samachara
www.samachara.com
ವಿದೇಶದ ಜೈಲುಗಳಲ್ಲಿ ಭಾರತೀಯರ ಸೆರೆವಾಸ; ಯಾವತ್ತು ಸಿಗಲಿದೆ ಬಿಡುಗಡೆಯ ಭಾಗ್ಯ?
COVER STORY

ವಿದೇಶದ ಜೈಲುಗಳಲ್ಲಿ ಭಾರತೀಯರ ಸೆರೆವಾಸ; ಯಾವತ್ತು ಸಿಗಲಿದೆ ಬಿಡುಗಡೆಯ ಭಾಗ್ಯ?

ಸೌದಿ ಮಾತ್ರವಲ್ಲ ಅನೇಕ ರಾಷ್ಟ್ರಗಳಲ್ಲಿ ಭಾರತೀಯರು ಇಂದು ಖೈದಿಗಳಾಗಿದ್ದಾರೆ. ಯಾವ ಯಾವ ದೇಶದಲ್ಲಿ ಭಾರತದ ಎಷ್ಟು ಜನ ಕೈದಿಗಳಿದ್ದಾರೆ? ಇವರ ಬಂಧನಕ್ಕೆ ಕಾರಣವಾದರೂ ಏನು?

ಪಾಕಿಸ್ತಾನದಲ್ಲಿ ಗೂಢಚರ್ಯೆ ಹಾಗೂ ಭಯೋತ್ಪಾದನೆ ಮಾಡಿದ ಆರೋಪದ ಮೇಲೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾದವ್‌ ಅವರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸರಕಾರ ಸತತ ಪ್ರಯತ್ನದಲ್ಲಿದೆ. ಈ ಪ್ರಕರಣದ ವಿಚಾರಣೆ ನಡೆಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಜಾದವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸದಂತೆ ಪಾಕಿಸ್ತಾನಕ್ಕೆ ಸೂಚಿಸಿದೆ.

ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಭಾರತ ಪ್ರವಾಸದಲ್ಲಿರುವ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಭಾರತ ಸರಕಾರದ ಮನವಿಯ ಮೇರೆಗೆ ಸೌದಿ ಜೈಲಿನಲ್ಲಿರುವ ಸುಮಾರು 850 ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿದ್ದಾರೆ.

ಸೌದಿ ಅರೇಬಿಯಾದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಭಾರತದ ಪ್ರಜೆಗಳು ಇಂದು ಖೈದಿಗಳಾಗಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಯಾವ ಯಾವ ದೇಶದಲ್ಲಿ ಭಾರತದ ಎಷ್ಟು ಜನ ಕೈದಿಗಳಿದ್ದಾರೆ? ಇವರ ಬಂಧನಕ್ಕೆ ಕಾರಣವಾದರೂ ಏನು? ಇಲ್ಲಿದೆ ಡೀಟೈಲ್.

ವಿದೇಶದಲ್ಲಿ ಸೆರೆವಾಸ ಅನುಭವಿಸುತ್ತಿರುವ ಭಾರತೀಯರ ಟಾಪ್10 ಪಟ್ಟಿ.
ವಿದೇಶದಲ್ಲಿ ಸೆರೆವಾಸ ಅನುಭವಿಸುತ್ತಿರುವ ಭಾರತೀಯರ ಟಾಪ್10 ಪಟ್ಟಿ.
/ಟೈಮ್ಸ್ ಆಫ್ ಇಂಡಿಯಾ

86ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 7,620 ಖೈದಿಗಳು

ಸುಮಾರು 7,620 ಜನ ಭಾರತೀಯರು ವಿಶ್ವದ 86ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಖೈದಿಗಳಾಗಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಅದರಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಭಾರತೀಯ ಖೈದಿಗಳನ್ನು ಜೈಲಿನಲ್ಲಿಟ್ಟಿರುವ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ). ಈ ದೇಶದಲ್ಲಿ ಭಾರತದ ಸುಮಾರು 1,690 ಜನ ಖೈದಿಗಳಾಗಿದ್ದಾರೆ. ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ಸುಮಾರು 1,575 ಜನ ಜೈಲುವಾಸ ಅನುಭವಿಸುತ್ತಿದ್ದಾರೆ.

ಇದಲ್ಲದೆ ಶ್ರೀಲಂಕಾ, ಚೀನಾ, ನೇಪಾಳ, ಪಾಕಿಸ್ತಾನ, ಥಾಯ್‌ಲ್ಯಾಂಡ್, ಮಲೇಶಿಯಾ, ಸಿಂಗಪೂರ್, ಇಂಡೋನೇಷಿಯಾ ಹಾಗೂ ಅಮೇರಿಕಾ ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲೂ ಭಾರೀ ಪ್ರಮಾಣದ ಭಾರತೀಯ ಖೈದಿಗಳಿದ್ದಾರೆ.

ಅರಬ್ ರಾಷ್ಟ್ರಗಳಲ್ಲಿ ಮದ್ಯ ಮಾರಾಟದ ಆರೋಪದ ಮೇಲೆ ಬಹುತೇಕ ಭಾರತೀಯರು ಜೈಲು ಪಾಲಾಗಿದ್ದಾರೆ. ಈ ರಾಷ್ಟ್ರಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದ್ದು ಮದ್ಯ ತಯಾರಿ ಹಾಗೂ ಮಾರಾಟ ಮಾಡುವುದು ಇಲ್ಲಿ ಕಾನೂನು ಬಾಹಿರ. ಅಲ್ಲದೆ ಕಳ್ಳತನ, ಹಣ ದುರ್ಬಳಕೆ ಸೇರಿದಂತೆ ಹಲವು ಗುರುತರ ಆರೋಪಗಳೂ ಇಲ್ಲಿ ಬಂಧನದಲ್ಲಿರುವ ಭಾರತೀಯರ ಮೇಲಿವೆ.

ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಟ ಮಾಡಿದ ಆರೋಪದ ಜೊತೆಗೆ ಮಾನವ ಕಳ್ಳ ಸಾಗಾಣೆ, ಅಕ್ರಮ ವಲಸೆ ಹಾಗೂ ವೀಸಾ ಉಲ್ಲಂಘನೆ ಆರೋಪದಲ್ಲಿ ನೇಪಾಳ, ಥಾಯ್‌ಲ್ಯಾಂಡ್, ಮಲೇಶಿಯಾ, ಸಿಂಗಪೂರ್, ಇಂಡೋನೇಷಿಯಾ ದೇಶಗಳಲ್ಲಿ ಭಾರತದ ಸುಮಾರು 1,048 ಕ್ಕೂ ಹೆಚ್ಚು ಜನ ಜೈಲುವಾಸ ಅನುಭವಿಸುತ್ತಿದ್ದರೆ, ಅಂತಹದ್ದೇ ಪ್ರಕರಣಗಳಲ್ಲಿ ಇಟಲಿಯಲ್ಲಿ 225, ಚೀನಾದಲ್ಲಿ 226 ಹಾಗೂ ಆಸ್ಟ್ರೇಲಿಯಾ, ಕೆನಡಾ, ಅಮೇರಿಕ ಹಾಗೂ ಇಂಗ್ಲೆಂಡ್‌ನಲ್ಲೂ ಸುಮಾರು 115 ಜನ ಭಾರತೀಯರು ಜೈಲು ಪಾಲಾಗಿದ್ದಾರೆ.

ಪಾಕ್‌ ಜೈಲುಗಳಲ್ಲಿದ್ದಾರೆ 471 ಜನ ಭಾರತೀಯರು

ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಭಾರತದ ಸುಮಾರು 471 ಜನ ಬಂಧಿತರಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಅಂಕಿಅಂಶ ನೀಡುತ್ತದೆ. ಇದರಲ್ಲಿ ಬಹುಪಾಲು ಜನ ಮೀನುಗಾರಿಕೆಯಲ್ಲಿ ತೊಡಗಿ ಜೈಲು ಪಾಲಾದರೆ, ಮತ್ತೆ ಕೆಲವರನ್ನು ಗೂಢಚರ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಅಂತಾರಾಷ್ಟ್ರೀಯ ಕಡಲತೀರದ ಗಡಿರೇಖೆಯನ್ನು ಉಲ್ಲಂಘಿಸಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಸೇನೆ ಭಾರತದ ಸುಮಾರು 390 ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟಿದೆ. ಇವರನ್ನು ಬಿಡುಗಡೆಗೊಳಿಸುವಂತೆ ಭಾರತ ಅನೇಕ ವರ್ಷಗಳಿಂದ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುತ್ತಿದೆಯಾದರೂ ಈವರೆಗೆ 26 ಜನ ಮೀನುಗಾರರ ಬಿಡುಗಡೆಯಾಗಿದೆಯೇ ಹೊರತು ಉಳಿದವರು ಪಾಕ್ ಜೈಲಿನಲ್ಲೇ ಕೊಳೆಯುತ್ತಿದ್ದಾರೆ.

ಇದು ಮೀನುಗಾರರ ಕತೆಯಾದರೆ ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಈವರೆಗೆ 83 ಭಾರತೀಯ ರಕ್ಷಣಾ ಸಿಬ್ಬಂದಿಗಳನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. ಇವರ ಬಿಡುಗಡೆಗಾಗಿ ಭಾರತ ಸತತ ಹೋರಾಟ ನಡೆಸುತ್ತಿದೆ. ಈ ಪ್ರಕರಣವನ್ನು ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ನ್ಯಾಯಾಲಯದ ಗಮನಕ್ಕೂ ತಂದಿದ್ದು, ಅವರ ಬಿಡುಗಡೆಗೆ ಒತ್ತಾಯಿಸುತ್ತಿದೆ. ಆದರೆ ಪಾಕಿಸ್ತಾನ ಸರಕಾರ ಆರಂಭದಿಂದಲೂ ಭಾರತದ ಆರೋಪವನ್ನು ನಿರಾಕರಿಸುತ್ತಿದ್ದು, ಗೂಢಚರ್ಯೆ ಆರೋಪದ ಮೇಲೆ ಪಾಕಿಸ್ತಾನ ಯಾರನ್ನೂ ಬಂಧಿಸಿಲ್ಲ ಎಂದೇ ವಾದಿಸುತ್ತಿದೆ. ಪರಿಣಾಮ ಕಳೆದು ಹೋದ 83 ಜನ ಅಧಿಕಾರಿಗಳ ಕುರಿತ ಮಾಹಿತಿ ಈವರೆಗೆ ಭಾರತ ಸರಕಾರಕ್ಕೆ ಲಭ್ಯವಾಗಿಲ್ಲ.

ಶ್ರೀಲಂಕಾ ಜೊತೆ ಮುಗಿಯದ ವ್ಯಾಜ್ಯ

ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಕಳ್ಳತನ, ಮಾನವ ಕಳ್ಳಸಾಗಾಣೆ, ಮಾದಕ ವಸ್ತುಗಳ ಕಳ್ಳ ಸಾಗಾಣೆ ಸೇರಿದಂತೆ ವಿವಿಧ ಕಾರಣಗಳಿಗೆ ಭಾರತೀಯರು ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಶ್ರೀಲಂಕಾದಲ್ಲಿ ಬಹುಪಾಲು ಜನ ಸಮುದ್ರ ಗಡಿ ಮೀರಿ ಮೀನುಗಾರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಮೀನುಗಾರಿಕೆ ಸಂಬಂಧಿಸಿದಂತೆ ಭಾರತ ಹಾಗೂ ಶ್ರೀಲಂಕಾ ನಡುವಿನ ವ್ಯಾಜ್ಯ ಎಂದಿಗೂ ಮುಗಿಯದ ಕಥೆಯಾಗಿ ಮುಂದುವರೆಯುತ್ತಲೇ ಇದೆ. ಈ ವ್ಯಾಜ್ಯಕ್ಕೆ ದಶಕಗಳ ಇತಿಹಾಸವಿದೆ. ಶ್ರೀಲಂಕಾ ಹಾಗೂ ತಮಿಳುನಾಡಿನ ನಡುವಿನ ಅಂತರ ಕೇವಲ 36 ಕಿಮೀ. ತಮಿಳುನಾಡಿನ ರಾಮೇಶ್ವರಂನಿಂದ ಪ್ರತಿನಿತ್ಯ ಮೀನುಗಾರರು ನೂರಾರು ಮೋಟಾರ್‌ ಬೋಟ್‌ಗಳಲ್ಲಿ ಮೀನಿನ ಶಿಕಾರಿಗೆ ಹೊರಡುತ್ತಾರೆ. ಆಳ ಸಮುದ್ರ ಮೀನುಗಾರಿಕೆ ಸೂಕ್ತವಾದ ಕಾರಣ ಮೀನುಗಾರರು ಸಮುದ್ರದ ಅಳ ಪ್ರದೇಶಕ್ಕೆ ತೆರಳಲೇಬೇಕಿರುತ್ತದೆ.

ಭಾರತ ಹಾಗೂ ಶ್ರೀಲಂಕಾ ನಡುವೆ ಈವರೆಗೆ ಅಂತಾರಾಷ್ಟ್ರೀಯ ಕಡಲತೀರದ ಗಡಿರೇಖೆಯನ್ನು ಗುರುತಿಸಿಲ್ಲ. ಹೀಗಾಗಿ ಮೀನುಗಾರರಿಗೂ ಈ ಕುರಿತು ಯಾವುದೇ ಖಚಿತತೆ ಇಲ್ಲದ ಕಾರಣ ಶ್ರೀಲಂಕಾ ಗಡಿ ಪ್ರದೇಶದ ಹತ್ತಿರದವರೆಗೆ ಮೀನುಗಾರಿಕೆ ನಡೆಸುತ್ತಾರೆ. ಆದರೆ ಈ ಸಮಯದಲ್ಲಿ ಗಸ್ತು ತಿರುಗುವ ಶ್ರೀಲಂಕಾ ನೌಕಾಪಡೆ ವಿನಾಕಾರಣ ಮೀನುಗಾರರ ಮೇಲೆ ಗುಂಡು ಹಾರಿಸುತ್ತದೆ, ಇಲ್ಲವೆ ಬಂಧಿಸುತ್ತದೆ.

ತಮಿಳುನಾಡು ಹಾಗೂ ಪುದುಚೇರಿಯ ಮೀನುಗಾರರು ತಮ್ಮ ಸಮುದ್ರ ವಲಯದಲ್ಲಿ ಆಳಕ್ಕೆ ಬಲೆ ಬೀಸಿ ಮೀನುಗಾರಿಕೆ ಮಾಡುತ್ತಿರುವುದರಿಂದ ಮೀನಿನ ನೆಲೆ ಬರಿದಾಗುತ್ತಿದೆ ಅಲ್ಲದೆ ಹರಳು ಸೇರಿದಂತೆ ಮತ್ತಿತರ ಸಂಪತ್ತನ್ನೂ ದೋಚಲಾಗುತ್ತಿದೆ ಎಂಬುದು ಶ್ರೀಲಂಕಾ ಆರೋಪ.

ಇದೇ ಕಾರಣಕ್ಕೆ ತಮಿಳುನಾಡಿನ ಮೀನಿನ ಹಡಗುಗಳು ಕಣ್ಣಿಗೆ ಬೀಳುತ್ತಿದ್ದಂತೆ ಶ್ರೀಲಂಕಾ ಸೇನೆ ಅವರ ಮೇಲೆ ಗುಂಡಿನ ದಾಳಿ ನಡೆಸುತ್ತದೆ. ಇಲ್ಲದಿದ್ದರೆ ಮೀನಿನ ಬಲೆಯನ್ನು ಹರಿದುಹಾಕಿ ಅವರನ್ನು ಬಂಧಿಸಿ ಕರೆದೊಯ್ಯುತ್ತದೆ. ಭಾರತೀಯ ವಿದೇಶಾಂಗ ಸಚಿವಾಲಯ ನೀಡುವ ಅಂಕಿಅಂಶಗಳ ಪ್ರಕಾರ 1976 ರಿಂದ ಈಚೆಗೆ ಸುಮಾರು 3,865 ಜನ ಮೀನುಗಾರರು ಶ್ರೀಲಂಕಾ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

2015ರಲ್ಲಿ ಲಂಕಾ ಸರಕಾರದ ಜೊತೆಗೆ ಮಾತುಕತೆ ನಡೆಸಿದ್ದ ಭಾರತದ ವಿದೇಶಾಂಗ ಸಚಿವಾಲಯ 36 ಜನ ಮೀನುಗಾರರನ್ನು ಬಿಡುಗಡೆ ಮಾಡಿಸುವಲ್ಲಿ ಸಫಲವಾಗಿತ್ತು. ಆದರೆ ಆ ನಂತರವೂ ಅನೇಕ ಜನರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಪ್ರಸ್ತುತ ಅಂಕಿಅಂಶಗಳ ಪ್ರಕಾರ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 200ಕ್ಕೂ ಹೆಚ್ಚು ಜನ ಶ್ರೀಲಂಕಾದ ಜೈಲಿನಲ್ಲಿದ್ದಾರೆ. ಇವರನ್ನು ಭಾರತಕ್ಕೆ ಕರೆತರಲು ಭಾರತ ಸರಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಮೀನುಗಾರರು ಮಾತ್ರ ಇನ್ನೂ ಮನೆಗೆ ಹಿಂದಿರುಗಿಲ್ಲ.

ಖೈದಿಗಳ ಬಿಡುಗಡೆಗೆ ಮಾಡಿರುವ ಖರ್ಚು

ಭಾರತೀಯ ಖೈದಿಗಳ ಬಿಡುಗಡೆಗಾಗಿ ಸರಕಾರ ಖರ್ಚು ಮಾಡಿರುವ ಹಣ.
ಭಾರತೀಯ ಖೈದಿಗಳ ಬಿಡುಗಡೆಗಾಗಿ ಸರಕಾರ ಖರ್ಚು ಮಾಡಿರುವ ಹಣ.
/ಟೈಮ್ಸ್ ಆಫ್ ಇಂಡಿಯಾ

ಖೈದಿಗಳ ವಾಪಾಸಾತಿ ಕಾಯಿದೆ-2003 ಜಾರಿಗೊಳಿಸಿದ ನಂತರ, ವಿದೇಶದ ಜೈಲುಗಳಲ್ಲಿರುವ ತಮ್ಮ ಸಂಬಂಧಿಕರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ವಿದೇಶಾಂಗ ಸಚಿವಾಲಯಕ್ಕೆ ಸುಮಾರು 170 ಅರ್ಜಿಗಳು ದಾಖಲಾಗಿವೆ. ಇವುಗಳ ಪೈಕಿ 63 ಭಾರತೀಯರನ್ನು ವಿದೇಶಿ ಜೈಲುಗಳಿಂದ ಬಿಡುಗಡೆಗೊಳಿಸಿ ದೇಶಕ್ಕೆ ಕರೆಸಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ. ಸಿಂಗ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಮಾಹಿತಿ ನೀಡಿದ್ದರು.

ಭಾರತ ಸರಕಾರ ಖೈದಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಈವರೆಗೆ ಸುಮಾರು 30 ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದೆ. ಅಮೇರಿಕ ಸರಕಾರದ ಬಳಿಯೂ ಮಾತುಕತೆ ನಡೆಸಿದೆ. ಅಲ್ಲದೆ ಈ ಪ್ರಕ್ರಿಯೆಗಾಗಿ ಸರಕಾರ ಮಾರ್ಚ್ 2015 ರಿಂದ ಮಾರ್ಚ್ 2018ರ ಅವಧಿಯಲ್ಲಿ ಸುಮಾರು 2.72 ಕೋಟಿ ಹಣವನ್ನು ವ್ಯಯಿಸಿದೆ ಎಂದು ಅವರು ತಿಳಿಸಿದ್ದರು.

ಭಾರತದಲ್ಲಿರುವ ವಿದೇಶಿ ಖೈದಿಗಳು

ಭಾರತೀಯರು ವಿದೇಶದಲ್ಲಿ ಬಂಧಿಯಾಗಿರುವಂತೆ ಇಲ್ಲೂ ಸಹ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವರ ಸಂಖ್ಯೆ ದೊಡ್ಡದಿದೆ. ಭಾರತದ ವಿವಿಧ ರಾಜ್ಯಗಳ ಜೈಲುಗಳಲ್ಲಿ ಸುಮಾರು 6,148 ಜನ ವಿದೇಶಿಗರು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಜನ ಪಶ್ಚಿಮ ಬಂಗಾಳದ ಜೈಲಿನಲ್ಲಿದ್ದಾರೆ.

ಭಾರತದಲ್ಲಿ ಬಂಧಿಯಾಗಿರುವ ವಿದೇಶಿ ಪ್ರಜೆಗಳ ಅಂಕಿಅಂಶ.
ಭಾರತದಲ್ಲಿ ಬಂಧಿಯಾಗಿರುವ ವಿದೇಶಿ ಪ್ರಜೆಗಳ ಅಂಕಿಅಂಶ.
/ಟೈಮ್ಸ್ ಆಫ್ ಇಂಡಿಯಾ

ಪಶ್ಚಿಮ ಬಂಗಾಳದ ವಿವಿಧ ಜೈಲುಗಳಲ್ಲಿ ಸುಮಾರು 3,415 ಜನ ವಿದೇಶಿ ಖೈದಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ದೇಶದ ವಿವಿಧ ಜೈಲಿನಲ್ಲಿರುವ ವಿದೇಶಿ ಅಪರಾಧಿಗಳ ಪೈಕಿ ಶೇ.56 ರಷ್ಟು ಜನ ಪಶ್ಚಿಮ ಬಂಗಾಳದಲ್ಲೇ ಇದ್ದಾರೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 575 ಜನ ಶಿಕ್ಷೆ ಅನುಭವಿಸುತ್ತಿದ್ದಾರೆ.

ಪಾಕಿಸ್ತಾನದ ಸುಮಾರು 36 ಜನ ವಿವಿಧ ಪ್ರಕರಣಗಳ ಅಡಿಯಲ್ಲಿ ಭಾರತದ ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಇವರನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ಸರಕಾರ ಭಾರತದ ಜೊತೆಗೆ ನಿರಂತರ ಮಾತುಕತೆ ನಡೆಸುತ್ತಲೇ ಇದೆ. ಆದರೆ ಖೈದಿಯ ರಾಷ್ಟ್ರೀಯತೆ ಖಚಿತವಾಗದ ಹೊರತು ವಿದೇಶಿ ಖೈದಿಗಳನ್ನು ಹಸ್ತಾಂತರ ಮಾಡುವುದು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ಖೈದಿಗಳ ರಾಷ್ಟ್ರೀಯತೆ ಸಾಭೀತುಪಡಿಸುವಲ್ಲಿ ಅಲ್ಲಿನ ಸರಕಾರ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾಮ ಈ ಎಲ್ಲಾ ಖೈದಿಗಳು ಭಾರತದಲ್ಲೇ ಕೊಳೆಯುವಂತಾಗಿದೆ.

ಭಾರತದಲ್ಲಿ ಬಂಧಿಯಾಗಿರುವ ವಿದೇಶಿ ಪ್ರಜೆಗಳ ರಾಜ್ಯವಾರು ಪಟ್ಟಿ.
ಭಾರತದಲ್ಲಿ ಬಂಧಿಯಾಗಿರುವ ವಿದೇಶಿ ಪ್ರಜೆಗಳ ರಾಜ್ಯವಾರು ಪಟ್ಟಿ.
/ಟೈಮ್ಸ್ ಆಫ್ ಇಂಡಿಯಾ.

ಅಪರಾಧಿಗಳ ವ್ಯಕ್ತಿತ್ವವನ್ನು ಬದಲಿಸುತ್ತದೆ ಎಂಬ ಕಾರಣಕ್ಕೆ ಖೈದಿಗಳಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ. ಅಲ್ಲದೆ ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಓರ್ವ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಯಾವುದೇ ದೇಶದ ನ್ಯಾಯಾಂಗದ ತಾತ್ವಿಕ ನೆಲೆ. ಆ ನಿಟ್ಟಿನಲ್ಲಿ ವಿದೇಶದಲ್ಲಿ ಬಂಧಿತರಾಗಿರುವ ಬಹುಪಾಲು ಭಾರತೀಯರಿಗೆ ಅಂತಹ ಅಪರಾಧ ಹಿನ್ನೆಲೆಯೂ ಇಲ್ಲ.

ವಿದೇಶದ ಜೈಲಿನಲ್ಲಿರುವ ಭಾರತೀಯರನ್ನು ವಾಪಾಸ್ ದೇಶಕ್ಕೆ ಕರೆಸಿಕೊಳ್ಳುವಲ್ಲಿ ಕೇಂದ್ರ ಸರಕಾರ ಸತತ ಪ್ರಯತ್ನದಲ್ಲಿ ತೊಡಗಿದೆ. ಖೈದಿಗಳ ವಾಪಾಸಾತಿ ಕಾಯಿದೆ-2003 ಇದಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿದೆ. ಇದರ ಹಿನ್ನೆಲೆಯಲ್ಲಿ ಅರಬ್ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ಲಿನ ಜೈಲಿನಲ್ಲಿರುವ ಖೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ. ಇಂಥದ್ದೇ ನಡೆಯನ್ನು ಉಳಿದ ದೇಶಗಳೂ ತೋರಿದರೆ ನಿರಪರಾಧಿಗಳು ಸ್ವದೇಶಗಳಿಗೆ ಮರಳಲು ಅನುಕೂಲವಾಗುತ್ತದೆ.

ಮಾಹಿತಿ ಮೂಲ: ಟೈಮ್ಸ್ ಆಫ್ ಇಂಡಿಯಾ