samachara
www.samachara.com
ಸೊರಗಿದ ಪಾಕ್‌ಗೆ ಸೌದಿಯಿಂದ ‘ಶಕ್ತಿಮದ್ದು’; ಯುವರಾಜನಿಗೆ ಭಾರತದಲ್ಲೂ ಸಿಗುತ್ತಾ ‘ಮುದ್ದು’?
COVER STORY

ಸೊರಗಿದ ಪಾಕ್‌ಗೆ ಸೌದಿಯಿಂದ ‘ಶಕ್ತಿಮದ್ದು’; ಯುವರಾಜನಿಗೆ ಭಾರತದಲ್ಲೂ ಸಿಗುತ್ತಾ ‘ಮುದ್ದು’?

ಒಂದು ಕಡೆ ಅಂತಾರಾಷ್ಟ್ರೀಯ ಒತ್ತಡ ಇನ್ನೊಂದು ಕಡೆ ಹಣಕಾಸಿನ ಕೊರತೆ ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ಎಂಬಿಎಸ್‌ ಭೇಟಿ ಮತ್ತು ಹೂಡಿಕೆ ಮರುಜೀವ ನೀಡಿದಂತಾಗಿದೆ. ಇದು ನಾವು ಗಮನಿಸಬೇಕಿರುವ ಅಂತಾರಾಷ್ಟ್ರೀಯ ಬೆಳವಣಿಗೆ. 

ಪುಲ್ವಾಮಾ ದಾಳಿಯ ನೆತ್ತರು ಇನ್ನೂ ಮಾಸಿಲ್ಲ, ಮಡಿದ ಸೈನಿಕರ ಮನೆಯಲ್ಲಿ ಕಣ್ಣೀರು ಹರಿಯುವಿಕೆ ಇನ್ನೂ ನಿಂತಿಲ್ಲ. ದಾಳಿ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡುವ ಕೆಲಸದಲ್ಲಿ ಭಾರತ ನಿರತವಾಗಿದೆ. ಇದೇ ಹೊತ್ತಲ್ಲಿ ಅಂತರಾಷ್ಟ್ರೀಯ ಪ್ರಭಾವಿ ನಾಯಕ, ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ (ಎಂಬಿಎಸ್‌) ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಮಾತ್ರವಲ್ಲದೆ ಸುಮಾರು 1.43 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಕ್ಕೂ ಅವರು ಸಹಿ ಹಾಕಿದ್ದಾರೆ.

ಎರಡು ದಿನಗಳ ಪ್ರವಾಸಕ್ಕಾಗಿ ಭಾನುವಾರ ಪಾಕಿಸ್ತಾನಕ್ಕೆ ಬಂದ ಎಂಬಿಎಸ್‌ ನಿಯೋಗವನ್ನು ಮಿಲಿಟರಿಯ ಫೈಟರ್‌ ಜೆಟ್‌ಗಳು ಆಕಾಶದಲ್ಲೇ ಸ್ವಾಗತಿಸಿದವು. ನಂತರ ರಾಜಧಾನಿ ಇಸ್ಲಮಾಬಾದ್‌ಗೆ ಸಮೀಪದಲ್ಲಿರುವ ರಾವಲ್ಪಿಂಡಿಯ ನೂರ್‌ ಖಾನ್‌ ಸೇನಾ ನೆಲೆಯಲ್ಲಿ ಬಂದಿಳಿದ ಎಂಬಿಎಸ್‌ಗೆ ಕೆಂಪು ಹಾಸಿನ ಸ್ವಾಗತ ಕೋರಲಾಯಿತು. ಸ್ವತಃ ಪ್ರಧಾನಿ ಇಮ್ರಾನ್‌ ಖಾನ್‌ ತಾವೇ ಚಾಲಕನ ಸೀಟಿನಲ್ಲಿ ಕುಳಿತುಕೊಂಡು ಎಂಬಿಎಸ್‌ರನ್ನು ಕರೆದುಕೊಂಡು ಹೋದರು.

ಒಂದು ಕಡೆ ಅಂತಾರಾಷ್ಟ್ರೀಯ ಒತ್ತಡ ಇನ್ನೊಂದು ಕಡೆ ಹಣಕಾಸಿನ ಕೊರತೆ ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ಎಂಬಿಎಸ್‌ ಭೇಟಿ ಮತ್ತು ಹೂಡಿಕೆ ಮರುಜೀವ ನೀಡಿದಂತಾಗಿದೆ. ಕರಗಿದ ವಿದೇಶಿ ಮೀಸಲು ನಿಧಿ, ನಿಧಾನಗತಿಯ ಅಭಿವೃದ್ಧಿಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಪೆಟ್ರೋಕೆಮಿಕಲ್ಸ್‌, ಇಂಧನ, ಖನಿಜ ಸಂಪತ್ತು, ಕ್ರೀಡೆ ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಸೌದಿ ಅರೇಬಿಯಾ ಮುಂದೆ ಬಂದಿದೆ.

ಚಾಲಕನ ಸೀಟಿನಲ್ಲಿ ಕುಳಿತು ಎಂಬಿಎಸ್‌ರನ್ನು ರಾವಲ್ಪಿಂಡಿ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋದ ಇಮ್ರಾನ್‌ ಖಾನ್‌.
ಚಾಲಕನ ಸೀಟಿನಲ್ಲಿ ಕುಳಿತು ಎಂಬಿಎಸ್‌ರನ್ನು ರಾವಲ್ಪಿಂಡಿ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋದ ಇಮ್ರಾನ್‌ ಖಾನ್‌.
/ದಿ ನೇಷನ್‌

ಪಾಕ್‌ ಸೌದಿ ಸಂಬಂಧ:

ಹಾಗೆ ನೋಡಿದರೆ ಇದು ಮೊದಲೇನೂ ಅಲ್ಲ. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸಂಬಂಧ ಸುದೀರ್ಘವಾದುದು ಮತ್ತು ಹೆಚ್ಚು ಆಪ್ತವಾದುದು. ಸ್ವಾತಂತ್ರ್ಯ ಪೂರ್ವಕ್ಕೂ ಮೊದಲೇ ಸೌದಿ ಅರೇಬಿಯಾ ಅಂದಿನ ಭಾರತದ ಗಡಿಯೊಳಗಿದ್ದ ಪಾಕಿಸ್ತಾನ ಭಾಗಕ್ಕೆ ನೆರವು ನೀಡುತ್ತಾ, ಅಲ್ಲಿನ ಸ್ಥಳೀಯ ನಾಯಕರು ಮತ್ತು ಸಂಘಟನೆಗಳ ಜತೆ ಸಂಬಂಧ ಇಟ್ಟುಕೊಳ್ಳುತ್ತಾ ಬಂದಿತ್ತು.

ಹಲವು ದೇಶಗಳಿಗೆ ಹೋಲಿಸಿದರೆ ದುರ್ಬಲ ಸೇನೆಯನ್ನು ಹೊಂದಿರುವ ಸೌದಿ ಅರೇಬಿಯಾ ಸೈನಿಕರಿಗೆ ತರಬೇತಿ ನೀಡುವ, ಪೈಲಟ್‌ಗಳಿಗೆ ವಿಮಾನ ಹಾರಾಟದ ತರಗತಿಗಳನ್ನು ನಡೆಸುವ, ಅಲ್ಲಿನ ಪ್ರಮುಖ ನಿರ್ಮಾಣಗಳಿಗೆ ಇಂಜಿನಿಯರ್‌ಗಳನ್ನು ಪಾಕಿಸ್ತಾನ ಪೂರೈಸುತ್ತಾ ಬಂದಿದೆ. ಯುದ್ಧ, ದಾಳಿಗಳ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ಸೌದಿ ಅರೇಬಿಯಾದ ಪರ ಹೋರಾಟ ಮಾಡಿದ ಇತಿಹಾಸವೂ ಇದೆ.

ಪಾಕಿಸ್ತಾನದಲ್ಲಿ ಯಾರೇ ಪ್ರಧಾನಿಯಾಗಿ ಆಯ್ಕೆಯಾದರೂ ಮೊದಲ ಪ್ರವಾಸವನ್ನು ಸೌದಿ ಅರೇಬಿಯಾದಿಂದ ಆರಂಭಿಸುವ ಪರಿಪಾಠವೂ ಇದೆ. ಇಮ್ರಾನ್‌ ಖಾನ್‌ ಕೂಡ ಮೊದಲ ವಿದೇಶಿ ಪ್ರವಾಸವನ್ನು ಸೌದಿ ಅರೇಬಿಯಾದಿಂದಲೇ ಆರಂಭಿಸಿದ್ದರು. ಮತ್ತು ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ 6 ಬಿಲಿಯನ್‌ ಡಾಲರ್‌ ನೆರವನ್ನೂ ಇದೇ ಸಂದರ್ಭದಲ್ಲಿ ಘೋಷಿಸಿತ್ತು.

ಹೀಗೊಂದು ಆಪ್ತ ಸಂಬಂಧದ ಹಿನ್ನೆಲೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಪ್ರತಿಕ್ರಿಯೆ ನೀಡಿರುವ ಇಮ್ರಾನ್‌ ಖಾನ್‌ “ಈ ಹೂಡಿಕೆಯೊಂದಿಗೆ ಸೌದಿ-ಪಾಕಿಸ್ತಾನ ಸಂಬಂಧ ಹಿಂದೆಂದೂ ಇಲ್ಲದ ಎತ್ತರಕ್ಕೆ ಏರಿದೆ,” ಎಂದು ಬಣ್ಣಿಸಿದ್ದಾರೆ. “ಈ ಹೂಡಿಕೆಯಿಂದ ಎರಡೂ ದೇಶಗಳಿಗೆ ಲಾಭವಾಗಲಿದೆ” ಎಂದು ಎಂಬಿಎಸ್‌ ತಿಳಿಸಿದ್ದಾರೆ. ‘ಮುಂದಿನ ದಿನಗಳಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ದೇಶವಾಗಲಿದೆ. ಮತ್ತು ಇದರ ಪಾಲುದಾರನಾಗಲು ಸೌದಿ ಅರೇಬಿಯಾ ಇಷ್ಟ ಪಡುತ್ತದೆ’ ಎಂದು ಅವರು ಹೂಡಿಕೆ ಹಿಂದಿನ ಉದ್ದೇಶಗಳನ್ನು ವಿವರಿಸಿದ್ದಾರೆ.

ಪರಸ್ಪರ ಒಪ್ಪಂದಗಳಿಗೆ ಸಹಿ ಹಾಕಿದ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ.
ಪರಸ್ಪರ ಒಪ್ಪಂದಗಳಿಗೆ ಸಹಿ ಹಾಕಿದ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ.
/ದಿ ನೇಷನ್‌

ಒಪ್ಪಂದದ ಪ್ರಕಾರ ದಕ್ಷಿಣದ ಬಂದರು ನಗರ ಗ್ವಾದಾರ್‌ನಲ್ಲಿ ತೈಲ ಸಂಸ್ಕರಣ ಘಟಕ ಮತ್ತು ಪೆಟ್ರೋಕೆಮಿಕಲ್‌ ಕಾಂಪ್ಲೆಕ್ಸ್‌ನ್ನು ಸೌದಿ ಅರೇಬಿಯಾ ನಿರ್ಮಿಸಲಿದೆ. ಜತೆಗೆ ಸೌದಿ ಅರೇಬಿಯಾದ ಕಂಪನಿಗಳು ನಡೆಸುತ್ತಿರುವ ಎರಡು ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಖರೀದಿಸುವ ಸಾಧ್ಯತೆ ಇದೆ. ಇದಲ್ಲದೆ ಪರ್ಯಾಯ ಇಂಧನ ಕ್ಷೇತ್ರ, ಗಣಿ ಕ್ಷೇತ್ರದಲ್ಲಿ 28.5 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಪಾಕಿಸ್ತಾನ ಹೂಡಿಕೆ ಮಂಡಳಿ ಮುಖ್ಯಸ್ಥರು ತಿಳಿಸಿದ್ದಾರೆ.

ಇದರ ಜತೆಗೆ ಸುಮಾರು 40 ಸೌದಿ ಅರೇಬಿಯಾದ ಹೂಡಿಕೆದಾರರು ಎಂಬಿಎಸ್‌ ಜತೆ ಬಂದಿದ್ದು ಅವರುಗಳು ಅಲ್ಲಿನ ಸ್ಥಳೀಯ ಉದ್ಯಮಿಗಳ ಜತೆ ಹೂಡಿಕೆಗೆ ಸಂಬಂಧಿಸಿದಂತೆ ಮಾತುಕತೆಗಳನ್ನು ನಡೆಸುತ್ತಿದ್ದಾರೆ.

ಎಂಬಿಎಸ್‌ ಜಂಬೂ ಸವಾರಿ:

ಎಂಬಿಎಸ್‌ ಪ್ರವಾಸಕ್ಕೆ ಪಾಕಿಸ್ತಾನದಲ್ಲಿ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಲಾಗಿದೆ. ರಾಜಕುಮಾರನ ಆಗಮನದ ಹಿನ್ನೆಲೆಯಲ್ಲಿ ಇಸ್ಲಮಾಬಾದ್-ರಾವಲ್ಪಿಂಡಿ ನಗರಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದ್ದರೆ, ಮೊಬೈಲ್‌ ಸಂಪರ್ಕವನ್ನು ಹಲವು ಕಡೆಗಳಲ್ಲಿ ಸ್ಥಗಿತಗೊಳಿಸಲಾಗಿದೆ. ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ರಾಜಧಾನಿಯಲ್ಲಿ ಇಂದು ರಜೆ ಘೋಷಣೆ ಮಾಡಲಾಗಿದೆ.

ಸೌದಿ ಅರೇಬಿಯಾ ಕಡೆಯಿಂದ 1,150 ಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳು ಮತ್ತು ಭದ್ರತಾ ಸಿಬ್ಬಂದಿಗಳು, 1000 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು 40ಕ್ಕೂ ಹೆಚ್ಚು ಹೂಡಿಕೆದಾರರ ತಂಡ ಇಸ್ಲಮಾಬಾದ್‌ಗೆ ಬಂದಿದ್ದು ಇಲ್ಲಿನ ಪ್ರಮುಖ ನಾಲ್ಕು ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಇವರ ಓಡಾಟಕ್ಕಾಗಿ 300 ಲ್ಯಾಂಡ್‌ ಕ್ರೂಸರ್‌ ಕಾರುಗಳನ್ನು ತರಿಸಲಾಗಿದೆ.

ರಾಜಕುಮಾರ ಎಂಬಿಎಸ್‌ ನಾಲ್ಕು ಜೆಟ್‌ ವಿಮಾನಗಳಲ್ಲಿ 80 ಟ್ರಂಕ್‌ ಲಗೇಜ್‌ಗಳೊಂದಿಗೆ ಇಸ್ಲಮಾಬಾದ್‌ನಲ್ಲಿ ಬಂದಿಳಿದಿದ್ದಾರೆ. ಸೌದಿ ಅರೇಬಿಯಾದಿಂದಲೇ ಜಿಮ್‌ ಸಲಕರಣೆಗಳನ್ನು ತರಲಾಗಿದ್ದು, ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದಲ್ಲಿ ತಾತ್ಕಾಲಿಕ ಜಿಮ್‌ ಸ್ಥಾಪಿಸಲಾಗಿದೆ.

ಕಂಡು ಕೇಳರಿಯದ ಆತಿಥ್ಯವನ್ನು ಎಂಬಿಎಸ್‌ಗೆ ನೀಡಲಾಗಿದ್ದು ಭೇಟಿ ವೇಳೆ 3,500 ಕ್ಕೂ ಹೆಚ್ಚು ಪಾರಿವಾಳಗಳನ್ನೂ, ಬಲೂನ್‌ಗಳನ್ನು ಹಾರಿ ಬಿಡಲಾಗಿದೆ. ನಗರದ ತುಂಬಾ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ಧ್ವಜಗಳು ಹಾರಾಡುತ್ತಿದ್ದು, ಎಲ್ಲೆಡೆ ಖಾನ್‌ ಮತ್ತು ಸಲ್ಮಾನ್‌ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.

ಎಂಬಿಎಸ್‌ ಮುಂದೆ ಬೇಡಿಕೆಗಳ ಸರಮಾಲೆ:

ಎಂಬಿಎಸ್‌ ಭೇಟಿ ಹಿನ್ನೆಲೆಯಲ್ಲಿ ಭಾನುವಾರ ವಿಶೇಷ ಭೋಜನ ಕೂಟ ಹಮ್ಮಿಕೊಂಡಿದ್ದ ಇಮ್ರಾನ್‌ ಖಾನ್‌ ಅಲ್ಲಿ ಹಲವು ಮನವಿಗಳನ್ನು ಸಲ್ಲಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ 25 ಲಕ್ಷ ಪಾಕಿಸ್ತಾನಿಯರಿಗೆ ಹೆಚ್ಚಿನ ಸೌಲಭ್ಯ ನೀಡುವಂತೆ ಮನವಿ ಮಾಡಿಕೊಂಡಿದ್ದರೆ. ‘ಪಾಕಿಸ್ತಾನಿಯರನ್ನು ನಿಮ್ಮವರಂತೆಯೇ ಕಾಣಿ’ ಎಂದು ಕೇಳಿಕೊಂಡಿದ್ದಾರೆ. ಜತೆಗೆ ಇಲ್ಲಿನ ಜೈಲುಗಳಲ್ಲಿರುವ 3,000 ಪಾಕಿಸ್ತಾನಿಯರನ್ನು ಬಿಡುಗಡೆ ಮಾಡುವಂತೆಯೂ ಕೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಬಿಎಸ್‌, “ನಾವು ಪಾಕಿಸ್ತಾನಕ್ಕೆ ಇಲ್ಲ ಎನ್ನುವುದಿಲ್ಲ. ನಿಮಗೆ ಬೇಕಾಗಿದ್ದನ್ನು ಮಾಡಲು ನಾವು ಶ್ರಮಿಸುತ್ತೇವೆ,” ಎಂದಿದ್ದಾರೆ. ಭೇಟಿ ಹಿನ್ನೆಲೆಯಲ್ಲಿ 2,000 ಖೈದಿಗಳ ಬಿಡುಗಡೆಗೆ ಎಂಬಿಎಸ್‌ ಸಮ್ಮತಿಸಿದ್ದಾರೆ. ಸೋಮವಾರ ಪಾಕಿಸ್ತಾನ ಸೇನಾ ಮುಖ್ಯಸ್ಥ ಕಮರ್‌ ಜಾವೇದ್‌ ಬಜ್ವಾ ಮತ್ತು ಅಧ್ಯಕ್ಷ ಆರಿಫ್‌ ಅಲ್ವಿಯವರನ್ನು ಭೇಟಿಯಾಗಿ ಪಾಕಿಸ್ತಾನದಿಂದ ಎಂಬಿಎಸ್‌ ತೆರಳಲಿದ್ದಾರೆ. ನಂತರ ಅವರು ಭಾರತ ಮತ್ತು ಚೀನಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.

ಎಂಬಿಎಸ್‌ ವಿಷನ್‌ 2030:

ಒಂದು ಕಡೆ ಈ ಭೇಟಿ ಪಾಕಿಸ್ತಾನಕ್ಕೆ ಅಗತ್ಯವಾಗಿತ್ತು. ಆದರೆ ಎಂಬಿಎಸ್‌ ಪಾಲಿಗೂ ಏಷ್ಯಾ ಪ್ರವಾಸ ಮಹತ್ವದ್ದಾಗಿದೆ. ಟರ್ಕಿಯಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಪತ್ರಕರ್ತ ಜಮಾಲ್‌ ಖಶೋಗಿ ಹತ್ಯೆಯಾದ ನಂತರ ಅಂತರಾಷ್ಟ್ರೀಯ ಒತ್ತಡವನ್ನು ಎಂಬಿಎಸ್ ಅನುಭವಿಸುತ್ತಿದ್ದು ತಮ್ಮ ಚಾರ್ಮ್‌ನ್ನು ಮರಳಿ ಗಳಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಗಿದೆ.

ಜತೆಗೆ ‘ವಿಷನ್‌ 2030’ ಪಾಲಿಸಿಯನ್ನು ಎಂಬಿಎಸ್‌ ಮುಂದಿಟ್ಟಿದ್ದು ತೈಲ ಸಂಬಂಧದಾಚೆಗೂ ಸೌದಿ ಅರೇಬಿಯಾದ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸಲು ಮುಂದಾಗಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಕ್ರಮಣಕಾರಿ ರಾಜತಾಂತ್ರಿಕತೆಯನ್ನು ಸೌದಿ ಅರೇಬಿಯಾ ನೆಚ್ಚಿಕೊಂಡಿದ್ದು ಪಾಕಿಸ್ತಾನದೊಂದಿಗೆ ಮಾತ್ರವಲ್ಲ, ಭಾರತ ಮತ್ತು ಚೀನಾದೊಂದಿಗೆ ಅಂಥಹದ್ದೇ ಸಂಬಂಧ ಸ್ಥಾಪಿಸಲು ಮುಂದಾಗಿದೆ ಎನ್ನುತ್ತಾರೆ ಇಸ್ಲಾಮಾದ್‌ ಮೂಲದ ವಿಶ್ಲೇಷಕ ಜಹೀದ್‌ ಹುಸೇನ್‌.

ಎಂಬಿಎಸ್‌ ಜತೆ ನರೇಂದ್ರ ಮೋದಿ.
ಎಂಬಿಎಸ್‌ ಜತೆ ನರೇಂದ್ರ ಮೋದಿ.
/ನ್ಯೂಸ್‌ಮನ್

“ಸೂಚನೆ ಸ್ಪಷ್ಟವಾಗಿದ್ದು ಸೌದಿ ರಾಜಮನೆತನವು ತನ್ನ ವಿದೇಶಿ ಸಂಬಂಧಗಳನ್ನು ವೈವಿಧ್ಯಮಯಗೊಳಿಸಲು ಬಯಸಿರುವುದು ಕಾಣಿಸುತ್ತಿದೆ,” ಎನ್ನುತ್ತಾರೆ ಅವರು. ಪರಿಣಾಮ ಭಾರತದ ಜತೆ ಉತ್ತಮ ಸಂಬಂಧ ಇಟ್ಟುಕೊಂಡೇ ವಿರೋಧಿ ದೇಶಗಳಾದ ಚೀನಾ, ಪಾಕಿಸ್ತಾನದ ಜತೆಗೂ ಸೌದಿ ಅರೇಬಿಯಾ ಹೆಜ್ಜೆ ಹಾಕಲಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಪಾಕಿಸ್ತಾನದ ಮೂಲೆಗುಂಪು’ ಎಂಬುದರ ಬಗ್ಗೆಯೇ ಅನುಮಾನಗಳನ್ನು ಹುಟ್ಟಿಸುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನಕ್ಕೆ ದೊಡ್ಡ ಹೂಡಿಕೆ ಮಾಡಲು ಹೊರಟ ಸೌದಿ ಅರೇಬಿಯಾ ಜತೆಗೆ ಸಂಬಂಧವನ್ನು ಯಥಾಪ್ರಕಾರ ಮುಂದುವರಿಸುತ್ತಾ? ಎಂಬ ಪ್ರಶ್ನೆಯೂ ಎದ್ದಿದೆ. ಇದೆಲ್ಲಕ್ಕೂ ಯುವರಾಜನ ಭಾರತ ಪ್ರವಾಸ ಉತ್ತರ ನೀಡಲಿದೆ.

ಚಿತ್ರ ಕೃಪೆ: ದಿ ನೇಷನ್‌