡಿಯಾಚೆಗಿನಿಂದ ದಾಳಿಗಳು ಹೆಚ್ಚಾದವು. ರೂಪಾಯಿ ಮೇಲೇರುವ ಬದಲು ಕೆಳಕ್ಕಿಳಿಯಿತು. ಉದ್ಯೋಗ ಸೃಷ್ಟಿ ಸಾಧ್ಯವಾಗಲಿಲ್ಲ. ಜನರ ಖಾತೆಗಳಿಗೆ ಹಣವೂ ಬರಲಿಲ್ಲ. ರಫೇಲ್‌ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂತು. ಇದರ ನಡುವೆ ನಡೆದಿದ್ದು ಪುಲ್ವಾಮಾ ದಾಳಿ. ಈಗ 56 ಇಂಚಿನ ಎದೆ ಇರುವವರ ಬಳಿ ‘ಪಾಕಿಸ್ತಾನದ ಮೇಲೆ ಯುದ್ಧ ಯಾವಾಗ?’ ಎಂಬ ಪ್ರಶ್ನೆಯನ್ನು ಜನರು ವಿನಮ್ರವಾಗಿ ಕೇಳುತ್ತಿದ್ದಾರೆ. ‘ಶತ್ರು ರಾಷ್ಟ್ರಕ್ಕೆ ಪಾಠ ಕಲಿಸಬೇಕು’ ಎಂದು ದೊಡ್ಡ ಸಂಖ್ಯೆಯ ಜನ ಒಕ್ಕೊರಲಿನಿಂದ ಪ್ರತೀಕಾರ ಕೇಳುತ್ತಿದ್ದಾರೆ.

ಆದರೆ ಯುದ್ಧ ಮಾಡುವ ಪರಿಸ್ಥಿತಿಯಲ್ಲಿ ಭಾರತವಿಲ್ಲ. ನಿರುದ್ಯೋಗ ಸಮಸ್ಯೆ, ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿತ, ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟಿನಂಥ ಸವಾಲಿನ ದಿನಗಳನ್ನು ಭಾರತ ಎದುರು ನೋಡುತ್ತಿದೆ. ಹೀಗಾಗಿ ಯುದ್ಧವೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯಾಗಿ ಉಳಿದಿಲ್ಲ. ಆದರೆ 2014ಕ್ಕೂ ಮೊದಲು ಕೇಳಿದ ಮಾತುಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಯುದ್ಧಕ್ಕೆ ಹಾತೊರೆಯುತ್ತಿದ್ದಾರೆ. ಈಗ ಮೋದಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

ವಿಶೇಷ ಏನು ಅಂದರೆ, ಇಂತಹದ್ದೇ ಒಂದು ಸಂಕೀರ್ಣ ಪರಿಸ್ಥಿತಿಯನ್ನು ಅತ್ತ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಇಮ್ರಾನ್‌ ಖಾನ್‌ ಕೂಡ ಎದುರಿಸುತ್ತಿದ್ದಾರೆ.

ಅವರು ಇಮ್ರಾನ್ ಖಾನ್:

ಇಮ್ರಾನ್‌ ಖಾನ್‌ ಚುನಾವಣೆ ಗೆದ್ದಾಗ, ಈ ಗೆಲುವಿಗೆ ಭಾರತದ ‘ಬಲಪಂಥೀಯ ಪ್ರಧಾನಿ’ ನರೇಂದ್ರ ಮೋದಿ ಪ್ರಮುಖ ಕಾರಣ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು!

ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ತಮ್ಮ ವಿರೋಧಿ ನವಾಜ್‌ ಷರೀಫ್‌ರನ್ನು ಭ್ರಷ್ಟಾಚಾರಿ, ದೇಶ ವಿರೋಧಿ, ಪ್ರಜಾಫ್ರಭುತ್ವ ವಿರೋಧಿ ಎಂದೆಲ್ಲಾ ಇಮ್ರಾನ್‌ ಖಾನ್‌ ಪ್ರಚಾರ ಸಭೆಗಳಲ್ಲಿ ಜರೆದಿದ್ದರು. ಜತೆಗೆ ‘ನರೇಂದ್ರ ಮೋದಿ ಗೆಳೆಯ’, ‘ಭಾರತದ ಕೈಗೊಂಬೆ’ ಎಂಬ ಹೊಸ ಹಣೆಪಟ್ಟಿಗಳನ್ನು ಷರೀಫ್‌ಗೆ ಹಚ್ಚಿದ್ದರು. ಭಾರತ ಮತ್ತು ಮೋದಿ ವಿರೋಧಿ ಮಾತುಗಳೇ ಇಮ್ರಾನ್‌ ಖಾನ್‌ 22 ವರ್ಷಗಳ ರಾಜಕೀಯ ನಡೆಯಲ್ಲಿ ಅಂತಿಮವಾಗಿ ಕೈಹಿಡಿದು ಅಧಿಕಾರಕ್ಕೆ ತಂದು ಬಿಟ್ಟವು.

2015ರ ಡಿಸೆಂಬರ್‌ನಲ್ಲಿ ಏಕಾಏಕಿ ಲಾಹೋರ್‌ನಲ್ಲಿಳಿದ ಮೋದಿ ನವಾಜ್‌ ಷರೀಫ್ ಮೊಮ್ಮಗಳ ಮದುವೆಗೆ ಹೋಗಿ ಅವರನ್ನು ಅಪ್ಪಿಕೊಂಡು ಬಂದಿದ್ದನ್ನು ಖಾನ್‌ ಹಿಗ್ಗಾಮುಗ್ಗಾ ಝಾಡಿಸಿದ್ದರು. "ಮೋದಿ ಕಾ ಜೊ ಯಾರ್‌ ಹೇ, ಗದ್ಧಾರ್‌ ಹೇ (ಮೋದಿಯ ಗೆಳೆಯರಿದ್ದಾರಲ್ಲ, ಅವರು ಮೋಸಗಾರರು)" ಎಂದು ಹೋದಲ್ಲಿ ಬಂದಲ್ಲೆಲ್ಲಾ ಷರೀಫ್‌ ವಿರುದ್ಧ ಅಬ್ಬರಿಸಲು ಆರಂಭಿಸಿದರು. ಏಕವಚನದಲ್ಲೇ ಮೋದಿ ವಿರುದ್ಧ ಗರ್ಜಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಇಲ್ಲಿ ಮೋದಿ, ಮನಮೋಹನ್‌ ಸಿಂಗ್‌ ಮೇಲೆ ಆರೋಪ ಹೊರಿಸಿದಂತೆ, ಅಲ್ಲಿ ನವಾಜ್‌ ಷರೀಫ್ ವಿರುದ್ಧ ಖಾನ್‌ ಆಪಾದನೆಗಳ ಮಳೆ ಸುರಿಸಿದರು. ಷರೀಫ್‌ ನೇತೃತ್ವದ ‘ಪಿಎಂಎಲ್‌-ನ್‌’ ಗೆಲುವಿಗಾಗಿ ಅಂತಾರಾಷ್ಟ್ರೀಯ ಹಿತಾಸಕ್ತಿಗಳು ಭಾರತದ ಜತೆ ಸೇರಿ ಕೆಲಸ ಮಾಡುತ್ತಿವೆ ಎಂದುಬಿಟ್ಟರು ಖಾನ್‌. ಮೋದಿಯಂತೆ ಇಮ್ರಾನ್‌ ಖಾನ್‌ ಕೂಡ ಪಾಕಿಸ್ತಾನದ ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಸಾಮಾಜಿಕ ಜಾಲತಾಣಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡರು. ವಾಟ್ಸಾಪ್‌, ಫೇಸ್‌ಬುಕ್ ಮತ್ತು ಟ್ಟಿಟ್ಟರ್‌ ಮೂಲಕ ಭಾರತ ವಿರೋಧಿ ಹೇಳಿಕೆಗಳನ್ನು, ವಿಡಿಯೋಗಳನ್ನು ಪ್ರತಿ ಮತದಾರನಿಗೂ ತಲುಪುವಂತೆ ನೋಡಿಕೊಂಡಿತು ಇಮ್ರಾನ್‌ ಖಾನ್‌ ಪಕ್ಷದ ಐಟಿ ಸೆಲ್.

ಷರೀಫ್ ಹಿಂದೆ ಭಾರತದ ಶಕ್ತಿಗಳಿವೆ ಎಂಬ ವಿಡಿಯೋಗಳನ್ನು ವೈರಲ್‌ ಮಾಡಲಾಯಿತು. ಇದು ಪಾಕಿಸ್ತಾನ ಸೇನೆ ಮತ್ತು ಭಾರತೀಯ ಸೇನೆ ನಡುವಿನ ಚುನಾವಣೆ ಎಂದು ಬಿಂಬಿಸುವಲ್ಲಿ ಖಾನ್‌ ಯಶಸ್ವಿಯಾದರು. ಭಾರತ ವಿರೋಧಿ ಮನಸ್ಥಿತಿಗಳನ್ನು ಬಿತ್ತಿ ಗೆಲುವಿನ ಬೆಳೆ ತೆಗೆದರು ಇಮ್ರಾನ್‌ ಖಾನ್‌.

ಆದರೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಇಮ್ರಾನ್‌ ಖಾನ್‌ಗೆ ತನ್ನ ತಪ್ಪಿನ ಅರಿವಾಗತೊಡಗಿತು. ಈಗ ಯೂಟರ್ನ್‌ ಹೊಡೆಯಲೇ ಬೇಕಾಗಿತ್ತು. ಹೇಗೆ ಅಬ್ಬರದ ಭಾಷಣ ಮಾಡಿದ ಮೋದಿ ಲಾಹೋರ್‌ಗೆ ಸದ್ದಿಲ್ಲದೆ ಹೋಗಿ ಬಂದರೋ, ಅದೇ ರೀತಿ ಭಾರತದ ಜತೆ ಶಾಂತಿ ಮಾತುಕತೆ ಪ್ರಸ್ತಾಪ ಮುಂದಿಟ್ಟರು ಇಮ್ರಾನ್‌ ಖಾನ್. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ವರ್ಷಗಟ್ಟಲೆ ಭಾರತದ ವಿರೋಧಿ ಮನಸ್ಥಿತಿಯನ್ನು ಜನರಿಗೆ ತುಂಬಿ, ಈಗ ಶಾಂತಿ ಎಂದು ಹೇಳಲು ಹೊರಟರೆ ಕೇಳಲು ಉನ್ಮಾದಕ್ಕೆ ಒಳಗಾದ ಜನ ತಯಾರಿಲ್ಲ. ಅವರಿಗೆ ಯುದ್ಧ ಬೇಕಾಗಿದೆ, ನಾಯಕನಿಗೆ ದೇಶದ ಬಿಕ್ಕಟ್ಟುಗಳು ಕಣ್ಣೆದುರಿಗೆ ಇವೆ.

ಇವತ್ತು ಪಾಕಿಸ್ತಾನ, ಭಾರತಕ್ಕಿಂತ ದೊಡ್ಡ ಮಟ್ಟದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿಯೂ ವಿದೇಶಿ ಮೀಸಲು ನಿಧಿ ಖಾಲಿಯಾಗಿದೆ. ಸುಮಾರು 10 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟು ಸಾಲ ತಲೆ ಮೇಲಿದ್ದು ಕಟ್ಟಲು ಹಣವಿಲ್ಲದೆ ಒದ್ದಾಡುತ್ತಿದೆ. ಅದಕ್ಕಾಗಿ ಸೌದಿ ಅರೇಬಿಯಾ ಮೊದಲಾದ ಮಿತ್ರ ರಾಷ್ಟ್ರಗಳ ಬಳಿ ಧನಸಹಾಯ ಎತ್ತುತ್ತಿದೆ. ಜನರ ಕಣ್ಣೊರೆಸಲು ಪ್ರಧಾನಿ ನಿವಾಸದ ಐಷಾರಾಮಿ ಕಾರುಗಳನ್ನು ಮಾರುವ, ಎಕಾನಮಿ ಕ್ಲಾಸ್‌ನಲ್ಲಿ ಅಧಿಕಾರಿಗಳು, ಸಚಿವರು ಪ್ರಯಾಣಿಸಬೇಕು ಎಂಬ ಜನಪ್ರಿಯ ತಂತ್ರಗಳನ್ನು ಆಡಳಿತ ಅಳವಡಿಸಿಕೊಂಡಿದೆ.

ಆದರೆ ಜನರು ತೃಪ್ತರಾಗುತ್ತಿಲ್ಲ. ಇದರ ನಡುವೆ ಪುಲ್ವಾಮಾ ದಾಳಿ ನಡೆದಿದ್ದು ಪಾಕಿಸ್ತಾನದ ಮೇಲೆ ಮತ್ತಷ್ಟು ಒತ್ತಡ ಬೀಳುವಂತೆ ಮಾಡಿದೆ. ಅದಕ್ಕಾಗಿ ಅಬ್ಬರ ಬಿಟ್ಟು, ‘ಸಾಕ್ಷ್ಯ ನೀಡಿದರೆ ಶಿಕ್ಷಿಸುತ್ತೇವೆ’ ಎಂಬ ಹೇಳಿಕೆ ನೀಡಿದ್ದಾರೆ ಖಾನ್. ‘ಭಾರತ ಯುದ್ಧಕ್ಕೆ ಬಂದರೆ ಪ್ರತ್ಯುತ್ತರ ನೀಡುತ್ತೇವೆ’ ಎಂಬ ಹೇಳಿಕೆ ನೀಡಿ ತಾವೇ ಉನ್ಮಾದಕ್ಕೆ ಹಚ್ಚಿದ ಜನರಿಗೆ ಸಮಾಧಾನ ಪಡಿಸುವ ಕೆಲಸ ನಡೆಯುತ್ತಿದೆ.

ಶತ್ರುಗಳ ನಡುವೆಯೂ ಸಾಮ್ಯತೆ ಇರುತ್ತದೆ ಮತ್ತು ಅದು ಇಷ್ಟು ನಿಚ್ಚಳವಾಗಿರುತ್ತದೆ ಎಂಬುದು ಈ ಸಮಯದಲ್ಲಿ ಕಾಕತಾಳೀಯ ಇರಲಿಕ್ಕಿಲ್ಲ. ಅಲ್ವಾ?