samachara
www.samachara.com
ಬಿಬಿಎಂಪಿ ‘ಪಿಂಕ್‌ ಬಜೆಟ್‌’: ಸಿಲಿಕಾನ್‌ ಸಿಟಿಗೆ ಹೊಸತೇನೇನು?
COVER STORY

ಬಿಬಿಎಂಪಿ ‘ಪಿಂಕ್‌ ಬಜೆಟ್‌’: ಸಿಲಿಕಾನ್‌ ಸಿಟಿಗೆ ಹೊಸತೇನೇನು?

ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

ಮಹಿಳಾ ಸ್ವಾವಲಂಬನೆಗೆ ಸ್ವಂತ ಉದ್ಯೋಗ, ಆರ್ಥಿಕ ಭದ್ರತೆಗೆ ಮಹಾಲಕ್ಷ್ಮೀ ಯೋಜನೆ, ಕತ್ತಲಿನಿಂದ ಬೆಳಕಿನೆಡೆಗೆ ರೋಶಿನಿ ಯೋಜನೆ, ಸ್ವಯಂ ಉದ್ಯೋಗ ಹೊಂದಲು ಮಹಿಳೆಯರಿಗೆ ಸಂಚಾರಿ ಕ್ಯಾಂಟಿನ್ ವಾಹನಗಳ ಅನ್ನಪೂರ್ಣೇಶ್ವರಿ ಯೋಜನೆ ಸೇರಿದಂತೆ ಮಹಿಳಾ ಕಲ್ಯಾಣಕ್ಕೆ ಒತ್ತು ನೀಡುವ ಹಲವು ಮಹತ್ವದ ಯೋಜನೆಗಳನ್ನು ಇಂದು ಬಿಬಿಎಂಪಿ ಮೈತ್ರಿ ಆಡಳಿತದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಮೊದಲ ಮಹಿಳಾ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಹಿಳೆಯರ ಮನಗೆಲ್ಲುವ 'ಪಿಂಕ್ ಬಜೆಟ್' ಮಂಡಿಸಿದರು.

3,500 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ, ಸುಮಾರು ನೂರು ಕೋಟಿಯಷ್ಟು ಬಾಕಿ ತೆರಿಗೆ ವಸೂಲಿ, ವಿದ್ಯಾಸಂಸ್ಥೆಗಳಿಗೆ ಪೂರ್ಣ ಪ್ರಮಾಣದ ತೆರಿಗೆ, ತುಮಕೂರು ರಸ್ತೆಯಲ್ಲಿ ಶಿವಕುಮಾರ ಸ್ವಾಮೀಜಿ ಪುತ್ಥಳಿ ಸ್ಥಾಪನೆ ಸೇರಿದಂತೆ ಹಲವು ಘೋಷಣೆಗಳನ್ನೊಳಗೊಂಡ 10,691.82 ಕೋಟಿ ರೂಪಾಯಿ ಮೊತ್ತದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2019- 20ನೇ ಸಾಲಿನ ಬಜೆಟ್ ಸೋಮವಾರ ಮಂಡನೆಯಾಯಿತು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಒಟ್ಟು ಆದಾಯ 10,691.82 ಕೋಟಿ ರೂಪಾಯಿ. ಒಟ್ಟು ವೆಚ್ಚ 10,688.63 ಕೋಟಿ ರೂಪಾಯಿ. 3.19 ಕೋಟಿ ರೂಪಾಯಿಯ ಉಳಿತಾಯದ ಬಜೆಟ್ ಇದಾಗಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಹಲವು ಸುಧಾರಣಾ ಕ್ರಮಗಳನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹಳೆಯ ತೆರಿಗೆ ಬಾಕಿ 100 ಕೋಟಿ ರೂಪಾಯಿ ವಸೂಲಿಗೆ ಗುರಿ ನಿಗದಿಪಡಿಸಲಾಗಿದೆ. ಸಂಪನ್ಮೂಲ ಹೆಚ್ಚಿಸಲು ಕಂದಾಯ ಜಾಗೃತ ದಳಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

ಖಾತಾ ದಾಖಲೆಗಳ ಲೆಕ್ಕ ಪರಿಶೋಧನೆ, ಆಸ್ತಿ ತೆರಿಗೆ ಬಾಕಿ ವಸೂಲಿಗೆ ವಸೂಲಾತಿ ಆಂದೋಲನ, 100 ಕಟ್ಟಡಗಳಿಗೆ ಟೋಟಲ್ ಸ್ಟೇಷನ್ ಸರ್ವೆ, 400 ಕೋಟಿ ರೂಪಾಯಿ ಬಾಕಿ ಸುಧಾರಣಾ ಶುಲ್ಕ ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಿ ಕಟ್ಟಡಗಳ ಮೇಲೆ ಸೇವಾ ಶುಲ್ಕ 75 ಕೋಟಿ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿದೆ. ಒಎಫ್‌ಸಿ ಕೇಬಲ್ ಶುಲ್ಕ 175 ಕೋಟಿ, ಮೊಬೈಲ್ ಟವರ್‌ನಿಂದ 50 ಕೋಟಿ, ಕೇಂದ್ರ ಸರಕಾರದ ಅನುದಾನ 405.76 ಕೋಟಿ, ರಾಜ್ಯ ಸರಕಾರದ ಅನುದಾನ 3,200.35 ಕೋಟಿ ರೂಪಾಯಿಯ ಬಜೆಟ್ ಇದಾಗಿದೆ.

ಕಲ್ಯಾಣ ಕಾರ್ಯಕ್ರಮಗಳಿಗೆ ಶೇ 24.10 ಅನುದಾನದಲ್ಲಿ ಒಟ್ಟಾರೆ 645.97 ಕೋಟಿ ರೂಪಾಯಿ ಮೀಸಲಿಡಲು ನಿರ್ಧರಿಸಲಾಗಿದೆ. ಪ್ರತಿ ವಾರ್ಡ್‌ಗೆ 10 ಒಂಟಿ ಮನೆಗಳ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ ಮೀಸಲು, ಎಸ್‌ಸಿ/ಎಸ್‌ಟಿ ಜನರ ಅಭಿವೃದ್ಧಿಗಾಗಿ 60 ಕೋಟಿ ರೂಪಾಯಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮನೆಗಳ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಸ್ವಯಂ ಉದ್ಯೋಗ ಉತ್ತೇಜನಕ್ಕಾಗಿ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಸಂಚಾರಿ ಕ್ಯಾಂಟಿನ್ ಒದಗಿಸಲು ನಿರ್ಧರಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನಾಲ್ಕು ವಾಹನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ 5 ಕೋಟಿ ರೂಪಾಯಿ ನಿಗದಿಯಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸ್ವಾವಲಂಬನೆ ಹೊಂದಲು ತಳ್ಳುಗಾಡಿಗಳನ್ನು ನೀಡಲು 4 ಕೋಟಿ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ 75 ಕೋಟಿ ಮೀಸಲಿಡಲಾಗಿದೆ. ರಾಷ್ಟ್ರೀಯ- ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಅಂಗವಿಕಲರು ಮತ್ತು ಮಂಗಳಮುಖಿಯರ ಕಲ್ಯಾಣಕ್ಕೆ 1 ಕೋಟಿ ರೂಪಾಯಿ ಅನುದಾನ ನೀಡಲು ಬಿಬಿಎಂಪಿ ಮುಂದಾಗಿದೆ.

ಪ್ರತಿ ವಾರ್ಡ್‌ಗೆ 50 ಬೈಸಿಕಲ್ ವಿತರಣೆಗಾಗಿ 40 ಕೋಟಿ, 50 ಟೈಲರಿಂಗ್ ಯಂತ್ರಗಳ ವಿತರಣೆಗೆ 8 ಕೋಟಿ, ಹಿರಿಯರ ನಾಗರಿಕರ ಕಲ್ಯಾಣಕ್ಕೆ 5 ಕೋಟಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ 1.50 ಕೋಟಿ, ಪಾಲಿಕೆಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಬಸ್‌ಪಾಸ್‌ಗಾಗಿ 1 ಕೋಟಿ ರೂ. ಅನುದಾನ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಪಿಯುಸಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 1 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪಾಲಿಕೆಯ ಶಾಲಾ-ಕಾಲೇಜುಗಳ ದುರಸ್ತಿ, ಮೂಲ ಸೌಕರ್ಯಕ್ಕಾಗಿ 25 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.

ಸೋಮವಾರ ಬಜೆಟ್ ಮಂಡಿಸಿದ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ
ಸೋಮವಾರ ಬಜೆಟ್ ಮಂಡಿಸಿದ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ

ಮಹಾಲಕ್ಷ್ಮೀ ಯೋಜನೆ:

ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಲ್ಲಿ 01.04.2019 ರಿಂದ 31.03.2020ರವರೆಗೆ ಜನಿಸಿದ ಹೆಣ್ಣು ಮಗುವಿಗೆ 1 ಲಕ್ಷ ರೂಪಾಯಿ ಬಾಂಡ್ ವಿತರಣೆ, ಆರೋಗ್ಯ ಕವಚ ಸಂಚಾರಿ ಬಸ್ ಖರೀದಿಗೆ 3 ಕೋಟಿ, ಎರಡು ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆಗೆ 25 ಕೋಟಿ, ಬೈಕ್, ಆ್ಯಂಬುಲೆನ್ಸ್ ಖರೀದಿಗೆ 2 ಕೋಟಿ, ಕಿದ್ವಾಯಿ ಆಸ್ಪತ್ರೆ, ಪಾಲಿಕೆಯ ಧರ್ಮಶಾಲೆಗಳ ನವೀಕರಣಕ್ಕೆ 5 ಕೋಟಿ ಮೀಸಲಿಡಲಾಗಿದೆ.

ಎಸ್‌ಬಿಎಸ್, ರಾಜೀವ್‌ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಧರ್ಮಶಾಲೆ ನಿರ್ಮಿಸಲು 5 ಕೋಟಿ, ದುಶ್ಚಟ ನಿವಾರಣಾ ಕೇಂದ್ರ ಪ್ರಾರಂಭಕ್ಕೆ 2 ಕೋಟಿ, ತುಮಕೂರು ರಸ್ತೆಯಲ್ಲಿ ಶಿವಕುಮಾರ ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ 5 ಕೋಟಿ, ಸ್ವಾಮೀಜಿ ಹೆಸರಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ಹಾಗೂ ಸಂಘಗಳಿಗೆ ನಗದು ಪ್ರಶಸ್ತಿ ನೀಡಿಲು 25 ಲಕ್ಷ ರೂಪಾಯಿ ಮೀಸಲಿರಿಸಲಾಗಿದೆ. ಕಾರ್ಡ್‌ ರಸ್ತೆಯಿಂದ ಕುರುಬರಹಳ್ಳಿ ಮೂಲಕ ರಿಂಗ್‌ರಸ್ತೆಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್‌ಗೆ ಬಾಲಗಂಗಾಧರನಾಥ ಸ್ವಾಮೀಜಿ ಹೆಸರನ್ನು ನಾಮಕರಣ ಹಾಗೂ ಪುತ್ಥಳಿ ಸ್ಥಾಪನೆಗೆ ಉದ್ದೇಶಿಸಲಾಗಿದೆ.

ಪಾಲಿಕೆಯ ಎಲ್ಲ ಕಾರ್ಯಕ್ರಮಗಳ ಪ್ರಚಾರಕ್ಕಾಗಿ 'ಬಿಬಿಎಂಪಿ ಬೆಳಕು' ಎಂಬ ಮಾಸಿಕ ಪತ್ರಿಕೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ನಗರದ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ವಿವಿಧ ನಿರ್ವಹಣಾ ಘಟಕಗಳ ಅಭಿವೃದ್ಧಿಗೆ 110 ಕೋಟಿ ರೂ, ಆಸ್ತಿ ಮತ್ತು ಸ್ವತ್ತುಗಳ ನಿರ್ವಹಣೆ, ಭೂ ಪರಿಹಾರ ನೀಡುವ ಸಲುವಾಗಿ 50 ಕೋಟಿ, ಪಾಲಿಕೆ ಒಡೆತನದ ಆಸ್ತಿಗಳ ಲೆಕ್ಕ ಪರಿಶೋಧನೆ ಮತ್ತು ಮೌಲ್ಯಮಾಪನಕ್ಕೆ 5 ಕೋಟಿ ಮೀಸಲಿರಿಸಲಾಗಿದೆ.

ಉದ್ಯಾನಗಳ ನಿರ್ವಹಣೆಗೆ 34 ಕೋಟಿ, ಹಸಿರು ಬೆಂಗಳೂರು ನಿರ್ಮಾಣಕ್ಕೆ 10 ಲಕ್ಷ ಗಿಡಗಳನ್ನು ನೆಡಲು 3 ಕೋಟಿ, ಕೆರೆಗಳ ನಿರ್ವಹಣೆಗೆ 25 ಕೋಟಿ ಅನುದಾನ ನೀಡಲಾಗಿದೆ. ಎಲ್ಲಾ ವಾರ್ಡ್‌ಗಳ ನಿರ್ವಹಣಾ ಕಾಮಗಾರಿಗಳಿಗೆ ಹೊಸ ವಲಯದ ವಾರ್ಡ್‌ಗಳಿಗೆ ತಲಾ 3 ಕೋಟಿ, ಹಳೆಯ ವಲಯದ ವಾರ್ಡ್‌ಗಳಿಗೆ ತಲಾ 2 ಕೋಟಿಯಂತೆ ಒಟ್ಟಾರೆ 465 ಕೋಟಿ ಮೀಸಲಿರಿಸಿದೆ.

ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ 19.5 ಕೋಟಿ, ಹೊಸ ರುದ್ರಭೂಮಿ ನಿರ್ಮಿಸಲು 40 ಕೋಟಿ, ಬೀದಿ ದೀಪಗಳ ನಿರ್ವಹಣೆಗೆ 79 ಕೋಟಿ ಮೀಸಲಿರಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಐಟಿ ಹಬ್‌ನಲ್ಲಿ 125 ಕೋಟಿ ವೆಚ್ಚದಲ್ಲಿ ಐಟಿ-ಬಿಟಿ ಕಾರಿಡಾರ್‌ನ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನೆ ತಯಾರಿಸಲು 3 ಕೋಟಿ ಮೀಸಲಿರಿಸಿದೆ. ರಾಜಕಾಲುವೆಗಳ ಸ್ವಚ್ಛತೆ ಮತ್ತು ನಿರ್ವಹಣೆಗೆ 25 ಕೋಟಿ ಮೀಸಲಿರಿಸಲಾಗಿದೆ.

ರಸ್ತೆ ಗುಂಡಿ ಮುಚ್ಚಲು ರಸ್ತೆ ಮಾರ್ಕಿಂಗ್ ರಿಫ್ಲೆಕ್ಟರ್ ಅಳವಡಿಕೆ, ಮೇಲ್ಸೇತುವೆ, ಕೆಳಸೇತುವೆಗಳ ದುರಸ್ತಿ ವಾರ್ಷಿಕ ನಿರ್ವಹಣೆಗೆ 192 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಬೃಹತ್ ಯೋಜನೆಗಳ ಕಾಮಗಾರಿಗೆ ಸಂಬಂಧಪಟ್ಟಂತೆ ನವಬೆಂಗಳೂರು ಯೋಜನೆಯಡಿ 8,015 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ಬಜೆಟ್‌ನಲ್ಲಿ ಇದಕ್ಕಾಗಿ 2,300 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.

ವೈಟ್ ಟ್ಯಾಪಿಂಗ್‌ಗೆ 1,172 ಕೋಟಿ, ಕೆರೆಗಳ ಅಭಿವೃದ್ಧಿಗೆ 348 ಕೋಟಿ, ರಸ್ತೆಗಳ ಅಭಿವೃದ್ಧಿಗೆ 2,246.68 ಕೋಟಿ, ಗ್ರೇಡ್ ಸಪರೇಟರ್‌ಗಳ ನಿರ್ಮಾಣಕ್ಕೆ 534.60 ಕೋಟಿ, ಬೃಹತ್ ಮಳೆ ನೀರು ಕಾಲುವೆ ಅಭಿವೃದ್ಧಿಗೆ 1,321.14 ಕೋಟಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 75 ಕೋಟಿ, 110 ಹಳ್ಳಿಗಳ ರಸ್ತೆ ಅಭಿವೃದ್ಧಿಗೆ 275 ಕೋಟಿ, ಐಟಿಪಿಎಲ್‌ಗೆ ಸಂಪರ್ಕಿಸುವ 14 ರಸ್ತೆಗಳ ಅಭಿವೃದ್ಧಿಗೆ 80 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 753 ಕೋಟಿ, ಕಟ್ಟಡಗಳು ಮತ್ತು ಆಸ್ಪತ್ರೆಗಳಿಗೆ 247.95 ಕೋಟಿ, ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗಿದೆ.

ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆ ನೀತಿ 10 ಸಾವಿರ ವಾಹನ ನಿಲುಗಡೆಗೆ 87 ಆಯ್ದ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಬ್ಬಾಳ ಮತ್ತು ಕೆ.ಆರ್.ಪುರದ ಫ್ಲೈ ಓವರ್‌ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ, ಗೊರಗುಂಟೆ ಪಾಳ್ಯ ಹೊಸ ಅಂಡರ್‌ಪಾಸ್ ನಿರ್ಮಾಣಕ್ಕೆ 185 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.