samachara
www.samachara.com
ಎಮರ್ಜೆನ್ಸಿ ವಿರುದ್ಧ 16 ರಾಜ್ಯಗಳು; ಮೆಕ್ಸಿಕೋ ಗೋಡೆ ಇಕ್ಕಟ್ಟಿನಲ್ಲಿ ‘ವಿಲಕ್ಷಣ ಅಧ್ಯಕ್ಷ’!
COVER STORY

ಎಮರ್ಜೆನ್ಸಿ ವಿರುದ್ಧ 16 ರಾಜ್ಯಗಳು; ಮೆಕ್ಸಿಕೋ ಗೋಡೆ ಇಕ್ಕಟ್ಟಿನಲ್ಲಿ ‘ವಿಲಕ್ಷಣ ಅಧ್ಯಕ್ಷ’!

ಟ್ರಂಪ್‌ ನಿರ್ಮಾಣ ಮಾಡಲು ಹೊರಟಿರುವ ಗೋಡೆಗೆ ನಮ್ಮ ಪಾಲಿನ ಮಿಲಿಯನ್‌ ಡಾಲರ್‌ ಹಣ ಖರ್ಚಾಗಲಿದೆ. ಇದು ಇಲ್ಲಿನ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯಗಳು ಆರೋಪಿಸಿವೆ.

ಪಟ್ಟು ಬಿಡದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೆಕ್ಸಿಕೋ ಗಡಿಯಲ್ಲಿ ತಡೆಗೋಡೆ ನಿರ್ಮಿಸಲು ಅಮೆರಿಕಾ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾರೆ. ಆದರೆ ಟ್ರಂಪ್‌ ನಿರ್ಧಾರಗಳಿಗೆಲ್ಲಾ ಕಲ್ಲು ಹಾಕುವ ಅಮೆರಿಕಾದ ಒಕ್ಕೂಟ ವ್ಯವಸ್ಥೆ ಇದಕ್ಕೂ ಅಪಸ್ವರ ಎತ್ತಿದೆ. 50 ರಲ್ಲಿ 16 ರಾಜ್ಯಗಳು ಟ್ರಂಪ್‌ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದು ಕಾನೂನು ಸಮರಕ್ಕೆ ಇಳಿದಿವೆ.

ಈ ಕಾನೂನು ಹೋರಾಟದ ನೇತೃತ್ವವನ್ನು ಕ್ಯಾಲಿಫೋರ್ನಿಯಾ ವಹಿಸಿಕೊಂಡಿದ್ದು ಇಲ್ಲಿನ ನಾರ್ಥರ್ನ್‌ ಡಿಸ್ಟ್ರಿಕ್ಟ್‌ ನ್ಯಾಯಾಲಯದಲ್ಲಿ ದಾವೆ ಹೂಡಿದೆ.

ಚುನಾವಣಾ ಸಂದರ್ಭದಲ್ಲಿ ಮೆಕ್ಸಿಕೋ ಗಡಿಯಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಟ್ರಂಪ್‌ ಭರವಸೆ ನೀಡಿದ್ದರು. ಆದರೆ ಇದಕ್ಕೆ ಸಂಸತ್‌ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ನ್ನು ಪಕ್ಕಕ್ಕೆ ತಳ್ಳಿ ತಡೆಗೋಡೆ ನಿರ್ಮಾಣಕ್ಕೆ ಬೇಕಾದ ಬಜೆಟ್‌ಗೆ ಅನುಮೋದನೆ ಪಡೆದುಕೊಳ್ಳಲು ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಆದರೆ ಇದರ ವಿರುದ್ಧ ಸಾಧ್ಯವಿರುವ ಎಲ್ಲಾ ಹೋರಾಟಗಳನ್ನು ನಡೆಸುವುದಾಗಿ ಡೆಮಾಕ್ರಟಿಕ್‌ ಪಕ್ಷದ ಸದಸ್ಯರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್‌ ಕ್ಸೇವಿಯರ್‌ ಬೆಕೇರಾ, ಅಧ್ಯಕ್ಷರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದಂತೆ ಟ್ರಂಪ್‌ಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

“ದೇಶದ ಜನರಿಗಾಗಿ ಕಾಂಗ್ರೆಸ್‌ ಮೀಸಲಿರಿಸಿದ ತೆರಿಗೆ ಪಾವತಿದಾರರ ಹಣವನ್ನು ಏಕಪಕ್ಷೀಯವಾಗಿ ದರೋಡೆ ಮಾಡಲು ಹೊರಟ ಅಧ್ಯಕ್ಷ ಟ್ರಂಪ್‌ರನ್ನು ತಡೆಯಲು ನಾವು ಅವರ ವಿರುದ್ಧ ದಾವೆ ಹೂಡಿದ್ದೇವೆ” ಎಂದು ಬೆಕೇರಾ ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಕಾನೂನು ಸಮರ ಮುಂದುವರಿದಿದ್ದು, ತುರ್ತು ಪರಿಸ್ಥಿತಿ ಘೋಷಣೆ ಸಂಬಂಧ ಕೆಲಸ ಮುಂದುವರಿಸದಂತೆ ಟ್ರಂಪ್‌ರನ್ನು ತಡೆಯಲು ಪ್ರಾಥಮಿಕ ತಡೆಯಾಜ್ಞೆ ಕೋರಲಾಗಿದೆ.

ಮೆಕ್ಸಿಕೋ ಗೋಡೆ:

ಈ ಹಿಂದೆಯೇ ಮೆಕ್ಸಿಕೋ ತಡೆಗೋಡೆಗೆ ಅಮೆರಿಕಾ ಕಾಂಗ್ರೆಸ್‌ನ ಅನುಮೋದನೆ ಪಡೆದುಕೊಳ್ಳಲು ಟ್ರಂಪ್‌ ಮುಂದಾಗಿದ್ದರು. ಆದರೆ ಅಧ್ಯಕ್ಷರ ತೀರ್ಮಾನಕ್ಕೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ತೀರ್ಮಾನಕ್ಕೆ ಅಧ್ಯಕ್ಷರು ಕೈ ಹಾಕಿದ್ದರು. ಇದೀಗ ಅದಕ್ಕೂ 16 ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.

ಮೆಕ್ಸಿಕೋ ಮತ್ತು ಅಮೆರಿಕಾ ನಡುವಿನ ತಡೆಗೋಡೆ.
ಮೆಕ್ಸಿಕೋ ಮತ್ತು ಅಮೆರಿಕಾ ನಡುವಿನ ತಡೆಗೋಡೆ.
/ಮೀಡಿಯಂ ಡಾಟ್‌ ಕಾಂ

ಕ್ಯಾಲಿಫೋರ್ನಿಯಾದ ಜತೆ ಕೊಲೊರಾಡೋ, ಕನೆಕ್ಟಿಕಟ್‌, ಡೆಲಾವೇರ್‌, ಹವಾಯ್‌, ಇಲಿನೋಸ್‌, ಮೈನೆ, ಮೇರಿಲ್ಯಾಂಡ್‌, ಮಿನ್ನೆಸೋಟಾ, ನೇವಡ, ನ್ಯೂಜೆರ್ಸಿ, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್‌, ಒರೆಗಾನ್‌, ವರ್ಜೀನಿಯಾ, ಮಿಷಿಗನ್‌ ರಾಜ್ಯಗಳು ಟ್ರಂಪ್‌ ವಿರುದ್ಧ ದಾವೆ ಹೂಡಿವೆ.

ಟ್ರಂಪ್‌ ನಿರ್ಮಾಣ ಮಾಡಲು ಹೊರಟಿರುವ ಗೋಡೆಗೆ ನಮ್ಮ ಪಾಲಿನ ಮಿಲಿಯನ್‌ ಡಾಲರ್‌ ಹಣ ಖರ್ಚಾಗಲಿದೆ. ಇದು ಇಲ್ಲಿನ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯಗಳು ಆರೋಪಿಸಿವೆ.

ಇದಕ್ಕೂ ಮೊದಲು ಶುಕ್ರವಾರ ಪಬ್ಲಿಕ್‌ ಸಿಟಿಜನ್‌ ಎಂಬ ನ್ಯಾಯಾಂಗ ಸಂಸ್ಥೆಯ ಸದಸ್ಯರು ಟೆಕ್ಸಾಸ್‌ನ ಮೂವರು ಭೂ ಮಾಲಿಕರ ಪರವಾಗಿ ಕೋರ್ಟ್‌ ಮೆಟ್ಟಿಲೇರಿದ್ದರು. ಇವರ ಜಮೀನಿನ ಮೂಲಕ ಈ ತಡೆಗೋಡೆ ಹಾದುಹೋಗಲಿದೆ ಎಂಬ ಕಾರಣಕ್ಕೆ ಇವರು ಕೋರ್ಟ್‌ ಮೊರೆ ಹೋಗಿದ್ದರು.

ಇದರ ಜತೆಗೆ ಸೆಂಟರ್‌ ಫಾರ್‌ ಬಯೋಲಾಜಿಕಲ್‌ ಡೈವರ್ಸಿಟಿ, ಬಾರ್ಡರ್‌ ನೆಟ್ವರ್ಕ್‌ ಫಾರ್‌ ಹ್ಯೂಮನ್‌ ರೈಟ್ಸ್‌ ಮತ್ತು ಅಮೆರಿಕನ್‌ ಸಿವಿಲ್‌ ಲಿಬರ್ಟೀಸ್‌ ಯೂನಿಯನ್‌ ಕೂಡ ಟ್ರಂಪ್‌ ವಿರುದ್ಧ ದಾವೆ ಹೂಡಿವೆ. ಇದಕ್ಕೀಗ ರಾಜ್ಯಗಳೂ ಧ್ವನಿ ಗೂಡಿಸಿದ್ದು ಟ್ರಂಪ್‌ ನಿರ್ಧಾರಕ್ಕೆ ಕಾನೂನು ಮಾರ್ಗಗಳು ಅಡ್ಡಿಯಾಗಿ ಕುಳಿತಿವೆ.

ತುರ್ತು ಪರಿಸ್ಥಿತಿ ಘೋಷಣೆ ಏಕೆ?

ಶುಕ್ರವಾರ ಶ್ವೇತಭವನದ ಗುಲಾಬಿ ಉದ್ಯಾನದಲ್ಲಿ ಟ್ರಂಪ್‌ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇದಕ್ಕವರು, ‘ತುರ್ತುಪರಿಸ್ಥಿತಿ ಘೋಷಣೆಯಿಂದ ತಡೆಗೋಡೆಗೆ 8 ಬಿಲಿಯನ್‌ ಡಾಲರ್‌ (57 ಸಾವಿರ ಕೋಟಿ ರೂ.) ಹಣ ಸಿಗಲಿದೆ’ ಎಂದಿದ್ದರು. ಆದರೆ 3,200 ಕಿಲೋಮೀಟರ್‌ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಬೇಕಾದ 23 ಬಿಲಿಯನ್‌ ಡಾಲರ್‌ಗಿಂತ ಇದು ತೀರಾ ಕಡಿಮೆಯಾಗಿದೆ ಎಂಬುದು ವಾಸ್ತವ.

ಇನ್ನು ತಮ್ಮ ನಿರ್ಧಾರಕ್ಕೆ ಕಾನೂನಿನ ತೊಡಕು ಎದುರಾಗಲಿದೆ ಎಂಬುದು ಟ್ರಂಪ್‌ಗೂ ಗೊತ್ತಿತ್ತು. ‘ತುರ್ತುಪರಿಸ್ಥಿತಿ ಅನಿವಾರ್ಯವಾಗಿರಲಿಲ್ಲ. ಆದರೆ ತಡೆಗೋಡೆಗೆ ಬೇಕಾದ ಹಣವನ್ನು ಆದಷ್ಟು ಬೇಗ ಹೊಂದಿಸುವ ದೃಷ್ಟಿಯಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದೇನೆ,’ ಎಂದು ಅವರು ಸಮಜಾಯಿಷಿ ನೀಡಿದ್ದರು. ಈ ಕಾರಣವೇ ಅವರಿಗೀಗ ನ್ಯಾಯಾಲಯದಲ್ಲಿ ತಿರುಗುಬಾಣವಾಗುವ ಸಾಧ್ಯತೆ ಇದೆ.

ಏನಿದು ರಾಷ್ಟ್ರೀಯ ತುರ್ತುಪರಿಸ್ಥಿತಿ?

ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಬಳಕೆ ಮಾಡಲೆಂದು ‘ರಾಷ್ಟ್ರೀಯ ತುರ್ತು ಪರಿಸ್ಥಿತಿ ಕಾಯ್ದೆ’ ಅಮೆರಿಕಾದಲ್ಲಿದೆ. ಅಮೆರಿಕಾದ ದಕ್ಷಿಣ ಗಡಿಯಲ್ಲಿ ವಲಸೆ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ತಾನು ಇದನ್ನು ಜಾರಿ ಮಾಡುತ್ತಿದ್ದೇನೆ ಎಂಬುದು ಟ್ರಂಪ್‌ ವಾದ. ಆದರೆ ಇದು ಸುಳ್ಳು ಎನ್ನುತ್ತಿದ್ದಾರೆ ವಲಸೆ ತಜ್ಞರು ಮತ್ತು ಅಮೆರಿಕಾದ ಸರಕಾರಿ ಇಲಾಖೆಗಳು. ಅಮೆರಿಕಾದಲ್ಲಿ ವಾಸವಾಗಿರುವ ಹೆಚ್ಚಿನ ವಲಸಿಗರು ವೀಸಾಗಳ ಮೇಲೆ ಬಂದು ವೀಸಾ ಅವಧಿ ಕೊನೆಗೊಂಡ ನಂತರ ದೇಶದಲ್ಲಿ ಉಳಿದುಕೊಂಡವರು. ಮೆಕ್ಸಿಕೋದಿಂದ ವಲಸೆ ಬಂದವರಲ್ಲ ಎಂಬುದು ಇವರ ವಾದ.

ಆದರೂ ತಮ್ಮ ಚುನಾವಣಾ ಭರವಸೆ ಪೂರ್ಣಗೊಳಿಸಲು ಟ್ರಂಪ್‌ ಈ ವಿಶೇಷ ಅಧಿಕಾರದ ಬೆನ್ನತ್ತಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಮೂಲಕ ವಿಶೇಷ ಅಧಿಕಾರದೊಂದಿಗೆ ಸಾಮಾನ್ಯ ರಾಜಕೀಯ ಪ್ರಕ್ರಿಯೆಯನ್ನು ಬದಿಗೊತ್ತಿ ತಡೆಗೋಡೆಗೆ ಬೇಕಾದ ಹಣವನ್ನು ಹೊಂದಿಸಲು ಅವರು ಮುಂದಾಗಿದ್ದಾರೆ. ಈ ನಿರ್ಧಾರ ರಕ್ಷಣೆ ಮತ್ತು ವಿಪತ್ತು ಪರಿಹಾರಕ್ಕೆಂದು ಮೀಸಲಿರುವ ಹಣವನ್ನು ತಡೆಗೋಡೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಅನುವಾಗಲಿದೆ.

ಈ ಹಿಂದಿನ ಅಧ್ಯಕ್ಷರುಗಳು ವಿದೇಶಿ ನೀತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಅಸ್ತ್ರಗಳನ್ನು ಬಳಸಿದ್ದರು. ಭಯೋತ್ಪಾದನೆ ತಡೆಗಟ್ಟಲು, ಮಾನವ ಹಕ್ಕುಗಳ ಉಲ್ಲಂಘನೆ ಜತೆ ಗುರುತಿಸಿಕೊಂಡ ದೇಶಗಳಲ್ಲಿ ಹೂಡಿಕೆ ತಡೆ ಹಿಡಿಯಲು ಈ ಮಾರ್ಗವನ್ನು ಅನುಸರಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಯೋಜನೆಯೊಂದನ್ನು ಪೂರ್ಣಗೊಳಿಸಲು ವಿಲಕ್ಷಣ ಅಧ್ಯಕ್ಷ ಎನಿಸಿರುವ ಟ್ರಂಪ್‌ ತುರ್ತು ಪರಿಸ್ಥಿತಿ ಹೇರಿದ್ದಾರೆ.