samachara
www.samachara.com
#ಕಿಸಾನ್‌_ಲಾಂಗ್_ಮಾರ್ಚ್: ಮಾತು ಮರೆತ ಸರಕಾರ, ಮುಂಬೈನತ್ತ ಅನ್ನದಾತರ ಪಾದಯಾತ್ರೆ
COVER STORY

#ಕಿಸಾನ್‌_ಲಾಂಗ್_ಮಾರ್ಚ್: ಮಾತು ಮರೆತ ಸರಕಾರ, ಮುಂಬೈನತ್ತ ಅನ್ನದಾತರ ಪಾದಯಾತ್ರೆ

“ಲಾಂಗ್‌ ಮಾರ್ಚ್‌ ನಡೆದು ವರ್ಷ ಕಳೆದಿದೆ. ಆದರೆ ರಾಜ್ಯ ಸರಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ,” ಎಂದು ಕಿಸಾನ್‌ ಸಭಾ ಮಹಾರಾಷ್ಟ್ರ ಪ್ರಧಾನ ಕಾರ್ಯದರ್ಶಿ ಅಜಿತ್‌ ನವಳೆ ದೂರಿದ್ದಾರೆ.

2018ರ ಮಾರ್ಚ್‌ನಲ್ಲಿ ಲಾಂಗ್‌ ಮಾರ್ಚ್‌ (ಮಹಾ ನಡಿಗೆ) ಹೆಸರಿನಲ್ಲಿ ಮಯಾ ನಗರಿ ಮುಂಬೈಗೆ ಪ್ರವಾಹೋಪಾದಿಯಲ್ಲಿ ರೈತರು ನಡೆದು ಬಂದಿದ್ದರು. ಇಲ್ಲಿನ ಐತಿಹಾಸಿಕ ಅಜಾದ್‌ ಮೈದಾನ ತುಂಬಿ ತುಳುಕಾಡುತ್ತಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮರು ಮಾತಾಡದೆ ರೈತರ ಬೇಡಿಕೆಗಳಿಗೆಲ್ಲ ತಲೆ ಅಲ್ಲಾಡಿಸಿದ್ದರು.

ಆದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಫಡ್ನವೀಸ್‌ ತಾವು ನೀಡಿದ ಭರವಸೆಗಳನ್ನು ಈಡೇರಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಭ್ರಮನಿರಸನಗೊಂಡ ರೈತರು ಒಂದು ವರ್ಷ ಬಿಟ್ಟು ಮತ್ತೆ ಮಾಯಾ ನಗರಿಯತ್ತ ಹೆಜ್ಜೆ ಹಾಕಿದ್ದಾರೆ.

ಮಾತಿಗೆ ತಪ್ಪಿದ ಸರಕಾರಕ್ಕೆ ಚಾಟಿ ಬೀಸಲು ನಾಸಿಕ್‌ನಿಂದ ಮುಂಬೈನತ್ತ ಬುಧವಾರ ಸಾವಿರಾರು ರೈತರು 180 ಕಿಲೋ ಮೀಟರ್‌ಗಳ ಪಾದಯಾತ್ರೆ ಆರಂಭಿಸಿದ್ದಾರೆ. ‘ಕಿಸಾನ್‌ ಲಾಂಗ್‌ ಮಾರ್ಚ್‌’ ಹೆಸರಿನ ಈ ಪ್ರತಿಭಟನೆಯನ್ನು ‘ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್‌)’ ಹಮ್ಮಿಕೊಂಡಿದೆ. ಬೆಳೆ ವಿಮೆ ಯೋಜನೆಗಳ ಜಾರಿ, ಭೂ ಹಕ್ಕು, ಕನಿಷ್ಠ ಬೆಂಬಲ ಬೆಲೆ, ಸುಧಾರಿತ ನೀರಾವರಿ ಯೋಜನೆ ಮತ್ತು ಬರದಿಂದ ತುರ್ತು ಮುಕ್ತಿಗಾಗಿ ಬೇಡಿಕೆ ಇಟ್ಟು ರೈತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಆಶ್ವಾಸನೆಗಿಲ್ಲ ಕಿಮ್ಮತ್ತು:

"ವರ್ಷ ಕಳೆದಿದೆ. ಆದರೆ ರಾಜ್ಯ ಸರಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ," ಎಂದು ಕಿಸಾನ್‌ ಸಭಾದ ಮಹಾರಾಷ್ಟ್ರ ಪ್ರಧಾನ ಕಾರ್ಯದರ್ಶಿ ಅಜಿತ್‌ ನವಳೆ ದೂರಿದ್ದಾರೆ. ಹೀಗಾಗಿ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರಿಗೆ ಮಾಡಿರುವ ವಂಚನೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ನಾಸಿಕ್‌ನಿಂದ ಮುಂಬೈಗೆ ನಡೆಯಲಿರುವ ಪಾದಯಾತ್ರೆಯಲ್ಲಿ ಕನಿಷ್ಠ 40,000 ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಅಜಿತ್‌ ನವಳೆ ಸ್ಕ್ರಾಲ್‌ ಡಾಟ್‌ ಇನ್‌ಗೆ ತಿಳಿಸಿದ್ದಾರೆ. "ಕಳೆದ ಬಾರಿ ನಾಸಿಕ್‌ನಿಂದ 15,000 ಜನರು ನಡಿಗೆ ಆರಂಭಿಸಿದ್ದರು. ಜನರು ದಾರಿ ಮಧ್ಯದಲ್ಲಿ ಸೇರಿಕೊಂಡಿದ್ದರಿಂದ ಮುಂಬೈ ತಲುಪುವ ಹೊತ್ತಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆ 40,000 ದಾಟಿತ್ತು," ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಈ ಪಾದಯಾತ್ರೆಯನ್ನು ಹತ್ತಿಕ್ಕುವ ಯತ್ನ ಆರಂಭಗೊಂಡಿದೆ. ಫೆಬ್ರವರಿ 13ರಂದು ಅಹಮದ್‌ನಗರದಲ್ಲಿ ಪಾದಯಾತ್ರೆ ಸಂಬಂಧ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಸಂಬಂಧಿಸಿದಂತೆ ಈಗಾಗಲೇ ನವಳೆ ವಿರುದ್ಧ ಐಪಿಸಿ ಸೆಕ್ಷನ್‌ 188 (ಸಾರ್ವಜನಿಕ ಅಧಿಕಾರಿ ನೀಡಿದ ಆದೇಶವನ್ನು ಉಲ್ಲಂಘಿಸುವುದು) ಮತ್ತು 143ಎ (ಕಾನೂನು ಬಾಹಿರವಾಗಿ ಸಭೆ ಸೇರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. "ನಾವು ಪಾದಯಾತ್ರೆ ಮಾಡುವುದನ್ನು ತಡೆಯಬೇಕು ಎಂಬ ಉದ್ದೇಶದಿಂದ ಈ ಕೇಸುಗಳನ್ನು ದಾಖಲಿಸಲಾಗಿದೆ," ಎನ್ನುತ್ತಾರೆ ನವಳೆ.

ಇನ್ನು ಪ್ರತಿಭಟನೆ ಆರಂಭದ ದಿನವೇ ಮಹಾರಾಷ್ಟ್ರ ಜಲ ಸಂಪನ್ಮೂಲ ಮತ್ತು ನೀರಾವರಿ ಸಚಿವ ಗಿರೀಶ್‌ ಮಹಾಜನ್‌ ಕಿಸಾನ್‌ ಸಭಾ ಪ್ರತಿನಿಧಿಗಳ ಸಭೆ ಕರೆದಿದ್ದರು. "ಈ ಸಮಸ್ಯೆ ಪರಿಹಾರಕ್ಕೆ ನಾನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಜತೆ ಮಾತುಕತೆ ನಡೆಸುವುದಾಗಿ ಅವರಿ ಹೇಳಿದ್ದಾರೆ," ಎಂದು ಕಿಸಾನ್‌ ಸಭಾ ಅಧ್ಯಕ್ಷ ಅಶೋಕ್‌ ಧವಳೆ ಮಾಹಿತಿ ನೀಡಿದ್ದಾರೆ. ಆದರೂ ನಾವು ಪಾದಯಾತ್ರೆ ಮುಂದುವರಿಸಲು ನಿರ್ಧರಿಸಿದ್ದೇವೆ ಮತ್ತು ಸರಕಾರ ಖಚಿತವಾದ ಭರವಸೆ ನೀಡದೆ ಇದನ್ನು ಹಿಂತೆಗೆದುಕೊಳ್ಳುವುದಿಲ್ಲ. ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರವೇ ಗಡುವು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಜೆಟ್‌ ಅಧಿವೇಶನದ ವೇಳೆ ಶಕ್ತಿ ಪ್ರದರ್ಶನ:

ದುಷ್ಕರ್ಮಿಗಳಿಂದ ಹತ್ಯೆಯಾದ ಗೋವಿಂದ್‌ ಪನ್ಸಾರೆ ನಾಲ್ಕನೇ ಪುಣ್ಯತಿಥಿಯ ದಿನವಾದ ಬುಧವಾರ ನಾಸಿಕ್‌ನಿಂದ ಪಾದಯಾತ್ರೆ ಹೊರಟಿದೆ. ಒಟ್ಟು 23 ಜಿಲ್ಲೆಗಳ ಜನರು ಇದರಲ್ಲಿ ಸೇರಿಕೊಂಡಿದ್ದಾರೆ. ರಾಜ್ಯ ಬಜೆಟ್‌ ಅಧಿವೇಶನ ನಡೆಯುತ್ತಿರುವಾಗಲೇ ಫೆಬ್ರವರಿ 27ರಂದು ರೈತರು ಮುಂಬೈಗೆ ಬರಲಿದ್ದಾರೆ. ಪೊಲೀಸರ ಪ್ರಕಾರ ಈಗಾಗಲೇ 7,500 ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ನಮ್ಮ ಯಾತ್ರೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಯಾವುದೇ ಕಾರಣ ನೀಡದೆ ಬುಧವಾರ ಗಂಟೆಗಟ್ಟಲೆ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ಕಿಸಾನ್‌ ಸಭಾ ವಕ್ತಾರ ಪಿ.ಎಸ್‌. ಪ್ರಸಾದ್‌ ದೂರಿದ್ದಾರೆ. ‘ನಮ್ಮ ಪದಾಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕನಿಷ್ಠ 35 ಕಾರುಗಳನ್ನು ನಾಸಿಕ್‌ನ ಹೊರಗೆ ಸತಾರಾ ಘಾಟ್‌ನಲ್ಲಿ ತಡೆದಿದ್ದಾರೆ’ ಎಂದು ನವಳೆ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಹೆಚ್ಚುವರಿ ಎಸ್‌ಪಿ ಸಂಜಯ್‌ ಪಾಟೀಲ್‌ ಅಲ್ಲಗಳೆದಿದ್ದಾರೆ.

ವರದಿಗಳ ಪ್ರಕಾರ ನಾಸಿಕ್‌ ಪೊಲೀಸರು ಕೇವಲ ಸಭೆಗೆ ಮಾತ್ರ ಅನುಮತಿ ನೀಡಿ, ಪಾದಯಾತ್ರೆಗೆ ಅವಕಾಶ ನಿರಾಕರಿಸಿದ್ದಾರೆ. ಆದರೆ ಇದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿರುವ ರೈತರು ನೇರ ಪಾದಯಾತ್ರೆ ಆರಂಭಿಸಿದ್ದಾರೆ.

ಪಾದಯಾತ್ರೆಗೂ ಮೊದಲು, ‘ಫೆಬ್ರವರಿ 11 ಮತ್ತು 17ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮತ್ತು ನೀರಾವರಿ ಸಚಿವ ಗಿರೀಶ್‌ ಮಹಾಜನ್‌ ಜತೆ ಸಭೆ ನಡೆಸಿದ್ದೇವೆ. ಆದರೆ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ಹೋರಾಟವನ್ನು ಹಮ್ಮಿಕೊಂಡಿದ್ದೇವೆ,’ ಎಂದು ಧವಳೆ ವಿವರಣೆ ನೀಡಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯವಾಗಿ ರೈತರ ಹಲವು ಪ್ರತಿಭಟನೆಗಳು ನಡೆದಿವೆ. ಅವುಗಳಲ್ಲಿ ಲಾಂಗ್‌ ಮಾರ್ಚ್ ಪ್ರಮುಖವಾದುದು. ಇದೀಗ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಾಗ ಮತ್ತೊಮ್ಮೆ ಪಾದಯಾತ್ರೆ ರೂಪದಲ್ಲಿ ರೈತ ಸಮುದಾಯ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಇದನ್ನು ಫಡ್ನವೀಸ್‌ ಸರಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.